Sunday, June 19, 2011

ಮನದ ಅಂಗಳದಿ.........೪೫. 'ಸು''ಸಂಸ್ಕೃತ’

ನಾನು ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಪ್ರಥಮ ಭಾಷೆಯಾಗಿ 'ಸಂಸ್ಕೃತ’ವನ್ನು ತೆಗೆದುಕೊಂಡಿದ್ದೆ. 'ತೆಗೆದುಕೊಂಡಿದ್ದೆ' ಎನ್ನುವುದಕ್ಕಿಂತಲೂ ನಮ್ಮ ತಂದೆ ಅವರಿಗೆ ಅತ್ಯಂತ ಪ್ರಿಯವಾದ 'ಸಂಸ್ಕೃತ’ವನ್ನು ನಾವೂ ಕಲಿಯಲಿ ಎಂದು ನಮ್ಮೆಲ್ಲರಿಗೂ ಕೊಡಿಸಿದ್ದರು. ಮನೆಯಲ್ಲಿಯೇ ಆ ಮೊದಲೇ ಸಾಕಷ್ಟು 'ಸಂಸ್ಕೃತ’ ಶ್ಲೋಕಗಳನ್ನು ಕಲಿತಿದ್ದರಿಂದ ಹಾಗೂ ಅದಕ್ಕೆ ಸಂಬಂಧಿಸಿದ ಅನೇಕ ಕಥೆ-ಉಪಕಥೆಗಳು ಪ್ರಚಲಿತವಿದ್ದುದರಿಂದ 'ಸಂಸ್ಕೃತ’ ನನ್ನನ್ನು ಬಹಳವಾಗಿ ಆಕರ್ಷಿಸಿತ್ತು. ಅಕ್ಕನಂತೆ ನಾನೂ ಸರಾಗವಾಗಿ 'ಸಂಸ್ಕೃತ’ ಪಾಠಗಳನ್ನು ಓದಬೇಕು ಎನ್ನುವುದು ನನ್ನ ಕನಸಾಗಿತ್ತು! ನಮ್ಮ ಶಾಲೆಯಲ್ಲಿ ಇದ್ದ 'ಸಂಸ್ಕೃತ’ ಪಂಡಿತರು ಶ್ಲೋಕಗಳಿಗೆ ಸಂಬಂಧಿಸಿದ ಕಥೆಗಳನ್ನು ಬಹಳ ಆಕರ್ಷಕವಾಗಿ ಹೇಳುತ್ತಿದ್ದರು. ಆಗ ಕೇಳಿದ ಆ ಶ್ಲೋಕಗಳು ಹಾಗೂ ಅದರ ಕಥೆಗಳು ಈಗಲೂ ಅಚ್ಚಳಿಯದಂತೆ ಮನದ ಮೂಲೆಯಲ್ಲಿ ಹುದುಗಿವೆ. ಒಬ್ಬಳೇ ನಡೆಯುತ್ತಿರುವಾಗ ಆಗಾಗ ನೆನಪಿಗೆ ಬಂದು ತಮ್ಮ ಇರುವನ್ನು ಸಾರುತ್ತವೆ. ಅವುಗಳಲ್ಲಿ ಎರಡನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇನೆ:

ಅಂಬಾ ಕುಪ್ಯತಿ ನ ಮಯಾ ನ ತಯಾ

ಸಾಪಿ ಕುಪ್ಯತಿ ನ ಅಂಬಾ ನ ಮಯಾ|

ಅಹಮಪಿ ಕುಪ್ಯಾಮಿ ನ ತಯಾ ನ ತಯಾ

ವದಾ ರಾಜನ್ ಕಸ್ಯ ದೋಷೋಯಂ||

ಒಮ್ಮೆ ಎಂದಿನಂತಯೇ ರಾಜನು ರಾತ್ರಿ ವೇಳೆಯಲ್ಲಿ ಮಾರುವೇಶದಲ್ಲಿ ನಗರ ಪರ್ಯಟನೆ ಮಾಡುತ್ತಿರುತ್ತಾನೆ. ಒಂದು ಮನೆಯಿಂದ ಜೋರಾದ ಜಗಳದ ಶಬ್ದ ಕೇಳುತ್ತದೆ. ಆ ಮನೆಯ ಬಳಿ ಹೋಗಿ ಗಮನಿಸಿದಾಗ ಒಬ್ಬ ವೃದ್ದೆ, ಓರ್ವ ಹೆಂಗಸು ಹಾಗೂ ಗಂಡಸೊಬ್ಬನ ಕಿರುಚಾಟ ಕೇಳುತ್ತಿರುತ್ತದೆ. ಒಬ್ಬರು ಮತ್ತೊಬ್ಬರ ಮಾತನ್ನು ಲೆಕ್ಕಿಸದೇ ತಮ್ಮದೇ ರೀತಿಯಲ್ಲಿ ಕೂಗಾಡುತ್ತಿರುತ್ತಾರೆ. ಏನೊಂದೂ ಅರ್ಥವಾಗದೆ ಹಿಂತಿರುಗಿದ ರಾಜ ಹಗಲಾದ ನಂತರ ತನ್ನ ಭಟರನ್ನು ಕಳುಹಿಸಿ ಆ ಮನೆಯ ಯಜಮಾನನ್ನು ಕರೆಸುತ್ತಾನೆ. ಆ ಮನೆಯ ಸ್ಥಿತಿಯ ಬಗ್ಗೆ ವಿಚಾರಿಸಿದಾಗ ಆತ ಮೇಲಿನ ಶ್ಲೋಕದಂತೆ ಈ ರೀತಿಯಾಗಿ ಹೇಳುತ್ತಾನೆ:

'ಅಮ್ಮ ಕೋಪಿಸಿಕೊಳ್ಳುವಳು

ನಾ ಕಾರಣವಲ್ಲ, 'ಅವಳು' ಅಲ್ಲ

'ಅವಳು' ಕೋಪಿಸಿಕೊಳ್ಳುವಳು

ಕಾರಣ ಅಮ್ಮನಲ್ಲ, ನಾನೂ ಅಲ್ಲ

ನಾನೂ ಕೋಪಿಸಿಕೊಳ್ಳುವೆನು

ಅವರಿಬ್ಬರೂ ಕಾರಣರಲ್ಲ

ಹೇಳು ರಾಜನೇ, ಯಾರ ದೋಷವಿದು?'

