Sunday, October 2, 2011

ಮನದ ಅಂಗಳದಿ......... ೬೦. ಕ್ಷಮೆ ಕೇಳುವ ಪರಿ

ಸಾಮಾನ್ಯವಾಗಿ ನಾವು ಏನನ್ನಾದರೂ ತಪ್ಪು ಮಾಡಿದಾಗ ಕ್ಷಮೆಯನ್ನು ಕೇಳುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತೇವೆ. `sorry' (ಸಾರಿ) ಎನ್ನುವ ಪದವನ್ನು ನಾವು ದಿನದಲ್ಲಿ ಹತ್ತಾರು ಬಾರಿ ಅದರ ಅಗತ್ಯವಿರಲಿ-ಬಿಡಲಿ ಹೇಳುತ್ತಲೇ ಇರುತ್ತೇವೆ. ಕೆಲವೊಮ್ಮೆ ಈ ಅಭ್ಯಾಸವು ಹಾಸ್ಯಾಸ್ಪದವೂ ಆಗಿರುತ್ತದೆ. ಒಮ್ಮೆ ಎಸ್.ಎಸ್.ಎಲ್.ಸಿ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರದಲ್ಲಿ ನನ್ನ ಪಕ್ಕವೇ ಕುಳಿತು ಮೌಲ್ಯಮಾಪನ ಮಾಡುತ್ತಿದ್ದ ಶಿಕ್ಷಕಿಯೊಬ್ಬರಿಗೆ ಬಿಕ್ಕಳಿಕೆ ಬರಲಾರಂಭಿಸಿತು. ಪ್ರತಿಭಾರಿಯೂ ಅವರು`sorry' ಎನ್ನುತ್ತಿದ್ದರು. ಅದು ಎಷ್ಟೊಂದು ಕಿರಿಕಿರಿಯಾಯ್ತೆಂದರೆ ಅವರು ಬಿಕ್ಕಳಿಸುವುದಕ್ಕಿಂತಲೂ ಕ್ಷಮೆಕೋರಿಕೆಯೇ ಅಸಹನೀಯವೆನಿಸಲಾರಂಭಿಸಿತು! ಕೆಲವೊಮ್ಮೆ ಈ `sorry'ಎನ್ನುವ ಪದವು ಕೇವಲ ಅಭ್ಯಾಸ ಬಲದಿಂದ ಬರುತ್ತಿದೆಯೋ, ನಿಜಕ್ಕೂ ಕೇಳುತ್ತಿದ್ದಾರೋ ಎಂದು ತಿಳಿದುಕೊಳ್ಳುವುದು ಕಷ್ಟವಾಗುತ್ತದೆ! ಕ್ಷಮೆಯನ್ನು ಕೇಳುವ ರೀತಿಯನ್ನು ರ್ಯಾಂಡಿಪಾಶ್ ಅವರು ತಮ್ಮ ‘ಲಾಸ್ಟ್ ಲೆಕ್ಚರ್’ನಲ್ಲಿ ಬಹಳ ಚೆನ್ನಾಗಿ ತಿಳಿಸಿದ್ದಾರೆ:
‘ಜೀವನದಲ್ಲಿ ನಾವು ಸಾಕಷ್ಟು ತಪ್ಪುಗಳನ್ನು ಮಾಡುತ್ತೇವೆ. ತಪ್ಪು ಮಾಡಿದಾಗ ಕ್ಷಮೆ ಕೇಳುವುದು ಉತ್ತಮ ಅಭ್ಯಾಸ. ಆದರೆ ಒಂದು ಬಾರಿ ಕ್ಷಮೆ ಕೇಳಿದ ನಂತರವೂ ಮತ್ತೆ ಅದೇ ತಪ್ಪನ್ನು ಮಾಡುವುದು ಅಕ್ಷಮ್ಯ ಅಪರಾಧ. ಅರ್ಧ ಮನಸ್ಸಿನಿಂದ ಅಥವಾ ಅಸಭ್ಯತೆಯಿಂದ ಕ್ಷಮೆ ಕೇಳುವುದು ನಿಜಕ್ಕೂ ಹಾನಿಕರ. ಸದಕ್ಕಿಂತ ಕ್ಷಮೆ ಕೇಳದಿರುವುದೇ ಮೇಲು. ಈ ರೀತಿ ಅಸಭ್ಯತೆಯಿಂದ ಕ್ಷಮೆ ಕೇಳುವುದು ನಾವು ಮತ್ತೊಬ್ಬರಿಗೆ ಮಾಡುವ ಅಪಮಾನವೆಂದೇ ನನ್ನ ಭಾವನೆ. ನೀವು ಮತ್ತೊಬ್ಬರೊಂದಿಗೆ ವ್ಯವಹರಿಸುವಾಗ ತಪ್ಪುಗಳಾದರೆ ಅದು ನಿಮ್ಮಿಂದ ಸಂಬಂಧಕ್ಕೆ ತಗುಲುವ ಸೋಂಕು. ಪೂರ್ಣ ಮನಸ್ಸಿನಿಂದ ಕೇಳುವ ಕ್ಷಮೆ ಆ ಸೋಂಕಿಗೆ ಜೀವನಿರೋಧಕ (ಆಂಟಿಬಯೋಟಿಕ್) ಇದ್ದಂತೆ. ಅಂತೆಯೇ ಅರ್ಧ ಮನಸ್ಸಿನಿಂದ ಅಥವಾ ಅಸಭ್ಯತೆಯಿಂದ ಕೇಳುವ ಕ್ಷಮೆ ಉರಿಯುವ ಗಾಯದ ಮೇಲೆ ಉಪ್ಪು ಸುರಿದಂತೆ.
