https://www.facebook.com/share/p/1CdwLQakMs/
👆ಉದಯವಾಣಿ'ಯ 'ಸಾಪ್ತಾಹಿಕ ಸಂಪದ'ದಲ್ಲಿ 'ಎಲ್ಲೆಲ್ಲೂ ಇಲಿಯೇ!'
ಫೆಬ್ರವರಿ8ರಂದು ಪ್ರಕಟವಾಗಿದೆ. ಓದಿ ಪ್ರತಿಕ್ರಿಯಿಸಿ🌼
'ಉದಯವಾಣಿ' ಪತ್ರಿಕಾ ಬಳಗಕ್ಕೆ ಧನ್ಯವಾದಗಳು🙏
🐀🐁ಎಲ್ಲೆಲ್ಲೂ ಇಲಿಯೇ!🐁🐀
ಮನುಕುಲದೊಂದಿಗೆ ದೀರ್ಘಕಾಲದ ಸಹಬಾಳ್ವೆಯನ್ನು ಹೊಂದಿರುವ ಜೀವಿಗಳಲ್ಲಿ ಪ್ರಮುಖ ಸ್ಥಾನದಲ್ಲಿರುವ ಇಲಿಗಳದ್ದು ಬಿಟ್ಟೆನೆಂದರೂ ಬಿಡದ ಬಂಧವಾಗಿ ಅದರ ಉಚ್ಛಾಟನೆಗೆ ಪ್ರಯೋಗಿಸುವ ನಮ್ಮೆಲ್ಲಾ ತಂತ್ರಗಳನ್ನೂ ಅತಂತ್ರಗೊಳಿಸಿ ಜಯಭೇರಿಯೊಂದಿಗೆ ಮುನ್ನಡೆಯುತ್ತಲೇ ಇರುತ್ತದೆ. ನಮ್ಮ ಮನೆಯನ್ನೇ ಅಲಿಖಿತವಾಗಿ ತಮ್ಮದಾಗಿಸಿಕೊಂಡಿರುವ ನಮ್ಮೀ ಸಹಬಂಧುಗಳು ಅಡಿಗಡಿಗೂ ಸವಾಲೊಡ್ಡುತ್ತಾ ದೊಡ್ಡ ತಲೆನೋವಾಗಿಯೇಬಿಡುತ್ತವೆ.
ಕೃಷಿಯನ್ನೇ ಜೀವನೋಪಾಯವಾಗಿಸಿಕೊಂಡಿದ್ದ ನಮ್ಮ ಮನೆಯಲ್ಲಿ ಧವಸ-ಧಾನ್ಯಗಳನ್ನು ತುಂಬಿಡುತ್ತಿದ್ದ ವಾಡೆ-ಪೆಟ್ಟೆಗಳೆಲ್ಲಾ ಇಲಿಗಳದೇ ಸಾಮ್ರಾಜ್ಯವಾಗಿದ್ದು ಅವುಗಳನ್ನು ಹೊರದೂಡುವುದರಲ್ಲಿ ಸಾಕುಸಾಕಾಗುತ್ತಿತ್ತು. ಮನೆಕೆಲಸ ಮಾಡುತ್ತಿದ್ದ ಹುಡುಗರು ಇಲಿಯ ಕಾಟಕ್ಕೆ ರೋಸಿಹೋಗಿ ಬೋನಿಗೆ ಬಿದ್ದ ಇಲಿಗಳನ್ನು ಸಮೀಪದ ನಾಲೆಯೊಳಗೆ ಮುಳುಗಿಸಿಬಿಡುತ್ತಿದ್ದರು. ತಮ್ಮ ಸ್ವಲ್ಪ ದೊಡ್ಡವನಾದ ನಂತರ ಇಲಿವಿಲೇವಾರಿ ಕಾರ್ಯವನ್ನು ವಹಿಸಿಕೊಂಡು ಅತ್ಯುತ್ಸಾಹದಿಂದ ಇಲಿಗಳನ್ನು ದೂರದ ಪೊದೆಗಳಲ್ಲಿ ಬಿಟ್ಟುಬರಲಾರಂಭಿಸಿದ. ಒಮ್ಮೆ ಹೀಗೇ ಬೆಳಿಗ್ಗೆ ಎದ್ದವನೇ ಕತ್ತಲು ತುಂಬಿದ್ದ ಓಡೆಯ ಬಳಿ ಓಡಿಹೋಗಿ ಬೋನುತೆಗೆದುಕೊಳ್ಳಲು ಕೈಚಾಚಿದಾಗ ಅದರೊಳಗಿಂದ ಫಳಫಳನೆ ಹೊಳೆದಂತಾಗಿ ಟಾರ್ಚ್ ಬಿಟ್ಟು ನೋಡಿದಾಕ್ಷಣವೇ ಬೋನಿನೊಳಗೆ ನಾಗರಹಾವು ಕಂಡಿದೆ!
