https://www.facebook.com/share/p/1DprVZSfF8/
👆ಹಿಂದಿನ ತಿಂಗಳ(ಸೆಪ್ಟೆಂಬರ್2026) 'ತುಷಾರ'ದಲ್ಲಿ ಪ್ರಕಟವಾದ ನನ್ನ ಲಲಿತ ಪ್ರಬಂಧ 'ಬಾವಿಯೋ ಬವಣೆಯೋ!' ನಿಮ್ಮ ಪ್ರೀತಿಯ ಓದಿಗೆ❤️🌼
'ತುಷಾರ' ಪತ್ರಿಕಾ ಬಳಗಕ್ಕೆ ಧನ್ಯವಾದಗಳು🌹🙏
ಬಾವಿಯೋ ಬವಣೆಯೋ!
ಮಹಾಮಾಯಾವಿ ಫೇಸ್‌ಬುಕ್ ಬಗ್ಗೆ ಯಾರಿಗೆ ಏನೇ ಅಭಿಪ್ರಾಯ ಇರಬಹುದು. ಆದರೆ ನನಗಂತೂ ಅದೊಂದು ನೆನಪಿನ ಮಹಾನ್ ಕಣಜ. ಪ್ರತಿದಿನವೂ ಅವತ್ತಿನ, ಹಿಂದಿನ ವರ್ಷಗಳ ದಾಖಲೆಗಳನ್ನು ನಿಯತ್ತಾಗಿ ತೋರಿಸಿ ನಮ್ಮ ನೆನಪನ್ನು ಚುರುಕುಗೊಳಿಸುವ ಜೊತೆಗೆ ಪೈಪೋಟಿಗೆ ಬಿದ್ದಂತೆ ಪ್ರದರ್ಶನವಾಗುತ್ತಿರುವ ಉತ್ಸಾಹಿ ಯುವಜಗತ್ತಿನ ಚಟುವಟಿಕೆಗಳು ನನ್ನ ಆಜನ್ಮಸಿದ್ಧ ಹಕ್ಕಾಗಿರುವ (!) ಜಡತ್ವವನ್ನು ಸ್ವಲ್ಪಮಟ್ಟಿಗಾದರೂ ಕೊಡವಲು ಶಕ್ಯವಾಗುತ್ತದೆ. ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ‘ನಿಮ್ಮಲ್ಲಿ ಯಾರಾದರೂ ಎಂದಾದರೂ ಸೇದು ಬಾವಿಯಲ್ಲಿ ನೀರು ಸೇದಿದ್ದರೆ ಲೈಕ್ ಮಾಡಿ’ ಎಂಬ ಒಂದು ಸ್ಟೇಟಸ್ ಬಂದಿತ್ತು. ಅದನ್ನು ನೋಡಿದ ತಕ್ಷಣವೇ ಮೈ ಕೊಡವಿ ಜಡತ್ವವನ್ನು ಬಡಿದೋಡಿಸಿ ಎದ್ದ ನನಗೆ ನಾವು ಚಿಕ್ಕಂದಿನಲ್ಲಿ ಬಾವಿಯಲ್ಲಿ ನೀರು ಸೇದುತ್ತಿದ್ದ ಚಿತ್ರಣದ ನೆನಪುಗಳು ಪುಂಖಾನುಪುಂಖವಾಗಿ ಬರಲಾರಂಭಿಸಿದವು.
