Thursday, September 29, 2011

ಕನ್ನಡಿಯೊಳಗಿನ ಗಂಟು.....!

( ಇದು ಅಕ್ಟೋಬರ್ ೦೨, ೨೦೧೧ರ ‘ಕರ್ಮವೀರ' ಸಾಪ್ತಾಹಿಕದಲ್ಲಿ ಪ್ರಕಟವಾಗಿರುವ ಲಲಿತ ಪ್ರಬ೦ಧ. ಓದಿ ನಿಮ್ಮ ಅಮೂಲ್ಯ ಪ್ರತಿಕ್ರಿಯೆಯನ್ನು ನೀಡಿರಿ.)
`ಕನಸಿನ ನಂಟು
ಕನ್ನಡಿಯೊಳಗಿನ ಗಂಟು'
ಸಮಯಾನುಸಾರ ಅಜ್ಜಿ ಈ ನುಡಿಗಟ್ಟುಗಳನ್ನು ಬಳಸಿದಾಗ ಚಿಕ್ಕವಳಲ್ಲಿ ನಾನು ಬಹಳ ಗೊಂದಲಗೊಳ್ಳುತ್ತಿದ್ದೆ. ಪೂವಾರ್ಧ ನನ್ನನ್ನಷ್ಟು ಚಿಂತೆಗೀಡುಮಾಡುತ್ತಿರಲಿಲ್ಲ. ಹಳ್ಳಿಯಲ್ಲಿ ವಾಸವಾಗಿದ್ದ ನಮ್ಮ ಮನೆಯಲ್ಲಿ ಯಾರಾದರೂ ಅತಿಥಿ ಅಭ್ಯಾಗತರಿಲ್ಲದೆ ಊಟಮಾಡುತ್ತಿದ್ದುದರ ನೆನಪೇ ಇಲ್ಲ. ಬೇಸಿಗೆ ರಜೆ ಬಂತೆಂದರೆ ಮನೆಯ ತುಂಬಾ ಬಂಧು ಬಳಗ! ಮಕ್ಕಳ ಒಂದು ಸೈನ್ಯವೇ ನಿರ್ಮಾಣವಾಗಿ ಹಗಲೆಲ್ಲಾ ಗದ್ದೆಬಯಲುಗಳಲ್ಲಿ ಅಲೆದು, ರಾತ್ರಿಯಾಯಿತೆಂದರೆ ಲ್ಯಾಂಪಿನ ಅಥವಾ ಬುಡ್ಡಿದೀಪದ ಬೆಳಕಿನಲ್ಲಿ ಗುಡ್ಡೆಹಾಕಿಕೊಂಡು ಕುಳಿತು ಅಜ್ಜಿಯೋ, ತಾತನೋ, ಆಳು ಪುಟ್ಟಪ್ಪನೋ ಹೇಳುವ ಕಥೆಗಳನ್ನು ಕೇಳುತ್ತಾ, ಬೆಳದಿಂಗಳಿತ್ತೆಂದರೆ ಅಂಗಳದಲ್ಲಿ ಹಾಸಿದ್ದ ಚಾಪೆಯಮೇಲೆ ಉರುಳಿಕೊಂಡು ಹರಟುತ್ತಾ ಕಾಲ ಕಳೆಯುತ್ತಿದ್ದುದರ ಅರಿವೇ ನಮಗಾಗುತ್ತಿರಲಿಲ್ಲ! ವಾಸ್ತವದಲ್ಲೇ ನಂಟೆಂಬ `ಅಂಟು' ಸಹನಾತೀತವಾಗಿದ್ದುದರಿಂದ `ಕನಸಿನ ನಂಟು' ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. `ಗಂಟು' ಎನ್ನುವ ಪದ ಹಣಕ್ಕೇ ಸಂಬಂಧಿಸಿದುದೆಂಬ ಅರಿವಿದ್ದರಿಂದ- ಏಕೆಂದರೆ ನಾನು ಕೇಳುತ್ತಿದ್ದ ಕಥೆಗಳಲ್ಲೆಲ್ಲಾ ಸಾಮಾನ್ಯವಾಗಿ ಹಣದ ಗಂಟು-ಥೈಲಿಯ ಪ್ರಸ್ತಾಪವಿರುತ್ತಿದ್ದರಿಂದ ಮತ್ತು ಈ ಹಣದಿಂದ ನಾನು ಏನೇನೋ ಮಾಡಬೇಕೆಂಬ ಯೋಜನೆ ಇದ್ದುದರಿಂದ ಕನ್ನಡಿಯ ಒಳಗೆ ಹೇಗೆ ಈ ಗಂಟು ಹೋಗಿ ಸೇರಿಕೊಂಡಿತು? ಅದನ್ನು ಹೊರ ತೆಗೆಯುವ ಬಗೆ ಹೇಗೆ? ಎನ್ನುವುದೇ ನನ್ನ ಸಮಸ್ಯೆಯಾಗಿತ್ತು!
ನಾನು ವಿಜ್ಞಾನದ ವಿದ್ಯಾರ್ಥಿಯಾದ ನಂತರ ದರ್ಪಣ-ಪ್ರತಿಫಲನ ಎಂದೆಲ್ಲಾ ಓದುವಾಗ ಕನ್ನಡಿಯೊಳಗಿನ ಗಂಟು ಒಂದು ಪ್ರತಿಬಿಂಬ ಎಂದು ತಿಳಿದುಕೊಂಡೆ. ಪ್ರತಿಬಿಂಬ ಉಂಟಾಗಬೇಕಾದರೆ ಒಂದು ವಸ್ತು ಇರಲೇ ಬೇಕಲ್ಲ! `ಗಂಟು' ಹೊರಗಿದ್ದಾಗ ಮಾತ್ರ ಕನ್ನಡಿಯ ಒಳಗೂ ಅದು ಕಾಣಲು ಸಾಧ್ಯ ಎಂಬ ತರ್ಕ ಪ್ರಾರಂಭವಾಯಿತು!
`ನಂಟ'ನ್ನು ಸಾಮಾನ್ಯವಾಗಿ ಸ್ವೀಕರಿಸಿ `ಗಂಟು' ಬಗ್ಗೆ ತಲೆಕೆಡಿಸಿಕೊಳ್ಳುತ್ತಾ ಸಮಯ ವ್ಯರ್ಥಮಾಡುತ್ತಿದ್ದಾಗಲೇ ಅಜ್ಜಿಯ `ಗಂಟೂ ಪೋಯ, ನಂಟೂ ಪೋಯ' ಎನ್ನುವ ಮತ್ತೊಂದು ಆರ್ಯೋಕ್ತಿ ವಿರೋಧಾಭಾಸವನ್ನುಂಟುಮಾಡಿತು. ಈ ಪರಿಸ್ಥಿತಿ ಆಗಾಗ ನಮ್ಮ ಮನೆಯಲ್ಲಿ ಉಂಟಾಗುತ್ತಿದ್ದ ಘಟನೆಗಳಿಂದ ಮೂರ್ತರೂಪ ಪಡೆದದ್ದು ಎನ್ನುವುದು ನಂತರ ನನಗೆ ಗೋಚರಿಸುತ್ತಾ ಹೋಯಿತು. ಆದರೆ `ಗಂಟು ಪೋಯ' ಎನ್ನುವುದಷ್ಟೇ ಸತ್ಯವಾಗಿ ಬಹಳ ಉದಾರ ಮನಸ್ಕರಾದ ನಮ್ಮ ತಂದೆಯ ಸಹನಶೀಲತೆಗೆ, ಕ್ಷಮಾಗುಣಕ್ಕೆ ಪ್ರತಿಫಲವೋ ಎಂಬಂತೆ `ನಂಟೂ ಪೋಯ'ವಾಗಲು ಆಸ್ಪದವಾಗುತ್ತಿರಲಿಲ್ಲ. ಆ `ನಂಟು' ಮುಂದಿನ ಬೇಸಿಗೆ ರಜಕ್ಕೆ ಸಕುಟುಂಬ ಪರಿವಾರ `ಸಮೇತ'(!)ರಾಗಿ ನಮ್ಮ ಮನೆಯಲ್ಲಿ ಠಿಕಾಣಿ ( ತಂದೆಯ ಕ್ಷಮಾಗುಣ ಅವರ `ಕುಟುಂಬ'ಕ್ಕೆ ಸದಾಕಾಲ ಸಿದ್ಧಿಸಿಲ್ಲದಿದ್ದರಿಂದ ಅಥವಾ ಅವರನ್ನು ಪೊರೆಯುವ ಎಂದರೆ ಉದರ ಪೋಷಣೆ ಮಾಡುವ ಗುರುತರವಾದ ಜವಾಬ್ಧಾರಿ ಇದ್ದ ನಮ್ಮ ತಾಯಿಯ ಹೊಣೆಗಾರಿಕೆಯ ಸ್ಪಷ್ಟ ಅಭಿವ್ಯಕ್ತಿಯನ್ನೇ ಬಳಸುತ್ತಿದ್ದೇನೆ!) ಹೂಡುತ್ತಿದ್ದರು. ಎಲ್ಲಾ ಹೊಟ್ಟೆಗಳನ್ನೂ ತುಂಬುವಷ್ಟು ಧವಸ ಧಾನ್ಯಗಳನ್ನು ನಮ್ಮ ಜಮೀನು ಒದಗಿಸುತ್ತಿತ್ತು. ತರಕಾರಿ, ಸೊಪ್ಪು ಸೆದೆಗಳನ್ನು ನಮ್ಮ ಹಿತ್ತಿಲು ಪೂರೈಸುತ್ತಿತ್ತು. ಒಬ್ಬ ಭಕ್ತ `ದೇವರೇ ನಾನು ನಿನ್ನನ್ನು ಹೆಚ್ಚೇನನ್ನೂ ಕೇಳುವುದಿಲ್ಲ. ನನ್ನ, ನನ್ನ ಆಶ್ರಿತರ ಹೊಟ್ಟೆತುಂಬಿಸುವಷ್ಟು, ಅತಿಥಿಗಳನ್ನು ಸತ್ಕರಿಸುವಷ್ಟು ಕೊಟ್ಟರೆ ಸಾಕು.' ಎಂದು ಕೇಳುವಂತೆ ಸಾತ್ವಿಕರಾಗಿದ್ದ ನನ್ನ ತಂದೆಯ ಪ್ರಾರ್ಥನೆಯೂ ಆಗಿದ್ದಿರಬಹುದು.
ಓದಿ, ಕೆಲಸಕ್ಕೆ ಸೇರಿ ಆರ್ಥಿಕ ಸ್ವಾವಲಂಬಿಯಾಗಿ, ಗಂಡ-ಮಕ್ಕಳು-ಮನೆ ಎಂಬೆಲ್ಲಾ `ಸಕಲ'ಗಳ ನಡುವೆಯೂ ಇದ್ದಷ್ಟರಲ್ಲೇ ಸಾಕೆನ್ನುವಂತಿದ್ದ, ವೇತನಕ್ಕೆಂದೇ ಗೊತ್ತುಪಡಿಸಿದ, ತಿಂಗಳ ಕಡೆಗೆ ಬ್ಯಾಂಕ್ನವರು ನಿಗಧಿಪಡಿಸಿದ ಕನಿಷ್ಟ ಮೊತ್ತವನ್ನು ಮಾತ್ರ ಹೊಂದಿರುತ್ತಿರುವ ಎಸ್. ಬಿ. ಖಾತೆಯನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಂಕ್ ಡಿಪಾಸಿಟ್ಸ್ ಹೊಂದಿಲ್ಲದ ನಮ್ಮ ಬೋಳೆ ಸ್ವಭಾವ ತಿಳಿದಿದ್ದ ನನ್ನ ಆಪ್ತ ಬ೦ಧುವೊಬ್ಬರು ತಾವು ಲಾಭದಾಯಕ ಎಂದು ಕಂಡುಕೊಂಡ `ಹಣದ್ವಿಗುಣ'ಗೊಳಿಸುವ ಒಂದು ಸ್ಕೀಮಿಗೆ ನನ್ನನ್ನು ಪರಿಚಯಿಸಿ ನಾನೂ ಅದರಲ್ಲಿ ಹಣವನ್ನು ತೊಡಗಿಸಲು ಒತ್ತಾಯಿಸಿದರು. ತಾವೇ ಮುಂದೆ ನಿಂತು ಶೂರಿಟಿಯನ್ನೂ ಕೊಟ್ಟು ಬ್ಯಾಂಕ್ ಒಂದರಲ್ಲಿ ಸಾಲವನ್ನು ಮಾಡಿಸಿ ಆ ಸ್ಕೀಮಿಗೆ ಹಣವನ್ನು ಕಟ್ಟಿಸಿ ನನ್ನನ್ನು ಆರ್ಥಿಕೋದ್ಧಾರಗೊಳಿಸಿದ ಕೃತಾರ್ಥ ಭಾವದಲ್ಲಿ ಅವರು ಇರುವಾಗಲೇ ಅವರ ಜೊತೆಗೆ ನನ್ನ... (ಕ್ಷಮಿಸಿ, ಹೊಸದಾಗಿ ಸೇರ್ಪಡೆಯಾದ ನನ್ನ ಕಾಲ್ಗುಣ ಅಲ್ಲ ಕೈಗುಣವಾದ್ದರಿಂದ ನನ್ನ ಜೊತೆಗೆ ಅವರ) `ಗಂಟೂ' ಮುಳುಗಿ ನಿಜಕ್ಕೂ `ಗಂಟೂ ಪೋಯ' ಆಗೇ ಹೋಯ್ತು! ಈಗ ಅಪ್ಪಿ ತಪ್ಪಿಯೂ ಯಾರೂ ನನ್ನೆದುರು ಹಣಕಾಸಿನ ಪ್ರಸ್ತಾಪವನ್ನು ಎತ್ತುವುದೇ ತಪ್ಪೆನ್ನುವಂತೆ ವರ್ತಿಸುತ್ತಾ ನನ್ನನ್ನು ವಿತ್ತಾಸ್ಪರ್ಶಳನ್ನಾಗಿಸಿದ್ದಾರೆ!
'ಗಂಟು' ಎನ್ನುವ ಬಗ್ಗೆ ಮೊದಲಿನಿಂದಲೂ ನನ್ನಲ್ಲಿ ಇದ್ದ ಜಿಜ್ಞಾಸೆಯ ಫಲವೋ, ಬಾಹ್ಯವಾಗಿ ಆರ್ಥಿಕವಾಗಿ `ಗಂಟು'ಮಾಡಲಾಗದ (ಅ!)ಸಾಮರ್ಥ್ಯವೋ ಏನೋ ಕ್ರಮೇಣ ನನ್ನೊಳಗೇ `ಗಂಟು'ಗಳು ಬೆಳೆಯಲಾರಂಭಿಸಿಬಿಟ್ಟವು! ಕತ್ತಿನಸುತ್ತ ಬೆಳೆಯಲಾರಂಭಿಸಿದ ಗಂಟುಗಳನ್ನು ಸಾಮಾನ್ಯ ಔಷಧಿಗಳಿಂದ ಜಗ್ಗಿಸಲಾಗದೇ (ಜಗ್ಗದ, ಕುಗ್ಗದ, ಕರಗದ....)ವಿಶೇಷ ತಜ್ಞರಿಗೆ ತೋರಿಸಿದಾಗ ಕ್ಷ-ಕಿರಣ, ರಕ್ತಪರೀಕ್ಷೆ, ಸ್ಕ್ಯಾನಿಂಗ್,... ಇತ್ಯಾದಿ ಎಲ್ಲರೀತಿಯ ಪ್ರಯೋಗಗಳನ್ನೂ ಮಾಡಿ ಬೆಟ್ಟ ಅಗೆದು ಇಲಿ ಹಿಡಿದಂತೆ `ಲಿಂಫ್ ನೋಡ್ಸ್' ಎನ್ನುವ ತೀರ್ಮಾನಕ್ಕೆ ಬಂದು ಔಷದೋಪಚಾರ ಪ್ರಾರಂಭವಾಯ್ತು. `ಮಂಗಳಾರತಿ ತೆಗೆದುಕೊಂಡರೆ ಉಷ್ಣ, ತೀರ್ಥ ತೆಗೆದುಕೊಂಡರೆ ಶೀತ' ಎನ್ನುವ ಪ್ರಕೃತಿಯವಳಾದ್ದರಿಂದ `ಅಲರ್ಜಿ' ಭೂತದ ಹಾವಳಿಯುಂಟಾಗಿ ಒಂದಕ್ಕೆ ಒಂದು ಫ್ರೀ ಎನ್ನುವಂತೆ ಉಪ ಕಿರಿಕಿರಿಗಳಿಂದ ತಪ್ಪಿಸಿಕೊಳ್ಳಲು ಮತ್ತು ವರ್ಷಾನುಗಟ್ಟಲೆ ತೆಗೆದುಕೊಂಡ ಔಷಧಿಗಳ ಸಕಾರಾತ್ಮಕ ಪರಿಣಾಮಗಳೂ ಕಾಣದಂತಾಗಿ ಆಲೋಪತಿಗೆ ತಾತ್ಕಾಲಿಕ ವಿದಾಯ ಹೇಳಿ ಆಯುರ್ವೇದಿಕ್ ಮೊರೆಹೋದದ್ದಾಯ್ತು. ಲೇಹ್ಯ, ಚೂರ್ಣ, ಕಷಾಯ, ಗುಳಿಗೆ, ತೈಲಾದಿಗಳದೇ ಲೇಪ, ಧೂಪಗಳಿಂದ ಕತ್ತನ್ನು ಉಪಚರಿಸುವ ಸಡಗರದಲ್ಲಿ ಗಂಟೋತ್ಪಾಟನಾ ಕಾರ್ಯದಲ್ಲಿ ತೊಡಗಿದ್ದಾಗ `ಎಲ್ಲಿ ಗಂಟು ಬಿದ್ದಳೋ ಇವಳು' ಎಂದು ಗೊಣಗಿಕೊಳ್ಳುವಂತೆ (ಬ್ರಹ್ಮಗಂಟು!) ಪತಿಯ ಅವಕೃಪೆಗೊಳಗಾಗುವ ಕುತ್ತುಂಟಾಯಿತು. ಆದರೂ ಛಲಬಿಡದೇ ನಿಯಮಿತವಾಗಿ ವರ್ಷಗಟ್ಟಳೇ ವೈದ್ಯರ ಸಲಹೆಯಂತೆ ಮದ್ದುಗಳನ್ನು ಸೇವಿಸುತ್ತಾ `ಅನುವಂಶೀಯ' ಗುಣವೇ ಇರಬಹುದಾದ ವೈದ್ಯ ಸ್ನೇಹಕ್ಕೆ ಭಾಜನಳಾದೆ! ನಾವಿದ್ದ ಹಳ್ಳಿಗೆ ಯಾರೇ ವೈದ್ಯರು ಬಂದರೂ ನಮ್ಮ ತಂದೆ ಅವರ ಸ್ನೇಹ ಸಂಪಾದಿಸಿ ಅವರು ಅನೇಕ ವಿಷಯದಲ್ಲಿ ನಮ್ಮ ತಂದೆಯ ಸಲಹೆ ಪಡೆಯುವಷ್ಟು ಸಲಿಗೆಯುಂಟಾಗುತ್ತಿತ್ತು. ಹೊಸ ವೈದ್ಯನಿಗಿಂತ ಹಳೆಯ ರೋಗಿಯೇ ವಾಸಿ ಎನ್ನುವಂತೆ ನನ್ನ ಸ್ಥಾನ ಮಾನವೂ ದಿನೇ ದಿನೇ ಏರಲಾರಂಭಿಸಿದ್ದಕ್ಕೆ ನಾನು ನನ್ನ `ಗಂಟು'ಗಳಿಗೆ ವಂದನೆಗಳನ್ನು ಸಲ್ಲಿಸಲೇ ಬೇಕು! ಇದೇ ಧನ್ಯತಾ ಭಾವದಲ್ಲಿ ನಾನಿದ್ದಾಗ ಉಪಚಾರ ಹೆಚ್ಚಾದಾಗ ಕೆಲಸವಿಲ್ಲದ ಅಳಿಯ ಮಾವನ ಮನೆಯಲ್ಲಿಯೇ ಟೆಂಟ್ ಹಾಕುವಂತೆ ಕತ್ತನ್ನು ಸುತ್ತುವರಿದಿದ್ದ ಗಂಟುಗಳು ಕಿರಿದಾದ ಮರಿಗಳೊಡಗೂಡಿ ವಿಹರಿಸಲಾರಂಭಿಸಿದವು! ಹೇಗೋ ಒಬ್ಬ ಪರ್ಮನೆಂಟ್ ಗಿರಾಕಿ ಸಿಕ್ಕಿತೆಂದು ಹಾಯಾಗೇ ಇದ್ದ ವೈದ್ಯರೂ ಹೌಹಾರಿ ಮತ್ತೊಮ್ಮೆ ಎಲ್ಲಾ ರೀತಿಯ ಪರೀಕ್ಷೆಗಳನ್ನೂ ಮಾಡಿಸಬೇಕೆಂದು ಸಲಹೆ ನೀಡಿದರು. ಹಣವನ್ನು ನೀರಿನಂತೆ_ ಕ್ಷಮಿಸಿ ವಾರಕ್ಕೆ ಒಮ್ಮೆಯೋ, ಎರಡು ಭಾರಿಯೋ ನೀರು ಬರುವುದರಿಂದ ನೀರುಹಿಡಿಯುವುದರಲ್ಲಿ (ಬಿಂದು ಬಿಂದು ಸೇರಿ ಸಿಂಧು!) ಕಣ್ಣೀರೂ ಬಂದಿರುತ್ತದೆ!_ಖರ್ಚುಮಾಡಿದ್ದಾಯಿತೇ ವಿನಾ ಪ್ರಯೋಜನವೇನೂ ಆಗಲಿಲ್ಲ. ಮತ್ತೊಮ್ಮೆ ಮೊದಲಿನ ಎಲ್ಲಾ ಪರೀಕ್ಷೆಗಳೊಡನೆ ಸಿಟಿಸ್ಕಾನ್ ನ೦ಥಾ ನವನವೀನ ಪರೀಕ್ಷೆಗಳಿಗೆ ದೇಹವನ್ನು ಒಡ್ಡಿ ಹೊಸ ಅನುಭವಗಳನ್ನು ಪಡೆದುಕೊಂಡಿದ್ದಾಯ್ತು! ವೈದ್ಯರು ತೋರಿಸುತ್ತಿದ್ದ ಅನುಮಾನ, ಆತಂಕಗಳಿಂದ ಭಯಗೊಂಡ ಕುಟುಂಬವರ್ಗದವರು ಹಾಗೂ ಬಂಧುಬಾಂಧವರು ನನ್ನ ಬಗ್ಗೆ ತೋರಿಸುತ್ತಿದ್ದ ವಿಶೇಷ ಪ್ರೀತಿ, ಪ್ರಾಮುಖ್ಯತೆಗಳಿಂದ ನಾನೊಬ್ಬ ವಿ.ವಿ.ಐ.ಪಿ.ಯಾಗುವ ಅವಕಾಶ ಕೂಡಿ ಬಂದು ನನ್ನ ಈ ಗಂಟುಗಳಿಗೆ ಚಿರಋಣಿಯಾಗಿರುವ ಸಂದರ್ಭವೊದಗಿ ಬಂದಿದೆಯೆನಿಸಿತು! ಈ ಆಂತರಿಕ ಗಂಟುಗಳೊಡನೆಯೇ ರಾಜಿ ಮಾಡಿಕೊಂಡು ಜೀವನ ನಡೆಸಬೇಕೇನೋ ಎಂದುಕೊಳ್ಳುವಷ್ಟರಲ್ಲಿ ಮತ್ತೊಂದು ಸರಣಿ ಆಲೋಪತಿಕ್ ಔಷದೋಪಚಾರ ಪ್ರಾರಂಭವಾಯ್ತು! ಈಗಂತೂ ದಿನನಿತ್ಯದ ಆಹಾರ (ನನ್ನಂತೆಯೇ ಸಪ್ಪೆ!) ಸೇವನೆಯೊಂದಿಗೇ `ಗುಳಿಗಾ ಸ್ವಾಹಾ'ವನ್ನೂ ಅತ್ಯಂತ ಸಹಜವಾಗೇ ಸ್ವೀಕರಿಸಿ `ಗಂಟು'ಸೇವೆಯನ್ನು ಮುಂದುವರಿಸಲಾರಂಭಿಸಿದೆ! ತಮ್ಮದೇ ಅನೇಕ ಗೌರವಾನ್ವಿತ ಅನಾರೋಗ್ಯ ಸಮಸ್ಯೆಗಳ ರಾಜಯೋಗದಲ್ಲಿದ್ದು, ದಿನಕ್ಕೆ ಕಮ್ಮಿಯೆಂದರೂ ೨೦-೨೫ ಮಾತ್ರೆಗಳನ್ನು ಸೇವಿಸುತ್ತಿದ್ದ `ಇವರ' ಎದುರು ನಾನಂತೂ ‘ಯಃಕಚಿತ್' ಆಗೇ ಉಳಿಯಬೇಕಾಯಿತು!
