Friday, July 19, 2024

ಸುಧಾ ಯುಗಾದಿ ವಿಶೇಷಾಂಕ 2024 ಪ್ರಬಂಧ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನಿತ ಲಲಿತ ಪ್ರಬಂಧ 'ಎಲ್ಲದಕೂ ಕಾರಣ ನೀನೇ ಪ್ರಿಯ ದರ್ಪಣ'

 `ಸುಧಾ ಯುಗಾದಿ ವಿಶೇಷಾಂಕ 2024 ಪ್ರಬಂಧ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನಿತ ಲಲಿತ ಪ್ರಬಂಧ 'ಎಲ್ಲದಕೂ ಕಾರಣ ನೀನೇ ಪ್ರಿಯ ದರ್ಪಣ'  ನಿಮ್ಮ ಪ್ರೀತಿಯ ಓದಿಗೆ❤️🌼

    


ಎಲ್ಲದಕೂ ಕಾರಣ ನೀನೇ ಪ್ರಿಯ ದರ್ಪಣ


        ಅಪ್ಪಟ ಕನ್ನಡಮ್ಮನ ಕಂದನಾದ ಮತ್ತು ಕನ್ನಡ ಮಾಧ್ಯಮದಲ್ಲಿಯೇ ಪ್ರೌಢಶಾಲಾ ವ್ಯಾಸಂಗವನ್ನೂ ಮಾಡಿದ ನನಗೆ ವಿಜ್ಞಾನವನ್ನು ಓದುವಾಗ ʼದರ್ಪಣʼ ಎನ್ನುವ ಒಂದು ಅಧ್ಯಾಯವೇ ಇತ್ತು. ಬಹಳ ಉತ್ಸಾಹಿಯಾಗಿದ್ದ ನಮ್ಮ ವಿಜ್ಞಾನದ ಟೀಚರ್‌ ಸಣ್ಣಸಣ್ಣ ಗಾಜಿನ ಚೂರುಗಳನ್ನು ತಂದು ʼಇದು ಉಬ್ಬಿದೆ ನೋಡಿ, ಇದನ್ನು ಪೀನ ದರ್ಪಣ ಅಂತಾರೆ, ಇದು ತಗ್ಗಾಗಿರೊದರಿಂದ ನಿಮ್ನ ದರ್ಪಣ ಅಂತಾರೆʼ ಎಂದು ನಮ್ಮ ಕೈಗೆ ಕೊಟ್ಟಾಗ ʼಅಯ್ಯೋ ಇದು ಕನ್ನಡಿ ಚೂರುʼ ಎನ್ನುತ್ತಾ ಅದರಲ್ಲಿ ನಮ್ಮ ಮುಖ ನೋಡಿಕೊಂಡಾಗ ಮೂಗು ತುಟಿ ಎಲ್ಲಾ ದಪ್ಪದಪ್ಪಕ್ಕೆ ವಕ್ರವಾಗಿ ಕಂಡು ನಾವೆಲ್ಲಾ ಬಿದ್ದುಬಿದ್ದು ನಕ್ಕಿದ್ದೂ ನಕ್ಕಿದ್ದೇ! ಸಮತಲ ದರ್ಪಣ ಎನ್ನುವ ಪಾಠದ್ದೂ ನೆನಪಾಗಿ ದರ್ಪಣ ಅಂದ್ರೆ ಕನ್ನಡಿ ಎನ್ನುವುದು ಖಚಿತವಾಯ್ತು. ಆದರೆ ಮುಂದೆ ʼಮಸೂರʼ ಅನ್ನೋ ಪಾಠದಲ್ಲೂ ಪೀನ-ನಿಮ್ನ ಅಂತೆಲ್ಲಾ ಬಂದು ನಮ್ಮ ತಲೆ ಕೆಡಿಸಿ ಗೊಬ್ಬರಮಾಡಿತ್ತು.

ನಮ್ಮ ಮನೆಯಲ್ಲಿದ್ದ ಏಕೈಕ ಅಂಗೈ ಅಗಲದ ಕನ್ನಡಿಯನ್ನು ಅಮ್ಮ ಪೆಠಾರಿ ಮೇಲೆ ಕುಂಕುಮದ ಡಬ್ಬಿ ಪಕ್ಕದಲ್ಲಿ ಮರದ ಬಾಚಣಿಗೆ ಜೊತೆ ಇಟ್ಟಿರುತ್ತಿದ್ದರು. ಅದನ್ನು ಬೆಳಿಗ್ಗೆ ಎದ್ದು ಮುಖ ತೊಳೆದಾಕ್ಷಣವೇ ಹಣೆಗೆ ಕುಂಕುಮ ಇಟ್ಟುಕೊಳ್ಳಕ್ಕೆ, ಸ್ನಾನ ಆದ ನಂತರ ತಲೆಬಾಚಿಕೊಳ್ಳುವಾಗ ಬೈತಲೆ ತೆಗೆದುಕೊಳ್ಳಕ್ಕೆ ಮಾತ್ರ ಉಪಯೋಗಿಸುತ್ತಿದ್ದರು. ನಾವಂತೂ ಚಿಕ್ಕಂದಿನಲ್ಲಿ ಕನ್ನಡೀನೇ ನೋಡಿಕೊಳ್ತಿರಲಿಲ್ಲ. ನಮಗೆ ತಲೆಬಾಚಿ, ಹಣೆಗೆ ಸಾದು ಇಡೋ ಕೆಲಸಾನೆಲ್ಲಾ ನಮ್ಮ ಸೋದರತ್ತೇನೇ ಮಾಡ್ತಿದ್ದರಲ್ಲ! ಆದರೂ ಸ್ವಲ್ಪಸ್ವಲ್ಪ ದೊಡ್ಡವರಾದಂತೆ ಬಹಳ ಕುತೂಹಲದಿಂದ ಆಗಾಗ ಕದ್ದುಮುಚ್ಚಿ ಕನ್ನಡೀಲಿ ಹಲ್ಲು ಕಿರಿದು, ಮುಖ ಸೊಟ್ಟಗೆ ಮಾಡಿಕೊಂಡು ನೋಡಿಕೊಳ್ಳುತ್ತಾ ಕಿಸಕಿಸನೆ ನಗುತ್ತಿದ್ದೆವು. ತಲೆ ಬಾಚುವಾಗ ಕನ್ನಡಿ ಇರಲೇಬೇಕು ಎಂದು ಮೊದಲು ಹಠ ಮಾಡಿದ ಕೀರ್ತಿ ನಮ್ಮಕ್ಕನಿಗೇ ಸಲ್ಲುತ್ತದೆ. ಕನ್ನಡಿ ನೋಡಿಕೊಳ್ಳಲು ಪ್ರಾರಂಭಿಸಿದ ನಂತರ ಅವಳು ಹೇಗೆ ಅಲಂಕರಿಸಿದರೂ ಒಪ್ಪದೇ ಬೈತಲೆ ಸೊಟ್ಟಾಗಿದೆ, ಮುಂದಲೇಲೆ ಗುಬ್ಬಳು ಬಂದಿದೆ ಎಂದು ಸತಾಯಿಸಿ ನಮ್ಮತ್ತೆ ಕನ್ನಡೀನ ವಾಚಾಮಗೋಚರ ಬಯ್ಯುವಂತೆ ಮಾಡುತ್ತಿದ್ದಳು.

