Tuesday, August 12, 2025

ಉದಯವಾಣಿ'ಯ 'ಸಾಪ್ತಾಹಿಕ ಸಂಪದ'ದಲ್ಲಿ 'ನಾನೂ ನನ್ನ ತೂಕವೂ...'


 ಉದಯವಾಣಿ'ಯ 'ಸಾಪ್ತಾಹಿಕ ಸಂಪದ'ದಲ್ಲಿ 'ನಾನೂ ನನ್ನ ತೂಕವೂ...'

 ಆಗಸ್ಟ್10, 2025ರಂದು ಪ್ರಕಟವಾಗಿದೆ. ಓದಿ ಪ್ರತಿಕ್ರಿಯಿಸಿ🌼


🧘️ನಾನೂ ನನ್ನ ತೂಕವೂ... 

 

  ʼಭೂಮಿ ತೂಕದ ವ್ಯಕ್ತಿ' ಎಂಬ ಗೌರವಕ್ಕೆ ಪಾತ್ರರಾಗಿದ್ದ ಘನದೇಹಿಯಾದ ನನ್ನ ತಾಯಿಯ ಒಡಲಿನಿಂದ ಮಡಿಲಿಗೆ ಬಂದು ಸಮೃದ್ಧ ಪಾಲನೆ-ಪೋಷಣೆಗಳಿಂದ ಸೊಂಪಾಗಿ ಬೆಳೆಯುತ್ತಿದ್ದ ನನಗೆ ಸುತ್ತಲಿನ ವಾತಾವರಣವೂ ಇಂಬುಗೊಡುವಂತಿತ್ತು.  ಮನೆಯಲ್ಲಿದ್ದ ಗೋಸಮೂಹದಲ್ಲಿ ಕರಾವು ನಿರಂತರವಾಗಿದ್ದುದರಿಂದ ಪೂರ್ಣಚಂದ್ರನಂತೆ ವೃದ್ಧಿಸುತ್ತಿದ್ದ ನನ್ನ ದೇಹಸಿರಿಗೆ ಅನುಕೂಲಕರವೇ ಆಗಿದ್ದು ಮೋಸವೆಸಗದಂತೆ ಗುಂಡುಗುಂಡಾಗಿ ಗುಜ್ಜಾನೆ ಮರಿಯಂತೆ ಅಥವಾ ಪ್ರಸ್ತುತ ಕುಂಗ್-ಫು-ಪಾಂಡನಂತೆ ಬೆಳೆದಿದ್ದ ನನ್ನನ್ನು ದೊಡ್ಡ ಮಕ್ಕಳೆಲ್ಲಾ ʼಪುಳಮೂಟೆʼ ಎಂದು ಎತ್ತಿಕೊಂಡು ಹೋಗಿ ಒಣಹುಲ್ಲುಗುಡ್ಡೆಯ ಎದುರು ಹಾಸಿದ ಹುಲ್ಲಿನ ಮೇಲೆ ಎಸೆಯುತ್ತಿದ್ದರು!   

     

      ಮೊದಮೊದಲು ನಾನೇನೂ ಇದನ್ನು ಸಮಸ್ಯೆಯೆಂದು ಪರಿಗಣಿಸಿರಲೇ ಇಲ್ಲ. ನನ್ನನ್ನು ಬೆಂಬೆತ್ತಿದ್ದ ಈ ಭೂತದ ಪರಿಚಯವಾಗಲು ನಾನು ಶಾಲೆಗೇ ಹೋಗಬೇಕಾಯ್ತು.  ಶಾಲೆಯಿಂದ  ಮೆಡಿಕಲ್‌ ಚೆಕಪ್‌ ಮಾಡಿಸುವಾಗ ನನ್ನ ತೂಕ ಬರೋಬ್ಬರಿ 100ಪೌಂಡ್ ಇದ್ದು ನನ್ನ ಸಹಪಾಠಿಗಳ ದೃಷ್ಟಿಯಲ್ಲಿ ನಾನೇನೋ ಮರಿಯಾನೆಯೇನೋ ಎನ್ನುವಂತಾಗಿ ಆಗಿನಿಂದ ಒಂದು ಅಪರಿಹಾರ್ಯ ಕೊರಗು ನನ್ನ ತಲೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. 

