ಏಪ್ರಿಲ್7,2026ರ ‘ನಸುಕು.ಕಾಂ’ ನಲ್ಲಿ ಪ್ರಕಟವಾದ ನನ್ನ ಲಲಿತ ಪ್ರಬಂಧ ‘ಗೌರಮ್ಮನೂ ನನ್ನಮ್ಮ...'ನಿಮ್ಮ ಪ್ರೀತಿಯ ಓದಿಗೆ❤📖🌹
ಇಲ್ಲಿದೆ ಕೊಂಡಿ :
https://nasuku.com/%E0%B2%97%E0%B3%8C%E0%B2%B0%E0%B2%AE%E0%B3%8D%E0%B2%AE%E0%B2%A8%E0%B3%82-%E0%B2%A8%E0%B2%A8%E0%B3%8D%E0%B2%A8%E0%B2%AE%E0%B3%8D%E0%B2%AE/
ಧನ್ಯವಾದಗಳು ನಸುಕು.ಕಾಂ🙏
💕ಗೌರಮ್ಮನೂ ನನ್ನಮ್ಮ...💕
ಅವಿಭಕ್ತ ಕುಟುಂಬಗಳಲ್ಲಿ ಹುಟ್ಟುವ ಮಕ್ಕಳು ಅನೇಕ ಅತ್ಯಂತ ಆಪ್ತ ಸಂಬಂಧಗಳಿಂದ ಆವೃತವಾಗಿರುತ್ತವೆ. ಅಮ್ಮ-ಅಪ್ಪ, ಅಜ್ಜಿ-ತಾತ, ಅಣ್ಣ-ಅಕ್ಕಗಳಲ್ಲದೇ ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅತ್ತೆ-ಮಾವಗಳ ಕೈಕೂಸಾಗುತ್ತಾರೆ. ಅಜ್ಜಿ-ತಾತಂದಿರಿದ್ದರಂತೂ ಅವರ ಕಣ್ಮಣಿಯೇ ಆಗಿಬಿಡುತ್ತಾರೆ. ಇನ್ನು ಮನೆಯಲ್ಲಿಯ ಮಕ್ಕಳದಂಡಿನ ಒಡನಾಟದಲ್ಲಿ ಸಂಘಜೀವನದ ಸೊಬಗನ್ನು ಸವಿಯುತ್ತಾ ಅವರ ಬಾಲ್ಯವು ವಿಹರಿಸುತ್ತಾ ಮುನ್ನಡೆಯುತ್ತದೆ. ಆ ಮಕ್ಕಳಿಗೆ ತಮ್ಮ ಸ್ವಂತ ತಾಯಿಯಲ್ಲದೇ ಕುಟುಂಬದ ಸಾಕುತಾಯಿಯರನೇಕರ ಸಾಮೀಪ್ಯ ದೊರೆಯುತ್ತದೆ.
ನಾನು ಅವತರಿಸಿದ ಅವಿಭಕ್ತ ಕುಟುಂಬದ ಕಾರ್ಯಪರಂಪರೆಗಳ ಅವಿಭಾಜ್ಯವಾಗಿದ್ದ ನನ್ನಮ್ಮ ತಮ್ಮ ಕೆಲಸಗಳ ಬಾಹುಳ್ಯದಲ್ಲಿಯೇ ಕಳೆದುಹೋಗುತ್ತಿದ್ದುದರಿಂದ ನಾನು ನಮ್ಮ ಸೋದರತ್ತೆಯೊಬ್ಬರ ಮಡಿಲಿನಲ್ಲಿಯೇ ಬೆಳೆಯಬೇಕಾಯಿತು. ಅವರನ್ನು ಅವರ ಮಗನೂ ಸೇರಿದಂತೆ ಮಕ್ಕಳೆಲ್ಲರೂ, `ಗೌರಮ್ಮಾ’ ಎಂದು ಹೆಸರಿನಿಂದಲೇ ಕರೆಯುತ್ತಿದ್ದರು. ಆದರೆ ನಾನು ಮಾತ್ರ `ಅಮ್ಮಾ’ ಎಂದೇ ಕರೆಯಲಾರಂಭಿಸಿ ಅವಳ(ಅತಿ ಸಲುಗೆಯ ಏಕವಚನ ಪ್ರಯೋಗ) ವಿಶೇಷ ಅಕ್ಕರೆಗೆ ಪಾತ್ರಳಾಗಿದ್ದೆ. ತಿಂಡಿ, ಊಟ ಮೊದಲ್ಗೊಂಡು ಮಲಗುವುದೂ ಅವಳೊಟ್ಟಿಗೇ ನಡೆಯುತ್ತಿತ್ತು. ಕಿಶೋರ-ಮರ್ಕಟ ನ್ಯಾಯದಂತೆ ನನ್ನ ಗೌರಮ್ಮನ ಬಂಧ! ನನ್ನನ್ನು ಹೊದ್ದಿಗೆಯೊಳಗೆ ಅವುಚಿಕೊಂಡು ಮಲಗುತ್ತಿದ್ದ ಗೌರಮ್ಮನಿಗೆ ದಿಂಬಿಗೆ ತಲೆಯಾನಿಸಿದಾಕ್ಷಣವೇ ನಿದ್ದೆ ಆವರಿಸಿಬಿಡುತ್ತಿತ್ತು. ನನಗೋ ಕಥೆ ಕೇಳುವ ಹಂಬಲ! ನಾನು `ಕಥೆ ಹೇಳಮ್ಮ’ ಎಂದು ಗೋಗರೆಯುವುದನ್ನು ತಾಳಲಾರದೇ, `.....ಚಿಣಿಮಿಣಿ ರಾಯ್ರೇ, ಚಿಂತಾಕ್ರಾಂತರೇ, ನಿಮ್ಮೋರೇನಂದ್ರೂ? ಅಂದ್ರೆ ಭತ್ತ ಕುಟ್ಟೆಂದ್ರುʼ, ಎಂದು ಪ್ರಾರಂಭವಾಗುತ್ತಿದ್ದ ಕಥೆ ʼಚಿಣಿಮಿಣಿ ರಾಯ್ರೇ, ಚಿಂತಾಕ್ರಾಂತರೇ, ನಿಮ್ಮೋರೇನಂದ್ರೂ? ಅಕ್ಕಿ ಮಾಡೆಂದ್ರು, ...... ʼ ಎಂದು ಮುಂದುವರೆಯುತ್ತಾ ಅಲ್ಲಲ್ಲಿ ಅವಳು ಗೊರಕೆಯ ಲೋಕ ಪ್ರವೇಶಿಸಿದ ಸೂಚನೆಯಾಗಿ ಟಿಸ್, ಟಿಸ್, ಎಂದು ನಿಂತಾಗ `ಆಮೇಲೇನು ಹೇಳಮ್ಮ’ ಎಂದು ಪೀಡಿಸಿಪೀಡಿಸಿ ಕಥನ ಬಂಡಿಯನ್ನು ಸ್ವಲ್ಪತಳ್ಳಿದ ನಂತರ ಮತ್ತೊಮ್ಮೆ ಗೊರ್ ಎಂದು ನಾಂದಿ ಹಾಡಿದ ನಿದ್ದೆ ಅವಳನ್ನು ತನ್ನ ತೆಕ್ಕೆಯೊಳಗೆ ಸೆಳೆದುಕೊಂಡೇಬಿಡುತ್ತಿತ್ತು. ಆದರೆ ಅಕರಾಳ-ವಿಕರಾಳವಾಗಿ ಹೊರಡುತ್ತಿದ್ದ ಅವಳ ಗೊರಕೆಯ ಸದ್ದಿಗೆ ನನಗೆ ನಿದ್ದೆಯೇ ಹತ್ತುತ್ತಿರಲಿಲ್ಲ. ಅತ್ಯಂತ ತಾರಕ ಸ್ಥಾಯಿಯ ಶಿಖರಾಗ್ರವನ್ನು ತಲುಪಿದ ಅವಳ ಆ ಗೊರಕೆ ಒಮ್ಮೆಲೇ ಪ್ರಪಾತಕ್ಕೆ ಬಿದ್ದಂತೆ ಸ್ಥಬ್ದವಾಗಿ ಇದ್ದಕ್ಕಿದ್ದಂತೆಯೇ ಘನಘೋರವಾಗಿ ಘೀಳಿಡುವಂತೆ ಪುನರಾರಂಭವಾದಾಗ ನಾನು ಬೆಚ್ಚಿ ಬೆದರಿ ಅವಳನ್ನೇ ತಬ್ಬಿಕೊಂಡು ಅತ್ಯಂತ ಬಿಗಿಯಾಗಿ ಕಣ್ಣುಕಿವಿ ಮುಚ್ಚಿಕೊಂಡು ನಿದ್ದೆಹೋಗಿಬಿಡುತ್ತಿದ್ದೆ. ಮನೆಯವರಿಗೆಲ್ಲಾ ನಾನು ಗೌರಮ್ಮನ ಗೊರಕೆಗೆ ಹೆದರಿ ಅವಳನ್ನೇ ತಬ್ಬಿ ಮಲಗುವುದು ಒಂದು ಬಹಳ ದೊಡ್ಡ ತಮಾಷೆಯೇ ಆಗಿಬಿಟ್ಟಿತ್ತು!