ಶೈಶವಾವಸ್ಥೆಯಿಂದ ಮೇಲೆದ್ದು ನಡುಗೆಯನ್ನು ಕಲಿತು ಹೊಸ್ತಿಲು ದಾಟಿದ ಮರುಕ್ಷಣವೇ ಮೊದಲು ನಾವು ಹೋಗುತ್ತಿದ್ದುದೇ ಬಾವಿಕಟ್ಟೆಗೆ. ಏಕೆಂದರೆ ನಮ್ಮ ಮನೆಯಲ್ಲಿ ದಿನ ಪ್ರಾರಂಭವಾಗುತ್ತಿದ್ದದ್ದೇ ಬಾವಿಯಲ್ಲಿ ನೀರು ಸೇದುವುದರಿಂದ ಹಾಗೂ ಪರಿಸಮಾಪ್ತಿಯಾಗುತ್ತಿದ್ದದ್ದೂ ನೀರು ಸೇದುವುದರೊಂದಿಗೇ! ಬಾಲ್ಯದಲ್ಲಿ ನಮ್ಮ ಆಟ, ಹೋರಾಟ, ನೀರಾಟ, ಚೀರಾಟ... ಎಲ್ಲಾ ನಡೆಯುತ್ತಿದ್ದದ್ದೂ ಬಾವಿಕಟ್ಟೆಯಲ್ಲಿಯೇ!
ಸಣ್ಣಹಳ್ಳಿಯಾದ ನಮ್ಮೂರಿನಲ್ಲಿ ಇದ್ದದ್ದು ಎರಡೇ ಬಾವಿಗಳು. ನಮ್ಮ ಮನೆಯ ಹಿಂಭಾಗದಲ್ಲಿ ಸಿಹಿ ನೀರಿನ ಬಾವಿ ಮತ್ತು ಮುಖ್ಯರಸ್ತೆಗೆ ಸೇರಿದಂತೆ ಇದ್ದ ಉಪ್ಪು ನೀರಿನ ಬಾವಿ. ನಂತರದ ನಮ್ಮ ಸೀಮಿತ ಪುಸ್ತಕ ಜ್ಞಾನದಿಂದ ಸಮುದ್ರದ ನೀರು ಉಪ್ಪಾಗಿರುತ್ತದೆ ಎಂದು ತಿಳಿದಾಗ ನಮ್ಮ ಈ ಬಾವಿಗೆ ಸಮುದ್ರದಿಂದಲೇ ನೇರವಾಗಿ ನೀರು ಬರುತ್ತಿದೆ ಎಂದು ತೀರ್ಮಾನಿಸಿದ್ದೆವು. ನಮ್ಮಲ್ಲಿ ಒಂದು ಗುಂಪು ಬಂಗಾಳಕೊಲ್ಲಿಯಿಂದ ನೀರು ಬರುತ್ತೆ ಎಂದರೆ ಮತ್ತೊಂದು ಗುಂಪು ಅರಬ್ಬೀ ಸಮುದ್ರದಿಂದಲೇ ಬರೋದು ಎಂಬ ವಾದ ಕಿತ್ತಾಟ ನಿರಂತರವಾಗಿ ನಡೆದೇ ಇತ್ತು!
ಸಿಹಿ ನೀರಿನ ಬಾವಿ 80 ಅಡಿ ಆಳ ಎಂದು ಹೇಳ್ತಾ ಇದ್ದರು. ಅದಕ್ಕೆ ಕಟ್ಟಿದ್ದ ಕಲ್ಲು ಶಿಥಿಲಾವಸ್ಥೆಯಲ್ಲಿತ್ತು. ಒಳಗಿನ ಕಲ್ಲುಪೊಟರೆಗಳಲ್ಲಿ ಗುಬ್ಬಚ್ಚಿಗಳು ವಾಸವಾಗಿದ್ದು ಆಗಾಗ ಅವುಗಳ ತ್ಯಾಜ್ಯವೂ ನೀರಿಗೆ ಸಿಂಪಡಣೆಯಾಗಿ ನೀರಿನ ಸತ್ವವನ್ನು ವೃದ್ಧಿಸುತ್ತಿತ್ತು. ಕೆಲವೊಮ್ಮೆ ಕದನ ಕುತೂಹಲಿಗಳಾದ ಗುಬ್ಬಚ್ಚಿಗಳು ಆಯತಪ್ಪಿ ನೀರಿಗೆ ಬಿದ್ದಾಗ ತಕ್ಷಣವೇ ನಾವೇನಾದರೂ ನೀರು ಸೇದಲು ಹೋಗಿದ್ದರೆ ಬಿದಿರು ಕುಕ್ಕೆಯನ್ನು ನೀರಿಗೆ ಬಿಟ್ಟು ಅವನ್ನು ಎತ್ತುವ ಪ್ರಯತ್ನ ನಡೆಸುತ್ತಿದ್ದೆವು. ಈ ಬಾವಿಯಲ್ಲಿ ಊರಿನವರೆಲ್ಲಾ ಕುಡಿಯುವುದಕ್ಕೆ ಮಾತ್ರ ನೀರನ್ನು ಸೇದಿಕೊಳ್ತಾ ಇದ್ರು. ಆದರೆ ನಮ್ಮ ಮನೆಯಲ್ಲಿ ಮಾತ್ರ ಅಡುಗೆಮನೆಗೆ, ಬಚ್ಚಲುಮನೆಗೆ, ಗಿಡಗಳಿಗೆ... ಅಂತಾ ಸಕಲೋಪಯೋಗಗಳಿಗೂ ಈ ಬಾವಿಯನ್ನೇ ಅವಲಂಬಿಸಿದ್ದೆವು! ನಮ್ಮ ಮನೆಯಲ್ಲಿಯ ಆಬಾಲವೃದ್ಧರಾದಿಯಾಗಿ ಎಲ್ಲಾ ಹೆಣ್ಣುಜೀವಗಳಿಗೂ ದಿನವೆಲ್ಲಾ ನೀರು ಸೇದುವುದೇ ಅನಿವಾರ್ಯ ಕರ್ಮವಾಗಿತ್ತು!
ನಮ್ಮದೋ ರಣರಣ ಬಿಸಿಲಿನ ಬಯಲು ಸೀಮೆ. ಮಳೆ ಬರ್ತಿದ್ದದ್ದೇ ಅಪರೂಪಕ್ಕೊಮ್ಮೆ. ಅಂಥಾ ಊರಿನಲ್ಲಿದ್ದುಕೊಂಡು ಅದೂ ಬೇಸಿಗೆ ಕಾಲದಲ್ಲಿ ಮನೆಗೆ ನೀರು ಹೊಂಚೋದೇ ದುಸ್ತರವಾಗಿತ್ತು. ನಮ್ಮ ಸೋದರತ್ತೆಯೊಬ್ಬರು ಹಿತ್ತಲು ತುಂಬಾ ಗಿಡಗಳನ್ನು ಹಾಕಿಕೊಂಡಿದ್ದು ಅವರಿಗೆ ಪ್ರತಿ ಗಿಡಗಳ ಪಾತಿಯೂ ಹಸಿಯಾಗಿರಲೇಬೇಕಾಗಿದ್ದರಿಂದ ನಮಗೆ ಬಾವಿಯಿಂದ ನೀರನ್ನು ಸೇದಿಸೇದಿ ಸಾಕಾಗಿಹೋಗಿತ್ತು. 'ಮಕ್ಕಳಿಗೆ ಬೇಸಿಗೆ ರಜಾನ ಏಕಾದ್ರೂ ಕೊಡ್ತಾರೋ' ಎಂದು ಅಮ್ಮ ಅಲವತ್ತುಕೊಳ್ಳುತ್ತಿದ್ದರು. ಬೆಳ್ಳಂಬೆಳಿಗ್ಗೆಯೇ ಕೋಳಿ ಕೊಕ್ ಎನ್ನೋದೇ ತಡ ರಜೆಯ ಸವಿಯನ್ನು ಆಸ್ವಾದಿಸುತ್ತಾ ಮಲಗಿರುತ್ತಿದ್ದ ನಮ್ಮನ್ನು ಎಬ್ಬಿಸಿಕೊಂಡು ಹೋಗಿ ನೀರು ಸೇದಲು ಪ್ರಾರಂಭಿಸಿದರೆ ತಿಂಡಿ ತಿನ್ನಲೂ ಬಿಡದಂತೆ ಸೇದಿಸ್ತಾನೇ ಇದ್ದಾಗ ಅಮ್ಮ ‘ಗಿಡಗಳ ಮೇಲಿರುವ ಕರುಣೆ ಮಕ್ಕಳ ಮೇಲೆ ಇಲ್ವಲ್ಲ ಈಯಮ್ಮಂಗೆ’ ಎಂದು ಕೊರಗಿಕೊಳ್ತಾ ಇದ್ರು. ನಿದ್ರೆಗಣ್ಣಲ್ಲಿದ್ದರೂ ಮೊದಮೊದಲು ಖುಷಿಯಿಂದಲೇ ನೀರು ಸೇದಕ್ಕೆ ಪ್ರಾರಂಭ ಮಾಡ್ತಿದ್ದ ನಮಗೆ ನಂತರ ಕೈ ನೋವಾಗಿ ‘ಬಿಟ್ಟರೆ ಸಾಕು ಬಡ ಜೀವವೇ’ ಎನಿಸಿಬಿಡ್ತಾ ಇತ್ತು. ಬಾಲ ವಿಧವೆಯಾದ ಈ ತಂಗಿಯ ಮೇಲೆ ನಮ್ಮ ತಂದೆಗೆ ಅಪಾರ ಪ್ರೇಮ. ಮನೆಯಲ್ಲಿ ನಮ್ಮತ್ತೆಯದೇ ಪ್ರಾಬಲ್ಯವಿದ್ದುದರಿಂದ ಅವರಿಗೆ ಯಾರೂ ಎದುರಾಡುವಂತೆಯೂ ಇರಲಿಲ್ಲ. ನಮ್ಮತ್ತೆಯದೂ ಬಾವಿಯದೂ ಅವಿನಾಭಾವ ಸಂಬಂಧವಾಗಿತ್ತು!
ಬಿರುಬಿಸಿಲಿನ ಒಂದು ಬೇಸಿಗೆಯಲ್ಲಿ ನಮ್ಮ ಬಾವಿಗಳ ನೀರೂ ಇಂಗಿಹೋಗಿ ಊರಿನಲ್ಲೆಲ್ಲಾ ನೀರಿನ ಹಾಹಾಕಾರ ಪ್ರಾರಂಭವಾಯಿತು. ನಮ್ಮೂರಿನಿಂದ ಎರಡು ಮೈಲಿ ಆಚೆಗಿದ್ದ ಹೊಡಕೆ ಹಳ್ಳದಿಂದ ತಲೆಯ ಮೇಲೆ, ಸೊಂಟದ ಮೇಲೆ ಕೊಡ ಹೊತ್ತುಕೊಂಡು ಹೆಣ್ಣುಮಕ್ಕಳು ನೀರು ತರಲಾರಂಭಿಸಿದರು. ನಮ್ಮ ಮನೆಯ ಅಗಾಧ ನೀರಬೇಡಿಕೆಗೆ ಅದು ಯಾವ ಮೂಲೆಗೂ ಸಾಲುತ್ತಿರಲಿಲ್ಲ. ‘ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ’ ಎನ್ನುತ್ತಾ ನಮ್ಮತ್ತೆ ಎತ್ತಿನಗಾಡಿ ಕಟ್ಟಿಸಿಕೊಂಡು ಅದರ ತುಂಬಾ ದೊಡ್ಡದೊಡ್ಡ ಹಿತ್ತಾಳೆ-ತಾಮ್ರದ ತಪ್ಪಲೆಗಳು, ಕೊಳಗಗಳನ್ನು ಇಟ್ಟುಕೊಂಡು ಎರಡೂವರೆ ಮೈಲಿ ಆಚೆಗಿದ್ದ ಹೇಮಾವತಿ ನದಿಯಿಂದ ನೀರು ತರಿಸುತ್ತಿದ್ದರು. ಅದರಲ್ಲಿ ಅರ್ಧಭಾಗ ತಮ್ಮ ಗಿಡಗಳಿಗೇ ಮೀಸಲಿಡುತ್ತಿದ್ದರೆನ್ನುವುದು ಸರ್ವವೇದ್ಯ! ಬೇಸಿಗೆ ಕಳೆಯುವವರೆಗೆ ಅವು ಜೀವಾನಾದರೂ ಉಳಿಸಿಕೊಂಡಿರಬೇಕಲ್ಲ!
