Saturday, July 23, 2011

ಮನದ ಅಂಗಳದಿ.........೫೦. ನಿರ್ಧಾರ?

ನಮ್ಮ ಜೀವಿತಾವಧಿಯಲ್ಲಿ ಹಾಗೂ ಕೆಲವು ವೇಳೆ ನಮ್ಮ ದೈನಂದಿನ ದಿನಚರಿಯಲ್ಲಿಯೇ ನಿರ್ಧಾರ ತೆಗೆದುಕೊಳ್ಳಬೇಕಾದ ಪರಿಸ್ಥಿತಿಗಳು ಸಾಮಾನ್ಯವಾಗಿ ಎದುರಾಗುತ್ತಿರುತ್ತವೆ. ಅವು ವೈಯಕ್ತಿಕವಾಗಿರಬಹುದು ಅಥವಾ ನಮಗೆ ಸಂಬಂಧಿಸಿದವರದ್ದಾಗಿರಲೂ ಬಹುದು. ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಭವಿಷ್ಯವನ್ನು ರೂಪಿಸುತ್ತವೆ(ನಿರ್ಧರಿಸುತ್ತವೆ!). ಆದರೆ ಆ ನಿರ್ಧಾರಗಳನ್ನು ತೆಗೆದುಕೊಳ್ಳುವ ಕ್ಷಣಗಳು ನಮ್ಮನ್ನು ಕೆಲವೊಮ್ಮೆ ಎಷ್ಟೊಂದು ಸಂದಿಗ್ಧಕ್ಕೆ ಸಿಲುಕಿಸುತ್ತವೆಯೆಂದರೆ.....ಅಪಕ್ವತೆಯಲ್ಲಿರುವಾಗ ಆ ಒಂದು ಪರಿಸ್ಥಿತಿಯಲ್ಲಿ ನಮ್ಮನ್ನು ನಾವು ನಿರ್ವಹಿಸಿಕೊಳ್ಳುವುದು ಬಹಳ ಕಷ್ಟಕರವೆನಿಸುತ್ತದೆ. ಅಂಥಾ ಸಂದರ್ಭಗಳಲ್ಲಿ ಎಷ್ಟೋವೇಳೆ 'ಇನ್ನು ಮುಂದೆ ಯಾವುದೇ ನಿಧಾರಗಳನ್ನು ತೆಗೆದುಕೊಳ್ಳುವುದಿಲ್ಲ,' ಎಂದುಕೊಂಡಿದ್ದೇನೆ, ಆದರೆ ಮರುಕ್ಷಣವೇ ಅದೇ ಒಂದು ನಿರ್ಧಾರವೆನಿಸಿ ಮೌನವಹಿಸಬೇಕಾಗಿದೆ. ನನ್ನ ವಿದ್ಯಾರ್ಥಿ ಜೀವನದಲ್ಲಿ ಎದುರಿಸಬೇಕಾಗಿ ಬಂದ ಅಂಥಾ ಒಂದು ಸಂದಿಗ್ಧ ಪರಿಸ್ಥಿತಿಯ ಬಗ್ಗೆ ಈಗ ಹೇಳಹೊರಟಿದ್ದೇನೆ (ಆಗಿನ ಮನಃಸ್ಥಿತಿಗೆ ಅನುಗುಣವಾಗಿ ಹಾಗೂ ಆಗಲೇ ದಾಖಲಿಸಿದಂತೆ):

'ನಿರ್ಧಾರ ತೆಗೆದುಕೊಳ್ಳಬೇಕಾದ ಕ್ಷಣಗಳಲ್ಲಿ ನನ್ನ ಮನಸ್ಸು ಎಷ್ಟೊಂದು ಡೋಲಾಯಮಾನವಾಗುತ್ತದೆ ಎನ್ನುವುದು ವರ್ಣನಾತೀತ. ಒಂದು ನಿರ್ಧಾರ ತೆಗೆದುಕೊಂಡ ಸ್ವಲ್ಪ ಕಾಲದ ನಂತರ ಮತ್ತೊಂದು ರೀತಿಯಲ್ಲಿ ತೆಗೆದುಕೊಂಡರೆ ಒಳ್ಳೆಯದಿತ್ತೇನೋ ಎನಿಸುವುದರಿಂದ ಯಾವುದೇ ನಿರ್ಧಾರದಿಂದಲೂ ಪೂರ್ಣ ಮಾನಸಿಕ ನೆಮ್ಮದಿಯಂತೂ ದೊರೆಯುವುದೇ ಇಲ್ಲ. ಅದು ಆದದ್ದೂ ಹಾಗೇ......

ನನ್ನ ಡಿಗ್ರಿ(B.Sc.Ed.) ಫಲಿತಾಂಶ ಬರುವ ಮೊದಲೇ S.S.L.C. ಅಂಕಗಳ ಆಧಾರದ ಮೇಲೆ ಕೇಂದ್ರಸರ್ಕಾರಿ ನೌಕರಿ ಒಂದಕ್ಕೆ ಅರ್ಜಿ ಹಾಕಿದ್ದೆ. ಆಯ್ಕೆಯೂ ಆಗಿ ತರಬೇತಿಗೆ ಕರೆ ಬಂದಿತ್ತು. ಅದಕ್ಕಾಗಿ ಕಡೆಯಭಾರಿ ಓದಿದ ವಿದ್ಯಾಸಂಸ್ಥೆಯಿಂದ ನಡತೆಪತ್ರ ತಂದು ಕೊಡಬೇಕಿತ್ತು. ಅಷ್ಟರಲ್ಲಿ ನನ್ನB.Sc.Ed.ಫಲಿತಾಂಶವೂ ಬಂದು ನಾನು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದೆ. ನಡತೆಪತ್ರಕ್ಕಾಗಿ ನಮ್ಮ ಕಾಲೇಜಿಗೆ ಹೋದಾಗ ನಮ್ಮ ಗಣಿತದ ಪ್ರೊಫೆಸರ್ ಅವರೇ ಪ್ರಭಾರಿ ಪ್ರಿನ್ಸಿಪಾಲ್ ಆಗಿದ್ದರು. ನನ್ನನ್ನು ನೋಡಿದ ತಕ್ಷಣ , 'ನೀನು ಗಣಿತದಲ್ಲಿ ಉತ್ತಮ ಅಂಕ ಪಡೆದಿದ್ದೀಯ. M.Sc.Edಗೆ ಸೇರಿಕೊ. ಸ್ಟೈಫಂಡೂ ಸಿಗುತ್ತೆ. ಈಗಲೇ ಏಕೆ ಕೆಲಸಕ್ಕೆ ಹೋಗುತ್ತೀಯ?' ಎಂದರು. ನನಗೆ ತಕ್ಷಣ ಉತ್ತರಿಸಲಾಗಲಿಲ್ಲ.

'ನಿನಗೆ ಯೋಚಿಸಲು ಕಾಲಾವಕಾಶ ಕೊಡುತ್ತೇನೆ. ಮಧ್ಯಾಹ್ನದ ನಂತರ ನನ್ನನ್ನು ಕಾಣು,' ಎಂದು ಹೇಳಿದರು.