ವಾಹನಗಳ ಬಳಕೆ ಕಡಿಮೆ ಇದ್ದ ಕಾಲದಲ್ಲಿ ಅಗಸರು ಒಗೆಯಬೇಕಾದ ಬಟ್ಟೆಗಳನ್ನು ಗಂಟುಕಟ್ಟಿ ಕತ್ತೆಯ ಮೇಲೆ ಹೇರಿಕೊಂಡು ಹೋಗುತ್ತಿದ್ದರು. ಈಗಲೂ ಕೆಲವು ಕಡೆ ಈ ದೃಶ್ಯವನ್ನು ಕಾಣಬಹುದು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ `ನೀ ನನಗಿದ್ದರೆ ನಾ ನಿನಗೆ' ಎಂಬ ಪದ್ಯ ಓದಿದ್ದು, ಅದರಲ್ಲಿ ಕೊಟ್ಟಿದ್ದ ಚಿತ್ರ, ‘ಕತ್ತೆ ಬೆನ್ನ ಮೇಲಿನ ಹೊರೆಯ ಭಾರ ತಾಳಲಾರದೇ ಗೋಳಾಡುತ್ತಿರುವುದು, ಕುದುರೆ ತನಗೇನೂ ಸಂಬಂದಿಸಿಲ್ಲವೆನ್ನುವಂತೆ ನಿಂತಿರುವುದು,' ಇನ್ನೂ ಮನಃಪಟಲದಲ್ಲಿ ನಿಶ್ಚಳವಾಗಿದೆ! ಅಜ್ಞಾತ ವಾಸ ಪ್ರಾರಂಭವಾದಾಗ ಪಾಂಡವರು ತಮ್ಮ ಆಯುಧಗಳನ್ನೆಲ್ಲಾ ಗಂಟುಕಟ್ಟಿ ಬನ್ನಿಮರದ ಮೇಲೆ ಇಟ್ಟಿದ್ದರು ಎನ್ನುವುದನ್ನು ನೆನಪು ಮಾಡುತ್ತಾ ವಿಜಯದಶಮಿಯ ದಿನ ಬನ್ನಿ ಮುಡಿಯುವುದನ್ನು ಸಂಪ್ರದಾಯವಾಗಿಸಿದ್ದಾರೆ.
ನಾನು ಚಿಕ್ಕವಳಿದ್ದಾಗ (ಈಗಲೂ ಚಿಕ್ಕವಳೆಂದೇ ಭಾವಿಸಿದ್ದೇನೆ! ನೋಡಿದವರು ಸಹಿಸಿಕೊಳ್ಳಬೇಕು ಅಷ್ಟೆ! ನಿನ್ನೆ ಇವತ್ತಿಗಿಂತ ಚಿಕ್ಕವಳಿದ್ದೆ-ನಾಳೆಗಿ೦ತಾ ಇವತ್ತು ಚಿಕ್ಕವಳಾಗಿದ್ದೇನೆ! ಆದ್ದರಿಂದ ಕೆಲವು ವರ್ಷಗಳ ಹಿಂದೆ...) `ರಾಮದಾಸರು ಗಂಟು ಬಿಚ್ಚಿದರು' ಎನ್ನುವ ಒಂದು ಲೇಖನವನ್ನು ಓದಿದ್ದೆ. ಒಮ್ಮೆ ಸಮರ್ಥ ರಾಮದಾಸರು ರೈಲಿನಲ್ಲಿ ಪ್ರಯಾಣಮಾಡುವಾಗ ಚೆಕಿಂಗಿನವರು ಅನುಮಾನದಿಂದ ಗಂಟಿನಲ್ಲಿ ಏನಿದೆಯೋ ಎಂದು ಬಿಚ್ಚಿಸಿದಾಗ ಅದರೊಳಗಿದ್ದ ಆಧ್ಯಾತ್ಮಿಕ ಸಂಪತ್ತನ್ನು ನೋಡಿ ಆಶ್ಚರ್ಯಚಕಿತರಾದರೆಂಬ ನೆನಪು. ರಾಹುಲ ಸಾಂಕೃತ್ಯಾಯನ ಎಂಬ ಮಹಾಜ್ಞಾನಿ ಅನೇಕ ಭಾರಿ ಟಿಬೆಟ್ ಯಾತ್ರೆ ಮಾಡಿ ನಮ್ಮ ಭರತಖಂಡದಿಂದ ಟಿಬೆಟ್ಗೆ ಕೊಂಡೊಯ್ದಿದ್ದ ಅಮೂಲ್ಯ ಬೌದ್ಧಗ್ರಂಥಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿ ಗಂಟುಕಟ್ಟಿಕೊಂಡು ತಂದು ನಮ್ಮ ಜ್ಞಾನ ಸಂಪತ್ತನ್ನು ಸಂರಕ್ಷಿಸಿದರು. 'ಹೆಗಲಿಗೆ ಗಂಟುಮೂಟೆಗಳನ್ನು ಏರಿಸಿಕೊಂಡು ಜಗದಗಲ ಸುತ್ತಾಡಿದರೆ ಏನು ಫಲ? ಜಗತ್ತನ್ನು ತಲ್ಲೀನತೆಯಿಂದ ವೀಕ್ಷಿಸುವವರಿಗೆ ಮಾತ್ರವೇ ಆ ಜಗತ್ತು ಸೇರಿರುತ್ತದೆ....'ವಿಶ್ವಾದ್ಯಂತ ಅನೇಕ ಭಾರಿ ಸಂಚರಿಸಿ, ಕಳೆದ ಸುಮಾರು ೨೫ವರ್ಷಗಳಿಂದ ಬಿಳಿಗಿರಿರಂಗನ ಬೆಟ್ಟದ ಪ್ರಶಾಂತ ತಾಣದಲ್ಲಿ ಏಕಾಂತವಾಸಿಗಳಾಗಿರುವ ಸ್ವಾಮಿ ನಿರ್ಮಲಾನಂದರ ಬಗ್ಗೆ ಓದುವಾಗ ಗಮನ ಸೆಳೆದ ವಾಕ್ಯಗಳಿವು. ಬಾಳಬಟ್ಟೆಯಲ್ಲಿ ವ್ಯಕ್ತ, ಅವ್ಯಕ್ತ ಗಂಟುಮೂಟೆಗಳನ್ನು ಹೊತ್ತು ಸಾಗುವ ನಾವು ಅವುಗಳೊಂದಿಗೇ ನಮ್ಮನ್ನು ನಾವು ತಾದ್ಯಾತ್ಮಗೊಳಿಸಿಕೊಂಡು ಬಿಟ್ಟಿರುತ್ತೇವೆ. ನಾವು ಬಿಡುತ್ತೇವೆಂದರೂ ನಮ್ಮನ್ನು ಬಿಡದ ಈ ಗಂಟು ಮೂಟೆಗಳು `ತಲೆನೋವು ಬಂದಾಗ ತಲೆ ಇದೆ' ಎಂದು ಸಾಬೀತಾಗುವಂತೆ ತಮ್ಮ ಇರವಿನಿಂದ ನಮ್ಮ ಬದುಕಿಗೊಂದು ಅರ್ಥ ಎನ್ನುವಂತೆ ನಮ್ಮನ್ನೇ ಆಳಲಾರಂಭಿಸಿಬಿಡುತ್ತವೆ. ಅವುಗಳ ತೂಕ ಸಹನೀಯವೆನಿಸುವಂತೆ ನಮ್ಮನ್ನು ನಾವು ರೂಪಿಸಿಕೊಳ್ಳೋಣ, ನಮ್ಮಲ್ಲಿರುವ ಋಣಾತ್ಮಕ ಅಂಶಗಳನ್ನು, ಬದುಕ ಕಗ್ಗಂಟುಗಳನ್ನು ಮೂಟೆಕಟ್ಟಿ ದೂರಬಿಸುಟು ಧನಾತ್ಮಕಗಳನ್ನು ನಮ್ಮದಾಗಿಸಿಕೊಂಡು ಮೂಟೆಯ ಭಾರವನ್ನು ಹಗುರಗೊಳಿಸಿಕೊಳ್ಳೋಣ. ನಗುತ, ನಗಿಸುತ ಬದುಕುವ ಕಲೆಯನ್ನು ಕಲಿಯೋಣ...ಎಂದುಕೊಳ್ಳುತ್ತಾ ಗಂಟು ಮೋರೆಯೊಂದಿಗೆ ನನ್ನನ್ನೇ ನಾನು ಸಂತೈಸಿಕೊಳ್ಳುವಂತಾಗಿಬಿಟ್ಟಿದೆ! `ಗಂಟು'ಗಳು ಉಂಟು ಮಾಡಿರುವ ನನ್ನ ಈ ಪರಿಸ್ಥಿತಿ!
ಹಿಂದೊಮ್ಮೆ ಅಜ್ಜಿಯು ಹೇಳುತ್ತಿದ್ದ `ಕನ್ನಡಿಯೊಳಗಿನ ಗಂಟು' ನನ್ನ ಎಳೆಮನದಲ್ಲಿ `ಆ ಗಂಟನ್ನು ಹೊರತೆಗೆಯುವುದು ಹೇಗೆ?' ಎನ್ನುವ ಪ್ರಶ್ನೆಯನ್ನು ಉಂಟುಮಾಡಿತ್ತು. ಈಗಿನ ಎಲ್ಲಾ ಗೋಜಲುಗಳು `ಈ ಗಂಟನ್ನು ಪುನಃ ಕನ್ನಡಿಯ ಒಳಗೇ ಸೇರಿಸುವುದು ಹೇಗೆ?' ಎಂದು ನನ್ನನ್ನೇ ಪ್ರಶ್ನಿಸುತ್ತಿವೆ! ಬಿಡಿಸಲಾಗದ, ಬಯಲಾಗದ, ಕರಗದ, ಕುಗ್ಗದ...ಯಾವುದೇ ಗಂಟುಗಳಿದ್ದರೂ ಅವು ಕನ್ನಡಿಯೊಳಗೇ ಪ್ರವೇಶಿಸಿ `ಕನ್ನಡಿಯೊಳಗಿನ ಗಂಟು'ಆಗೇ ಉಳಿದುಬಿಡಲಿ. ಅದರ ಸಹವಾಸವೇ ಬೇಡ. ಎಂದರೆ `ಪಲಾಯನವಾದ'ವೆನ್ನುತ್ತೀರಾ?

