Sunday, February 26, 2012

ಮನದ ಅಂಗಳದಿ......... 81. ಆಕರ್ಷಣೆಯ ನಿಯಮ

ನಾವು ಶಾಲೆಯಲ್ಲಿದ್ದಾಗ ಕಾಂತಧೃವಗಳ ಆಕರ್ಷಣೆಯ ನಿಯಮವನ್ನು, ‘ಸಜಾತೀಯ ಕಾಂತಧೃವಗಳು ವಿಕರ್ಷಿಸುತ್ತವೆ ಮತ್ತು ವಿಜಾತೀಯ ಕಾಂತಧೃವಗಳು ಆಕರ್ಷಿಸುತ್ತವೆ,’ ಎಂದು ಓದಿದ್ದೇವೆ. ಹಾಗೆಯೇ ವಿದ್ಯುದಂಶಗಳ ಆಕರ್ಷಣ ನಿಯಮವೂ ಇದ್ದು, ‘ಸಜಾತೀಯ ವಿದ್ಯುದಂಶಗಳು ವಿಕರ್ಷಿಸುತ್ತವೆ ಮತ್ತು ವಿಜಾತೀಯ ವಿದ್ಯುದಂಶಗಳು ಆಕರ್ಷಿಸುತ್ತವೆ,’ಎನ್ನುವುದನ್ನೂ ತಿಳಿದಿದ್ದೇವೆ. ಈ ನಿಯಮಗಳನ್ನು ಜೀವಸಂಕುಲಕ್ಕೂ ಅಳವಡಿಸಿಕೊಂಡು ಹೆಣ್ಣು ಮತ್ತು ಗಂಡುಗಳ ನಡುವಿನ ಆಕರ್ಷಣೆಯನ್ನೂ ವಿವರಿಸುವುದಿದೆ! ಆದರೆ ಇಲ್ಲಿ ನಾನು ಪ್ರಸ್ತಾಪಿಸುತ್ತಿರುವುದು ನಮ್ಮ ಜೀವನವನ್ನು ಉತ್ತಮೀಕರಿಸಲು ಅನುಸರಿಸಬಹುದಾದ ಆಕರ್ಷಣೆಯ ನಿಯಮದ ಬಗ್ಗೆ.
‘ಸಾದೃಶಗಳು ಸಾದೃಶಗಳನ್ನು ಆಕರ್ಷಿಸುತ್ತವೆ' --`like attracts like’

ರೋಂಡ ಬೈರ್ನೆಯವರ ಕೃತಿ ‘ದ ಸೀಕ್ರೆಟ್’ನಲ್ಲಿ ಲೇಖಕ, ತತ್ವಶಾಸ್ತ್ರಜ್ಞರಾದ ಬಾಬ್ ಪ್ರೊಕ್ಟರ್, ‘ನಿಮಗೆ ಬೇಕೆನಿಸುವ ಆರೋಗ್ಯ, ಸಂಪತ್ತು, ಆನಂದ ಯಾವುದನ್ನಾದರೂ ‘ಸೀಕ್ರೆಟ್’ ನೀಡುತ್ತದೆ,’ ಎನ್ನುವುದನ್ನು ಈ ರೀತಿಯಾಗಿ ವಿವರಿಸುತ್ತಾರೆ:
‘ನಾವು ಭಾರತ, ಆಸ್ಟ್ರೇಲಿಯ, ನ್ಯೂಯಾರ್ಕ್........... ಎಲ್ಲೇ ಇರಲಿ, ನಾವೆಲ್ಲರೂ ಒಂದೇ ಶಕ್ತಿಯಿಂದ ಕಾರ್ಯ ನಿರ್ವಹಿಸುತ್ತಿರುತ್ತೇವೆ, ಅದೇ ಆಕರ್ಷಣೆಯ ನಿಯಮ!
ನಮ್ಮ ಜೀವನದಲ್ಲಿ ನಾವು ಏನನ್ನೇ ಪಡೆದುಕೊಂಡಿದ್ದರೂ ನಾವು ಅದನ್ನು ನಮ್ಮ ಜೀವನದೊಳಗೆ ಆಕರ್ಷಿಸಿರುತ್ತೇವೆ. ನಮ್ಮ ಕಲ್ಪನೆಯ ಮೂಲಕ ನಾವು ಏನನ್ನು ಪಡೆದುಕೊಳ್ಳಬೇಕೆಂದು ಮೆದುಳಿನಲ್ಲಿ ಚಿತ್ರಣ ಮಾಡಿಕೊಂಡಿರುತ್ತೇವೆಯೋ ಅದನ್ನೇ ನಮ್ಮತ್ತ ಆಕರ್ಷಿಸುತ್ತೇವೆ.’
ಪ್ರಂಟೇಸ್ ಮಲ್ ಫೋರ್ಡ್ ಹೀಗೆ ತಿಳಿಸುತ್ತಾರೆ: ‘ಆಕರ್ಷಣೆಯ ನಿಯಮವೇ ಜಗತ್ತಿನ ಅತ್ಯಂತ ಶಕ್ತಿಶಾಲಿಯಾದ ನಿಯಮವೆಂದು ತಮ್ಮ ಸಾಧನೆಗಳ ಮೂಲಕ ಮಹಾನ್ ವ್ಯಕ್ತಿಗಳಾದವರು ತಿಳಿಸಿದ್ದಾರೆ. ಸುಪ್ರಸಿದ್ಧ ಕವಿಗಳಾದ ವಿಲಿಯಂ ಶೇಕ್ಸ್ಪಿಯರ್, ರಾಬರ್ಟ್ ಬ್ರೌನಿಂಗ್, ವಿಲಿಯಂ ಬ್ಲೇಕ್ ತಮ್ಮ ಕವನಗಳ ಮೂಲಕ, ಲುಡ್ ವಿಂಗ್ ವಾನ್ ಬೆಥೊವೆನ್ ನಂತಹ ಸಂಗೀತಗಾರರು ತಮ್ಮ ಸಂಗೀತದ ಮೂಲಕ, ಲಿಯೊನಾರ್ಡೊ ದಾ ವಿಂಸಿಯಂಥಾ ಚಿತ್ರಕಾರರು ತಮ್ಮ ಚಿತ್ರಗಳ ಮೂಲಕ, ಸಾಕ್ರಟೀಸ್, ಪ್ಲೇಟೊ, ಎಮರ್ಸನ್, ಪೈಥಾಗೊರಸ್ರಂಥಾ ಚಿಂತಕರು ತಮ್ಮ ಚಿಂತನೆಗಳ ಮೂಲಕ ಈ ನಿಯಮವನ್ನು ಹಂಚಿಕೊಂಡಿದ್ದಾರೆ ಹಾಗೂ ಅಮರರಾಗಿದ್ದಾರೆ.
ಹಿಂದೂ, ಬೌದ್ಧ, ಕ್ರೈಸ್ತ, ಇಸ್ಲಾಂ ಮುಂತಾದ ಧರ್ಮಗಳು, ಬ್ಯಾಬಿಲೊನಿಯನ್ ಮತ್ತು ಈಜಿಪ್ಟಿಯನ್ ನಾಗರೀಕತೆಗಳು ಕಥೆಗಳ ಮೂಲಕ ಹಾಗೂ ಲಿಖಿತ ರೂಪದಲ್ಲಿ ಇದನ್ನೇ ದಾಖಲೀಕರಿಸಿವೆ.
ಆಕರ್ಷಣನಿಯಮವು ಕಾಲದೊಂದಿಗೇ ಪ್ರಾರಂಭವಾಗಿದೆ. ಯಾವಾಗಲೂ ಇದೆ, ಮುಂದೆಯೂ ಇರುತ್ತದೆ.