ಈ ನಡುವೆ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ನಮ್ಮ ಸಿಹಿ ನೀರಿನ ಬಾವಿಯಲ್ಲಿ ಕುಡಿಯುವ ನೀರನ್ನು ಸಂಗ್ರಹಿಸಬೇಕಿತ್ತು. ದಪ್ಪ ಹಿತ್ತಾಳೆ ಚೊಂಬನ್ನು ಹಗ್ಗಕಟ್ಟಿ ಬಾವಿಗೆ ಬಿಟ್ಟು ಬಂದಷ್ಟು ನೀರನ್ನು ಸೇದಿ ಬಿಳಿ ಪಂಚೆಯನ್ನು ಬಾಯಿಗೆ ಕಟ್ಟಿರುವ ದೊಡ್ಡತಪ್ಪಲೆಗೆ ಸುರಿದು ಸೋಸಬೇಕು. ಹೀಗೆ ಕೆರೆದು-ಸುರಿದು ಸೂರ್ಯ ಮೂಡುವುದರಲ್ಲಿ ಒಂದು ತಪ್ಪಲೆ ಕುಡಿಯುವ ನೀರನ್ನು ಸಿದ್ಧಗೊಳಿಸುತ್ತಿದ್ದೆವು.
ನಮ್ಮ ಸೋದರಜ್ಜಿ ಒಬ್ಬರು ತಮ್ಮ ಸೀದಾಸಾದಾ ಸ್ವಭಾವದಿಂದ ಊರಿನವರ ಜೊತೆ ಮುನಿಸು ಮಾಡಿಕೊಂಡಾಗ ಈಯಮ್ಮಂಗೆ ಬುದ್ಧಿ ಕಲಿಸಬೇಕೆಂದುಕೊಂಡು ಎಲ್ಲರೂ ಸೇರಿ ನೀರು ಸೇರಿಕೊಂಡ ನಂತರ ಬಾವಿಯ ರಾಟೆಯನ್ನು ಬಿಚ್ಚಿಟ್ಟುಕೊಂಡರಂತೆ. ಆಗಿನ್ನೂ ಪ್ರಾಯದಲ್ಲಿದ್ದ ಅಜ್ಜಿ(!) 80 ಅಡಿ ಬಾವಿಗೆ ನೇರ ಹಗ್ಗ ಬಿಟ್ಟು ನೀರು ಸೇರಿಕೊಂಡಾಗ ‘ಗಟ್ಟಿಗಿತ್ತಿ’ ಅಂದುಕೊಂಡರಂತೆ!