ರಾಜನು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಅವರ ಬಡತನವನ್ನು ನೀಗುವ ವ್ಯವಸ್ಥೆಯನ್ನು ಮಾಡುತ್ತಾನೆ.

ಈ ಕಥೆಯಲ್ಲಿ ರಾಜನು ಮಾರುವೇಶದಲ್ಲಿ ಹೋಗಿ ತನ್ನ ಪ್ರಜೆಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವ ರೀತಿ ನನಗೆ ಬಹಳ ಪ್ರಿಯವೆನಿಸುತ್ತಿತ್ತು!

ಮತ್ತೊಂದು ಶ್ಲೋಕ ಹೀಗಿದೆ:

ಭಟ್ಟಿರ್ನಷ್ಟಃ ಭಾರವೀಯೋಪಿ ನಷ್ಟಃ

ಭಿಕ್ಷುರ್ನಷ್ಟಃ ಭೀಮಸೇನೋಪಿ ನಷ್ಟಃ|

ಭಭಾವಳ್ಯಾಮಂತಕಃ ಸನ್ನಿವಿಷ್ಟಃ

ಭುಕ್ಕುಂಡೋಹಂ ಭೂಪತಿಃ ತ್ವಂ ಹಿ ರಾಜನ್||

ಒಂದುಸಾರಿ ಒಬ್ಬ ಕಳ್ಳನನ್ನು ರಾಜಾಸ್ಥಾನಕ್ಕೆ ಹಿಡಿದು ತರುತ್ತಾರೆ. ಅವನು ಮಾಡಿದ ಅಪರಾಧಗಳನ್ನು ಪರಿಶೀಲಿಸಿ ಅವನಿಗೆ ಮರಣದಂಡನೆಯನ್ನು ವಿಧಿಸಲಾಗುತ್ತದೆ. ಕಳ್ಳನು ತನ್ನ ಕಡೆಯ ಆಸೆಯಾಗಿ ರಾಜನಲ್ಲಿ ಈ ರೀತಿಯಾಗಿ ಅರಿಕೆ ಮಾಡಿಕೊಳ್ಳುತ್ತಾನೆ.

'ಭಟ್ಟಿ ಸತ್ತನು, ಭಾರವಿಯೂ ಸತ್ತನು

ಭಿಕ್ಷು ಸತ್ತನು ಭೀಮಸೇನನೂ ಸತ್ತನು

ಭ ಭಾ ....ಸರದಿಯಂತೆ ಯಮನು ಕೊಂಡೊಯ್ಯುತಿರುವನು

ರಾಜನೇ, ಭುಕ್ಕುಂಡ ನಾನು, ಭೂಪತಿ ನೀನು !'

ಇದರಲ್ಲಿರುವ ಚಮತ್ಕಾರವನ್ನು ಗಮನಿಸಬೇಕು. ಯಮನು ಭ ಭಾ ಭಿ ಭೀ...ರೀತಿಯಲ್ಲಿ ಸೆಳೆದೊಯ್ಯುತ್ತಿದ್ದಾನೆ. ಕಳ್ಳನ ಹೆಸರು 'ಭುಕ್ಕುಂಡ', ಎಂದರೆ 'ಭು' ನಿಂದ ಪ್ರಾರಂಭವಾಗುತ್ತದೆ. ಅವನ ಸಾವಿನ ನಂತರದ ಸರದಿ 'ಭೂ'-ಭೂಪತಿ, ಎಂದರೆ ರಾಜನೇ ಆಗುತ್ತಾನೆ!

ಕಳ್ಳನ ಚತುರತೆಯನ್ನು ಅರ್ಥಮಾಡಿಕೊಂಡ ರಾಜ, 'ಆತ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಕಳ್ಳತನಕ್ಕೆ ಇಳಿದಿದ್ದಾನೆ,' ಎಂದು ವಿಶ್ಲೇಷಿಸಿ ಅವನಿಗೆ ಜೀವದಾನಮಾಡಿ ಉದ್ಯೋಗವನ್ನು ನೀಡುತ್ತಾನೆ.

ಆಗಿನ ರಾಜರು ಗುಣಗ್ರಾಹಿಗಳಾಗಿದ್ದರು ಎನ್ನುವುದನ್ನು ಇವುಗಳಿಂದ ನಾವು ತಿಳಿದಿದ್ದೆವು. ಒಬ್ಬ ಸಾಮಾನ್ಯ ಪ್ರಜೆಯೇ ಆಗಲೀ, ಕಳ್ಳನೇ ಆಗಲೀ ಅವರಲ್ಲಿರುವ ವಿಶೇಷತೆಯನ್ನು ಅರ್ಥಮಾಡಿಕೊಂಡು ಅವರ ಕಷ್ಟಗಳಿಗೆ ಸ್ಪಂದಿಸುವ ಹಾಗು ಮನಃ ಪರಿವರ್ತನೆಯನ್ನು ಮಾಡುವ ದೊಡ್ಡತನವನ್ನು ಆ ರಾಜರು ಹೊಂದಿದ್ದರು. ಆಳುವ ವರ್ಗದಲ್ಲಿ ಇಂಥಾ ಗುಣ ವಿಶೇಷಗಳಿದ್ದರೆ ಯಾವುದೇ ಸಂದರ್ಭವನ್ನು ಸಮರ್ಥವಾಗಿ ನಿರ್ವಹಿಸಬಲ್ಲವರಾಗಿರುತ್ತಾರೆ.

