Monday, January 8, 2024

'ಮೆಚ್ಚುಗೆಯೆಂಬ ಮಾಯಾವಿ!'



ಎಲ್ಲರಿಗೂ ವಂದನೆಗಳು🙏

 ನನ್ನ ಈ  ಹಾಸ್ಯ ಬರಹ ಜನವರಿ2024ರ 'ಅಪರಂಜಿ'ಯಲ್ಲಿ ಪ್ರಕಟವಾಗಿದೆ.  

ನಿಮ್ಮ ಪ್ರೀತಿಯ ಓದಿಗೆ❤️🌼

'ಮೆಚ್ಚುಗೆಯೆಂಬ ಮಾಯಾವಿ!'


        ಎದ್ದ ತಕ್ಷಣವೇ ಬಂದ ಆ ಮೊದಲ ಕಾಲ್‍ನಿಂದಲೇ ಎಂದಿನಂತೆ ಪತ್ರಿಕೆಯಲ್ಲಿ ನನ್ನದೊಂದು ಲೇಖನ ಬಂದಿದೆ ಎಂದು ತಿಳಿದದ್ದು. ಇತ್ತೀಚೆಗೆ ದಿನವಿಡೀ ಒಂದೂ ಕರೆಯೂ ಇಲ್ಲದೇ ಮನೆಯ ಯಾವುದೋ ಮೂಲೆಯಲ್ಲಿ ಮುದುರಿ ಮಲಗಿರುವ ನನ್ನ ಮೊಬೈಲ್‍ಗೆ ಹೀಗೆಯೇ ಒಮ್ಮೊಮ್ಮೆ ಜೀವ ಬಂದು ನನ್ನನ್ನು ಚುರುಕುಗೊಳಿಸಿಬಿಡುತ್ತದೆ. ದಿನದಲ್ಲಿ ಒಂದೋ ಎರಡೋ ಸಾರಿ ನಾನೇ ಪಾಪ ಎಂದು ಕನಿಕರಿಸಿ ಮಲಗಿದ ಮಗುವಿನ ಮುದ್ದು ಮೈಯನ್ನು ಮೃದುವಾಗಿ ನೇವರಿಸುವಂತೆ ಪ್ರೀತಿಯಿಂದ ಸವರಿ ಅದನ್ನು ವಿಚಾರಿಸಲು ಪ್ರಯತ್ನಿಸಿದರೂ ಅದು ಬಹುತೇಕ ರಚ್ಚೆಹಿಡಿದ ಕಂದ, `ನಾನು ಹೋಮ್ ವರ್ಕ್‍ನೂ ಮಾಡಲ್ಲ, ಸ್ಕೂಲಿಗೂ ಹೋಗಲ್ಲ, ಟ್ಯೂಷನ್‍ಗೂ ಹೋಗಲ್ಲ.....’ ಎನ್ನುವಂತೆ, Unfortunately watsap has stopped,  ...... face book has stopped, ...... chrome has stopped….ಎಂದು ಒಂದಾದ ನಂತರ  ಒಂದರಂತೆ ತನಗೆ ತಾನೇ ಘೋಷಿಸಲಾರಂಭಿಸಿ ನನ್ನನ್ನು ಬಾಹ್ಯ ಜಗತ್ತಿನ ಸಕಲ ಸಂಪರ್ಕಗಳಿಂದಲೂ ವಂಚಿತಳನ್ನಾಗಿಸಿಬಿಡುತ್ತದೆ! ಒಮ್ಮೊಮ್ಮೆ Unfortunately contacts has