Tuesday, May 12, 2026

ವಿಶ್ವವಾಣಿ'ಯ 'ವಿರಾಮ'ದಲ್ಲಿ 'ಕದನ ಕುತೂಹಲ...!'

 


https://www.facebook.com/share/p/1En7E9Ecir/

👆ವಿಶ್ವವಾಣಿ'ಯ 'ವಿರಾಮ'ದಲ್ಲಿ
'ಕದನ ಕುತೂಹಲ...!'
ಏಪ್ರಿಲ್19ರಂದು  ಪ್ರಕಟವಾಗಿದ್ದು ನಿಮ್ಮ ಮುಂದಿದೆ. ಓದಿ ಪ್ರತಿಕ್ರಿಯಿಸಿ🌼
'ವಿಶ್ವವಾಣಿ' ಪತ್ರಿಕಾ ಬಳಗಕ್ಕೆ ಧನ್ಯವಾದಗಳು🙏

             ಕದನ ಕುತೂಹಲ...!

            ಬಹುಶಃ ಕಿಶೋರಾವಸ್ಥೆಯಿಂದಲೂ ಹೊತ್ತು ಮೂಡಿ ಕುಕ್ಕುಟಗಳು ʼಕೊಕ್ಕೋʼ ಎನ್ನುವ ಮೊದಲೇ ಹಕ್ಕಿಗಳ ಚಿಲಿಪಿಲಿ ಗಾನ ಕಣ್ಮುಚ್ಚಿ ಕನಸು ಕಾಣುತ್ತಿದ್ದ ನಮ್ಮ ಕಿವಿಗಳನ್ನು ತಲುಪುವ ಪೂರ್ವದಲ್ಲಿಯೇ ಅಕ್ಕಪಕ್ಕದವರ ಕರ್ಣಕಠೋರವಾದ ಜಗಳದ ಅಬ್ಬರದ ಸುಪ್ರಭಾತವಾಗುತ್ತಿತ್ತು. ಅಷ್ಟರಲ್ಲಾಗಲೇ ಎದ್ದು ದೇವರ ನಾಮ ಹೇಳಿಕೊಳ್ಳುತ್ತಿದ್ದ ಅಜ್ಜಿ ಜಗಳದಲ್ಲಿನ ಅವಾಚ್ಯಗಳನ್ನು ಸಹಿಸದೆ ಕಿವಿಮುಚ್ಚಿಕೊಂಡು ʼರಾಮ, ರಾಮʼ ಎನ್ನುವಾಗಲೇ ದಿನನಿತ್ಯದ ಕಾರ್ಯ ಪರಂಪರೆಯಲ್ಲಿ ತೊಡಗಿರುತ್ತಿದ್ದ ಅಮ್ಮ ರೇಡಿಯೋ ಆನ್‌ ಮಾಡಿ ಗರಿಷ್ಟ ವಾಲ್ಯೂಮ್‌ ಕೊಟ್ಟು ಆ ಕೆಟ್ಟ ಪದಗಳು ಎದ್ದಾಕ್ಷಣವೇ ಮಕ್ಕಳ ಕಿವಿಯ ಮೇಲೆ ಬೀಳದಂತೆ ಜಾಗ್ರತೆ ವಹಿಸುತ್ತಿದ್ದರು. ಜಗಳದಲ್ಲಿ ನಮ್ಮತ್ತೆಯದೂ ಪಾಲಿದ್ದರಂತೂ ಕೇಳುವಂತೆಯೇ ಇರಲಿಲ್ಲ. ಅವರು ಪ್ರತಿದಿನವೂ ತಪ್ಪದೇ ಓದುತ್ತಿದ್ದ ಕುಮಾರವ್ಯಾಸಭಾರತದ ಪ್ರಭಾವದಿಂದಲೋ ಏನೋ ಸುಸಂಸ್ಕೃತ ಪದಪುಂಜಗಳೊಂದಿಗೇ ತಾವು ಪ್ರೀತಿಯಿಂದ ಬೆಳೆಸಿದ ಗಿಡಗಳನ್ನು ಧ್ವಂಸಮಾಡಿದ ದನಗಳ ಮಾಲೀಕರ ಜನ್ಮ ಜಾಲಾಡುತ್ತಿದ್ದರು. ಬೆಳಗಿನಿಂದ ರಾತ್ರಿಯವರೆಗೂ ಸುತ್ತಮುತ್ತಾ ಒಂದಲ್ಲಾ ಒಂದು ಜಗಳವಾಗುತ್ತಿದ್ದರೂ ಅದರಿಂದ ಸ್ವಲ್ಪವೂ ವಿಚಲಿತವಾಗದಂತೆ ನಮ್ಮ ಬಾಲ್ಯ ಮುನ್ನಡೆಯುತ್ತಿತ್ತು. ಆದರೂ ನಮ್ಮನಮ್ಮ ನಡುವೆ ಆಗಾಗ ನಡೆಯುತ್ತಿದ್ದ ಕೋಳಿಜಗಳಗಳನ್ನು ಬಿಡಿಸುವುದರಲ್ಲೇ ಮನೆಯವರಿಗೆ ಸಾಕುಸಾಕಾಗಿ ಮಕ್ಕಳೂ ಎಲ್ಲಿ ಜಗಳಗಂಟರಾಗುತ್ತಾರೋ ಎಂದು ಪರಿತಪಿಸುವಂತಾಗುತ್ತಿತ್ತು. ಇದಕ್ಕೆ ಅಪವಾದವೆನ್ನುವಂತೆ ನಾನು ಮಾತ್ರ ಯಾವ ಜಗಳದಲ್ಲೂ ಭಾಗಿಯಾಗದೇ ಬಲಾಢ್ಯರಿಗೆ ತಗ್ಗಿಬಗ್ಗಿ ನಡೆಯುತ್ತಾ ಸೋಲುವುದರಲ್ಲೇ ಸಂತೃಪ್ತಳಾಗಿ ಹಿರಿಯರ ಮೆಚ್ಚುಗೆಗೆ ಪಾತ್ರಳಾಗಿದ್ದೆ. ಆದರೆ ಸಹಜ ರಾಜಸ ಪ್ರವೃತ್ತಿಯ ನಮ್ಮತ್ತೆ ಮಾತ್ರ ʼಇಷ್ಟೊಂದು ಮೆದುಗಲಾದರೆ ಮುಂದೆ ಹೇಗೆ ನಿಭಾಯಿಸುತ್ತೋʼ ಎಂದು ಅಲವತ್ತುಕೊಳ್ಳುತ್ತಿದ್ದರು.