ನಾನು ಕನಸುಕಾಣುತ್ತಾ ನನ್ನ ಜೊತೆಯವರನ್ನು ನೋಡಲು ಹಾಸ್ಟೆಲ್‌ಗೆ ಹೋದೆ. ನನ್ನೊಡನೆ ಓದುತ್ತಿದ್ದವರು, ನನ್ನ ಬಳಿಯೇ ಲೆಕ್ಕ ಹೇಳಿಸಿಕೊಳ್ಳುತ್ತಿದ್ದವರು M.Sc.Edಗೆ ಸೇರಿದ್ದರು. ಎಲ್ಲರೂ ನನ್ನನ್ನೂ ಸೇರೆಂದು ಒತ್ತಾಯಿಸುತ್ತಿದ್ದರು. ಅಷ್ಟರಲ್ಲೇ ಯಾರೋ ನನ್ನನ್ನು ನೋಡಲು ಬಂದಿದ್ದಾರೆಂದು ತಿಳಿಯಿತು. ಈಚೆಗೆ ಬಂದು ನೋಡಿದಾಗ ನನ್ನ ಕಳೆದ ವರ್ಷದ ಒಬ್ಬ ಸಹಪಾಠಿ ನಿಂತಿದ್ದ. ನನ್ನನ್ನು ಕಂಡಾಕ್ಷಣವೇ, 'ನೀವು M.Sc.Edಗೆ ಸೇರಲು ಬಂದಿರುವಿರಾದರೆ ಸಂತೋಷ. ಆದರೆ ಅದಕ್ಕಾಗೇ ದೂರದ ತಮಿಳುನಾಡಿನ ಒಂದು ಹಳ್ಳಿಯಿಂದ ನಾನು ಬಂದಿದ್ದೇನೆ. ಈಗಾಗಲೇ ಒಂದು ಟೆಸ್ಟ್ ಕೂಡ ನಡೆಯುತ್ತಿದೆ. ಈಗ ನೀವು ಸೇರಿದರೆ ಮೆರಿಟ್‌ಕ್ರಮದಲ್ಲಿ ನಿಮ್ಮ ಹೆಸರು ಮೊದಲಿನದಾಗುತ್ತದೆ. ಈಗಾಗಲೇ ಕಡೆಯಲ್ಲಿರುವ ನನ್ನ ಹೆಸರು ಬಿಟ್ಟುಹೋಗುವುದರಿಂದ ನನ್ನ ಸ್ಟೈಫಂಡ್ ನಿಂತುಹೋಗುತ್ತದೆ. ಆಗ ನಾನು ಓದುವುದನ್ನು ಬಿಟ್ಟು ಊರಿಗೆ ಹೋಗಬೇಕು. ನಿಮಗಾದರೆ ಈಗಾಗಲೇ ಕೆಲಸ ಸಿಕ್ಕಿದ್ದು ಈಗ ನಡತೆಪತ್ರಕ್ಕಾಗಿ ಬಂದಿದ್ದೀರಿ. ನನ್ನಂತೆ ಓದುವ ಉದ್ದೇಶದಿಂದ ಬಂದಿಲ್ಲ. ಈಗ ಆಯ್ಕೆ ನಿಮ್ಮದು,' ಎಂದ.

ಕೇಂದ್ರಸರ್ಕಾರವು ನಡೆಸುತ್ತಿದ್ದ ನಮ್ಮ ಕಾಲೇಜಿನಲ್ಲಿ ಕೋರ್ಸ್‌ಗೆ ಸೇರಿದ ಒಟ್ಟು ವಿದ್ಯಾರ್ಥಿಗಳಲ್ಲಿ ಅರ್ಧದಷ್ಟು ಮಂದಿಗೆ ಮಾತ್ರ (೫೦%) ಮೆರಿಟ್ ಕ್ರಮದಲ್ಲಿ ಸ್ಷೈಫಂಡ್ ಸಿಗುತ್ತಿತ್ತು. ನನಗೂ ಸ್ಟೈಫಂಡ್ ಅನಿವಾರ್ಯವಾಗಿದ್ದು ಆ ಮೊದಲಿನ ನಾಲ್ಕು ವರ್ಷಗಳೂ ವಿಶೇಷ ಶ್ರಮದಿಂದ (ದಕ್ಷಿಣದ ಬೇರೆಬೇರೆ ರಾಜ್ಯಗಳಿಂದ ಬಂದು ಓದುತ್ತಿದ್ದ ಬುದ್ದಿವಂತರ ನಡುವೆ) ಸ್ಟೈಫಂಡ್ ಪಡೆದೇ ಓದಿದ್ದೆ. ನಾನು ಆ ಕ್ಷಣದಲ್ಲಿ ಅವನ ಪರಿಸ್ಥಿತಿಯ ಬಗ್ಗೆ ಯೋಚಿಸಿ, 'ನೀವೇ ಓದನ್ನು ಮುಂದುವರೆಸಿ, ನಾನು ಸೇರುವುದಿಲ್ಲ,' ಎಂದುಬಿಟ್ಟೆ. ಕೃತಜ್ಞತೆ ತುಂಬಿದ ಅವನ ಆ ನೋಟ ಮರೆಯುವಂತೆಯೇ ಇಲ್ಲ.'

ಆದರೆ ಆಗ ಬಿಟ್ಟಿದ್ದೇ ಬಿಟ್ಟಿದ್ದು, ಮತ್ತೆ ನನಗೆ ಸ್ನಾತಕೋತ್ತರ ಪದವಿಯನ್ನು ಪಡೆಯಲು ಆಗಲೇ ಇಲ್ಲ!

ನಂತರದ ಎರಡು ವರ್ಷಗಳಲ್ಲಿ ನನಗೆ ಶಿಕ್ಷಕಿಯಾಗಬೇಕೆಂದಿದ್ದ ಮಹತ್ತರವಾದ ಹಂಬಲವೂ ಕೈಗೂಡಿತು. ಶಿಕ್ಷಕಿಯಾಗಿದ್ದ ಸುದೀರ್ಘಅವಧಿಯಲ್ಲಿ ಯಾವುದೇ ವಿಶೇಷ ಒತ್ತಡವೂ ಇಲ್ಲದೇ ವೃತ್ತಿಜೀವನ ಸುಗಮವಾಗೇ ಸಾಗುತ್ತಿತ್ತು ಎನ್ನುವುದು ಮುಂದಿನ ದಿನಗಳಲ್ಲಿ ಅರ್ಥವಾಯಿತು! ಆ ನಂತರ ಸ್ವಯಂ ನಿರ್ಧಾರ ತೆಗೆದುಕೊಳ್ಳಬೇಕಾದ ಕ್ಷಣಗಳು ಆಗಾಗ ಎದುರಾಗಲಾರಂಭಿಸಿದವು. ಅದಕ್ಕಾಗೇ ಪ್ರತಿದಿನ ಎಚ್ಚರವಾದ ತಕ್ಷಣ ನನ್ನ ಮನಸ್ಸಿಗೆ ನಾನೇ, ಈ ದಿನ ಸೂಕ್ತ ಸಂದರ್ಭಗಳಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಸಹಕರಿಸುವ೦ತೆಯೂ, ನಾನು ತೆಗೆದುಕೊಂಡ ನಿರ್ಧಾರಕ್ಕಾಗಿ ಯಾವುದೇ ಕಾರಣಕ್ಕೂ ಪಶ್ಚಾತ್ತಾಪ ಪಡದಂತೆ ಅನುಗ್ರಹಿಸುವಂತೆಯೂ ಕೇಳಿಕೊಳ್ಳಲಾರಂಭಿಸಿದೆ. ನಾವು ನಮ್ಮ ಮನಸ್ಸಿನ ಆಳಕ್ಕೆ ಇಳಿದು ಎಂದರೆ ಬಾಹ್ಯವಾಗಿ ನಾವು ಎದುರಿಸಬೇಕಾದ ಸಮಸ್ಯೆಯಲ್ಲಿನ ಅಸಹಾಯಕತೆಯನ್ನು ಸಂಪೂರ್ಣವಾಗಿ ಮನಗಂಡು, ವಿನೀತ ಭಾವದಿಂದ ನಮ್ಮ ಅಂತರಂಗಕ್ಕೆ ಅಥವಾ ನಾವು ನಂಬಿರುವ ಶಕ್ತಿಗೆ ಈರೀತಿಯ ಬೇಡಿಕೆಯನ್ನು ಸಲ್ಲಿಸಿದಾಗ ಉತ್ತಮ ಫಲ ದೊರೆಯುತ್ತದೆ ಎನ್ನುವುದು ನನ್ನ ಸೀಮಿತ ಅನುಭವಕ್ಕೆ ಗೋಚರವಾಗಿದೆ. ಈ ಒಂದು ಪ್ರಾರ್ಥನೆಯಿಂದ ಮನಸ್ಸಿಗೆ ನೆಮ್ಮದಿಯಂತೂ ದೊರೆಯುತ್ತದೆ. ಈಗ, 'ಎಲ್ಲವೂ ನಿನ್ನದೇ, ನೀನೇ ಚಾಲಕ ಶಕ್ತಿ,' ಎಂದು ಮುನ್ನಡೆಯುತ್ತಿದ್ದೇನೆ.