ನಮ್ಮ ಮನೆಯಲ್ಲಿದ್ದ ಬೆಕ್ಕುಗಳಂತೂ ಕಾಲಕಾಲಕ್ಕೆ ಯಥೇಚ್ಛವಾಗಿ ದೊರೆಯುತ್ತಿದ್ದ ಹಾಲನ್ನವನ್ನು ತಿನ್ನುತ್ತಾ ಪರಮ ಸಾಧುಗಳಾಗಿ ʼಮುಂದೆ ಬಂದರೆ ಹಾಯಲಾರೆ, ಹಿಂದೆ ಬಂದರೆ ಒದೆಯಲಾರೆʼ ಎನ್ನುವಂತೆ ಸದಾ ಮಲಗಿದ್ದು ಇಲಿಗಳು ಮೈಮೇಲೆ ಓಡಾಡಿದರೂ ಜುಮ್ಮೆನ್ನುತ್ತಿರಲಿಲ್ಲ. ಒಮ್ಮೆ ಯುವಬೆಕ್ಕೊಂದು ತಮ್ಮನ ಪುಸ್ತಕದ ಗೂಡಿನಿಂದ ಹೊರಗಿಣುಕಿದ ಇಲಿಯನ್ನು ಗಬಕ್ಕನೆ ಹಿಡಿದುಕೊಂಡೇಬಿಟ್ಟಿತು. ಅವತ್ತೆಲ್ಲಾ ತಮ್ಮ ಅತ್ತಿದ್ದೂಅತ್ತಿದ್ದೆ!
ನಾವು ಐದನೇ ಕ್ಲಾಸಿಗೆ ಅಡಿಯಿಟ್ಟು ಇಂಗ್ಲಿಷ್ ಕಲಿತಾಗ ಆಡುತ್ತಿದ್ದ ಚಿತ್ರರಚನಾ ಆಟವೆಂದರೆ m-o-u-s-e ಅಕ್ಷರಗಳಲ್ಲಿ ಇಲಿಯನ್ನು ಬರೆಯೋ ಸಂಭ್ರಮ! ಅದೇತಾನೇ ಸ್ಲೇಟ್‌ನಿಂದ ನೋಟ್ಬುಕ್‌ಗೆ ಪ್ರಮೋಷನ್ನಾಗಿದ್ದ ನಮ್ಮ ಹೊಸಪುಸ್ತಕದ ಹಾಳೆಹಾಳೆಗಳ ಮೂಲೆಮೂಲೆಗಳಲ್ಲೂ ಇಲಿಗಳದ್ದೇ ಸಂಚಾರ!
