https://www.facebook.com/share/p/1ATrCV13Sb/
ದಿನಾಂಕ : 21_07_2024
'ಜೇನುಗಿರಿ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ ಇಲ್ಲಿದೆ. ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ🌼
ಪುಸ್ತಕ ಪರಿಚಯ :
ಒಂದೆಲೆ ಮೇಲಿನ ಕಾಡು - ಸ. ವೆಂ. ಪೂರ್ಣಿಮಾ
ನಾನು ವಿವಾಹಾನಂತರ ಸಕಲೇಶಪುರದ ಜ್ಯೂನಿಯರ್ ಕಾಲೇಜಿನ(ಈಗಿನ ಪದವಿ ಪೂರ್ವ ಕಾಲೇಜು) ಪ್ರೌಢ ಶಾಲಾ ವಿಭಾಗಕ್ಕೆ ವರ್ಗವಾಗಿ ಹೋದಾಗ ಪೂರ್ಣಿಮಾ ಅಲ್ಲಿಯೇ ಓದುತ್ತಿದ್ದಳು. ಆದರೆ ನನಗೆ ಪ್ರಾರಂಭದಲ್ಲಿ ಟೈಮ್ ಟೇಬಲ್ ಪ್ರಕಾರ ಎಲ್ಲಾ ಇಂಗ್ಲಿಷ್ ಮೀಡಿಯಂಗಳಿಗೂ ಗಣಿತ ಮತ್ತು ವಿಜ್ಞಾನದ ತರಗತಿಗಳನ್ನು ತೆಗೆದುಕೊಳ್ಳುವಂತೆ ಇರುತ್ತಿದ್ದುದರಿಂದ ವರ್ಕ್ ಲೋಡ್ ಆಗಿ ಒಂದೆರಡು section ಕನ್ನಡ ಮಾಧ್ಯಮಕ್ಕೆ ಇದ್ದರೂ ಪೂರ್ಣಿಮಾ ನನ್ನ ನೇರ ವಿದ್ಯಾರ್ಥಿಯಾಗಿರಲಿಲ್ಲ. ಆದರೂ ಹಾಡುವುದು ಮತ್ತು ಡ್ಯಾನ್ಸ್ ಮಾಡುವುದರಲ್ಲಿಯೂ ಚುರುಕಾಗಿದ್ದ ಹುಡುಗಿಯಾದ್ದರಿಂದ ನನ್ನ ಗಮನವನ್ನು ಸೆಳೆದಿದ್ದಳು. ಸಮಾರಂಭವೊಂದರಲ್ಲಿ ಅವಳು ಮಾಡಿದ ನೃತ್ಯ ಇನ್ನೂ ಅಚ್ಚಳಿಯದಂತೆ ಮನಸ್ಸಿನಲ್ಲಿದೆ. ನಂತರದ ವರ್ಷಗಳಲ್ಲಿ ತಾನು ಓದಿದ ಶಾಲೆಗೇ ಅವಳು ಪಾರ್ಟ್ ಟೈಮ್ ಶಿಕ್ಷಕಿಯಾಗಿ ಬಂದು ನಾವು ಸಹೋದ್ಯೋಗಿಗಳಾಗಿದ್ದಾಗ ತನ್ನ ಸರಳ ಭಾವಪೂರ್ಣ ನಡವಳಿಕೆಯಿಂದ ಆಪ್ತಳಾಗಿದ್ದಳು. ನಾನು ವಿಷಯ ಪರಿವೀಕ್ಷಕಳಾಗಿದ್ದಾಗ ಆಗಾಗ ಪೂರ್ಣಿಮಾ ಕೆಲಸಮಾಡುತ್ತಿದ್ದ ಶಾಲೆಯ ತಪಾಸಣೆ ಹಾಗೂ ಭೇಟಿಗೆ ಹೋಗುತ್ತಿದ್ದು ಅವಳ ಅಚ್ಚುಕಟ್ಟಾದ ಕಾರ್ಯ ವೈಖರಿಯನ್ನೂ ನೋಡಿದ್ದೇನೆ. ಇವಿಷ್ಟು ಪೂರ್ಣಿಮಾ ಮತ್ತು ನನ್ನ ಪರಿಚಯದ ಹಿನ್ನೆಲೆ.
