Tuesday, August 12, 2025

ಉದಯವಾಣಿ'ಯ 'ಸಾಪ್ತಾಹಿಕ ಸಂಪದ'ದಲ್ಲಿ 'ನಾನೂ ನನ್ನ ತೂಕವೂ...'


 ಉದಯವಾಣಿ'ಯ 'ಸಾಪ್ತಾಹಿಕ ಸಂಪದ'ದಲ್ಲಿ 'ನಾನೂ ನನ್ನ ತೂಕವೂ...'

 ಆಗಸ್ಟ್10, 2025ರಂದು ಪ್ರಕಟವಾಗಿದೆ. ಓದಿ ಪ್ರತಿಕ್ರಿಯಿಸಿ🌼


🧘️ನಾನೂ ನನ್ನ ತೂಕವೂ... 

 

  ʼಭೂಮಿ ತೂಕದ ವ್ಯಕ್ತಿ' ಎಂಬ ಗೌರವಕ್ಕೆ ಪಾತ್ರರಾಗಿದ್ದ ಘನದೇಹಿಯಾದ ನನ್ನ ತಾಯಿಯ ಒಡಲಿನಿಂದ ಮಡಿಲಿಗೆ ಬಂದು ಸಮೃದ್ಧ ಪಾಲನೆ-ಪೋಷಣೆಗಳಿಂದ ಸೊಂಪಾಗಿ ಬೆಳೆಯುತ್ತಿದ್ದ ನನಗೆ ಸುತ್ತಲಿನ ವಾತಾವರಣವೂ ಇಂಬುಗೊಡುವಂತಿತ್ತು.  ಮನೆಯಲ್ಲಿದ್ದ ಗೋಸಮೂಹದಲ್ಲಿ ಕರಾವು ನಿರಂತರವಾಗಿದ್ದುದರಿಂದ ಪೂರ್ಣಚಂದ್ರನಂತೆ ವೃದ್ಧಿಸುತ್ತಿದ್ದ ನನ್ನ ದೇಹಸಿರಿಗೆ ಅನುಕೂಲಕರವೇ ಆಗಿದ್ದು ಮೋಸವೆಸಗದಂತೆ ಗುಂಡುಗುಂಡಾಗಿ ಗುಜ್ಜಾನೆ ಮರಿಯಂತೆ ಅಥವಾ ಪ್ರಸ್ತುತ ಕುಂಗ್-ಫು-ಪಾಂಡನಂತೆ ಬೆಳೆದಿದ್ದ ನನ್ನನ್ನು ದೊಡ್ಡ ಮಕ್ಕಳೆಲ್ಲಾ ʼಪುಳಮೂಟೆʼ ಎಂದು ಎತ್ತಿಕೊಂಡು ಹೋಗಿ ಒಣಹುಲ್ಲುಗುಡ್ಡೆಯ ಎದುರು ಹಾಸಿದ ಹುಲ್ಲಿನ ಮೇಲೆ ಎಸೆಯುತ್ತಿದ್ದರು!   

     

      ಮೊದಮೊದಲು ನಾನೇನೂ ಇದನ್ನು ಸಮಸ್ಯೆಯೆಂದು ಪರಿಗಣಿಸಿರಲೇ ಇಲ್ಲ. ನನ್ನನ್ನು ಬೆಂಬೆತ್ತಿದ್ದ ಈ ಭೂತದ ಪರಿಚಯವಾಗಲು ನಾನು ಶಾಲೆಗೇ ಹೋಗಬೇಕಾಯ್ತು.  ಶಾಲೆಯಿಂದ  ಮೆಡಿಕಲ್‌ ಚೆಕಪ್‌ ಮಾಡಿಸುವಾಗ ನನ್ನ ತೂಕ ಬರೋಬ್ಬರಿ 100ಪೌಂಡ್ ಇದ್ದು ನನ್ನ ಸಹಪಾಠಿಗಳ ದೃಷ್ಟಿಯಲ್ಲಿ ನಾನೇನೋ ಮರಿಯಾನೆಯೇನೋ ಎನ್ನುವಂತಾಗಿ ಆಗಿನಿಂದ ಒಂದು ಅಪರಿಹಾರ್ಯ ಕೊರಗು ನನ್ನ ತಲೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. 

              