ಪಿ.ಯು.ಸಿ.ಯ ನಂತರ 'ಸಂಸ್ಕೃತ’ವನ್ನು ಓದಲಾಗಲಿಲ್ಲವಲ್ಲ ಎನ್ನುವ ಕೊರಗು ಬಹಳ ದಿನ ಬಾಧಿಸಿತು. ಆದರೆ ಆಗ ಕಲಿತ ಸುಭಾಷಿತಗಳು ಈಗಲೂ ದಾರಿದೀಪವಾಗಿವೆ.

Tuesday, June 14, 2011

ಮನದ ಅಂಗಳದಿ.........೪೪. ಕೈಝೆನ್-ವರ್ಚಸ್ವೀ ಜೀವನದ ಹತ್ತು ಪ್ರಾಚೀನ ತಂತ್ರಗಳು



ಮನದ ಅಂಗಳದಿ.........೪೪. ಕೈಝೆನ್-ವರ್ಚಸ್ವೀ ಜೀವನದ ಹತ್ತು ಪ್ರಾಚೀನ ತಂತ್ರಗಳು

ಚಿಕ್ಕಂದಿನಲ್ಲಿ 'ಅಲ್ಲಾವುದ್ದೀನನ ಅದ್ಭುತ ದೀಪ'ದ ಕಥೆ ಕೇಳಿದಾಗ ಆ ದೀಪವೇನಾದರೂ ದೊರೆತಿದ್ದರೆ ಬೇಕೆನಿಸಿದ್ದನ್ನೆಲ್ಲಾ ಪಡೆಯುತ್ತಿದ್ದೆವು ಎಂದು ಆಸೆ ಪಟ್ಟಿರುತ್ತೇವೆ. ಈಗಲೂ ನಮ್ಮನ್ನು ನಾವು ಉತ್ತಮ ಪಡಿಸಿಕೊಳ್ಳುವಂತಹ, ನಮಗೆ ಸಾಧ್ಯವಾದಷ್ಟು ಔನತ್ಯಕ್ಕೇರುವಂತಹ ಯಾವುದಾರೂ ಮಂತ್ರವೋ ತಂತ್ರವೋ ಇದ್ದಿದ್ದರೆ ಎಷ್ಟು ಚಂದವಿರುತ್ತಿತ್ತು ಎಂದು ಕೆಲವೊಮ್ಮೆ ಅಂದುಕೊಂಡಿರಬಹುದು. ಆ ಒಂದು ಸಾಮರ್ಥ್ಯ ನಮ್ಮಲ್ಲೇ ಇದೆ, ನಾವೇ ನಮ್ಮನ್ನು ಉನ್ನತೀಕರಿಸಿಕೊಳ್ಳಬಹುದು ಎನ್ನುವುದು ಕೈಝೆನ್ ನಲ್ಲಿ ಅಡಗಿದೆ. 'ಕೈಝೆನ್' ಎನ್ನುವ ಜಪಾನೀ ಪದದ ಅರ್ಥ-ನಿರಂತರ, ಅಂತ್ಯವಿಲ್ಲದ ಪ್ರಗತಿ. ಅದು ಜೀವನವನ್ನು ಅದರ ಅತ್ಯುನ್ನತ ಸ್ತರದ ಪೂರ್ಣಪ್ರಜ್ಞೆಯಲ್ಲಿ ಬದುಕುವ ವ್ಯಕ್ತಿಗಳ ಲಕ್ಷಣ. 'ಕೈಝೆನ್' ಬಗ್ಗೆ ರಾಬಿನ್ ಶರ್ಮ ಅವರು ತಮ್ಮ 'The Monk Who Sold His Ferrary'ಯಲ್ಲಿ ತಿಳಿಸಿರುವುದನ್ನು ಸಂಕ್ಷಿಪ್ತಗೊಳಿಸಿ ನಿಮ್ಮ ಮುಂದಿಡುತ್ತಿದ್ದೇನೆ.

''ಕೈಝೆನ್' ಎಂಬ ವಿಶಿಷ್ಟ ತತ್ವಜ್ಞಾನವನ್ನು ಸಾವಿರಾರು ವರ್ಷಗಳ ಹಿಂದೆ ಪೌರ್ವಾತ್ಯ ದಾರ್ಶನಿಕರು ಪಡೆದು ಪರಿಷ್ಕರಿಸಿದ್ದರು.....