Sunday, September 25, 2011

ಮನದ ಅಂಗಳದಿ.........೫೯. ಖಾಲಿ ಹಾಳೆ

ಸಾಮಾನ್ಯವಾಗಿ ಮಕ್ಕಳ ಮನಸ್ಸನ್ನು ‘ಖಾಲಿ ಹಾಳೆ'ಗೆ ಹೋಲಿಸುತ್ತಾರೆ. ಬಹುಷಃ ಮಕ್ಕಳ ಮನಸ್ಸು ನಿಷ್ಕಲ್ಮಶವಾಗಿದ್ದು, ಏನನ್ನಾದರೂ ಕಲಿಯಲು ಸಮರ್ಥರಾಗಿರುತ್ತಾರೆ ಎಂಬ ಕಾರಣಕ್ಕಾಗಿ ಹಾಗೆ ಹೇಳಿರಲೂಬಹುದು. ‘ಖಾಲಿ'ಯಾಗಿರುವುದು ಎಂದರೆ ಮುಂದೆ ಭರ್ತಿಯಾಗಲು ಸಿದ್ಧವಾಗಿರುವುದು ಎಂದು ತಿಳಿಯಬಹುದೇನೋ! ಖಾಲಿಯಾಗಿರುವುದು ಖಾಲಿಯಾಗೇ ಉಳಿದುಬಿಟ್ಟರೆ ನಿಷ್ಪ್ರಯೋಜಕವೆನಿಸಿಬಿಡಲೂಬಹುದು ಎನ್ನುವ ಆಶಯದ ಒಂದು ‘ಹನಿ' ಹೀಗಿದೆ:
‘ಬರೆಯಲೆಂದೇ ಭದ್ರಪಡಿಸಿದ್ದೆ
ಈ ಬಿಳಿಹಾಳೆಯ
ಸಮಯ ಸಿಕ್ಕಾಗ,
ಆದರೀಗ ಸುಕ್ಕು
ನಿಷ್ಪ್ರಯೋಜಕ
ಕಾಲ ಕೂಡಿಬಂದಾಗ!'
ಆದರೆ ಖಾಲಿಯು ಭರ್ತಿಯಾಗುವಾಗ ಯಾವುದರಿಂದ ಆಗಬೇಕು? ಎನ್ನುವುದೂ ಮುಖ್ಯವಾಗುತ್ತದೆ. ಕೇವಲ ಭರ್ತಿಗೊಳಿಸಲೆಂದು ಮನಸ್ಸಿಗೆ ಬಂದದ್ದನ್ನೆಲ್ಲಾ ಗೀಜಿದರೆ ಆಗುತ್ತದೆಯೆ? ಎಂದು ನಾವು ಅಂದುಕೊಳ್ಳಬಹುದು. ಈ ನಿಟ್ಟಿನಲ್ಲಿ ಚಿಂತಿಸುವಂತೆ ಮಾಡುವ ಸುಷ್ಮಸಿಂಧು ಅವರ ವಿಶಿಷ್ಟ ಕನಸಿನ ಒಂದು ತುಣುಕು ಈ ರೀತಿ ಇದೆ:
'ಆತ ಉನ್ನತ ಧೇಯೋದ್ದೇಶ ಹೊಂದಿರುವವನು ತಾನು ಎಂದು ಭಾವಿಸಿದ್ದ ವ್ಯಕ್ತಿ. ಆದರೆ ಅವನಿಗೆ ದೊರಕಿದ್ದು ಒಂದು 'ಪುಸ್ತಕ' ಮತ್ತು 'ಲೇಖನಿ'. ಅವನಿಗೆ ಅದರಲ್ಲಿ ಏನನ್ನೂ ಬರೆಯುವ ಅವಕಾಶವಿತ್ತು. ನಿಯಮವೆಂದರೆ 'ದಿನವೂ ಒಂದು ಪುಟ ತೆರೆಯುವುದು, ಅಲ್ಲಿ ಬರೆದ ನಂತರ ಮುಂದಿನಪುಟ. ಆತನೇನಾದರೂ ಅಂದು ಏನೂ ಬರೆಯದೇ ಇದ್ದರೂ ಮರುದಿನ ನಂತರದ ಪುಟ ತೆರೆದುಕೊಂಡುಬಿಡುವುದು. ಮತ್ತೆ ಹಿಂದೆ ಹೋಗುವುದು ಅಸಾದ್ಯ!' ಆತ ಪುಸ್ತಕ ಸಿಕ್ಕಿದ ತತ್ತಕ್ಷಣವೇ ಚಿಂತಿಸಲಾರಂಭಿಸಿದ. ಎಷ್ಟಾದರೂ ತನ್ನ ಪ್ರಕಾರ ಆತ ಮಹಾನ್ ವ್ಯಕ್ತಿ! ಏನೇನೋ ಬರೆಯುವುದು ಸಾಧ್ಯವಿಲ್ಲ. ಹಾಗಾಗಿ ಚಿಂತನೆ ಜಾರಿಯಲ್ಲಿತ್ತು! ಅಂದು ಪುಸ್ತಕದ ಕಡೆಯ 'ಪುಟ', ಅವನ 'ಮಸ್ತಕ'ದ ಪದಗಳಿಗಾಗಿ ಕಾದು ಕುಳಿತಿತ್ತು. ಏನೋ ಹೊಳೆದಂತಾಗಿ ಕಡೆಯ ಕ್ಷಣದ ತದನಂತರದ ಗಳಿಗೆಯಲ್ಲಿ ಲೇಖನಿಯನ್ನು ಪುಟದ ಮೇಲಿರಿಸಿದ. ಅದು ಇದ್ದಕ್ಕಿದ್ದಂತೆ ಮಾಯವಾಗಿ ಅಲ್ಲೊಬ್ಬ ಮನುಷ್ಯ ನಿಂತು ಹೀಗೆಂದ, 'ಎಷ್ಟೋ ಮಹತ್ಕಾರ್ಯಗಳು ಮಹಾನ್ ತಪ್ಪುಗಳ ನಂತರ ಘಟಿಸುತ್ತವೆ. ಸಣ್ಣ ತಪ್ಪುಗಳ ದೊಡ್ಡತನವನ್ನು, ಮಹತ್ವವನ್ನು ಅರಿತವನು ಮಾತ್ರ ಮಹತ್ಕಾರ್ಯಗಳನ್ನು ಸಾಧಿಸಲು ಸಾದ್ಯ..' ಅವನೊಡನೆ ಲೇಖನಿಯೂ ಕಣ್ಮರೆಯಾಯಿತು!' ಈ ಕಥೆಯೂ ಮುಗಿದಿತ್ತು.
ಜೀವನದ ಮಹತ್ವದ ಮೌಲ್ಯಗಳೇ ಸುಧೀರ್ಘ ಕಥಾರೂಪವಾದಂತಿರುವ ವಿಶಿಷ್ಟ ಕನಸುಗಳ ಕಥಾ ಸಂಕಲನ ‘ಪಯಣ ಸಾಗಿದಂತೆ........'ಯನ್ನು ತನ್ನ ಹದಿವಯಸ್ಸಿನಲ್ಲೇ ಪ್ರಕಟಿಸಿರುವ ಸುಷ್ಮಸಿಂಧು ಅವರ ಈ ಕನಸು ಚಿಂತನಯೋಗ್ಯವಾಗಿದೆ. ಏನೋ ಮಹತ್ತರವಾದದ್ದನ್ನೇ ಸಾಧಿಸಬೇಕು ಎಂದು ಅಪೇಕ್ಷಿಸುವ ನಾವು ನಮ್ಮ ಎಷ್ಟೋ ಅಮೂಲ್ಯ ಆಯುಷ್ಯವನ್ನು ಏನನ್ನೂ ಮಾಡದೆಯೇ ಕಳೆದೂಬಿಡಬಹುದು.
ಪರಿಶುದ್ಧರಾಗೇ ಇರಬೇಕೆಂದು ಹಂಬಲಿಸುವರಿಗೆ ಕಡೆಗೆ ‘ಖಾಲಿ'ಯಾಗಿಯೇ ಉಳಿಯುವುದು ಹೇಗೆ ಅನಿವಾರ್ಯವಾಗುತ್ತದೆ ಎನ್ನುವುದನ್ನು ಖಲೀಲ್ ಗಿಬ್ರಾನ್ ರ ‘ಮಂಜು ಬಿಳಿಯ ಹಾಳೆಯೊಂದು ಹೀಗೆ ಹೇಳಿತು........'(Said a Sheet of Snow-white Paper.......) ಎನ್ನುವ ಕಥೆಯು ಮಾರ್ಮಿಕವಾಗಿ ತಿಳಿಸುತ್ತದೆ. ಮಹಾನ್ ದಾರ್ಶನಿಕ, ಕವಿ ಖಲೀಲ್ ಗಿಬ್ರಾನ್ ೧೯೨೦ರಲ್ಲಿ ಪ್ರಕಟಿಸಿದ ‘ಅಗ್ರಗಾಮೀ' ಅಥವಾ ‘ಮುಂದೆ ನಡೆಯುವವನು' (The Forerunner- His Parables and Poems) ಎಂಬ ಅರವತ್ನಾಲ್ಕೇ ಪುಟಗಳ ಪುಟ್ಟ ಪುಸ್ತಕದಲ್ಲಿ ಅತ್ಯಂತ ಕಿರಿದಾದದ್ದೂ, ಕಾವ್ಯಮಯವಾದದ್ದೂ ಆದ ಈ ಕಥೆ ಹೀಗಿದೆ:
‘ಮಂಜು ಬಿಳಿಯ ಹಾಳೆಯೊಂದು ಹೀಗೆ ಹೇಳಿತು: ‘ಶುದ್ಧವಾಗಿ ನಾನು ಸೃಷ್ಟಿಯಾದೆ. ಎಂದೆಂದೂ ನಾನು ಶುದ್ಧವಾಗೇ ಇರುತ್ತೇನೆ. ಕತ್ತಲು ನನ್ನನ್ನು ಮುಟ್ಟುವುದಾಗಲೀ, ಅಶುದ್ಧವಾದದ್ದು ನನ್ನನ್ನು ಸಮೀಪಿಸುವುದನ್ನಾಗಲೀ ಅನುಭವಿಸುವುದಕ್ಕಿಂತಾ ಸುಟ್ಟು ಬಿಳಿಯ ಬೂದಿಯಾದೇನು!'
ಕಾಗದ ಹೇಳುತ್ತಿದ್ದುದನ್ನು ಮಸಿಕುಡಿಕೆ ಕೇಳಿತು. ತನ್ನ ಕಪ್ಪು ಹೃದಯದಲ್ಲಿ ಅದು ನಕ್ಕಿತು. ಆದರೆ ಅದಕ್ಕೆ ಕಾಗದವನ್ನು ಸಮೀಪಿಸುವ ಧೈರ್ಯ ಬರಲಿಲ್ಲ. ಬಹು ಬಣ್ಣದ ಪೆನ್ಸಿಲ್ಲುಗಳೂ ಅದರ ಮಾತನ್ನು ಕೇಳಿದವು. ಆದರೆ ಹತ್ತಿರ ಹೋಗಲೇ ಇಲ್ಲ.
ಆ ಮಂಜು ಬಿಳಿಯ ಹಾಳೆ ಎಂದೆಂದೂ, ಉಳಿದೇ ಉಳಿಯಿತು, ಶುದ್ಧವಾಗಿ, ಶುಚಿಯಾಗಿ-ಆದರೆ ಖಾಲಿಯಾಗಿ!'
ತಮ್ಮ ‘ಖಲೀಲ್ ಗಿಬ್ರಾನ್' ಪುಸ್ತಕವನ್ನು ಪ್ರಕಟಿಸುವಾಗ ಮೊದಲ ಮಾತಿನಲ್ಲಿ ಪ್ರಭುಶಂಕರ ಅವರು ಹೀಗೆ ಹೇಳುತ್ತಾರೆ: ‘ನಾನು ಗಿಬ್ರಾನ್ನನ್ನು ಮೆಚ್ಚಿದ್ದೇನೆ ಎಂಬ ಕಾರಣದಿಂದ ಮಾತ್ರ ಅವನನ್ನು ನಾನು ಕನ್ನಡಿಗರಿಗೆ ಪರಿಚಯ ಮಾಡಿಕೊಡುತ್ತಿಲ್ಲ. ಜಗತ್ತಿನಲ್ಲಿ ಎಷ್ಟೊಂದು ವೈವಿಧ್ಯಮಯವಾದ ಚಿಂತನೆಯ ರೀತಿಗಳುಂಟು, ಗದ್ಯದ ಶೈಲಿಗಳುಂಟು ಎಂಬುದನ್ನು ನಮ್ಮ ಕನ್ನಡ ಜನ ತಿಳಿಯಬೇಕು ಎಂಬುದು ನನ್ನ ಆಶೆ....'
‘ತುಂಬಿದ ಬಟ್ಟಲು' ಎಂಬ ಅತ್ಯಂತ ಪ್ರಚಲಿತದಲ್ಲಿರುವ ಝೆನ್ ಕಥೆಯಲ್ಲಿ ಈ ರೀತಿ ಇದೆ: ‘ನಾನ್ಇನ್ ಎನ್ನುವ ಒಬ್ಬ ಜಪಾನೀ ಝೆನ್ ಗುರು ಇದ್ದರು. ಇವರಲ್ಲಿ ಆಧ್ಯಾತ್ಮಿಕ ಮಾರ್ಗದರ್ಶನವನ್ನು ಪಡೆಯಲೆಂದು ದೂರದೂರದ ಊರುಗಳಿಂದ ವಿದ್ವಾಂಸರು ಬರುತ್ತಿದ್ದರು. ಒಮ್ಮೆ ಒಬ್ಬ ಪ್ರಾಧ್ಯಾಪಕರಾಗಿ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕೊಡುವವರಾಗಿದ್ದ ವಿದ್ವಾಂಸರು ಇವರ ಬಳಿ ಬಂದು ಝೆನ್ ಕುರಿತು ಶಿಕ್ಷಣವನ್ನು ನೀಡುವಂತೆ ವಿನಂತಿಸಿಕೊಂಡರು. ಗುರುಗಳು ಮುಗುಳ್ನಗುತ್ತಾ ಅವರಿಗೆ ಚಹಾ ಕುಡಿಯುವಂತೆ ಹೇಳಿ, ಚಹಾ ತಂದರು. ವಿದ್ವಾಂಸರ ಮುಂದೆ ಚಹಾ ಬಟ್ಟಲನ್ನು ಇಟ್ಟು, ಅದಕ್ಕೆ ಪಾತ್ರೆಯಿಂದ ಚಹಾ ಸುರಿಯಲಾರಂಭಿಸಿದರು. ಬಟ್ಟಲಿನಲ್ಲಿ ಚಹಾ ತುಂಬಿ ಸುರಿಯಲಾರಂಭಿಸಿದರೂ ಗುರುಗಳು ಚಹಾ ಸುರಿಯುವುದನ್ನು ನಿಲ್ಲಿಸಲಿಲ್ಲ. ವಿದ್ವಾಂಸರಿಗೆ ಆಶ್ಚರ್ಯವಾಯಿತು. ‘ಗುರುಗಳೇ, ಬಟ್ಟಲಿನಲ್ಲಿ ಚಹಾ ತುಂಬಿಕೊಂಡಿದೆ. ನೀವು ಮತ್ತೆ ಸುರಿಯುತ್ತಿದ್ದರೆ ಅದು ಬಟ್ಟಲಿನೊಳಗೆ ಸೇರುವ ಬದಲು ನೆಲದ ಮೇಲೆ ಚೆಲ್ಲಿಹೋಗುತ್ತದೆ,' ಎಂದರು.
‘ಈ ಬಟ್ಟಲಿನ ಹಾಗೆಯೇ ನೀನೂ ಸಹ ನಿನ್ನದೇ ಅಭಿಪ್ರಾಯಗಳಿಂದ ತುಂಬಿಹೋಗಿದ್ದೀಯ. ಅದನ್ನೆಲ್ಲಾ ನೀನು ಹೊರಹಾಕಿ ಖಾಲಿಯಾಗುವವರಗೆ ನಾನು ಏನು ಹೇಳಿದರೂ ಅದು ನಿನ್ನೊಳಗೆ ಸೇರುವ ಬದಲು ಹೊರಗೆಲ್ಲೋ ಚೆಲ್ಲಿಹೋಗುತ್ತದೆ,' ಎಂದು ಹೇಳಿದರು ಗುರುಗಳು.
ಹೊಸತನ್ನು ಕಲಿಯಲು ನಮ್ಮ ಮನಸ್ಸು ಮಗುವಿನ ಮನಸ್ಸಿನಂತೆ ‘ಖಾಲಿ'ಯಾಗಬೇಕು. ಆದರೆ ಕಡೆತನಕ 'ಖಾಲೀ ಹಾಳೆ'ಯಂತೆ ಉಳಿಯಬಾರದು ಎಂದು ತಿಳಿಯಬಹುದಲ್ಲವೆ?

Wednesday, September 21, 2011

ಮನದ ಅಂಗಳದಿ......... ೫೮. ಈ ದೇಹವೆಂಬ.........

ದೇಹಂ ಭದ್ರಾಣಿ ಪಶ್ಯಂತಿ' ಎನ್ನುವಒಂದು ಸಂಸ್ಕೃತದಉಕ್ತಿ ಇದೆ. ‘ನಮ್ಮದೇಹವನ್ನು ನಾವು ಸುಸ್ಥಿತಿಯಲ್ಲಿಇರಿಸಿಕೊಳ್ಳಬೇಕು' ಎಂದು ಮಾತು ಅರ್ಥೈಸುತ್ತದೆ. ‘ಶರೀರಮಾಧ್ಯಂ ಖಲು ಧರ್ಮಸಾಧನಂ' ಎನ್ನುವ ಮಾತಿನ ಆಶಯವೂ ನಮ್ಮ ಯಾವುದೇ ಕಾರ್ಯ ನಿರ್ವಹಣೆಗೂ, ಸಾಧನೆಗೂ ನಮ್ಮ ಈ ಶರೀರದ ಉತ್ತಮವಾದ ಅಸ್ಥಿತ್ವ ಬಹಳ ಪ್ರಮುಖವಾಗುತ್ತದೆ ಎಂದೇ ಇದೆ.