ನನ್ನ ತರಗತಿಯಲ್ಲಿ ಎಲ್ಲ ವಿದ್ಯಾರ್ಥಿಗಳೂ ಯಾವಾಗಲೂ ತಮ್ಮ ತಂಡದೊಂದಿಗೆ ಕೆಲಸ ಮಾಡಬೇಕಾಗಿತ್ತು. ಹೀಗೆ ಮಾಡುವಾಗ ಅನೇಕ ವಿಚಾರಗಳಿಗೆ ವಿದ್ಯಾರ್ಥಿಗಳಲ್ಲಿ ಸಂಘರ್ಷ ಉಂಟಾಗುತ್ತಿತ್ತು. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ನಾನು ನೀಡುತ್ತದ್ದ ಕೆಲಸವನ್ನು ತಂಡದಲ್ಲಿದ್ದ ಕೆಲವೇ ಜನ ಮಾತ್ರ ಕಷ್ಟಪಟ್ಟು ಮಾಡುತ್ತಿದ್ದರು. ಇತರೆ ಕೆಲವರು ಸೋಮಾರಿಗಳಾಗಿ ಕಾಲಹರಣ ಮಾಡುತ್ತಿದ್ದರು. ಇದೇ ಸಂಘರ್ಷಕ್ಕೆ ಮುಖ್ಯಕಾರಣವಾಗಿತ್ತು. ಹಿಗಾಗಿ ಸೆಮಿಸ್ಟರ್ ನ ಮಧ್ಯದಲ್ಲಿ ಗದ್ದಲಗಳು, ನಂತರ ಕ್ಷಮೆಕೇಳುವುದು ಸರ್ವೇ ಸಾಮಾನ್ಯ ಸಂಗತಿಯಾಗಿತ್ತು. ಹಾಗೆ ಕ್ಷಮೆ ಕೇಳದೇ ವಿದ್ಯಾರ್ಥಿಗಳಲ್ಲಿ ಸಂಧಾನ ಏರ್ಪಡದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆಗಳಿದ್ದವು. ಆದ್ದರಿಂದ ಇದನ್ನು ಪರಿಹರಿಸಲು ಆಗಿಂದಾಗ್ಗೆ ನಾನು ದೀರ್ಘ ಭಾಷಣಗಳನ್ನು ಮಾಡಬೇಕಾದ ಸಂದರ್ಭಗಳು ಎದುರಾಗುತ್ತಿದ್ದವು.
ನಾನು ವಿದ್ಯಾರ್ಥಿಗಳಿಗೆ ಅರ್ಧಮನಸ್ಸಿನ ಕ್ಷಮಾಪಣೆಯಲ್ಲಿ ಎರಡು ಬಗೆ ಇರುತ್ತದೆ ಎಂದು ಹೇಳುತ್ತಿದ್ದೆ.
ಮೊದಲನೆಯದು: ದಯವಿಟ್ಟು ಕ್ಷಮಿಸಿ, ನಾನು ಮಾಡಿದ ಕೆಲಸದಿಂದ ನಿಮಗೆ ಬೇಸರವಾಗಿದೆ ಎಂದು ತಾವು ಭಾವಿಸಿದ್ದೀರಿ.( ಈ ರೀತಿ ಕ್ಷಮೆ ಕೋರುವುದು ನೀವು ಅವರ ಭಾವನೆಗಳಿಗೆ ಸ್ಪಂದಿಸುವ ಪ್ರಯತ್ನವಷ್ಟೇ. ಆದರೆ ಇದರಿಂದ ಅವರಿಗಾದ ನೋವಿಗೆ ಯಾವುದೇ ಶಮನ ದೊರಕಿದಂತಾಗುವುದಿಲ್ಲ.)
ಎರಡನೆಯದು: ನಾನು ಮಾಡಿದ ತಪ್ಪಿಗೆ ನಿಮ್ಮಲ್ಲಿ ಕ್ಷಮೆ ಕೋರುತ್ತೇನೆ. ಆದರೆ ಈ ತಪ್ಪಿನಲ್ಲಿ ನಿಮ್ಮ ಪಾಲೂ ಇದೆ. ಹಾಗಾಗಿ ನೀವೂ ಕ್ಷಮೆ ಕೇಳಬೇಕು. (ಇದು ಕ್ಷಮೆ ಕೋರುವ ವಿಧಾನವಲ್ಲ. ಬದಲಾಗಿ ಮತ್ತೊಬ್ಬರು ಕ್ಷಮೆ ಕೇಳಲಿ ಎಂದು ನಿರೀಕ್ಷಿಸುವ ವಿಧಾನ.)
ಒಳ್ಳೆಯ ರೀತಿಯ ಕ್ಷಮೆ ಯಾಚನೆ ಮೂರು ಅಂಶಗಳನ್ನು ಒಳಗೊಂಡಿರುತ್ತದೆ.
೧. ನಾನು ತಪ್ಪು ಮಾಡಿದ್ದೇನೆ.
೨. ನಿಮ್ಮನ್ನು ನೋಯಿಸಿದೆನಲ್ಲಾ ಎಂಬ ನೋವು ನನ್ನಲ್ಲಿದೆ.
೩. ನನ್ನ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ಮಾಡಿಕೊಡಿ.