ನಮ್ಮ ಆಂತರಿಕ ಯಶಸ್ಸಿನ ಮೇಲೆ ಬಾಹ್ಯ ಯಶಸ್ಸು ಅವಲಂಭಿಸಿದೆ. ಆದ್ದರಿಂದ ದೇಹದ ಆರೋಗ್ಯ, ಆರ್ಥಿಕ ಸ್ಥಿತಿ ಅಥವಾ ಮಾನವ ಸಂಬಂಧ ಮುಂತಾದ ಯಾವುದೇ ಬಾಹ್ಯ ಕ್ಷೇತ್ರಗಳಲ್ಲಿ ಯಶಸ್ವಿಯಾಗಬೇಕಾದರೆ ಮೊದಲು ನಮ್ಮ ಅಂತರಂಗದ ಪ್ರಪಂಚವನ್ನು ಸುಧಾರಿಸಬೇಕಾಗುತ್ತದೆ. ಇದಕ್ಕೆ ನಿರಂತರ ಸ್ವಯಂ ಪ್ರಗತಿಯ ಅಭ್ಯಾಸವೊಂದೇ ದಾರಿ....... ಅಂತರಂಗದ ಪ್ರಪಂಚದ ಸುಧಾರಣೆ ಎಂದರೆ ವ್ಯಕ್ತಿತ್ವದ ವಿಕಾಸ ಹಾಗೂ ವಿಸ್ತಾರ ಎಂದು ಅರ್ಥ. ಇದು ನಮಗೆ ನಾವೇ ಮಾಡಿಕೊಳ್ಳುವ ಅತ್ಯುತ್ತಮ ಸಹಾಯ.........

ಕೈಝೆನ್ ತತ್ವಗಳನ್ನು ಅನುಸರಿಸಲು ಹತ್ತು ಪರಿಣಾಮಕಾರೀ ತಂತ್ರಗಳಿವೆ. ಇವುಗಳನ್ನು ಶ್ರದ್ಧಾಪೂರ್ವಕವಾಗಿ ಅವ್ಯಾಹತವಾಗಿ ದಿನವೂ ಆಚರಿಸಿದರೆ ಒಂದು ತಿಂಗಳ ಅವಧಿಯಲ್ಲಿಯೇ ಪರಿಣಾಮಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಅನಂತರ ಅದನ್ನು ನಮ್ಮ ದಿನಚರಿಯ ಅನಿವಾರ್‍ಯ ಭಾಗವಾಗುವಂತೆ ಸಾಧನೆ ಮಾಡಿದರೆ ಅವು ಬಿಡಲಾರದ ಅಭ್ಯಾಸಗಳಾಗಿ ಬೆಳೆದು ಶಾಶ್ವತ ಆನಂದವನ್ನೂ, ಅಪಾರ ಶಕ್ತಿಯನ್ನೂ, ಉತ್ತಮ ಆರೋಗ್ಯವನ್ನೂ ನೀಡುವುದು ಖಂಡಿತ.......

ವರ್ಚಸ್ವೀ ಜೀವನದ ಹತ್ತು ಪ್ರಾಚೀನ ತಂತ್ರಗಳು ಯಾವುವೆಂದರೆ:

ಮೊದಲನೆಯ ತಂತ್ರ- ಏಕಾಂತದ ಸಾಧನೆ: ಇದರಲ್ಲಿ ಪ್ರತಿದಿನವೂ ನಿರ್ದಿಷ್ಟ ಕಾಲದಲ್ಲಿ ಶಾಂತಿಯಿಂದಿರಬೇಕು. ಆ ಅವಧಿಯಲ್ಲಿ ಮೌನದ ಗುಣಪಡಿಸುವ ಶಕ್ತಿಯನ್ನೂ ನಮ್ಮ ನಿಜ ಸ್ವರೂಪವೇನೆಂಬುದನ್ನೂ ತಿಳಿಯಬಹುದು. ಇದು ಧೀರ್ಘ ರಸ್ತೆಯಲ್ಲಿ ಓಡಿಸಿ ಕಾದಿರುವ ಎಂಜಿನ್ನಿಗೆ ಕೊಂಚ ರೆಸ್ಟ್ ನೀಡಿದಂತೆ. ಏಕಾಂತ ಸಾಧನೆಯನ್ನು ಪ್ರತಿದಿನ ಒಂದೇ ಸಮಯದಲ್ಲಿ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಎರಡನೇ ತಂತ್ರ- ಶಾರೀರಿಕತೆಯ ತಂತ್ರ: ದೇಹವೆಂಬ ದೇಗುಲಕ್ಕೆ ಶ್ರಮಭರಿತ ವ್ಯಾಯಾಮ ನೀಡಲು ದಿನವೂ ಸ್ವಲ್ಪ ಸಮಯವನ್ನು ಮೀಸಲಿಡಬೇಕು. ಅದು ಪ್ರಾಣಾಯಾಮ, ಯೋಗ, ವೇಗದ ನಡಿಗೆ, ?ಪುಶ್‌ಅಪ್? ವ್ಯಾಯಾಮ ಯಾವುದಾದರೂ ಆಗಬಹುದು. ದೇಹದ ಅಂಗಾಂಗಗಳಿಗೆ ಸಾಕಷ್ಟು ಚಲನೆ, ಶ್ವಾಸಕೋಶಗಳಲ್ಲಿ ಒಂದಿಷ್ಟು ವಾಯುಸಂಚಾರ ಆಗುವುದು ಮುಖ್ಯ.

ಮೂರನೆಯ ತಂತ್ರ-ಜೀವಂತ ಪೋಷಣೆಯ ತಂತ್ರ: ನಿಸರ್ಗದ ಅಂಗಗಳಾದ ಸೂರ್ಯ, ಗಾಳಿ, ನೀರು, ಮಣ್ಣುಗಳಿಂದ ಸೃಷ್ಟಿಯಾಗಿರುವ ಸಸ್ಯಾಹಾರವೇ ಸಜೀವ ಆಹಾರ. ನಿತ್ಯವೂ ಹಸಿತರಕಾರಿ, ಹಣ್ಣು, ಬೇಳೆಕಾಳುಗಳನ್ನಷ್ಟೇ ತಿನ್ನುತ್ತಿದ್ದರೆ ಚಿರಂಜೀವಿಗಳಾಗಬಹುದು. ಸಸ್ಯಾಹಾರವು ದೀರ್ಘಾಯುಷ್ಯದ ರಹಸ್ಯಗಳಲ್ಲೊಂದು. ಫಿನ್‌ಲ್ಯಾಂಡಿನಲ್ಲಿ ವಿಜ್ಞಾನಿಗಳು ಇತ್ತೀಚೆಗೆ ನಡೆಸಿದ ಒಂದು ಅಧ್ಯಯನದ ಪ್ರಕಾರ ಕೇವಲ ಏಳು ತಿಂಗಳಿಂದ ಸಸ್ಯಾಹಾರಿಗಳಾಗಿ ಬದಲಾದವರಲ್ಲಿ ೩೮% ಮಂದಿ ಹಿಂದಿಗಿಂತ ಹೆಚ್ಚು ಉತ್ಸಾಹವನ್ನೂ ಕಡಿಮೆ ಆಯಾಸವನ್ನೂ ಅನುಭವಿಸುತ್ತಿರುವರೆಂದು ತಿಳಿದಿದೆ. ಊಟದಲ್ಲಿ ಹೆಚ್ಚು ಸಲಾಡ್ಗಳನ್ನು ಬಳಸುವುದು ಒಳ್ಳೆಯದು.

ನಾಲ್ಕನೆಯ ತಂತ್ರ- ಸಮೃದ್ಧ ಜ್ಞಾನದ ತಂತ್ರ: ಈ ತಂತ್ರವು ನಾವು ಜೀವನದ ವಿದ್ಯಾರ್ಥಿಗಳಾಗಬೇಕೆನ್ನುವುದನ್ನು ಹೇಳುತ್ತದೆ. ಅದಕ್ಕಿಂತಲೂ ಮಿಗಿಲಾಗಿ ಜೀವನ ವಿಶ್ವವಿದ್ಯಾನಿಲಯದಲ್ಲಿ ಪಡೆದುಕೊಂಡ ಜ್ಞಾನವನ್ನು ಬಳಸಬೇಕೆಂಬುದನ್ನು ಹೇಳುತ್ತದೆ. ಪ್ರತಿದಿನವೂ, ದಿನಕ್ಕೆ ಅರ್ಧತಾಸು ಉತ್ತಮ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಮಾಡಿದರೆ ಅದರಿಂದ ಗಮನಾರ್ಹ ಪರಿಣಾಮವಾಗುತ್ತದೆ.

ಐದನೆಯ ತಂತ್ರ:-ವೈಯಕ್ತಿಕ ಆತ್ಮ ಪರೀಕ್ಷೆಯ ತಂತ್ರ: ನಮ್ಮೊಳಗೆ ನಿದ್ರಿತ ಅಥವಾ ಸುಪ್ತ ಸ್ಥಿತಿಯಲ್ಲಿರುವ ಅನೇಕ ಪ್ರತಿಭೆಗಳಿವೆ. ಅದನ್ನು ಗುರುತಿಸುವ ಮೂಲಕ ಜಾಗೃತಗೊಳಿಸಬಹುದು. ಇದು ನಮ್ಮನ್ನು ಹೆಚ್ಚು ಚೈತನ್ಯಭರಿತರನ್ನಾಗಿಯೂ, ವಿವೇಕಿಯಾಗಿಯೂ ಮಾಡುತ್ತದೆ.

ಆರನೆಯ ತಂತ್ರ-ಶೀಘ್ರಜಾಗೃತಿ: ಎಂದರೆ ಬೇಗನೇ ಏಳುವುದು. ಸೂರ್‍ಯೋದಯಕ್ಕೇ ಏಳುವುದು ಹಾಗೂ ದಿನಚರಿಯನ್ನು ಚೆನ್ನಾಗಿ ಆರಂಭಿಸುವುದು ಬಹಳ ಮುಖ್ಯ.

ಏಳನೆಯ ತಂತ್ರ-ಸಂಗೀತದ ತಂತ್ರ: ಪ್ರತಿದಿನ ಕೊಂಚ ಸಮಯವನ್ನು ಸಂಗೀತಕ್ಕೆ ಮೀಸಲಾಗಿಡುವುದು ಉತ್ತಮ. ಬೇಸರವಾದಾಗ ಸಂಗೀತ ಕೇಳುವುದು ಉತ್ಸಾಹ ನೀಡುವ ಉತ್ತಮ ಸಾಧನ.

ಎಂಟನೆಯ ತಂತ್ರ- ಮಂತ್ರ ಸಿದ್ಧಿ: 'ಮಂತ್ರ' ಎಂದರೆ ಸಕಾರಾತ್ಮಕ ಪ್ರಭಾವವನ್ನುಂಟುಮಾಡುವ ರೀತಿಯಲ್ಲಿ ರಚಿಸಿರುವ ಶಬ್ದಗಳ ಜೋಡಣೆ. ಮಂತ್ರಗಳನ್ನು ಗಟ್ಟಿಯಾಗಿಉಚ್ಚರಿಸಿದಾಗ ನಮ್ಮ ಅಂತಃಪ್ರಜ್ಞೆಯ ಮೇಲೆ ಅದ್ಭುತ ಪ್ರಭಾವವುಂಟಾಗುತ್ತದೆ.

ಒಂಭತ್ತನೆಯ ತಂತ್ರ-ಸಮಗ್ರ ಚಾರಿತ್ರ್ಯ: ನಮ್ಮ ಚಾರಿತ್ರ್ಯ ವರ್ಧನೆಗಾಗಿ ಪ್ರತಿದಿನವೂ ಹಿಂದಿನ ದಿನಕ್ಕೀತ ಸ್ವಲ್ಪ ಹೆಚ್ಚು ಪ್ರಯತ್ನ ಮಾಡುತ್ತಾ ಹೋಗಬೇಕು. ಅದಕ್ಕಾಗಿ ಸದ್ಗುಣವನ್ನು ಬೆಳೆಸುವ ಯಾವ ಅಭ್ಯಾಸವನ್ನೂ, ಯೋಚನೆಯನ್ನೂ ಮಾಡಬಹುದು.