ಹಳ್ಳಿಯಲ್ಲಿದ್ದ ನಮ್ಮ ಮನೆಯ ಹಿತ್ತಲಿನಲ್ಲಿ ನಾಲ್ಕೈದು ರೀತಿಯ ಮಲ್ಲಿಗೆಯ ಬಳ್ಳಿಗಳಿದ್ದು ಅವುಗಳನ್ನು ಕೊಂಡಮಾವಿನ ಗಿಡಗಳಿಗೆ ಹಬ್ಬಿಸಿದ್ದರು. ಇವುಗಳ ನಡುವೆ ದುಂಡುಮಲ್ಲಿಗೆಯ ಪಕ್ಕ ಒಂದು ದೊಡ್ಡ ನೀರಿನ ತೊಟ್ಟಿ ಇತ್ತು. ಬಾವಿಯಿಂದ ಸೇದಿದ ನೀರನ್ನು ಅದಕ್ಕೆ ತುಂಬಿ ಗೃಹಕೃತ್ಯಗಳಿಗೆ ಬಳಸುತ್ತಿದ್ದರು. ನನಗೆ ಆ ತೊಟ್ಟಿಯ ಕಟ್ಟೆಯ ಮೇಲೆ ಕುಳಿತು ನೀರಿನಲ್ಲಿ ಕಾಣುವ ಪ್ರತಿಬಿಂಬವನ್ನು ನೋಡಿಕೊಳ್ಳುವುದೆಂದರೆ ಎಲ್ಲಿಲ್ಲದ ಸಂಭ್ರಮ! ವಿಶಾಲವಾದ ನೀಲಾಗಸದಲ್ಲಿಯೇ ಹಬ್ಬಿದಂತಿದ್ದ  ಹಸಿರ ಹಂದರದ ನಡುವಿನ ‘ಆ ಮುಖ’ ನನ್ನನ್ನು ಪರವಶಳನ್ನಾಗಿಸಿಬಿಡುತ್ತಿತ್ತು. ನಮ್ಮ ವಿಶ್ವಕವಿ ವಾಣಿಯಾದ ʼತನ್ನ ಕಾವ್ಯಕ್ಕೆ ತಾ ಮಹಾಕವಿ ಮಣಿದಂತೆ!ʼ ‘ಸ್ವಮೋಹ’ ಎನ್ನುವುದು ಇದಕ್ಕೇ ಇರಬಹುದು. ನಂತರದ ದಿನಗಳಲ್ಲಿ ನಾನು ಓದಿದ ಪೋವ್ಲೋ ಕೋಯ್ಲೋ ಅವರ ‘ದಿ ಆಲ್ ಕೆಮಿಸ್ಟ್’ನಲ್ಲಿಯ ನಾರ್ಸಿಸ್ಸಸ್ ಎಂಬ ಒಬ್ಬ ಯುವಕ ತನ್ನ ಸೌಂದರ್ಯವನ್ನು ಆಸ್ವಾದಿಸಲು ಪ್ರತಿದಿನ ಒಂದು ಕೊಳದ ದಂಡೆಯಲ್ಲಿ ಮಂಡಿಯೂರಿ ಕುಳಿತು ನೀರಿನಲ್ಲಿ ತನ್ನ ಪ್ರತಿಬಿಂಬವನ್ನು ತಾನೇ ನೋಡಿಕೊಳ್ಳುತ್ತಿದ್ದ ಕಥೆ ನನಗೆ ನಮ್ಮ ಹಳ್ಳಿಯ ನೀರಿನ ತೊಟ್ಟಿಯನ್ನೇ ನೆನಪಿಸುತ್ತಿತ್ತು. ಪಾಪ, ಒಂದು ದಿನ ಹೀಗೇ ತನ್ಮಯನಾಗಿ ತನ್ನನ್ನೇ ತಾನು ನೋಡಿಕೊಳ್ಳುತ್ತಿರುವಾಗ ಅವನು ಕೊಳದೊಳಗೇ ಮುಳುಗಿಹೋಗುತ್ತಾನೆ. ಅವನು ಮುಳುಗಿದ ಜಾಗದಲ್ಲೇ ಒಂದು ಹೂ ಅರಳುತ್ತದೆ. ಅದನ್ನು ‘ನಾರ್ಸಿಸ್ಸಸ್’ಎಂದೇ ಕರೆಯುತ್ತಾರೆ ಎನ್ನುವುದು ಮೂಲಕಥೆ. ಈ  ಕಥೆಗೆ ಒಂದು ಹೊಸ ತಿರುವನ್ನು ನೀಡಿ ಮುಂದುವರಿಸುತ್ತಾ... ನಾರ್ಸಿಸ್ಸಸ್ ನಿಧನದ ನಂತರ ವನದೇವತೆಗಳೆಲ್ಲಾ ಕೊಳದ ಬಳಿ ಬಂದು ಈ ಮೊದಲು ಸ್ವಚ್ಛವಾಗಿದ್ದ ಕೊಳದ ನೀರು ಉಪ್ಪಾಗಿರುವುದನ್ನು ಗಮನಿಸಿ, ‘ಏಕೆ ಅಳುತ್ತಿರುವೆ?’ ಎಂದು ಕೊಳವನ್ನು ಕೇಳುತ್ತಾರೆ.

‘ನಾನು ನಾರ್ಸಿಸ್ಸಸ್‍ಗಾಗಿ ಅಳುತ್ತಿರುವೆ.’ಎಂದು ಕೊಳ ಉತ್ತರಿಸುತ್ತದೆ.

‘ನಾರ್ಸಿಸ್ಸಸ್‍ಗಾಗಿ ನೀನು ದುಃಖಿಸುವುದರಲ್ಲಿ ಅಚ್ಚರಿಯೇ ಇಲ್ಲ. ಅವನ ಸೌಂದರ್ಯವನ್ನು ಅತ್ಯಂತ ಸಮೀಪದಿಂದ ನೋಡುತ್ತಿದ್ದುದೇ ನೀನು.’ ಎಂದು ವನದೇವತೆಗಳೆಂದಾಗ, ‘ಆದರೆ... ಅವನು ಸುಂದರವಾಗಿದ್ದನೆ?’ ಎಂದು ಕೇಳಿದ ಕೊಳ ‘ನಾನು ಅಳುತ್ತಿರುವುದೇಕೆಂದರೆ ನಾರ್ಸಿಸ್ಸಸ್‍ನ ಕಣ್ಣುಗಳ ಆಳದಲ್ಲಿ ನಾನು ನನ್ನ ಸೌಂದರ್ಯವನ್ನೇ ನೋಡುತ್ತಿದ್ದೆ’ ಎನ್ನುತ್ತೆ. ಇದರ ಅಂತರಾರ್ಥದ ಗಾಂಭೀರ್ಯದ ಬಗ್ಗೆ ಗಹನವಾಗಿ ಚಿಂತಿಸುವಷ್ಟು ಪ್ರೌಢಿಮೆಯನ್ನು ಪಡೆದು ಬಂದಿಲ್ಲವಾದ್ದರಿಂದ ಅವರವರಿಗೆ ಅವರವರದ್ದೇ ಚಿಂತೆ ಎಂದೇ ಸ್ಥೂಲವಾಗಿ ಅಭಿಪ್ರಾಯಿಸಬಹುದೇನೋ.  ʼನಿನ್ನಾ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪʼ ಎನ್ನುವ ಹಾಡು ನನ್ನ ಜಮಾನಾದ ಆಸುಪಾಸಿನವರಿಗೆ  ನೆನಪಾಗುತ್ತದೆ ಅಲ್ಲವೆ?                   

