ನಮ್ಮ ಕನ್ನಡ ಸಾಹಿತ್ಯ ಸಂಪತ್ತನ್ನು ಅಕ್ಷರ ಕಲಿತವರು ಮಾತ್ರ ಸಮೃದ್ಧಗೊಳಿಸಿದ್ದಾರೆ ಎಂದುಕೊಳ್ಳುವಂತಿಲ್ಲ. ಓದುಬರಹವನ್ನು ಅರಿಯದ ಜಾನಪದರು ನೀಡಿದ ಕೊಡುಗೆಯೂ ಅಪಾರ. ಅವರು ಹಾಡಿದ ಪದಗಳು, ಆಡಿದ ಮೌಲ್ಯಯುತ ಮಾತುಗಳನ್ನು ಅಕ್ಷರರೂಪಕ್ಕಿಳಿಸಿ ದಾಖಲಿಸಿದವರೂ ಅಭಿನಂದನಾರ್ಹರು. ಹಾಗೆಯೇ ನಿರಕ್ಷರಕುಕ್ಷಿಗಳೆಂದು ಲೋಕದ ದೃಷ್ಟಿಯಲ್ಲಿ ಕಂಡುಬಂದರೂ ಸ್ವಯಂ ಯೋಗಸಿದ್ಧಿಯನ್ನು ಹೊಂದಿದ್ದಂತಹ ಮಹಾನ್ ಚೇತನಗಳೂ ಈ ಭುವಿಯನ್ನು ಬೆಳಗಿದ್ದಾರೆ. ಅಂಥವರಲ್ಲಿ ಒಬ್ಬರಾದ ಮುಕುಂದೂರು ಸ್ವಾಮಿಗಳ ಬಗ್ಗೆ ಬೆಳಗೆರೆ ಕೃಷ್ಣಶಾಸ್ತ್ರಿಯವರು ಬರೆದ, ‘ಯೇಗ್ದಾಗೆಲ್ಲಾ ಐತೆ’ ಎನ್ನುವ ಪುಸ್ತಕದ ಬಗ್ಗೆ ಅಲ್ಲಲ್ಲಿ ಅಲ್ಪಸ್ವಲ್ಪ ಓದಿದ ನಂತರ ಆ ಪುಸ್ತಕವನ್ನು ಪೂರ್ತಿಯಾಗಿ ಓದುವ ಅಭಿಲಾಶೆಯುಂಟಾಯಿತು. ಇದನ್ನು ಅರಿತ ಮಗಳು ಇತ್ತೀಚೆಗೆ ಪುಸ್ತಕವನ್ನು ತಂದುಕೊಟ್ಟಳು. ಬೆಂಗಳೂರಿಗೆ ವೃತ್ತಿಗೆ ಸಂಬಂಧಿಸಿದ ಒಂದು ಸಭೆಯಲ್ಲಿ ಭಾಗವಹಿಸಲು ಹೋಗಬೇಕಾಗಿದ್ದುದರಿಂದ ಬಸ್ಸಿನಲ್ಲಿ ಓದಲು ಇಟ್ಟುಕೊಂಡೆ. ಅದನ್ನು ಓದುತ್ತಾ ಸಾಗಿದಂತೆ ಹೇಗೆ ಆವರಿಸಿಕೊಂಡಿತೆಂದರೆ ನನ್ನನ್ನೇ ಮರೆತು ಲೀನವಾದೆ! ಲೇಖಕರೇ ಹೇಳುವಂತೆ ‘ಅವರ ಲೋಕಾನುಭವ, ಆಧ್ಯಾತ್ಮಿಕ ದೃಷ್ಟಿ, ಅವರದೇ ರೀತಿಯ ವಿಚಾರ, ನಿರೂಪಣಾ ವಿಧಾನ, ಸದಾ ನಕ್ಕುನಗಿಸುವ ಸಹಜ ಆನಂದ, ಎಲ್ಲದರಲ್ಲೂ ಅವರದು ವಿಚಿತ್ರ ರೀತಿ.’