ಹತ್ತನೆಯ ತಂತ್ರ-ಸರಳತೆಯ ತಂತ್ರ: ಮುಖ್ಯವಾದ, ಆದ್ಯತೆಗೆ ಅರ್ಹವಾದ ಕಾರ್ಯಗಳ ಕಡೆಗೇ ಗಮನವನ್ನು ಏಕಾಗ್ರಗೊಳಿಸಿ ಸರಳವಾದ ಜೀವನವನ್ನು ನಡೆಸಬೇಕು.

ಈ ಹತ್ತು ತಂತ್ರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಜೀವನವನ್ನು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಸಶಕ್ತಗೊಳಿಸಿ, ಚೈತನ್ಯಪೂರ್ಣ ಬದುಕಿಗೆ ನಾಂದಿಯನ್ನು ಹಾಡೋಣ.

Friday, June 10, 2011

ಮನದ ಅಂಗಳದಿ.........೪೩. ದೂರದಿರಿ

ಸಾಮಾನ್ಯವಾಗಿ ನಾವು ಮಾತನಾಡುವಾಗ ನಮ್ಮ ಜೀವನದಲ್ಲಿ ಎದುರಾಗುವ ಸೋಲುಗಳಿಗೆ, ಕಷ್ಟ-ನಷ್ಟಗಳಿಗೆ ಯಾವುದಾದರೂ ಒಂದು ಕಾರಣವನ್ನು ಹುಡುಕಿಕೊಂಡು (ಅದು ವ್ಯಕ್ತಿಯಾಗಿರಬಹುದು ಅಥವಾ ಸಂದರ್ಭವೇ ಆಗಿರಬಹುದು) ಅದರಿಂದಲೇ ಹೀಗಾಯಿತು ಎಂದು ಪರಿತಪಿಸುತ್ತೇವೆ. ಅದನ್ನು ನಮ್ಮ ಆಪ್ತರಿಗಷ್ಟೇ ಅಲ್ಲ ಸಂಬಂಧಿಸಿದವರು, ಸಂಬಂಧಿಸದವರು ಎಲ್ಲರ ಮುಂದೂ ಹೇಳುತ್ತಾ ಒಂದು ರೀತಿಯ ಕರುಣಾಜನಕ ವಾತಾವರಣವನ್ನು ನಿರ್ಮಿಸಿಕೊಂಡು ಅದರೊಳಗೇ ನಮ್ಮ ಅಸ್ತಿತ್ವವನ್ನು ಕಾಣಬಯಸುತ್ತೇವೆ. ಅಥವಾ ನಮ್ಮೊಳಗೇ ಕೊರಗುತ್ತಾ ಮುಂದಿನ ಹೆಜ್ಜೆಗಳನ್ನು ಇಡುವುದನ್ನೂ ಮರೆತು ಸ್ಥಗಿತ ನೀತಿಯನ್ನು ಅನುಸರಿಸುತ್ತೇವೆ. ನಮ್ಮ ನಂತರದ ವೈಫಲ್ಯಗಳಿಗೆಲ್ಲಾ ಅದನ್ನೇ ನೆಪವನ್ನಾಗಿಸಿಕೊಳ್ಳುತ್ತೇವೆ. ಈ ಪ್ರಕ್ರಿಯೆಯಲ್ಲಿ ವ್ಯರ್ಥವಾಗುವ ಅಮೂಲ್ಯವಾದ ಸಮಯ, ಶಕ್ತಿಗಳ ಪರಿವೇ ನಮಗಿರುವುದಿಲ್ಲ.

ಈ ರೀತಿಯ ನಮ್ಮ ಧೋರಣೆಯ ಬಗ್ಗೆ ರ್‍ಯಾಂಡಿ ಪಾಶ್ ತಮ್ಮ ’ದಿ ಲಾಸ್ಟ್ ಲೆಕ್ಚರ್’ ನಲ್ಲಿ ಈ ರೀತಿ ಹೇಳುತ್ತಾರೆ,

’ಬಹಳಷ್ಟು ಜನ ತಮಗೆ ಎದುರಾದ ಸಮಸ್ಯೆಗಳನ್ನು ದೂರುವುದರಲ್ಲಿಯೇ ಇಡೀ ಜೀವನವನ್ನು ಕಳೆಯುವರು. ಜೀವನದಲ್ಲಿ ಸಮಸ್ಯೆಗಳನ್ನು ದೂರುವುದಕ್ಕೆ ವಿನಿಯೋಗಿಸುವ ಶೇಕಡ ಹತ್ತರಷ್ಟು ಶಕ್ತಿ ಮತ್ತು ಸಮಯವನ್ನು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ವಿನಿಯೋಗಿಸಿದರೆ ಅದ್ಭುತ ಫಲಿತಾಂಶ ನಮ್ಮದಾಗುವುದರಲ್ಲಿ ಸಂಶಯವಿಲ್ಲ.