           ನಮ್ಮ ಹಳ್ಳಿಯಲ್ಲಿ ಮಾತುಮಾತಿಗೂ ಜಗಳ ನಡೆಯುತ್ತಿದ್ದು ವಿಕೋಪಕ್ಕೆ ಹೋಗಿ ಹೊಡೆದಾಡುವ ಹಂತವನ್ನೂ ತಲುಪುತ್ತಿತ್ತು. ಕುಟುಂಬದ ಒಳಗಿನ ಕಲಹವಾಗಲೀ, ಕುಟುಂಬಗಳ ನಡುವಿನದಾಗಲೀ ಅಪರಿಹಾರ್ಯವೆನಿಸಿದಾಗ ಶಾಂತಿಪ್ರಿಯರಾದ ನಮ್ಮ ತಂದೆಯ ಬಳಿಗೇ ಬರುತ್ತಿದ್ದರು. ಅವರು ʼಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲʼ ಎಂದು ಒಮ್ಮೊಮ್ಮೆ ಸಮಾಧಾನಿಸಿದರೆ ʼಕಾದ ಮನೆ ಕಲ್ಲಾಯ್ತು, ಹೋರಿದ್ದ ಮನೆ ಹುಲ್ಲಾಯ್ತುʼ ಎಂಬ ಗ್ರಾಮ್ಯ ನುಡಿಗಟ್ಟನ್ನು ಹೇಳಿ ಜಗಳದ ಪರಿಣಾಮವನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದರು. ಆದರೂ ನಾಯಿಬಾಲ ಡೊಂಕು ಎನ್ನುವಂತೆ ಹೊಸಹೊಸ ಕಾರಣಗಳಿಗೆ ಕಾದಾಟ ನಡೆಯುವುದಂತೂ ತಪ್ಪುತ್ತಿರಲಿಲ್ಲ.

        ಶಾಲೆಗೆ ಹೋಗಲು ಪ್ರಾರಂಭಿಸಿದ ನಂತರ ಜೊತೆಯವರು ಕ್ಷುಲ್ಲಕ ಕಾರಣಗಳಿಗೂ ಕಿತ್ತಾಡುವುದನ್ನು ನೋಡಿ ಯಾರಬಳಿಯೂ ಸಲುಗೆಯಿಂದಿರಲು ಭಯವಾಗಿ ತಟಸ್ಥಳಾದಾಗ ಮಕ್ಕಳ ಕಿತಾಪತಿಯಿಂದ ತಲೆ ಚಿಟ್ಟುಹಿಡಿಸಿಕೊಂಡ ಶಿಕ್ಷಕರೇನೋ ʼಅವಳನ್ನು ನೋಡಿ ಕಲಿಯಿರಿʼ ಎಂದು ಮೆಚ್ಚುಗೆ ಸೂಸಿದರೂ ಸಹಪಾಠಿಗಳಿಂದ ಒಂಟರಬಡುಕ ಸುಂಟರಗಾಳಿ ಎನಿಸಿಕೊಳ್ಳುವಂತಾಯ್ತು. ಅಂತೂ ಶಾಂತಿಧೂತಳಂತೆ ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೂ ಸೇರಿದ್ದೇನೋ ಆಯ್ತು. ಆದರೆ ಹೀಗೇ ಏಕಾಂಗವೀರಳಾಗಿ ವೈವಾಹಿಕ ಜೀವನದಲ್ಲಿ ಮುನ್ನಡೆಯಲಾಗಲಿಲ್ಲ. ಹೇಗೋ ಏನೋ ಎಂಬ ಅಳುಕಿನಲ್ಲಿ ಹೊಸದರಲ್ಲಿ ಸ್ವಲ್ಪಸ್ವಲ್ಪವೇ ಅಧಿಕಾರ ಚಲಾವಣೆ ಮಾಡುತ್ತಾ ಇದ್ದ ನನ್ನವರು ಸಂಪೂರ್ಣ ಸ್ವಾಮ್ಯಕ್ಕೊಳಪಡಲು ಸಿದ್ದಳಿಲ್ಲವೆನ್ನುವುದನ್ನು ಮನಗಂಡು ಭಿನ್ನಾಭಿಪ್ರಾಯ ತಲೆದೋರಿದಾಗಲೆಲ್ಲಾ ವಾಗ್ಬಾಣಗಳನ್ನು ಪ್ರಯೋಗಿಸುತ್ತಾ ನೇರ ಹೋರಾಟಕ್ಕೇ ಆಹ್ವಾನ ನೀಡಲಾರಂಭಿಸಿದರು. ಮೊದಲೇ ಜಗಳವೆಂದರೇ ಮಾರುದೂರ ಹಾರುತ್ತಿದ್ದ ನಾನು ಹೇಗೂ ತಪ್ಪಿಸಿಕೊಳ್ಳಲಾರದೇ ಪ್ರಾರಂಭಿಕ ಮೌನರೋಧನದ ನಂತರ ಅಸ್ತ್ರಗಳಿಗೆ ಪ್ರತ್ಯಸ್ತ್ರ ಹೂಡುವ ತಂತ್ರಗಳನ್ನು ಅವರ ನಡೆ-ನುಡಿಗಳನ್ನೇ ಗಮನಿಸುತ್ತಾ ಒಂದೊಂದಾಗಿ ಅಭ್ಯಾಸ ಮಾಡಿಕೊಳ್ಳಲಾರಂಭಿಸಿದೆ. ಹೀಗಾಗಿ ಕಲಹಮಲ್ಲರಾದ ನನ್ನವರೇ ನನ್ನ ಕಲಹಕಲಿಕಾ ಮಾರ್ಗದರ್ಶಕರೆಂದು ನಿಸ್ಸಂಶಯವಾಗಿ ಒಪ್ಪಿಕೊಳ್ಳುವಂತಾಯ್ತು. ಕ್ರಮೇಣ ʼಗುರುವಿನಮಿಂಚಿನ ಶಿಷ್ಯʼಳಾಗಿ ಅವರಿಗೆ ಸರಿಪಟ್ಟಿಕೊಂಡು ಕಲಹ ಮಾಡುವ ಕಲೆ ಕರತಲಾಮಲಕವಾಗುವಂತಾಗಿ ಜಗಳಮಾಡುವುದರಲ್ಲಿಯೂ ಎಂಥಾ ಖುಷಿಯಿದೆಯೆಂದು ಅಚ್ಚರಿಪಡುವಂತಾಯಿತು! ಜಗಳವಿರದ ಮನೆಯಿರಲು ಸಾಧ್ಯವೇ ಎಂಬ ಪರಮ ಸತ್ಯದ ಅರಿವಾದ ನಂತರ ಅದರ ಧನಾತ್ಮಕ ಅಂಶವಾದ ಮನದೊಳಗಿನ ಒಂದೊಂದೇ ಮಾತು ಹೊರಬರುವುದರಿಂದ ಮನಸ್ಸಿನ ಒತ್ತಡ ಕಡಿಮೆಯಾಗುವುದು ಎನ್ನುವುದೂ ಮನದಟ್ಟಾಗಿ ನನ್ನ ಸಪ್ಪೆ ಜೀವನಕ್ಕೆ ವಿದಾಯ ಹೇಳಿದೆ. ಆಹಾ ನನ್ನಲ್ಲೇ ಹುದುಗಿದ್ದ ಅಪಾರ ಸಾಮರ್ಥ್ಯವನ್ನು ಹೊರಹೊಮ್ಮಿಸಿದ ಕಲಹಾನಂದವೇ!

                 ಈ ಕಲಹವೆನ್ನುವುದು ಇವತ್ತು-ನಿನ್ನೆಯದಲ್ಲ. ನಮ್ಮ ಪುರಾಣಗಳಲ್ಲಿರುವಂತೆ ಸಮುದ್ರ ಮಂಥನದ ಸಂದರ್ಭದಲ್ಲಿ ದೇವತೆಗಳು ಮತ್ತು ದಾನವರ ನಡುವೆ ಮಹಾನ್‌ ಕದನವೇ ನಡೆದಿದೆ. ಮಹಾಭಾರತದಲ್ಲಿ ಅಧಿಕಾರ ಲಾಲಸೆಗಾಗಿ ಕೌರವರು ಮತ್ತು ಪಾಂಡವರ ನಡುವೆ ಘನಘೋರವಾದ ಕುರುಕ್ಷೇತ್ರಯುದ್ಧವೇ ಆಗಿದೆ. ʼಕಲಹ ಪ್ರಿಯ'ರೆಂದೇ ಪ್ರಸಿದ್ಧರಾಗಿದ್ದ ನಾರದ ಮುನಿಗಳು  ದೇವ-ದಾನವರು, ರಾಜ-ಮಹಾರಾಜರು, ಋಷಿ-ಮುನಿಗಳ ನಡುವೆ ಕಲಹ ಮಾಡುವಂತೆ ಪ್ರೇರೇಪಿಸಬಲ್ಲವರಾಗಿದ್ದರು. ʼನಾರಾದರೆಲ್ಲೆಲ್ಲಿ ಕದನಕಿಕ್ಕುವರೊ...ʼ ಎಂದು ಕದನ ಕುತೂಹಲಿಯಾಗಿದ್ದ ನಮ್ಮತ್ತೆ ಆಗಾಗ ಹಾಡುತ್ತಿದ್ದರು!

                
              ಇತಿಹಾಸವೂ ರೋಮನ್‌ ಸಾಮ್ರಾಜ್ಯವು ಪತನಗೊಂಡಿದ್ದು ಆಂತರಿಕ ಕಲಹಗಳಿಂದಲೇ ಎಂದು ಸಾರುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿಯೂ ಜಗತ್ತಿನಾದ್ಯಂತ ವೈಮನಸ್ಯದಿಂದುಂಟಾದ ಸಂಘರ್ಷಗಳ ವೈಪರೀತ್ಯಗಳನ್ನು ನೋಡುತ್ತಲೇ ಇದ್ದೇವೆ.

              ಪ್ರಾಣಿಜಗತ್ತಿನಲ್ಲಿಯೂ ಆಹಾರಕ್ಕೆ, ಆವಾಸಸ್ಥಾನಕ್ಕೆ ಕಾದಾಡುವುದು ಸರ್ವೇಸಾಮಾನ್ಯ. ಮರಿಗಳನ್ನು ಕಾಪಾಡುವುದಕ್ಕೆ ತಮ್ಮ ಜೀವವನ್ನೇ ಫಣಕ್ಕಿಟ್ಟು ಹೋರಾಡುತ್ತವೆ. ನಮ್ಮ ಗದ್ದೆಯ ಹತ್ತಿರ ಆಲದ ಮರದ ಪೊಟರೆಯಲ್ಲಿ ಹಕ್ಕಿಯ ಮೊಟ್ಟೆ ಎಗರಿಸಲು ಹಾವು ಬಂದಾಗ ತಾಯಿಹಕ್ಕಿಯ ಆಕ್ರಮಣದ ಹೋರಾಟ-ಚೀತ್ಕಾರ ಬಹಳ ಬೀಭತ್ಸವಾಗಿರುತ್ತಿತ್ತು! ಇನ್ನು ಒಂದು ಹೆಣ್ಣಿಗಾಗಿ ಗಂಡುಗಳೆರಡು ನಡೆಸುವ ಕಾಳಗವಂತೂ ಬಲು ಭೀಕರ. ಮನುಷ್ಯರಲ್ಲೂ ಇಂಥಾ ಮೃಗೀಯ ವರ್ತನೆಯ ಸುದ್ಧಿಗಳು ಆಗಾಗ ಬರುತ್ತಲೇ ಇರುತ್ತವೆ. ನಮ್ಮ ಕಡೆ ವೈಷಮ್ಯದ ದಾಂಪತ್ಯವನ್ನು ʼಬೆಕ್ಕಿನ ಸಂಸಾರʼ ಎನ್ನುವ ವಾಡಿಕೆಯಿದೆ. ನಮ್ಮ ಗಾರ್ಡನ್‌ ಮತ್ತು ಟೆರೇಸ್‌ಗಳನ್ನೇ ತಮ್ಮ ಕದನಕ್ಷೇತ್ರವಾಗಿಸಿಕೊಳ್ಳುವ ಬೆಕ್ಕುಗಳ ಹೋರಾಟದ ಪೂರ್ವ ಚೀರಾಟದಿಂದ ಎಷ್ಟೋಬಾರಿ ಬೆಚ್ಚಿಬಿದ್ದಿದ್ದೇವೆ. ನೀರುನಾಯಿಗಳು ಕಾದಾಟವನ್ನೇ ಆಡುತ್ತಾ ಕದನಕಲೆಯಲ್ಲಿ ಪಳಗುತ್ತವಂತೆ!