ನಿಜ.! ಇದರಲ್ಲಿ ಮೂರನೇ ಅಂಶವನ್ನು ಕೆಲವೊಂದು ಬಾರಿ ಜನ ದುರುಪಯೋಗಪಡಿಸಿಕೊಳ್ಳುತ್ತಾರೆ. ಆದರೆ ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಮಾಡುವ ಪ್ರಯತ್ನಕ್ಕೆ ಬಹುತೇಕ ಮಂದಿ ನಿಮ್ಮನ್ನು ಖಂಡಿತ ಅಭಿನಂದಿಸುತ್ತಾರೆ. ಅವರು ಅತ್ಯಂತ ಸರಳವಾಗಿ ನಿಮ್ಮ ತಪ್ಪನ್ನು ತಿದ್ದಿಕೊಳ್ಳುವುದು ಹೇಗೆ ಎಂಬುದನ್ನು ನಿಮಗೆ ತಿಳಿಸುತ್ತಾರೆ. ಮುಂದೆ ಉತ್ತಮ ಕೆಲಸಗಳನ್ನು ಮಾಡಲು ನಿಮ್ಮೊಂದಿಗೆ ಕೈ ಜೋಡಿಸುತ್ತಾರೆ.
ಒಮ್ಮೊಮ್ಮೆ ವಿದ್ಯಾರ್ಥಿಗಳು, ‘ನಾವು ಕ್ಷಮೆ ಕೇಳಿದ ನಂತರವೂ ಮತ್ತೊಬ್ಬರು ಕ್ಷಮೆ ಕೇಳದಿದ್ದರೆ ಏನು ಮಾಡುವುದು?’ ಎಂದು ನನ್ನನ್ನು ಪ್ರಶ್ನಿಸುತ್ತಿದ್ದರು.
‘ಆದರೆ ಇದು ನಿಮಗೆ ಸಂಬಂಧಿಸಿದ ವಿಚಾರವಲ್ಲ. ನೀವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ.’ ಎಂದು ನಾನು ಉತ್ತರಿಸುತ್ತಿದ್ದೆ.
ಕೆಲವೊಮ್ಮೆ ನೀವು ಮತ್ತೊಬ್ಬರನ್ನು ಕ್ಷಮೆ ಯಾಚಿಸಿದಾಗ, ನಿಮ್ಮ ಮಾತುಗಳು ಸರಿಯಾಗಿದ್ದರೂ, ಮನಃಪೂರ್ವಕವಾಗಿ ಕ್ಷಮೆ ಕೋರಿದ್ದರೂ ಅವರಿಂದ ಯಾವ ಪ್ರತಿಕ್ರಿಯೆಯೂ ಬಾರದೇ ಇರಬಹುದು. ಅದಕ್ಕೆ ಕಾರಣ ನಿಮ್ಮ ಕ್ಷಮೆಗೆ ಪ್ರತಿಕ್ರಿಯಿಸಲು ಅದು ಸರಿಯಾದ ವೇದಿಕೆಯಲ್ಲ ಎಂಬ ಭಾವನೆ ಅವರಿಗಿರಬಹುದು. ಆದ್ದರಿಂದ ತಾಳ್ಮೆಯಿಂದಿರಿ. ಅನೇಕ ಬಾರಿ ನನ್ನನ್ನು ಒಂದು ಗುಂಪಿನ ವಿದ್ಯಾರ್ಥಿಗಳು ಬಂದು ಕ್ಷಮೆ ಕೇಳುತ್ತಾರೆ. ಅದಾದ ಎಷ್ಟೋ ದಿನಗಳ ನಂತರ ಮತ್ತೊಂದು ಗುಂಪಿನ ವಿದ್ಯಾರ್ಥಿಗಳು ಕ್ಷಮೆ ಯಾಚಿಸುವರು. ಇಂತಹ ಸಂದರ್ಭಗಳಲ್ಲಿ ನಿಮ್ಮ ತಾಳ್ಮೆಯನ್ನು ಜನ ಶ್ಲಾಘಿಸುವರು ಮತ್ತು ಅದಕ್ಕೆ ತಕ್ಕ ಪ್ರತಿಫಲವನ್ನು ನೀವು ಪಡೆದೇ ಪಡೆಯುವಿರಿ.’
ಪರಸ್ಪರ ಸೌಹಾರ್ದತೆಯಿಂದ ಇರಬೇಕಾದರೆ ಕ್ಷಮಾಗುಣ ಅಗತ್ಯವಾಗುತ್ತದೆ. ತಪ್ಪುಮಾಡಿದಾಗ ಕ್ಷಮೆ ಕೇಳುವುದನ್ನು ಅಪಮಾನ ಎಂದು ಭಾವಿಸುವ ಅಗತ್ಯವಿಲ್ಲ. ಕ್ಷಮೆ ಕೇಳುವಾಗ ನಾಟಕೀಯವಾಗಿ ಅಥವಾ ಕಾಟಾಚಾರಕ್ಕೆ ಕೇಳದೇ ಹೃದಯಾಂತರಾಳದಿಂದ, ಮನಃಪೂರ್ವಕವಾಗಿ ಕೇಳುವುದನ್ನು ರೂಢಿಸಿಕೊಳ್ಳುವ ಮೂಲಕ ನಮ್ಮ ಘನತೆಯನ್ನು ಕಾಪಾಡಿಕೊಳ್ಳೋಣ.