ಯಾವುದೇ ಕಾಲದಲ್ಲಿಯೂ ಒಬ್ಬ ಅವಧೂತ ಈ ಭೂಮಿಯ ಮೇಲೆ ಉದಯಿಸಿದಾಗಲೆಲ್ಲಾ ಆತನನ್ನು ಖಂಡಿಸುವ, ಅವಹೇಳನ ಮಾಡುವ, ಅವಮಾನಿಸುವ ಒಂದು ಗುಂಪು ಸದಾ ಕಾರ್ಯತತ್ಪರವಾಗಿದ್ದುದನ್ನು ಚರಿತ್ರೆಯು ಸಾರುತ್ತಲೇ ಬಂದಿದೆ. ಅಂಥಾ ಸಂದರ್ಭಗಳಲ್ಲಿ ಕಬ್ಬನ್ನು ಹಿಂಡಿದಾಗ ಸಿಹಿಯಾದ ರಸವು ಬರುವಂತೆ ಅವರು ತಮ್ಮ ವಿಶೇಷ ಜ್ಞಾನ ಸಂಪತ್ತನ್ನು ಹೊರಹೊಮ್ಮಿಸಿ ಜಗದ್ವಂದ್ಯರಾಗಿದ್ದಾರೆ. ಮುಕುಂದೂರು ಸ್ವಾಮಿಗಳನ್ನು ದೇವನೂರಿನ ಕನ್ನಡ ಸಂಘದವರು ಗೀತಾ ಜಯಂತಿಯನ್ನು ಆಚರಿಸುವ ಸಂದರ್ಭದಲ್ಲಿ ಅವಮಾನಿಸಲು ಪ್ರಯತ್ನಿಸಿದ ಸನ್ನಿವೇಶವೊಂದು ಈ ರೀತಿ ಇದೆ:
‘ಏನಾದರೂ ಒಂದು ಸಮಯ ನೋಡಿ ಈ ಸನ್ಯಾಸಿಗೆ ಚೆನ್ನಾಗಿ ಅವಮಾನ ಮಾಡಿ, ಈ ಶಾಸ್ತ್ರಿ ಮೇಷ್ಟ್ರಿಗೆ ಛೀಮಾರಿಹಾಕಿ ಬುದ್ಧಿ ಕಲಿಸಬೇಕು....’ ಎಂದು ದೇವನೂರಿನ ಜನ ಮಾತನಾಡಿಕೊಳ್ಳುತ್ತಿದ್ದುದನ್ನು ಲೇಖಕರು ಆಕಸ್ಮಿಕವಾಗಿ ಕೇಳಿಸಿಕೊಂಡು ದೇವನೂರಿಗೆ ಇನ್ನೆಂದೂ ಸ್ವಾಮಿಗಳನ್ನು ಕರೆತರಬಾರದು ಎಂದು ನಿಶ್ಚಯಿಸಿರುತ್ತಾರೆ. ಆದರೆ ಅವರ ಇಚ್ಛೆಗೆ ಹಾಗೂ ತಡೆಯುವ ಪ್ರಯತ್ನಕ್ಕೆ ವಿರುದ್ಧವಾಗಿ sಸ್ವಾಮಿಯವರೇ ಗೀತೋಪನ್ಯಾಸ ನೀಡುವಂತೆ ಸಂಚು ರೂಪಿಸುತ್ತಾರೆ! ಕನ್ನಡ ಸಂಘದ ಕಾರ್ಯದರ್ಶಿಯಾಗಿದ್ದು, ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ಲೇಖಕರಿಗೆ ಇಕ್ಕಟ್ಟಾಗುತ್ತದೆ. ಅವರೇ ಹೇಳುವಂತೆ:
ಒಬ್ಬರು ನನ್ನಲ್ಲಿಗೆ ಬಂದು, ’ಸ್ವಾಮಿಗಳಿಗೆ ಅರ್ಥವೇ ಆಗಲಿಲ್ಲವೆಂದು ತೋರುತ್ತದೆ. ಉಪನ್ಯಾಸ ಮಾಡಬೇಕೆಂದು ನೀವೇ ಹೇಳಿ,’ ಎಂದು ನಕ್ಕಾಗ ನನ್ನ ಬೆನ್ನಿಗೆ ಬರೆ ಹಾಕಿದಂತಾಯ್ತು. ಗತ್ಯಂತರವಿಲ್ಲದೇ ಸ್ವಾಮಿಗಳನ್ನು ಸಮೀಪಿಸಿ, ‘ನೀವೇ ಮಾತನಾಡಬೇಕಂತೆ,’ ಎಂದೆ.