          ತ್ವರಿತಗತಿಯಲ್ಲಿ ಓಡಲಾರಂಭಿಸಿದ ಕಾಲ ನನ್ನನ್ನು ತಾಯಿಯಾಗುವ ಹಂತಕ್ಕಾಗಲೇ ತಂದುನಿಲ್ಲಿಸಿತು. ಈ ನಡುವೆ ನನ್ನ ಅನೇಕಾನೇಕ ಪ್ರಯೋಗಗಳಿಂದ ಅಡ್ಡಲೆಯಂತೆ ಏರಿ-ಇಳಿದು ಕಡೆಗೆ ದೊರೆತ ಈ ಅಮೂಲ್ಯ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅಡ್ಡಾದಿಡ್ಡಿಯಾಗಿ ವಿತ್‌ ಲೈಸೆನ್ಸ್‌ ಬೆಳೆಯಲಾರಂಭಿಸಿದ್ದೆ. ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಅನಿವಾರ್ಯ ಕಾರಣಗಳಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ದಿನಾಂಕಕ್ಕೆ ತಿಂಗಳು ಮೊದಲೇ ದಾಖಲಾಗಿದ್ದಾಗ ಬಸುರಿಯ ಬಯಕೆಯೆಂದು ಬಂಧುಗಳು ತಂದುಕೊಡುತ್ತಿದ್ದ ಬಗೆಬಗೆಯ ಭಕ್ಷ್ಯಗಳನ್ನು ಸ್ವಾಹಾಮಾಡುತ್ತಾ ಕಾಲದೂಡುತ್ತಿದ್ದ ನಾನು ಪ್ರತಿದಿನವೂ ಆಸ್ಪತ್ರೆಯ ಎಲ್ಲಾ ಕಾರಿಡಾರ್‌ಗಳಲ್ಲೂ ವಾಕ್‌ ಅಂಡ್ ಟಾಕ್ ಮಾಡುತ್ತಾ ಕೇಳಿದವರಿಗೆಲ್ಲಾ ಪ್ರವರ ಒಪ್ಪಿಸುತ್ತಾ ಕಟ್ಟಡದ ಮೂಲೆಮೂಲೆಗೂ ಚಿರಪರಿಚಿತಳಾಗಿಬಿಟ್ಟೆ. ಸ್ಕ್ಯಾನಿಂಗ್‌ ಸೌಲಭ್ಯವಿಲ್ಲದಿದ್ದ ಆ ಕಾಲದಲ್ಲಿ ನನ್ನನ್ನು ನೋಡಿದವರೆಲ್ಲಾ ನನ್ನ ಮಹೋನ್ನತ ಉದರವನ್ನು ತಮ್ಮ ಕಣ್ಣುಗಳಿಂದಲೇ ಅಳೆದು‌ ಸ್ಕ್ಯಾನ್ ಮಾಡಿ ಅವಳಿ-ಜವಳಿ ಎಂಬ ತೀರ್ಮಾನಕ್ಕೆ ಬಂದಿದ್ದರು. ನಾನಂತೂ ನನ್ನ ಕೂಸಿನ ತಾಣವಾಗಿದ್ದ ಪರಮಪ್ರಿಯ ಉದರವನ್ನು ಪೋಷಿಸುವುದರಲ್ಲಿಯೇ ನಿರತಳಾಗಿದ್ದೆ. ಒನ್ ಫೈನ್‌ ಡೇ ಸಿಝೇರಿಯನ್‌ಆಗಿ ನನ್ನ ಕಂದ ಆಯಾಸಪಡದೇ ತೊಟ್ಟಿಲಿನಿಂದ ಮೇಲೆತ್ತಿಕೊಂಡಂತೆ ಧರೆಗಿಳಿದೇಬಿಟ್ಟಿತು. ಆಸ್ಪತ್ರೆಯ ಸಿಬ್ಬಂದಿ ತಪ್ಪಾದ ತಮ್ಮ ಲೆಕ್ಕಾಚಾರದ ನಿರಾಸೆಯಿಂದ ʼಈಯಮ್ಮ ಹೊಟ್ಟೇನೇ ಬೆಳೆಸಿಕೊಂಡಿತ್ತು ಅಂತ ಕಾಣ್ತದೆ. ನಾವು ಅವಳಿನಾದ್ರೂ ಹುಟ್ತವೆ ಅಂದ್ಕೊಂಡ್ರೆ ಇಲಿಮರಿ ಹಂಗಿರೋ ಒಂದೇ ಹುಟ್ಟದೆʼ ಎಂದು ಮೂದಲಿಸಿದರು! ಇದಕ್ಕಿಂತಲೂ ಆದ ದೊಡ್ಡ ಅವಮಾನವೆಂದರೆ ನಮ್ಮ ಜೂನಿಯರ್‌ ಕಾಲೇಜಿನ ಪ್ರಿನ್ಸಿಪಾಲರು ʼನೋಡಿ, ಮೇಡಂ ಈಗ್ಲೂ ಹೇಗಿದಾರೆ! ಬೋರ್ಡ್‌ ಮುಂದೆ ನಿಂತ್ರೆ ಮಕ್ಕಳು ಥರಗುಟ್ಟಿಕೊಂಡು ನಡುಗಬೇಕುʼ ಎಂದು ಮೆಚ್ಚುಗೆಯ ದೃಷ್ಟಿ ಬೀರಿದಾಗ ನಾನೇನಾದರೂ ಲಂಕಿಣಿಯಂತೆ ಕಾಣುತ್ತಿದ್ದೀನಾ ಎಂದುಕೊಳ್ಳುವಂತಾಯ್ತು!

             

