Saturday, December 17, 2011

ಮನದ ಅಂಗಳದಿ.........೭೦. ಒಂದು ಮುಂಜಾನೆಯ ಪಯಣ

ದಿನ ಬೆಳಗಿನ ಬಸ್ಸಿಗೇ ಮದುವೆಯೊಂದಕ್ಕೆ ನಗರಕ್ಕೆ ಹೋಗಬೇಕಾಗಿತ್ತು. ಮನೆಯ ಮುಂದೆ ಕಾರನ್ನು ಮುಸುಕು ಹಾಕಿ ನಿಲ್ಲಿಸಿ, ಬಸ್ ಸ್ಟ್ಯಾಂಡ್‌ಗೆ ಹೋಗಲು ಆಟೊ ಹುಡುಕಿಕೊಂಡು ಹೊರಟೆವು. ಈ ಸಾರಿ ಮಕ್ಕಳು ಮನೆಗೆ ಬಂದಾಗ ಕಾರಿನ ಡ್ರೈವಿಂಗ್ ಅಭ್ಯಾಸ ಮಾಡಿಕೊಂಡು ಡಿ.ಎಲ್. ಮಾಡಿಸಿ ಇನ್ನು ಮುಂದೆ ಅಗತ್ಯವಿದ್ದಾಗ ತೆಗೆದುಕೊಂಡು ಹೋಗಬೇಕು ಎಂದು ಎಷ್ಟು ಸಲ ಅಂದು ಕೊಂಡಿದ್ದೇನೆಯೋ ಲೆಕ್ಕವೇ ಇಲ್ಲ. ಆದರೂ ಅದು ಮನೆಯ ಮುಂದೆ ನಿಂತಿದೆ ಎನ್ನುವ ನೆನಪೂ ಬಾರದಂತೆ ದಿನಗಳು ಉರುಳಿ ಹೋಗುತ್ತಲೇ ಇವೆ. ಸ್ವಲ್ಪ ದೂರ ನಡೆದ ನಂತರ ಆಟೋ ಸಿಕ್ಕಿತು. ಮುಂದೆ ಹೋಗಿ ತಿರುಗುವಷ್ಟರಲ್ಲಿಯೇ ಎದುರೇ ಕೋಳಿಗಳನ್ನು ತುಂಬಿಕೊಂಡು ಹೋಗುತ್ತಿದ್ದ ಒಂದು ಮಿನಿ ಲಾರಿಯನ್ನೇ ಹಿಂಬಾಲಿಸುವಂತಾಯ್ತು. ಭರ್ತಿ ಪೇರಿಸಿ ಇಟ್ಟಿದ್ದ ಆಯತ ಘನಾಕೃತಿಯ ಪಂಜರಗಳಲ್ಲಿ ಇಕ್ಕಟ್ಟಾಗಿ ಕುಳಿತಿದ್ದ ಕೋಳಿಗಳು ಅತ್ತಿತ್ತ ಅಲುಗಲೂ ಆಗದೇ ಚಡಪಡಿಸುತ್ತಿದ್ದವು. ಮೂಗನ್ನು ಮುಚ್ಚಿಕೊಳ್ಳಲೇ ಬೇಕಾದಂತಹ ದುರ್ವಾಸನೆಯು ಬರುತ್ತಿದ್ದರೂ ಆ ಜೀವಗಳ ಸ್ಥಿತಿಯ ಬಗ್ಗೆ ವ್ಯಕ್ತಪಡಿಸಲಾಗದಂತಹ ವೇದನೆ ಮನಸ್ಸನ್ನು ತುಂಬಿತು. ಈ ಭೂಮಿಯ ಮೇಲೆ ಹುಟ್ಟುವ ಪ್ರತಿಯೊಂದು ಜೀವಿಯ ಅಸ್ಥಿತ್ವಕ್ಕೂ ಒಂದು ಉದ್ಧೇಶವಿದೆ ಎನ್ನುವುದಾದರೆ ಇವುಗಳ ಹುಟ್ಟಿನ ಉದ್ದೇಶವೇನು? ಎಂದು ಮನಸ್ಸು ಪ್ರಶ್ನಿಸಲಾರಂಭಿಸಿತು. ಇವುಗಳನ್ನು ತಿನ್ನುವ ಉದ್ದೇಶದಿಂದಲೇ, ವ್ಯಾಪಾರ ದೃಷ್ಟಿಯಿಂದಲೇ ಸಾಕುತ್ತಾರೆ ಎನ್ನುವುದೇನೋ ನಿಶ್ಚಿತ. ಆದರೆ ಅವುಗಳನ್ನು ಕನಿಷ್ಠ ಒಂದು ಜೀವಿ ಎಂದೂ ಪರಿಗಣಿಸದೇ ಪಂಜರದೊಳಗೇ ಕೂಡಿಟ್ಟು, ಅಲ್ಲಿಗೇ ನೀರು, ಪೌಷ್ಠಿಕ ಆಹಾರ ಕೊಟ್ಟು, ತೂಕ ಹೆಚ್ಚಿಸಿ.......ತನ್ನ ಜಿಹ್ವಾ ಚಾಪಲ್ಯಕ್ಕಾಗಿ ಬಳಸುವುದು ಎಷ್ಟು ಸರಿ? ನಮ್ಮ ಹಳ್ಳಿಯಲ್ಲಿ ಕೋಳಿಗಳು ಆರಾಮವಾಗಿ ಎಲ್ಲೆಂದರಲ್ಲಿ ತಿರುಗುತ್ತಾ, ಆಹಾರವನ್ನು ತಾವೇ ಅರಸಿಕೊಂಡು ತಿನ್ನುತ್ತಾ, ಇದ್ದಷ್ಟೂ ದಿನವೂ ಸ್ವತಂತ್ರವಾಗಿ ಜೀವಿಸುತ್ತಿದ್ದುದರ ನೆನಪಾಯ್ತು. ‘ಆರಿಸಿಕೊಂಡು ತಿನ್ನೋ ಕೋಳಿ ಕಾಲು ಮುರಿದಂತೆ,' ಎನ್ನುವ ಗಾದೆ ಮಾತೇ ರೂಢಿಯಲ್ಲಿತ್ತು!