ಎಂತಹ ವಿಷಮ ಪರಿಸ್ಥಿತಿಯಲ್ಲೂ ಬಂದೊದಗಿದ ಕಷ್ಟ-ನಷ್ಟಗಳನ್ನು ಹೇಳಿಕೊಂಡು ಗೋಳಿಡದ ಅನೇಕ ವ್ಯಕ್ತಿಗಳು ಸಮಾಜದಲ್ಲಿರುವುದನ್ನು ನಾನು ನೋಡಿದ್ದೇನೆ. ಅಂತವರಲ್ಲಿ ಸ್ಯಾಂಡಿ ಬೋಲ್ಟ್ ಒಬ್ಬರು. ನಾನು ವ್ಯಾಸಂಗ ಮಾಡುತ್ತಿರುವಾಗ ಇದ್ದ ಬಾಡಿಗೆ ಮನೆಯ ಮಾಲೀಕರು. ಅವರು ಯೌವನದಲ್ಲಿ ಕಟ್ಟಡವೊಂದರ ಸೆಲ್ಲಾರ್‌ಗೆ ಕೆಲವು ಪೆಟ್ಟಿಗೆಗಳನ್ನು ಹೊತ್ತೊಯ್ಯುತ್ತಿರುವಾಗ ಹಿಂದಿನಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆಯಿತು. ಸ್ಯಾಂಡಿ ಕೂಡಲೇ ಹಿಮ್ಮುಖವಾಗಿ ಸೆಲ್ಲಾರ್ ನಲ್ಲಿ ಬಂದು ಬಿದ್ದರು. ಒಮ್ಮೆ ನಾನು ಅವರನ್ನು ಮಾತನಾಡಿಸಿ, ’ಆ ಸಮಯದಲ್ಲಿ ನೀವು ಎಷ್ಟು ಎತ್ತರದಿಂದ, ಎಷ್ಟು ದೂರ ಹೋಗಿ ಬಿದ್ದಿರಿ?’ ಎಂದು ಪ್ರಶ್ನಿಸಿದೆ. ಅದಕ್ಕೆ ಅವರು, ’ಬೇಕಾದಷ್ಟು ದೂರ,’ ಎಂದಷ್ಟೇ ಹೇಳಿದರು. ಆದರೆ ಅವರು ಬಿದ್ದ ರಭಸಕ್ಕೆ ಎರಡೂ ಕೈಕಾಲುಗಳು ಊನಗೊಂಡಿದ್ದವು. ಇಡೀ ಜೀವನ ಕೈಕಾಲುಗಳಿಲ್ಲದೇ ಬದುಕುವ ಸ್ಥಿತಿ ಬಂದೊದಗಿತ್ತು.

ಸ್ಯಾಂಡಿ ಅದ್ಭುತ ಓಟಗಾರ. ಅಪಘಾತವಾಗುವ ಮೊದಲು ಆತನಿಗೆ ಮದುವೆ ನಿಷ್ಚಿತಾರ್ಥ ನಡೆದಿತ್ತು. ಆದರೆ ಮುಂದಿನ ದಿನಗಳಲ್ಲಿ ಆತನಿಗೆ ತನ್ನ ಕೈಹಿಡಿಯುವ ಹುಡುಗಿಯೊಂದಿಗೆ ಜೀವನ ಪೂರ್ತಿ ಭಾರವಾಗಿ ಬದುಕುವುದು ಇಷ್ಟವಿರಲಿಲ್ಲ. ಸ್ಯಾಂಡಿ ಆಕೆಯನ್ನು ಕರೆದು, ’ಮದುವೆಯ ವಿಚಾರದಲ್ಲಿ ನೀನೇನೂ ನನ್ನ ಜೊತೆ ಯಾವುದೇ ಒಪ್ಪಂದವನ್ನೂ ಮಾಡಿಕೊಂಡಿಲ್ಲ. ಈಗ ನಿನ್ನ ನಿಧಾರವನ್ನು ಬದಲಿಸುವುದಾದರೆ ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ.’ ಎಂದು ಹೇಳಿದ. ಆಕೆ ಅದರಂತೆಯೇ ಮಾಡಿದಳು.

ಮತ್ತೆ ನಾನು ಸ್ಯಾಂಡಿಯನ್ನು ನೋಡಿದ್ದು ಆತನ ಮೂವತ್ತನೇ ವರ್ಷದಲ್ಲಿ. ಜೀವನದ ಬಗ್ಗೆ ಆತನ ನಿಲುವು ನಿಜಕ್ಕೂ ಆಶ್ಚರ್ಯ ತಂದಿತ್ತು. ತನ್ನ ಜೀವನದಲ್ಲಿ ನಡೆದ ದುರಂತದ ಬಗ್ಗೆ ಆತನಿಗೆ ಯಾವುದೇ ವಿಷಾದವಾಗಲೀ, ಬೇಸರವಾಗಲೀ ಇರಲಿಲ್ಲ. ಅಲ್ಲದೇ ತನ್ನ ಗೋಳನ್ನು ಯಾರ ಬಳಿಯೂ ಹಂಚಿಕೊಳ್ಳುತ್ತಿರಲಿಲ್ಲ. ಆತ ಸಾಕಷ್ಟು ಶ್ರಮವಹಿಸಿ ಒಬ್ಬ ಅಧಿಕೃತ ಮದುವೆ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಲಿದ್ದ. ಆತನಿಗೆ ಮದುವೆಯೂ ಆಗಿತ್ತು. ಮಗುವೊಂದನ್ನು ದತ್ತು ತೆಗೆದುಕೊಂಡಿದ್ದ. ಸ್ವಂತ ಮಗುವನ್ನು ಪಡೆಯಲಾಗದ ವೈದ್ಯಕೀಯ ಸಮಸ್ಯೆಯನ್ನು ಸಾಮಾನ್ಯ ವಿಷಯವಾಗಿ ಸ್ವೀಕರಿಸಿದ್ದ.