        ಪರಿಸ್ಥಿತಿಗಳು ಹೀಗೇ ಪ್ರತಿಕೂಲವಾಗಿದ್ದ ಹಿನ್ನೆಲೆಯಲ್ಲಿ ಒಮ್ಮೆ ಡಾಕ್ಟರನ್ನು ಕಾಣಲು ಹೋಗಿದ್ದಾಗ ಆಕೆ ಬಹಳ ಆತ್ಮೀಯತೆಯಿಂದಲೇ ʼನೋಡಮ್ಮ, ನೀನು ಈಗಿನಿಂದಲೇ ಹೀಗಿದ್ದರೆ ಇದೇ ಮೈಯನ್ನು ಲೈಫ್‌ ಲಾಂಗ್‌ ಹೊತ್ತುಕೊಂಡಿರಬೇಕಾಗುತ್ತೆ,ʼ ಎಂಬ ಸೌಮ್ಯಾಸ್ತ್ರವನ್ನು ನನ್ನತ್ತ ಒಗೆದು ಮತ್ತೆ ಬರೋವಾಗ 10ಕೆಜಿಯಾದರೂ ಕಮ್ಮಿಯಾಗಿರಬೇಕೆಂಬ ಟಾಸ್ಕನ್ನೂ ನೀಡಿದರು. ಅದೇ ಸಂದರ್ಭದಲ್ಲಿ ನಮ್ಮತ್ತೆಯವರನ್ನು ನೋಡಲು ಹಳ್ಳಿಗೆ ಹೋಗಿದ್ದಾಗ ತಮ್ಮ ಹಿರಿಯ ಮಗುವಿನ ಚೌಲಕ್ಕೆ ಕರೆಯಲು ಬಂದಿದ್ದ ದಂಪತಿಗಳು ಹೋದ ನಂತರ ʼಎರಡನೇ ಮಗುವಾದರೂ ಎಷ್ಟು ತೆಳ್ಳಗೆ ಚೆಕ್ಕಾಗಿದಾಳೆ ʼ ಎಂದು ನನ್ನ ಚೆಕ್‌ ನೀಡಲಾಗದ ತೂಕೋತ್ಕರ್ಷಕ್ಕೆ ಸವಾಲೆಸೆದರು. ಅತ್ಯಂತ ಸೌಮ್ಯ ಸ್ವಭಾವದವರಾದ ಅವರ ಆಂತರಿಕ ತುಮುಲವನ್ನು ಅರ್ಥಮಾಡಿಕೊಳ್ಳುವ ಮೊದಲೇ ನನ್ನಲ್ಲೆಲ್ಲಿ ಅಂತಃಕುಸಿತವುಂಟಾಗುವುದೋ ಎಂದು ಹೆದರಿ ಶೀಘ್ರವೇ ಕಾರ್ಯಪ್ರವೃತ್ತಳಾದೆ. ಹಗಲು ಹಾಸಿಗೆಯಿಂದ ಎದ್ದಾಕ್ಷಣದಿಂದಲೇ ಮುಗಿಯದ ಕೆಲಸಗಳ ಪರಂಪರೆಯಿಂದ ಬಂಧಿತಳಾಗುತ್ತಿದ್ದರಿಂದ ಮಲಗಿದಂತೆಯೇ ಮಾಡುವ ವಿವಿಧ ವ್ಯಾಯಾಮಗಳನ್ನು ಲಭ್ಯ ಮೂಲಗಳಿಂದ ಪಡೆದು ಅಭ್ಯಾಸಕ್ಕೆ ಮೊದಲಿಟ್ಟೆ. ಜೊತೆಗೇ ಸೊಪ್ಪುಸೆದೆಗಳಿಂದಲೇ ಹೊಟ್ಟೆತುಂಬಿಸಿಕೊಳ್ಳುವ ಡಯಟ್ನೊಂದಿಗೆ ಸಪೂರ ಸುಂದರಿಯಾಗುವ ಕನಸುಕಾಣುತ್ತಾ ಮಧ್ಯೆಮಧ್ಯೆ ಹೊಸದಾಗಿ ಬಸ್‌ಸ್ಟ್ಯಾಂಡ್‌ನಲ್ಲಿಟ್ಟ ತೂಕದ ಮೆಶೀನಿಗೆ ಒಂದು ರೂಪಾಯಿ ಕಾಯಿನ್ ದಕ್ಷಿಣೆ ಹಾಕಿ ತೂಕ ನೋಡಿಕೊಳ್ಳುತ್ತಾ ಮುನ್ನಡೆಯುತ್ತಿದ್ದಾಗ ಪುನಃ ಡಾಕ್ಟರನ್ನು ಕಾಣಲು ಹೋಗಬೇಕಾಯ್ತು. ನನ್ನನ್ನು ನೋಡಿದಾಕ್ಷಣವೇ ಗಾಬರಿಯಾದ ಡಾಕ್ಟ್ರಮ್ಮ, ʼಅದ್ಹೇಗೆ ಇಷ್ಟು ಸಣ್ಣಗಾದ್ರಿ?ʼ ಎಂದು ವಿಚಾರಿಸಿ ಅಲ್ಲೇ ಇದ್ದ ಇನ್ಸ್ಪೆಕ್ಷನ್‌ ಟೇಬಲ್‌ ಮೇಲೇ ಡೆಮಾನ್ಸ್‌ಟ್ರೇಟ್‌ ಮಾಡಿ ತೋರಿಸಲು ಹೇಳಿದರು. ನಾನಂತೂ ಡಾಕ್ಟರಿಂದಲೇ ಸರ್ಟಿಫಿಕೇಟ್‌ ಸಿಕ್ಕ ಗೆಲುವಿನ ಅತ್ಯುತ್ಸಾಹದಲ್ಲಿ ಅವರಿಗೆ ಎಲ್ಲವನ್ನೂ ಪ್ರಾಕ್ಟಿಕಲ್ಲಾಗೇ ವಿವರಿಸಿದೆ. ನಮ್ಮತ್ತೆಯೂ ʼನೀನು ಸಣ್ಣಗಾಗಿದ್ದು ಇನ್ನು ಸಾಕಮ್ಮ, ನೋಡಕ್ಕಾಗಲ್ಲʼ ಎಂದು ಆಶೀರ್ವದಿಸಿದರು. ಮತ್ತೊಮ್ಮೆ ಡಾಕ್ಟರನ್ನು ಕಾಣಲು ಹೋದಾಗ ʼನೀವು ಅದ್ಹೇಗೆ ತೂಕ ಇಳಿಸಿಕೊಂಡುಬಿಟ್ಟಿರೊ, ನನಗಂತೂ ಮನೆಗೆ ಬರೋ ಗೆಸ್ಟ್‌ಸ್‌/ವಿಸಿಟರ್ಸ್‌ ನಡುವೆ ಏನುಮಾಡಕ್ಕೂ ಆಗ್ತಿಲ್ಲʼ ಎಂದು ಪೇಚಾಡಿಕೊಂಡರು. ಅಲ್ಲಿಗೆ  ಸಣ್ಣಗಾಗುವುದೂ ಸಾಧ್ಯ ಎನ್ನುವ ಒಂದು ಅಧ್ಯಾಯ ಮುಗಿಯಿತು. 