stopped ಎಂದೂ ಇತಿಶ್ರೀ ಹಾಡಿ ನಾನೆಷ್ಟು Unfortunate ಎನ್ನುವುದನ್ನು ದೃಢಪಡಿಸಿ ಪುನಃ ಬೆಚ್ಚಗೆ ಹೊದ್ದು ಮಲಗಿಯೂ ಬಿಟ್ಟರೆ ಅಲ್ಲಿಗೆ ಮುಗಿಯಿತು. ಆದರೆ ಈ ರೀತಿಯ ಮೆಚ್ಚುಗೆಯ ಕರೆಗಳು ಬರಲಾರಂಭಿಸಿದಾಗ ಮಾತ್ರ ಸಡಗರದಿಂದ ಜಡತ್ವವನ್ನೊದ್ದು ಮೈಕೊಡವಿ ಮೇಲೆದ್ದು ಅತ್ಯಂತ ವಿಧೇಯ ವಿದ್ಯಾರ್ಥಿಯಂತೆ ಪ್ರತಿ ಕರೆಯನ್ನೂ ಪ್ರೀತಿಯಿಂದ ಅರುಹಲಾರಂಭಿಸುತ್ತದೆ! ಬೆಳಗಿನಿಂದ ಒಂದರೊಳಗೊಂದರಂತೆ ಓವರ್ ಲ್ಯಾಪ್ ಆಗಿ ಬರಲಾರಂಭಿಸಿದ ಕರೆಗಳಿಂದ ನಗುವುದೋ ಅಳುವುದೋ ನೀವೇ ಹೇಳಿ ಎನ್ನುವಂತಿರುವಾಗಲೇ ಹಿಂದಿನ ದಿನ ಸಂಜೆ ತಾನೇ ನಡೆದ ನಮ್ಮ ತಿಂಗಳ ಸಾಹಿತ್ಯ ಕಾರ್ಯಕ್ರಮದಲ್ಲಿ ಲೇಖನದೊಂದಿಗೆ ಪ್ರಕಟಿಸುವ ಮೊಬೈಲ್ ಸಂಖ್ಯೆಯಿಂದ ಏನೆಲ್ಲಾ ಪಜೀತಿಯಾಗುತ್ತದೆ ಎನ್ನುವ ಬಗ್ಗೆ ನಡೆದ ಚರ್ಚೆಯಲ್ಲಿ ನಾನೂ ನನ್ನ ಹಿರಿತನದ ಅನಿವಾರ್ಯ ಬೆನಿಫಿಟ್ ಪಡೆದು ಎಲ್ಲರಿಗೂ ನನಗಾದ ಈ ಮುಂಚಿನ ಕಿರಿಕಿರಿ ಅನುಭವಗಳನ್ನು ಹೇಳಿ, ಅದಕ್ಕೆ ಪರಿಹಾರೋಪಾಯವನ್ನೂ ಬಹಳ ಆಢ್ಯತೆಯಿಂದಲೇ ಸೂಚಿಸಿದ್ದೆ. ಆಗ ನನ್ನ ಸಾಹಿತ್ಯಲೋಕದ ಸಹಭಾಗಿನಿಯರು ಕ್ಲಿಕ್ಕಿಸಿ ಕಳುಹಿಸಿದ  ಫೋಟೋಗಳನ್ನೆಲ್ಲಾ ಫೇಸ್ ಬುಕ್, ವಾಟ್ಸ್ಯಾಪ್‍ಗಳಲ್ಲೆಲ್ಲಾ ಹಾಕುವ ಸಡಗರದಲ್ಲಿರುವಾಗಲೇ ಮತ್ತೊಮ್ಮೆ ಇದೇ ವ್ಯೂಹದೊಳಗೆ ಸೆಳೆದುಕೊಂಡಂತಾಯಿತಲ್ಲಾ ಎಂದುಕೊಳ್ಳುವಾಗಲೇ ಗತನೆನಪುಗಳು ಸರಸರನೆ ನನ್ನ ಮನಃಪಟಲದ ಮೇಲೆ ಸರಿಯಲಾರಂಭಿಸಿದವು.....

    ನಮ್ಮ ಅನುಭವಗಳ ಕಣಜ ತುಂಬಿದಷ್ಟೂ ತುಳುಕದ, ಮೊಗೆದಷ್ಟೂ ಬರಿದಾಗದ ವಿಶಿಷ್ಟ ಅಕ್ಷಯ ಪಾತ್ರೆ ಎನ್ನುವುದಕ್ಕೆ ಮತ್ತೊಂದು ಪುರಾವೆ ಸಿಕ್ಕಂತಾಯಿತೇನೋ ಎನ್ನುವಂತಿತ್ತು ಆ ಘಟನೆಗಳ ಸರಮಾಲೆ. ಒಂದು ಅನುಭವವು ಮತ್ತೊಂದು ಅನುಭವಕ್ಕೆ ಕೈಮರವಾಗುತ್ತದೆ ಎನ್ನುವಂತೆ.....ಎಂದು ಘನಘೋರ ರೀತಿಯಿಂದಲೇ ತೆರೆದುಕೊಳ್ಳಲಾರಂಭಿಸುವ ನನ್ನ ನೆನಪುಗಳ ಕಥನ ಹೀಗಿದೆ:

      ಕೆಲವು ದಿನಗಳ ಹಿಂದೆ ಪತ್ರಿಕೆಯೊಂದರಲ್ಲಿ ಬಂದ ಪುಟ್ಟ ಅನುಭವ ಲೇಖನವೊಂದನ್ನು ಓದಿದವರೊಬ್ಬರು ಲೇಖನದೊಡನೆ ಪ್ರಕಟಿಸಿದ್ದ ನನ್ನ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನನಗೆ ಕರೆ ಮಾಡಿದರು. ಆ ಪುಟ್ಟ ಲೇಖನದಲ್ಲಿ ಒಬ್ಬರು ಅಜ್ಜಿಯ ಕರುಣಾಜನಕ ಅಸಹಾಯಕ ಸ್ಥಿತಿಯ ಬಗ್ಗೆ ಬರೆದಿದ್ದೆ. ಅದು ತಮ್ಮ ಮನಸ್ಸಿಗೆ ಎಷ್ಟೊಂದು ನೋವುಂಟು ಮಾಡಿತೆಂದರೆ ತಮಗೆ ನನ್ನೊಡನೆ ಮಾತನಾಡದೇ ಇರಲು ಸಾಧ್ಯವಾಗಲೇ ಇಲ್ಲವೆಂದು ಮಾತಿಗಾರಂಭಿಸಿದ ಆಕೆ ಸಹಜವಾಗಿಯೇ ನಮ್ಮ ಮನೆಯ ವಿವರವನ್ನೂ ಪಡೆದುಕೊಂಡರು. ನನ್ನನ್ನು ಫೋನಿನಲ್ಲಷ್ಟೇ ಮಾತನಾಡಿಸಿದ್ದರಿಂದ ತನಗೆ ಸಮಾಧಾನವಾಗುತ್ತಿಲ್ಲವೆಂದೂ ಎದುರಿಗೇ ಕುಳಿತು ಮಾತನಾಡಬೇಕೆಂದೂ `ಕಾಕರಾಜ ನೀನು 

