ನಾಲ್ಕು ಗೋಡೆಗಳಾಚೆ.....
ನಾಲ್ಕು ಗೋಡೆಗಳ
ನಡುವಿನ
ಬಂಧಿ ಈ ಜೀವ
ತೆರಪುಗಳಾವುದೂ ಗೋಚರಿಸದಂತೆ
ಚಾಚಿದ ಅಗಾಧತೆಯ
ಅವಿನಾಭಾವ
ಮುಂದೇನೆಂದು ಕಾಣದಾಗದ
ಜೀವಕ್ಕೆ
ಹಿಂದಿನ ಮೆಲುಕುಗಳದೇ
ಆಧಾರ
ಜಗಿಜಗಿದು ಸ್ವಾದರಹಿತವೆನಿಸಿದರೂ
ಉಗಿಯಲಾಗದ ವಿಚಿತ್ರ
ಮೋಹದ
ತಾಂಬೂಲದಂತೆ!
ವರ್ತಮಾನವೋ ಗಾಢಾಂಧಕಾರ...
ಕತ್ತು ಹಿಡಿದು ದಬ್ಬುವಂಥಾ
ತಾಮಸತೆಯ ದರ್ಬಾರು,
ಭವಿಷ್ಯಕ್ಕೇ ಸವಾಲಿನಂತೆ
ನಾಲ್ಕು ದಿಕ್ಕುಗಳಿಗೂ
ಚಾಚಿ
ಅಡ್ಡನಿಂತ ಅಖಂಡ
ರಚನೆ
ಬಂದು ಬಿದ್ದಿದ್ದೆಲ್ಲಿಂದ?
ಮುಂದೆ ಸಾಗುವುದೆಲ್ಲಿಗೆ?
ನಡುವಣ ಬದುಕೆಲ್ಲಾ
ಈ ಬಂಧನಗಳಲೇ
ಕಾಲ ತುಂಬುವುದೇ?
ಬೇಸರ, ದ್ವಂದ್ವ,
ತಾಕಲಾಟಗಳಲೇ
ಆಟ ಮುಗಿಸುವುದೇ?
ದೃಷ್ಟಿ ಹಾಯಿಸಿದಷ್ಟೂ
ಮುಂಚಾಚುವ ಗೋಡೆಗಳದೇ
ನೋಟ
ಹೌದು, ಗೋಡೆಗಳಿಗೂ
ಕಣ್ಣುಗಳಿವೆಯಂತೆ
ಕಿವಿಗಳಿರುವುದಂತೂ
ಖಚಿತ!
ಕಾಣಬಲ್ಲ ಕೇಳಬಲ್ಲ
ಗೋಡೆಗಳೊಂದಿಗೇ ಸಾಂಗತ್ಯ!
ತನ್ನನ್ನೇ ಬಂಧಿಸಿದ್ದ
ಗೋಡೆಗಳೊಂದಿಗೇ ಗೆಳೆತನ!
ಗೋಡೆಗಳಿವು ಗೋಡೆಗಳಲ್ಲ
ತನ್ನ ಮುನ್ನಡೆಸುತಿರುವ
ಜಾಡುಗಳು!
ತನ್ನನ್ನೇ ತಾ ಬಂಧಿಸಿಕೊಂಡ
ಕಟ್ಟುಗಳ ಸಡಿಲಿಸಿದಂತೆ
ಗೋಚರಿಸುತ್ತಿದೆ......
ನಾಲ್ಕುಗೋಡೆಗಳ ನಡುವಿನ
ಬಂಧಿಗೆ
ಅನಂತಕೆ ತೆರೆದ ಕಿಟಕಿಗಳು!
(2015ರ ದಸರಾ ಕವಿಗೋಷ್ಠಿಯಲ್ಲಿ ವಾಚಿಸಿದ ಕವನ)
` ನಾಲ್ಕುಗೋಡೆಗಳ ನಡುವಿನ ಬಂಧಿಗೆ
ReplyDeleteಅನಂತಕೆ ತೆರೆದ ಕಿಟಕಿಗಳು! '
-- ತುಂಬ ಸುಂದರವಾದ ಸಾಲುಗಳು!
ಧನ್ಯವಾದಗಳು ಸುನಾಥ್ ಸರ್ :) ಕವನವನ್ನು ಬರೆಯುವ ಮೊದಲು ನನಗೆ ಹೊಳೆದದ್ದು ಈ ಸಾಲುಗಳೇ!
Deleteಧನ್ಯವಾದಗಳು ವಸ೦ತ ಕುಮಾರ್ :)
ReplyDelete