            

       ಮುಂದಿನ ಜೀವನದ ಏರುಪೇರುಗಳಲ್ಲಿ ನನ್ನ ತೂಕದ ಪಾಡು ಗಾಳಿಪಟವನ್ನು ಹಾರಿಸುವಂತೆ ನಾನು ಆಗಾಗ ಜಗ್ಗಿ ಎಳೆದು ಕೆಳಗಿಳಿಸುವುದು, ಸ್ವಲ್ಪ ಸಡಿಲಾದಾಕ್ಷಣವೇ ಅದು ಮೇಲೇರುವುದು ನಡೆದೇ ಇತ್ತು. ಹೇಗಾದರೂ ನೆಟ್‌ ರಿಸಲ್ಟ್‌ ಮಾತ್ರ ಸ್ವಲ್ಪ ಏರುವಿಕೆಯೇ ಆಗಿರುತ್ತಿತ್ತು. ಈಗಂತೂ ಸಂಪೂರ್ಣ ವಿಶ್ರಾಂತಸ್ಥಿತಿಯನ್ನು ತಲುಪಿದ ನಂತರ ಕೈಗೆ ಭೂಷಣವಾದ ಮೊಬೈಲ್‌ ಹಿಡಿದು ಕುಳಿತಲ್ಲೇ ತೂಕಡಿಸುತ್ತಲೇ ತೂಕ ಅಂಕೆಮೀರುತ್ತಿದೆ. ಬದುಕಿನ ಈ ಸಂಧ್ಯಾಕಾಲದಲ್ಲಿ ಮನವನ್ನು ಕಂಟ್ರೋಲ್‌ನಲ್ಲಿಟ್ಟುಕೊಳ್ಳಬೇಕೆನ್ನುವುದು ಲೋಕಾರೂಢಿ. ಆದರೆ ನನಗೆ ನನ್ನ ಈ ತನುವನ್ನು ಕಂಟ್ರೋಲ್‌ ಮಾಡಿಕೊಳ್ಳುವುದೇ ದುಃಸ್ಸರವಾಗಿ ʼತಾಳಲಾರೆ ನಿನ್ನ ತೂಕʼ ಎಂದು ಈಗಾಗಲೇ ಮನೆಯ 5-6 ವೇಯಿಂಗ್‌ ಮೆಶಿನ್‌ಗಳು ಮುಷ್ಕರ ಹೂಡಿ ಹೊಸವುಗಳ ಆಗಮನಕ್ಕೆಡೆಮಾಡಿಕೊಟ್ಟಿವೆ. ಮಕ್ಕಳು ʼನೀನೇನು ಅಕ್ಕಿಮೂಟೆಯೇನಮ್ಮ, ಯಾವಾಗ್ಲೂ ತೂಕ ನೋಡಿಕೊಳ್ತಿರ್ತೀಯಲ್ಲʼ ಎನ್ನುತ್ತಾರೆ. ಆದರೂ ಮರಳಿ ಯತ್ನವ ಮಾಡು…

             

          ಈ ಎಲ್ಲಾ ಸಾಧ್ಯಾಸಾಧ್ಯತೆಗಳ ನಡುವೆ ನನ್ನನ್ನು ಸಾಕಷ್ಟು ಘನತರ ವ್ಯಕ್ತಿಯಾಗಿಸಿಯೂ ನನ್ನಿಂದಲೇ ಅವಹೇಳನಕ್ಕೊಳಗಾಗಿರುವ ಈ ನನ್ನ ತೂಕವನ್ನು ಇಳಿಸಿಕೊಳ್ಳುವ ಸತತ ಪ್ರಯತ್ನದ ಅವಿರತ ಶ್ರಮದಲ್ಲಿ ತೂಕವು ಕಡಿಮೆಯಾದಾಗ ಹಿಗ್ಗುತ್ತಾ ಹೆಚ್ಚಾದಾಗ ಕುಗ್ಗುತ್ತಾ ವಿಲೋಮಾನುಭೂತಿಯಲ್ಲಿ ಬದುಕನ್ನು ಮುನ್ನಡೆಸುತ್ತಿದ್ದೇನೆ!


✍️ಪ್ರಭಾಮಣಿನಾಗರಾಜ, ಹಾಸನ

Monday, July 7, 2025

'ವಿಶ್ವವಾಣಿ'ಯ 'ವಿರಾಮ'ದಲ್ಲಿ 'ಸೂಟ್ಕೇಸಿನ ಅಟಾಟೋಪ'💼

 

'ವಿಶ್ವವಾಣಿ'ಯ 'ವಿರಾಮ'ದಲ್ಲಿ 'ಸೂಟ್ಕೇಸಿನ ಅಟಾಟೋಪ'💼
ನಿನ್ನೆ (ಜುಲೈ6)  ಪ್ರಕಟವಾಗಿದೆ. ಓದಿ ಪ್ರತಿಕ್ರಿಯಿಸಿ🌼

https://www.facebook.com/share/p/1Zu7pz7iyb/



Tuesday, June 17, 2025

ವಿಜಯೇಂದ್ರ ಪಾಟೀಲರ 'ಆತ್ಮಸಾಕ್ಷಿಯ ಹಾವಳಿಗಳು' ಕುರಿತು :

 



17/6/2015ರ ನನ್ನ ಫೇಸ್ಬುಕ್ ನಲ್ಲಿದೆ.


ಇಲ್ಲಿ ಪೇಸ್ಟ್ ಆಗುತ್ತಿಲ್ಲ.