ಗೌರಮ್ಮ ಬೆಳಗಿನ ಸಹಾಯಕ ಗೃಹಕೃತ್ಯಗಳ ನಂತರ ತನ್ನ ಪಾಲಿನ ಪ್ರಮುಖ ಕಾರ್ಯವಾದ ಗದ್ದೆ ಕಾಯುವ ಕೆಲಸಕ್ಕೆ ಹೊರಟುಬಿಡುತ್ತಿದ್ದಳು. ಸ್ಕೂಲಿಗೆ ರಜವಿದ್ದಾಗ ಬಸವನ ಹಿಂದೆ ಬಾಲ ಎನ್ನುವಂತೆ ನಾನೂ ಅವಳನ್ನು ಹಿಂಬಾಲಿಸುತ್ತಿದ್ದೆ. ಜಮೀನನ್ನು ಒಂದು ಸುತ್ತು ಸುತ್ತಿ ಯಾರೂ ಕದ್ದು ಹುಲ್ಲು ಕುಯ್ಯೋರು, ಕಡ್ಲೆಗಿಡ ಕೀಳೋರು ಕಬ್ಬು ಮುರಿಯೋರು, ದನ ಮೇಯಿಸೋರು ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡು ರಸ್ತೆ ಬದಿಯ ಆಲದ ಮರದ ಕೆಳಗೆ ಕುಳಿತುಕೊಳ್ಳುತ್ತಿದ್ದಳು. ಅವಳ ಮುಂದೆ ನಾನು ಕಲಿತಿದ್ದ ಎಲ್ಲಾ ನೃತ್ಯಗಳ ಪ್ರದರ್ಶನವನ್ನೂ ಮಾಡಬೇಕು. 'ನಾವೆಲ್ಲಾ ಪುಷ್ಪಗಳು,'ಎಂದು ಪ್ರಾರಂಭಿಸಿ ಕುಣಿದದ್ದೂ ಕುಣಿದದ್ದೇ. ಕಡೆಗೆ, 'ರಾತ್ರಿಯೆಲ್ಲಾ ಕಾಲು ನೋವಾಗಿ ನಿದ್ದೆ ಬರಲ್ಲ, ನಿಲ್ಲಿಸು ಕಂದಾ,' ಎಂದು ರಮಿಸುವವರೆಗೂ ಬಿಡುತ್ತಿರಲಿಲ್ಲ. ಮಧ್ಯೆಮಧ್ಯೆ ನಾನೂ ಒಂದು ರೌಂಡ್ ಗದ್ದೆ ಸುತ್ತಿ ಬರುತ್ತಿರಬೇಕು. ಒಮ್ಮೆ ಚಿಕ್ಕವಳಿದ್ದಾಗ ಅವಳನ್ನು ಹಿಂಬಾಲಿಸಲಾರದೇ ಮಧ್ಯದಲ್ಲೇ ಒಂದು ಮರದ ಕೆಳಗೆ ಅಳುತ್ತಾ ಕೂತುಬಿಟ್ಟಿದ್ದೆನಂತೆ. ಮನೇಲಿ ರಾತ್ರಿಯಾದರೂ ಮಗು ಬರಲಿಲ್ಲ ಅಂತ ಹುಡುಕುತ್ತಿದ್ದಾಗ ಯಾರೋ ಪುಣ್ಯಾತ್ಮರು ಆಯ್ನೋರ ಮಗಾ ಅಂತ ಗುರುತಿಸಿ ಮನೆ ತಲುಪಿಸಿದಾರೆ. ಆಗಿನಿಂದ ಸರಿಯಾಗಿ ಕಣ್ಣು ಕಾಣದೇ ಇದ್ದ ನಮ್ಮ ಗೌರಮ್ಮನ ಸೆರಗು ಹಿಡಿದೇ ಹಿಂಬಾಲಿಸುತ್ತಿದ್ದೆನಂತೆ!
ಗೌರಮ್ಮ ಬಟ್ಟೆ ಒಗೆಯಲು ಬಿಡಗಂಡಿಗೆ ಹೋಗುತ್ತಿದ್ದಳು. ಅಂದ್ರೆ ಗದ್ದೆಗಳಿಗೆ ನಾಲೆಯಿಂದ ನೀರು ಹೋಗುವ ಜಾಗ. ಅವಳು ಬಟ್ಟೆಗಳನ್ನೆಲ್ಲಾ ನೆನೆಸಿ, ಸೋಪು ಹಚ್ಚಿಟ್ಟು, ನೀರಿನಲ್ಲಿ ನಿಂತು ಒಂದು ಕಾಲು ಕಲ್ಲಿನ ಮೇಲಿಟ್ಟುಕೊಂಡು ಬಟ್ಟೆ ಒಗೆಯಲು ಪ್ರಾರಂಭಿಸುತ್ತಿದ್ದಳು. ತೊಳೆದ ಕೆಂಡದಂಥಾ ತ್ವಚೆಯ ನಾನು ಸೀರೆ ಮೇಲೆತ್ತಿ ಕಟ್ಟಿಕೊಂಡ ಅವಳ ಬೆಳ್ಳನೆಯ ಕಾಲನ್ನು ಆಸೆಯಿಂದ ನೋಡುತ್ತಾ, 'ಅಮ್ಮ ಅಮ್ಮ ನಾನು ಯಾವಾಗ ನಿನ್ನ ಹಾಗೆ ಬೆಳ್ಳಗಾಗ್ತಿನೇ?' ಎಂದು ಕೇಳುತ್ತಿದ್ದೆ. ಅದಕ್ಕವಳು, 'ದೊಡ್ಡೋಳಾದಾಗ ನೀನು ನನಗಿಂತಾ ಬೆಳ್ಳಗಾಗ್ತೀಯ,' ಎನ್ನುತ್ತಿದ್ದಳು!
