Friday, July 29, 2011

'ಹನಿ'ಗಳು

ಅಸ್ತಿತ್ವ

ಕತ್ತಲೆಯ

ಅಟ್ಟೋಡಿಸುವ

ಬೆಳಕಿಗೆ

ತನ್ನ ಅಸ್ತಿತ್ವದ ಬಗ್ಗೇ

ಅಪನಂಬಿಕೆ!

ಸೃಜನಶೀಲತೆ

ಸ್ವಪ್ರಕಾಶದ

ಜ್ಯೋತಿಗೆ

ಪರಬೆಳಕಿನ

ಹಂಗಿಲ್ಲ!

ನೆರಳು

ಕತ್ತಲಲ್ಲಿ

ಕುಳಿತಲ್ಲಿ

ಕಾಡುವ

ನೆರಳೆಲ್ಲಿ?

ಶೋಧ

ಹಿಡಿದು

ಬೆಳಕಿನ ಮೂಲ

ಕೈಯಲ್ಲಿ

ಹುಡುಕಿದೆ

ಕತ್ತಲೆಗಾಗಿ

ಮೂಲೆಮೂಲೆಗಳಲ್ಲಿ!


Saturday, July 23, 2011

ಮನದ ಅಂಗಳದಿ.........೫೦. ನಿರ್ಧಾರ?

ನಮ್ಮ ಜೀವಿತಾವಧಿಯಲ್ಲಿ ಹಾಗೂ ಕೆಲವು ವೇಳೆ ನಮ್ಮ ದೈನಂದಿನ ದಿನಚರಿಯಲ್ಲಿಯೇ ನಿರ್ಧಾರ ತೆಗೆದುಕೊಳ್ಳಬೇಕಾದ ಪರಿಸ್ಥಿತಿಗಳು ಸಾಮಾನ್ಯವಾಗಿ ಎದುರಾಗುತ್ತಿರುತ್ತವೆ. ಅವು ವೈಯಕ್ತಿಕವಾಗಿರಬಹುದು ಅಥವಾ ನಮಗೆ ಸಂಬಂಧಿಸಿದವರದ್ದಾಗಿರಲೂ ಬಹುದು. ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಭವಿಷ್ಯವನ್ನು ರೂಪಿಸುತ್ತವೆ(ನಿರ್ಧರಿಸುತ್ತವೆ!). ಆದರೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಕ್ಷಣಗಳು ನಮ್ಮನ್ನು ಕೆಲವೊಮ್ಮೆ ಎಷ್ಟೊಂದು ಸಂದಿಗ್ಧಕ್ಕೆ ಸಿಲುಕಿಸುತ್ತವೆಯೆಂದರೆ.....ಅಪಕ್ವತೆಯಲ್ಲಿರುವಾಗ ಒಂದು ಪರಿಸ್ಥಿತಿಯಲ್ಲಿ ನಮ್ಮನ್ನು ನಾವು ನಿರ್ವಹಿಸಿಕೊಳ್ಳುವುದು ಬಹಳ ಕಷ್ಟಕರವೆನಿಸುತ್ತದೆ. ಅಂಥಾ ಸಂದರ್ಭಗಳಲ್ಲಿ ಎಷ್ಟೋವೇಳೆ 'ಇನ್ನು ಮುಂದೆ ಯಾವುದೇ ನಿಧಾರಗಳನ್ನು ತೆಗೆದುಕೊಳ್ಳುವುದಿಲ್ಲ,' ಎಂದುಕೊಂಡಿದ್ದೇನೆ, ಆದರೆ ಮರುಕ್ಷಣವೇ ಅದೇ ಒಂದು ನಿರ್ಧಾರವೆನಿಸಿ ಮೌನವಹಿಸಬೇಕಾಗಿದೆ. ನನ್ನ ವಿದ್ಯಾರ್ಥಿ ಜೀವನದಲ್ಲಿ ಎದುರಿಸಬೇಕಾಗಿ ಬಂದ ಅಂಥಾ ಒಂದು ಸಂದಿಗ್ಧ ಪರಿಸ್ಥಿತಿಯ ಬಗ್ಗೆ ಈಗ ಹೇಳಹೊರಟಿದ್ದೇನೆ (ಆಗಿನ ಮನಃಸ್ಥಿತಿಗೆ ಅನುಗುಣವಾಗಿ ಹಾಗೂ ಆಗಲೇ ದಾಖಲಿಸಿದಂತೆ):