'ನಾನು ತುಂಬಾ ಲೇಟಾಗಿ ಪುಸ್ತಕ ಮಾಡ್ತಿದೀನಿ ಟೀಚರ್' ಎಂದು ಇತ್ತೀಚೆಗೆ ಪೂರ್ಣಿಮಾ ಒಂದು ಸಾರಿ ಫೋನ್ ನಲ್ಲಿ ಹೇಳಿದಾಗ "'it is better late than never' ಎಂದಿದ್ದೆ. ಆದರೆ 'ಒಂದೆಲೆ ಮೇಲಿನ ಕಾಡು' ಎಂಬ ಈ ವಿಶಿಷ್ಟ ನಾಮಧೇಯದ ಪುಸ್ತಕ ಪ್ರಕಟವಾಗಿ ಅದಕ್ಕೆ ದೊರೆತ ಮನ್ನಣೆ, ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಇದು ಪೂರ್ಣಿಮಾಳ ಆಂತರ್ಯಕ್ಕೆ ತೃಪ್ತಿ ತಂದಿರಬಹುದಾದ best time ಎನಿಸದೇ ಇರಲಿಲ್ಲ. ಮೊದಲ ಪುಸ್ತಕದಿಂದಲೇ ಈವರೆಗೂ ಬರಬೇಕಾಗಿದ್ದ ಎಲ್ಲಾ ಗೌರವಗಳನ್ನೂ ಒಟ್ಟಾಗೇ ಬಡ್ಡಿಸಮೇತ ಪಡೆಯಲಾಗಿದೆ ಎಂದರೆ ಅತಿಶಯೋಕ್ತಿಯೇನಲ್ಲವೆನಿಸುತ್ತದೆ. ಈಗ ಪೂರ್ಣಿಮಾ ಎಂದಿನ ಅತ್ಯಾಪ್ತತೆಯಿಂದ ಕೊಟ್ಟ ಈ ಪುಸ್ತಕವನ್ನು ಓದುವಾಗ ಇಷ್ಟೊಂದು ಸರಳವಾಗಿ, ಸಹಜವಾಗಿ ನಮ್ಮ ಭಾವಬುತ್ತಿಯನ್ನು ತೆರೆದಿಡಬಹುದಲ್ಲಾ ಎಂಬ ಅಚ್ಚರಿಯಾಗುತ್ತಿದೆ. ತನಗಾದ ಅನುಭವಗಳನ್ನು, ಅನಿಸಿಕೆಗಳನ್ನು, ಹತ್ತಿರದಿಂದ ಕಂಡ ತನ್ನ ಆಪ್ತರ ಬದುಕಿನ ಏರಿಳಿತಗಳನ್ನು ನೇರಾನೇರವಾಗಿ ಎದುರಿಗೇ ಕುಳಿತು ಮಾತನಾಡುವಷ್ಟು ಸರಾಗವಾಗಿ ಹಂಚಿಕೊಳ್ಳುತ್ತಾ ಸಾಗುವುದು ಆಪ್ತವೆನಿಸುತ್ತದೆ.
ಇಲ್ಲಿಯ ಲೇಖನಗಳ ರಸಾಸ್ವಾದನೆಗೆ ಪ್ರವೇಶಿಕೆಯಂತಿರುವ ಪ್ರಬುದ್ಧವಾದ ಮೌಲ್ಯಯುತ ಮುನ್ನಡಿಯನ್ನು ಕೇಶವ ಮಳಗಿಯವರು ಬರೆದಿರುವುದು ಪುಸ್ತಕದ ಘನತೆಯನ್ನು ಹೆಚ್ಚಿಸುವಂತಿದೆ ಹಾಗೂ ಪುಸ್ತಕವನ್ನು ಓದಲೇಬೇಕೆಂದು ಪ್ರೇರೇಪಿಸುವಂತಿದೆ.
ಬಯಲುಸೀಮೆಯ ಬಿರು ಬಿಸಲಿನಲ್ಲಿ ಬೆಂದು ತಂಪಾದ ಮಲೆನಾಡಿಗೆ ಬಂದಾಗ ಇಲ್ಲಿಯ ಜಿಟಿಜಿಟಿ ಮಳೆ, ಎಲ್ಲಿಂದ ನೋಡಿದರೂ ಮೈತುಂಬಿದಂತಿದ್ದ ಹಸಿರ ಸೊಬಗು ನನ್ನನ್ನು ಬಹಳವಾಗಿ ಆಕರ್ಷಿಸಿತ್ತು. ಈಗ ಪೂರ್ಣಿಮಾ ಮತ್ತೊಮ್ಮೆ ತನ್ನ ಬರಹಗಳ ಮೂಲಕ ನನ್ನನ್ನು ನನ್ನ ಪ್ರಿಯ ಸಕಲೇಶಪುರವನ್ನು ಒಂದು ಸುತ್ತುಹಾಕಿಸಿದಂತಿದೆ. ಇಲ್ಲಿಯ ವರ್ಷಧಾರೆ, ನಮ್ಮೂರಿನಲ್ಲಿಯೂ ಹರಿಯುತ್ತಿರುವ ಇಲ್ಲಿ ಊರಿನ ಮಧ್ಯವೇ ಹಾದುಹೋಗಿರುವ ನನ್ನ ಪ್ರಿಯ ಹೇಮಾವತಿ ನದಿ, ಹಬ್ಬ-ಜಾತ್ರೆ-ಸಮಾರಂಭಗಳ ಸಂಭ್ರಮ ಎಲ್ಲವೂ ಚಂದವೇ!