ಗೌರಮ್ಮ ಯಾವಾಗಲೂ ಅಮ್ಮನಿಗೆ ಅಸಿಸ್ಟೆಂಟ್ ಆಗಿ ಆ ಕಾಲಕ್ಕೆ ಒರಳುಕಲ್ಲಿನಲ್ಲಿ ತಿರುವೋದು, ಕುಟ್ಟೋದು, ಬೀಸುಕಲ್ಲಿನಲ್ಲಿ ಬೀಸೋದು ಮುಂತಾದ ಕೆಲಸಗಳನ್ನು ಮಾಡಿಕೊಡುತ್ತಿದ್ದಳು. ನಾನು ಅವಳಿಗೆ ಅಸಿಸ್ಟೆಂಟ್ ಆಗಿ ಒರಳುಕಲ್ಲಿನ ಮುಂದೆ ಕೂತು ಈಚೆ ಬಂದಿದ್ದನ್ನೆಲ್ಲಾ ಒಳಗೆ ನೂಕುವ ಕೆಲಸ ಮಾಡುತ್ತಿದ್ದೆ. ಸರಿಯಾಗಿ ಕಣ್ಣು ಕಾಣದ ಗೌರಮ್ಮ ಒಂದು ಸಾರಿ ನನ್ನ ಕೈ ಮೇಲೇ ಕುಟ್ಟಿಬಿಟ್ಟಿದಾಳೆ. ಒಮ್ಮೆಲೇ ನಾನು ಚೀರಿದಾಗ ಅವಳಿಗಾದ ಸಂಕಟ ಅಷ್ಟಿಷ್ಟಲ್ಲ. ಹೇಗೋ ಗುರಿತಪ್ಪಿ ಮೂಗೇಟಾಗಿತ್ತು. ಆದರೂ, 'ಮಗು ಕೈ ಕಪ್ಪೆಹೊಟ್ಟೆಯ ಹಾಗೆ ಊದಿದೆ,' ಅಂತ ಮೊದಲೇ ಕಪ್ಪಗೆ ಗುಂಡಾಗಿದ್ದ ನನ್ನ ಕೈಗೆ ಇನ್ನಿಲ್ಲದ ಉಪಚಾರಗಳನ್ನು ಮಾಡಿದ್ದಳು. ಅವತ್ತಿನಿಂದ ಒರಳ ಬಳಿ ನನ್ನನ್ನು ಸುಳಿಯಲೂ ಬಿಡುತ್ತಿರಲಿಲ್ಲ. ಆದರೂ ಅವಳ ಹಿಂದೇ ಸೆರಗು ಹಿಡಿದು ಕೂರುತ್ತಿದ್ದ ನನ್ನ ಬಗ್ಗೆ ಎಲ್ಲಿ ಕುಟ್ಟುವಾಗ ಹಾರೆ ತಗಲುತ್ತೋ ಎನ್ನುವ ಭಯ! ಅಮ್ಮ ಹುಳಿ ಮಾಡಲು ಎಂದಾದರೊಮ್ಮೆ ಬೇಯಿಸಿದ ಹುರುಳಿಕಾಳು ತಿರುವಕ್ಕೆ ಹಾಕಿದರೆ ಗೌರಮ್ಮ, 'ಅತ್ತಿಗ್ಯಮ್ಮ ಮಕ್ಕಳಿಗೆ ಇದರ ತಂಬಿಟ್ಟು ಬಾಳ ಇಷ್ಟ ...' ಎಂದು ಮಾತಿಗೆ ಮೊದಲಿಡುತ್ತಿದ್ದಳು. ನಮ್ಮಮ್ಮ, 'ನಂಗೇ ತಿನ್ನೋಹಾಗೆ ಆಗಿದೆ ಅಂತ ಹೇಳವ್ವ ಬ್ಯಾಡ ಅಂತೀನ', ಎನ್ನುತ್ತಿದ್ದರು. ಗೌರಮ್ಮನಿಗೆ ಏನೇ ತಿನ್ನಬೇಕೆನಿಸಿದರೂ, 'ಮಕ್ಕಳಿಗೆ,' ಎಂದೇ ಪ್ರಾರಂಭಿಸುತ್ತಿದ್ದರ ಒಳ ಮರ್ಮವನ್ನು ಅಮ್ಮ ಎಂದೋ ಅರಿತಿದ್ದರು! ಏನೇ ಕೆಲಸ ಮಾಡುವಾಗಲೂ ದೇವರನಾಮ ಹಾಡುತ್ತಿರುವುದು ಗೌರಮ್ಮನ ಅಭ್ಯಾಸ. ಕುಟ್ಟುವಾಗ ಏದುಸಿರು ಬಿಡುತ್ತಲೇ,
'ಕ್ಷೇಮವೇನೈ ರಾಮಚಂದ್ರ ಸುಮಿತ್ರಾನುಜರು ...