Monday, April 14, 2025

ಲಲಿತ ಪ್ರಬಂಧ - 'ಓಟ ಓಟ ಹಿಂದೋಟ'

 


ಹಿಂದಿನ ವಾರದ ( ಏಪ್ರಿಲ್10, 2025) 'ಸುಧಾ' ಪತ್ರಿಕೆಯ 'ಭಿನ್ನನೋಟ'ದಲ್ಲಿ  ಪ್ರಕಟವಾಗಿರುವ ನನ್ನ ಲಲಿತ ಪ್ರಬಂಧ - 'ಓಟ ಓಟ ಹಿಂದೋಟ'




ನಿಮ್ಮ ಪ್ರೀತಿಯ ಓದಿಗೆ🌼

'ಸುಧಾ' ಪತ್ರಿಕಾ ಬಳಗಕ್ಕೆ ಧನ್ಯವಾದಗಳು🙏


🏃ಓಟ ಓಟ ಹಿಂದೋಟ🏃


ಓಟ ಎಂದರೆ ಮುಮ್ಮುಖ ವೇಗದ ಚಲನೆ ಎನ್ನುವುದು ಸರ್ವವೇದ್ಯ ಆದರೆ ಇದೇನಿದು ಹಿಂದೋಟ? ಹಿಂದಕ್ಕೆ ಓಡಲು ಸಾಧ್ಯವೇ? ಎಂದು ಅಚ್ಚರಿ ಪಡಲೂಬಹುದು. ನಮ್ಮ ದೇಹಕ್ಕೆ ಮುಂದಕ್ಕೆ ಮಾತ್ರ ಓಡಲು ಸಾಧ್ಯ ನಿಜ. (ಗಿನ್ನೆಸ್ ದಾಖಲೆ ಮಾಡಲು ಯಾರಾದರೂ ಹಿಮ್ಮುಖವಾಗಿ ಓಡಿರಲೂ ಬಹುದು!) ಆದರೆ ಮನಸ್ಸು? ಅದು ಮುಂದೆ ಹಿಂದೆ ಮೇಲೆ ಕೆಳಗೆ... ದಶದಿಕ್ಕುಗಳ ಯಾವ ನೇರದಲ್ಲಾದರೂ ಓಡೀತು! ಸಧ್ಯದಲ್ಲಿ ಸದಾ ಹಿಂದಕ್ಕೇ ಒಡಲಿಚ್ಚಿಸುವ ಈ ಮನದ ಬಗ್ಗೆ ನೋಡೋಣ ಎಂದೇನೂ ನಾನು ಹೇಳಲು ಹೊರಟಿಲ್ಲ. ಈಗೀಗ ವರ್ತಮಾನದ ಕಾರ್ಪಣ್ಯಗಳೇ ನಮ್ಮನ್ನು ಕಟ್ಟಿಹಾಕುತ್ತಿರುವಾಗ  ಹಿಂದಿನದನ್ನೆಲ್ಲಾ ನೆನೆಸಿಕೊಂಡು ಮೆಲುಕು ಹಾಕುವ ವ್ಯವಧಾನವಾದರೂ ಎಲ್ಲಿದೆ?  ಆ ಜವಾಬ್ದಾರಿಯನ್ನು  ನಮ್ಮೆಲ್ಲರ ಪರಮ ಪ್ರಿಯಮಿತ್ರನಾದ ಫೇಸ್ಬುಕ್ ವಹಿಸಿಕೊಂಡುಬಿಟ್ಟಿದೆ!

ಪ್ರತಿದಿನ ರಾತ್ರಿ 12ಗಂಟೆಗೆ ನಾನು ಮಾಡುವ ಮೊದಲ ಕೆಲಸವೆಂದರೆ ಫೇಸ್ಬುಕ್ನಲ್ಲಿ ಮೆಮೋರೀಸನ್ನು ಸರ್ಚ್ ಮಾಡುವುದು. ಗತಿಸಿದ ಕಾಲದಲ್ಲಿ ಹಿಂಪಯಣ ಮಾಡಿ ಹಿಂದಿನ ವರ್ಷಗಳಲ್ಲಿ ಇದೇ ದಿನದಲ್ಲಿ ನಾವು ಮಾಡಿದ್ದ ಅಮೋಘ ಸಾಧನೆಯನ್ನು ಎತ್ತಿ(ಮತ್ತೆ) ತೋರಿಸಿ ಭೇಷ್ ಎನಿಸಿಕೊಳ್ಳುವುದರಲ್ಲಿ  ಫೇಸ್ಬುಕ್ ಗೆ ಎಲ್ಲಿಲ್ಲದ ಖುಷಿ! ಅದನ್ನು ಮತ್ತೆಮತ್ತೆ ಹಂಚಿಕೊಂಡು ಬರುವ ಲೈಕ್, ಕಾಮೆಂಟ್ಗಳನ್ನು ಎಣಿಸುವುದರಲ್ಲಿ ನಮಗೆ ಖುಷಿ!

ನನ್ನ ಫೇಸ್ಬುಕ್ ಅಂತೂ ʼ1-2...10ವರ್ಷಗಳ ಹಿಂದೆ...ʼ ಮುಂತಾದ ನೆನಪುಗಳ ಮೆರವಣಿಗೆಗಳಿಂದಲೇ ತುಂಬಿಹೋಗಿದೆ. ಇದೇನಿದು ಇವರ ಬದುಕು ಮುನ್ನಡೆಯುತ್ತಲೇ ಇಲ್ಲವೇ? ಯಾವಾಗ ಇವರು ದನ-ಎಮ್ಮೆಗಳಂಥಾ ಮೆಲುಕು ಹಾಕುವ ಪ್ರಾಣಿಗಳ ಗುಂಪಿಗೆ ಸೇರಿದರು? ಎಂದು ಆತ್ಮೀಯರು ಅಲವತ್ತುಕೊಳ್ಳಬಹುದು. ಆದರೂ ಗತ ಮೆಲುಕಿನಲ್ಲಿರುವ ಸುಖ ಗಬಗಬನೆ ತಿಂದು ಮುಗಿಸುವ ವಾಸ್ತವದಲ್ಲಿ ಹೇಗೆ ತಾನೇ ಇರಲು ಸಾಧ್ಯ?