                ಕದನ ಕುತೂಹಲ ರಾಗವು  ಪಟ್ನಂ ಸುಬ್ರಮಣ್ಯ ಅಯ್ಯರ್ ಅವರು ಜನಪ್ರಿಯಗೊಳಿಸಿರುವ, ಕೇಳುಗರಲ್ಲಿ ಉತ್ಸಾಹ ಮತ್ತು ಶೌರ್ಯದ ಭಾವನೆಯನ್ನು ಮೂಡಿಸುವ ರಾಗವಾಗಿದೆ. ಶ್ರೋತೃಗಳು ಸಂಗೀತದಲ್ಲಿ ತನ್ಮಯರಾಗಿ ಇನ್ನೇನು ನಿದ್ರಾದೇವಿಗೆ ಶರಣಾಗುವ ವೇಳೆಗೆ ʼರಘುವಂಶ ಸುಧಾಂಬುಧೀ ಚಂದ್ರಿಕೆ…ʼ ಎಂದು ಪ್ರಾರಂಭಿಸಿದಾಕ್ಷಣವೇ ಥಟ್ಟನೆ ಎಚ್ಚರಗೊಳ್ಳುತ್ತಾರೆಂದರೆ ಅದರ ಕೀರ್ತಿ ʼಕದನʼಕ್ಕೇ ಸಲ್ಲಬೇಕಲ್ಲವೆ!  ಕದನ ಕುತೂಹಲ ರಾಗವೆನ್ನುವುದು ಯುದ್ಧದ ಮುನ್ನ ವೀರನ ಮನಸ್ಸಿನಲ್ಲಿ ಮೂಡುವ ವಿಶಿಷ್ಟ ಭಾವಸ್ಥಿತಿಯನ್ನು ಸೂಚಿಸುವ ಸಾಹಿತ್ಯಾತ್ಮಕ ಪದಗುಚ್ಛವೆಂದೂ ಹೇಳುತ್ತಾರೆ. ಈಗಂತೂ ಸ್ಟ್ರಾಟಜಿಕ್‌ ವಾರ್‌ಗಳು! ಸಾಹಿತ್ಯಕ್ಷೇತ್ರದಲ್ಲಿಯೂ ಆಗಾಗ ಲೇಖಕರು ಹಾಗೂ ವಿಮರ್ಶಕರ ನಡುವೆ ಮುಸುಕಿನೊಳಗಿನ ಗುದ್ದಾಟದಂಥಾ ಕೋಲ್ಡ್‌ ವಾರ್‌ಗಳು ನಡೆಯುತ್ತಲೇ ಇರುತ್ತವೆ. ಬಹಳ ಸೀರಿಯಸ್‌ ಆಯ್ತಲ್ವಾ? ಸಣ್ಣ ಕಿಡಿಯಿಂದ ಬೃಹತ್‌ ಸ್ಪೋಟವೇ ಆಗುವಂತೆ… ರಿಲ್ಯಾಕ್ಸ್…‌ ರಿಲ್ಯಾಕ್ಸ್…
            
              ಈಗ ಮತ್ತೆ ಕಮಿಂಗ್‌ ಬ್ಯಾಕ್‌ ಟು ಅವರ್ ಕುಟುಂಬ ಕಲಹ,  ʼಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕʼ ಎಂದರೆ ವಿರಸ ತಾತ್ಕಾಲಿಕವಾಗಿದ್ದು ಸರಸದೊಂದಿಗೆ ಮುಕ್ತಾಯವಾಗುತ್ತದೆ ಎಂಬ ಅತ್ಯಂತ ಜನಜನಿತವಾದ ಉಕ್ತಿಯೊಂದಿದೆ. ಆದರೆ ಈಗೀಗ ಆ ಜಗಳವು ಕೋರ್ಟ್‌ ಮೆಟ್ಟಿಲೇರುವವರೆಗೂ ಮುಂದುವರೆಯುತ್ತಿರುವುದು ವಿಷಾದನೀಯ. ಏನುಮಾಡುವುದು ಪರಿಸ್ಥಿತಿ, ಮನಃಸ್ಥತಿ… ಆದರೂ ಇತ್ತೀಚೆಗೆ ವಿದೇಶೀ ಹೈಕೋರ್ಟ್ ಒಂದರಲ್ಲಿ ನ್ಯಾಯಾಧೀಶರ ನಡುವೆ ಜಗಳದ ಕಾವೇರಿ ಕೈಕೈಮಿಲಾಯಿಸುವ ವಿಡಿಯೋ ನೋಡಿದಾಗ ಬೇಲಿಯೇ ಎದ್ದು ಹೊಲವನ್ನು ಮೇಯ್ದಂತಾಗಿ ನ್ಯಾಯ ಕೇಳಲು ಹೋಗುವುದಾದರೂ ಎಲ್ಲಿಗೆ ಎನಿಸದಿರುವುದಿಲ್ಲ!
ಮತ್ತದೇ ರಾಗ!...!...!

                     ನಾನೇನೋ ಜಗಳ ಮಾಡುವುದನ್ನು ಕಲಿತುಬಿಟ್ಟೆನೆಂದು ಬೀಗಬಹುದು, ಮಾತಿಗೆ ಮಾತಿನ ತಿರುಗೇಟು ಕೊಡುತ್ತಾ ಕಲಹಾನಂದವನ್ನೂ ಹೊಂದಬಹುದು, ಆದರೆ ಮನೆಯೇ ಮೊದಲ ಪಾಠಶಾಲೆಯಾದ್ದರಿಂದ ನಮ್ಮಂಥಾ ಕುಟುಂಬಗಳಲ್ಲಿ ಮಾತು ಕಲಿಯುವ ಮುನ್ನವೇ ಮಕ್ಕಳೂ ಜಗಳವಾಡುವುದನ್ನೇ ಕಲಿತುಬಿಟ್ಟರೆ! ʼಕುಟುಂಬದಲ್ಲಿ ಕಲಹ ಉಪ್ಪಿನಷ್ಟು ಇರಬೇಕು, ಜಾಸ್ತಿಯಾಯ್ತೆಂದರೆ ಊಟವೇ ಹಾಳು!ʼ ಎಂಬ ಅಜ್ಜಿಯ ಮಾತಿನಂತೆ ಹಿತಮಿತವಾಗಿದ್ದರೆ ಒಳಿತಲ್ಲವೆ
       

                        ✍ಪ್ರಭಾಮಣಿ ನಾಗರಾಜ, ಹಾಸನ


 