ನಮ್ಮ ವನಕೆ ಬಹಳ ದಿನಕೆ ಬಂದೆ ನಿನ್ನ ಕಂಡು ನನ್ನ ಮನಕೆ ಹರುಷವಾಯಿತು...’ ಎಂದು ಕಪಟಿ ನರಿಯು ಕಾಗೆಯನ್ನು ಉಬ್ಬಿಸಿದಂತೆ ಪರಿಪರಿಯಾಗಿ ಹೊಗಳಲಾರಂಭಿಸಿದರು.  ಅಮಾವಾಸ್ಯೆಗೋ ಹುಣ್ಣಿಮೆಗೋ ಒಮ್ಮೆ ಪ್ರಕಟವಾಗುವ ನನ್ನ ಬರಹಕ್ಕೆ ಇಂಥಾ ಪ್ರಶಂಸೆಯೇ ಎನಿಸಿತು! ಆ ಲೇಖನದ ಶೀರ್ಷಿಕೆಯೇ(ಏಕೆ ಹೀಗೆ?) ತಮ್ಮನ್ನು ಚಿಂತನೆಗೆ ಹಚ್ಚಿತು ಎಂದೂ ಹೇಳಿದರು! ಅದರ ಬಗ್ಗೆ ಎಳೆಎಳೆಯಾಗಿ ವಿಶ್ಲೇಷಿಸಿ ವೃದ್ಧರ ಸಮಸ್ಯೆಗಳಿಗೆ ಏನಾದರೂ ಪರಿಹಾರವನ್ನು ಮಾಡಲೇಬೇಕು, ಆ ಬಗ್ಗೆ ನಿಮ್ಮೊಂದಿಗೆ ಮಾತನಾಡಲು ನಿಮ್ಮ ಮನೆಗೇ ಬರುತ್ತೇನೆ ಎಂದೂ ಆತ್ಮೀಯತೆಯ ಮಳೆಗರೆದರು. ಅವರ ಈ ಮಟ್ಟದ ಆಗ್ರಹ ನನಗೆ ಕಸಿವಿಸಿಯುಂಟುಮಾಡಿದರೂ ಬರಹಗಳು ಪ್ರಕಟವಾದಾಗ ಓದುಗರಿಂದ, ಹಿಂದಿನ ದಿನಗಳಲ್ಲಿಯಾದರೆ ಪತ್ರಗಳು, ನಂತರ ಫೋನು, ಇತ್ತೀಚೆಗೆ ಈಮೇಲ್, ಬ್ಲಾಗ್, ಫೇಸ್‍ಬುಕ್, ವಾಟ್ಸ್ಯಾಪ್.....ಗಳಲ್ಲಿನ ಪ್ರತಿಕ್ರಿಯೆಗಳು ಇವೆಲ್ಲಾ ಸಾಮಾನ್ಯವಾಗಿ ಬರುತ್ತಿದ್ದುದರಿಂದ ಸಹಜವಾಗಿಯೇ ಸ್ವೀಕರಿಸಿದೆ. ವೃದ್ಧರ ಬಗೆಗಿನ ಆಕೆಯ ಕಾಳಜಿ ಮೆಚ್ಚುವಂತಹದಾಗಿತ್ತು. ಇದಾದ 2-3ದಿನಗಳಲ್ಲಿಯೇ ಇನ್ನೂ ಬೆಳ್ಳಂಬೆಳಿಗ್ಗೆಯೇ ನಮ್ಮತ್ತೆ ಹೇಳುವಂತೆ ಕೋಳಿ ಕೊಕ್ ಅನ್ನೋಹೊತ್ತಿಗೇ ಆಕೆ ಫೋನಾಯಿಸಿ ಯಾವುದೋ ಕಾರ್ಯನಿಮಿತ್ತ ನಮ್ಮ ಏರಿಯಾಕ್ಕೇ ಬಂದಿರುವುದಾಗಿ ತಿಳಿಸಿ `ನಿಮ್ಮ ಮನೆಯ ಸಮೀಪದಲ್ಲೇ ಇದ್ದೇನೆ. ಹೇಗೆ ಬರುವುದು ಹೇಳಿ,’ ಎಂದು  ಅಚ್ಚರಿಯನ್ನುಂಟುಮಾಡಿದರು. ಕೆಲವೇ ಕ್ಷಣಗಳಲ್ಲಿ ಅವರು ತಮ್ಮ ಗೆಳತಿಯೊಂದಿಗೆ ಬಂದವರೇ ಸೋಫಾದ ಮೇಲೆ ಆಸೀನರಾಗಿ ನನಗೆ ಸಖೇದಾಶ್ಚರ್ಯವನ್ನುಂಟುಮಾಡುವಂತೆ ವರ್ತಿಸಲಾರಂಭಿಸಿದರು. ನನ್ನ ಆತಿಥೇಯ ಪ್ರಜ್ಞೆ ಎಚ್ಚೆತ್ತು ಎಂದಿನ `ಬಾಬಿಬಾ’ ಆತಿಥ್ಯಕ್ಕೆ ಮುಂದಾಗಿ ಬಾಳೆಹಣ್ಣು ಮತ್ತು ಬಿಸ್ಕತ್ತನ್ನು ಕೊಟ್ಟು ಬಾದಾಮಿಹಾಲು ತಯಾರಿಸಲು ಹೊರಟೆ. ಆಕೆ, `ನಮಗೆ ಕುಡಿಯಲು ಏನೂ ಬೇಡ. ಬಿಸಿನೀರು ಕೊಡಿ ಸಾಕು’ ಎಂದು ಸ್ವಲ್ಪ ಆಗ್ರಹಿಸುವಂತೆಯೇ ಹೇಳಿದರು. ಬಿಸಿನೀರಿಗೆ ತಾವೇ ತಂದಿದ್ದ ಗ್ರೀನ್ ಟೀ (ಸ್ಯಾಷೆಯಿಂದ) ಹಾಕಿಕೊಂಡು ಕುಡಿದು ಪೊರೆಕಳಚಿದ ಹಾವಿನಂತೆ ಸರಸರನೆ ತಮ್ಮ ಕೈ ಚೀಲದಿಂದ ನನ್ನ ಲೇಖನವು ಪ್ರಕಟವಾಗಿದ್ದ ಪತ್ರಿಕೆಯ ತುಣುಕನ್ನು ತೆಗೆದು ಅದರ ಕುರಿತು ಭಾವೋದ್ವೇಗದಿಂದ ಮಾತನಾಡಲಾರಂಭಿಸಿದರು, `ಈ ಕಷ್ಟಗಳು ಏಕೆ ಬರುತ್ತವೆ? ಕೆಲವರಿಗೇ ಏಕೆ ನೋವು ಉಂಟಾಗುತ್ತದೆ? ಸಾವು ಎಂದರೇನು?......... ಎಲ್ಲವಕ್ಕೂ ಉತ್ತರ ಇಲ್ಲಿದೆ,’ ಎಂದು ತಮ್ಮ ಟ್ಯಾಬನ್ನು ತೆಗೆದು ಒಂದು ವಿಡಿಯೋ ಪ್ಲೇ ಮಾಡಿದರು. `ಎಲ್ಲವಕ್ಕೂ ಕಾರಣ ಮತ್ತು ಪರಿಹಾರ ಈ ...... ರಲ್ಲಿದೆ,’ ಎಂದು ಆ ...