ನಾವು ಚಿಕ್ಕವರಿದ್ದಾಗ ಸೈಕಲ್ ಚಕ್ರದ ಹೊರಫ್ರೇಮನ್ನು ಓಡಿಸುತ್ತಾ ಅದರ ಹಿಂದೆ ಓಡುವುದೇ ಒಂದು ಆಟವಾಗಿತ್ತು. ಊರ ಮಕ್ಕಳೆಲ್ಲಾ ಸಮಯದ ಪರಿವೆಯಿಲ್ಲದೇ ಯಾವಾಗೆಂದರೆ ಆಗ, ರಜೆ ಇದ್ದರಂತೂ ಮದ್ಯಾಹ್ನದ ರಣರಣ ಬಿಸಿಲಿನಲ್ಲಿಯೂ ಚಕ್ರ ಓಡಿಸುತ್ತಿದ್ದರು. ನನ್ನ ಜೊತೆ ಮಕ್ಕಳಲ್ಲಿ ಒಬ್ಬನಾದ ಭೀಮನೂ ಚಕ್ರ ಓಡಿಸುತ್ತಾ ನಮ್ಮ ಮನೆ ಹತ್ರ ಬಂದಾಗ ಸದಾ ಜಗಲಿ ಮೇಲೆ ಕೂತಿರ್ತಿದ್ದ ಅಜ್ಜಿ, 'ಹೇಗೆ ಓದ್ತಿದೀಯೋ ಭೀಮಾ?' ಎಂದು ಲೋಕಾಭಿರಾಮವಾಗಿ  ಕೇಳಿದರೆ, 'ನಿಮ್ಮೊಮ್ಮಗಳು ಮುಂದುಮುಂದಕ್ಕೆ ಹೋಗ್ತಿದಾರೆ ಅಜ್ಜಿ, ನಾನು ಹಿಂದುಹಿಂದಕ್ಕೆ ಹೋಗ್ತಿದೀನಿ,' ಅಂತಿದ್ದ! ಒಂದೇ ಕ್ಲಾಸಲ್ಲಿ ಫೇಲಾಗಿ ಕೂರೋದು ಅಂದ್ರೆ ಅವನ ಅರ್ಥದಲ್ಲಿ ಹಿಂದಕ್ಕೆ ಹೋಗೋದು ಅಂತ! ಹಾಗೆ ಹೇಳ್ತಿದ್ದೋನು ತನ್ನ ಅತ್ಯಂತ ಪ್ರಿಯ ಸಂಸಾರವನ್ನು ನಡುನೀರಿನಲ್ಲೇ ಕೈಬಿಟ್ಟು ಎಲ್ಲರಿಗಿಂತಲೂ ಮುಂದೆಯೇ ಹೋಗಿಬಿಟ್ಟ!

ಹಿಂದೋಟ ಎನ್ನುವುದು ಒಂದು ರೀತಿ ಹಿಂಬಡ್ತಿ ಎನ್ನುವಂತೆಯೇ ಸೌಂಡ್ ಆಗುತ್ತೆ. ಲಂಚ ಪಡೆದು ಸಿಕ್ಕಿಹಾಕಿಕೊಂಡ ಅಧಿಕಾರಿಗೆ ಹಿಂಬಡ್ತಿ ಶಿಕ್ಷೆ ನೀಡಿದ್ದನ್ನು ಪತ್ರಿಕೆಗಳಲ್ಲಿ ಆಗೀಗ ನೋಡುತ್ತಿರುತ್ತೇವೆ. ಬಡ್ತಿ ಎಂದರೆ ಪದೋನ್ನತಿ, ಮೇಲೇರಿಕೆ ಎನ್ನುವ ಅರ್ಥವಿದೆ. ಹಿಂಬಡ್ತಿ ಎಂದಾಗ ತಮ್ಮ ಸ್ಥಾನದಿಂದ ಕೆಳಗಿಳಿದರು ಎನ್ನುವುದು ಅಂಡರ್‌ಸ್ಟುಡ್!

ಹಿಂದೋಡುವ ಮನಸ್ಸು ಎಷ್ಟೊಂದು ಪ್ರಬಲವಾಗಿದೆಯೆಂದರೆ ಯಾರೇ ಆದರೂ ತಮ್ಮ ಬಾಲ್ಯ ಎಷ್ಟೊಂದು ಸುಂದರವಾಗಿತ್ತು ಎಂದೇ ಹಲುಬುತ್ತಾರೆ. ಕೈಗೆಟುಕದ ದ್ರಾಕ್ಷಿ ಹುಳಿ ಎನ್ನುವುದು ಸಾಮಾನ್ಯ ಉಕ್ತಿ. ಆದರೆ ಮರಳಿ ಪಡೆಯಲಾಗದ ಬಾಲ್ಯ ಮಧುರಾತಿ ಮಧುರ! ಹರಿವ ನದಿಗೆ ಅಣೆಕಟ್ಟನ್ನು ಅಡ್ಡಗಟ್ಟಿದಾಗ ಹಿನ್ನೀರು ಒತ್ತಡದಿಂದ ಹಿಮ್ಮುಖವಾಗಿ ನುಗ್ಗುವಂತೆ ಬದುಕು ಮುಂದಿನ ದಾರಿ ಕಾಣದೇ ತಟಸ್ಥವಾದಾಗ ಹಿಂದೋಡುವ ಮನಸ್ಸು ಹಿಂಡುಹಿಂಡು ನೆನಪುಗಳನ್ನು ಬಾಚಿಕೊಂಡು ತನ್ನದಾಗಿಸಿಕೊಳ್ಳುವ ತವಕದಲ್ಲಿ ತಬ್ಬಿ ಅವಚಿಕೊಳ್ಳುತ್ತಿರುತ್ತದೆ. ಆದರೆ ಹಿಂದೆಹಿಂದೆ ಸರಿದಂತೆ ಎಲ್ಲವೂ ಮಾಸಲುಮಾಸಲು! ನನ್ನಂಥಾ ಹಿರಿಜೀವಗಳು ಮಧ್ಯವಯ, ಯೌವನ, ಬಾಲ್ಯ ಮುಂತಾಗಿ ನೆನಪುಗಳನ್ನು ಆಯ್ದು ಹೆಕ್ಕಿಕೊಳ್ಳುತ್ತಾ ಹಿಂದೆಹಿಂದೆ ಸಾಗಬಹುದು. ಅಮ್ಮ ಅಜ್ಜಿ ಆಗಾಗ ಹೇಳಿಹೇಳಿ ಗಟ್ಟಿಗೊಳಿಸಿದ ಶೈಶವವನ್ನೂ ಕಣ್ಮುಂದೆ ಮೂರ್ತಿಕರಿಸಿಕೊಳ್ಳಲೂ ಬಹುದು. ಆದರೆ ಅದರ ಹಿಂದಿನ ಮಾತೃಗರ್ಭದೊಳಗಿನದು? ಅದಕ್ಕೂ ಹಿಂದೆ? ಇವೆಲ್ಲಾ ನಮ್ಮ ಮನೋಮಿತಿಗೂ ನಿಲುಕದ ನಿಗೂಢ ಸಂದರ್ಭಗಳು! 