'ನಿರ್ಧಾರ ತೆಗೆದುಕೊಳ್ಳಬೇಕಾದ ಕ್ಷಣಗಳಲ್ಲಿ ನನ್ನ ಮನಸ್ಸು ಎಷ್ಟೊಂದು ಡೋಲಾಯಮಾನವಾಗುತ್ತದೆ ಎನ್ನುವುದು ವರ್ಣನಾತೀತ. ಒಂದು ನಿರ್ಧಾರ ತೆಗೆದುಕೊಂಡ ಸ್ವಲ್ಪ ಕಾಲದ ನಂತರ ಮತ್ತೊಂದು ರೀತಿಯಲ್ಲಿ ತೆಗೆದುಕೊಂಡರೆ ಒಳ್ಳೆಯದಿತ್ತೇನೋ ಎನಿಸುವುದರಿಂದ ಯಾವುದೇ ನಿರ್ಧಾರದಿಂದಲೂ ಪೂರ್ಣ ಮಾನಸಿಕ ನೆಮ್ಮದಿಯಂತೂ ದೊರೆಯುವುದೇ ಇಲ್ಲ. ಅದು ಆದದ್ದೂ ಹಾಗೇ......

ನನ್ನ ಡಿಗ್ರಿ(B.Sc.Ed.) ಫಲಿತಾಂಶ ಬರುವ ಮೊದಲೇ S.S.L.C. ಅಂಕಗಳ ಆಧಾರದ ಮೇಲೆ ಕೇಂದ್ರಸರ್ಕಾರಿ ನೌಕರಿ ಒಂದಕ್ಕೆ ಅರ್ಜಿ ಹಾಕಿದ್ದೆ. ಆಯ್ಕೆಯೂ ಆಗಿ ತರಬೇತಿಗೆ ಕರೆ ಬಂದಿತ್ತು. ಅದಕ್ಕಾಗಿ ಕಡೆಯಭಾರಿ ಓದಿದ ವಿದ್ಯಾಸಂಸ್ಥೆಯಿಂದ ನಡತೆಪತ್ರ ತಂದು ಕೊಡಬೇಕಿತ್ತು. ಅಷ್ಟರಲ್ಲಿ ನನ್ನB.Sc.Ed.ಫಲಿತಾಂಶವೂ ಬಂದು ನಾನು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದೆ. ನಡತೆಪತ್ರಕ್ಕಾಗಿ ನಮ್ಮ ಕಾಲೇಜಿಗೆ ಹೋದಾಗ ನಮ್ಮ ಗಣಿತದ ಪ್ರೊಫೆಸರ್ ಅವರೇ ಪ್ರಭಾರಿ ಪ್ರಿನ್ಸಿಪಾಲ್ ಆಗಿದ್ದರು. ನನ್ನನ್ನು ನೋಡಿದ ತಕ್ಷಣ , 'ನೀನು ಗಣಿತದಲ್ಲಿ ಉತ್ತಮ ಅಂಕ ಪಡೆದಿದ್ದೀಯ. M.Sc.Edಗೆ ಸೇರಿಕೊ. ಸ್ಟೈಫಂಡೂ ಸಿಗುತ್ತೆ. ಈಗಲೇ ಏಕೆ ಕೆಲಸಕ್ಕೆ ಹೋಗುತ್ತೀಯ?' ಎಂದರು. ನನಗೆ ತಕ್ಷಣ ಉತ್ತರಿಸಲಾಗಲಿಲ್ಲ.

'ನಿನಗೆ ಯೋಚಿಸಲು ಕಾಲಾವಕಾಶ ಕೊಡುತ್ತೇನೆ. ಮಧ್ಯಾಹ್ನದ ನಂತರ ನನ್ನನ್ನು ಕಾಣು,' ಎಂದು ಹೇಳಿದರು.