ಹುಟ್ಟಿದ ತಕ್ಷಣವೇ ಶಿಶುವಿನ ದೇಹವು ತನ್ನ ಸ್ವತಂತ್ರ ಕ್ರಿಯೆಗಳನ್ನು ಪ್ರಾರಂಭಿಸುತ್ತದೆ. ತಾಯಿಯು ಅದರ ಎಲ್ಲಾ ದೈನಂದಿನ ದೈಹಿಕ ಚಟುವಟಿಕೆಗಳೂ ಸಮರ್ಪಕವಾಗಿ ನಡೆಯುತ್ತಿದೆಯೇ ಎನ್ನುವುದನ್ನು ಗಮನಿಸುತ್ತಾ, ಬೇಕು-ಬೇಡಗಳನ್ನು ಪ್ರೀತಿಯಿಂದ ಪೂರೈಸುತ್ತಿರುತ್ತಾಳೆ. ಇಲ್ಲಿ ಆ ‘ಪ್ರೀತಿ'ಎನ್ನುವುದು ಮಗುವಿಗೆ ಎಲ್ಲಾ ರೀತಿಯ ಭದ್ರತೆಯನ್ನೂ ನೀಡಿ ಅದು ತನ್ನ ಅಸ್ಥಿತ್ವವನ್ನು ಆನಂದಿಸಲಾರಂಭಿಸುತ್ತದೆ. ಬೆಳೆದಂತೆ ಕ್ರಮೇಣ ತನ್ನನ್ನು ತಾನು ನಿರ್ವಹಿಸಿಕೊಳ್ಳುವ ಜವಾಬ್ಧಾರಿ ತಾಯಿಯ ಹಾಗೂ ಹಿರಿಯರ ಮಾರ್ಗದರ್ಶನದೊಂದಿಗೆ ವರ್ಗಾವಣೆಯಾಗಲಾರಂಭಿಸುತ್ತದೆ. ಒಂದು ಹಂತದಲ್ಲಿ ಸಂಪೂರ್ಣವಾಗಿ ತನ್ನನ್ನು ತಾನೇ ನಿಭಾಯಿಸಿಕೊಳ್ಳಬೇಕಾಗುತ್ತದೆ. ಅಲ್ಲಿಂದಲೇ ಸಮಸ್ಯೆಗಳೂ ಪ್ರಾರಂಭವಾಗುತ್ತವೆ!

ಈ ‘ದೇಹ' ಎನ್ನುವುದು ದೇಹ ಮಾತ್ರವಲ್ಲ. ಅದರ ಆರೋಗ್ಯದ ಸ್ಥಿತಿ ಮನಸ್ಸಿನ ಏರುಪೇರುಗಳೊಂದಿಗೆ ಮಿಳಿತವಾಗಿರುತ್ತದೆ. `A sound mind in a sound body’ ಎನ್ನುವ ಸೂಕ್ತಿಯೇ ತಿಳಿಸುವಂತೆ ಆರೋಗ್ಯಕರವಾದ ದೇಹದಲ್ಲಿ ಆರೋಗ್ಯಕರವಾದ ಮನಸ್ಸು ಇರುತ್ತದೆ. ಹಾಗೆಯೇ ಆರೋಗ್ಯಕರವಾದ ಮನಸ್ಸನ್ನು ಹೊಂದಿದ್ದರೆ ಮಾತ್ರ ಆರೋಗ್ಯಕರವಾದ ದೇಹವನ್ನು ಹೊಂದಲು ಸಾಧ್ಯವೆನಿಸುತ್ತದೆ! ‘ಆರೋಗ್ಯ' ಎನ್ನುವುದೇ ದೇಹ ಹಾಗೂ ಮನಸ್ಸು ಎರಡರ ಸುಸ್ಥಿತಿಯನ್ನೂ ಒಳಗೊಂಡಿರುತ್ತದೆ.

ದೂರದ ಊರಿನಿಂದ ಬಂಧುವೊಬ್ಬರು ಗೌರಿಹಬ್ಬಕ್ಕೆ ಮಾಡಿದ್ದ ತಿಂಡಿಗಳನ್ನು ತೆಗೆದುಕೊಂಢು ಬಂದಿದ್ದರು. ಅವರು ಬರುವಾಗಲೇ ಮಂಡಿನೋವಿನಿಂದ ಹಿಂಸೆಪಡುತ್ತಿದ್ದರು. ಈ ರೀತಿಯ ಅನೇಕ ಬಗೆಯ ನೋವುಗಳನ್ನು ಅನುಭವಿಸಿ ಪಳಗಿದ್ದ ನಾನು ಅದರ ಕಾರಣ ತಿಳಿದರೂ ಅವರಿಗೆ ಹೇಗೆ ಹೇಳಬೇಕೆಂದು ತಿಳಿಯದೇ ಗೊಂದಲಕ್ಕೆ ಒಳಗಾದೆ. ಮಾರನೇ ದಿನ ಇದೇ ಊರಿನಲ್ಲಿದ್ದ ಆತ್ಮೀಯರ ಮನೆಗೆ ಎಲ್ಲರೂ ಹೋಗಿದ್ದಾಗ ಅಲ್ಲಿ ಕಣ್ಣಿಗೆಬಿದ್ದ ‘ತರಂಗ'ದಲ್ಲಿನ ಒಂದು ಲೇಖನ ನನ್ನ ಎಲ್ಲಾ ಸಮಸ್ಯೆಗಳನ್ನೂ ಪರಿಹಾರ ಮಾಡಿತು!

‘ವಾತ ವ್ಯಾಧಿ (ನ್ಯೂರೋ ಸ್ಕೆಲಿಟಲ್ ಡಿಸಾರ್ಡರ್‍ಸ್)' ಎನ್ನುವ ಈ ಲೇಖನದಲ್ಲಿ ಹೀಗಿದೆ: ‘ಶರೀರವೆಂಬ ಈ ಮಿನಿಯೇಚರ್ ಬ್ರಹ್ಮಾಂಡದಲ್ಲಿ ಏನೇ ಕಾರ್ಯವಾಗಲೀ ವಾಯು(ವಾತ) ಬೇಕು. ಶರೀರವನ್ನು ಬ್ರಹ್ಮಾಂಡವೆಂದೇಕೆ ಹೇಳಿದೆ ಎಂದರೆ ಇಲ್ಲೂ ಒಬ್ಬ ಸೂರ್ಯನಿದ್ದಾನೆ(ಪಿತ್ತ), ಇಲ್ಲೊಬ್ಬ ಚಂದ್ರನಿದ್ದಾನೆ(ಕಫ)! ಸೃಷ್ಟಿ-ಸ್ಥಿತಿ-ಲಯ ಕಾರ್ಯ ಪ್ರತಿಯೊಂದು ಅಣುವಿನಲ್ಲಿ ಪ್ರತಿಕ್ಷಣ ಆಗುತ್ತಲೇ ಇರುತ್ತದೆ. ಈ ಎಲ್ಲಾ ಕಾರ್ಯಗಳಿಗೆ ವಾಯು ಬೇಕು. ಶರೀರದೊಳಗಿನ ಪ್ರತಿ ಸಂಚಲನಕ್ಕೂ ಕಾರಣೀಭೂತವಾದದ್ದು, ಶರೀರವೆಂಬ ಯಂತ್ರದ ಎಲ್ಲಾ ತಂತ್ರ ಅಂದರೆ, ಕಾರ್ಯಗಳನ್ನು ಆಧರಿಸುವಂಥದ್ದು ಈ ವಾಯು. ......‘ವಾಯುವೇ ಶರೀರಕ್ಕೆ ಬಲ ಕೊಡುವಂಥದ್ದು, ಶರೀರವನ್ನು ಆಧರಿಸುವಂಥದ್ದು....'ಎಂದು ಚರಕ ಋಷಿಯು ವಾಯುವಿನ ಶ್ರೇಷ್ಟತೆಯನ್ನು ಹೇಳುತ್ತಾನೆ.......

ಶರೀರದಲ್ಲಿರುವ ದೋಷಗಳ ಪ್ರಾಧಾನ್ಯತೆಗನುಸಾರವಾಗಿ ಒಬ್ಬ ವ್ಯಕ್ತಿಯ ‘ಪ್ರಕೃತಿ'ಯನ್ನು ನಿರ್ಧರಿಸುತ್ತೇವೆ. ‘ಪ್ರಕೃತಿ'ಎನ್ನುವುದು ಪ್ರತಿ ವ್ಯಕ್ತಿಯ ಬೆರಳಚ್ಚು ಇದ್ದಹಾಗೆ. .......ಪ್ರತಿವ್ಯಕ್ತಿಯ ಪ್ರತ್ಯೇಕತೆಯನ್ನು ಸೂಚಿಸುತ್ತದೆ. ವಾತ-ಪಿತ್ತ-ಕಫ ಪ್ರಕೃತಿಗನುಸಾರವಾಗಿ ಪ್ರತಿಯೊಬ್ಬರೂ ತಮ್ಮ ಆಹಾರಕ್ರಮ, ದಿನನಿತ್ಯದ ಚಟುವಟಿಕೆಗಳನ್ನು ರೂಪಿಸಿಕೊಂಡರೆ ರೋಗ ಬಾರದು!.......‘.ವಾತ ವ್ಯಾಧಿ'ಎಂದರೆ ಪ್ರಕುಪಿತ ವಾಯು ಉಳಿದ ಧಾತುಗಳಲ್ಲಿ ಹರಡಿ ಶರೀರದ ಒಂದು ಭಾಗದಲ್ಲಿ ಅಥವಾ ಸರ್ವದೇಹದಲ್ಲಿ ನೋವನ್ನುಂಟುಮಾಡುತ್ತದೆ......?ಎಂದು ವಿವಿಧ ಉದಾಹರಣೆಗಳೊಂದಿಗೆ ಅದರ ಸಾಮಾನ್ಯ ಕಾರಣಗಳು, ಆಹಾರ ಪಥ್ಯ, ಚಿಕಿತ್ಸೆಗಳನ್ನು ವಿವರಿಸಿದ್ದಾರೆ. ಸುಮಾರು ೮೦ ವಿಧದ ವಾತ ವಿಕಾರಗಳನ್ನು ಪಟ್ಟಿ ಮಾಡಿದ್ದಾರೆ!

‘ವಾತ' ಎನ್ನುವ ಪದವನ್ನು ಉಚ್ಛರಿಸಲೇ ಅವಮಾನವೆಂದುಕೊಳ್ಳುವ ನಮಗೆ ಅದಕ್ಕೆ ಸಂಬಂಧಿಸಿದಂತೆ ಎಷ್ಟೆಲ್ಲಾ ದೈಹಿಕ ತೊಂದರೆಗಳು ಉಂಟಾಗುತ್ತವೆ ಎನ್ನುವುದು ತಿಳಿಯುವಾಗ ಅಚ್ಛರಿಯೆನಿಸುತ್ತದೆ! ಎದೆನೋವಿನಿಂದ ಒಂದು ವರ್ಷ ಹಿಂಸೆಪಟ್ಟು, ಅನೇಕ ರೀತಿಯ ಔಷದೋಪಚಾರಗಳಾದ ನಂತರ ಹೃದ್ರೋಗ ಕೇಂದ್ರದಲ್ಲಿ ಎಲ್ಲ ರೀತಿಯ ಪರೀಕ್ಷೆಗಳನ್ನೂ ಮಾಡಿಸಿದಾಗ ಅಲ್ಲಿ ಯಾವುದೇ ಹೃದಯಕ್ಕೆ ಸಂಬಂಧಿಸಿದ ತೊಂದರೆಯಿಲ್ಲ ಎಂದು ತಿಳಿಸಿ, ಮನಃಶಾಸ್ತ್ರಜ್ಞರನ್ನು ಕಾಣಲು ಬರೆದು ಕೊಟ್ಟಾಗ, ಕತ್ತಿನ ತೀವ್ರ ನೋವಿನಿಂದ ಹಾಗೂ ಕತ್ತಿನಲ್ಲಿ ಅನೇಕ ಗಂಟುಗಳುಂಟಾದಾಗ ಸಿಟಿಸ್ಕ್ಯಾನ್‌ನಂಥಾ ಅತ್ಯಾಧುನಿಕ ಪರೀಕ್ಷೆಗಳನ್ನೂ ಮಾಡಿಸಿ ಸರಿಯಾದ ಕಾರಣ ತಿಳಿಯದೇ ನಿರಾಶಳಾದಾಗ,.......ಈ ಎಲ್ಲಾ ಸಂದರ್ಭಗಳಲ್ಲೂ ಮಾನಸಿಕ ಒತ್ತಡವು ದೈಹಿಕ ವ್ಯವಸ್ಥೆಯ ಮೇಲೆ ಉಂಟುಮಾಡಿದ ಏರುಪೇರಿನಿಂದಾದ ತೊಂದರೆಗಳು ಇವು ಎಂದು ತಿಳಿಯಲು ಬಹಳ ದಿನಗಳೇ ಬೇಕಾದವು!