ಇಕ್ಕಟ್ಟಾದ ರಸ್ತೆಯಿಂದ ನಮ್ಮ ಆಟೋ ಮೇನ್ ರೋಡಿಗೆ ಪ್ರವೇಶಿಸಿತು. ಎದುರಿನಿಂದ ಬಂದ ಲಾರಿಯೊಂದು ಪಕ್ಕದಿಂದಲೇ ಹಾದುಹೋಗುವಾಗ ರಸ್ತೆಯ ಗುಂಡಿಯಲ್ಲಿದ್ದ ನೀರನ್ನು ಹಾರಿಸಿ ಅನಿರೀಕ್ಷಿತವಾಗಿ ಅಭಿಷೇಕ ಮಾಡಿಬಿಟ್ಟಿತು! ಮದುವೆಗೆಂದು ಉಟ್ಟಿದ್ದ ರೇಷ್ಮೆ ಸೀರೆಗೆ ರಸ್ತೆಯ ಗಲೀಜು ನೀರು ಹಾರಿ ಹಾಳಾಯಿತು. ನನ್ನವರು ಲಾರಿ ಡ್ರೈವರ್ ಗೆ ನಿಂದಿಸಲಾರಂಭಿಸಿದರು. ನನಗೇಕೋ ಬೇಸರವೆನಿಸಲೇ ಇಲ್ಲ! ಕುಡಿಯಲು ಇಟ್ಟುಕೊಂಡಿದ್ದ ನೀರಿನಿಂದಲೇ ಆ ನೀರು ಹಾರಿದ್ದ ಭಾಗವನ್ನು ಸ್ವಲ್ಪ ತೊಳೆದುಕೊಂಡೆ. ಮನಸ್ಸನ್ನೂ ಹಾಳುಮಾಡಿಕೊಳ್ಳುವುದು ಬೇಡ ಎನಿಸಿತು. ಕಲುಷಿತ ನೀರಿನಿಂದ ಕಲುಷಿತವನ್ನು ಶುದ್ಧಗೊಳಿಸಲಾಗುವುದಿಲ್ಲ.’ -ಶುದ್ಧ ನೀರಿನಿಂದ ಕಲುಷಿತವನ್ನು ತೊಳೆಯಬಹುದು ಎನ್ನುವ ಅರ್ಥದ ಸ್ವಾಮಿ ವಿವೇಕಾನಂದರ ನುಡಿಯನ್ನು ದೂರವಾಣಿಯಲ್ಲಿ ಮಾತನಾಡುವಾಗ ಮಗ ಹೇಳಿದ್ದು ನೆನಪಾಯ್ತು. ಈಗ ಅವನು `Words of Wisdom- from Swamy Vivekananda’ (P. C. Ganesan) ಎಂಬ ಪುಸ್ತಕವನ್ನು ಓದುತ್ತಿದ್ದಾನೆ. ದೂರವಾಣಿಯ ಮೂಲಕ ಮಾತನಾಡುವಾಗಲೆಲ್ಲಾ ತಾನು ಓದಿದ್ದನ್ನು ಹೇಳಿ ಅದರ ಬಗ್ಗೆ ಚರ್ಚಿಸುತ್ತಾನೆ.

