ಈ ವಾರದ ( 27/9/2023) ಮಂಗಳ ಪತ್ರಿಕೆಯಲ್ಲಿ ಪ್ರಕಟವಾಗಿರುವ ನನ್ನ ಕವನ :
#ಇಳಿಸಬೇಕೀಗ ಹೊರೆಯನಿನ್ನು
ಹೊತ್ತು ಹೊರಡುವ
ಹೆಗಲ ಚೀಲ
ಮಣ ಭಾರ
ಬಾಯಾರಿಕೆಗೆ ನೀರಿನ
ಬಾಟಲು
ಹಸಿವೆಗೆಂದೇ ಬಿಸ್ಕೆಟ್
ಸ್ನ್ಯಾಕ್ಸ್ ಗಳು
ಬಿಡುವಿಲ್ಲದಂತೆ ಅಗಿಯಲೇ ಬೇಕಾದ
ಚುಯಿಂಗಮ್ ಚಾಕಲೇಟ್ ಗಳು
ಜೊತೆಗೊಂದಿಷ್ಟು
ಮುಗಿಯದ ಮೆಲುಕುಗಳು
ಮಕ್ಕಳ ಶೀತ ಕೆಮ್ಮುಗಳಿಗೆ
ಟ್ಯಾಬ್ಲೆಟ್ ಸಿರಪ್ಪು
ಗಂಡನ ಗ್ಯಾಸ್ಟ್ರಿಕ್...
ಅತ್ತೆಗೆ ಆಂಟಿಬಯೋಟಿಕ್
ಪೇನ್ ಕಿಲ್ಲರ್
ಅನಾರೋಗ್ಯದ ಅನೇಕಾನೇಕ
ಸಾಧ್ಯಾಸಾಧ್ಯತೆಗಳು
ಸಿದ್ಧತೆಗಳು!
ಪುಟ್ಟ ಕನ್ನಡಿ ಕೂಮ್ಬ್
ವೆಟ್ ಟಿಸ್ಸ್ಯು
ಮೊಬೈಲ್ ಗೊಂದು ಶಾಶ್ವತ ಖಾನೆ
ಅವರಿವರ ದಾಕ್ಷಿಣ್ಯಕೆ
ತುಂಬುವ ಖಜಾನೆ
ಅಗತ್ಯ ವಸ್ತುಗಳಿಗಿದೇ ತವರು
ಆಕೃತಿಯೋ ದಿನ ತುಂಬಿದ ಬಸಿರು
ತಲೆಯಾಗಿದೆ ನೆನಪುಗಳ
ಗೋಜಲು ಗೋಜಲು
ಭವಿಷ್ಯದ ಭಯ ತಲ್ಲಣಗಳ
ಮಜಲು
ಸದಾ ಮೇಲೆತ್ತಲಾಗದ
ಶಿರ ಭಾರ
ಧಾವಂತವೇ ಬದುಕಾದ
ಸುಧೀರ್ಘ ನಿಸ್ಸಾರ
ಕೊಡವಿಕೊಂಡು ಬಿಡಬೇಕು
ನಿನ್ನೆ ನಾಳೆಗಳನೆಲ್ಲಾ
ಪೂರ್ವಾಪರವರಿಯದ
ಎಡರುತೊಡರುಗಳೂ ಸಲ್ಲ
ಬಿಡದಂತೆ
ಭೂತ ಭವಿಷ್ಯಗಳಲೇ
ಅಂಡಲೆವ
ಅಲೆಮಾರಿ ಜೀವಕೆ
ನೆಮ್ಮದಿಯೆನ್ನುವುದೇ
ಮರೀಚಿಕೆ
ಹೊರೆಯೆಲ್ಲಾ ಇಳಿಸಿ
ನೆಲೆಗೊಳಿಸಬೇಕಿದೆ
ಅಂತರ್ಯವನಿನ್ನು
ಆನಂದದ
ಹಸಿರ ಸಮೃದ್ಧಿಯಲಿ
~ಪ್ರಭಾಮಣಿ ನಾಗರಾಜ
No comments:
Post a Comment