ನಾನು ಕನಸುಕಾಣುತ್ತಾ ನನ್ನ ಜೊತೆಯವರನ್ನು ನೋಡಲು ಹಾಸ್ಟೆಲ್‌ಗೆ ಹೋದೆ. ನನ್ನೊಡನೆ ಓದುತ್ತಿದ್ದವರು, ನನ್ನ ಬಳಿಯೇ ಲೆಕ್ಕ ಹೇಳಿಸಿಕೊಳ್ಳುತ್ತಿದ್ದವರು M.Sc.Edಗೆ ಸೇರಿದ್ದರು. ಎಲ್ಲರೂ ನನ್ನನ್ನೂ ಸೇರೆಂದು ಒತ್ತಾಯಿಸುತ್ತಿದ್ದರು. ಅಷ್ಟರಲ್ಲೇ ಯಾರೋ ನನ್ನನ್ನು ನೋಡಲು ಬಂದಿದ್ದಾರೆಂದು ತಿಳಿಯಿತು. ಈಚೆಗೆ ಬಂದು ನೋಡಿದಾಗ ನನ್ನ ಕಳೆದ ವರ್ಷದ ಒಬ್ಬ ಸಹಪಾಠಿ ನಿಂತಿದ್ದ. ನನ್ನನ್ನು ಕಂಡಾಕ್ಷಣವೇ, 'ನೀವು M.Sc.Edಗೆ ಸೇರಲು ಬಂದಿರುವಿರಾದರೆ ಸಂತೋಷ. ಆದರೆ ಅದಕ್ಕಾಗೇ ದೂರದ ತಮಿಳುನಾಡಿನ ಒಂದು ಹಳ್ಳಿಯಿಂದ ನಾನು ಬಂದಿದ್ದೇನೆ. ಈಗಾಗಲೇ ಒಂದು ಟೆಸ್ಟ್ ಕೂಡ ನಡೆಯುತ್ತಿದೆ. ಈಗ ನೀವು ಸೇರಿದರೆ ಮೆರಿಟ್‌ಕ್ರಮದಲ್ಲಿ ನಿಮ್ಮ ಹೆಸರು ಮೊದಲಿನದಾಗುತ್ತದೆ. ಈಗಾಗಲೇ ಕಡೆಯಲ್ಲಿರುವ ನನ್ನ ಹೆಸರು ಬಿಟ್ಟುಹೋಗುವುದರಿಂದ ನನ್ನ ಸ್ಟೈಫಂಡ್ ನಿಂತುಹೋಗುತ್ತದೆ. ಆಗ ನಾನು ಓದುವುದನ್ನು ಬಿಟ್ಟು ಊರಿಗೆ ಹೋಗಬೇಕು. ನಿಮಗಾದರೆ ಈಗಾಗಲೇ ಕೆಲಸ ಸಿಕ್ಕಿದ್ದು ಈಗ ನಡತೆಪತ್ರಕ್ಕಾಗಿ ಬಂದಿದ್ದೀರಿ. ನನ್ನಂತೆ ಓದುವ ಉದ್ದೇಶದಿಂದ ಬಂದಿಲ್ಲ. ಈಗ ಆಯ್ಕೆ ನಿಮ್ಮದು,' ಎಂದ.

ಕೇಂದ್ರಸರ್ಕಾರವು ನಡೆಸುತ್ತಿದ್ದ ನಮ್ಮ ಕಾಲೇಜಿನಲ್ಲಿ ಕೋರ್ಸ್‌ಗೆ ಸೇರಿದ ಒಟ್ಟು ವಿದ್ಯಾರ್ಥಿಗಳಲ್ಲಿ ಅರ್ಧದಷ್ಟು ಮಂದಿಗೆ ಮಾತ್ರ (೫೦%) ಮೆರಿಟ್ ಕ್ರಮದಲ್ಲಿ ಸ್ಷೈಫಂಡ್ ಸಿಗುತ್ತಿತ್ತು. ನನಗೂ ಸ್ಟೈಫಂಡ್ ಅನಿವಾರ್ಯವಾಗಿದ್ದು ಆ ಮೊದಲಿನ ನಾಲ್ಕು ವರ್ಷಗಳೂ ವಿಶೇಷ ಶ್ರಮದಿಂದ (ದಕ್ಷಿಣದ ಬೇರೆಬೇರೆ ರಾಜ್ಯಗಳಿಂದ ಬಂದು ಓದುತ್ತಿದ್ದ ಬುದ್ದಿವಂತರ ನಡುವೆ) ಸ್ಟೈಫಂಡ್ ಪಡೆದೇ ಓದಿದ್ದೆ. ನಾನು ಆ ಕ್ಷಣದಲ್ಲಿ ಅವನ ಪರಿಸ್ಥಿತಿಯ ಬಗ್ಗೆ ಯೋಚಿಸಿ, 'ನೀವೇ ಓದನ್ನು ಮುಂದುವರೆಸಿ, ನಾನು ಸೇರುವುದಿಲ್ಲ,' ಎಂದುಬಿಟ್ಟೆ. ಕೃತಜ್ಞತೆ ತುಂಬಿದ ಅವನ ಆ ನೋಟ ಮರೆಯುವಂತೆಯೇ ಇಲ್ಲ.'