 

Friday, May 8, 2026

🐀🐁ಎಲ್ಲೆಲ್ಲೂ ಇಲಿಯೇ!🐁🐀

 

  

https://www.facebook.com/share/p/1CdwLQakMs/
👆ಉದಯವಾಣಿ'ಯ 'ಸಾಪ್ತಾಹಿಕ ಸಂಪದ'ದಲ್ಲಿ 'ಎಲ್ಲೆಲ್ಲೂ ಇಲಿಯೇ!'
ಫೆಬ್ರವರಿ8ರಂದು  ಪ್ರಕಟವಾಗಿದೆ. ಓದಿ ಪ್ರತಿಕ್ರಿಯಿಸಿ🌼
'ಉದಯವಾಣಿ' ಪತ್ರಿಕಾ ಬಳಗಕ್ಕೆ ಧನ್ಯವಾದಗಳು🙏


🐀🐁ಎಲ್ಲೆಲ್ಲೂ ಇಲಿಯೇ!🐁🐀
          

         ಮನುಕುಲದೊಂದಿಗೆ ದೀರ್ಘಕಾಲದ ಸಹಬಾಳ್ವೆಯನ್ನು ಹೊಂದಿರುವ ಜೀವಿಗಳಲ್ಲಿ ಪ್ರಮುಖ ಸ್ಥಾನದಲ್ಲಿರುವ ಇಲಿಗಳದ್ದು ಬಿಟ್ಟೆನೆಂದರೂ ಬಿಡದ ಬಂಧವಾಗಿ ಅದರ ಉಚ್ಛಾಟನೆಗೆ ಪ್ರಯೋಗಿಸುವ ನಮ್ಮೆಲ್ಲಾ ತಂತ್ರಗಳನ್ನೂ ಅತಂತ್ರಗೊಳಿಸಿ ಜಯಭೇರಿಯೊಂದಿಗೆ ಮುನ್ನಡೆಯುತ್ತಲೇ ಇರುತ್ತದೆ. ನಮ್ಮ ಮನೆಯನ್ನೇ ಅಲಿಖಿತವಾಗಿ ತಮ್ಮದಾಗಿಸಿಕೊಂಡಿರುವ ನಮ್ಮೀ ಸಹಬಂಧುಗಳು ಅಡಿಗಡಿಗೂ ಸವಾಲೊಡ್ಡುತ್ತಾ ದೊಡ್ಡ ತಲೆನೋವಾಗಿಯೇಬಿಡುತ್ತವೆ.

                  ಕೃಷಿಯನ್ನೇ ಜೀವನೋಪಾಯವಾಗಿಸಿಕೊಂಡಿದ್ದ ನಮ್ಮ ಮನೆಯಲ್ಲಿ ಧವಸ-ಧಾನ್ಯಗಳನ್ನು ತುಂಬಿಡುತ್ತಿದ್ದ ವಾಡೆ-ಪೆಟ್ಟೆಗಳೆಲ್ಲಾ ಇಲಿಗಳದೇ ಸಾಮ್ರಾಜ್ಯವಾಗಿದ್ದು ಅವುಗಳನ್ನು ಹೊರದೂಡುವುದರಲ್ಲಿ ಸಾಕುಸಾಕಾಗುತ್ತಿತ್ತು. ಮನೆಕೆಲಸ ಮಾಡುತ್ತಿದ್ದ ಹುಡುಗರು ಇಲಿಯ ಕಾಟಕ್ಕೆ ರೋಸಿಹೋಗಿ ಬೋನಿಗೆ ಬಿದ್ದ ಇಲಿಗಳನ್ನು ಸಮೀಪದ ನಾಲೆಯೊಳಗೆ ಮುಳುಗಿಸಿಬಿಡುತ್ತಿದ್ದರು. ತಮ್ಮ ಸ್ವಲ್ಪ ದೊಡ್ಡವನಾದ ನಂತರ ಇಲಿವಿಲೇವಾರಿ ಕಾರ್ಯವನ್ನು ವಹಿಸಿಕೊಂಡು ಅತ್ಯುತ್ಸಾಹದಿಂದ ಇಲಿಗಳನ್ನು ದೂರದ ಪೊದೆಗಳಲ್ಲಿ ಬಿಟ್ಟುಬರಲಾರಂಭಿಸಿದ. ಒಮ್ಮೆ ಹೀಗೇ ಬೆಳಿಗ್ಗೆ ಎದ್ದವನೇ ಕತ್ತಲು ತುಂಬಿದ್ದ ಓಡೆಯ ಬಳಿ ಓಡಿಹೋಗಿ ಬೋನುತೆಗೆದುಕೊಳ್ಳಲು ಕೈಚಾಚಿದಾಗ ಅದರೊಳಗಿಂದ ಫಳಫಳನೆ ಹೊಳೆದಂತಾಗಿ ಟಾರ್ಚ್‌ ಬಿಟ್ಟು ನೋಡಿದಾಕ್ಷಣವೇ ಬೋನಿನೊಳಗೆ ನಾಗರಹಾವು ಕಂಡಿದೆ!

          ನಮ್ಮ ಮನೆಯಲ್ಲಿದ್ದ ಬೆಕ್ಕುಗಳಂತೂ ಕಾಲಕಾಲಕ್ಕೆ ಯಥೇಚ್ಛವಾಗಿ ದೊರೆಯುತ್ತಿದ್ದ ಹಾಲನ್ನವನ್ನು ತಿನ್ನುತ್ತಾ ಪರಮ ಸಾಧುಗಳಾಗಿ ʼಮುಂದೆ ಬಂದರೆ ಹಾಯಲಾರೆ, ಹಿಂದೆ ಬಂದರೆ ಒದೆಯಲಾರೆʼ ಎನ್ನುವಂತೆ ಸದಾ ಮಲಗಿದ್ದು ಇಲಿಗಳು ಮೈಮೇಲೆ ಓಡಾಡಿದರೂ ಜುಮ್ಮೆನ್ನುತ್ತಿರಲಿಲ್ಲ. ಒಮ್ಮೆ ಯುವಬೆಕ್ಕೊಂದು ತಮ್ಮನ ಪುಸ್ತಕದ ಗೂಡಿನಿಂದ ಹೊರಗಿಣುಕಿದ ಇಲಿಯನ್ನು ಗಬಕ್ಕನೆ ಹಿಡಿದುಕೊಂಡೇಬಿಟ್ಟಿತು. ಅವತ್ತೆಲ್ಲಾ ತಮ್ಮ ಅತ್ತಿದ್ದೂಅತ್ತಿದ್ದೆ!
ನಾವು ಐದನೇ ಕ್ಲಾಸಿಗೆ ಅಡಿಯಿಟ್ಟು ಇಂಗ್ಲಿಷ್‌ ಕಲಿತಾಗ ಆಡುತ್ತಿದ್ದ ಚಿತ್ರರಚನಾ ಆಟವೆಂದರೆ m-o-u-s-e ಅಕ್ಷರಗಳಲ್ಲಿ ಇಲಿಯನ್ನು ಬರೆಯೋ ಸಂಭ್ರಮ! ಅದೇತಾನೇ ಸ್ಲೇಟ್‌ನಿಂದ ನೋಟ್ಬುಕ್‌ಗೆ ಪ್ರಮೋಷನ್ನಾಗಿದ್ದ ನಮ್ಮ ಹೊಸಪುಸ್ತಕದ ಹಾಳೆಹಾಳೆಗಳ ಮೂಲೆಮೂಲೆಗಳಲ್ಲೂ ಇಲಿಗಳದ್ದೇ ಸಂಚಾರ! 