ಸಂಸ್ಥೆಯ ಬಗ್ಗೆ ಹೇಳಲಾರಂಭಿಸಿದರು! ಬ್ರಿಟಿಷರು ಭಾರತದೊಳಗೆ ಉಪಾಯವಾಗಿ ನುಸುಳಿದರು ಎಂದು ಶಾಲೆಯಲ್ಲಿ ಓದಿದ್ದರ ನೆನಪಾಯಿತು. ಇದು  ಪ್ರಚಾರಪ್ರಿಯತೆಯಲ್ಲದೇ ಬೇರೇನೂ ಅಲ್ಲ ಎನ್ನುವುದು ನನ್ನ ಮಡ್ಡ ತಲೆಗೂ ಹೊಳೆಯಿತು. ಹಣ, ಜೀವನಾಗತ್ಯ ವಸ್ತುಗಳು ಮುಂತಾದವುಗಳ ಆಮಿಶವೊಡ್ಡಿ ತಮ್ಮತ್ತ ಸೆಳೆದುಕೊಳ್ಳುವುದರ ಬಗ್ಗೆ ಕೇಳಿದ್ದೆ. ಆದರೆ ಹೀಗೆ ನನ್ನಂಥಾ ಬಡಪಾಯಿ ಲೇಖಕರ ಬರಹಗಳನ್ನು ಪ್ರಶಂಸಿಸಿ, ಹೊಗಳಿಕೆಯ ಹೊನ್ನಶೂಲಕ್ಕೇರಿಸಿ ತಮ್ಮ ಕಾರ್ಯ ಸಾಧನೆ ಮಾಡಿಕೊಳ್ಳುವ ಹೊಸ ಜಾಲಕ್ಕೆ ನನ್ನಂಥವರನ್ನು ಮಿಕವಾಗಿಸುತ್ತಿದ್ದಾರಲ್ಲಾ! ನಾನು ನನ್ನ ಖಚಿತ ಅಭಿಪ್ರಾಯವನ್ನು ತಿಳಿಸಿ, `ಒಂದು ಸೆಲ್ಫಿ ಪ್ಲೀಸ್,’ ಎಂದು ಫೋಟೋ ತೆಗೆಯಲು ಸಿದ್ಧಳಾದಾಗ ಮೆಲ್ಲನೆ ಜಾಗ ಖಾಲಿಮಾಡಿದರು. ಇದಾದ ಕೆಲವೇ ದಿನಗಳ ನಂತರ ಒಂದು ಅನ್‍ನೋನ್ ನಂಬರ್‍ನಿಂದ ಕಾಲ್ ಬಂತು. ಪುನಃ ಆಕೆಯೇ, `ನಮ್ಮದೊಂದು ವೆಬ್ ಸೈಟ್ ಇದೆ,.......’ ಎಂದು ಮತ್ತೆ ತಮ್ಮ ಹಳೆಯ ಶೈಲಿಯಲ್ಲಿಯೇ, `........ಕೆಲವರಿಗೇ ಏಕೆ ನೋವು ಉಂಟಾಗುತ್ತದೆ? ಸಾವು ಎಂದರೇನು?.........’ಮುಂತಾಗಿ ತಮ್ಮ ಓಲ್ಡ್ ಪ್ಲೇಟನ್ನೇ ರೀಪ್ಲೇ ಮಾಡಿದರು! ನಮ್ಮ ಮನೆಗೆ ನೀವು ಈಗಾಗಲೇ ಬಂದಿದ್ದಿರಿ ಎಂದರೆ ಆಕೆಗೆ ನೆನಪೇ ಇಲ್ಲ! ಮತ್ತೊಮ್ಮೆ ಈ ಮೊದಲಿನಂತೆಯೇ ನನ್ನ ವಿವರವನ್ನು ನನ್ನಿಂದಲೇ ಪಡೆಯುವ ಯತ್ನ ನಡೆಸಿದರು!  