      ಪ್ರಾಚೀನ ಕಾಲದಲ್ಲಿ ಗಾಜನ್ನು ಇನ್ನೂ ಕಂಡುಹಿಡಿಯದೆ ಗಾಜೆಂಬ ಅತ್ಯಚ್ಛರಿ ಅಜ್ಞಾತಸ್ಥಿತಿಯಲ್ಲಿದ್ದಾಗ ವಿವಿಧ ವಿನ್ಯಾಸಗಳ ಹೆಚ್ಚು ಪಾಲಿಶ್ ಮಾಡಿದ ಲೋಹದ ಫಲಕಗಳನ್ನೇ ಕನ್ನಡಿಗಳಾಗಿ ಬಳಸುತ್ತಿದ್ದರಂತೆ. ತಿರುವಾಂಕೂರ್‌ನ ಆರಾಮುಲ ಎಂಬ ಸ್ಥಳದಲ್ಲಿ ಅಂತಹ ಕನ್ನಡಿಗಳನ್ನು ಇನ್ನೂ ತಯಾರಿಸಲಾಗುತ್ತಿದ್ದು ಆ ಭಾಗದ  ಕೆಲವು ದೇವಾಲಯದ ಸೇವೆಯಲ್ಲಿ ಗಾಜಿನ ಕನ್ನಡಿಗಳನ್ನು ಬಳಸಲು ಅನುಮತಿ ಇಲ್ಲದಿರುವುದರಿಂದ ಇಂಥಾ ಸ್ಪೆಕ್ಯುಲಮ್ ಕನ್ನಡಿಗಳನ್ನೇ ಬಳಸುತ್ತಾರಂತೆ.

        ನಾವೆಲ್ಲಾ ಸ್ವಲ್ಪ ದೊಡ್ಡವರಾದಂತೆ ನಮ್ಮೆಲ್ಲರ ತೀವ್ರ ಬೇಡಿಕೆಯಂತೆ ಒಂದು ಚಚ್ಚೌಕವಾದ ಕನ್ನಡಿ ನಮ್ಮ ಹಳ್ಳಿಯ ಮನೆಯ ಗೋಡೆಯನ್ನು ಅಲಂಕರಿಸಿತು. ನಾವು ಆ ಕಡೆ ಈ ಕಡೆ ಓಡಾಡುವಾಗಲೆಲ್ಲಾ ರಾಷ್ಟ್ರೀಯ ಹಬ್ಬಗಳಲ್ಲಿ ಪೆರೇಡ್‌ ಮಾಡುವಾಗ ಮುಖ್ಯ ಅತಿಥಿಗಳಿಗೆ ಸೆಲ್ಯೂಟ್‌ ಮಾಡಿ ಹೋಗುವಂತೆ ಅನವಶ್ಯಕವಾಗಿ ಕನ್ನಡಿಯ ಮುಂದೆ ನಿಂತು ಮೆಟ್ಟಿಂಗಾಲಿಟ್ಟು ನಮ್ಮ ವದನಾರವಿಂದದ ಸೌಂದರ್ಯಾಸ್ವಾದನೆ ಮಾಡಿಕೊಂಡು ಮುಂದುವರಿಯುತ್ತಿದ್ದೆವು. ಕೆಲವೊಮ್ಮೆ ಈ ವಿಷಯದಲ್ಲಿ ತಿಕ್ಕಾಟ ನೂಕಾಟಗಳ ಜಗಳವೂ ಆಗುತ್ತಿತ್ತು. ಇದನ್ನು ಗಮನಿಸುತ್ತಿದ್ದ ನಮ್ಮ ಸೋದರತ್ತೆ ʼಎಲ್ಲಾರೂ ಮುಖಕ್ಕೆ ಒಂದೊಂದು ಕನ್ನಡಿ ಕಟ್ಟಿಕೊಂಡುಬಿಡಿ ಸರಿಹೋಗುತ್ತೆʼ ಎಂದು ವಾಗ್ಬಾಣ ಪ್ರಯೋಗಿಸುತ್ತಿದ್ದರು. ಈ ನಡುವೆ ನಮ್ಮಣ್ಣ ಗೋಡೆಗೆ ನೇತುಹಾಕಿದ್ದ ಕನ್ನಡಿಯನ್ನೇ ಎತ್ತಿಕೊಂಡು ಓಡಿಬಿಡುತ್ತಿದ್ದ. ನಾವೂ ಅವನನ್ನು ಹಿಂಬಾಲಿಸಿ ʼನಂಗೂ ತೋರಿಸೋʼ ಎಂದು ಬಿದ್ದಂಬೀಳ ಓಡುತ್ತಿದ್ದೆವು. ನಮ್ಮ ಹಿಂದೆಯೇ ನಮ್ಮತ್ತೆ ʼಪಾಪಿ ಮುಂಡೇವ, ಮನೇಲಿ ಕನ್ನಡಿ ಒಡೀಬಾರದು, ಅನಿಷ್ಟʼ ಎಂದು ಕೂಗುತ್ತಾ ಓಡಿಬರುತ್ತಿದ್ದರು. ಅವತ್ತಂತೂ ಅಣ್ಣನಿಗೆ ನಮ್ಮ ತಂದೆಯ ಕೈಯಿಂದ ಗೂಸು ಗ್ಯಾರಂಟಿ! ಎಲ್ಲಾ ಏಟು ತಪ್ಪಿಸಿಕೊಂಡು ಓಡಿದರೆ ಆ ಒದೆ ಬೀಳುತ್ತಿದ್ದುದು ಓಡಿನಲ್ಲಿ ಸದಾ ಹಿಂದುಳಿಯುತ್ತಿದ್ದ ನನಗೇ. ಸೂರುಕಟ್ಟಿನಿಂದ ಹೊರಗೆಳೆದಿದ್ದ ನಾಗರಬೆತ್ತಕ್ಕೆ ಹೀಗೆ ಶಾಂತಿ ಮಾಡಿ ಪುನಃ ಸ್ವಸ್ಥಾನಕ್ಕೆ ಸೇರಿಸುತ್ತಿದ್ದರು ನಮ್ಮಣ್ಣ.

        ನನಗಂತೂ ನನ್ನದೇ ಆದ ಸ್ವಂತಮನೆಗೆ ಹೋದಾಗ ಮನೆಯ ಎಲ್ಲಾ ಕಡೆಗೂ ಒಂದೊಂದು ಕನ್ನಡಿ ಹಾಕಿಕೊಂಡುಬಿಡಬೇಕು ಎಂಬ ಮಹದಾಸೆಯಿತ್ತು. ʼಮೈಸೂರಿನ ಅರಮನೆಯಲ್ಲಿ ದೊಡ್ಡದೊಡ್ಡ ಕನ್ನಡಿಗಳನ್ನು ಹಾಕಿದಾರಂತೆ. ಕನ್ನಡಿ ಯಾವುದು, ಬಾಗಿಲು ಯಾವುದು ಎಂದು ಗೊತ್ತಾಗದೇ ಬಾಗಿಲು ಅಂತ ಹೋಗಿ ಕನ್ನಡೀಗೆ ಡಿಕ್ಕಿ ಹೊಡೆದುಕೊಳ್ತಾರಂತೆ,ʼ ಎಂದು ಎಲ್ಲರೂ ಮಾತನಾಡಿಕೊಳ್ಳುವಾಗ ಯಾವಾಗ ಹೋಗಿ ಮೈಸೂರಿನ ಅರಮನೆ  ನೋಡ್ತೀನೋ ಎನ್ನುವ ತಹತಹ ಉಂಟಾಗುತ್ತಿತ್ತು.  