ಗೌರಿಹಬ್ಬದಲ್ಲಿ ಗಣಪತಿಯನ್ನು ತಂದಾಗಲೆಲ್ಲಾ ತಮ್ಮನಿಗೆ ಅಷ್ಟು ದೊಡ್ಡ ಗಣಪತಿ ಅದ್ಹೇಗೆ ಅಷ್ಟೊಂದು ಪುಟ್ಟ ಇಲಿ ಮೇಲೆ ಕೂರ್ತಾನೆನ್ನುವುದೇ ಸಮಸ್ಯೆಯಾಗ್ತಿತ್ತು. ಆಗೆಲ್ಲಾ ವಾಮದೇವಋಷಿಯು ಯಾಗಪೀಡಕ ಕ್ರೌಂಚರಾಕ್ಷಸನನ್ನು ಇಲಿಯಾಗಿಸಿದರೂ ಬೃಹದಾಕಾರವಾಗಿ ಬೆಳೆದು ಎಲ್ಲರನ್ನೂ ಹಿಂಸಿಸಲಾರಂಭಿಸಿದಾಗ ಗಣೇಶನು ಅಸ್ತ್ರವನ್ನು ಪ್ರಯೋಗಿಸಿ ತನ್ನ ವಾಹನವನ್ನಾಗಿಸಿಕೊಂಡ ಕಥೆಯನ್ನು ಅಣ್ಣ ಹೇಳ್ತಿದ್ದರು. ಪ್ರತಿವರ್ಷವೂ ಶಮಂತಕೋಪಾಖ್ಯಾನದಂತೆಯೇ ಈ ಕಥೆಯನ್ನು ಹೇಳುವುದೂ ಒಂದು ಸಂಪ್ರದಾಯದಂತೆಯೇ ಆಗಿಬಿಟ್ಟಿತ್ತು! ನಾವು ಪರೋಕ್ಷವಾಗಿ ಇಲಿಗೂ ಗಣಪತಿಯೊಂದಿಗೆ ಪೂಜೆ ಮಾಡಿದರೆ ಉತ್ತರ ಕರ್ನಾಟಕದಲ್ಲಿ ಗಣೇಶ ಚತುರ್ಥಿಯ ಮಾರನೇದಿನ ಇಲಿಹಬ್ಬವನ್ನೇ ಆಚರಿಸಿ ಇಲಿಪೂಜೆಯನ್ನು ಮಾಡುತ್ತಾರಂತೆ!
ನಮ್ಮಕ್ಕನಿಗೆ ಪಟ್ಟಣದಲ್ಲಿ ಕೆಲಸ ಸಿಕ್ಕಾಗ ಮನೆಮಾಡಿ ತಮ್ಮನನ್ನೂ ಅಲ್ಲೇ ಓದಲು ಕರೆದುಕೊಂಡುಹೋದಳು. ಅಲ್ಲಿಯೂ ಇಲಿಗಳ ಹಾವಳಿಯಿದ್ದು ಅವರೊಂದಿಗಿದ್ದ ನಮ್ಮತ್ತೆಯ ಕೈಯನ್ನು ಇಲಿಯೊಂದು ಕುರುಕಿ ಇಂಜೆಕ್ಷನ್ ತೆಗೆದುಕೊಳ್ಳುವಂತಾದಾಗ ಸ್ವಲ್ಪ ಸೀರಿಯಸ್ನೆಸ್ ಉಂಟಾಯಿತು. ಅಷ್ಟೇ ಅಲ್ಲದೆ ಹೊಸದಾಗಿ ಹೊಲಿಸಿದ್ದ ಹತ್ತಿಯ ಸುಪ್ಪತ್ತಿಗೆಗಳನ್ನು ಅವರೆಲ್ಲಾ ಊರಿಗೆ ಬಂದು ಹೋಗುವಷ್ಟರಲ್ಲಿ ಛಿದ್ರಗೊಳಿಸಿ ಮನೆಯ ತುಂಬಾ ಹರಡಿ ʼಹಿಂಜಿದ ಅರಳೆಯು ಗಾಳಿಗೆ ಹಾರಿ ಮೋಡಗಳಾಗಿವೆಯೇ…ʼಎನ್ನುವಂತಾಗಿತ್ತು. ಅಲ್ಲಿಗೊಮ್ಮೆ ಹೋಗಿದ್ದಾಗ ನನ್ನ ಹೊಚ್ಚಹೊಸ ಚಂದೇರಿ ಸೀರೆಯನ್ನೂ ಚಿಂದಿಚಿಂದಿ ಮಾಡಿ ನನ್ನ ಮೇಲೂ ಸೇಡುತೀರಿಸಿಕೊಂಡವು. ಈ ಎಲ್ಲಾ ವಿದ್ಯಮಾನಗಳಿಂದ ಇಲಿಯ ಬಗೆಗಿನ ತಮ್ಮನ ಹೆಂಗರುಳೂ ಪೆಡಸಾಗಿ ಕಂಡಲ್ಲಿ ಬಡಿಯಬೇಕೆನಿಸುವಂತಾಯ್ತು. ಒಮ್ಮೆ ರಾತ್ರಿ ಎಲ್ಲರೂ ಸಾಲಾಗಿ ಮಲಗಿದ್ದಾಗ ತಮ್ಮ ʼಹಿಡಿದೇಬಿಟ್ಟೆʼ ಎನ್ನುವಾಗಲೇ ನಮ್ಮಕ್ಕ ʼಹೋʼಎಂದು ಕಿರುಚುವುದರೊಟ್ಟಿಗೇ ʼಬಿಡೋ ಕೈನʼ ಎನ್ನುವಷ್ಟರಲ್ಲಿ ಅವನು ಇಲಿಯನ್ನು ಹಿಚುಕಿ ಕೊಲ್ಲುವ ಸಾಹಸದಲ್ಲಿ ಅವಳ ಕೈ ನಜ್ಜುಗುಜ್ಜಾಗಿ ಊದಿಕೊಂಡಿತ್ತು! ಹಲಗೆಸೇವೆ ಮಾಡಿದ್ದ ಆ ಹೆಂಚಿನ ಮನೆಯಲ್ಲಿ ರಾತ್ರಿಯಾದಾಕ್ಷಣವೇ ಅಟ್ಟದ ಮೇಲೆ ಇಲಿಗಳ ನೆಗೆದಾಟ-ಕುಣಿದಾಟಗಳು ಪ್ರಾರಂಭವಾಗೇಬಿಡುತ್ತಿತ್ತು! ಕುವೆಂಪುರವರ ʼಬೊಮ್ಮನಹಳ್ಳಿಯ ಕಿಂದರಿಜೋಗಿʼಯಲ್ಲಿರುವಂತೆ ʼಅಲ್ಲೇನಿಲಿಗಳ ಕಾಟವೆ ಕಾಟ…ʼ ಎನ್ನುವಂತಾಯ್ತು. ರಾಬರ್ಟ್ ಬ್ರೌನಿಂಗ್ರವರ ಭಾವಾನುವಾದವಿದಾದ್ದರಿಂದ ಇಂಗ್ಲಿಷ್‌ನವರಿಗೂ ಇಲಿಗಳು ಕಾಟಕೊಡದೇಬಿಟ್ಟಿಲ್ಲವೆನ್ನುವುದು ಅಂಡರ್ಸ್ಟುಡ್!
ಮುಂದಿನ ದಿನಗಳಲ್ಲಿ ಕೆರೆಯೊಂದರ ಸಮೀಪವೇ ನಮ್ಮ ಸ್ವಗೃಹವನ್ನು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಯುಂಟಾದ್ದರಿಂದ ಕ್ರೌಂಚಬಂಧುಗಳಾದ ದೊಡ್ಡದೊಡ್ಡ ಹೆಗ್ಗಣಗಳನ್ನೇ ಎದುರಿಸಬೇಕಾಯ್ತು. ಬಾಗಿಲ ಮುಂದೆಯೇ ಮರಿಹಂದಿಗಳಂತಹ ಈ ದೈತ್ಯರು ನಾಯಿ-ಬೆಕ್ಕುಗಳನ್ನೂ ಬೆದರಿಸುತ್ತಾ ಗುಟುರುಹಾಕಿಕೊಂಡು ಓಡಾಡುತ್ತಾ ಇನ್ನೆಲ್ಲಿ ಮನೆಯೊಳಗೆ ನುಗ್ಗಿಬಿಡುತ್ತವೋ ಎಂದು ಹೆದರಿ ಒಳಗೆ ದೌಡಾಯಿಸಿ ಬಾಗಿಲುಮುಚ್ಚುವಂತಾಯ್ತು. ಯಾವುದೋ ಮಾಯದಲ್ಲಿ ಮನೆ ಪ್ರವೇಶಿಸುತ್ತಿದ್ದ ಇಲಿಗಳು ವಾರ್ಡ್‌ರೋಬ್‌ಗಳೊಳಗೆ ಮರಿಹಾಕಿ ಸಂತಾನಾಭಿವೃದ್ಧಿ ಮಾಡಿಕೊಂಡು ಮನೆತುಂಬಾ ಸಡಗರಿಸುತ್ತಾ ಚಜ್ಜ-ಸ್ಲ್ಯಾಬ್‌ಗಳ ಮೇಲೆಲ್ಲಾ ನೆಗೆಯುತ್ತಾ-ಕುಣಿಯುತ್ತಾ-ಫೈಟಿಂಗ್‌ಮಾಡುತ್ತಾ ಚಾತುರ್ಯಪ್ರದರ್ಶನ ಮಾಡಲಾರಂಭಿಸಿದುವು. ಇಲಿಮನೆಯಲ್ಲೇ ನಾವೇನಾದರೂ ವಾಸಿಸುತ್ತಿದ್ದೀವೇನೋ ಎನ್ನುವಂತಾಗಿ ಮಗಮುದ್ದು ಸ್ಕೂಲಿನಲ್ಲಿ ನೋಟ್‌ಬುಕ್ ತೆಗೆಯಲು ಹೋದಾಗ ಬ್ಯಾಗಿಂದ ಇಲಿಯೊಂದು ಛಂಗನೆ ಹಾರಿದ್ದು, ಹೋಮ್‌ವರ್ಕ್ ಬುಕ್ಕನ್ನು ಇಲಿ ಕಡಿದುಹಾಕಿದೆಯೆಂದು ಮುದ್ದುಮಗಳು ಗೋಳಾಡಿದ್ದು, ಆಫೀಸಿಗೆ ಹೋಗುವ ಆತುರದಲ್ಲಿ ಮನೆಯವರು ಶೂ ಹಾಕಿಕೊಳ್ಳಲು ಹೋದಾಗ ಅದರೊಳಗಿಟ್ಟಿದ್ದ ಸಾಕ್ಸ್ ಜೂಲುಜೂಲಾಗಿದ್ದು, ಇದೆಲ್ಲದರ ಡೈರೆಕ್ಟ್ ಎಫೆಕ್ಟ್ ನನ್ನ ಮೇಲೇ ಆಗುತ್ತಿದ್ದುದರಿಂದ ನನ್ನ ಪಾಡಂತೂ ಕೇಳುವಂತೆಯೇ ಇಲ್ಲ.
ಇಂಥಾ ಇಲಿಗಳೊಂದಿಗಿನ ಸಹಬಾಳ್ವೆಯಲ್ಲೇ ಮಕ್ಕಳು ಬೆಳೆದು ದೊಡ್ಡವರಾದಂತೆಯೇ… ಅದೇವರ್ಷ ಗಣಪತಿ ಹಬ್ಬದಂದು ಸಂಜೆ ಮಂಗಳಾರತಿಗೆ ಬಂದು ಎಲ್ಲರೂ ಕುಳಿತಿದ್ದಾಗ ಅನಾಮತ್ತಾಗಿ ಒಬ್ಬರ ಪಂಚೆಯೊಳಗೆ ಇಲಿಯೊಂದು ನುಗ್ಗಿ ಕೋಲಾಹಲವೆಬ್ಬಿಸಿದ್ದರಿಂದುಂಟಾದ ಅವಮಾನದಿಂದ ಮಗನೇ ಇಲಿಗಳ ನಿರ್ಮೂಲನಾ ಯೋಜನೆಯನ್ನು ಹಾಕಿಕೊಂಡು ಬಹಳ ದಿನಗಳಿಂದಲೂ ಬೋನಿಗೂ ಬೀಳದೇ ಸತಾಯಿಸುತ್ತಿದ್ದ ಇಲಿಗಳನ್ನು ಹೊರದಬ್ಬುವ ಪ್ರಥಮ ಪ್ರಯತ್ನವಾಗಿ ಚಜ್ಜದ ಮೇಲಿನ ಇಲಿಸಂಸಾರವನ್ನು ಉಚ್ಚಾಟಿಸಲು ಸ್ಲಾಬ್ ಏರಿ ಕಾರ್ಯಾಚರಣೆಗೆ ತೊಡಗಿದ್ದಾಗ ಅನಿರೀಕ್ಷಿತವಾಗಿ ಇಲಿಯೊಂದು ಮೇಲಿನಿಂದ ಗುರಿಯಿಟ್ಟಂತೆ ಅವನ ಎದೆಗೇ ಅಪ್ಪಳಿಸಿದಾಗ ಗಂಡುಗುಂಡಿಗೆಯೂ ಅಲ್ಲಾಡಿ ಅವನು ʼಹೋʼ ಎಂದು ಅಬ್ಬರಿಸುತ್ತಾ ನೆಗೆದು