‘ನೀನೊಳ್ಳೆ ಮೇಷ್ಟ್ರಾದೆ. ಏನೂ ಹೇಳಿಕೊಡದೇನೇ ಈಗಲೇ ಪಾಠ ಒಪ್ಪಿಸು ಅಂದ್ರೆ ಯೆಂಗೆ?’ ಎನ್ನುತ್ತಿದ್ದಂತೆಯೇ ಜನ ಗೊಳ್ಳೆಂದು ನಕ್ಕರು. ನನಗೋ ಹೊಟ್ಟೆಯಲ್ಲಿ ಬಾಕು ಹಾಕಿದಂತೆ.
‘ಹೂಂ...ಇದಕ್ಕೇ ಮತ್ತೆ ಹುಡುಗ್ರು ಸ್ಕೂಲ್ ಗೆ ಹೋಗು ಅಂದ್ರೆ ಅಳ್ತಾವೆ!’
ಸಭಿಕರೆಲ್ಲಾ ಮತ್ತೆಮತ್ತೆ ನಕ್ಕರು. ನನಗೆ ತಲೆ ಸುತ್ತಿದಂತಾಯ್ತು.
‘ಈಗೇನ್ಮಾಡ್ಬೇಕು ಹೇಳಪ್ಪ, ನೀನೊಳ್ಳೇನಾದೆ,’ ನಕ್ಕರು.
‘ನೀವು ಗೀತೋಪನ್ಯಾಸ ಮಾಡ್ಬೇಕಂತೆ,’ ಎಂದೆ ಹೆಡ್ಡನೊಬ್ಬನಿಗೆ ಹೇಳುವಂತೆ.
‘ಹಂಗಂದ್ರೇನು ಒಂದಿಷ್ಟು ಹೇಳಿಕೊಡೋ ಮಾರಾಯ! ನೀನು ಒಳ್ಳೇ ಮೇಷ್ಟ್ರಾದೆಲ್ಲಾ,’ ನಗುತ್ತಾ ನುಡಿದರು. ಗತ್ಯಂತರವಿಲ್ಲದೇ ಹೀಗೆ ಹೇಳಿದೆ: ‘ಮಹಾಭಾರತದಲ್ಲಿ ಪಾಂಡವರು, ಕೌರವರು ಯುದ್ಧ ಮಾಡಿದರು.......... ಅರ್ಜುನ ತನ್ನ ತಾತ, ಗುರುಗಳು, ಸ್ನೇಹಿತರು ಸಂಬಂಧಿಕರ ವಿರುದ್ಧ ಯುದ್ಧ ಮಾಡುವುದಿಲ್ಲ ಎಂದು ಯುದ್ಧಭೂಮಿಯಲ್ಲಿ ದುಃಖಿಸಿದಾಗ ಕೃಷ್ಣ ಏನೇನು ಹೇಳಿದ, ಅರ್ಜುನ ಹೇಗೆ ಯುದ್ಧಕ್ಕೆ ಒಪ್ಪಿಕೊಂಡ’ ಎಂಬ ವಿಚಾರವನ್ನೇ ಭಗವದ್ಗೀತೆ ಅಂತಾರೆ. ಆ ವಿಚಾರವನ್ನೇ ನೀವೀಗ ಈ ಸಭೆಗೆ ತಿಳಿಸಬೇಕಂತೆ’ ಎಂದೆ ಬೇಸರದಿಂದ. ಬಲೆ ಒಡ್ಡಿದವರೆಲ್ಲಾ ಜಯಶಾಲಿಗಳಾಗಿದ್ದರು. ನನಗೋ ಸಹಿಸಲಾರದ ತಳಮಳ.
‘ಓಹೋ! ಅದೇನಪ್ಪಾ! ಭಾರೀ ದೊಡ್ಡ ವಿಚಾರ! ಹೇಳಿದೋನು ಶ್ರೀಕೃಷ್ಣ-ಕೇಳಿದವನು ಅರ್ಜುನ. ಅದೇನ್ ಪುಗಸಟ್ಟೆ ಮಾತೇ!’ ಜನರ ನಗುವಿನ ನಡುವೆ ತಾವು ಕುಳಿತ ತೋಳಿನ ಕುರ್ಚಿಯನ್ನು ತೋರಿಸಿ, ‘ಇವನೇಕೋ ಒಂದೀಟು ಕಿರಿಕಿರಿ ಮಾಡ್ತಾನಪ್ಪಾ. ಇವ್ನು ಬ್ಯಾಡ. (ಮೇಜಿನ ಮೇಲೆ ಕೈಯಾಡಿಸಿ) ಇವ್ನೊಳ್ಳೆ ಆರಾಮಾಗಿದಾನೆ. ಇವ್ನ ಮೇಲೆ ಕುಂತ್ಕೋಬಹುದೋ,’ ಎಂದು ಅಧ್ಯಕ್ಷರ ಅನುಮತಿ ಪಡೆದು ಅದರ ಮೇಲೆ ಪದ್ಮಾಸನದಲ್ಲಿ ಕುಳಿತು ತಮ್ಮ ಬಟ್ಟೆಗಳನ್ನು ಸರಿಪಡಿಸಿಕೊಳ್ಳುತ್ತಾ ತಮಗೆ ತಾವೇ, ‘ಎಲೇ, ಇದು ಇಸ್ಕೋಲು, ಸರಿಯಾಗಿ ಪಾಠ ಒಪ್ಸು, ತಪ್ಪಿದರೆ ಛಡಿ ಏಟು ಬೀಳ್ತಾವೆ,’ ಎಂದಾಗ ಜನ ಬಿದ್ದು ಬಿದ್ದು ನಕ್ಕರು.
ಸ್ವಾಮಿಗಳು ನಿಜಗುಣರ ಒಂದು ಹಾಡನ್ನು ತಾಳ, ಲಯಬದ್ಧವಾಗಿ, ಅರ್ಥಪೂರ್ಣವಾಗಿ ಅಂಗನ್ಯಾಸ, ಕರನ್ಯಾಸಗಳೊಂದಿಗೆಹಾಡಿದರು. ಅವರು ಹಾಗೆ ಶರೀರದ ಭಾಗಗಳನ್ನು ಮುಟ್ಟಿ ತೋರಿಸಿ ಹಾಡುತ್ತಿದ್ದರೆ ಮತ್ತೆ ಯಾವ ವಿವರಣೆಯೂ ಬೇಕಾಗಿರಲಿಲ್ಲ. ಆದರೂ ಅದರ ವಾಕ್ಯಾರ್ಥ, ಭಾವಾರ್ಥ, ಲಕ್ಷ್ಯಾರ್ಥಗಳನ್ನು ವಿವರಿಸುತ್ತಾ, ‘ಲೋಕಹಿತವೇ ಧರ್ಮ, ಧರ್ಮದ ಉಳಿವಿಗಾಗಿ ಕರ್ಮ. ನಿಷ್ಕಾಮದಲ್ಲಿ ತಾನಿಲ್ಲ, ಆದ್ದರಿಂದ ಕರ್ಮ ನನಗೆ ಅಂಟುವುದಿಲ್ಲ ಎಂದು ಸುಮ್ಮನೆ ಇರಕೂಡದು. ಅದು ಬೇಜವಾಬ್ಧಾರಿ, ಸೋಮಾರಿತನ ಆಗುತ್ತೆ. ರಾಜ್ಯದ ಆಸೆ ಬೇಡಂದರೆ ಹೋಗ್ಲಿ, ಧರ್ಮ ಉಳಿಯುವುದೂ ಬೇಡವೇ? ಧರ್ಮ ಉಳಿಯಬೇಕು ಎಂದರೆ ಅಧರ್ಮವನ್ನು ಹೊಡೆದು ಹಾಕಬೇಕಲ್ಲಾ?! ಇದೆಲ್ಲಾ ಬಿಟ್ಟು ನನಗ್ಯಾಕೆ ಎಂದರೆ ಅದು ನಿಷ್ಕರ್ಮ ಆಗುತ್ತೆ. ಆಗ ಅದು ದುಷ್ಕರ್ಮವೂ ಆದೀತು. ಆದ್ದರಿಂದ ಲೋಕಹಿತಕ್ಕಾಗಿ ದುಷ್ಟತನವನ್ನು ಹೊಡೆದು ಹಾಕಲೇ ಬೇಕು. ಅದರಿಂದ ಪಾಪದ ಲೇಪ ಇಲ್ಲ......’ ಹೀಗೆ ಮತ್ತೆ ಹಾಡು, ಅದರ ವಿವರಣೆ, ಮತ್ತೊಂದು ಹಾಡು-ಗಾದೆಗಳು ಅದರ ವಿವರಣೆ ಹೀಗೆಯೇ ಸಾಗುತ್ತಿರುವಾಗ ಒಂದು ಪೆಟ್ರೋಮ್ಯಾಕ್ಸ್ ದೀಪ ತಂದಿಡುತ್ತಾರೆ. ಗಂಭೀರವಾಗಿ ಆಲಿಸುತ್ತಲಿದ್ದ ಜನರಿಗೆ ಆಗ ಕತ್ತಲಾಗಿರುವುದು ತಿಳಿಯುತ್ತದೆ! ‘ಹೊತ್ತೇ ಗೊತ್ತಾಗಲಿಲ್ಲವಲ್ಲಾ, ಆಗಲೇ ಕತ್ತಲಾಗಿಬಿಟ್ಟಿದೆ!’ ಎಂದು ಸಭಿಕರು ಮಾತನಾಡಿದಾಗ-