           ಗೌರಿಹಬ್ಬದಲ್ಲಿ ಗಣಪತಿಯನ್ನು ತಂದಾಗಲೆಲ್ಲಾ ತಮ್ಮನಿಗೆ ಅಷ್ಟು ದೊಡ್ಡ ಗಣಪತಿ ಅದ್ಹೇಗೆ ಅಷ್ಟೊಂದು ಪುಟ್ಟ ಇಲಿ ಮೇಲೆ ಕೂರ್ತಾನೆನ್ನುವುದೇ ಸಮಸ್ಯೆಯಾಗ್ತಿತ್ತು. ಆಗೆಲ್ಲಾ ವಾಮದೇವಋಷಿಯು ಯಾಗಪೀಡಕ ಕ್ರೌಂಚರಾಕ್ಷಸನನ್ನು ಇಲಿಯಾಗಿಸಿದರೂ ಬೃಹದಾಕಾರವಾಗಿ ಬೆಳೆದು ಎಲ್ಲರನ್ನೂ ಹಿಂಸಿಸಲಾರಂಭಿಸಿದಾಗ ಗಣೇಶನು ಅಸ್ತ್ರವನ್ನು ಪ್ರಯೋಗಿಸಿ ತನ್ನ ವಾಹನವನ್ನಾಗಿಸಿಕೊಂಡ ಕಥೆಯನ್ನು ಅಣ್ಣ ಹೇಳ್ತಿದ್ದರು. ಪ್ರತಿವರ್ಷವೂ ಶಮಂತಕೋಪಾಖ್ಯಾನದಂತೆಯೇ ಈ ಕಥೆಯನ್ನು ಹೇಳುವುದೂ ಒಂದು ಸಂಪ್ರದಾಯದಂತೆಯೇ ಆಗಿಬಿಟ್ಟಿತ್ತು! ನಾವು ಪರೋಕ್ಷವಾಗಿ ಇಲಿಗೂ ಗಣಪತಿಯೊಂದಿಗೆ ಪೂಜೆ ಮಾಡಿದರೆ ಉತ್ತರ ಕರ್ನಾಟಕದಲ್ಲಿ ಗಣೇಶ ಚತುರ್ಥಿಯ ಮಾರನೇದಿನ ಇಲಿಹಬ್ಬವನ್ನೇ ಆಚರಿಸಿ ಇಲಿಪೂಜೆಯನ್ನು ಮಾಡುತ್ತಾರಂತೆ!

        ನಮ್ಮಕ್ಕನಿಗೆ ಪಟ್ಟಣದಲ್ಲಿ ಕೆಲಸ ಸಿಕ್ಕಾಗ ಮನೆಮಾಡಿ ತಮ್ಮನನ್ನೂ ಅಲ್ಲೇ ಓದಲು ಕರೆದುಕೊಂಡುಹೋದಳು. ಅಲ್ಲಿಯೂ ಇಲಿಗಳ ಹಾವಳಿಯಿದ್ದು ಅವರೊಂದಿಗಿದ್ದ ನಮ್ಮತ್ತೆಯ ಕೈಯನ್ನು ಇಲಿಯೊಂದು ಕುರುಕಿ ಇಂಜೆಕ್ಷನ್‌ ತೆಗೆದುಕೊಳ್ಳುವಂತಾದಾಗ ಸ್ವಲ್ಪ ಸೀರಿಯಸ್ನೆಸ್‌ ಉಂಟಾಯಿತು. ಅಷ್ಟೇ ಅಲ್ಲದೆ ಹೊಸದಾಗಿ ಹೊಲಿಸಿದ್ದ ಹತ್ತಿಯ ಸುಪ್ಪತ್ತಿಗೆಗಳನ್ನು ಅವರೆಲ್ಲಾ ಊರಿಗೆ ಬಂದು ಹೋಗುವಷ್ಟರಲ್ಲಿ ಛಿದ್ರಗೊಳಿಸಿ ಮನೆಯ ತುಂಬಾ ಹರಡಿ ʼಹಿಂಜಿದ ಅರಳೆಯು ಗಾಳಿಗೆ ಹಾರಿ ಮೋಡಗಳಾಗಿವೆಯೇ…ʼಎನ್ನುವಂತಾಗಿತ್ತು. ಅಲ್ಲಿಗೊಮ್ಮೆ ಹೋಗಿದ್ದಾಗ ನನ್ನ ಹೊಚ್ಚಹೊಸ ಚಂದೇರಿ ಸೀರೆಯನ್ನೂ ಚಿಂದಿಚಿಂದಿ ಮಾಡಿ ನನ್ನ ಮೇಲೂ ಸೇಡುತೀರಿಸಿಕೊಂಡವು. ಈ ಎಲ್ಲಾ ವಿದ್ಯಮಾನಗಳಿಂದ ಇಲಿಯ ಬಗೆಗಿನ ತಮ್ಮನ ಹೆಂಗರುಳೂ ಪೆಡಸಾಗಿ ಕಂಡಲ್ಲಿ ಬಡಿಯಬೇಕೆನಿಸುವಂತಾಯ್ತು. ಒಮ್ಮೆ ರಾತ್ರಿ ಎಲ್ಲರೂ ಸಾಲಾಗಿ ಮಲಗಿದ್ದಾಗ ತಮ್ಮ ʼಹಿಡಿದೇಬಿಟ್ಟೆʼ ಎನ್ನುವಾಗಲೇ ನಮ್ಮಕ್ಕ ʼಹೋʼಎಂದು ಕಿರುಚುವುದರೊಟ್ಟಿಗೇ ʼಬಿಡೋ ಕೈನʼ ಎನ್ನುವಷ್ಟರಲ್ಲಿ ಅವನು ಇಲಿಯನ್ನು ಹಿಚುಕಿ ಕೊಲ್ಲುವ ಸಾಹಸದಲ್ಲಿ ಅವಳ ಕೈ ನಜ್ಜುಗುಜ್ಜಾಗಿ ಊದಿಕೊಂಡಿತ್ತು! ಹಲಗೆಸೇವೆ ಮಾಡಿದ್ದ ಆ ಹೆಂಚಿನ ಮನೆಯಲ್ಲಿ ರಾತ್ರಿಯಾದಾಕ್ಷಣವೇ ಅಟ್ಟದ ಮೇಲೆ ಇಲಿಗಳ ನೆಗೆದಾಟ-ಕುಣಿದಾಟಗಳು ಪ್ರಾರಂಭವಾಗೇಬಿಡುತ್ತಿತ್ತು! ಕುವೆಂಪುರವರ ʼಬೊಮ್ಮನಹಳ್ಳಿಯ ಕಿಂದರಿಜೋಗಿʼಯಲ್ಲಿರುವಂತೆ ʼಅಲ್ಲೇನಿಲಿಗಳ ಕಾಟವೆ ಕಾಟ…ʼ ಎನ್ನುವಂತಾಯ್ತು. ರಾಬರ್ಟ್ ಬ್ರೌನಿಂಗ್ರವರ ಭಾವಾನುವಾದವಿದಾದ್ದರಿಂದ ಇಂಗ್ಲಿಷ್‌ನವರಿಗೂ ಇಲಿಗಳು ಕಾಟಕೊಡದೇಬಿಟ್ಟಿಲ್ಲವೆನ್ನುವುದು ಅಂಡರ್ಸ್ಟುಡ್!