Monday, July 18, 2011

ಮನದ ಅಂಗಳದಿ.........೪೯. ಸರ್ಪ ಭೀತಿ

ಹಳ್ಳಿಯಲ್ಲಿಯೇ ಹುಟ್ಟಿಬೆಳೆದ ನಮಗೆ ಹಾವಿನ ಬಗೆಗಿನ ಅನುಭವಗಳು ಬಹಳವಾಗೇ ಇದ್ದವು. ಮಕ್ಕಳಾಗಿದ್ದಾಗ ನಡುಮನೆಯಲ್ಲಿ ಸಾಲಾಗಿ ಹಾಸಿದ್ದ ಹಾಸಿಗೆಯ ಮೇಲೆ ನಮ್ಮನ್ನು ಮಲಗಿಸಿದ್ದಾಗ ತಲೆಯ ಕಡೆ ಗೋಡೆಯ ಅಂಚಿನಲ್ಲಿ ನಾಗರಹಾವೊಂದು ಹರಿಯುತ್ತಾ ಹೋದ ದೃಶ್ಯದ ಬಗ್ಗೆ ಹಿರಿಯರು ಹೇಳುತ್ತಿದ್ದ ವರ್ಣನೆ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ!
ಚಿಕ್ಕವನಿದ್ದಾಗ ನನ್ನ ತಮ್ಮ ಕೈಯಲ್ಲಿ ಹಾವಿನ ಮರಿಯನ್ನು ಹಿಡಿದುಕೊಂಡು, ಅದು ತಲೆ ಎತ್ತಿದಾಗಲೆಲ್ಲಾ ಜೋರಾಗಿ ಕೊಡವುತ್ತಿದ್ದುದು, ಅಮ್ಮ ಹಿತ್ತಲಿನಿಂದ ಗುಲಾಬಿಹೂವನ್ನು ಕೈಯಲ್ಲಿ ಹಿಡಿದು ಅದರ ಸೌಂದರ್ಯವನ್ನು ಆಸ್ವಾಧಿಸುತ್ತಾ ಹೊಸ್ತಿಲು ದಾಟಿದಾಗ, ಹೊಸ್ತಿಲ ಕೆಳಗೇ ಉದ್ದವಾಗಿ ನಾಗರಹಾವು ಮಲಗಿದ್ದನ್ನು ಕಂಡು ಹೌಹಾರಿದ್ದು, ಅಣ್ಣ(ಅಪ್ಪ) ಪೂಜೆಮಾಡುತ್ತಾ ಕುಳಿತಿದ್ದಾಗ ಹಂಚಿನ ಸಂದಿಯಿಂದ ಹಾವು ಇಳಿಬಿದ್ದಿದ್ದನ್ನು ಕಂಡು ಮೌನಭಂಗ ಮಾಡಲಾಗದೇ ಚಪ್ಪಾಳೆ ಹೊಡೆಯಲಾರಂಭಿಸಿದ್ದು, ಅಮ್ಮ ಗದ್ದೆ ಬದುವಿನಲ್ಲಿ ಹುಲ್ಲು ಕುಯ್ಯುವಾಗ ಹುಲ್ಲಿನ ಜೊತೆಗೇ ನಾಗರಹಾವನ್ನು ಕೈಯಲ್ಲಿ ಹಿಡಿದುಕೊಂಡದ್ದು, ಗದ್ದೆಯಿಂದ ಹುಲ್ಲಿನ ಹೊರೆಯನ್ನು ತಂದು ಮನೆಯ ಮುಂದೆ ಹಾಕಿದಾಗ ಹೊರೆಯಿಂದ ಹಾವು ಹರಿಯುತ್ತಾ ಹೋದದ್ದು, ಓಡೆಯಲ್ಲಿ ಇಲಿಗೆ ಬೋನು ಇಟ್ಟಾಗ ಅದರೊಳಗೆ ನಾಗರಹಾವೊಂದು ಬಿದ್ದಿದ್ದು,......ಹೇಳುತ್ತಾ ಹೋದರೆ ಕೊನೆಯಿಲ್ಲದ ಘಟನೆಗಳು! ಇವುಗಳಿಂದ ಮಕ್ಕಳಾಗಿದ್ದ ನಮ್ಮಲ್ಲಿ ನನ್ನ ತಮ್ಮ ಅಪರಿಮಿತ ಧೈರ್ಯಶಾಲಿಯಾಗಿ ಹೊರಹೊಮ್ಮಿದ. ನಾನಾದರೋ ಭೀತಿಯಲ್ಲಿ ತತ್ತರಿಸುವವಳಾಗಿಬಿಟ್ಟೆ! ಆದರೂ ತೋರ್ಪಡಿಸದೇ ಬದುಕು ಸಾಗುತ್ತಿರುವಾಗ...... ಸ್ವಾಮಿ ರಾಮ ಅವರು ?ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ? ಕೃತಿಯಲ್ಲಿ ಉರುಗ ಭೀತಿಯ ಬಗ್ಗೆ ತಿಳಿಸಿರುವ ಅನುಭವಗಳು ನನ್ನಲ್ಲಿ ಆಶಾ ಭಾವನೆಯನ್ನು ಮೂಡಿಸುತ್ತಿವೆ. ಅದನ್ನು ನಿಮ್ಮೊಂದಿಗೂ ಹಂಚಿಕೊಳ್ಳುತ್ತಿದ್ದೇನೆ:
'ನನ್ನ ಭೀತಿಯನ್ನು ಕುರಿತು ಹೇಳುತ್ತೇನೆ, ಕೇಳಿ. ಚಿಕ್ಕ ವಯಸ್ಸಿನಲ್ಲಿ ಸಹಜವಾಗೇ ನಿರ್ಭೀತ ಸ್ವಭಾವದವನಾಗಿದ್ದೆ. ಉಕ್ಕಿ ಹರಿಯುವ ಗಂಗೆಯನ್ನು ಈಜಿ, ಹುಲಿಗಳ ಬಗ್ಗೆ ಭಯವಿಲ್ಲದೇ ಕಾಡಿನೊಳಗೆ ಸುತ್ತಾಡುತ್ತಿದ್ದೆ. ಆದರೆ ಹಾವುಗಳನ್ನು ಕಂಡರೆ ತುಂಬಾ ಹೆದರುತ್ತಿದ್ದೆ. ಅನೇಕ ಸಲ ಹಾವುಗಳೊಡನೆ ಮುಖಾಮುಖಿ ಆಗಿದ್ದುಂಟು. ಆದರೆ ನನ್ನ ಭೀತ ಸ್ವಭಾವವನ್ನು ಎಲ್ಲರಿಂದಲೂ, ನನ್ನ ಗುರುಗಳಿಂದ ಕೂಡಾ, ಗೋಪ್ಯವಾಗಿಟ್ಟಿದ್ದೆ.
ಒಮ್ಮೆ ೧೯೩೯ರ ಸೆಪ್ಟೆಂಬರ್‌ನಲ್ಲಿ ನಾನು ಮತ್ತು ನನ್ನ ಗುರುಗಳು ಕೆಳಗಿಳಿದು ಹೃಷಿಕೇಶಕ್ಕೆ ಬಂದೆವು. ನಾವು ವೀರಭದ್ರಾಕ್ಕೆ ಹೋಗುವ ಮಾರ್ಗದ ಒಂದು ಸ್ಥಳದಲ್ಲಿ ವಾಸ್ತವ್ಯ ಹೂಡಿದೆವು. ಮುಂಜಾನೆ ಗಂಗೆಯಲ್ಲಿ ಸ್ನಾನ ಮಾಡಿ, ತಡಿಯಲ್ಲಿ ಧ್ಯಾನಕ್ಕೆ ಕುಳಿತೆವು. ಆವೇಳೆಗೆ ನಾನಾಗಲೇ ನಿರಂತರವಾಗಿ ಎರಡು ಮೂರು ಗಂಟೆಕಾಲ ಧ್ಯಾನತಲ್ಲೀನನಾಗಿ ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದ್ದೆ. ಏಳೂವರೆ ಸಮಯವಿರಬಹುದು. ಕಣ್ಣುಬಿಟ್ಟು ನೋಡಿದಾಗ ಒಂದು ನಾಗರಹಾವಿನೊಡನೆ ನನ್ನ ಮುಖಾಮುಖಿ ನಡೆದಿದೆ. ಅದು ಸಿಂಬೆಸುತ್ತಿ, ಹೆಡೆಎತ್ತಿ, ಅಲ್ಲಾಡದೆ ಕುಳಿತಿದೆ. ಎರಡಡಿ ದೂರದಲ್ಲಿ ನನ್ನ ಮುಂದೆಯೇ ನನ್ನನ್ನೇ ನೋಡುತ್ತಿದೆ. ಭಯಾಕ್ರಾಂತನಾಗಿ ತಕ್ಷಣ ಮತ್ತೆ ಕಣ್ಣುಮುಚ್ಚಿಕೊಂಡೆ. ಏನು ಮಾಡಲೂ ತೋಚಲಿಲ್ಲ. ಕೆಲವು ಸೆಕೆಂಡುಗಳ ನಂತರ ಕಣ್ಣುಬಿಟ್ಟು ನೋಡಿದೆ. ಅಲುಗಾಡಿಲ್ಲ ಅದು! ನೆಗೆದೆದ್ದು ಮಿಂಚಿನ ವೇಗದಲ್ಲಿ ಓಟಕಿತ್ತೆ. ಕೆಲವು ಗಜಗಳಷ್ಟು ದೂರ ಹೋಗಿ ತಿರುಗಿ ನೋಡಿದೆ. ನಾಗರ ಆಗಷ್ಟೇ ಪೊದೆಯತ್ತ ತೆವಳತೊಡಗಿತ್ತು.
ಗುರುಗಳ ಬಳಿ ಹಿಂತಿರುಗಿ ನಡೆದದ್ದನ್ನು ವಿವರಿಸಿದೆ. ನಕ್ಕು ಅವರು ಹೇಳಿದ್ದೆಂದರೆ, 'ಆಳವಾದ ಧ್ಯಾನದಲ್ಲಿರುವವರ ಸಮೀಪದಲ್ಲಿ ಧ್ಯಾನಾವಸ್ಥೆಯನ್ನು ತಲುಪುವುದು ಯಾವುದೇ ಜೀವಂತ ಪ್ರಾಣಿಗೆ ಸಹಜವಾದುದು......'
ಸ್ವಾಮಿ ರಾಮ ಅವರು ತಮಗೆ ಹಾವುಗಳೊಡನೆ ಉಂಟಾದ ಮತ್ತೊಂದು ಕರಾಳ ಅನುಭವವನ್ನು ಈ ಅಧ್ಯಾಯದಲ್ಲೆ ವಿವರಿಸಿದ್ದಾರೆ. ಒಮ್ಮೆ ಅವರನ್ನು ದಕ್ಷಿಣ ಭಾರತಕ್ಕೆ ಒಮ್ಮೆ ಕಳುಹಿಸುತ್ತಾರೆ. ಚಳಿ-ಮಳೆಗಳ ಒಂದು ಸಂಜೆ ದೇವಸ್ಥಾನವೊಂದರಲ್ಲಿ ಆಶ್ರಯ ಕೇಳಲು ಹೋಗುತ್ತಾರೆ. ಅಲ್ಲಿದ್ದವರು, 'ನೀನೊಬ್ಬ ಸ್ವಾಮಿಯಾಗಿದ್ದರೆ, ನಿನಗೆ ಆಶ್ರಯ ಏಕೆ ಬೇಕು?' ಎಂದು ಕೇಳುತ್ತಾರೆ. ಅಷ್ಟರಲ್ಲಿ ಒಳಗಿನಿಂದ ಬಂದ ಒಂದು ಹೆಂಗಸು ತಾನು ಜಾಗಕೊಡುವುದಾಗಿ ತಿಳಿಸಿ ಕರೆದುಕೊಂಡು ಹೋಗಿ ಒಂದು ಚಿಕ್ಕ ಗುಡಿಸಲಿಗೆ ಬಿಡುತ್ತಾರೆ. ಬೆಳಕೇ ಇಲ್ಲದ ಆ ಗುಡಿಸಲಿನಲ್ಲಿ ಬಾಗಿಲ ಸಂದಿಯಿಂದ ಬರುತ್ತಿದ್ದ ಮಬ್ಬು ಬೆಳಕಿನಲ್ಲಿ ಗಮನಿಸಿದಾಗ, ಒಂದು ನಾಗರಹಾವು ಅವರ ಮುಂದೇ ತೆವಳಿಕೊಂಡು ಬರುತ್ತಿರುತ್ತದೆ. ಇನ್ನೊಂದು ಪಕ್ಕದಲ್ಲಿದ್ದು ಕೋಣೆಯ ತುಂಬಾ ಹಲವಾರು ಹಾವುಗಳಿರುವುದು ಕಂಡುಬರುತ್ತದೆ! ತಾವು ಒಂದು ಹಾವುಗಳ ದೇವಾಲಯಕ್ಕೆ ಬಂದಿರುವುದಾಗಿ ಅವರಿಗೆ ತಿಳಿಯುತ್ತದೆ. ತನ್ನನ್ನು ಆಕೆಯು ನಿಜವಾದ ಸ್ವಾಮಿ ಹೌದೋ ಅಲ್ಲವೋ ಎಂದು ತಿಳಿಯಬಯಸಿರಬಹುದು ಎಂದುಕೊಳ್ಳುತ್ತಾರಾದರೂ ಆ ಅಪಾಯಕಾರೀ ಸನ್ನಿವೇಶದಿಂದ ವಿಪರೀತ ಭಯವಾಗುತ್ತದೆ. ತಾನೇನಾದರೂ ಇಲ್ಲಿಂದ ಓಡಿಹೋದರೆ ಆಕೆಯು ಇನ್ನು ಮುಂದೆ ಯಾವ ಸ್ವಾಮಿಗೂ ಭಿಕ್ಷೆ ಹಾಕುವುದಿಲ್ಲವೆಂದು ಯೋಚಿಸಿ ಒಂದು ವೇಳೆ ತಾನು ಸತ್ತರೂ ಕೊನೇಪಕ್ಷ ವೈರಾಗ್ಯದ ತತ್ವಗಳಿಗೆ ಕುಂದು ಉಂಟಾಗುವುದಿಲ್ಲವೆಂದು ತೀರ್ಮಾನಿಸಿಕೊಳ್ಳುತ್ತಾರೆ. ತಮ್ಮ ಗುರುಗಳು ಹೇಳಿದ್ದ ಮಾತುಗಳನ್ನು ನೆನಪುಮಾಡಿಕೊಂಡು ಇಡೀ ರಾತ್ರಿ ನಿಶ್ಚಲವಾಗಿ ನೋಡುತ್ತಾ ಕುಳಿತುಕೊಳ್ಳುತ್ತಾರೆ. ?ಧ್ಯಾನ ಮಾತ್ರ ಸಾಧ್ಯವಾಗಲಿಲ್ಲ. ಹಾವಿನ ಧ್ಯಾನ ಮಾಡಿದೆ ಅಷ್ಟೆ!' ಎಂದಿದ್ದಾರೆ.