ಓಡಿದ್ದು, ಇಂಥಾ ವಿದ್ಯಮಾನಗಳಲ್ಲೆಲ್ಲಾ ಚಿಟ್ಟನೆ ಚೀರುವುದೇ ಸ್ಪಾಂಟೇನಿಯಸ್ ರಿಯಾಕ್ಷನ್ನಾಗಿದ್ದ ನಮಗೆ ಖುಷಿಯಾಯ್ತು! ಇಲಿಗಳ ಪ್ರವೇಶದ್ವಾರವನ್ನೇ ಮುಚ್ಚುವ ಕೈಂಕರ್ಯವನ್ನು ಕೈಗೊಂಡು ನೆಲ-ಜಲ ದ್ವಾರಗಳನ್ನೆಲ್ಲಾ ಬಂದ್ ಮಾಡಲಾಯಿತು. ಡ್ರೈನೇಜ್‌ಗಳ ತೆರಪುಗಳನ್ನೆಲ್ಲಾ ಮುಚ್ಚಿದರೂ ಮೂಷಕ ಪ್ರವೇಶವನ್ನು ಮಾತ್ರ ತಡೆಯಲಾಗಲಿಲ್ಲ. ಮತ್ತೆಲ್ಲಿಂದ ಬರುತ್ತಿವೆ ಎಂದು ತಲೆಕೆಡಿಸಿಕೊಳ್ಳುತ್ತಿದ್ದಾಗ ಒನ್ ಫೈನ್ ಡೇ ಹಾಲ್‌ನ ವೆಂಟಿಲೇಟರ್ ಬಳಿ ಸದ್ದಾಗಲಾರಂಭಿಸಿತು. ಎಲ್ಲರೂ ಕೋಲನ್ನು ಹಿಡಿದು ಕದನ ಸನ್ನದ್ಧರಾಗಿ ಶತ್ರುವನ್ನ ಹಿಮ್ಮೆಟ್ಟಿಸಲು ಅನುವಾದಾಗ ಮೇಲಿನಿಂದ ಅಯಾಚಿತ್ತಾಗಿ ಇಲಿಶೂರನೊಬ್ಬ ಒಳಕ್ಕೆ ಡೈಹೊಡೆದಾಕ್ಷಣವೇ ಮಗಳು ಕಿವಿಗಡಚಿಕ್ಕುವಂತೆ ಚೀರಿ ಸೋಫಾ ಏರಿ ಕುಣಿದಾಡಿಯೇಬಿಟ್ಟಳು! ಇಂಥಾ ತೀವ್ರಾತಿತೀವ್ರ ಶಬ್ಧಾಘಾತದಿಂದ ಕಾಣೆಯಾದ ಆ ಇಲಿ ಮತ್ತೆಂದೂ ಕಾಣಸಿಗಲಿಲ್ಲ! ಈರೀತಿ ವಾಯುಮಾರ್ಗದಲ್ಲಿ ಇಲಿಶತ್ರುವನ್ನು ನಿರೀಕ್ಷಿಸದ ನಾವು ಬೆಪ್ಪಾಗಿ ವೆಂಟಿಲೇಟರ್‌ಗಳನ್ನೂ ಮುಚ್ಚಬೇಕಾಯಿತು.
ಇಲಿಗಳೇ ಇಲ್ಲದ ಜಾಗವಿದೆಯೇ ಎಂದು ವೈರಾಗ್ಯಹೊಂದಬಹುದಿತ್ತೇನೋ ಅಥವಾ ನೂಲನ್ನು ಕತ್ತರಿಸದಂತೆ ಇಲಿಗಳನ್ನು ಪೂಜಿಸುತ್ತಿದ್ದ ನೇಕಾರರಂತೆ ಇಲಿಪೂಜೆ ಮಾಡುವುದೋ… ಆದರೆ ಇತ್ತೀಚೆಗೆ ಕೆನಡಾದ ಅಲ್ಬರ್ಟಾವು ಇಲಿಗಳಿಂದ ಮುಕ್ತವಾದ ಪ್ರಾಂತ್ಯವಾಗಿದೆ ಎಂದು ತಿಳಿದಾಗಿನಿಂದ ನಾವೂ ಪರಮ ಆಶಾವಾದದಲ್ಲಿ ನಮ್ಮ ಪ್ರಯತ್ನವನ್ನು ಮುಂದುವರೆಸುತ್ತಿದ್ದೇವೆ!
✍ಪ್ರಭಾಮಣಿ ನಾಗರಾಜ, ಹಾಸನ

No comments:
Post a Comment