ಸಾಮಾನ್ಯವಾಗಿ ಪ್ರಯಾಣ ಹೊರಡುವ ಮೊದಲು ಓದಲು ಒಂದೆರಡು ಪುಸ್ತಕಗಳನ್ನು ಇಟ್ಟುಕೊಂಡು, ಮೊಬೈಲ್‌ಗೂ ನನಗೆ ಇಷ್ಟವೆನಿಸುವ ವಾದ್ಯಸಂಗೀತ, ಹಾಡುಗಳನ್ನು ಹಾಕಿಕೊಂಡು ಪೂರ್ವಸಿದ್ಧತೆ ಮಾಡಿಕೊಳ್ಳುವುದು ರೂಢಿ. ಬಸ್‌ನಲ್ಲಿ ಕುಳಿತ ನಂತರ ನೆನಪಾಯಿತು, ನಾನು ಕನ್ನಡಕವನ್ನೂ ತಂದಿಲ್ಲ, ಈಯರ್ ಫೋನ್‌ನೂ ಇಟ್ಟುಕೊಂಡಿಲ್ಲವೆನ್ನುವುದು! ಒಂದು ಕ್ಷಣ ಏನೂ ತೋಚದಂತಹ ಮನಃಸ್ಥಿತಿ ಉಂಟಾಯಿತು. ಮರುಕ್ಷಣವೇ ನನ್ನ ದೌರ್ಬಲ್ಯದ ಬಗ್ಗೆ ನನಗೇ ಅರಿವಾಗಿ ಅಚ್ಚರಿಯೆನಿಸಿತು! ಇದುವರೆಗೂ ಎಷ್ಟೋ ವರ್ಷಗಳಿಂದ ಹೀಗೇ ಪ್ರಯಾಣಮಾಡುವಾಗ ಅಲ್ಪ ಸ್ವಲ್ಪ ಓದುತ್ತಲೇ ಕಾಲವನ್ನು ಸದುಪಯೋಗಪಡಿಸಿಕೊಂಡಿದ್ದೇನೆ ಎಂದು ಭಾವಿಸಿದ್ದೇನೆ. ಕೆಲವು ದಿನಗಳಿಂದ ಈಯರ್ ಫೋನ್ ಹಾಕಿಕೊಂಡು ಮನಸ್ಸಿಗೆ ಹಿತವೆನಿಸುವ ಹಾಡುಗಳನ್ನು ಕೇಳುತ್ತಾ ಸಂತಸದಿಂದಿದ್ದೇನೆ ಎಂದುಕೊಂಡು ಸಂಭ್ರಮಿಸಿದ್ದೇನೆ. ಜೀವನವೆಲ್ಲಾ ಬಾಹ್ಯ ಇಂದ್ರಿಯಗಳೊಡನೆ, ಜೊತೆಗೆ ಅವಕ್ಕೆ ಪೂರಕವೆನಿಸುವ ಸಾಧನಗಳನ್ನು ಬಳಸಿಕೊಂಡು ಸಾರ್ಥಕ ಭಾವವನ್ನು ಹೊಂದುವುದೇ ಆದರೆ....... ಏಕೋ ಈ ದಿನ ಮನಸ್ಸು ಎತ್ತೆತ್ತಲೋ ಓಡುತ್ತಾ ಏನನ್ನೋ ಅರಸುವ ತವಕದಲ್ಲಿದೆ ಎನಿಸಿತು. ಕಿಟಕಿಯಾಚೆಗೆ ಸಾಗುತ್ತಿರುವ ಪ್ರಕೃತಿಯ ಹಸಿರ ಸಿರಿಯನ್ನು ಗಮನಿಸುತ್ತಿದ್ದಂತೆಯೇ, ‘.............ಪುಸ್ತಕದಲ್ಲಿರುವ ಜ್ಞಾನವನ್ನೇ ತುಂಬಿಕೊಳ್ಳುತ್ತಾ ಸಾಗಿದರೆ ನಮ್ಮ ಮಸ್ತಕದಲ್ಲಿರುವ ಜ್ಞಾನವನ್ನು ಹೊರತೆಗೆಯುವುದು ಯಾವಾಗ?........’ ಎನ್ನುವ ಮಗಳ ಮಾತುಗಳು ನೆನಪಾದವು. ಈ ದಿನ ನನ್ನ ಮರವೇ ನನಗೊಂದು ಅವಕಾಶ ಕಲ್ಪಿಸಿದೆ: ನನ್ನ ಅಂತರಂಗದ ಪುಸ್ತಕದ ಪುಟಗಳನ್ನು ತೆರೆಯುವ, ನನ್ನ ಶ್ರವಣೇಂದ್ರಿಯಗಳಿಗೆ ಅತೀತವಾದ ಗಾನವನ್ನು ಆಸ್ವಾದಿಸುವ ಪ್ರಯತ್ನ!