ಬಾವಿಯಿಂದ ನೀರನ್ನು ಸೇದುವುದರಲ್ಲಿಯೂ ಬಹಳ ವೈವಿಧ್ಯತೆಗಳಿದ್ದವು. ಸಾಮಾನ್ಯವಾಗಿ ಹೆಣ್ಣುಮಕ್ಕಳು ಒಬ್ಬರೇ ನೀರು ಸೇದುತ್ತಿದ್ದುದೇ ಕಡಿಮೆ. ಆಕಸ್ಮಾತ್ ಸೇದುವುದಾದರೆ ಅವರು ಒಂದು ಕಾಲನ್ನು ಬಾವಿಕಟ್ಟೆಯಲ್ಲಿರುವ ಗೂಡಿನೊಳಗೆ ಇಟ್ಟುಕೊಂಡು ಮತ್ತೊಂದು ಕಾಲನ್ನು ನೆಲದ ಮೇಲೆ ಭದ್ರವಾಗಿ ಊರಿಕೊಂಡು, ಕೊಡದಲ್ಲಿ ನೀರು ತುಂಬಿದ ನಂತರ ಬಲಗೈಯಿಂದ ಹಗ್ಗವನ್ನು ಜೋರಾಗಿ ಎಳೆದು, ಎಡಗೈಯಿಂದ ಜಾರದಂತೆ ಹಗ್ಗ ಹಿಡಿದು.... ಹೀಗೆ ಕೊಡ ಮೇಲೆ ಬರುವವರೆಗೂ ಪುನರಾವರ್ತಿಸುತ್ತಿದ್ದರು. ಬಾವಿಯ ಕಲ್ಪನೆಯೇ ಇಲ್ಲದವರಿಗೆ ಈ ಪ್ರಾಸೆಸ್ ಬಹಳ ಕಾಂಪ್ಲಿಕೇಟೆಡ್ ಆಗಿ ತೋರಬಹುದು. ಆದರೆ ನಮಗಂತೂ ನೀರು ಕುಡಿದಷ್ಟೇ ಸರಾಗವಾಗಿತ್ತು.
ಇನ್ನು ಜೋಡಿಯಲ್ಲಿ ನೀರು ಸೇದುವಾಗಿನ ಸೊಬಗೇ ಸೊಬಗು. ಒಬ್ಬರು ಹಗ್ಗ ಹಿಡಿದು ಎಳೆದ ತಕ್ಷಣ ಇನ್ನೊಬ್ಬರು ಕೈ ಜೋಡಿಸಿ ಹಗ್ಗ ಎಳೆಯುತ್ತಾ ಕಿಲಕಿಲನೆ ನಗುತ್ತಾ, ಊರ ಸುದ್ದಿಯನ್ನೆಲ್ಲಾ ಮಾತನಾಡುತ್ತಾ ನೀರು ಸೇದುತ್ತಿದ್ದರೆ ಕೊಡ ಮೇಲೆ ಬಂದಿದ್ದೇ ತಿಳಿಯುತ್ತಿರಲಿಲ್ಲ. ಯಾರಾದರೂ ಒಬ್ಬರೇ ನೀರು ಸೇದುತ್ತಿದ್ದರೆ ಮತ್ತೊಬ್ಬರು ಓಡಿ ಬಂದು ಅವರಿಗೆ ಜೊತೆಯಾಗುತ್ತಿದ್ದು ನಮ್ಮ ಬಾವಿಕಟ್ಟೆ ಪರಸ್ಪರ ಸಹಕಾರದ ಪರಮ ಪವಿತ್ರ ತಾಣವಾಗುತ್ತಿತ್ತು. ಹಾಗೆಯೇ ‘ನಾನು ಮೊದಲು ಬಂದಿದ್ದು, ನಾನು...’ ಎನ್ನುವ ಕಿತ್ತಾಟದಲ್ಲಿ ನಮ್ಮ ಬಾವಿಯಕಟ್ಟೆ ರಣರಂಗವೂ ಆಗುತ್ತಿತ್ತು! ಒಬ್ಬರ ಮೇಲೆ ಒಬ್ಬರ ಪೈಪೋಟಿಗೆ ಖಾಲಿಕೊಡದ ಹಗ್ಗವನ್ನು ಸ್ಪೀಡ್ ಆಗಿ ಬಿಡುವ ಸಡಗರದಲ್ಲಿ ಕೊಡ ಆ ಕಡೆ-ಈ ಕಡೆ ಬಂಡೆಗೆ ಹೊಡೆದು ನಜ್ಜುಗುಜ್ಜಾಗುತ್ತಿತ್ತು.