ʼಕನ್ನಡಿಯೊಳಗಿನ ಗಂಟು’ ಎಂಬ ನುಡಿಗಟ್ಟನ್ನು ಅಜ್ಜಿ  ಸಮಯಾನುಸಾರ ಬಳಸಿದಾಗ ಚಿಕ್ಕವಳಾಗಿದ್ದ ನಾನು ಬಹಳ ಗೊಂದಲಗೊಳ್ಳುತ್ತಿದ್ದೆ. ಇದು ನನ್ನ ಎಳೆಮನದಲ್ಲಿ `ಆ ದುಡ್ಡಿನ ಗಂಟನ್ನು ಹೊರತೆಗೆಯುವುದು ಹೇಗೆ?’ ಎನ್ನುವ ಪ್ರಶ್ನೆಯನ್ನು ಉಂಟುಮಾಡಿತ್ತು. ನಂತರದ ದಿನಗಳಲ್ಲಿ ವೈವಿಧ್ಯಮಯ ಬದುಕಿನ ಗಂಟುಗಳು ಉಂಟುಮಾಡಿದ ಎಲ್ಲಾ ಗೋಜಲುಗಳಿಂದ `ಈ ಗಂಟನ್ನು ಪುನಃ ಕನ್ನಡಿಯೊಳಗೇ ಸೇರಿಸುವುದು ಹೇಗೆ?’ ಎಂದು ನನ್ನನ್ನೇ ಪ್ರಶ್ನಿಸಿಕೊಳ್ಳುವಂತಾಯಿತು! ಬಿಡಿಸಲಾಗದ, ಬಯಲಾಗದ, ಕರಗದ, ಕುಗ್ಗದ...ಯಾವುದೇ ಗಂಟುಗಳಿದ್ದರೂ ಅವು ಕನ್ನಡಿಯೊಳಗೇ ಪ್ರವೇಶಿಸಿ `ಕನ್ನಡಿಯೊಳಗಿನ ಗಂಟು’ಆಗೇ ಉಳಿದುಬಿಡಲಿ ಎಂದುಕೊಳ್ಳುವಂತಾಯಿತು.  

ಒಮ್ಮೆ ಪಟ್ಟಣದ ಜಾತ್ರೆಗೆ ಹೋಗಿದ್ದಾಗ ಇನ್ನೂ ಪ್ರವೇಶದ್ವಾರದಲ್ಲಿಯೇ ʼತಕ್ಷಣವೇ ಬನ್ನಿ ನೋಡಿ, ಎಲ್ಲರೂ ಬಿದ್ದುಬಿದ್ದು ನಗುವಂತೆ ಮಾಡುವ`ನಗಿಸುವ ಕನ್ನಡಿ’ಯಲ್ಲಿ ನಿಮ್ಮ ಹೊಸ ರೂಪ,ʼ ಎಂದು ಹೇಳುವಾಗಲೇ ಎಲ್ಲರೂ ಜೋರಾಗಿ ನಗುವ ಅಡ್ವರ್‌ಟೈಸ್ಮೆಂಟ್ ಕೇಳಿ ನಾವು ಅದನ್ನೇ ಮೊದಲು ನೋಡಬೇಕು ಎಂದು ಹಠ ಹಿಡಿದಾಗ ʼಬೇರೇದೆಲ್ಲಾ ನೋಡ್ಕೊಂಡು ಬರೋಣ ನಡೀರಿʼ ಎಂದು ನಮ್ಮನ್ನು ಅಕ್ಷರಶಃ ದಬ್ಬಿಕೊಂಡೇ ಹೊರಟಿದ್ದರು ಹಿರಿಯರು. ಅಯ್ಯೋ ಅದಕ್ಕೆ ಟಿಕೆಟ್‌ ಇರುತ್ತೆ. ದುಡ್ಡು ಯಾರು ಕೊಡೋರು ಅನ್ನೋದು ಅವರ ಚಿಂತೆ. ಎಲ್ಲಾ ಕಡೆ ನೋಡ್ಕೊಂಡು ಬಂದ ನಂತರ ಮರೆತಿರ್ತಾರೆ ಎನ್ನುವುದು ಅವರ ಎಣಿಕೆ. ಹಿಂತಿರುಗುವಾಗ ಬೇರೆ ದಾರಿಯಲ್ಲಿ ನಮ್ಮನ್ನು ಕರೆದುಕೊಂಡು ಬಂದರೂ ಆ `ನಗಿಸುವ ಕನ್ನಡಿ’ ನನ್ನ ತಲೆಯೊಳಗೇ ಥೈಥೈ ಕುಣಿಯುತ್ತಿದ್ದು ಹೊರಗೆ ಬರುವಾಗಲೂ  ನಾನು ನೋಡಲೇಬೇಕು ಎಂದು ಅಳುತ್ತಾ ಹಠಹಿಡಿದು ಕುಳಿತಾಗ ನಂಗೆ ಎರಡೇಟು ಬಾರಿಸಿ ಎಲ್ಲರನ್ನೂ ಕರೆದುಕೊಂಡುಹೋಗಿದ್ದರು. ಒಳಹೋದನಂತರ ಅಲ್ಲಿ ಜೋಡಿಸಿಟ್ಟಿದ್ದ ದೊಡ್ಡದೊಡ್ಡ ಉಬ್ಬು-ತಗ್ಗಿನ ಕನ್ನಡಿಗಳಲ್ಲಿ ನಮ್ಮನ್ನು ನೋಡಿಕೊಂಡು ಉರುಳಾಡಿಕೊಂಡು ನಗುವಾಗ ಏಟಿನ ಚುರುಚುರು ಮರೆತೇಹೋಯ್ತು. ಎತ್ತರಕ್ಕೆ ಇಟ್ಟಿದ್ದ ಎರಡು ಕನ್ನಡಿಗಳ ಮಧ್ಯೆ ಹೋದಾಗಲಂತೂ ಸಾಲುಸಾಲಾಗಿದ್ದ ಎಷ್ಟೊಂದು ಜನ ನಮ್ಮನ್ನೇ ನೋಡಿ ಬೆರಗಾಗಿಹೋದೆವು. ಒಲ್ಲದ ಮನಸ್ಸಿನಿಂದ ಈಚೆ ಬರುವಾಗ ಒಬ್ಬೊಬ್ಬರೂ ಹೇಗೆ ಕಾಣ್ತಿದ್ದೆವು ಎಂದು ನೆನೆಸಿಕೊಳ್ಳುತ್ತಿದ್ದ ಮಕ್ಕಳಾದ ನಮ್ಮ ಸಡಗರದ ನಗುವಿನ ನಡುವೆ ದೊಡ್ಡೋರು ʼದುಡ್ಡು ದಂಡʼ ಎಂದು ಮಾತನಾಡಿಕೊಳ್ಳುತ್ತಿದ್ದರು. 

ನಮ್ಮಕ್ಕನ ಮನೆಯ ಮುಂದೆ ಮಾವಿನಮರಗಳಿದ್ದವು. ವಸಂತಾಗಮನವಾಗಿ ಅವು ಕಾಯಿಬಿಡುವ ಕಾಲ ಬಂದಾಕ್ಷಣವೇ ಮಂಗಗಳ ಹಿಂಡಿನ ಆಗಮನವೂ ಆಗುತ್ತಿತ್ತು. ಅವುಗಳದ್ದಂತೂ ಬಹಳ ಹಾವಳಿಯಾಗಿತ್ತು. ಮಂಗವೊಂದು ಒಳಗೆ ಬಂದು ಟೇಬಲ್‌ ಮೇಲಿಟ್ಟಿದ್ದ ಕನ್ನಡಿಯನ್ನು ತೆಗೆದುಕೊಂಡು ಹೋಗಿ ಮರದ ರೆಂಬೆಯ ಮೇಲೆ ಕುಳಿತು ಹಲ್ಲುಕಿರಿಯುತ್ತಾ ತನ್ನನ್ನುತಾನು ನೋಡಿಕೊಂಡದ್ದೂ ನೋಡಿಕೊಂಡಿದ್ದೆ! ಆ ಖುಷಿಯನ್ನು ತಾವೂ ಅನುಭವಿಸಬೇಕೆನ್ನುವಂತೆ ಕನ್ನಡಿಗಾಗಿ ಎಲ್ಲಾ ಮಂಗಗಳೂ ನಡೆಸಿದ ಫೈಟಿಂಗ್‌ ಅಂತೂ ಮರೆಯಕ್ಕೇ ಸಾಧ್ಯವಿಲ್ಲ! ನಮ್ಮ ಮನೆಗೆ ಹೊಸ ಡ್ರೆಸ್ಸಿಂಗ್‌ ಟೇಬಲ್‌ ತಂದಾಗ ಜಿಮ್ಮಿ ಅದರ ಕನ್ನಡಿಯ ಮುಂದೆ ನಿಂತು ಬೊಗಳಿದ್ದೂ ಬೊಗಳಿದ್ದೆ. ಪ್ರತಿಸಾರಿಯೂ ನವನವೀನವಾಗಿ ಹಾಗೇ ಬೊಗಳುತ್ತಿತ್ತು. ಚಿಪ್ಪಿ ಹಾಗಲ್ಲ. ಅದರ ಮುಂದೆ ಕನ್ನಡಿ ಹಿಡಿದರೆ ಸಾಕು, ಕನ್ನಡಿಯ ಹಿಂಭಾಗಕ್ಕೆ ಹೋಗಿ ಅದರ ರೈವಲ್‌ ಬೆಕ್ಕನ್ನು ಹಿಡಿಯುವ ಪ್ರಯತ್ನ ಮಾಡುತ್ತಿತ್ತು! ನಮಗೆ ಅದೇ ಆಟ. 

ಪ್ರತಿದಿನ ಬೆಳಿಗ್ಗೆ ನಾವು ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಹೆಚ್ಚಾಗಿ ನೋಡುವುದೇ ಕನ್ನಡಿಯನ್ನು. ಇದು ನಮಗೆ ಎಷ್ಟು ಅಚ್ಚುಮೆಚ್ಚು ಎಂದರೆ ನಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೂ ನಾವು ಸೆಲ್ಫಿ ಕ್ಯಾಮೆರಾವನ್ನು ತೆರೆದು ಅದನ್ನು ಕನ್ನಡಿಯಾಗಿ ಬಳಸ್ತೀವಿ. ಕೆಲವು ಮೊಬೈಲ್‌ ಗಳಲ್ಲಿ ಪ್ರತ್ಯೇಕವಾಗಿ ಕನ್ನಡಿಯೂ ಇರುತ್ತದೆ. ಸಮಯ ಸಿಕ್ಕಾಗಲೆಲ್ಲಾ ವಿವಿಧ ಆಂಗಲ್ ಗಳಲ್ಲಿ ನಮ್ಮನ್ನು ನಾವೇ ನೋಡಿಕೊಳ್ಳುತ್ತಾ ಸೆಲ್ಫಿ ತೆಗೆದುಕೊಳ್ಳುವುದೆಂದರೆ ಸಂಭ್ರಮವೋ ಸಂಭ್ರಮ! ಹೇಗಿದ್ದರೂ ಹೇಗಾದರೂ ನಮ್ಮ ಮುಖವೇ ತಾನೇ. 

ಕನ್ನಡಿ ಎಂದರೆ ಮುಖ ನೋಡಿಕೊಳ್ಳಲು ಮಾತ್ರ ಎಂದುಕೊಳ್ಳುವಂತಿಲ್ಲ. ವಾಸ್ತುಶಾಸ್ತ್ರದಲ್ಲಿ ಕನ್ನಡಿಗೆ ಬಹಳಷ್ಟು ಮಹತ್ವವನ್ನು ನೀಡುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಕನ್ನಡಿಯು ನಕಾರಾತ್ಮಕ ಶಕ್ತಿಯನ್ನು ಹೀರಿಕೊಂಡು, ಸಕಾರಾತ್ಮಕ ಶಕ್ತಿಯನ್ನು ಬಿಡುಗಡೆಗೊಳಿಸಿ, ಸಂಪತ್ತನ್ನು ಆಕರ್ಷಿಸುತ್ತದೆ ಎಂಬ ನಂಬಿಕೆಯಿದೆ. ಸಾಮಾನ್ಯವಾಗಿ ವ್ಯಾಪಾರಸ್ಥರು ನಗದು ಪೆಟ್ಟಿಗೆಯ ಪಕ್ಕದಲ್ಲಿ ಇಟ್ಟಿರುವ ಕನ್ನಡಿ ಸಂಪತ್ತನ್ನು ಹೆಚ್ಚಿಸುವುದಲ್ಲದೇ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಂತೆ. ಒಡೆದ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದಂತೆ. ನಮ್ಮ ಸುಂದರ ಮೋರೆಯ ಮೇಲೆ ಸೀಳುಸೀಳು ಗೆರೆಗಳು ಬಂದರೆ ಯಾರಿಗೆ ತಾನೇ ಇಷ್ಟವಾಗುತ್ತದೆ ಹೇಳಿ. ಕನ್ನಡಿ ಯಾವ ಆಕಾರದಲ್ಲಿರಬೇಕು, ಅದನ್ನು ಮನೆಯ ಯಾವದಿಕ್ಕಿನಲ್ಲಿ ಹಾಕಬೇಕು,… ಇನ್ನೂ ಹೆಚ್ಚಿನ ಮಾಹಿತಿಗಾಗಿ ವಾಸ್ತುಶಾಸ್ತ್ರಜ್ಞರನ್ನು ಸಂಪರ್ಕಿಸಬಹುದು. ಅಹಾ ಕನ್ನಡಿಯ ಮಹಿಮೆಯೇ!

ದರ್ಪಣ ಎನ್ನುವ ಪದಕ್ಕೆ ಬಹಳವಾದ ಪ್ರಾಮುಖ್ಯತೆಯಿದೆ. ಅದರ ವ್ಯಾಪ್ತಿಯೂ ಅನೂಹ್ಯ. ಅಭಿನಯ ದರ್ಪಣ,ರ್ ಇತಿಹಾಸ ದರ್ಪಣ, ಪ್ರಪಂಚ ದರ್ಪಣ,  ವನಸಿರಿ ದರ್ಪಣ,  ನೃತ್ಯ ದರ್ಪಣ… ಸರ್ವಂ ದರ್ಪಣಮಯಂ ಜಗತ್. ʼಸಾಹಿತ್ಯ ದರ್ಪಣʼ ಅಥವಾ 'ರಚನೆಯ ಕನ್ನಡಿ' ಹದಿನಾಲ್ಕನೆಯ ಶತಮಾನದ ಆರಂಭದಲ್ಲಿ ವಿಶ್ವನಾಥರ ಕಾವ್ಯದ ಕುರಿತಾದ ಪ್ರಸಿದ್ಧ ಸಂಸ್ಕೃತ ಕೃತಿಯಾಗಿದೆ. ಕನ್ನಡದಲ್ಲಿಯೇ ರಚನೆಗೊಂಡಿರುವ ಸ್ವತಂತ್ರ ಕನ್ನಡ ವ್ಯಾಕರಣ ಗ್ರಂಥಗಳಲ್ಲಿ ಕೇಶಿರಾಜನ ಶಬ್ದಮಣಿದರ್ಪಣವು ಮೊಟ್ಟ ಮೊದಲನೆಯದು. ದರ್ಪಣದ ಬಗ್ಗೆ ಹೇಳುವಾಗ ನಮ್ಮ ಸುಪ್ರಸಿದ್ಧ ಬೇಲೂರಿನ ಚನ್ನಕೇಶವ ದೇವಾಲಯದಲ್ಲಿರುವ ದರ್ಪಣ ಸುಂದರಿಯನ್ನು ಸ್ಮರಿಸದಿರುವುದು ಸಾಧ್ಯವೆ? ನಿತ್ಯ ನಲಿಯುವ ಈ ಶಿಲಾಬಾಲಿಕೆಯರ ಬಗ್ಗೆ ದಾರ್ಶನಿಕ ಕವಿ ಡಿ.ವಿ.ಜಿ.ಯವರು ಅಂತಃಪುರಗೀತೆ ಎಂಬ ಕವನ ಸಂಕಲನವನ್ನೇ ರಚಿಸಿದ್ದಾರೆ. ʼಮುಗುದೆಯಾದೆಯಾ ಕನ್ನೆ ಮುಕುರದ ಚನ್ನೆ…ʼ ಆಂಗ್ಲಭಾಷೆಯಲ್ಲಿನ ಮಿರರ್ ನಮ್ಮ ಈ ʼಮುಕುರʼಕ್ಕೆ ಎಷ್ಟೊಂದು ಸಮೀಪದಲ್ಲಿದೆ ಅಲ್ಲವೆ? ಅಥವಾ ಮುಕುರದಿಂದಲೇ ಮಿರರ್‌ ಬಂದಿರಬಹುದೆ ಎನಿಸದಿರುವುದಿಲ್ಲ.  