ಹೆಣ್ಣು ಜನ್ಮದಿ ಹುಟ್ಟಿ ನಾ ಬಹು ಪುಣ್ಯಹೀನಳಾದೆನಯ್ಯ
ಕಪಿ ಸೈನ್ಯವ ಕೂಡಿಕೊಂಡು
ಎಂದಿಗೆ ಬರುವನೊ ರಾಮ ಹಾ...'
ಎಂದು ಹಾಡುವಾಗ ನನ್ನ ಕಣ್ಣ ಮುಂದೆ ಈ ಮೊದಲೇ ಅನೇಕ ಬಾರಿ ಅವಳ ಬಾಯಿಂದಲೇ ಕೇಳಿದ ರಾಮಾಯಣದ ಚಿತ್ರ ಸುಳಿದಾಡಿ ಮತ್ತೊಮ್ಮೆ ಆ ಕಥೆ ಕೇಳಲು ಪ್ರೇರೇಪಿಸುತ್ತಿತ್ತು. ಹದಿಹರಯದಲ್ಲೇ ಹಸುಗೂಸೊಂದನ್ನು ಹೊತ್ತುಕೊಂಡು ತವರುಮನೆ ಸೇರಿದ್ದ ಅವಳ ಕಣ್ಣಲ್ಲಿ ಹಾಡುತ್ತಲೇ ಆಯಾಚಿತವಾಗಿ ಕಣ್ಣೀರಕೋಡಿ ಹರಿಯುತ್ತಿತ್ತು. ನನಗೆ ನನ್ನದೇ ಚಿಂತೆ. ಅವಳು ಒರಳ ಮುಂದೆ ಕುಳಿತಳೆಂದರೆ, 'ಅಮ್ಮಾ, ನಂಗೆ ದೋಸೆ ಅಂದ್ರೆ ಆಸೆ ಕಣೆ', ಎಂದು ವರಾತ ಮಾಡುತ್ತಿದ್ದೆ. ಅಕ್ಕಿ ನೆನೆಸಿ ತಿರುವಿ ದೋಸೆ ಮಾಡುವವರೆಗೂ ನನ್ನದು ಅದೇ ರಾಗ! 'ಕೋಡೂಬಾಳೆ' ಎಂದು ಶುರುವಿಟ್ಟರೆ ಕೋಡುಬಳೆಯನ್ನು ಮಾಡಿಕೊಡಲೇ ಬೇಕು. 'ಎಲ್ಲಾ ನಿಮ್ಮ ಅತಿಮುದ್ದಿನಿಂದಲೇ ಇವಳು ಹೀಗಾಗಿರೋದು,' ಎಂದು ಅಮ್ಮ ಹುಸಿಕೋಪದಿಂದ ಗೌರಮ್ಮನ ಮೇಲೆ ಆಪಾದನೆ ಮಾಡುತ್ತಿದ್ದರು. ನನ್ನಕ್ಕನಿಗೆ ಮಾತ್ರ ಚಿಕ್ಕಂದಿನಲ್ಲಿ ಗೌರಮ್ಮನ ಮೇಲೆ ಮುನಿಸು. ಗೌರಮ್ಮ ತೆಂಗಿನ ಕರಟವನ್ನು ನುಣ್ಣಗೆ ಸವರಿ ಮಜ್ಜಿಗೆ ಬಡಿಸಲು ಇಟ್ಟರೆ ಅವಳು, 'ಗೌರಿ ಮುರಿ ಗೌರಿ ಕರಟ ಮುರಿ,' ಎಂದು ರಂಪಾಟ ಮಾಡುತ್ತಿದ್ದಳಂತೆ. ಇದನ್ನಂತೂ ಅವಳನ್ನು ತನ್ನ ಜೀವದಂತೆ ಸಾಕುತ್ತಿದ್ದ ನಮ್ಮ ದೊಡ್ಡತ್ತೆ ಆಗಾಗ ಹೇಳಿಹೇಳಿ ನಮ್ಮ ನೆನಪಿನಂಗಳದಲ್ಲಿ ಚಿರಸ್ಥಾಯಿಗೊಳಿಸಿಬಿಟ್ಟಿದ್ದರು. ಅವರು ತಮ್ಮ ತವರುಮನೆಯಿಂದ ಹೊರಗೆ ಹೋದವರೇ ಅಲ್ಲ. 8ವರ್ಷಕ್ಕೇ ತಮ್ಮ ಸೌಭಾಗ್ಯ ಕಳೆದುಕೊಂಡ ಬಾಲವಿಧವೆ. ನಮ್ಮ ತಂದೆಗೆ ಆ ತಂಗಿಯ ಮೇಲೆ ಇನ್ನಿಲ್ಲದ ಅಕ್ಕರೆ ಇದ್ದುದರಿಂದ ಅತ್ಯಂತ ಸಮರ್ಥರಾದ ಅವರಿಗೆ ಮನೆಯ ವಹಿವಾಟನ್ನೇ ವಹಿಸಿಬಿಟ್ಟಿದ್ದರು. ಅವರೂ ಕುಟುಂಬದ ಒಳಿತಿಗಾಗಿ ದುಡಿಯುವುದಕ್ಕಾಗೇ ತಮ್ಮ ಬದುಕನ್ನು ಮಿಸಲಾಗಿಟ್ಟಿದ್ದರು. ಮನೆಯಲ್ಲಿ ಅವರದ್ದೇ ಯಜಮಾನಿಕೆ ಇದ್ದುದರಿಂದ ಅಕ್ಕನಿಗೆ ವಿಶೇಷ ಮಾನ್ಯತೆ! ಸ್ವಲ್ಪಮಟ್ಟಿಗೆ ಅಮ್ಮ ಮತ್ತು ಗೌರಮ್ಮ ಅಕ್ಕನಿಗೂ ಹೆದರುತ್ತಿದ್ದರು! ಇನ್ನು ನನ್ನ ಪಾಡಂತೂ ಹೇಳುವಂತೆಯೇ ಇರಲಿಲ್ಲ. ಕುಟುಂಬದ ಗೌರವರ್ಣಕ್ಕೆ ಕಲಶವಿಟ್ಟಂತೆ ಇದ್ದ ಅಕ್ಕ ನಾನು ಹುಟ್ಟಿದಾಗಲೇ, 'ಈ ಕರಿಹೆಗ್ಗಣ ಯಾಕೆ ಬಂತು?' ಅಂತ ಗೋಳಾಡಿ ತನ್ನ ಅಸಮ್ಮತಿ ಸೂಚಿಸಿದ್ದಳಂತೆ! ನಾನು ಅವಳ ದಾಸಾನುದಾಸಳಾಗಿ ಅವಳು ಹಾಕಿದ ಗೆರೆಯನ್ನು ದಾಟದಂತೆ ನನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿದ್ದೆ. ಅವಳೂ ತನ್ನ ಹಿರಿತನಕ್ಕೆ ತಕ್ಕಂತೆ ನನ್ನನ್ನು ವಿಶೇಷವಾಗಿ ಜತನ ಮಾಡಿ, ಮಾರ್ಗದರ್ಶಕಳಾಗಿ ಮುನ್ನಡೆಸಿದಳು.
ಏನಾದರೂ ವಸ್ತು ಕಳೆದುಹೋದರೆ ಹುಡುಕುವಾಗ ಗೌರಮ್ಮ ಒಂದು ಜಾಗ ಹೇಳುವಳು. ಅಲ್ಲಿಲ್ಲದಿದ್ದರೆ ಮತ್ತೊಂದು ಜಾಗ... ಹೀಗೇ ಅದು ಸಿಗುವವರೆಗೂ ಹೇಳಿ ಸಿಕ್ಕ ನಂತರ ನಾನು ಮೊದಲೇ ಹೇಳಿದ್ದೆ ಎಂದಾಗ ಅಕ್ಕ ಕೋಪದಿಂದ ಕೆರಳಿಬಿಡುತ್ತಿದ್ದಳು! ಮದುವೆ ಮಾಡಿದ್ದರೆ ನಿನ್ನ ವಯಸ್ಸಿಗೆ ನಾಲ್ಕು ಮಕ್ಕಳಾಗ್ತಿತ್ತು ಅನ್ನೋದು ಜವಾಬ್ದಾರಿ ಕಲಿತಿಲ್ಲ ಎಂದು ಸೂಚಿಸುವ ಗೌರಮ್ಮನ ಕಾಮನ್ ಡೈಲಾಗ್. ಇದನ್ನೆಲ್ಲಾ ವಿರೋಧಿಸುತ್ತಿದ್ದುದು ಅಕ್ಕಾನೇ!
ಗೌರಮ್ಮನಿಗೆ ಸುಮ್ಮನೆ ಕೂರುವುದು ಅಂದ್ರೇ ಆಗ್ತಿರಲಿಲ್ಲ. ಏನಾದರೊಂದು ಮಾತಾಡ್ತಾನೇ ಇರಬೇಕು. ಆಗೆಲ್ಲಾ ತನ್ನದೇ ಓರಗೆಯ ಗೌರಮ್ಮನೊಡನೆ ಅತ್ಯಂತ ಸಲಿಗೆಯಲ್ಲಿದ್ದ ಅಮ್ಮ , 'ಏನವ್ವ ಸದಾ ವಟಗುಟ್ತಿರ್ತಿಯ. ಸುಮ್ನೆ ಕೂತ್ಕೊಂಡು ಜಪಾನಾರ ಮಾಡಿದ್ರೆ ಇಹಕ್ಕೆ ಸುಖ, ಪರಕ್ಕೆ ಗತಿ ,' ಎನ್ನುತ್ತಿದ್ದರು.