ಸದಾ ಹಿಂದೋಡಲೇ ಹವಣಿಸುತ್ತಿರುವ ಮನವನ್ನು ತಡೆಹಿಡಿಯದೆ ಒಮ್ಮೆ ನೆನಪೆಂಬ ತಾಂಬೂಲವನ್ನು ಜಗಿಯಲಾರಂಭಿಸಿದೆವೆಂದರೆ… 

'ಜಗಿಜಗಿದು 

ಸ್ವಾದರಹಿತವಾಗಿದ್ದರೂ

ಈ ತಾಂಬೂಲವ

ಉಗಿಯಲಾಗದ 

ವಿಚಿತ್ರ ಮೋಹ'ಎನ್ನುವಂತೆ ಮೋಹಪಾಶಕ್ಕೆ ಬಂಧಿಯಾಗಿ ಆ ನೆನಪಿನ ಸುಳಿಯೊಳಗೇ ಸಿಲುಕಿಬಿಡುತ್ತೇವೆ! 

ಹಾಗೆ ನೋಡಿದರೆ ಮನೆಯಲ್ಲಿರುವ ಅಜ್ಜಿಯರಿಂದಲೇ  ಹಿಂದಿನ ಪೀಳಿಗೆಗಳ ರೋಚಕ ಕಥೆಗಳು ವಂಶಪಾರಂಪರ್ಯವಾಗಿ ಹರಿದು ಸಾಗುವುದು ಎನಿಸುತ್ತದೆ. ಈಗೀಗ ಟಿವಿ, ಮೊಬೈಲ್ ...ಗಳ ಸಾಂಗತ್ಯದಲ್ಲಿ ಹೇಳಲೂ ಕೇಳಲೂ ಸಮಯವೇ ಇಲ್ಲದಂತಾಗಿಬಿಟ್ಟಿದೆ. ನಾವು ಚಿಕ್ಕವರಿದ್ದಾಗ ನಮ್ಮ ಮುತ್ತಜ್ಜಿ ಸದಾ ಕಾಲ ತಮ್ಮ ಹಿಂದಿನ ತಲೆಮಾರಿನವರ ಬಗ್ಗೆ ಹೇಳುತ್ತಲೇ ಇರುತ್ತಿದ್ದರು. ಅವರ ಮುತ್ತಜ್ಜಿಗೆ ಮೂಗು ಚುಚ್ಚಿದ್ದು (ಆಗ ಏಳೆಂಟು ವರ್ಷಕ್ಕೆಲ್ಲಾ ಮದುವೆ ಮಾಡ್ತಿದ್ದರಲ್ಲ. ಅದಕ್ಕೂ ಮೊದಲೇ ಮೂಗು ಬಲಿತರೆ ಚುಚ್ಚಕ್ಕಾಗಲ್ಲ ಅಂತ ಹೆದರಿ ಓಡಿ ಹೋಗ್ತಿದ್ದ ಮಗೂನ ಬೆಲ್ಲದ ಆಸೆ ತೋರಿಸಿ ಎತ್ತಿಕೊಂಡು ಬಂದು ಮೂಗು ಚುಚ್ಚಿಸಿದ್ದಂತೆ!), ಕೋಪ ಬಂದಾಗಲೆಲ್ಲಾ ಅವರ ಮುತ್ತಾತ ತೆಂಗಿನ ಮರ ಹತ್ತಿ ಕೂರ್ತಿದ್ದದ್ದು, ಅವರ ತಾತನ ಬಾಲಲೀಲೆಗಳು, ಮಹಾನ್ ಸಿದ್ಧಾಂತಿಗಳಾಗಿದ್ದ ಅವರ ಮರಿತಾತನ ಮಾತೇ ಊರಿನಲ್ಲಿ ನಡೀತಿದ್ದದ್ದು... ಕೊನೆಮೊದಲೇ ಇಲ್ಲ. ಯಾರು ಕೇಳಲಿ ಬಿಡಲಿ ʼಮಾತಾಡುವುದೆ ಅನಿವಾರ್ಯ ಕರ್ಮ ನನಗೆʼ ಎನ್ನುವಂತೆ ಅವರ ವಾಕ್ಪ್ರವಾಹ ಅಡೆತಡೆ ಇಲ್ಲದಂತೆ ಹರಿಯುತ್ತಿತ್ತು. ನಮಗೋ ಸದಾ ತಲೆ ನಡುಗಿಸುತ್ತಿದ್ದ ನೂರರ ಸಮೀಪದ  ಮುತ್ತಜ್ಜಿ ತಮ್ಮ ತಾತನ ಬಾಲಲೀಲೆಗಳನ್ನು ಹೇಳುವಾಗ ನಗುವನ್ನೇ ತಡೆಯಲಾಗುತ್ತಿರಲಿಲ್ಲ. 