              

          ತ್ವರಿತಗತಿಯಲ್ಲಿ ಓಡಲಾರಂಭಿಸಿದ ಕಾಲ ನನ್ನನ್ನು ತಾಯಿಯಾಗುವ ಹಂತಕ್ಕಾಗಲೇ ತಂದುನಿಲ್ಲಿಸಿತು. ಈ ನಡುವೆ ನನ್ನ ಅನೇಕಾನೇಕ ಪ್ರಯೋಗಗಳಿಂದ ಅಡ್ಡಲೆಯಂತೆ ಏರಿ-ಇಳಿದು ಕಡೆಗೆ ದೊರೆತ ಈ ಅಮೂಲ್ಯ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅಡ್ಡಾದಿಡ್ಡಿಯಾಗಿ ವಿತ್‌ ಲೈಸೆನ್ಸ್‌ ಬೆಳೆಯಲಾರಂಭಿಸಿದ್ದೆ. ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಅನಿವಾರ್ಯ ಕಾರಣಗಳಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ದಿನಾಂಕಕ್ಕೆ ತಿಂಗಳು ಮೊದಲೇ ದಾಖಲಾಗಿದ್ದಾಗ ಬಸುರಿಯ ಬಯಕೆಯೆಂದು ಬಂಧುಗಳು ತಂದುಕೊಡುತ್ತಿದ್ದ ಬಗೆಬಗೆಯ ಭಕ್ಷ್ಯಗಳನ್ನು ಸ್ವಾಹಾಮಾಡುತ್ತಾ ಕಾಲದೂಡುತ್ತಿದ್ದ ನಾನು ಪ್ರತಿದಿನವೂ ಆಸ್ಪತ್ರೆಯ ಎಲ್ಲಾ ಕಾರಿಡಾರ್‌ಗಳಲ್ಲೂ ವಾಕ್‌ ಅಂಡ್ ಟಾಕ್ ಮಾಡುತ್ತಾ ಕೇಳಿದವರಿಗೆಲ್ಲಾ ಪ್ರವರ ಒಪ್ಪಿಸುತ್ತಾ ಕಟ್ಟಡದ ಮೂಲೆಮೂಲೆಗೂ ಚಿರಪರಿಚಿತಳಾಗಿಬಿಟ್ಟೆ. ಸ್ಕ್ಯಾನಿಂಗ್‌ ಸೌಲಭ್ಯವಿಲ್ಲದಿದ್ದ ಆ ಕಾಲದಲ್ಲಿ ನನ್ನನ್ನು ನೋಡಿದವರೆಲ್ಲಾ ನನ್ನ ಮಹೋನ್ನತ ಉದರವನ್ನು ತಮ್ಮ ಕಣ್ಣುಗಳಿಂದಲೇ ಅಳೆದು‌ ಸ್ಕ್ಯಾನ್ ಮಾಡಿ ಅವಳಿ-ಜವಳಿ ಎಂಬ ತೀರ್ಮಾನಕ್ಕೆ ಬಂದಿದ್ದರು. ನಾನಂತೂ ನನ್ನ ಕೂಸಿನ ತಾಣವಾಗಿದ್ದ ಪರಮಪ್ರಿಯ ಉದರವನ್ನು ಪೋಷಿಸುವುದರಲ್ಲಿಯೇ ನಿರತಳಾಗಿದ್ದೆ. ಒನ್ ಫೈನ್‌ ಡೇ ಸಿಝೇರಿಯನ್‌ಆಗಿ ನನ್ನ ಕಂದ ಆಯಾಸಪಡದೇ ತೊಟ್ಟಿಲಿನಿಂದ ಮೇಲೆತ್ತಿಕೊಂಡಂತೆ ಧರೆಗಿಳಿದೇಬಿಟ್ಟಿತು. ಆಸ್ಪತ್ರೆಯ ಸಿಬ್ಬಂದಿ ತಪ್ಪಾದ ತಮ್ಮ ಲೆಕ್ಕಾಚಾರದ ನಿರಾಸೆಯಿಂದ ʼಈಯಮ್ಮ ಹೊಟ್ಟೇನೇ ಬೆಳೆಸಿಕೊಂಡಿತ್ತು ಅಂತ ಕಾಣ್ತದೆ. ನಾವು ಅವಳಿನಾದ್ರೂ ಹುಟ್ತವೆ ಅಂದ್ಕೊಂಡ್ರೆ ಇಲಿಮರಿ ಹಂಗಿರೋ ಒಂದೇ ಹುಟ್ಟದೆʼ ಎಂದು ಮೂದಲಿಸಿದರು! ಇದಕ್ಕಿಂತಲೂ ಆದ ದೊಡ್ಡ ಅವಮಾನವೆಂದರೆ ನಮ್ಮ ಜೂನಿಯರ್‌ ಕಾಲೇಜಿನ ಪ್ರಿನ್ಸಿಪಾಲರು ʼನೋಡಿ, ಮೇಡಂ ಈಗ್ಲೂ ಹೇಗಿದಾರೆ! ಬೋರ್ಡ್‌ ಮುಂದೆ ನಿಂತ್ರೆ ಮಕ್ಕಳು ಥರಗುಟ್ಟಿಕೊಂಡು ನಡುಗಬೇಕುʼ ಎಂದು ಮೆಚ್ಚುಗೆಯ ದೃಷ್ಟಿ ಬೀರಿದಾಗ ನಾನೇನಾದರೂ ಲಂಕಿಣಿಯಂತೆ ಕಾಣುತ್ತಿದ್ದೀನಾ ಎಂದುಕೊಳ್ಳುವಂತಾಯ್ತು!