ಗೌರಮ್ಮ ಆಗಾಗ ತೊಡೆ ಮೇಲೆ ಕೂರಿಸ್ಕೊಂಡು ನಂಗೆ, 'ನನ್ನ ಮಗನ್ನ ನೀನು ಮದುವೆಯಾದರೆ ಈ ರೇಷ್ಮೆ ಸೀರೆ, ಕಾಲಿನ ಚೈನು ಕೊಡ್ತೀನಿ,' ಎಂದು ತನ್ನ ಪಾಚಿಬಣ್ಣದ ಸುಂದರವಾದ ಧರ್ಮಾವರಂ ಸೀರೆ, ಪಾದದ ತುಂಬಾ ತುಂಬಿಕೊಂಡು ಝಣಗುಡುತ್ತಿದ್ದ ಗೆಜ್ಜೆಯನ್ನು ತೋರಿಸಿ ಅಮಿಷವೊಡ್ಡುತ್ತಿದ್ದಳು. (ತವರ ಸಂಬಂಧವನ್ನು ಬಿಗಿಗೊಳಿಸಿಕೊಳ್ಳುವ ತವಕ ಅವಳಿಗೆ!) ಆಹಾ, ಎಷ್ಟು ಚಂದ! ಇವು ನನ್ನವಾದರೆ ನನಗಿನ್ನೇನು ಬೇಕು ಎಂಬ ಆಸೆಗಣ್ಣಿನಿಂದ ನಾನೂ ಆ ಭಾರೀ ಸೀರೆ ಮತ್ತು ಆಕರ್ಷಕ ಗೆಜ್ಜೆಗಳನ್ನು ನೋಡುತ್ತಾ ಸ್ಪರ್ಶಿಸಿ ಖುಷಿಪಡುತ್ತಿದ್ದೆ! ಮುಂದೆ ಮಕ್ಕಳು ಅಣ್ಣತಂಗಿಯರಂತೆ ಬೆಳೆಯುವುದನ್ನು ನೋಡಿ ತನ್ನ ಆಸೆ ಸಾಧುವಲ್ಲ ಎನ್ನುವುದನ್ನು ಅವಳೇ ಮನಗಂಡಳೇನೋ. ನನಗೆ ಬುದ್ಧಿ ತಿಳಿದ ನಂತರ ಒಮ್ಮೆಯೂ ಆ ರೀತಿ ಮಾತನಾಡಲಿಲ್ಲ.
ಬಹಳ ತುಂಟನಾಗಿದ್ದ ನನ್ನ ತಮ್ಮ ಒಮ್ಮೆ ದನೀನ ಕೊಟ್ಟಿಗೆಯಲ್ಲಿ ಒಂದು ಹಾವಿನ ಮರಿಯನ್ನು ಹಿಡಿದುಕೊಂಡು ಬಿಟ್ಟ. ದೊಡ್ಡವರಾಗಿ ಗೌರಮ್ಮ ಒಬ್ಬಳೇ ಮನೆಯಲ್ಲಿದ್ದದ್ದು. ನಾವೆಲ್ಲಾ ಓಡಿಹೋಗಿ ಅವಳನ್ನು ಕರೆದುಕೊಂಡು ಬಂದೆವು. ಪಾಪ, ಸರಿಯಾಗಿ ಕಣ್ಣೂ ಕಾಣದ ಅವಳು ಏನು ತಾನೇ ಮಾಡ್ತಾಳೆ! ಅವನು ಹಾವಿನಮರಿ ತಲೆ ಮೇಲೆತ್ತದಂತೆ ಒಂದೇ ಸಮನೆ ಕೊಡವುತ್ತಿದ್ದಾನೆ. ಏನೂ ತೋಚದೆ ಗೌರಮ್ಮ ಇನ್ನೆಲ್ಲಿ ಸ್ವಲ್ಪ ಹೆಚ್ಚುಕಮ್ಮಿಯಾದ್ರೆ ಕಚ್ಚಿಬಿಡುತ್ತೋ ಅಂತ ದೇವರನ್ನ ಪ್ರಾರ್ಥಿಸುತ್ತಾ, 'ಕಂದಾ, ದೂರಕ್ಕೆ ಎಸೆದುಬಿಡಪ್ಪ ಅಂತ ಗೋಗರೆಯಲಾರಂಭಿಸಿದಳು. ಇದ್ದಕ್ಕಿದ್ದಂತೆಯೇ ಅವನು ಜೋರಾಗಿ ಬೀಸಿ ಎಸೆದುಬಿಟ್ಟ! ಅದು ಎಲ್ಲಿ ಹೋಯಿತೋ ಯಾರಿಗೂ ಕಾಣಲಿಲ್ಲ.