ಆಗಾಗ ದಣಿದು ಬಾಯಾರಿ ಬಂದ ದಾರಿಹೋಕರಿಗೆ ಅವರ ಚೊಂಬು ತುಂಬಾ ಕುಡಿಯುವಷ್ಟು ನೀರನ್ನು ಕೊಡದಿಂದಲೇ ಬಗ್ಗಿಸುತ್ತಿದ್ದ ದೃಶ್ಯವಂತೂ ಅನನ್ಯವಾಗಿರುತ್ತಿತ್ತು.
ಎಲ್ಲೋ ಅಪರೂಪಕ್ಕೆ ಬರುತ್ತಿದ್ದ ಗಂಡು ಒಂಟಿಜೀವಗಳು ನೀರು ಸೇದುತ್ತಿದ್ದ ವೈಖರಿಯೇ ಬೇರೆ. ಅವರು ಸರ್‍ರನೆ ಕೊಡವನ್ನು ಬಾವಿಯೊಳಗೆ ಬಿಟ್ಟು ನೀರು ತುಂಬಿದ ತಕ್ಷಣವೇ ಸರಸರನೆ ಎರಡು ಕೈಗಳಿಂದಲೂ ಸಮಾನ ಬಲಪ್ರಯೋಗ ಮಾಡುತ್ತಾ ಕಣ್ಣುಮುಚ್ಚಿ ಬಿಡುವುದರಲ್ಲಿ ಸೇದಿಬಿಡುತ್ತಿದ್ದರು!
ನೀರು ಸೇದುವ ಸಡಗರದಲ್ಲಿ ಕೆಲವೊಮ್ಮೆ ಕೊಡವು ಹಗ್ಗ ಕಳಚಿಕೊಂಡೋ, ತುಂಡಾಗಿಯೋ ಬಾವಿಯೊಳಗೆ ಬಿದ್ದುಹೋಗುತ್ತಿತ್ತು. ಆಗ ಪಕ್ಕದ ಊರಿನಿಂದ ಪಾತಾಳಗರಡಿ ತರಿಸಿ ಅದನ್ನು ಎತ್ತುತ್ತಿದ್ದರು. ಅಪರೂಪದ ಆ 'ಅಪರೇಷನ್ ಪಾತಾಳಗರಡಿ' ನೋಡಕ್ಕೆ ನಾವೆಲ್ಲಾ ಬಹಳ ಸಂಭ್ರಮದಿಂದ ಬಾವಿಯ ಸುತ್ತಾ ಸೇರಿ ಬಗ್ಗಿಬಗ್ಗಿ ಬಾವಿಯೊಳಗೆ ನೋಡಲಾರಂಭಿಸಿದರೆ ಹಿರಿಯರಿಗೆ ನಮ್ಮನ್ನು ದೂರ ಕಳಿಸುವುದೇ ಕೆಲಸವಾಗುತ್ತಿತ್ತು. ಪಕ್ಕದ ಊರಿನ ನಿಂಗಮ್ಮ ಬಾವಿಗೆ ಬಿದ್ದಾಗ ತೊಟ್ಟಿಲು ಇಳಿಸಿ ಹೇಗೆ ಮೇಲೆತ್ತಿದರು ಎನ್ನುವುದು ಆಗ ಚರ್ಚೆಯಾಗುತ್ತಿತ್ತು. ನಮ್ಮ ಹಿಂದಿನ ಬಾವಿಯಲ್ಲಿ ನಾವು ಪದೇಪದೇ ಕೊಡ ಬೀಳಿಸಲು ಪ್ರಾರಂಭಿಸಿದ ನಂತರ ನಮ್ಮ ಮನೆಯಲ್ಲೇ ಒಂದು ಪಾತಾಳಗರಡಿ ತರಿಸಿದಾಗ ಆಕ್ಟೋಪಸ್‌ನಂತಹ ಪಾತಾಳಗರಡಿಯ ಓನರ್ ಆಗಿದ್ದು ನಮಗೆ ಎಲ್ಲಿಲ್ಲದ ಖುಷಿ!