ನಾವು ಯಾರು, ಎಲ್ಲಿದ್ದೇವೆ ಎನ್ನುವುದು ಮುಖ್ಯವಲ್ಲ. ಆಕರ್ಷಣನಿಯಮವು ನಮ್ಮ ಸಂಪೂರ್ಣ ಜೀವನದ ಅನುಭವವನ್ನೇ ರೂಪಿಸುತ್ತದೆ. ಅದು ನಮ್ಮಿಂದಲೇ ಕ್ರಿಯಾಶೀಲವಾಗುತ್ತದೆ, ನಮ್ಮ ಆಲೋಚನೆಗಳ ಮೂಲಕವೇ ರೂಪುಗೊಳ್ಳುತ್ತದೆ.
ಬಾಬ್ ಪ್ರೊಕ್ಟರ್ ಹಣವನ್ನು ಗಳಿಸುವ ಬಗೆಗೆ ಅನ್ವಯವಾಗುವ ಆಕರ್ಷಣನಿಯಮಕ್ಕೆ ಒಂದು ಉದಾಹರಣೆಯನ್ನು ನೀಡುತ್ತಾರೆ: ಅಪಾರ ಸಂಪತ್ತನ್ನು ಗಳಿಸಿದ ವ್ಯಕ್ತಿಯೊಬ್ಬ ಅದನ್ನೆಲ್ಲಾ ಕಳೆದುಕೊಂಡರೂ ಸ್ವಲ್ಪ ಕಾಲದಲ್ಲೇ ಪುನಃ ಅದಕ್ಕಿಂತಲೂ ಅಧಿಕವಾಗಿ ಗಳಿಸುತ್ತಾನೆ! ಅವನಿಗೆ ಅರಿವಿದ್ದೋ ಇಲ್ಲದೆಯೋ ಅವನ ಮನದ ತುಂಬೆಲ್ಲಾ ಹಣಗಳಿಕೆಯೇ ಇರುತ್ತದೆ ಆದ್ದರಿಂದ ಮೊದಲು ಅವನು ಅಪಾರ ಸಂಪತ್ತನ್ನು ಗಳಿಸುತ್ತಾನೆ. ಆಗ ಅವನ ಮನಸ್ಸಿನಲ್ಲಿ ಅದು ಕಳೆದು ಹೋದರೆ ಎನ್ನುವ ಭೀತಿ ಆವರಿಸುತ್ತದೆ. ‘ಕಳೆದುಕೊಂಡರೆ’ ಎನ್ನುವುದೇ ಪ್ರಧಾನ ಆಲೋಚನೆಯಾಗುವುದರಿಂದ ಅವನು ಗಳಿಸಿದ್ದನ್ನೆಲ್ಲಾ ಕಳೆದುಕೊಳ್ಳುತ್ತಾನೆ. ಆಗ ‘ಕಳೆದು ಹೋದರೆ’ ಎನ್ನುವ ಭಯವು ನಿವಾರಣೆಯಾಗುತ್ತದೆ ಹಾಗೂ ಹಣಗಳಿಕೆಯ ಆಲೋಚನೆಯೇ ಹೆಚ್ಚು ಶಕ್ತಿಶಾಲಿಯಾಗುತ್ತದೆ. ಪುನಃ ಅವನು ಮೊದಲಿನಂತೆಯೇ ಅಪಾರ ಸಂಪತ್ತನ್ನು ಪಡೆದುಕೊಳ್ಳುತ್ತಾನೆ!
ಜಾನ್ ಆಶ್ರಫ್, ‘ವಿಶ್ವದಲ್ಲಿ ನೀವು ಅತ್ಯಂತ ಶಕ್ತಿಶಾಲಿಯಾದ ಅಯಸ್ಕಾಂತ! ಈ ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿಯಾದ ಆಕರ್ಷಣಶಕ್ತಿಯನ್ನು ನೀವು ಹೊಂದಿದ್ದೀರಿ. ಈ ಅಳತೆಗೆ ನಿಲುಕಲಾರದ ಆಕರ್ಷಣಶಕ್ತಿಯನ್ನು ನೀವು ನಿಮ್ಮ ಆಲೋಚನೆಗಳ ಮೂಲಕ ಹೊರಸೂಸುತ್ತಿರುತ್ತೀರಿ!’
ಲೇಖಕ ಹಾಗೂ ಆಕರ್ಷಣನಿಯಮದ ತಜ್ಞರಾದ ಬಾಬ್ ಡಯಲ್ ರವರು ಈರೀತಿ ಹೇಳುತ್ತಾರೆ, `-`like attracts like’. ನಾವು ಒಂದು ಆಲೋಚನೆಯನ್ನು ಮಾಡಿದಾಗ ಅದೇ ರೀತಿಯ ಆಲೋಚನೆಗಳನ್ನು ಆಕರ್ಷಿಸುತ್ತೇವೆ. ನಾವೇನಾದರೂ ನಮಗೆ ಅಸಂತೋಷವನ್ನುಂಟುಮಾಡುವಂತಹ ಆಲೋಚನೆಗಳನ್ನು ಮಾಡಿದಾಗ ಅಂಥಾ ಅಸಂತೋಷದ ಆಲೋಚನೆಗಳೇ ನಮ್ಮತ್ತ ಆಕರ್ಷಿತವಾಗಿ ಪರಿಸ್ಥಿತಿಯನ್ನು ಕ್ಲಿಷ್ಟಕರವನ್ನಾಗಿ ಮಾಡುತ್ತವೆ.