ಆದರೆ ಆಗ ಬಿಟ್ಟಿದ್ದೇ ಬಿಟ್ಟಿದ್ದು, ಮತ್ತೆ ನನಗೆ ಸ್ನಾತಕೋತ್ತರ ಪದವಿಯನ್ನು ಪಡೆಯಲು ಆಗಲೇ ಇಲ್ಲ!

ನಂತರದ ಎರಡು ವರ್ಷಗಳಲ್ಲಿ ನನಗೆ ಶಿಕ್ಷಕಿಯಾಗಬೇಕೆಂದಿದ್ದ ಮಹತ್ತರವಾದ ಹಂಬಲವೂ ಕೈಗೂಡಿತು. ಶಿಕ್ಷಕಿಯಾಗಿದ್ದ ಸುದೀರ್ಘಅವಧಿಯಲ್ಲಿ ಯಾವುದೇ ವಿಶೇಷ ಒತ್ತಡವೂ ಇಲ್ಲದೇ ವೃತ್ತಿಜೀವನ ಸುಗಮವಾಗೇ ಸಾಗುತ್ತಿತ್ತು ಎನ್ನುವುದು ಮುಂದಿನ ದಿನಗಳಲ್ಲಿ ಅರ್ಥವಾಯಿತು! ನಂತರ ಸ್ವಯಂ ನಿರ್ಧಾರ ತೆಗೆದುಕೊಳ್ಳಬೇಕಾದ ಕ್ಷಣಗಳು ಆಗಾಗ ಎದುರಾಗಲಾರಂಭಿಸಿದವು. ಅದಕ್ಕಾಗೇ ಪ್ರತಿದಿನ ಎಚ್ಚರವಾದ ತಕ್ಷಣ ನನ್ನ ಮನಸ್ಸಿಗೆ ನಾನೇ, ದಿನ ಸೂಕ್ತ ಸಂದರ್ಭಗಳಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಸಹಕರಿಸುವ೦ತೆಯೂ, ನಾನು ತೆಗೆದುಕೊಂಡ ನಿರ್ಧಾರಕ್ಕಾಗಿ ಯಾವುದೇ ಕಾರಣಕ್ಕೂ ಪಶ್ಚಾತ್ತಾಪ ಪಡದಂತೆ ಅನುಗ್ರಹಿಸುವಂತೆಯೂ ಕೇಳಿಕೊಳ್ಳಲಾರಂಭಿಸಿದೆ. ನಾವು ನಮ್ಮ ಮನಸ್ಸಿನ ಆಳಕ್ಕೆ ಇಳಿದು ಎಂದರೆ ಬಾಹ್ಯವಾಗಿ ನಾವು ಎದುರಿಸಬೇಕಾದ ಸಮಸ್ಯೆಯಲ್ಲಿನ ಅಸಹಾಯಕತೆಯನ್ನು ಸಂಪೂರ್ಣವಾಗಿ ಮನಗಂಡು, ವಿನೀತ ಭಾವದಿಂದ ನಮ್ಮ ಅಂತರಂಗಕ್ಕೆ ಅಥವಾ ನಾವು ನಂಬಿರುವ ಶಕ್ತಿಗೆ ಈರೀತಿಯ ಬೇಡಿಕೆಯನ್ನು ಸಲ್ಲಿಸಿದಾಗ ಉತ್ತಮ ಫಲ ದೊರೆಯುತ್ತದೆ ಎನ್ನುವುದು ನನ್ನ ಸೀಮಿತ ಅನುಭವಕ್ಕೆ ಗೋಚರವಾಗಿದೆ. ಒಂದು ಪ್ರಾರ್ಥನೆಯಿಂದ ಮನಸ್ಸಿಗೆ ನೆಮ್ಮದಿಯಂತೂ ದೊರೆಯುತ್ತದೆ. ಈಗ, 'ಎಲ್ಲವೂ ನಿನ್ನದೇ, ನೀನೇ ಚಾಲಕ ಶಕ್ತಿ,' ಎಂದು ಮುನ್ನಡೆಯುತ್ತಿದ್ದೇನೆ.