             

        ಪರಿಸ್ಥಿತಿಗಳು ಹೀಗೇ ಪ್ರತಿಕೂಲವಾಗಿದ್ದ ಹಿನ್ನೆಲೆಯಲ್ಲಿ ಒಮ್ಮೆ ಡಾಕ್ಟರನ್ನು ಕಾಣಲು ಹೋಗಿದ್ದಾಗ ಆಕೆ ಬಹಳ ಆತ್ಮೀಯತೆಯಿಂದಲೇ ʼನೋಡಮ್ಮ, ನೀನು ಈಗಿನಿಂದಲೇ ಹೀಗಿದ್ದರೆ ಇದೇ ಮೈಯನ್ನು ಲೈಫ್‌ ಲಾಂಗ್‌ ಹೊತ್ತುಕೊಂಡಿರಬೇಕಾಗುತ್ತೆ,ʼ ಎಂಬ ಸೌಮ್ಯಾಸ್ತ್ರವನ್ನು ನನ್ನತ್ತ ಒಗೆದು ಮತ್ತೆ ಬರೋವಾಗ 10ಕೆಜಿಯಾದರೂ ಕಮ್ಮಿಯಾಗಿರಬೇಕೆಂಬ ಟಾಸ್ಕನ್ನೂ ನೀಡಿದರು. ಅದೇ ಸಂದರ್ಭದಲ್ಲಿ ನಮ್ಮತ್ತೆಯವರನ್ನು ನೋಡಲು ಹಳ್ಳಿಗೆ ಹೋಗಿದ್ದಾಗ ತಮ್ಮ ಹಿರಿಯ ಮಗುವಿನ ಚೌಲಕ್ಕೆ ಕರೆಯಲು ಬಂದಿದ್ದ ದಂಪತಿಗಳು ಹೋದ ನಂತರ ʼಎರಡನೇ ಮಗುವಾದರೂ ಎಷ್ಟು ತೆಳ್ಳಗೆ ಚೆಕ್ಕಾಗಿದಾಳೆ ʼ ಎಂದು ನನ್ನ ಚೆಕ್‌ ನೀಡಲಾಗದ ತೂಕೋತ್ಕರ್ಷಕ್ಕೆ ಸವಾಲೆಸೆದರು. ಅತ್ಯಂತ ಸೌಮ್ಯ ಸ್ವಭಾವದವರಾದ ಅವರ ಆಂತರಿಕ ತುಮುಲವನ್ನು ಅರ್ಥಮಾಡಿಕೊಳ್ಳುವ ಮೊದಲೇ ನನ್ನಲ್ಲೆಲ್ಲಿ ಅಂತಃಕುಸಿತವುಂಟಾಗುವುದೋ ಎಂದು ಹೆದರಿ ಶೀಘ್ರವೇ ಕಾರ್ಯಪ್ರವೃತ್ತಳಾದೆ. ಹಗಲು ಹಾಸಿಗೆಯಿಂದ ಎದ್ದಾಕ್ಷಣದಿಂದಲೇ ಮುಗಿಯದ ಕೆಲಸಗಳ ಪರಂಪರೆಯಿಂದ ಬಂಧಿತಳಾಗುತ್ತಿದ್ದರಿಂದ ಮಲಗಿದಂತೆಯೇ ಮಾಡುವ ವಿವಿಧ ವ್ಯಾಯಾಮಗಳನ್ನು ಲಭ್ಯ ಮೂಲಗಳಿಂದ ಪಡೆದು ಅಭ್ಯಾಸಕ್ಕೆ ಮೊದಲಿಟ್ಟೆ. ಜೊತೆಗೇ ಸೊಪ್ಪುಸೆದೆಗಳಿಂದಲೇ ಹೊಟ್ಟೆತುಂಬಿಸಿಕೊಳ್ಳುವ ಡಯಟ್ನೊಂದಿಗೆ ಸಪೂರ ಸುಂದರಿಯಾಗುವ ಕನಸುಕಾಣುತ್ತಾ ಮಧ್ಯೆಮಧ್ಯೆ ಹೊಸದಾಗಿ ಬಸ್‌ಸ್ಟ್ಯಾಂಡ್‌ನಲ್ಲಿಟ್ಟ ತೂಕದ ಮೆಶೀನಿಗೆ ಒಂದು ರೂಪಾಯಿ ಕಾಯಿನ್ ದಕ್ಷಿಣೆ ಹಾಕಿ ತೂಕ ನೋಡಿಕೊಳ್ಳುತ್ತಾ ಮುನ್ನಡೆಯುತ್ತಿದ್ದಾಗ ಪುನಃ ಡಾಕ್ಟರನ್ನು ಕಾಣಲು ಹೋಗಬೇಕಾಯ್ತು. ನನ್ನನ್ನು ನೋಡಿದಾಕ್ಷಣವೇ ಗಾಬರಿಯಾದ ಡಾಕ್ಟ್ರಮ್ಮ, ʼಅದ್ಹೇಗೆ ಇಷ್ಟು ಸಣ್ಣಗಾದ್ರಿ?ʼ ಎಂದು ವಿಚಾರಿಸಿ ಅಲ್ಲೇ ಇದ್ದ ಇನ್ಸ್ಪೆಕ್ಷನ್‌ ಟೇಬಲ್‌ ಮೇಲೇ ಡೆಮಾನ್ಸ್‌ಟ್ರೇಟ್‌ ಮಾಡಿ ತೋರಿಸಲು ಹೇಳಿದರು. ನಾನಂತೂ ಡಾಕ್ಟರಿಂದಲೇ ಸರ್ಟಿಫಿಕೇಟ್‌ ಸಿಕ್ಕ ಗೆಲುವಿನ ಅತ್ಯುತ್ಸಾಹದಲ್ಲಿ ಅವರಿಗೆ ಎಲ್ಲವನ್ನೂ ಪ್ರಾಕ್ಟಿಕಲ್ಲಾಗೇ ವಿವರಿಸಿದೆ. ನಮ್ಮತ್ತೆಯೂ ʼನೀನು ಸಣ್ಣಗಾಗಿದ್ದು ಇನ್ನು ಸಾಕಮ್ಮ, ನೋಡಕ್ಕಾಗಲ್ಲʼ ಎಂದು ಆಶೀರ್ವದಿಸಿದರು. ಮತ್ತೊಮ್ಮೆ ಡಾಕ್ಟರನ್ನು ಕಾಣಲು ಹೋದಾಗ ʼನೀವು ಅದ್ಹೇಗೆ ತೂಕ ಇಳಿಸಿಕೊಂಡುಬಿಟ್ಟಿರೊ, ನನಗಂತೂ ಮನೆಗೆ ಬರೋ ಗೆಸ್ಟ್‌ಸ್‌/ವಿಸಿಟರ್ಸ್‌ ನಡುವೆ ಏನುಮಾಡಕ್ಕೂ ಆಗ್ತಿಲ್ಲʼ ಎಂದು ಪೇಚಾಡಿಕೊಂಡರು. ಅಲ್ಲಿಗೆ  ಸಣ್ಣಗಾಗುವುದೂ ಸಾಧ್ಯ ಎನ್ನುವ ಒಂದು ಅಧ್ಯಾಯ ಮುಗಿಯಿತು. 