ಈ ಎರಡು ಅನುಭವಗಳ ನಂತರವೂ ಅವರಿಗೆ ಹಾವಿನಭಯವು ಹಾಗೆಯೇ ಮುಂದುವರೆಯುತ್ತದೆ. ಅದರಿಂದ ಮುಕ್ತರಾಗಲು ಅವರ ಪ್ರಯತ್ನವು ಹೆಚ್ಚಾದಂತೆ ಭೀತಿಯೂ ಬಲಗೊಳ್ಳುತ್ತದೆ. ಅದು ಎಷ್ಟೊಂದು ಬಲಯುತವಾಗಿತ್ತೆಂದರೆ ಯಾವುದೇ ಶಬ್ದ ಆದ ತಕ್ಷಣ ಹಾವುಗಳ ಯೋಚನೆ ಮನಸ್ಸಿನಲ್ಲಿ ಮೂಡುವಂತಾಗುತ್ತದೆ. ಧ್ಯಾನಕ್ಕೆ ಕುಳಿತಾಗ ಆಗಾಗ ಕಣ್ಣುಬಿಟ್ಟು ಸುತ್ತಮುತ್ತ ನೋಡುವುದು, ಎಲ್ಲಿಗೆ ಹೋದರೂ ಹಾವಿದೆಯಾ ಎಂದು ಹುಡುಕುವುದನ್ನು ಪ್ರಾರಂಭಿಸುತ್ತಾರೆ. ಕೊನೆಗೆ, 'ನೀನು ಈ ಭೀತಿಯನ್ನು ಕಿತ್ತು ಒಗೆದುಬಿಡು, ಈ ಪ್ರಯತ್ನದಲ್ಲಿ ನೀನು ಸತ್ತರೂ ಸರಿ. ಇದು ನಿನ್ನ ಬೆಳವಣಿಗೆಗೆ ಒಳ್ಳೆಯದಲ್ಲ. ನಿನ್ನನ್ನು ಪ್ರೀತಿಸುವ, ಗೌರವಿಸುವ ಹಾಗೂ ಅವಲಂಬಿಸುವ ಮಂದಿಗೆ ಹೇಗೆ ಮಾರ್ಗದರ್ಶನ ನೀಡಬಲ್ಲೆ? ನೀನೇ ಭೀತನಾಗಿದ್ದೀಯೆ, ಹಾಗಿದ್ದರೂ ಜನರಿಗೆ ಮಾರ್ಗದರ್ಶನ ನೀಡುತ್ತಿದ್ದೀಯೆ-ಆಶಾಢಭೂತಿ' ಎಂದು ಮನಸ್ಸಿನಲ್ಲೇ ಹೇಳಿಕೊಂಡು ಗುರುಗಳ ಬಳಿಗೆ ಹೋಗುತ್ತಾರೆ. ಅವರ ಸಮಸ್ಯೆಯನ್ನು ಅರಿತಿದ್ದ ಗುರುಗಳು, 'ಈ ಭಯವನ್ನು ನನಗೆ ತಿಳಿಸದೆ ಮುಚ್ಚಿಟ್ಟಿದ್ದಾದರೂ ಏಕೆ?'ಎಂದು ಕೇಳಿ ತಮ್ಮೊಂದಿಗೆ ಕಾಡಿಗೆ ಕರೆದುಕೊಂಡು ಹೋಗಿ, ಬೆಳಗಿನ ಮೂರೂವರೆ ಗಂಟೆಗೆ ಎದ್ದುಹೋಗಿ ಪತ್ರೆ-ಪುಷ್ಪಗಳನ್ನು ತರಲು ಹೇಳುತ್ತಾರೆ. ಮಾರನೇ ಬೆಳಿಗ್ಗೆ ಪತ್ರೆ-ಪುಷ್ಪಗಳನ್ನು ಕಿತ್ತು ತರುವಾಗ ಅದರೊಳಗೆ ಒಂದು ನಾಗರಹಾವು ಇದ್ದದ್ದು ಗೊತ್ತಾಗುತ್ತದೆ! ತಾನು ಕೈಯಲ್ಲಿ ಹಿಡಿದಿರೋದು ಸಾವನ್ನು ಎಂದು ಮನಸ್ಸು ಹೇಳಿದಾಗ ಕೈಗಳು ನಡುಗಿ, ಹೆದರಿ ಕಂಗಾಲಾಗಿ ಕುಸಿದು ಬೀಳುವುದರಲ್ಲಿದ್ದ ಅವರ ಬಳಿ ಗುರುಗಳು ಬಂದು, 'ಅದು ನಿನ್ನನ್ನು ಕಚ್ಚುವುದಿಲ್ಲ,? ಎನ್ನುತ್ತಾರೆ. 'ನೀನು ಹಾವನ್ನು ಏಕೆ ಪ್ರೀತಿಸೋದಿಲ್ಲ?' ಎಂದು ಕೇಳುತ್ತಾರೆ.
'ಭಯದ ಪ್ರಭಾವದಲ್ಲಿದ್ದಾಗ ಯಾವುದನ್ನಾದರೂ ಪ್ರೀತಿಸೋದು ಹೇಗೆ?'
'ನೋಡು ಅದು ಎಷ್ಟೊಂದು ಸುಂದರ ಪ್ರಾಣಿ. ಎಲ್ಲಾ ಕಡೆ ಹರಿದಾಡುತ್ತೆ. ಆದರೂ ಎಷ್ಟೊಂದು ಶುದ್ಧವಾಗಿ, ಅಂದವಾಗಿ ಇದೆ. ನೀನು ಪ್ರತಿದಿನ ಸ್ನಾನ ಮಾಡಿದರೂ ಅಷ್ಟು ಚೊಕ್ಕಟವಾಗಿ ಇರಲಾರೆ. ಪ್ರಪಂಚದಲ್ಲಿ ಹಾವು ಅತ್ಯಂತ ಚೊಕ್ಕಟವಾದ ಪ್ರಾಣಿ.'
'ಇದು ಶುದ್ಧವಾಗಿದೆ. ಆದರೆ ಅಪಾಯಕಾರಿ.'
'ಮನುಷ್ಯ ಅತಿಕೊಳಕ ಹಾಗೂ ಹಾವಿಗಿಂತಲೂ ಅಪಾಯಕಾರೀ ವಿಷಜಂತು. ಆತ ಬೇರೆಯವರನ್ನು ಕೊಲ್ಲಬಲ್ಲ. ಆತ ಪ್ರತಿದಿನ ಕೋಪ ಹಾಗೂ ಇನ್ನಿತರ ಭಾವನೆಗಳ ಮೂಲಕ ವಿಷವನ್ನು ತನ್ನ ಆಸುಪಾಸಿನವರ ಮೇಲೆ ಕಾರುತ್ತಾನೆ. ಹಾವು ಯಾವತ್ತೂ ಹಾಗೆ ಮಾಡುವುದಿಲ್ಲ. ಹಾವು ಸ್ವರಕ್ಷಣೆಯ ಸಂದರ್ಭಗಳಲ್ಲಿ ಮಾತ್ರ ಕಚ್ಚುತ್ತದೆ. ನೀನು ಗಾಢ ನಿದ್ರೆಯಲ್ಲಿದ್ದಾಗ ನಿನ್ನ ಬೆರಳು ಕಣ್ಣುಗಳನ್ನು ತಿವಿಯುತ್ತದೇನು? ನಿನ್ನ ಹಲ್ಲುಗಳು ನಿನ್ನ ನಾಲಿಗೆಯನ್ನು ಕಚ್ಚುತ್ತವೇನು? ಎಲ್ಲಾ ಭಾಗಗಳೂ ಒಂದು ದೇಹಕ್ಕೆ ಸಂಬಂಧಪಟ್ಟವು ಎಂಬ ಒಟ್ಟಾರೆ ಗ್ರಹಿಕೆ ಇರುತ್ತದೆ. ಎಲ್ಲ ಜೀವಜಾತಗಳೂ ಒಂದೇ ಎಂಬಂಥಾ ಗ್ರಹಿಕೆ ಮೂಡಿದ ದಿನ, ಯಾವ ಜೀವಿಗೂ ನಾವು ಹೆದರುವುದಿಲ್ಲ.'
ಹಾವನ್ನು ಹಿಡಿದೇ ನಿಂತಿದ್ದ ಸ್ವಾಮಿ ರಾಮರಿಗೆ ಗುರುಗಳ ಮಾತನ್ನು ಕೇಳುತ್ತಾ ಭೀತಿಯ ಭಾವನೆ ಇಳಿಮುಖವಾಗುತ್ತಾ ಬರುತ್ತದೆ. 'ನಾನು ಹಾವುಗಳನ್ನು ಸಾಯಿಸದೇ ಹೋದರೆ, ಹಾವು ನನ್ನನ್ನು ಏಕೆ ಸಾಯಿಸುತ್ತದೆ? ಹಾವುಗಳು ಕಾರಣವಿಲ್ಲದೇ ಯಾರನ್ನೂ ಕಚ್ಚುವುದಿಲ್ಲ. ನನ್ನನ್ನು ಏಕೆ ಕಚ್ಚುತ್ತವೆ? ನಾನ್ಯಾರು? ಇತ್ಯಾದಿಯಾಗಿ ಯೋಚಿಸತೊಡಗಿದೆ. ನನ್ನ ಮನಸ್ಸು ಕ್ರಮೇಣ ಸಹಜ ಸ್ಥಿತಿಗೆ ಬರತೊಡಗಿತು. ಈ ಅನುಭವದ ನಂತರ ಹಾವುಗಳ ಭೀತಿ ಮತ್ತೆ ನನ್ನನ್ನು ಕಾಡಲಿಲ್ಲ.' ಎಂದು ಹೇಳುತ್ತಾರೆ.