ಕನ್ನಡಿಯ ಖಯಾಲಿಯ ಕುರಿತು ಹೇಳುವುದಾದರೆ ಹಂಗೇರಿಯ ಮದ್ಯದ ದೊರೆಯ ಹೆಂಡತಿಯೊಬ್ಬಳಿಗೆ ತರಹೇವಾರಿ ಕನ್ನಡಿಗಳಲ್ಲಿ ತನ್ನ ಸೌಂದರ್ಯವನ್ನು ನೋಡಿಕೊಂಡು ಆನಂದಿಸಬೇಕು ಎಂಬ ವಿಕ್ಷಿಪ್ತ ಆಸೆ ಇದ್ದುದರಿಂದ ಜಗತ್ತಿನ ನಾನಾ ಕಡೆಗಳಿಂದ ಆಕೆ ಸುಮಾರು 2750 ದುಬಾರಿ ಬೆಲೆಯ ಕನ್ನಡಿಗಳನ್ನು ತರಿಸಿಟ್ಟುಕೊಂಡಿದ್ದಳಂತೆ! 

ನಮ್ಮನ್ನು ನಾವು ನೋಡಿಕೊಳ್ಳಲು ಅಂದಗೊಳಿಸಿಕೊಳ್ಳಲು ಸಂಪೂರ್ಣವಾಗಿ ಅವಲಂಭಿಸಿರುವ ಈ ಪರಮಾಪ್ತ ಕನ್ನಡಿ ವಸ್ತುವೇ ಅದರೂ ಆತ್ಮೀಯ ಗೆಳೆಯನ ಸ್ಥಾನವನ್ನೇ ಕೊಟ್ಟಿರುತ್ತೇವೆ. ಕಿಶೋರಾವಸ್ಥೆಯಲ್ಲಿ ಕುತೂಹಲದಿಂದ ವೀಕ್ಷಿಸುವ ಈ ಸಾಧನವನ್ನು ಹದಿವಯಕ್ಕೆ ಕಾಲಿಟ್ಟ ಕ್ಷಣದಿಂದಲೇ ಹದಮೀರಿ ಆರಾಧಿಸಲಾರಂಭಿಸುತ್ತೇವೆ. ನಮ್ಮನ್ನೇ ನಾವು ತಿದ್ದಿತೀಡಿ ಅಂದಗೊಳಿಸುವ ಪ್ರಕ್ರಿಯೆಯಲ್ಲಿ ಪದೇಪದೇ ಕನ್ನಡಿಯ ಎದುರು ನಿಲ್ಲುವುದು ವಯೋಸಹಜ ಗುಣವೆನಿಸಿಬಿಟ್ಟಿದೆ. ಮುಂದೆ ಸಾಗಿದಂತೆ ನಮ್ಮನ್ನು ನಾವು ಬದುಕಿನ ಯಾಂತ್ರಿಕತೆಗೆ ಒಡ್ಡಿಕೊಳ್ಳುತ್ತಾ, ಒಗ್ಗಿಕೊಳ್ಳುತ್ತಾ ಕನ್ನಡಿಯಲ್ಲಿ ನೋಡಿಕೊಳ್ಳುವುದನ್ನೂ ಒಂದು ಯಾಂತ್ರಿಕ ಕ್ರಿಯೆಯನ್ನಾಗೇ ಮಾಡಿಕೊಂಡುಬಿಡುತ್ತೇವೆ. ಯಾಂತ್ರಿಕತೆಯಲ್ಲೂ ತನ್ನತ್ತ ಸೆಳೆವ ಮಾಂತ್ರಿಕತೆಯನ್ನು ಹೊಂದಿರುವುದು ಕನ್ನಡಿಯೊಂದೇಯೇನೋ! ಕನ್ನಡಿಯೇ ಇಲ್ಲದ ಬದುಕಿನ ಕಲ್ಪನೆಯೇ ಅಸಾಧ್ಯವೇನೋ ಎನ್ನುವಷ್ಟರ ಮಟ್ಟಿಗೆ ಈ ಕನ್ನಡಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. 

ಕನ್ನಡಿ ಇನ್ನೂ ಜನಸಾಮಾನ್ಯರ ಕೈಗೆಟಕುವಂತಾಗುವ ಮೊದಲಿನ ಅಜ್ಜಿ ಹೇಳುತ್ತಿದ್ದ ಈ ಕಥೆ ನನಗೆ ತುಂಬಾ ಇಷ್ಟವಾಗಿತ್ತು. ಒಬ್ಬಾತನಿಗೆ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಒಂದು ಕನ್ನಡಿ ಸಿಗುತ್ತೆ. ಅದನ್ನು ನೋಡಿದವನಿಗೆ 'ಓಹೋ ನಮ್ಮಪ್ಪನ ಪೋಟ' ಅಂತ ಬಹಳ ಖುಷಿಯಾಗಿ ಮನೆಗೆ ತಂದಿಟ್ಟುಕೊಂಡು ಆಗಾಗ ನೋಡುತ್ತಾ ಸಂತೋಷಪಡ್ತಿರ್ತಾನೆ. ಇದನ್ನು ಗಮನಿಸಿದ ಅವನ ಹೆಂಡತಿ ಏನದು ಅಂತ ನೋಡಿದವಳು ಕೆಂಡಾಮಂಡಲವಾಗಿ 'ಯಾರಿವಳು ನನ್ನ ಸವತಿ' ಅಂತ ಗಂಡನ್ನ ತರಾಟೆಗೆ ತಗೊಳ್ತಾಳೆ. ಆತ ನಮ್ಮಪ್ಪ ಅಂತ ಎಷ್ಟು ಹೇಳಿದ್ರೂ ಒಪ್ಪಲ್ಲ. ಅಚಾನಕ್ಕಾಗಿ ಇಬ್ಬರೂ ಒಟ್ಟಾಗಿ ನೋಡಿದಾಗ ಅದು ತಾವಿಬ್ಬರೇ ಎಂದು ಗೊತ್ತಾಗಿ ದಿನವೂ ನೋಡಿಕೊಳ್ಳುತ್ತಾ ಖುಷಿಯಾಗಿರ್ತಾರೆ!

        ಕನ್ನಡಿಯ ಬಗ್ಗೆ ಕಥೆಗಳಿಗೇನೂ ಕಮ್ಮಿಯಿಲ್ಲ. ಆ ಕಾಲ ಈ ಕಾಲ ಸರ್ವಕಾಲದಲ್ಲೂ ಮನುಕುಲದಲ್ಲಿ ಹೊಸಹೊಸ ಪೀಳಿಗೆಗಳು ಹೊರಬಂದು ಕನ್ನಡಿಯಲ್ಲಿ ತಮ್ಮನ್ನು ತಾವೇ ಕಂಡು ಹಿರಿಹಿರಿ ಹಿಗ್ಗುವಂತೆ ಕಥೆ, ಕವನ, ಲೇಖನಗಳು ಪುಂಖಾನುಪುಂಖವಾಗಿ ಸೃಷ್ಟಿಯಾಗುತ್ತಲೇ ಇವೆ. 