       ಈಗ ಮತ್ತೊಮ್ಮೆ ಫೋನು, ಮೆಸೇಜು, ವಾಟ್ಸ್ಯಾಪು.....ಗಳೆಂಬ ಬಾಹ್ಯ ಪ್ರಪಂಚದ ಗೊಡವೆಯೇ ಬೇಡವೆಂದು ಮುಷ್ಕರಹೂಡಿ ನಿರ್ಲಿಪ್ತತಾ ಭಾವದಲ್ಲಿದ್ದ ನನ್ನ ಮೊಬೈಲೂ ಗರಿಗೆದರಿ ಕಿವಿನಿಮಿರಿಸಿ ಜಾಗರೂಕವಾಗಿಬಿಟ್ಟಿದೆ!

       ಪ್ರತಿಕ್ರಿಯೆಯ ಮೂಲಕ ತಮ್ಮ ಮೆಚ್ಚುಗೆಯನ್ನು ತಿಳಿಸಿ ಪ್ರೋತ್ಸಾಹಿಸುವ ಸಹೃದಯರಿಗೆ ನನ್ನ ಅನಂತ ನಮನಗಳು. ಆದರೆ... ಲೇಖನದ ಹೊಗಳಿಕೆಯಿಂದಲೇ ಪ್ರಾರಂಭವಾಗುವ ಕೆಲವರ ಪ್ರತಿಕ್ರಿಯೆ ಎತ್ತೆತ್ತಲೋ ದಾರಿತಪ್ಪಿ ಹೊರಡುವುದೇ ಗೊಂದಲ. ಕೆಲವಂತೂ ಸೈಟ್ ಮಾರಾಟಕ್ಕಿದೆ ಸಂಪರ್ಕಿಸಿ, ಭವಿಷ್ಯ ಕೇಳಲು, ಜಾತಕ ಬರೆಸಲು ನನಗೇ ಕಾಲ್ ಮಾಡಿ, ಹಪ್ಪಳ-ಸಂಡಿಗೆ-ಉಪ್ಪಿನಕಾಯಿಗೆ ಈ ನಂಬರ್‍ಗೆ ರಿಂಗ್ ಕೊಡಿ ಮುಂತಾದ ಜಾಹಿರಾತುಗಳ ಮಹಾಪೂರ,.... ಒಮ್ಮೊಮ್ಮೆ ಕೆಲವರು ಅತ್ಯುತ್ಸಾಹದಲ್ಲಿ ನನ್ನ ವೈಯಕ್ತಿಕ ವಿವರಗಳನ್ನೇ ಪಡೆಯಲು ಮುಂದಾಗುವುದಿದೆ. `ನಾನೀಗ ರಿಟೈರ್ಡ್....’ ಎಂದು ಪ್ರವರಾರಂಭ ಮಾಡುವಾಗಲೇ ಅತ್ತಿಂದ ಕೇಳಿಬರುವ ಕಾಲ್ ಕಟ್ ಆದ ಸದ್ದು ಮಾತನಾಡುತ್ತಿರುವವರ ಮನಃಸ್ಥಿತಿಗೆ ಹಿಡಿದ ಕನ್ನಡಿಯಾಗಿರುತ್ತದೆ. ಬಹುತೇಕ ಸಂದರ್ಭಗಳಲ್ಲಿ ನಿವೃತ್ತಳು ನಾನು ಎನ್ನುವುದೇ ನನಗೆ ಶ್ರೀರಕ್ಷೆ! ಆದರೂ... ಇತ್ತೀಚೆಗೆ ಬಂದ ಒಂದು ಮೆಸೇಜ್, `ನನಗೀಗ 33ವರ್ಷ, ನನಗೆ ಅಣ್ಣ, ಅಕ್ಕ, ತಮ್ಮ ಎಲ್ಲಾ ಇದಾರೆ. ಆದರೆ ತಂಗಿ ಇಲ್ಲ. ನೀವು ನನ್ನ ತಂಗಿ ಆಗಿ ಪ್ಲೀಸ್!’ ಎನ್ನುವುದು ನನಗೆ ಅಚ್ಚರಿಯನ್ನೇ ಉಂಟುಮಾಡಿತು. ಇವರು ಈ ಮೊದಲೇ ನನ್ನೊಂದಿಗೆ ಮಾತನಾಡಿ ನನ್ನ ದ್ವನಿಯಿಂದ mislead ಆದವರು ಇರಬಹುದೇನೋ ಎಂದುಕೊಂಡು ಎಂದಿನಂತೆ ನಾನು ಪ್ರತಿಕ್ರಿಯಿಸದೇ ಇದ್ದಾಗ ಅತ್ತಿಂದ ಪರಿಪರಿಯಾಗಿ ಪಿರಿಪಿರಿಯಾಗಲಾರಂಭಿಸಿತು. ಆತನಿಗೆ, `ನೀವು ನನ್ನ ಅರ್ಧವಯಸ್ಸಿನವರಪ್ಪಾ...,’ ಎಂದು ಪ್ರತಿಕ್ರಿಯಿಸಬಹುದಾದ ಘನತೆಯನ್ನು ದಯಪಾಲಿಸಿದ, ಆಹಾ ನನ್ನ ನಿವೃತ್ಯಾನಂದದ ಸೊಬಗೇ! ಏನಾದರಾಗಲಿ ತನ್ನನ್ನು ತಾನು ಬಚ್ಚಿಟ್ಟುಕೊಂಡು ತನ್ನ ಸುಮಧುರ ಗಾನದಿಂದಲೇ ಪ್ರಖ್ಯಾತವಾಗುವ ಕೋಗಿಲೆಯಂತಿದ್ದರೆ ಎಷ್ಟು ಚೆನ್ನ ಎಂದುಕೊಂಡರೂ ನಮ್ಮ ಸ್ಥಳೀಯ ಪ್ರತಿಭೆ ಕಾಕರಾಜನಂತಾಗಿರುವ ನನ್ನ ಪಾಡಿಗೆ ನಾನೇ ಸ್ವಾನುಕಂಪಿಸುವ ಸ್ಥಿತಿಯುಂಟಾಗಿದೆ ಎಂದು confession ಮಾಡಿಕೊಳ್ಳುವುದು ಅನಿವಾರ್ಯವಾಗಿದೆ!

                                                                                      

                                     ~ಪ್ರಭಾಮಣಿನಾಗರಾಜ 









 

No comments:

Post a Comment