***********************************************

Wednesday, July 13, 2011

ಮನದ ಅಂಗಳದಿ.........೪೮. ಮತ್ತೆ ಮತ್ತೆ ಕಾಡುವ 'ಅಹಂ’


ಈ ಮೊದಲಿಗೆ 'ಅಹಂಕಾರ’ದ ಬಗ್ಗೆ ಬರೆದ ಲೇಖನವನ್ನು ನನ್ನ ಬ್ಲಾಗ್ 'ಪ್ರತೀಕ್ಷೆ’ಯಲ್ಲಿ ಹಾಕಿದಾಗ ಸಹ ಬ್ಲಾಗಿಗರೊಬ್ಬರು ಪ್ರತಿಕ್ರಿಯಿಸುತ್ತಾ ಈ ರೀತಿಯಾಗಿ ಬರೆದಿದ್ದರು,

'.............ನಮ್ಮೊಳಗಿನ ಅಹಂಕಾರ ನಮ್ಮ ವಿಶಾಲ ಅರಿವಿಗೆ ಧಕ್ಕೆ ತರುತ್ತದೆ. ಬೇರೆಯವರು ನಮ್ಮ ತಪ್ಪುಗಳನ್ನು ತಿದ್ದಿದಾಗ ನಮ್ಮ 'ಅಹಂ’ ಅದಕ್ಕೆ ಆಸ್ಪದ ಕೊಡುವುದಿಲ್ಲ. ಈ 'ಅಹಂ’ ಕಳೆದುಕೊಳ್ಳುವುದು ಸುಲಭದ ಕೆಲಸವಲ್ಲ. ಒಂದೊಮ್ಮೆ 'ಅಹಂ’ ಕಳೆದುಬಿಟ್ಟರೆ ಷಡ್ವರ್ಗಗಳಲ್ಲಿ ಅರ್ಧ ಗೆದ್ದಂತೆಯೇ ಆಗುತ್ತದೆ. ವಿಪರ್ಯಾಸವೆಂದರೆ ಸುಮಾರಾದ ಸನ್ಯಾಸಿಗಳಿಗೂ ಅಹಮಿಕೆ ಹೋಗಿರುವುದಿಲ್ಲ!.......’

ಅವರ ಅನುಭವ ಪೂರ್ಣ ಮಾತುಗಳಲ್ಲಿದ್ದ ಸತ್ಯ ಚಿಂತನಾರ್ಹವಾಗಿತ್ತು. ಅದರಲ್ಲೂ 'ಸನ್ಯಾಸಿ’ ಹಾಗೂ 'ಅಹಮಿಕೆ’ ನಿಜವಾದ ವಿಪರ್ಯಾಸವೇ ಎನಿಸಿತು! ಸರ್ವಸಂಗ ಪರಿತ್ಯಾಗಿಯಾದ ಸನ್ಯಾಸಿಯಲ್ಲಿಯೂ ಅಹಮಿಕೆ ಇರಲು ಸಾಧ್ಯವೆ? ಇದ್ದರೆ ಅದೆಂಥಾ ವಿರೋಧಾಭಾಸ ಎಂದುಕೊಂಡಿದ್ದೆ. ಈಗ ಸ್ವಾಮಿ ರಾಮ ಅವರ ಆಧ್ಯಾತ್ಮಿಕ ಅನುಭವಗಳ ಬಗ್ಗೆ ಓದುವಾಗ ಅವರು ಪ್ರಾರಂಭಿಕ ಹಂತಗಳಲ್ಲಿ ತಮ್ಮಲ್ಲಿಯೂ ನೆಲೆಯೂರುತ್ತಿದ್ದ ಅಹಂಕಾರ, ಅದನ್ನು ಮೀರಿ ನಿಲ್ಲುವಲ್ಲಿನ ಪ್ರಯತ್ನಗಳಲ್ಲಿ ವಿಶೇಷ ಮಾರ್ಗದರ್ಶನ ನೀಡಿದ ಅವರ ಗುರುಗಳ ಅಮೂಲ್ಯ ಸಲಹೆಗಳ ಬಗ್ಗೆ ತಿಳಿಸಿರುವುದು ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಅವರ ಅನುಭವಗಳು ಹಾಗೂ ಅನುಭವಪೂರ್ಣ ಮಾತುಗಳು ಈ ರೀತಿಯಾಗಿವೆ:

'.....ಸಮೀಪದ ಒಂದು ಗುಹೆಯಲ್ಲಿ ಇದ್ದ ಪ್ರಭಾತಸ್ವಾಮಿಯೆಂಬ ಮಹಾನ್ ವಿರಾಗಿಯೊಬ್ಬರನ್ನು ಭೇಟಿಮಾಡಲು ಹೋದೆ. ಆ ಸಮಯದಲ್ಲಿ ಸ್ವಾಮಿಯಾಗಲು ನನಗೆ ತರಬೇತಿ ಕೊಡಲಾಗುತ್ತಿತ್ತು. ನಮ್ಮ ಪದ್ಧತಿಯ ಪ್ರಕಾರ ನಾನವರಿಗೆ ಗೌರವ ಸಲ್ಲಿಸಿದೆ. ನಾಲ್ಕುಮಡಿ ಮಡಚಿದ ಒಂದು ಜಮಖಾನದ ಮೇಲೆ ಸ್ವಾಮಿ ಕುಳಿತಿದ್ದರು. ಎದುರಿಗೆ ಒಂದಷ್ಟು ಜನ ಹಳ್ಳಿಗರು ಕುಳಿತಿದ್ದರು. ಅವರು ತಮ್ಮ ಪಕ್ಕದಲ್ಲಿ ಕುಳಿತುಕೊಳ್ಳಲು ಸ್ಥಳಾವಕಾಶ ಕೊಡುತ್ತಾರೆಂಬ ನಿರೀಕ್ಷೆ ನನ್ನದು. ನಾನಿನ್ನೂ ಅಹಂಕಾರದಿಂದ ಬೀಗುವ ತೊಳಲಾಟದಲ್ಲೇ ಇದ್ದೆ. ಭಾಗಷಃ ಕಾರಣ ಹೀಗಿದೆ: ಭಾರತದ ಹಳ್ಳಿಗರು ಸ್ವಾಮಿಯೊಬ್ಬನನ್ನು ಕಂಡಾಗ ಬಾಗಿ ನಮಸ್ಕರಿಸಿ ಗೌರವಿಸುತ್ತಾರೆ. ತರಬೇತಿಯ ಪ್ರಾರಂಭಿಕ ಸ್ಥಿತಿಯಲ್ಲಿರುವ ಸ್ವಾಮಿಗೆ ಇದು ಅಹಂಕಾರವನ್ನು ತುಂಬುವುದಲ್ಲದೇ ಹಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ......’

ಪ್ರಭಾತಸ್ವಾಮಿಯವರು ಸ್ಥಳಾವಕಾಶಕ್ಕಾಗಿ ಇವರ ಆಗ್ರಹವನ್ನು ಕೇಳಿ ನಕ್ಕು ಇನ್ನೊಂದು ಘಟನೆಯನ್ನು ವಿವರಿಸುವುದರ ಮೂಲಕ ಅಹಂಕಾರದ ಕೆಡುಕಿನ ಬಗ್ಗೆ ಸೂಚ್ಯವಾಗಿ ತಿಳಿಸುತ್ತಾರೆ. ಈ ಘಟನೆಯನ್ನು ವಿಶ್ಲೇಷಿಸುತ್ತಾ ಸ್ವಾಮಿ ರಾಮರವರು,

'ಅಹಂಕಾರವು ಜ್ಞಾನಾರ್ಥಿ ಹಾಗೂ ಜ್ಞಾನ ಮಾರ್ಗಗಳ ನಡುವೆ ತೆರೆಯೆಳೆಯುತ್ತದೆ. ವ್ಯಕ್ತಿಯು ಅಹಂಕಾರಿಯಾದಾಗ ಆತ ತನ್ನನ್ನೇ ತಾನು ಒಂಟಿಯಾಗಿಸಿಕೊಳ್ಳುತ್ತಾನೆ. ಹೀಗಾಗಿ ಗುರುಗಳೊಡನೆ ಹಾಗೂ ತನ್ನದೇ ಅಂತರಂಗದೊಡನೆ ಸಂವಹನೆಗೆ ಅಸಮರ್ಥನಾಗುತ್ತಾನಲ್ಲದೇ ಗುರುಬೋಧನೆಯ ಪ್ರಕಾರ ನಡೆದುಕೊಳ್ಳಲಾರ. ಇಂಥಾ ಒಂದು 'ಅಹಂ’ ತೀವ್ರವಾದ ಕಟ್ಟುನಿಟ್ಟುಗಳಿಗೆ ಒಳಗಾಗಬೇಕಾಗುತ್ತದೆ. ಇಲ್ಲದಲ್ಲಿ ಎಲ್ಲ ಜ್ಞಾನವೂ ಹಾಳಾಗಿಬಿಡುತ್ತದೆ.’ ಎನ್ನುತ್ತಾರೆ.