ನನ್ನ ಮತ್ತೊಬ್ಬ ಆದರ್ಶ ವ್ಯಕ್ತಿ ಜಾಕಿ ರಾಬಿನ್ ಸನ್. ಮೇಜರ್ ಲೀಗ್ ಬೇಸ್ ಬಾಲ್ ಆಟದಲ್ಲಿ ಪ್ರಚಂಡ ಯಶಸ್ಸು ಗಳಿಸಿದ್ದ ಆಫ್ರಿಕ ಮೂಲದ ಪ್ರಥಮ ಅಮೇರಿಕನ್. ಜನಾಂಗೀಯ ನಿಂದನೆಯಿಂದ ಜರ್ಝರಿತನಾದ ಕ್ರೀಡಾಪಟು. ಇಂದಿನ ಯುವಕರಿಗೆ ಆತನಿಗಾದ ಅವಮಾನದ ಪರಿಕಲ್ಪನೆಯೂ ಇರಲಾರದು. ಆತ ಶ್ವೇತ ವರ್ಣೀಯರಿಗಿಂತ ಮಿಗಿಲಾಗಿ ಆಡಬೇಕಾದ ಅನಿವಾರ್ಯತೆಯನ್ನು ಚೆನ್ನಾಗಿ ಮನಗಂಡಿದ್ದ. ಅದಕ್ಕಾಗಿ ಸಾಕಷ್ಟು ಪರಿಶ್ರಮಪಟ್ಟು ಯಶಸ್ಸು ಗಳಿಸಿದ್ದ. ಆ ಯಶಸ್ಸಿನ ಹಾದಿಯಲ್ಲಿ ಸಾಗುವಾಗ ತನ್ನ ಮೇಲಾಗುತ್ತಿದ್ದ ದೌರ್ಜನ್ಯದ ಬಗ್ಗೆ ಎಂದಿಗೂ ಯಾರ ಬಳಿಯೂ ಮಾತನಾಡುತ್ತಿರಲಿಲ್ಲ. ಆತ ಆಫ್ರಿಕ ಮೂಲದವನೆಂದು ಸ್ಟೇಡಿಯಂನಲ್ಲಿ ಪ್ರೇಕ್ಷಕರು ಉಗಿದರೂ , ಕೀಳಾಗಿ ನಿಂದಿಸಿದರೂ ವಿಚಲಿತನಾಗುತ್ತಿರಲಿಲ್ಲ. ಮತ್ತು ಯಾರನ್ನು ದೂಷಿಸುತ್ತಿರಲಿಲ್ಲ. ಆತನ ಗಮನವೆಲ್ಲಾ ಆಟದ ಮೇಲೇ ಕೇಂದ್ರೀಕೃತವಾಗಿರುತ್ತಿತ್ತು. ಹಾಗಾಗಿ ಆತ ಒಬ್ಬ ಮಹಾನ್ ಬೇಸ್‌ಬಾಲ್ ಆಟಗಾರನಾಗಿ ಹೊರಹೊಮ್ಮಿದ........

ಇದರ ಒಟ್ಟಾರೆ ಸಾರಾಂಶ ಇಷ್ಟೇ. ನೀವು ಸದಾ ಸಮಸ್ಯೆಗಳನ್ನೇ ಬಣ್ಣಿಸುತ್ತಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾರಿರಿ. ಅದು ಎಂದಿಗೂ ಕಾರ್ಯ ನಿರ್ವಹಿಸುವ ವೈಖರಿಯಾಗಲಾರದು. ನಮಗೆಲ್ಲರಿಗೂ ಇರುವುದು ಅತ್ಯಂತ ಕಡಿಮೆ ಅವಧಿ ಮತ್ತು ಪರಿಮಿತ ಶಕ್ತಿ. ಸಮಸ್ಯೆಯನ್ನು ದೂಷಿಸಲು ಬಳಸುವ ಯಾವುದೇ ಸಮಯವೂ ಗುರಿಯನ್ನು ಮುಟ್ಟಲು ನಮಗೆ ಸಹಾಯ ಮಾಡುವುದಿಲ್ಲ. ಅದು ನಮ್ಮನ್ನು ಎಂದಿಗೂ ಆನಂದದಿಂದಿರಲು ಬಿಡದು.’

ಸಾವಿನ ಸಮ್ಮುಖದಲ್ಲಿ ನಿಂತು ಬದುಕಿನ ಸಾರ್ಥಕತೆಯನ್ನು ಸಾರಿದ ಕಂಪ್ಯೂಟರ್ ವಿಜ್ಞಾನಿ ರ್‍ಯಾಂಡಿ ಪಾಶ್ ’ದೂರು ಹೇಳುವುದನ್ನು ಬಿಟ್ಟು ಶ್ರಮದ ದುಡಿಮೆಯನ್ನು ಮಾಡಿರಿ,’ ಎನ್ನುತ್ತಾರೆ.

ದೂರುವುದು ಒಂದುರೀತಿಯ ಪಲಾಯನವಾದ. ಯಶಸ್ವಿಯಾಗಿ ಬದುಕಲು ತನ್ನದೇ ಆದ ಮಾರ್ಗಗಳಿವೆ. ಬದುಕನ್ನು ಬಂದಂತೆ ಸ್ವೀಕರಿಸುವುದು ಒಂದು ಮಾರ್ಗವಾದರೆ ಬದುಕನ್ನು ನಮಗೆ ಬೇಕಾದಂತೆ ಸ್ವಶ್ರಮದಿಂದ ರೂಪಿಸಿಕೊಳ್ಳುವುದು ಮತ್ತೊಂದು ಮಾರ್ಗ. ಈ ಬದುಕು ಪ್ರಕೃತಿ ನೀಡಿರುವ ಅಮೂಲ್ಯ ಕೊಡುಗೆ. ಇದನ್ನು ಸಾರ್ಥಕಪಡಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.