ಸಕಲೇಶಪುರದ ಮಳೆಯನ್ನು ವರ್ಣಿಸುತ್ತಾ 'ಶುಭ್ರವಾಗಿ ಮಿಂದ ಹಸಿ ಬಾಣಂತಿಯಂತೆ ಹಸಿರಸಿರಿ' ಎನ್ನುವುದು ಬಹಳ ಮನಸ್ಸಿನಾಳಕ್ಕಿಳಿಯುತ್ತದೆ.
ಜನಪದ ಗೀತ ಗಾಯಕಿಯಾದ ಲೇಖಕಿಯ ಬರಹಗಳ ಮಧ್ಯೆ ಮಿಂಚುವ ಜನಪದ ಗೀತೆಯ ಸಾಲುಗಳು 'ಕರಿಮಣಿಯ ಸರದಲ್ಲಿ ಕೆಂಪು ಹವಳವ ಕೋದಂತೆ' ಎಂಬ ಉಪಮೆಯಂತೆ ಆಕರ್ಷಕ
' ಜಗದ ಜೋಗುಳಕೆ ಅಮ್ಮನ ದನಿಯ ಬಿಟ್ಟು ಬೇರೆ ಮಂತ್ರ ಉಂಟೆ' ಪ್ರಬಂಧದಲ್ಲಿ ಲೇಖಕಿಯ ತಾಯಿಯು 'ಗೊಂಬೆ ಗೊಂಬೆ' ಎನ್ನುವ ರೋಮ್ಯಾಂಟಿಕ್ ಸಿನಿಮಾ ಗೀತೆಯನ್ನು ಜೋಗುಳದ ಹಾಡಾಗಿಸಿದ ಪ್ರಸಂಗವು ನಗುವಿನೊಟ್ಟಿಗೇ ಅವರ ವಾದ ಸರಣಿಯಂತೆ 'ಏಕಾಗಬಾರದು?' ಎಂಬ ಸಹಮತಿಯನ್ನು ನಮ್ಮ ಮನಗಳಲ್ಲಿಯೂ ಉಂಟುಮಾಡುತ್ತದೆ.
'ನನ್ನ ಪ್ರೀತಿಯ ರಜಿಯಾ', 'ಮನೆಗೊಂದು ಹಿರಿ ತಲೆ ಇರಬೇಕು' ಲೇಖನಗಳು ಕಥನ ಶೈಲಿಯಲ್ಲಿದ್ದು ವಿಷಾದವನ್ನು ಮೂಡಿಸುವಂತಿವೆ. ರಜಿಯಾ ಮತ್ತು ರಂಗನಾಯಕಿ ಲೇಖನಗಳಲ್ಲಿ ಬಹಳಷ್ಟು ಸಾಮ್ಯತೆ ಇದ್ದು ಎರಡರಲ್ಲಿಯೂ ಏಕಾಂಗಿಯಾಗಿ ಹೋರಾಡುವ ಹೆಣ್ಣಿನ ನೋವಿನ ಜೀವನದ ಚಿತ್ರಣವಿದೆ.
'ಹಸೆ ಹಾಕೋರ ಮನೆಯಲ್ಲಿ' ಲೇಖನದಲ್ಲಿ ಸೋಬಾನೆ ಪದದ ವೈಶಿಷ್ಟ್ಯವನ್ನು ಬಹಳ ಚೆನ್ನಾಗಿ ಲೇಖಿಸಿದ್ದು 'ಸೋ ಎನ್ನಿರೆ ಸೋಬಾನೆ ಎನ್ನಿರೇ...'ಸಾಲು ಮನಸ್ಸಿನಲ್ಲಿ ರಿಂಗಣಿಸುತ್ತದೆ.