ಒಮ್ಮೆ ಅಹಂಕಾರದ ಪರಾಕಾಷ್ಟೆಗೆ ತಲುಪಿದಾಗ ತಾವು ಅನುಭವಿಸಬೇಕಾದ ನೋವಿನ ಬಗ್ಗೆ ಹಾಗೂ ಅದರಿಂದ ತಾವು ಕಲಿತ ಪಾಠದ ಬಗ್ಗೆ ಹೇಳುತ್ತಾ ಹೀಗೆ ತಿಳಿಸುತ್ತಾರೆ,

'......ಆಗತಾನೇ ಸ್ವಾಮಿಯಾಗಿ ದೀಕ್ಷೆ ಪಡೆದಿದ್ದರೂ ನಾನೂ ಪ್ರತಿದಿನ ಪಾಠ ಹೇಳುತ್ತಿದ್ದೆ. ವಿದ್ಯಾರ್ಥಿಗಳೂ ಆಗಾಗ ಬೋಧಕರಿಗೆ ಸಮಸ್ಯೆಯೊಡ್ಡುತ್ತಾರೆ. ಉದಾಹರಣೆಗೆ ಅವರು ಬೋಧಕರನ್ನು ತಮಗಿಂತಲೂ ಮೇಲ್ದರ್ಜೆಯಲ್ಲಿಡುತ್ತಾರಾಗಿ ಸಂವಹನೆ ಸೀಮಿತವಾಗುತ್ತದೆ. ನನ್ನ ವಿದ್ಯಾರ್ಥಿಗಳು ಎತ್ತರದ ಒಂದು ವೇದಿಕೆಯನ್ನು ನಿರ್ಮಿಸಿ ಅದರ ಮೇಲೆ ಕುಳಿತುಕೊಳ್ಳುವಂತೆ ನನಗೆ ಹೇಳಿದರು. ನನಗೆ ಇಷ್ಟೊಂದು ಅನುಯಾಯಿಗಳ ಸಮೂಹ ಇದೆಯೆಂಬ ಕಾರಣದಿಂದ ಮಿತಿಮೀರಿ ಹೆಮ್ಮೆ ಪಟ್ಟುಕೊಂಡೆ. ಅನನುಭವಿಗಳಾದ ನೀವು ಹೆಸರು ಮತ್ತು ಕೀರ್ತಿಗಾಗಿ ಹಂಬಲಿಸಿದಾಗ ಹೀಗಾಗುತ್ತದೆ. ಅನುಯಾಯಿಗಳ ಸಂಖ್ಯೆ ಹೆಚ್ಚಾದ ಹಾಗೆಲ್ಲಾ ವ್ಯಕ್ತಿಯ ಅಹಂಭಾವದ ಪ್ರಮಾಣವೂ ಬೆಳೆಯುತ್ತಾ ಹೋಗುತ್ತದೆ.’

ಅಲ್ಲಿನ ಶಿಷ್ಯರ ನಡುವೆ ಒಬ್ಬ ಸ್ವಾಮಿಯೂ ಒಂದು ಮೂಲೆಯಲ್ಲಿ ತೆಪ್ಪಗೆ ಕುಳಿತುಕೊಳ್ಳುತ್ತಿರುತ್ತಾರೆ. ಆತನೇನೂ ಬುದ್ಧಿವಂತನಲ್ಲ ಎಂದು ಇವರು ಭಾವಿಸಿ ಇಡೀ ದಿನ ಅವರನ್ನು ಕೆಲಸಕ್ಕೆ ಹಚ್ಚುತ್ತಿರುತ್ತಾರೆ. ಒಂದು ಬೆಳಿಗ್ಗೆ ಗಂಗಾತೀರದಲ್ಲಿ ಹಲ್ಲುಜ್ಜುತ್ತಾ, 'ಹೋಗಿ ನೀರು ತೆಗೆದುಕೊಂಡು ಬಾ,’ ಎಂದು ಆಜ್ಞೆ ಮಾಡುತ್ತಾರೆ. ಇವರ ಮಿತಿಮೀರಿದ ಅಹಂಕಾರವನ್ನು ಸಾಕಷ್ಟು ಅನುಭವಿಸಿದ್ದ ಆತ, 'ಉಜ್ಜುತ್ತಲೇ ಇರು’ ಎಂದು ಹೇಳಿದಾಗ ಹೊತ್ತುಗೊತ್ತಿನ ಪರಿವೇ ಇಲ್ಲದೇ ಉಜ್ಜುತ್ತಲೇ ಇದ್ದು ತನಗೇನಾಗುತ್ತಿದೆ ಎನ್ನುವ ಅರಿವನ್ನೇ ಕಳೆದುಕೊಳ್ಳುತ್ತಾರೆ. ಎರಡು ದಿನಗಳ ನಂತರ ಅಲ್ಲೇ ಬಿದ್ದಿದ್ದ ಇವರನ್ನು ಕೆಲವರು ನೋಡಿದಾಗ ಅಪ್ರಜ್ಞಾವಸ್ಥೆಯಲ್ಲಿಯೂ ಇವರು ಹಲ್ಲನ್ನು ಉಜ್ಜುತ್ತಲೇ ಇದ್ದು ವಸಡು, ಮುಖವೆಲ್ಲಾ ಊದಿಕೊಂಡು ದವಡೆಗಳು ಅಲ್ಲಾಡಿಸಲಾಗದಂತಾಗಿರುತ್ತದೆ. ಇವರ ಗುರುಗಳು ಬಂದು ಇವರನ್ನು ಎಬ್ಬಿಸಿ ಬುದ್ದಿಮಾತುಗಳನ್ನು ಹೇಳುತ್ತಾ ಹೀಗೆ ತಿಳಿಸುತ್ತಾರೆ,

'.....ಅಹಂ ಹಾಗೂ ಹೆಮ್ಮೆ ಇವು ನಿನ್ನ ಜೀವನದಲ್ಲಿ ಎರಡು ಎಡವುಗಲ್ಲುಗಳು. ವಿನೀತನಾಗದೇ ಹೋದಲ್ಲಿ ನೀನು ಕಲಿಯಲಾರೆ. ನಿನ್ನ ಬೆಳವಣಿಗೆ ಕೇವಲ ಬೂಟಾಟಿಕೆಯಾಗುತ್ತದೆ.....’

ಆಧ್ಯಾತ್ಮಿಕ ಪಥಗಾಮಿಯಾಗಿ ಹೊರಟವರಿಗೆ ವಿನಯಶೀಲತೆ ಅತ್ಯಗತ್ಯವಾದ್ದು. ಅಹಂಕಾರವು ಪ್ರತಿಂಧಕಗಳನ್ನು ನಿರ್ಮಿಸುತ್ತದೆ. ಆಗ ತಾರತಮ್ಯಜ್ಞಾನ ಕಳೆದುಹೋಗುತ್ತದೆ. ತಾರತಮ್ಯಜ್ಞಾನವನ್ನು ತೀಕ್ಷ್ಣಗೊಳಿಸದಿದ್ದಲ್ಲಿ ವಿವೇಚನಾ ಶಕ್ತಿಯು ಕೈಕೊಡುತ್ತದಲ್ಲದೆ ಮನಸ್ಸಿಗೆ ಮೋಡ ಮುಸುಕುತ್ತದೆ.....ಪ್ರಜ್ಞಾಸ್ಥತಿಯೆಂಬ ಸಾಗರದಲ್ಲಿನ ಅಹಂ ಹುಟ್ಟಡಗಿಹೋಗಿರುವ ಬಗ್ಗೆ ಸ್ಪಷ್ಟಪಡಿಸಿಕೊಳ್ಳಿ. ಹೃದಯದ ಒಳಗಿನ ಕತ್ತಲೆಯ ಕೋಣೆಯಲ್ಲಿ ಅದು ಎಲ್ಲಾದರೂ ಅಡಗಿ ಕುಳಿತಿಲ್ಲ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ. ಅಹಮಿನ ದಾರಿಗಳು ಹಲವಾರು, ರೂಪಗಳು ಅಸಂಖ್ಯಾತ. ಪ್ರೇಮಪೂರಿತ ಕೃತಿಯು ಶಾಶ್ವತತೆಯ ಹಾಗೂ ನಿರಂತರ ಆನಂದದ ಮಿನುಗು ನೋಟವನ್ನು ನೀಡುತ್ತದೆ.