ದೂರದೂರಿನಲ್ಲಿ ಓದುತ್ತಿದ್ದಾಗ ಒಮ್ಮೆ ಕಾಲೇಜಿನಿಂದ ಊರಿಗೆ ಒಂದು ಕ್ಲಿಕ್ ಥರ್ಡ್ ಕ್ಯಾಮೆರಾ ತೆಗೆದುಕೊಂಡು ಹೋಗಿದ್ದಾಗ ಅವಳು ಫೋಟೋ ತೆಗೆಸಿಕೊಂಡಿದ್ದೂ ತೆಗೆಸಿಕೊಂಡಿದ್ದೇ! ಅಷ್ಟೊಂದು ಆಸೆಪಡುತ್ತಿದ್ದವಳು ಕ್ರಮೇಣ ಜೀವನದಲ್ಲಿ ಅಸಕ್ತಿಯನ್ನೇ ಕಳೆದುಕೊಂಡುಬಿಟ್ಟಳಂತೆ. ಬದುಕಿನ್ನು ಸಾಕು ಎನಿಸಿತೇನೋ, ತನ್ನ ಅಂತ್ಯವನ್ನು ತಾನೇ ನಿರೀಕ್ಷಿಸುತ್ತಾ ಮಲಗಿಬಿಟ್ಟಳಂತೆ. ಹಿತ್ತಾಳೆ ಬಳೆಗಳನ್ನು ಹಾಕುತ್ತಿದ್ದ ಅವಳ ಕೈಗಳನ್ನು ಹಿಡಿದುಕೊಂಡು ʼನಾನು ಓದಿ ಕೆಲಸಕ್ಕೆ ಸೇರಿ ನಿಂಗೆ ಚಿನ್ನದ ಬಳೆ ಮಾಡಿಸ್ತೀನಿ,ʼ ಅಂತ ಎಳವೆಯಲ್ಲಿ ಯಾವಾಗಲೂ ಹೇಳುತ್ತಿದ್ದ ನನ್ನ ಮಾತನ್ನು ಕಾರ್ಯರೂಪಕ್ಕೆ ತರುವ ಮೊದಲೇ ನಾನಿನ್ನೂ ಡಿಗ್ರಿ ಫೈನಲ್ ನಲ್ಲಿ ಓದುತ್ತಿರುವಾಗಲೇ ಗೌರಮ್ಮ ಕಾಲನ ಕರೆಗೆ ಓಗೊಟ್ಟೇಬಿಟ್ಟಳು. ಸದಾ ಮಾತನಾಡಲು ಬಯಸುತ್ತಿದ್ದ ಗೌರಮ್ಮ ತನ್ನವರೆಲ್ಲರ ಸಮ್ಮುಖದಲ್ಲೇ ಅಂತಿಮ ಕ್ಷಣದ ಅನುಭವವನ್ನೂ ಹೇಳಲಾರಂಭಿಸಿದಳಂತೆ. ಆ ರಾತ್ರಿಯೇ, 'ನಾಣಿ ಹೋದ'ನೆಂದು ಅವಳು ಹೇಳಿದ್ದು ಅದೇ ಹೆಸರಿನವರು ಕುಟುಂಬದಲ್ಲಿ 4-5ಜನರಿದ್ದುದರಿಂದ ಎಲ್ಲರಿಗೂ ಗೊಂದಲವೇ ಆಯ್ತಂತೆ. ಬೆಳಗಾದ ನಂತರ ಸುದ್ದಿ ಬಂದಾಗ ಚಿಕ್ಕಪ್ಪನ ಮಗ ನಾಣಿ ಹೋದನೆಂದು ತಿಳಿದು ಅವಳು ಹೇಳಿದ್ದು ಸತ್ಯವೆಂದು ಗೊತ್ತಾಯಿತೆಂದು ಎಲ್ಲರೂ ಹೇಳುತ್ತಿದ್ದರು. ಇದಾದ ಬಹಳ ದಿನಗಳವರೆಗೆ ನನ್ನ ಕನಸಿನಲ್ಲಿ ಬಂದು ನನ್ನೊಡನಾಡುತ್ತಿದ್ದ ಗೌರಮ್ಮ ಇವತ್ತಿಗೂ ಇಲ್ಲೇ ಎಲ್ಲೋ ಇದ್ದಾಳೆ ಎನ್ನುವಂತಿದೆ.
ಈ ಅನಿರೀಕ್ಷಿತತೆಯಿಂದ ಆಘಾತಗೊಂಡು ನಾನು ಅಲ್ಲಿಗೇ ಓದನ್ನು ಮೊಟಕುಗೊಳಿಸಿ ಕೆಲಸಕ್ಕೆ ಸೇರಿದೆ. ನನ್ನನ್ನು ಸಾಕಿ ಸಲಹಿದ ಹಿರಿಯರನ್ನು ಸುಖವಾಗಿರಿಸಬೇಕೆನ್ನುವುದು ನನ್ನ ಹಂಬಲವಾಗಿತ್ತು.
✍️ಪ್ರಭಾಮಣಿ ನಾಗರಾಜ
No comments:
Post a Comment