10 comments:

  1. ಮೇಡಂ;ನನ್ನ ದೃಷ್ಟಿಯಲ್ಲಿ ಕ್ಷಮೆ ಕೇಳುವುದಕ್ಕೆ ಅರ್ಥ ಬರುವುದು ನಮ್ಮ ಅಹಂಕಾರ ಬಿಟ್ಟು ಕ್ಷಮೆ ಕೇಳಿದಾಗ.ಅಹಂಕಾರದಿಂದ ಕೇಳಿದ ಕ್ಷಮೆ ಕಾಟಾಚಾರದ ಕ್ಷಮೆಯಾಗುತ್ತದೆ."ನಾನು ಕ್ಷಮೆ ಕೇಳಿದ್ದೇನೆ, ನನ್ನದೇನೂ ತಪ್ಪಿಲ್ಲ"ಎಂದು ಅಹಂಕಾರಕ್ಕೆ ಮತ್ತಷ್ಟು ಪುಷ್ಟಿ ಕೊಡುತ್ತದೆ.ನನ್ನ ಬ್ಲಾಗಿನಲ್ಲಿ "ಇಲ್ಲಿ ಮೌನವೇ ಮದ್ದು"ಎನ್ನುವ ಲೇಖನವಿದೆ.ನಿಮ್ಮ ಅಭಿಪ್ರಾಯ ತಿಳಿಸಿ.ನಮಸ್ಕಾರ.