ಮತ್ತೊಂದು ಉದಾಹರಣೆ: ನಾವು ಒಂದು ಹಾಡನ್ನು ಕೇಳಿದಾಗ ಆ ಹಾಡು ನಮ್ಮ ಮನಸ್ಸಿನಲ್ಲೇ ಆಗಾಗ ಮೂಡುತ್ತಾ ಮೆದುಳಿನಲ್ಲಿ ನೆಲೆಸಿಬಿಡುತ್ತದೆ. ಆ ಹಾಡನ್ನು ತಲೆಯಿಂದ ತೆಗೆಯಲೇ ಆಗುವುದಿಲ್ಲ. ಆ ಹಾಡಿನ ಬಗ್ಗೇ ಆಕರ್ಷಿತರಾಗಿ ಹೆಚ್ಚುಹೆಚ್ಚು ತಿಳಿದುಕೊಳ್ಳಲಾರಂಭಿಸುತ್ತೇವೆ!
ನಾವು ಒಳ್ಳೆಯದನ್ನು ಆಕರ್ಷಿಸಬೇಕು, ಕೆಟ್ಟದ್ದನ್ನಲ್ಲ. ಜಾನ್ ಆಶ್ರಫ್ ಹೀಗೆ ಹೇಳುತ್ತಾರೆ, ‘ಸಮಸ್ಯೆ ಇರುವುದು ಇಲ್ಲಿ. ಸಾಮಾನ್ಯವಾಗಿ ಜನರು ತಮಗೆ ಯಾವುದು ‘ಬೇಡ’ ಎನ್ನುವುದನ್ನೇ ಆಲೋಚಿಸುತ್ತಿರುತ್ತಾರೆ, ‘ಬೇಕು’ ಎನ್ನುವುದನ್ನಲ್ಲ! ‘ಬೇಡ’ ಎನ್ನುವುದು ಸಾಂಕ್ರಾಮಿಕವಾಗಿಬಿಟ್ಟಿದೆ. ಅದನ್ನು ‘ಬೇಕು’ ಎಂದು ಬದಲಾಯಿಸುವ ಕ್ರಾಂತಿಯಾಗಬೇಕಿದೆ.’
ಲಿಸ ನಿಖೋಲ್ಸ್ ಮೇಲಿನ ಹೇಳಿಕೆಯನ್ನು ಈ ರೀತಿ ಸ್ಪಷ್ಟಪಡಿಸುತ್ತಾರೆ, ‘ಆಕರ್ಷಣೆಯ ನಿಯಮವು ನಮಗೆ ಏನು ಬೇಕೊ ಅದನ್ನೇ ನಿಖರವಾಗಿ ಕೊಡುತ್ತದೆ. ಆದರೆ ಅದಕ್ಕೆ ಬೇಕು-ಬೇಡಗಳ ವ್ಯತ್ಯಾಸ ತಿಳಿಯುವುದಿಲ್ಲ! ‘ನಾನು ತಡವಾಗಿ ಹೋಗುವುದಿಲ್ಲ,’ ಎಂದುಕೊಂಡರೆ ಅದು ‘ತಡ’ ಎನ್ನುವುದನ್ನು ಮಾತ್ರ ತೆಗೆದುಕೊಳ್ಳುತ್ತದೆ. ಋಣಾತ್ಮಕವಾದ ಹೇಳಿಕೆಗಳನ್ನು ಅದು ಮಾನ್ಯ ಮಾಡುವುದಿಲ್ಲ. ನಮಗೆ ಬೇಕಾದ್ದನ್ನು ಸರಳವಾದ ಧನಾತ್ಮಕ ಆಲೋಚನೆಯನ್ನಾಗಿಸಬೇಕು.
‘ನಾವು ನಂಬಲಿ-ಬಿಡಲಿ, ಅರ್ಥಮಾಡಿಕೊಳ್ಳಲಿ-ಮಾಡಿಕೊಳ್ಳದಿರಲಿ, ಆಕರ್ಷಣೆಯ ನಿಯಮವು ಯಾವಾಗಲೂ ಕಾರ್ಯೋನ್ಮುಖವಾಗಿರುತ್ತದೆ,’ ಎಂದು ಬಾಬ್ ಪ್ರೊಕ್ಟರ್ ಹೇಳುತ್ತಾರೆ. ಆದ್ದರಿಂದ ಉತ್ತಮ, ಧನಾತ್ಮಕ ಆಲೋಚನೆಗಳನ್ನು ಮಾಡೋಣ. ನಮಗೆ ಅಗತ್ಯವಾದದ್ದನ್ನು ಪಡೆದುಕೊಳ್ಳುತ್ತಾ ಬದುಕನ್ನು ಉನ್ನತೀಕರಿಸಿಕೊಳ್ಳೋಣ.