ನಮ್ಮ ತಾತ ಹೇಳುತ್ತಿದ್ದ ಮ್ಯಾಜಿಕ್‌ ಕನ್ನಡಿಯ ಕಥೆ ಬಹಳ ಆಸಕ್ತಿದಾಯಕವಾಗಿತ್ತು. ಆ ಕನ್ನಡೀನ ಯಾರ ಮುಖಕ್ಕೆ ಹಿಡೀತಾರೋ ಅವರ ಗುಣಗಳೆಲ್ಲಾ ಕನ್ನಡಿ ಮೇಲೆ ಬರ್ತಿತ್ತು. ಕನ್ನಡಿ ಸಿಕ್ಕಿದ ಹುಡುಗ ಅದನ್ನ ತನ್ನ ಅಪ್ಪ, ಅಮ್ಮ, ಅಕ್ಕ, ತಮ್ಮ, ಫ್ರೆಂಡ್ಸ್‌, ಮೇಷ್ಟ್ರು, … ಎಲ್ಲಾರ ಮುಖಕ್ಕೂ ಹಿಡೀತಾನೆ. ಅವರ ಬುದ್ದಿಯೆಲ್ಲಾ ತಿಳಿದು ಅವನ ತಲೆ ಚಿಟ್ಟುಹಿಡಿದುಹೋಗುತ್ತೆ. ಆಗ ಆ ಕನ್ನಡಿ ಕೊಟ್ಟ ಮ್ಯಾಜಿಕ್‌ ಮಾಮ ಬಂದು ʼಅದನ್ನು ದಿನಾ ಬೆಳಿಗ್ಗೆ ನಿನ್ನ ಮುಖ ನೋಡಿಕೊಂಡು ನಿನ್ನ ನೀನು ತಿದ್ದಿಕೊಳ್ಳಕ್ಕೆ ಕೊಟ್ಟಿದ್ದುʼ ಅಂತ ಹೇಳ್ತಾನೆ. ಆಗಂತೂ ಈ ಕಥೆಯ ತಲೆಬುಡ ಅರ್ಥವಾಗಿರಲಿಲ್ಲ. ಈಗ ಅಂಥಾ ಕನ್ನಡಿ ಒಂದು ನನ್ನ ಬಳಿ ಇದ್ದಿದ್ದರೆ ಎನಿಸದೇ ಇರುವುದಿಲ್ಲ. 

ತನ್ನದೇ ಸ್ವಂತ ಪ್ರಕಾಶವಿಲ್ಲದಿದ್ದರೂ ಆಗಸದ ಚಂದ್ರನಂತೆ ಪ್ರಸಿದ್ಧಿಯ ಪರಾಕಾಷ್ಟೆಗೆ ಏರಿರುವುದು ಈ ನಮ್ಮ ದರ್ಪಣವೇ ಇರಬಹುದು.  ಈ ಕನ್ನಡಿಯನ್ನು ನೋಡಿದರೆ ನನಗೆ ಕೆಲವೊಮ್ಮೆ ಕೃತಿ ಚೌರ್ಯ ಮಾಡುವವರ ನೆನಪಾಗುತ್ತದೆ.

ಬೆಳಗುವ ಪುಟ್ಟ ಹಣತೆಗೆ

ಪರಮಾನಂದದ ಸಂತೃಪ್ತಿ

ಸುತ್ತಲಿನ ಮಂದ ಪ್ರಕಾಶ

ತನ್ನೊಳಗಿನ

ಬೆಳಕ ಸೃಜನತೆಯೆಂದು,

ಪಕ್ಕದಲ್ಲಿಟ್ಟ ದರ್ಪಣಕ್ಕೋ

ಫಲಿತ ಎರವಲು ಕಿರಣಗಳ

ಪ್ರತಿಫಲಿಸಿ ಪ್ರಖರಿಸಿ

ಪ್ರಖ್ಯಾತಗೊಳ್ಳುವ ಅತೃಪ್ತ ಗೀಳು!


ಏನೇ ಆದರೂ ತನ್ನ ಪ್ರತಿಫಲನ ಸಾಮರ್ಥ್ಯದಿಂದಲೇ ಈ ನಮ್ಮ ದರ್ಪಣ ಬಾಹ್ಯಾಕಾಶಕ್ಕೂ ಏರಿ ತನ್ನ ಪ್ರಾಮುಖ್ಯತೆಯನ್ನು ಸಾರುತ್ತಿದೆ. ನಮ್ಮ ಭೂಮಿಯಿಂದ 560ಕಿ.ಮೀ. ಎತ್ತರದಲ್ಲಿ ಸ್ಥಾಪಿಸಿರುವ ಹಬಲ್‌ ದೂರದಶಕದಲ್ಲಿ ದೊಡ್ಡದಾದ ಕನ್ನಡಿಯಿದ್ದು ಹಬಲ್‌ನ ಕಾರ್ಯನಿರ್ವಹಣೆಗೆ ಸಹಕರಿಸುತ್ತಿದೆ. ಚಂದ್ರನ ಮೇಲೆಯೂ ಈ ನಮ್ಮ ಪ್ರತಿಫಲಕ ರೂಪದ ಕನ್ನಡಿಗಳನ್ನು ಇಟ್ಟು ದರ್ಪಣದ ಕೀರ್ತಿಯನ್ನು ಅಜರಾಮರಗೊಳಿಸಿದ್ದಾರೆ. ವೈಜ್ಞಾನಿಕವಾಗಿ ಇನ್ನೂ ಅನೇಕಾನೇಕ ಸಂದರ್ಭಗಳಲ್ಲಿ ಬಳಕೆಯಾಗುತ್ತಿರುವ ಈ ದರ್ಪಣ ತನ್ನ ಗುಣವಾದ ಪ್ರತಿಫಲನದ ಪ್ರಯೋಜನಗಳನ್ನು ಪರಾಕಾಷ್ಟೆಗೇರಿಸಿದೆ!  

      ಇತ್ತೀಚೆಗೆ ನಮ್ಮ ಬಗ್ಗೆ ನಮಗಿರುವ ಮನಸ್ಸಿನ ಚಿತ್ರಣಕ್ಕೂ ವಾಸ್ತವದ ಚಿತ್ರಕ್ಕೂ ತಾಳೆಯೇ ಇರುವುದಿಲ್ಲ. ಕೆಲವೊಮ್ಮೆ ಆನಂದದ ಅತ್ಯುತ್ಸಾಹದಲ್ಲಿ ನಲಿಯುತ್ತಾ ಕನ್ನಡಿಯೆದುರು ನಿಂತಾಗ ಕಂಡುಬರುವ ಕಟುಸತ್ಯವನ್ನು ಅರಗಿಸಿಕೊಳ್ಳಲು ಅಸಾಧ್ಯವೆನಿಸುವಂತಿರುತ್ತದೆ. ನಮ್ಮೊಳಗಿನ ಸತ್ವವನ್ನು(!) ಮರೆಮಾಚಿ ದುರ್ಬಲ ದೇಹವನ್ನಷ್ಟೇ ತೋರಿಸುವ ಕನ್ನಡಿಯ ಬಗ್ಗೆ ಕೋಪ ಬರದಿರಲು ಹೇಗೆ ಸಾಧ್ಯ.