    ReplyDelete
  2. ಬಹಳ ಪರಿಣಾಮಕಾರಿಯಾದ ಬರಹ. 'sorry' ಎಂದು ಪದೇ ಪದೇ ಕೇಳುವುದರಿಂದ ಎಂತಹ ಕಿರಿಕಿರಿ ಎಂಬುದು ಈಗ ಮನವರಿಕೆಯಾಯಿತು.

    ನಿಮ್ಮ ಅನುಮತಿ ಇಲ್ಲದೆ, ಈ ಬರಹವನ್ನು ಪ್ರಿಂಟ್ ಔಟ್ ತೆಗೆದು ನಮ್ಮ ಆಫೀಸಿನ ನೋಟಿಸ್ ಬೋರ್ಡಿಗೆ ಹಾಕಿದ್ದೇನೆ. "I'm sorry!" :-)

    ReplyDelete
  3. nija nimma matu... sorry keLuvudu sulabha.. adanna saripadisodu kasta... keLuva modalu yochisi kelabeku

    ReplyDelete
  4. ಸಾರಿ ಎನ್ನುವುದು ಒ೦ದು ಸುಲಭ-ಪಾರಾಗುವಿಕೆಯೆ೦ಬ ಕ್ರಿಯೆ. ಉತ್ತಮ ವಿಚಾರ ಮ೦ಡಿಸಿದ್ದೀರಿ. ಅಭಿನ೦ದನೆಗಳು.

    ಅನ೦ತ್

    ReplyDelete
  5. ಹಾಂ ನಿಮ್ಮ ಮಾತು ಸತ್ಯ, ಪರಿಣಾಮಕಾರಿಯಾಗಿದೆ ಬರಹ.....

    ReplyDelete
  6. ಮೇಡಂ..ಸಾರೀ ಅನ್ನೋದನ್ನ ಹೇಗೆ ಯಾವ ರೀತಿ ಬಳಸಬೇಕೆಂಬುದರ ಬಗ್ಗೆ ಉತ್ತಮ ಬರಹ...ಜೀವನದಲ್ಲಿ ಅಳವಡಿಸಬೇಕಾದ ಸದಚಾರಗಳು ಬಳಷ್ಟಿವೆ...ಅದು ಇಂತಹ ಸಣ್ಣ ಪುಟ್ಟ ವಿಚಾರಗಳಿ0ದಾನೆ ಶುರುವಾಗತ್ತೆ ಅಲ್ವ...ಚೆನ್ನಾಗಿದೆ..

    ReplyDelete
  7. @ಡಾ. ಕೃಷ್ಣ ಮೂರ್ತಿಯವರೆ,
    `ಅಹಂಕಾರದಿಂದ ಕೇಳಿದ ಕ್ಷಮೆ ಕಾಟಾಚಾರದ ಕ್ಷಮೆಯಾಗುತ್ತದೆ.' ಎನ್ನುವ ಉತ್ತಮ ಅ೦ಶ ತಿಳಿಸಿ, ನನ್ನ ಲೇಖನವನ್ನು ಮೆಚ್ಚಿ ಆತ್ಮೀಯವಾಗಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ನಿಮಗೆ ಹೃತ್ಪೂರ್ವಕ ನಮನಗಳು.ನಿಮ್ಮ ಬ್ಲಾಗ್ ನಲ್ಲಿ "ಇಲ್ಲಿ ಮೌನವೇ ಮದ್ದು"ಲೇಖನ ಓದಿದೆ ಸರ್. ಮಾರ್ಗದರ್ಶಕ ಲೇಖನ. ಧನ್ಯವಾದಗಳು. ಬರುತ್ತಿರಿ.

    ReplyDelete