10 comments:

  1. ಉತ್ತಮ ವಿಚಾರಧಾರೆಗಳು ಮೇಡಂ...

    ReplyDelete
  2. ಮೇಡಂ
    ///ಧನಾತ್ಮಕ ಆಲೋಚನೆಗಳನ್ನು ಮಾಡೋಣ. ನಮಗೆ ಅಗತ್ಯವಾದದ್ದನ್ನು ಪಡೆದುಕೊಳ್ಳುತ್ತಾ ಬದುಕನ್ನು ಉನ್ನತೀಕರಿಸಿಕೊಳ್ಳೋಣ///....ಖಂಡಿತಾ ಮೇಡಂ......ಉತ್ತಮ,ಮ್ ಉಪಯುಕ್ತ ಲೇಖನ...

    ನನ್ನ ಬ್ಲಾಗ್ ಗೂ ಬನ್ನಿ ...
    http://ashokkodlady.blogspot.com/

    ReplyDelete
  3. ಜೀವನಕ್ಕೆ ಅತ್ಯಾವಶ್ಯಕವಾದ ಧನಾತ್ಮಕ ನೀತಿಯನ್ನು ಸರಳವಾಗಿ ತಿಳಿಸುತ್ತಿರುವ ನಿಮಗೆ ಧನ್ಯವಾದಗಳು.

    ReplyDelete
  4. haudu mEDm . manasu onthara internet idda haage, naavu yavudanna search maaDta irtivO, avE namge sigodu.. ModalOmmE nanna kavitege neevu idE mAtanna hELidri.. Uttama lEkhana abhinandanegaLu..

    ReplyDelete
  5. ಧನಾತ್ಮಕ ನೀತಿಯ ಸವಿವರ ಲೇಖನ ಮೇಡಂ. ನಿಮ್ಮ ಇಂತಹ ಬರಹಗಳಿಂದ ನಮಗೆ ಮನೋ ಚಿಕಿತ್ಸಕ ಮತ್ತು ವ್ಯಕ್ತಿತ್ವ ಉನ್ನತೀಕರಣಕ್ಕೆ ಸಹಕಾರಿಯಾಗುತ್ತದೆ. ನಾವು ಚಿರ ಋಣಿಗಳು.