'ಸಾಲು ಸಾಲು ಕಥೆಗಳ ಮೆರವಣಿಗೆ... ಈ ಕಥೆಗಳೆಲ್ಲ ನನ್ನೊಳಗೆ ಬೆಳೆದವೋ ಅಥವಾ ನಾನೇ ಕಥೆಯೊಳಗೆ ಬೆಳೆದೇನೋ ಆದರೆ ಕಥೆಯೊಳಗಿನ ಪಾತ್ರಗಳು ನಾನಾಗುತ್ತಿದ್ದೆ...' ಚಿಕ್ಕವಯಸಿನಲ್ಲಿ ಕೇಳುವ ಕಥೆಗಳು ಹೇಗೆ ಬದುಕನ್ನು ರೂಪಿಸುತ್ತದೆ ಪ್ರಭಾವಿಸುತ್ತದೆ ಎನ್ನುವುದನ್ನು 'ಕೃಷ್ಣ ಎಂದರೆ...' ಲೇಖನದಲ್ಲಿ ಮನಮುಟ್ಟುವಂತೆ ವಿವರಿಸಿದ್ದಾರೆ ಜೊತೆಗೆ ತನ್ನ ಸ್ವಂತ ಜೀವನದಲ್ಲಿ ತಾನು ನೃತ್ಯ, ಅಭಿನಯ ಮುಂತಾದವುಗಳಲ್ಲಿ ನಡೆಸಿದ ಸಾಧನೆಗಳನ್ನು ನೇರಾನೇರವಾಗಿ ಹೇಳುವುದು ಹುಬ್ಬೇರಿಸುವಂತಿದೆ.
'ಪರ್ಸಿನಲ್ಲಿ ದುಡ್ಡು ಕಾಣೆಯಾದ ಆ ದಿನ' ಲೇಖನದಲ್ಲಿ ವಿದ್ಯಾರ್ಥಿನಿಯು ಕಳೆದುಕೊಂಡ ದುಡ್ಡನ್ನು ಒಂದು ಕಥೆಯನ್ನು ಹೇಳುವ ಮೂಲಕ ಪುನಃ ಹಣವನ್ನು ತೆಗೆದುಕೊಂಡವರು ಆಕೆಯ ಬ್ಯಾಗಿನಲ್ಲಿ ಇಡುವಂತೆ ಪ್ರೇರೇಪಿಸಿರುವುದು ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆಯ ಅರಿವನ್ನು ಉಂಟು ಮಾಡುವ ಶ್ಲಾಘನೀಯ ಅಂಶವಾಗಿದೆ. ಇದರಂತೆಯೇ 'ನಡೆಯುವರು ಎಡವದೆ' ಎನ್ನುವ ಲೇಖನದಲ್ಲಿಯೂ ಕಥೆಯ ಮೂಲಕ ಜೀವನ ಪಾಠವನ್ನು ಕಲಿಸುವ ಪ್ರಯತ್ನವಿದೆ.
ಜನಪದ ದಿಗ್ಗಜರು ಕಟ್ಟಿಕೊಟ್ಟ ತವರು ಲೇಖನದಲ್ಲಿ ತವರು ಎಂದರೆ ತಾಯಿ ಮಾತ್ರ ಅಲ್ಲ ತಂದೆಯೂ ಕೂಡ ಎಂದು ಹೇಳುತ್ತಾ ತಂದೆಯ ಬಗೆಗಿನ ತಮ್ಮ ಅಪರಿಮಿತ ಪ್ರೀತಿಯನ್ನು ತೆರೆದಿಡುತ್ತಾರೆ.
'ಮೇಡಂ, ನೀವು ಸಿಸ್ಟರ್ ಅಂತ ಹೇಳಿದ್ರಲ್ಲ ಅದಕ್ಕಾಗಿ' ಎನ್ನುವ ಲೇಖನದಲ್ಲಿ ಜೀವನದ ಬಗ್ಗೆಗಿನ ಸಕಾರಾತ್ಮಕತೆಯನ್ನು ಬಿಂಬಿಸುವ ಘಟನೆ ಇದೆ. ಸಾಮಾನ್ಯವಾಗಿ ಎಲ್ಲ ಕಡೆಯೂ ಮೋಸ ವಂಚನೆಗಳ ಬಗ್ಗೆ ಕೇಳುವ ಈ ದುರಿತ ಕಾಲದಲ್ಲಿ 'ವಿನ್ಸೆಂಟ್ ಅಣ್ಣನಾಗಿ ಸಿಕ್ಕಿದ್ದು..' ಬದುಕಿಗೆ ಭರವಸೆಯನ್ನು ತುಂಬುವ ಲೇಖನ.