    ಕೇವಲ ಈ ರೀತಿಯ ಕಪೋಲ ಕಲ್ಪಿತವೇನೋ ಎನಿಸುವಂಥಾ ಆಕರ್ಷಕ ಕಥಾನಕಗಳಷ್ಟೇ ಅಲ್ಲ. ಅವರ ಅಮೂಲ್ಯ ಅನುಭವಗಳು, ಮನೆಮದ್ದುಗಳು ಎಷ್ಟೊವೇಳೆ ಉಪಯುಕ್ತವೂ ಆಗಿರುತ್ತಿದ್ದವು. ಈಗೆಲ್ಲಾ ನ್ಯೂಕ್ಲಿಯರ್ ಫ್ಯಾಮಿಲಿಗಳೇ ಹೆಚ್ಚಾಗಿ ಮಕ್ಕಳಿಗೆ ಅಜ್ಜಿ-ಅಜ್ಜನ ಸಾಂಗತ್ಯವೇ ಇಲ್ಲದಂತಾಗಿದೆ.  ಅದರಲ್ಲೂ ಅತ್ತಿತ್ತ ಕತ್ತನೂ ಹೊರಳಿಸಲಾಗದಂತೆ ಕಾರ್ಯತತ್ಪರರಾದ ಯುವಜನತೆಗೆ ನೆಟ್ಟ ದೃಷ್ಟಿಗೆ ದಕ್ಕುವಷ್ಟೇ ಇಹಬಂಧೀ ತಾಂತ್ರಿಕತೆಯಾಗಿ ನೆನಪುಗಳೂ ಯಾಂತ್ರಿಕವಾಗುತ್ತಿವೆ. ನಮ್ಮ ನೆನಪುಗಳ ವ್ಯಾಪ್ತಿ ಎಷ್ಟೆಷ್ಟೋ ಗತಜನ್ಮದ ಸ್ಮೃತಿಗಳ ಹಂದರವಾದರೂ ಅರಿವಿಲ್ಲದೇ ಇಷ್ಟೇ ಬದುಕೆಂಬಂತೆ ಇಲ್ಲಿಗೇ ಅಂಟಿ ಹೊರಳುವ ಹುಳುವಾಗಿರುವ ನಮಗೆ ಪೂರ್ವ ಸ್ಮರಣೆಯದೇ ಅಭಾವವಾಗಿದೆ. 

ಹಿಂದೆ ಹಿಂದೆ ಸಾಗುತ್ತಾ ಓಡಲಾರಂಭಿಸಿದ ಈ ಓಟ ಎತ್ತೆತ್ತಲೋ ಎಲ್ಲೆಲ್ಲೋ ನಮ್ಮನ್ನು ಕೊಂಡೊಯ್ಯಲಾರಂಭಿಸಿದೆ. 'ಎಷ್ಟಾದರೂ ಓಡಲಿ, ಕಾಸು ಖರ್ಚಿಲ್ಲದ ಓಟ,' ಎಂದು ಸುಮ್ಮನಿದ್ದುಬಿಡಲಾಗುವುದೇ? ಮುಂದಿನ ಮಹೋನ್ನತದತ್ತ ಅದನ್ನು ಕೇಂದ್ರೀಕರಿಸಿದರೆ ಹೇಗೋ ʼಇಹಕ್ಕೆ ಸುಖ, ಪರಕ್ಕೆ ಗತಿʼ ಅಂದುಕೊಳ್ಳೊಣವೇ?

                      ~ಪ್ರಭಾಮಣಿ ನಾಗರಾಜ


                      


   

 


Thursday, January 30, 2025

'ಮಂದಾರ' ದ ಪ್ರಶಸ್ತಿ ಪತ್ರಗಳು😍

 2024ರ ಅಂತಿಮ ಭಾಗದಲ್ಲಿ ಫೇಸ್ಬುಕ್ ಮಿತ್ರರೊಬ್ಬರು ನನ್ನನ್ನು 'ಮಂದಾರ' ಸಾಹಿತ್ಯ ಬಳಗಕ್ಕೆ ಆಹ್ವಾನಿಸಿದರು. ಪ್ರತಿದಿನವೂ ಒಂದೊಂದು ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಾ ಅತ್ಯಂತ ಕ್ರಿಯಾಶೀಲವಾಗಿದ್ದ 'ಮಂದಾರ'ಕ್ಕೆ ಸೇರಿದ ನಾನು ನನಗೆ ಅಸಕ್ತಿಕರವೆನಿಸಿದ್ದರ ಬಗ್ಗೆ ಬರೆದು ಪಡೆದ ಕೆಲವು  ಪ್ರಶಸ್ತಿ  ಪತ್ರಗಳಿವು😍














      ಮಂದಾರದ ಸಹ ಸದಸ್ಯರ ಪರಸ್ಪರ ಪ್ರೋತ್ಸಾಹ, ಪ್ರೀತಿ ವರ್ಣನಾತೀತ👌❤️ 


       ನನ್ನ  ವೈಯಕ್ತಿಕ ಕಾರಣದಿಂದ ಹಾಗೂ ನಿರಂತರ ಸ್ಪರ್ಧೆಗೊಳಪಡಲು ಅಸಾಧ್ಯವೆನಿಸುವ ಮನಃಸ್ಥಿತಿಯಿಂದ ಒಂದು ತಿಂಗಳಿಗೇ ತಟಸ್ಥಳಾಗಬೇಕಾಯ್ತು🌼


      ಹೃತ್ಪೂರ್ವಕ  ಧನ್ಯವಾದಗಳು ನಲ್ಮೆಯ ಮಂದಾರ 💕🙏