           ಮುಂದಿನ ದಿನಗಳಲ್ಲಿ ಕೆರೆಯೊಂದರ ಸಮೀಪವೇ ನಮ್ಮ ಸ್ವಗೃಹವನ್ನು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಯುಂಟಾದ್ದರಿಂದ ಕ್ರೌಂಚಬಂಧುಗಳಾದ ದೊಡ್ಡದೊಡ್ಡ ಹೆಗ್ಗಣಗಳನ್ನೇ ಎದುರಿಸಬೇಕಾಯ್ತು. ಬಾಗಿಲ ಮುಂದೆಯೇ ಮರಿಹಂದಿಗಳಂತಹ ಈ ದೈತ್ಯರು ನಾಯಿ-ಬೆಕ್ಕುಗಳನ್ನೂ ಬೆದರಿಸುತ್ತಾ ಗುಟುರುಹಾಕಿಕೊಂಡು ಓಡಾಡುತ್ತಾ ಇನ್ನೆಲ್ಲಿ ಮನೆಯೊಳಗೆ ನುಗ್ಗಿಬಿಡುತ್ತವೋ ಎಂದು ಹೆದರಿ ಒಳಗೆ ದೌಡಾಯಿಸಿ ಬಾಗಿಲುಮುಚ್ಚುವಂತಾಯ್ತು. ಯಾವುದೋ ಮಾಯದಲ್ಲಿ ಮನೆ ಪ್ರವೇಶಿಸುತ್ತಿದ್ದ ಇಲಿಗಳು ವಾರ್ಡ್‌ರೋಬ್‌ಗಳೊಳಗೆ ಮರಿಹಾಕಿ ಸಂತಾನಾಭಿವೃದ್ಧಿ ಮಾಡಿಕೊಂಡು ಮನೆತುಂಬಾ ಸಡಗರಿಸುತ್ತಾ ಚಜ್ಜ-ಸ್ಲ್ಯಾಬ್‌ಗಳ ಮೇಲೆಲ್ಲಾ ನೆಗೆಯುತ್ತಾ-ಕುಣಿಯುತ್ತಾ-ಫೈಟಿಂಗ್‌ಮಾಡುತ್ತಾ ಚಾತುರ್ಯಪ್ರದರ್ಶನ ಮಾಡಲಾರಂಭಿಸಿದುವು. ಇಲಿಮನೆಯಲ್ಲೇ ನಾವೇನಾದರೂ ವಾಸಿಸುತ್ತಿದ್ದೀವೇನೋ ಎನ್ನುವಂತಾಗಿ ಮಗಮುದ್ದು ಸ್ಕೂಲಿನಲ್ಲಿ ನೋಟ್‌ಬುಕ್‌ ತೆಗೆಯಲು ಹೋದಾಗ ಬ್ಯಾಗಿಂದ ಇಲಿಯೊಂದು ಛಂಗನೆ ಹಾರಿದ್ದು, ಹೋಮ್‌ವರ್ಕ್‌ ಬುಕ್ಕನ್ನು ಇಲಿ ಕಡಿದುಹಾಕಿದೆಯೆಂದು ಮುದ್ದುಮಗಳು ಗೋಳಾಡಿದ್ದು, ಆಫೀಸಿಗೆ ಹೋಗುವ ಆತುರದಲ್ಲಿ ಮನೆಯವರು ಶೂ ಹಾಕಿಕೊಳ್ಳಲು ಹೋದಾಗ ಅದರೊಳಗಿಟ್ಟಿದ್ದ ಸಾಕ್ಸ್ ಜೂಲುಜೂಲಾಗಿದ್ದು, ಇದೆಲ್ಲದರ ಡೈರೆಕ್ಟ್‌ ಎಫೆಕ್ಟ್‌ ನನ್ನ ಮೇಲೇ ಆಗುತ್ತಿದ್ದುದರಿಂದ ನನ್ನ ಪಾಡಂತೂ ಕೇಳುವಂತೆಯೇ ಇಲ್ಲ.
          