    ReplyDelete
  6. ಇಂಹ ಲೇಖನಗಳನ್ನು ಓದಬೇಕಾದ ಅವಶ್ಯಕತೆಯಿದೆ.ಬರೀತಾ ಇರಿ.ಆಗಾಗ ಭೇಟಿ ನೀಡುತ್ತೇನೆ.

    ReplyDelete
  7. ಮೇಡಮ್, ಜೀವನಕ್ಕೆ ಬೇಕಾದ 'ಬೇಕು' ಎಂಬುವುದರ, ಧನಾತ್ಮಕ ಚಿಂತನೆಯ ಬರಹ ಕೊಟ್ಟಿದ್ದೀರಿ.
    ಧನ್ಯವಾದಗಳು.

    ReplyDelete
  8. ಪ್ರಭಾಮಣಿ ಮೇಡಂ;'YOU ARE THE SCRIPT WRITER OF YOUR LIFE' ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯ ಎನಿಸುತ್ತದೆ.ಸದಾ ನರಳುತ್ತಾ ,ಗೊಣಗುತ್ತಾ ಗೊಳಾಡುವವರ ಜೀವನ ಬದಲಾಗುವುದು ಕಷ್ಟ.ಅವರಿಗೆ ಅಂಥವೇ ಸಂದರ್ಭಗಳು ಎದುರಾಗುತ್ತವೆ!ಅವರು ಮೊದಲು ತಮ್ಮ ಕಿರಿಕಿರಿಯ ಸ್ವಭಾವದಿಂದ ಹೊರಬರಬೇಕು.ಒಳ್ಳೆಯ ಲೇಖನ.ಇಂತಹ ಬರಹಗಳು ಇನ್ನಷ್ಟು ಬರಲಿ.

    ReplyDelete
  9. ಲೌಕಿಕ ಜೀವನದ ಬಹುಭಾಗ ವಿಷಯಾಸಕ್ತಿಯೇ ಆಗಿರುತ್ತದೆ! ಇಂದ್ರಿಯಗಳು ಕಾಣುವುದು, ಕೇಳುವುದು, ಸ್ಪರ್ಶಿಸುವುದು, ತಿನ್ನುವುದು, ಆಘ್ರಾಣಿಸುವುದು ಇವಿಷ್ಟು ಪ್ರಮುಖ ಕ್ರಿಯೆಗಳ ಸುತ್ತಾ ಸುತ್ತುತ್ತವೆ. ’ಬೇಕು’ ಎಂಬು ಬೇಡ ಅಥವಾ ’ಇದ್ದುದು ಸಾಕು’ ಎಂದಾದಾಗ, ’ನಾನು’ ಕಳೆದುಹೋಗಿ ವಿಶಾಲವಾದ ’ಅನಂತ ನಾನು’ವಿನ ಭಾಗವಾಗಲು ಪ್ರಯತ್ನಿಸಿದಾಗ ಆಕರ್ಷಣೆ ಕಡಿಮೆಯಾಗುತ್ತದೆ. ಇದನ್ನೇ ಗೀತೆಯಲ್ಲಿ ಜಗದ್ಗುರು ಶ್ರೀಕೃಷ್ಣ ವಿವರಿಸಿದ್ದಾನಷ್ಟೇ ? ಲೇಖನದಲ್ಲಿ ಭಾಗಶಃ ಅದರ ಛಾಯೆಯನ್ನು ಹೇಳಿದ್ದೀರಿ. ಬರೆಯುತ್ತಾ ಇರಿ, ಧನ್ಯವಾದಗಳು.

    ReplyDelete
  10. ಈ ಆಕರ್ಷಣೆ ಒಂದು ಜನ್ಮಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲವಂತೆ. ಋಣಾನುಬಂಧ ಎಂಬ ಪದ ಸೃಷ್ಟಿಸಿರುವುದು ಈ ಕಾರಣಕ್ಕಾಗಿಯೇ

    ReplyDelete