“ಎಲೇ! ಕೇಳೋರು ಕೇಳೇ ಕೇಳ್ತಾರೆ ಅಂದ್ರೆ ಯೇಳೇ ಯೆಳ್ತೀಯಲ್ಲೋ, ಸಾಕು ಎದ್ದು ನಡಿ,’ ಎಂದು ತಮ್ಮ ತೊಡೆಗೆ ಒಂದು ಏಟು ಕೊಟ್ಟು ಮೇಜಿನಿಂದ ಧುಮುಕಿ ಹೊರಗೆ ಓಡಲಾರಂಭಿಸುತ್ತಾರೆ! ಸಭೆಯಲ್ಲಿದ್ದ ಜನರೆಲ್ಲಾ ಕೂಗುತ್ತಾ, ಕೇಕೇ ಹಾಕುತ್ತಾ ಅವರ ಹಿಂದೇ ಓಡುತ್ತಾರೆ!....... ಸ್ವಲ್ಪ ಸಮಯದ ನಂತರ ಸಾಮೂಹಿಕ ಭಜನೆ ಕೇಳಿಬರುತ್ತದೆ. ಸ್ವಾಮಿಗಳೇ ಹೇಳಿಕೊಡುತ್ತಾ ಕುಣಿಯುತ್ತಾ ಮುಂದೆ ಬರುತ್ತಿರುತ್ತಾರೆ. ಹಿಂದೆ ನೂರಾರು ಮಂದಿ ಕುಣಿಯುತ್ತಾ, ಹಾಡುತ್ತಾ ಬರುತ್ತಿರುತ್ತಾರೆ! ಎಲ್ಲರೂ ಶಾಲೆಯ ಮುಂದಿನ ಬಯಲಿನಲ್ಲಿ ಸೇರಿ ಸ್ವಾಮಿಗಳು ನಿಂತಕೂಡಲೇ ರಾಘವ ಅಯ್ಯಂಗಾರರು ಅವರ ಪಾದಕ್ಕೆ ತಲೆಯಿಟ್ಟು ದೀರ್ಘದಂಡ ಪ್ರಣಾಮ ಮಾಡಿ, ‘ನಾನು ಅಹಂಕಾರಿ, ನಿಮ್ಮನ್ನು ಏನೇನೋ ಅಂದು ಆಡಿಕೊಂಡಿದ್ದೆ. ನನ್ನನ್ನು ಕ್ಷಮಿಸಬೇಕೆಂದು ಕೇಳುವುದಿಲ್ಲ. ಒಂದು ಸಲ ನಿಮ್ಮ ಪಾದದಿಂದ ನನ್ನ ತಲೆಯನ್ನು ಮೆಟ್ಟಿಬಿಡಿ. ನನ್ನ ಅಹಂಕಾರ ಅಳಿಯಲಿ,’ ಎಂದು ಗದ್ಗದಿತರಾದಾಗ......ನಿಂದೇನೈತೆ ತಪ್ಪು? ಅವನು ಅಂಗಾಡ್ತಾನೆ ಬಿಡು,’ ಎಂದು ಸಮಾಧಾನಪಡಿಸುತ್ತಾರೆ!
ಈ ಮಹನೀಯರೊಂದಿಗಿನ ಒಡನಾಟದ ಸಂದರ್ಭಗಳನ್ನು, ಅವರಾಡುತ್ತಿದ್ದ ಹಾಸ್ಯಭರಿತ, ಅಮೂಲ್ಯಮಾತುಗಳನ್ನು ಅವರದೇ ಆಡುಭಾಷೆಯಲ್ಲಿ ಈ ಕೃತಿಯಲ್ಲಿ ತುಂಬಿ ಶಾಶ್ವತಗೊಳಿಸಿದ ಬೆಳಗೆರೆ ಕೃಷ್ಣಶಾಸ್ತ್ರಿಯವರಿಗೆ ಚಿರಋಣಿ.