ಆದರೂ ನನಗೆ ಕನ್ನಡಿ ಅಂದೂ, ಇಂದೂ, ಎಂದೆಂದಿಗೂ ಪರಮಪ್ರಿಯವೇ. ‘ಪ್ರತಿಬಿಂಬ’ ಎಂಬ ನನ್ನ ಹನಿಗವನವೊಂದು ಈ ರೀತಿ ಇದೆ:

ಕನ್ನಡಿಯೊಂದಿರಬೇಕು ಆಗಾಗ

ನನ್ನ ನಾ ನೋಡಿಕೊಳ್ಳಲು

ಸುಂದರಿ ಎಂಬ ಹಮ್ಮಿನಿಂದ

ವದನಾರವಿಂದದ ಅಂದ

ನೋಡಲು ಅಲ್ಲ

ಬಂದಿರಬಹುದಾದ ಹೊಸಕಲೆಗಳ

ಗುರುತಿಸಿ ನಿವಾರಿಸಲು!


ನಾವು ನೋಡಿಕೊಳ್ಳುವ ಕನ್ನಡಿ ನಿಮ್ನ ಅಥವಾ ಪೀನ ಆಗಿರಬಾರದು, ಇತರರ ಹೊಗಳಿಕೆ ಅಥವಾ ತೆಗಳಿಕೆಯಂತೆ. ಸಮತಲ ದರ್ಪಣವೇ ನಿಜ ಮಾನದಂಡ.

ಕನ್ನಡಿಯ ಬಗ್ಗೆ ಬಹಳ ಅರ್ಥಪೂರ್ಣವಾದ ಝೆನ್‌ ಸೂಕ್ತಿಯೊಂದು ಈ ರೀತಿ ಇದೆ:

ಏನನ್ನೂ ಸ್ವೀಕರಿಸುವುದಿಲ್ಲ

ಏನನ್ನೂ ತಿರಸ್ಕರಿಸುವುದಿಲ್ಲ

ಏನಿದ್ದರೂ ಗ್ರಹಿಸುತ್ತದೆ

ಯಾವುದನ್ನೂ ಸಂಗ್ರಹಿಸುವುದಿಲ್ಲ.


ಝನ್‌ ಸಾಧಕನ ಬಳಿಯಿದ್ದ ಜಾದೂ ಕನ್ನಡಿಯಂತೆ ಯಾವುದಾದರೂ ಸಮಸ್ಯೆ ಎದುರಾದಾಗ ಕನ್ನಡಿಯನ್ನೇ ದಿಟ್ಟಿಸಿ ಸಮಸ್ಯೆಯ ಮೂಲ ಮತ್ತು ಪರಿಹಾರ ಎರಡನ್ನೂ ತಿಳಿದುಕೊಳ್ಳುವಂತಿದ್ದರೆ….ಎಷ್ಟು ಚೆನ್ನಾಗಿರುತ್ತಿತ್ತು ನಮ್ಮೀ ಬದುಕು. ಎಲ್ಲವೂ ʼರೆʼ ರಾಜ್ಯ!                                    

ದರ್ಪಣದೊಳಗೇ ʼದರ್ಪʼ ಅಡಗಿರುವುದರಿಂದ ಅದು ನಮ್ಮ ಬಾಹ್ಯ ರೂಪ, ಮೈ ಬಣ್ಣ, ಮುಖ ಸೌಂದರ್ಯದ ಜೊತೆಗೇ ಅಹಂಕಾರವನ್ನೂ  ಬಿಂಬಿಸುತ್ತಿರುತ್ತದೇನೋ! ಇದೆಲ್ಲಾ ಬಾಹ್ಯ ಕನ್ನಡಿಯ ವಿಷಯವಾಯ್ತು. ವಾಸ್ತವದಲ್ಲಿ ನಮಗೆ ಬೇಕಾಗಿರುವುದು ನಮ್ಮ ನಿಜವಾದ ವ್ಯಕ್ತಿತ್ವ  ದರ್ಶನ ಮಾಡಿಸುವ ಮನದೊಳಗಿನ ಕನ್ನಡಿ. ಅಂತರಂಗದ ಕನ್ನಡಿಯಲ್ಲಿ ನಮ್ಮನ್ನು ನಾವು ನೋಡಲು ಸಾಧ್ಯವಾದರೆ ಅದ್ಭುತವೇ ಸೃಷ್ಟಿಯಾಗಿ ನಮ್ಮ ನೈಜ ಪ್ರತಿಭೆಯ ಅನಾವರಣವಾಗಲೂಬಹುದು. 

ಸಂಸ್ಕೃತದಲ್ಲಿ ಒಂದು ಸುಭಾಷಿತವು ಹೀಗಿದೆ-

ಯಸ್ಯಾ ನಾಸ್ತಿ ಸ್ವಯಂ ಪ್ರಜ್ಞಾ ಶಾಸ್ತ್ರಂ ತಸ್ಯ ಕರೋತಿ ಕಿಂ|

ಲೋಚನಾಭ್ಯಾಂ ವಿಹೀನಸ್ಯ ದರ್ಪಣಂ ಕಿಂ ಕರಿಷ್ಯತಿ||

(ಯಾರಿಗೆ ಸ್ವಪ್ರಜ್ಞೆ ಇರುವುದಿಲ್ಲವೋ ಅವರಿಗೆ ಶಾಸ್ತ್ರಗಳಿಂದ ಏನು ಪ್ರಯೋಜನ?

ಕಣ್ಣುಗಳೇ ಇಲ್ಲದವರಿಗೆ ಕನ್ನಡಿಯಿಂದ ಏನು ಪ್ರಯೋಜನ?)


ಇದರಿಂದ ಅಂಧರ ಮನಸ್ಸಿಗೆ ಎಷ್ಟೊಂದು ನೋವಾಗುತ್ತದೆ ಎಂಬ ಅಭಿಪ್ರಾಯ ಮೊದಲ ಓದಿನಲ್ಲಿ ಬಂದಿತ್ತು. ಒಮ್ಮೆ ಈ ಬಗ್ಗೆ ನನ್ನ ಆಪ್ತರೊಂದಿಗೆ ಚರ್ಚಿಸಿದಾಗ ತಿಳಿದದ್ದು, ‘ಕಣ್ಣು ಬಾಹ್ಯದ್ದೇ ಆಗಬೇಕಿಲ್ಲ. ಆಂತರ್ಯದ ಕಣ್ಣುಗಳನ್ನು ತೆರೆಯಲಾಗದವರು ಏನನ್ನೂ ನೋಡಲಾರರು. ನಮ್ಮನ್ನು ನಾವು ಹೇಗಿದ್ದೇವೆಂದು ತೋರಿಸುವ ಕನ್ನಡಿ ನಮ್ಮೊಳಗೇ ಇದೆ. ನಮ್ಮ ಅಂತರಂಗವೇ ಒಂದು ದರ್ಪಣ. ಅದನ್ನು ಕಾಣುವಂತಹ ಮನಃಸ್ಥಿತಿಯನ್ನು ಪಡೆದುಕೊಳ್ಳಲು ಕಾರ್ಯಪ್ರವೃತ್ತರಾಗಬೇಕು, ಅಷ್ಟೆ.’      

ಅಂತರಂಗದ ಕನ್ನಡಿಯನ್ನು ನಮ್ಮದಾಗಿಸಿಕೊಳ್ಳುವಂತೆ ಅಂತಃಚಕ್ಷುಗಳಿಗೆ ಅರಿವ ನೀಡೆನ್ನುವುದು ಅಂತರಾತ್ಮನಲ್ಲಿ ನಮ್ಮ ಕಳಕಳಿಯ ಪ್ರಾರ್ಥನೆಯಾಗಲಿ.

            ~ಪ್ರಭಾಮಣಿ ನಾಗರಾಜ





No comments:

Post a Comment