ನೆಲ್ಲೀಕೆರೆ ವಿಜಯಕುಮಾರ್ ಅವರ ನಿರೂಪಣೆಯ (ಮೂಲ: ಗುರೂಜಿ ಶ್ರೀ ಋಷಿ ಪ್ರಭಾಕರ್) ‘ಒಳ್ಳೆಯವರಾಗುವ ಕೆಟ್ಟ ಚಟವನ್ನು ಬಿಡಿ!'ಯಲ್ಲಿ ಹೀಗೆ ತಿಳಿಸುತ್ತಾರೆ: ‘ಮಾನವ ದೇಹಕ್ಕೆ ಮೂರು ಉನ್ನತ ಔಷಧಗಳೆಂದರೆ- ಪ್ರಾಣಾಯಾಮ, ಧ್ಯಾನ, ಹಾಗೂ ಪ್ರಕೃತ್ತಿದತ್ತ ಆಹಾರ. ನೀವು ಕಾಯಿಲೆ ಬಿದ್ದರೆ ಪ್ರಾಣಾಯಾಮವಿಲ್ಲ, ಧ್ಯಾನವಿಲ್ಲ ಹಾಗೂ ಪ್ರಕೃತ್ತಿದತ್ತ ಆಹಾರ ಸೇವಿಸುತ್ತಿಲ್ಲ ಎಂದು ತಿಳಿದುಕೊಳ್ಳಿ..... ಧ್ಯಾನವು ದೇಹದಿಂದ ಎಲ್ಲಾ ಮಾಲಿನ್ಯವನ್ನು ಹೊರದೂಡಿದರೆ ಪ್ರಾಣಾಯಾಮವು ದೇಹಕ್ಕೆ ಚೈತನ್ಯವನ್ನು ಕೊಟ್ಟು ಹೊಸ ಶಕ್ತಿಯನ್ನು ಉತ್ಪಾದಿಸುತ್ತದೆ. ನಾವು ಸಾಮಾನ್ಯವಾಗಿ ನಮ್ಮ ಶ್ವಾಸಕೋಶದ ಸಾಮರ್ಥ್ಯದಲ್ಲಿಶೇ.೨೦ರಷ್ಟನ್ನು ಮಾತ್ರವೇ ಉಪಯೋಗಿಸುತ್ತೇವೆ. ಆದರೆ ಪ್ರಾಣಾಯಾಮದಿಂದ ಶ್ವಾಸಕೋಶಗಳು ಇನ್ನೂ ಅಪಾರ ಪ್ರಮಾಣದಲ್ಲಿ ಬಳಕೆಯಾಗಲ್ಪಟ್ಟು ಮಾನವನ ಜೀವಿತಾವಧಿ ಅಧಿಕಗೊಳ್ಳುತ್ತಾ ಹೋಗುತ್ತದೆ. ಯೋಗಾಸನಗಳ ಅಭ್ಯಾಸವು ದೈಹಿಕ ಸಾಮರ್ಥ್ಯವನ್ನು ವೃದ್ಧಿಗೊಳಿಸಿದರೆ ಬದಲಾಗುವ ಆಹಾರ ಸೇವನೆ ಪದ್ಧತಿಯು ಆರೋಗ್ಯ, ಆನಂದ, ಶಾಂತಿ ಹಾಗೂ ಸಮೃದ್ಧಿಯ ಚಕ್ರವನ್ನು ಪೂರ್ಣಗೊಳಿಸುತ್ತದೆ.......'

ಪಕೃತಿಯ ಅನನ್ಯ ಕೊಡುಗೆಯಾದ ಈ ದೇಹವನ್ನು ಸದೃಢವಾಗಿ ಹಾಗೂ ಸುಸ್ಥಿತಿಯಲ್ಲಿ ಇರಿಸಿಕೊಂಡು, ‘ದೇಹದಾನ'ವನ್ನು ಮಾಡುವ ಮೂಲಕ ಸದುಪಯೋಗಪಡಿಸಿಕೊಳ್ಳುವ ಆನ೦ದದಲ್ಲಿ ನಮ್ಮ ಇರುವನ್ನು ಸಾರ್ಥಕಗೊಳಿಸಿಕೊಳ್ಳೋಣ.


Saturday, September 17, 2011

ಮನದ ಅಂಗಳದಿ......... ೫೭. ಕಲಿಕೆ ನಿರಂತರ


ಇತ್ತೀಚೆಗೆ ನಡೆದ ಒಂದು ಶೈಕ್ಷಣಿಕಸಮ್ಮೇಳನದಲ್ಲಿ ಮುಖ್ಯ ಅತಿಥಿಗಳು ಸಂಸ್ಕೃತದ ಶ್ಲೋಕವೊಂದನ್ನುಉದಾಹರಿಸಿ ಆಡಿದ ಮಾತುಗಳುಚಿಂತನಯೋಗ್ಯವಾಗಿದ್ದವು. ‘ಕಲಿಕೆ ನಿರಂತರ’ ಎಂದು ಸಾರುವ ಆಶ್ಲೋಕದ ಅರ್ಥ ಹೀಗಿದೆ :‘ಆಚಾರ್ಯರಿಂದ೧/೪ಭಾಗ, ಸ್ವಂತವಾಗಿ ೧/೪ ಭಾಗ, ಸಹಪಾಠಿಗಳಿಂದ ೧/೪ ಭಾಗ ಹಾಗೂ ಉಳಿದ ೧/೪ಭಾಗವನ್ನು ಜೀವನಾನುಭವಗಳಿಂದಕಲಿಯುತ್ತಾ ಸಾಗಬೇಕು.’ ಅಂದರೆ ನಾವುಇಲ್ಲಿ ಚರ್ಚೆ ಮಾಡುತ್ತಲಿರುವುದು ೧/೪ಭಾಗ ಕಲಿಕೆಯ ಬಗ್ಗೆ ಮಾತ್ರ! ಕಲಿಯುವುದು-ಕಲಿಸುವುದು ಎನ್ನುವುದರಬಗ್ಗೆಯೇ ಸದಾ ಮಾತನಾಡುವ ನಾವು ಈಪದಗಳ ಅಂತರಾಳವನ್ನು ಎಂದಾದರೂಪ್ರವೇಶಿಸಿ ಅರ್ಥಮಾಡಿಕೊಂಡಿದ್ದೇವೆಯೆ? ಎನಿಸಲಾರಂಭಿಸಿತು. ಈ ಸಂದರ್ಭದಲ್ಲಿಕಲಿಕೆಯನ್ನು ಕುರಿತು ಜಿಡ್ಡುಕೃಷ್ಣಮೂರ್ತಿಯವರ ಚಿಂತನೆ ಹೆಚ್ಚುಸೂಕ್ತವೆನಿಸಿ ಅದನ್ನು ನಿಮ್ಮಮುಂದಿಡುತ್ತಿದ್ದೇನೆ. ನಾವುಸಾಧಾರಣವಾಗಿ ಅನುಭವದಿಂದಲೇ ಕಲಿಕೆಎಂದು ತಿಳಿದಿದೇವೆ. ಮುಖ್ಯ ಅತಿಥಿಗಳುಉದಾಹರಿಸಿದ ಸಂಸ್ಕೃತಶ್ಲೋಕದ ತಾತ್ಪರ್ಯವೂ ಅದೇ ಆಗಿದೆ. ಆದರೆ ಜಿಡ್ಡು ಕೃಷ್ಣಮೂರ್ತಿಯವರು ‘ಕಲಿಕೆ ಎಂದರೆ ಅನುಭವವಲ್ಲ’ ಎಂದು ತಿಳಿಸುತ್ತಾ ಹೀಗೆ ವಿವರಿಸುತ್ತಾರೆ:

‘ಕಲಿಕೆ ಎಂಬ ಮಾತಿಗೆ ಬಹಳ ಮಹತ್ವವಿದೆ. ಎರಡು ಬಗೆಯ ಕಲಿಕೆಗಳಿವೆ. ನಮ್ಮಲ್ಲಿ ಅನೇಕರ ಪಾಲಿಗೆ ಕಲಿಕೆ ಎಂದರೆ ಜ್ಞಾನ, ಅನುಭವ, ತಾಂತ್ರಿಕತೆ, ಕೌಶಲ ಅಥವಾ ಭಾಷೆಗಳ ಸಂಗ್ರಹ ಮಾತ್ರವಾಗಿ ಕಾಣುತ್ತದೆ. ಮಾನಸಿಕವಾದ ಕಲಿಕೆಯೂ ಇದೆ. ಅನುಭವಗಳ ಮೂಲಕ ಕಲಿಯುವ ದಾರಿ ಅದು. ಅನುಭವಗಳು ನಮ್ಮ ಬದುಕಿನ ಪ್ರತ್ಯಕ್ಷ ಸಂಗತಿಗಳಿಂದ ಮೂಡಿದವಾಗಿರಬಹುದು. ಇವು ಕೆಲವು ಬಗೆಯ ಶೇಷಗಳನ್ನು ನಮ್ಮಲ್ಲಿ ಉಳಿಸುತ್ತವೆ. ಅಥವಾ ಸಂಪ್ರದಾಯ, ಕುಲ, ಸಮಾಜದಿ೦ದ ದತ್ತವಾದ ಅನುಭವಗಳೂ ಇರುತ್ತವೆ. ಬದುಕುವುದು ಹೇಗೆ ಎಂದು ಕಲಿಸುವ ಎರಡು ಬಗೆಯ ಕಲಿಕೆಗಳು ಇವು: ದೈಹಿಕವಾದ ಕಲಿಕೆ ಮತ್ತು ಮಾನಸಿಕವಾದ ಕಲಿಕೆ. ಒಂದು ಹೊರಗಿನ ಕೌಶಲ, ಇನ್ನೊ೦ದು ಒಳಗಿನ ಕೌಶಲ. ಆದರೆ ಇವೆರಡರ ನಡುವೆ ವಿಭಜನೆಯ ರೇಖೆ ಇರುವುದಿಲ್ಲ. ಒಂದು ಇನ್ನೊಂದರೊಡನೆ ಬೆರೆತಿರುತ್ತದೆ. ಅಧ್ಯಯನ ಮತ್ತು ಅಭ್ಯಾಸದ ಮೂಲಕ ನಾವು ಸಂಗ್ರಹಿಸಿಕೊಳ್ಳುವ ತಾಂತ್ರಿಕ ಕೌಶಲ್ಯದ ಬಗ್ಗೆ ನಾವೀಗ ಮಾತನಾಡುತ್ತಿಲ್ಲ. ನಮಗೆ ಮುಖ್ಯವಾದದ್ದು ಮಾನಸಿಕ ಕಲಿಕೆ. ಇದನ್ನು ನಾವು ಅನೇಕ ಶತಮಾನಗಳಿಂದ ಸಂಗ್ರಹಿಸಿಕೊ0ಡು ಬಂದಿದ್ದೇವೆ. ಅದನ್ನು ಪರಂಪರೆಯೆಂದೋ, ಜ್ಞಾನವೆಂದೋ, ಅನುಭವವೆಂದೋ ಬಳುವಳಿಯಾಗಿ ಪಡೆದಿದ್ದೇವೆ. ಇದನ್ನು ನಾವು `ಕಲಿಕೆ' ಎನ್ನುತ್ತಿದ್ದೇವೆ. ಇದು ನಿಜವಾಗಿ ಕಲಿಕೆ ಹೌದೇ ಎನ್ನುವುದೇ ನನ್ನ ಪ್ರಶ್ನೆ.......ಮನಸ್ಸು ಎಂದಾದರೂ ಹೊಸತಾಗಿ ಕಲಿಯುತ್ತದೆಯೇ? ಈಗಾಗಲೇ ಮನಸ್ಸು ಏನನ್ನೋ ಕಲಿತುಬಿಟ್ಟಿದೆ. ಹಾಗೆ ಕಲಿತದ್ದನ್ನು ಬಳಸಿಕೊಂಡು ಬದುಕಿನ ಸವಾಲುಗಳನ್ನು ಎದುರಿಸುತ್ತದೆ. ನಾವೀಗ ಮಾಡುತ್ತಿರುವುದು ಅದನ್ನೇ. ಇದು ಕಲಿಕೆಯೇ? ಕಲಿಕೆಯೆಂದರೆ ಹೊಸತಾದುದನ್ನು ಕಲಿಯುವುದು ಎಂದು ಅರ್ಥವಲ್ಲವೇ? ನನಗೆ ಈಗಾಗಲೇ ಗೊತ್ತಿಲ್ಲದಿರುವುದನ್ನು ಕಲಿಯುವುದು ಎಂದ ಅರ್ಥವಲ್ಲವೇ? ಈಗಾಗಲೇ ಗೊತ್ತಿರುವುದಕ್ಕೆ ಮತ್ತೆ ಒಂದಷ್ಟು ಸೇರಿಸಿಕೊಳ್ಳುತ್ತಾ ಹೋಗುವುದು ಕಲಿಕೆಯಲ್ಲ.’

ನಾವು ಹೆಚ್ಚು ಕಲಿತವರು ಎನ್ನುವುದನ್ನು ಸಾಬೀತುಪಡಿಸಲು ನಮ್ಮ ಹೆಸರಿನ ಮುಂದೆ ಪದವಿಗಳನ್ನು ಸೇರಿಸಿಕೊಳ್ಳುವ ಪ್ರಯತ್ನವನ್ನು ನಡೆಸುತ್ತೇವೆ. ಮಾಹಿತಿಗಳನ್ನು ಸಂಗ್ರಹಿಸುತ್ತಾ ನಮ್ಮ ಕಲಿಕೆಯನ್ನು ಉತ್ತಮಪಡಿಸಿಕೊಳ್ಳುತ್ತಿದ್ದೇವೆಂದು ಭಾವಿಸುತ್ತೇವೆ. ಹಿರಿಯರು ಮಕ್ಕಳಿಗೆ ವಿವಿಧ ರೀತಿಯ ಒತ್ತಾಯಗಳಿಂದ ಕಲಿಸುವ ಪ್ರಯತ್ನ ನಡೆಸುತ್ತಾರೆ. ಬೇರೊಬ್ಬರೊಡನೆ ಹೋಲಿಸಿ ಸ್ಪರ್ಧೆಗೆ ಒಡ್ಡುತ್ತಾರೆ...... ಇವೆಲ್ಲವನ್ನೂ ಜೆ.ಕೆ. ಅವರ ಚಿಂತನ ಈ ರೀತಿಯಾಗಿ ಒರೆಗೆ ಹಚ್ಚುತ್ತದೆ:

‘ಕಲಿಕೆ ಸಂಗ್ರಹವಲ್ಲ. ನಿರಂತರವಾದ ಚಲನೆ. ಕಲಿಕೆ ಎಂದರೇನು? ಜ್ಞಾನಸಂಗ್ರಹವೆಂದರೆ ಏನು? ಎಂಬ ಪ್ರಶ್ನೆಯನ್ನು ಎಂದಾದರೂ ಕೇಳಿಕೊಂಡಿದ್ದೀರೋ ಇಲ್ಲವೋ, ಗೊತ್ತಿಲ್ಲ. ಕಲಿಕೆಯನ್ನು ಹಾಗೆ ಸಂಗ್ರಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಕಲಿಕೆ ಎಂಬುದು ಒಂದು ಉಗ್ರಾಣದಂತಲ್ಲ. ಏನನ್ನು ಕಲಿತರೂ ಮಾಡುತ್ತಾ ಮಾಡುತ್ತಾ ಕಲಿಯುತ್ತೇವೆ. ಕ್ರಿಯೆಯಲ್ಲಿ ತೊಡಗಿರುವಾಗಲೇ ಕಲಿಯುತ್ತೇವೆ. ಆದ್ದರಿಂದಲೇ ಕಲಿಕೆಯಲ್ಲಿ ಹಿಂತಿರುಗಿ ನೋಡುವುದು ಎಂಬುದಿಲ್ಲ, ಕೊಳೆಯುವುದು ಎಂಬುದಿಲ್ಲ, ಪತನ ಎಂಬುದು ಇಲ್ಲ.’

‘ವಿಚಾರದಲ್ಲಿ ತೊಡಗುವುದು ಮತ್ತು ಕಲಿಯುವುದು, ಇವೆರಡೂ ಮನಸ್ಸಿನ ಕಾರ್ಯಗಳು. ಕಲಿಯುವುದೆಂದರೆ ನೆನಪಿನ ಶಕ್ತಿಯನ್ನು ಬೆಳೆಸಿಕೊಳ್ಳುವುದಲ್ಲ, ಜ್ಞಾನಸಂಗ್ರಹವು ಅಲ್ಲ .ಭ್ರಮೆಗಳಿಲ್ಲದೇ ಸ್ಪಷ್ಟವಾಗಿ ಆಲೋಚಿಸುವ ಸಾಮಾರ್ಥ್ಯ, ನಂಬಿಕೆ ಅಥವಾ ತೀರ್ಮಾನಗಳಿಂದ ಹೊರಡದೇ ಸತ್ಯ ಸಂಗತಿಗಳನ್ನು ಗಮನಿಸುವ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವುದೇ ನಿಜವಾದ ಕಲಿಕೆ. ಕೇವಲ ಮಾಹಿತಿಯನ್ನೋ, ಜ್ಞಾನವನ್ನೋ ಸಂಗ್ರಹಿಸಿಕೊಳ್ಳುವುದರಿಂದ ಏನನ್ನೂ ಕಲಿತಂತಾಗುವುದಿಲ್ಲ. ಕಲಿಕೆ ಎಂಬುದು ತಿಳುವಳಿಕೆಯ ಬಗ್ಗೆ ಇರುವ ಪ್ರೀತಿಯನ್ನು, ಯಾವುದೇ ಕೆಲಸವನ್ನು ಆ ಕೆಲಸಕ್ಕಾಗಿಯೇ ಮಾಡುವ ಪ್ರೀತಿಯಿಂದ ಮಾಡುವುದನ್ನು ಸೂಚಿಸುತ್ತದೆ. ಯಾವುದೇ ರೀತಿಯ ಒತ್ತಾಯವಿದ್ದಾಗ ಕಲಿಕೆ ಸಾಧ್ಯವಾಗುವುದಿಲ್ಲ. ಒತ್ತಾಯಕ್ಕೆ ಹಲವಾರು ರೂಪಗಳಿರುತ್ತದೆ, ಅಲ್ಲವೇ? ಪ್ರಭಾವದ ಒತ್ತಾಯ, ವ್ಯಾಮೋಹದ ಒತ್ತಾಯ, ಭಯದ ಒತ್ತಾಯ, ಪ್ರೋತ್ಸಾಹದ ಒತ್ತಾಯ, ಸೂಕ್ಷ್ಮವಾದ ಲಾಭಗಳ ಒತ್ತಾಯ ಇವೆಲ್ಲಾ ಇರುತ್ತವೆ.’

ಹೋಲಿಕೆಯ ಮುಖಾಂತರ ಕಲಿಕೆಗೆ ಉತ್ತೇಜನ ದೊರೆಯುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಅದು ಸರಿಯಲ್ಲ. ಹೋಲಿಕೆಯಿಂದ ಹತಾಶೆ ಹುಟ್ಟುತ್ತದೆ. ಅಸೂಯೆ ಬೆಳೆಯುತ್ತದೆ. ಈ ಅಸೂಯೆ ಸ್ಪರ್ಧೆಯ ರೂಪ ತಾಳುತ್ತದೆ. ಇತರ ಒತ್ತಾಯಗಳಂತೆಯೇ ಹೋಲಿಕೆ ಕೂಡ ಕಲಿಕೆಗೆ ಅಡ್ಡಿ ಮಾಡಿ ಭಯವನ್ನು ಹುಟ್ಟಿಸುತ್ತದೆ.

ಕಲಿಕೆ ಎಂಬುದು ಸದಾ ಈ ಹೊತ್ತಿನ, ಈ ಕ್ಷಣದ ಚಟುವಟಿಕೆಯಲ್ಲಿ ಅನುಭವಿಸುತ್ತಾ ಇರುತ್ತದೆ. ಅದಕ್ಕೆ ಭೂತಕಾಲವೆಂಬುದಿಲ್ಲ. ‘ನಾನು ಕಲಿತೆ’ ಎಂದು ನೀವು ಹೇಳಿದ ಕ್ಷಣದಲ್ಲೇ ಕಲಿಕೆಯು ಜ್ಞಾನವಾಗಿ ಬದಲಾಗಿಬಿಟ್ಟಿರುತ್ತದೆ.

ಕಲಿಯಬೇಕೆಂದರೆ, ಮನಸ್ಸು ಸುಮ್ಮನೆ ಇರಬೇಕು. ಕಾಲಾತೀತವಾದುದನ್ನು ಕಾಣಬಯಸುವವರಿಗೆ ಜ್ಞಾನ ಮತ್ತು ಕಲಿಕೆಗಳೇ ಬಹುದೊಡ್ಡ ಆತಂಕಗಳಾಗಿರುತ್ತವೆ.’