‘ಇರಳು ಕಂಡ ಬಾವಿಗೆ ಹಗಲು ಬಿದ್ದಂತೆ’ ಎನ್ನುವ ಒಂದು ಗಾದೆಮಾತಿದೆ. ತಿಳಿದೂತಿಳಿದೂ ತಪ್ಪುಮಾಡುವವರಿಗೆ ಇದನ್ನು ಹೇಳುತ್ತಾರೆ. ‘ತಾನು ತೋಡಿದ ಬಾವೀಲಿ ತಾನೇ ಬಿದ್ದಂತೆ’ ಎನ್ನುವ ಉಕ್ತಿಯೂ ಇದೆ. ಎಷ್ಟೆಲ್ಲಾ ಪ್ರಾಮುಖ್ಯತೆ ನಮ್ಮ ಬಾವಿಗೆ!
ಪ್ರಾಪಂಚಿಕ ಜ್ಞಾನದ ಬಗ್ಗೆ ನಮ್ಮ ಕುಟುಂಬದ ಸರ್ವಜನರ ಸಭೆಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಆ ವಿಷಯದಲ್ಲಿ ನನ್ನನ್ನು ಎಲ್ಲರೂ ಒಕ್ಕೊರಲಿನಿಂದ ಕೂಪಮಂಡೂಕ ಎಂದು ತೀರ್ಮಾನಿಸಿಬಿಟ್ಟರು. ನನ್ನ ಮೇಲಿನ ಇಂಥಾ ಅಪಾದನೆಯಿಂದ ಅ ಬಾವಿಯೊಳಗಣ ಕಪ್ಪೆ ತನಗಾದ ಅಪಮಾನಕ್ಕೆ ಎಷ್ಟೊಂದು ನೊಂದುಕೊಂಡಿರಬೇಡ!
‘ಯಾರು ಮನೆಯಿಂದ ಹೊರಟು ಅನೇಕ ಆಶ್ಚರ್ಯಗಳಿಂದ ಕೂಡಿದ ಹೊರ ಜಗತ್ತನ್ನು ಪೂರ್ಣವಾಗಿ ನೋಡುವುದಿಲ್ಲವೋ ಅವನು ಬಾವಿಯಲ್ಲಿರುವ ಕಪ್ಪೆಯಂತಾಗುತ್ತಾನೆ,’ ಎನ್ನುವ ಅರ್ಥದ ಒಂದು ಶ್ಲೋಕವಿದೆ. ಈ ರೀತಿಯಲ್ಲಿ ಭಾಗಶಃವಾದರೂ ಬಾವಿಯಿಂದ ಹೊರಬರುವ ಪ್ರಯತ್ನ ನಡೆಸಲು ಕಾರ್ಯಪ್ರವೃತ್ತಳಾಗಲು ಉಪಕ್ರಮಿಸುತ್ತೇನೆ..
ಬೋರ್ ವೆಲ್‌ಗಳು ಬಂದ ನಂತರ ಬಾವಿಗಳ ಪ್ರಾಮುಖ್ಯತೆ ಕಮ್ಮಿಯಾಗಿ ಅವು ಅಪ್ರಯೋಜಕವಾಗಲಾರಂಭಿಸಿದವು. ಕೆಲವು ಮನೆಗಳಲ್ಲಿ, ಪುರಾತನ ದೇವಸ್ಥಾನಗಳಲ್ಲಿ ಬಾವಿಗಳಿದ್ದರೂ ನೀರು ಸೇದುವ ಪ್ರಮೇಯವೇ ಇಲ್ಲದಂತಾಯ್ತು. ಬದುಕಿಗೆ ನೀರುಣಿಸುತ್ತಿದ್ದ ಬಾವಿಗಳೂ ಈಗ ಚರಿತ್ರೆಯ ಪುಟಗಳನ್ನು ಸೇರುವಂತಾಯ್ತು.
✍️ಪ್ರಭಾಮಣಿ ನಾಗರಾಜ


