೨೦೦೮ರ ಮತಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ೫೨ದಿನಗಳು ನ್ಯಾಯಾಂಗ ಬಂಧನದಲ್ಲಿದ್ದು ಹೊರ ಬಂದ ಸುಧೀಂದ್ರ ಕುಲಕರ್ಣಿಯವರು ತಿಹಾರದ ಜೈಲಿನಲ್ಲಿನ ತಮ್ಮ ಅನುಭವವನ್ನು ಕನ್ನಡಪ್ರಭಪತ್ರಿಕೆಗಾಗಿ ಬರೆದಿದ್ದಾರೆ. `ತಿಹಾರ ಜೈಲಿನ ಅನುಭವವನ್ನು ಅಚ್ಚಳಿಯದಂತೆ ಮಾಡಿದ್ದು ಅಲ್ಲಿಯ ಏಕಾಂತ ಮತ್ತು ಮೌನ ಎಂದು ಹೇಳುತ್ತಾ...... ಏಳು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ ಮಹಾತ್ಮ ಗಾಂಧಿಯವರಷ್ಟು ಮೌನ ಶಬ್ಧವನ್ನು ಪ್ರಭಾವಿಯಾಗಿ ವಿವರಿಸಿದವರು ವಿರಳ. ಅವರು ಜೈಲಿನಿಂದ ಹೊರಗಿದ್ದಾಗಲೂ ಸಹ ನಾವು ಮನಸ್ಸು ಮಾಡಿದರಷ್ಟೇ ಕೇಳಿಸಿಕೊಳ್ಳಬಹುದಾದ ದೈವಿಕ ರೇಡಿಯೋಗೆ ಕಿವಿಗೊಟ್ಟುಕೊಂಡಿರುತ್ತಿದ್ದರು. ನಾನು ತಿಹಾರ ಜೈಲಿನಿಂದ ನನಗಾಗಿ ತಂದುಕೊಂಡಿರುವ ಉಡುಗೊರೆ ಎಂದರೆ ಇಂಥದೇ ದೈವಿಕ ಆಕಾಶವಾಣಿಗೆ ಕಿವಿಗೊಟ್ಟು ಅಲ್ಲಿನ ಮೌನದ ಹಾಡುಗಳನ್ನು ಕೇಳಿಸಿಕೊಳ್ಳುವ ಸಾಮರ್ಥ್ಯಎಂದು ತಿಳಿಸಿದ್ದಾರೆ.

ನಾನು, ನನ್ನದುಗಳಿಂದಲೇ ತುಂಬಿರುವ ಮನಸ್ಸು ಇದಕ್ಕೆ ಅವಕಾಶ ನೀಡುವುದೇ? ಈ ನಿಟ್ಟಿನಲ್ಲಿ ಮುನ್ನಡೆದಾಗ ಒಂದಲ್ಲಾ ಒಂದು ದಿನ ಸಾರ್ಥಕತೆಯನ್ನು ಹೊಂದುತ್ತೇವೆನ್ನುವ ಅಭೀಷ್ಟೆ ನಮ್ಮದಾಗಲಿ.

7 comments:

  1. ಮೇಡಂ;ಯೋಚನೆಗೆ ಹಚ್ಚುವ ಬರಹ.ಎಲ್ಲವೂ ನಮಗೆ ಅನುಕೂಲವಾಗುವಂತೆ,ಅಥವಾ ನಮಗೆ ಅನಾನುಕೂಲವಾಗದಂತೆ ನಡೆಯುವುದಿಲ್ಲ.situations are not under our control.ಅಂತಹ ಸಮಯಗಳಲ್ಲಿ ನಮ್ಮ ಮನಸ್ಸನ್ನು ಯಾವ ರೀತಿ ನಿರ್ವಹಿಸುತ್ತೀವಿ ಎನ್ನುವುದು ಮುಖ್ಯ ಎಂದು ತೋರಿಸಿಕೊಟ್ಟಿದ್ದೀರಿ.ಧನ್ಯವಾದಗಳು.
    ನಮಸ್ಕಾರ.

    ReplyDelete
  2. @ಡಾ. ಕೃಷ್ಣ ಮೂರ್ತಿಯವರೆ,
    ನನ್ನ ಲೇಖನದ ಬಗ್ಗೆ ನಿಮ್ಮ ಅಮೂಲ್ಯವಾದ ಅನಿಸಿಕೆಗಳನ್ನು ಸವಿಸ್ತಾರವಾಗಿ ಹ೦ಚಿಕೊ೦ಡು, ಲೇಖನವನ್ನು ಇಷ್ಟಪಟ್ಟು, ಮೆಚ್ಚುಗೆಯನ್ನು ತಿಳಿಸಿ, ಶೀಘ್ರವಾಗಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. ಬರುತ್ತಿರಿ.

    ReplyDelete
  3. ಹಲವು ಸಕಾರಾತ್ಮಕ ಆಲೋಚನೆಗಳ ಬರಹ ರೂಪ ಇದು ಮೇಡಂ. ವ್ಯವಸ್ಥೆಯ ಲೊಸಗುಗಳನ್ನು ಮನಸ್ಸು ಯಾವ ರೀತಿಯಲ್ಲಿ ನಿರ್ವಹಿಸಬೇಕು ಎನ್ನುವುದಕ್ಕೂ ಈ ಬರಹ ಮಾರ್ಗದರ್ಶಿ.

    ReplyDelete
  4. ನಾನೂ ಸಹ ಮುಂಜಾನೆ ಎದ್ದು Morning shift ಗೆಂದು ಆಫ಼ೀಸಿಗೆ ತೆರಳುವಾಗ ಎಷ್ಟೋ ಬಾರಿ ಈ ಕೋಳಿಗಳನ್ನು ಕೊಂಡೊಯ್ಯುವ ಲಾರಿಗಳನ್ನು ಕಂಡು ಹೀಗೇ ಮರುಕಪಟ್ಟಿದ್ದೆ.

    ReplyDelete
  5. ಬಾಹ್ಯೇ೦ದ್ರಿಯಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡುವ ಆತುರದಲ್ಲಿ ನಮ್ಮ ಅ೦ತರ೦ಗದ ಭಾವಗಳು ಹೊರಹೊಮ್ಮಲು ಅವಕಾಶವನ್ನೇ ಕೊಡದೇ ಜೀವನವನ್ನು ಸಾಗಿಸಿಕೊ೦ಡು ಬ೦ದಿರುತ್ತೇವೆ. ನಮ್ಮ ಮನೋಕೋಶವನ್ನು ತೆರೆಯುವ ಗೋಜಿಗೇ ಹೋಗಿರುವುದಿಲ್ಲ. ಮೌನದಲ್ಲಿ ಅದೆಷ್ಟು ಮಾತುಗಳು(ವಿಚಾರಗಳು)ಅರಳುತ್ತವೆ ಅಲ್ಲವೆ? ಉತ್ತಮ ವಿಚಾರವನ್ನು ದಾಖಲಿಸಿದ ಪ್ರಭಾಮಣಿ ಮೇಡ೦ ಅವರಿಗೆ ವ೦ದನೆಗಳು.

    ಅನ೦ತ್

    ReplyDelete
  6. ಯಾವಾಗಲೂ ಮೌನಿಯಾಗಿರುತ್ತಿದ್ದ ರಮಣಮಹರ್ಷಿಗಳನ್ನು ಇಲ್ಲಿ ನೆನೆಯಬೇಕು. ನೀವು ಹೇಳಿದಂತೆ ಹೊರಗಿನ ಮಾಹಿತಿಯನ್ನು ಒಳಗೆ ತುರುಕುವದಕ್ಕಿಂತ, ಅಂತರಂಗಕ್ಕೆ ಕಿವಿ ಕೊಡುವದು ಶ್ರೇಯಸ್ಕರ.

    ReplyDelete
  7. @ ಸುನಾಥ್ ರವರೆ,
    @ಅನ೦ತ್ ರಾಜ್ ರವರೆ,
    @ ಪ್ರದೀಪ್ ರವರೆ,
    @ಬದರಿನಾಥ್ ರವರೆ,
    ನನ್ನ ಲೇಖನವನ್ನು ಇಷ್ಟಪಟ್ಟು, ಮೆಚ್ಚುಗೆಯನ್ನು ತಿಳಿಸಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಬರುತ್ತಿರಿ.

    ReplyDelete