            

       ಮುಂದಿನ ಜೀವನದ ಏರುಪೇರುಗಳಲ್ಲಿ ನನ್ನ ತೂಕದ ಪಾಡು ಗಾಳಿಪಟವನ್ನು ಹಾರಿಸುವಂತೆ ನಾನು ಆಗಾಗ ಜಗ್ಗಿ ಎಳೆದು ಕೆಳಗಿಳಿಸುವುದು, ಸ್ವಲ್ಪ ಸಡಿಲಾದಾಕ್ಷಣವೇ ಅದು ಮೇಲೇರುವುದು ನಡೆದೇ ಇತ್ತು. ಹೇಗಾದರೂ ನೆಟ್‌ ರಿಸಲ್ಟ್‌ ಮಾತ್ರ ಸ್ವಲ್ಪ ಏರುವಿಕೆಯೇ ಆಗಿರುತ್ತಿತ್ತು. ಈಗಂತೂ ಸಂಪೂರ್ಣ ವಿಶ್ರಾಂತಸ್ಥಿತಿಯನ್ನು ತಲುಪಿದ ನಂತರ ಕೈಗೆ ಭೂಷಣವಾದ ಮೊಬೈಲ್‌ ಹಿಡಿದು ಕುಳಿತಲ್ಲೇ ತೂಕಡಿಸುತ್ತಲೇ ತೂಕ ಅಂಕೆಮೀರುತ್ತಿದೆ. ಬದುಕಿನ ಈ ಸಂಧ್ಯಾಕಾಲದಲ್ಲಿ ಮನವನ್ನು ಕಂಟ್ರೋಲ್‌ನಲ್ಲಿಟ್ಟುಕೊಳ್ಳಬೇಕೆನ್ನುವುದು ಲೋಕಾರೂಢಿ. ಆದರೆ ನನಗೆ ನನ್ನ ಈ ತನುವನ್ನು ಕಂಟ್ರೋಲ್‌ ಮಾಡಿಕೊಳ್ಳುವುದೇ ದುಃಸ್ಸರವಾಗಿ ʼತಾಳಲಾರೆ ನಿನ್ನ ತೂಕʼ ಎಂದು ಈಗಾಗಲೇ ಮನೆಯ 5-6 ವೇಯಿಂಗ್‌ ಮೆಶಿನ್‌ಗಳು ಮುಷ್ಕರ ಹೂಡಿ ಹೊಸವುಗಳ ಆಗಮನಕ್ಕೆಡೆಮಾಡಿಕೊಟ್ಟಿವೆ. ಮಕ್ಕಳು ʼನೀನೇನು ಅಕ್ಕಿಮೂಟೆಯೇನಮ್ಮ, ಯಾವಾಗ್ಲೂ ತೂಕ ನೋಡಿಕೊಳ್ತಿರ್ತೀಯಲ್ಲʼ ಎನ್ನುತ್ತಾರೆ. ಆದರೂ ಮರಳಿ ಯತ್ನವ ಮಾಡು…

             

          ಈ ಎಲ್ಲಾ ಸಾಧ್ಯಾಸಾಧ್ಯತೆಗಳ ನಡುವೆ ನನ್ನನ್ನು ಸಾಕಷ್ಟು ಘನತರ ವ್ಯಕ್ತಿಯಾಗಿಸಿಯೂ ನನ್ನಿಂದಲೇ ಅವಹೇಳನಕ್ಕೊಳಗಾಗಿರುವ ಈ ನನ್ನ ತೂಕವನ್ನು ಇಳಿಸಿಕೊಳ್ಳುವ ಸತತ ಪ್ರಯತ್ನದ ಅವಿರತ ಶ್ರಮದಲ್ಲಿ ತೂಕವು ಕಡಿಮೆಯಾದಾಗ ಹಿಗ್ಗುತ್ತಾ ಹೆಚ್ಚಾದಾಗ ಕುಗ್ಗುತ್ತಾ ವಿಲೋಮಾನುಭೂತಿಯಲ್ಲಿ ಬದುಕನ್ನು ಮುನ್ನಡೆಸುತ್ತಿದ್ದೇನೆ!


✍️ಪ್ರಭಾಮಣಿನಾಗರಾಜ, ಹಾಸನ

No comments:

Post a Comment