               ಇಂಥಾ ಇಲಿಗಳೊಂದಿಗಿನ ಸಹಬಾಳ್ವೆಯಲ್ಲೇ ಮಕ್ಕಳು ಬೆಳೆದು ದೊಡ್ಡವರಾದಂತೆಯೇ… ಅದೇವರ್ಷ ಗಣಪತಿ ಹಬ್ಬದಂದು ಸಂಜೆ ಮಂಗಳಾರತಿಗೆ ಬಂದು ಎಲ್ಲರೂ ಕುಳಿತಿದ್ದಾಗ ಅನಾಮತ್ತಾಗಿ ಒಬ್ಬರ ಪಂಚೆಯೊಳಗೆ ಇಲಿಯೊಂದು ನುಗ್ಗಿ ಕೋಲಾಹಲವೆಬ್ಬಿಸಿದ್ದರಿಂದುಂಟಾದ ಅವಮಾನದಿಂದ ಮಗನೇ ಇಲಿಗಳ ನಿರ್ಮೂಲನಾ ಯೋಜನೆಯನ್ನು ಹಾಕಿಕೊಂಡು ಬಹಳ ದಿನಗಳಿಂದಲೂ ಬೋನಿಗೂ ಬೀಳದೇ ಸತಾಯಿಸುತ್ತಿದ್ದ ಇಲಿಗಳನ್ನು ಹೊರದಬ್ಬುವ ಪ್ರಥಮ ಪ್ರಯತ್ನವಾಗಿ ಚಜ್ಜದ ಮೇಲಿನ ಇಲಿಸಂಸಾರವನ್ನು ಉಚ್ಚಾಟಿಸಲು ಸ್ಲಾಬ್ ಏರಿ‌ ಕಾರ್ಯಾಚರಣೆಗೆ ತೊಡಗಿದ್ದಾಗ ಅನಿರೀಕ್ಷಿತವಾಗಿ ಇಲಿಯೊಂದು ಮೇಲಿನಿಂದ ಗುರಿಯಿಟ್ಟಂತೆ ಅವನ ಎದೆಗೇ ಅಪ್ಪಳಿಸಿದಾಗ ಗಂಡುಗುಂಡಿಗೆಯೂ ಅಲ್ಲಾಡಿ ಅವನು ʼಹೋʼ ಎಂದು ಅಬ್ಬರಿಸುತ್ತಾ ನೆಗೆದು ಓಡಿದ್ದು, ಇಂಥಾ ವಿದ್ಯಮಾನಗಳಲ್ಲೆಲ್ಲಾ ಚಿಟ್ಟನೆ ಚೀರುವುದೇ ಸ್ಪಾಂಟೇನಿಯಸ್‌ ರಿಯಾಕ್ಷನ್ನಾಗಿದ್ದ ನಮಗೆ ಖುಷಿಯಾಯ್ತು! ಇಲಿಗಳ ಪ್ರವೇಶದ್ವಾರವನ್ನೇ ಮುಚ್ಚುವ ಕೈಂಕರ್ಯವನ್ನು ಕೈಗೊಂಡು ನೆಲ-ಜಲ ದ್ವಾರಗಳನ್ನೆಲ್ಲಾ ಬಂದ್‌ ಮಾಡಲಾಯಿತು. ಡ್ರೈನೇಜ್‌ಗಳ ತೆರಪುಗಳನ್ನೆಲ್ಲಾ ಮುಚ್ಚಿದರೂ ಮೂಷಕ ಪ್ರವೇಶವನ್ನು ಮಾತ್ರ ತಡೆಯಲಾಗಲಿಲ್ಲ. ಮತ್ತೆಲ್ಲಿಂದ ಬರುತ್ತಿವೆ ಎಂದು ತಲೆಕೆಡಿಸಿಕೊಳ್ಳುತ್ತಿದ್ದಾಗ ಒನ್‌ ಫೈನ್‌ ಡೇ ಹಾಲ್‌ನ ವೆಂಟಿಲೇಟರ್‌ ಬಳಿ ಸದ್ದಾಗಲಾರಂಭಿಸಿತು. ಎಲ್ಲರೂ ಕೋಲನ್ನು ಹಿಡಿದು ಕದನ ಸನ್ನದ್ಧರಾಗಿ ಶತ್ರುವನ್ನ ಹಿಮ್ಮೆಟ್ಟಿಸಲು ಅನುವಾದಾಗ ಮೇಲಿನಿಂದ ಅಯಾಚಿತ್ತಾಗಿ ಇಲಿಶೂರನೊಬ್ಬ ಒಳಕ್ಕೆ ಡೈಹೊಡೆದಾಕ್ಷಣವೇ ಮಗಳು ಕಿವಿಗಡಚಿಕ್ಕುವಂತೆ ಚೀರಿ ಸೋಫಾ ಏರಿ ಕುಣಿದಾಡಿಯೇಬಿಟ್ಟಳು! ಇಂಥಾ ತೀವ್ರಾತಿತೀವ್ರ ಶಬ್ಧಾಘಾತದಿಂದ ಕಾಣೆಯಾದ ಆ ಇಲಿ ಮತ್ತೆಂದೂ ಕಾಣಸಿಗಲಿಲ್ಲ! ಈರೀತಿ ವಾಯುಮಾರ್ಗದಲ್ಲಿ ಇಲಿಶತ್ರುವನ್ನು ನಿರೀಕ್ಷಿಸದ ನಾವು ಬೆಪ್ಪಾಗಿ ವೆಂಟಿಲೇಟರ್‌ಗಳನ್ನೂ ಮುಚ್ಚಬೇಕಾಯಿತು.

             ಇಲಿಗಳೇ ಇಲ್ಲದ ಜಾಗವಿದೆಯೇ ಎಂದು ವೈರಾಗ್ಯಹೊಂದಬಹುದಿತ್ತೇನೋ ಅಥವಾ ನೂಲನ್ನು ಕತ್ತರಿಸದಂತೆ ಇಲಿಗಳನ್ನು ಪೂಜಿಸುತ್ತಿದ್ದ ನೇಕಾರರಂತೆ ಇಲಿಪೂಜೆ ಮಾಡುವುದೋ… ಆದರೆ ಇತ್ತೀಚೆಗೆ ಕೆನಡಾದ ಅಲ್ಬರ್ಟಾವು ಇಲಿಗಳಿಂದ ಮುಕ್ತವಾದ ಪ್ರಾಂತ್ಯವಾಗಿದೆ ಎಂದು ತಿಳಿದಾಗಿನಿಂದ ನಾವೂ ಪರಮ ಆಶಾವಾದದಲ್ಲಿ ನಮ್ಮ ಪ್ರಯತ್ನವನ್ನು ಮುಂದುವರೆಸುತ್ತಿದ್ದೇವೆ!
         

                  ✍ಪ್ರಭಾಮಣಿ ನಾಗರಾಜ, ಹಾಸನ