ಎಲ್ಲ ತಾಯಂದಿರಿಗೂ ತಮ್ಮ ಮಕ್ಕಳು ಶ್ರೇಷ್ಠವೇ ಹಾಗೂ ಮಕ್ಕಳು ಓದಲು ಅಥವಾ ಉದ್ಯೋಗಕ್ಕಾಗಿಯೋ ತಮ್ಮಿಂದ ದೂರ ಹೋದಾಗ ಆ ಅಗಲಿಕೆ ನೋವು ಕೂಡ ಕಷ್ಟವೇ. ಈ ಭಾವವನ್ನು, ಪತಿ-ಪತ್ನಿಯ ಸ್ವಭಾವ ವೈರುಧ್ಯದ ನಡುವೆ ಮಕ್ಕಳು ಸೇತುವೆಯಾಗಿರುತ್ತಾರೆ ಎಂಬ ಅಂಶವನ್ನು ಹಾಗೂ ತಮ್ಮ ಮಗನ ಬಗೆಗೆ ತಮ್ಮೊಳಗೆ ತುಂಬಿ ತುಳುಕುತ್ತಿರುವ ವಾತ್ಸಲ್ಯವನ್ನು 'ಪ್ರೀತಿ ಮತ್ತು ಶಿಸ್ತಿನ ನಡುವಿನ ಒಂದು ಕೊಂಡಿ' ಪ್ರಬಂಧದಲ್ಲಿ ಲೇಖಕಿಯು ಬಹಳ ಹೃದ್ಯಂಗಮವಾಗಿ ಲೇಖಿಸಿದ್ದಾರೆ.
ಪ್ರಕೃತಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದ ತಮ್ಮ ತಾಯಿಯು ಆ ಕಾಲಕ್ಕೆ ಹೆಣ್ಣುಮಕ್ಕಳ ಗಾರ್ಮೆಂಟ್ಸ್ ಆಗಿದ್ದ ಏಲಕ್ಕಿ ಮಂಡಿಯಲ್ಲಿ ದುಡಿದು ಮಕ್ಕಳನ್ನು ಸಾಕಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರ ಮನಕಲಕುವ ಕಥೆಗಳು ಎಲ್ಲವನ್ನೂ ಹೃದಯಂಗಮವಾಗಿ ಚಿತ್ರಿಸಿದ್ದಾರೆ.
ಬಹುತೇಕ ಬರಹಗಳಲ್ಲಿ ಲೇಖಕಿಯ ಬಾಲ್ಯದ ಸಂಭ್ರಮ ಹಾಗೂ ಇತ್ತೀಚೆಗೆ ಬದಲಾದ ಪರಿಸ್ಥಿತಿಗಳಿಂದ ಉಂಟಾಗುತ್ತಿರುವ ನಿರಾಶಾ ಭಾವವನ್ನು ಕಾಣಬಹುದು.
ಈ ಸಂಕಲನದಲ್ಲಿ ಒಟ್ಟು 39 ಬರಹಗಳಿದ್ದು ಒಂದೊಂದೂ ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟವಾಗಿದ್ದು ಸರಳತೆಯಲ್ಲೇ ಮನಸೆಳೆಯುವಂತಿವೆ. ಅಪಾರವಾದ ಅನುಭವಗಳ ಅಗರವೇ ಆಗಿರುವ ಪೂರ್ಣಿಮಾ ವೈಯಕ್ತಿಕತೆಯಿಂದ ವೈಶಾಲ್ಯತೆಯತ್ತ ಚಲಿಸಿ ಇನ್ನೂ ಉತ್ತಮವಾದ ಕೃತಿಗಳನ್ನು ನೀಡಲಿ ಹಾಗೂ ಮತ್ತಷ್ಟು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಎಲ್ಲರೂ ಓದಿ ಖುಷಿಪಡಬಹುದಾದ ಚಂದದ ಪುಸ್ತಕವನ್ನು ನೀಡಿರುವ ಪೂರ್ಣಿಮಾಗೆ ಹಾಗೂ ಅಚ್ಚುಕಟ್ಟಾಗಿ ಕೃತಿಯನ್ನು ಹೊರತಂದಿರುವ ಹಾಡ್ಲಹಳ್ಳಿ ಪಬ್ಲಿಕೇಷನ್ಸ್ ನ ಚಲಂಗೆ ಹೃತ್ಪೂರ್ವಕ ಅಭಿನಂದನೆಗಳು.
~ಪ್ರಭಾಮಣಿ ನಾಗರಾಜ