'ಆತ್ಮವಿಶ್ವಾಸ ನನ್ನದಾಗಲಿ ಆದರೆ ಅಹಂಕಾರ ನನ್ನ ಬಳಿ ಸುಳಿಯುವುದೂ ಬೇಡ,’ ಎನ್ನುವುದು ನನ್ನ ನಿರಂತರ ಹಂಬಲ. ನನಗೆ ಏನಾದರೂ ತೊಂದರೆಯಾದಾಗ ಅಥವಾ ಕೆಟ್ಟದಾದಾಗ, 'ಬಹುಷಃ ನನ್ನಲ್ಲಿ ಉದ್ಭವಿಸುತ್ತಿರಬಹುದಾದ 'ಅಹಂ’ಅನ್ನು ತಡೆಯಲೆಂದೇ ನನಗೆ ಈ ರೀತಿಯ ಕಷ್ಟವುಂಟಾಯಿತೇನೋ ಎಂದುಕೊಳ್ಳುತ್ತೇನೆ. ಈ ಬಗ್ಗೆ ಸ್ವಾಮಿ ರಾಮ ಅವರು ಹೀಗೆ ಹೇಳುತ್ತಾರೆ: 'ನಾನು ಅಹಂಕಾರಿಯಾದಾಲೆಲ್ಲಾ ನೆಲ ಕಚ್ಚಿದ್ದೇನೆ. ಇದು ನನ್ನ ಅನುಭವ.

'ಪ್ರಯತ್ನಶೀಲನಾಗು, ಆದರೆ ಅಹಂಭಾವವನ್ನು ಬೆಳೆಸಿಕೊಂಡಾಗ, ಸ್ವಾರ್ಥ ಸಾಧನೆಯ ಪ್ರಯತ್ನ ಮಾಡಿದಾಗ, ನೀನು ಊರ್ಜಿತನಾಗುವುದಿಲ್ಲ. ಇದು ನನ್ನ ಶಾಪ.' ಎಂದು ನನ್ನ ಗುರುಗಳು ಹೇಳಿದರು.....ಅವರೇ ಮಾತು ಮುಂದುವರೆಸಿ, 'ನಿನಗಿದು ನಾನು ಮಾಡ್ತಿರೋ ಆಶೀರ್ವಾದ. ನೀನು ನಿಸ್ವಾರ್ಥಿ, ಕರುಣಿ, ಹಾಗೂ ನಿರಹಂಕಾರಿ ಆಗುವುದನ್ನು ಬಯಸಿದಾಗಲೆಲ್ಲಾ ಒಂದು ಮಹತ್ತರ ಶಕ್ತಿ ನಿನ್ನ ಹಿಂದಿರುವುದನ್ನು ಕಾಣುತ್ತೀಯಲ್ಲದೇ ಏನಾದರೂ ಒಳಿತನ್ನು ಸಾಧಿಸುವುದರಲ್ಲಿ ಸಫಲನಾಗುತ್ತೀಯ' ಎಂದರು.

ನಿಸ್ವಾರ್ಥತೆಯನ್ನು ರೂಢಿಸಿಕೊಳ್ಳುವುದರಿಂದ ಅಹಂಭಾವವನ್ನೂ ಶುದ್ಧಿಗೊಳಿಸಬಹುದು. ದುರಹಂಕಾರವು ಆತ್ಮಘಾತುಕವಾದ ಒಂದು ಅನಿಷ್ಟ.....ಅಹಂಕಾರಿಯಾದ ಯಾರೊಬ್ಬರೂ ಪ್ರಜ್ಞೆಯನ್ನು ರೂಢಿಸಿಕೊಳ್ಳಲಾರರು. ತಮ್ಮ ಅಹಮಿಕೆಯ ಕಾರಣದಿಂದಾಗಿ ತಮ್ಮ ಸುತ್ತಲೂ ಸೀಮಾಬಂಧನವನ್ನು ರೂಪಿಸಿಕೊಳ್ಳುವವರು ನಿಶ್ಚಿತವಾಗಿಯೂ ಸಂಕಷ್ಟಗಳಿಗೆ ಒಳಗಾಗುತ್ತಾರೆ. ಆದರೆ ಬೇರೆಯವರೊಂದಿಗಿನ ಅಖಂಡತ್ವದ ಅರಿವನ್ನು ಸದಾ ಹೊಂದಿರಲು ಪ್ರಯತ್ನಿಸುವವರು ಜೀವನದ ಪ್ರತಿಕ್ಷಣವನ್ನೂ ಆನಂದದಿಂದಲೂ ನಿರ್ಭೀತಿಯಿಂದಲೂ ಅನುಭವಿಸುತ್ತಾ ಇರಬಲ್ಲರು. ಪ್ರೀತಿ, ವಿನಯ, ನಿಸ್ವಾರ್ಥತೆ ಈ ಗುಣಸ್ವಭಾವಗಳವರೇ ಮನುಕುಲಕ್ಕೆ ನಿಜವಾದ ಉಪಕಾರಿಗಳು.’

ಅಸಂಖ್ಯಾತ ರೂಪಗಳನ್ನು ಹೊತ್ತು, ಹಲವಾರು ಮಾರ್ಗಗಳಿಂದ ನಮ್ಮನ್ನಾಕ್ರಮಿಸಲು ಹೊಂಚುಹಾಕುತ್ತಿರುವ 'ಅಹಂ’ಅನ್ನು ನಮ್ಮಲ್ಲಿ ನಾವೇ ಗುರುತಿಸಿಕೊಂಡು ನಿವಾರಿಸಿಕೊಳ್ಳುವ ಸತತ ಪ್ರಯತ್ನ ನಮ್ಮದಾಗಲಿ.

Friday, July 8, 2011

ಮನದ ಅಂಗಳದಿ.....

ಬೆಳೆ ಇಲ್ಲದ ಜಾಗದಲ್ಲಿ

ಬೆಳೆವುದು ಕಳೆ

ಯಥೇಚ್ಚ

ಪೈರನ್ನೇ ಹಿಮ್ಮೆಟ್ಟಿಸಿ

ಹುಲುಸಾಗುವಲ್ಲೇ

ವಿಕಟಾಟ್ಟಹಾಸ


ಉಳಿವಿಗಾಗಿ

ಪೈಪೋಟಿಯಲ್ಲಿ

ಸಮರ್ಥ ಕಳೆಗೇ

ಉಳಿವು

ಕಳೆಯ ನಿರ್ಮೂಲನೆಗೋ

ಹತ್ತೆಂಟು ಹಾದಿ


ಕಿತ್ತಷ್ಟೂ

ಮತ್ತೆ ಚಿಗುರುವ

ರಕ್ತ ಬೀಜಾಸುರನ

ವಂಶ!

ಬೆಳೆಗೇಕಿಲ್ಲ

ಆ ಒಂದೂ

ಅಂಶ?


ಬೆಳೆಯನೇ

ಬಳಸುವ

ಧೃತರಾಷ್ಟ್ರಾಲಿಂಗನ

ಎತ್ತಲಿಂದಲೋ

ಬಂದವತರಿಸಿದ

ಪಾರ್ತೇನಿಯಂ ಪಯಣ!


ಕಳೆಯ ನಾಶದತ್ತಲೇ

ಕೇಂದ್ರೀಕೃತ ಮನವ

ಬೆಳೆಯ

ಸದೃಢಗೊಳಿಸುವತ್ತ

ಕೊಂಡೊಯ್ದರೆ ಹೇಗೆ?


ಸಮರ್ಥ ಬೆಳೆ

ನಿಂತೀತು

ಕಳೆಯನೇ ಮೆಟ್ಟಿ

ಗೊಬ್ಬರವಾಗಿಸಿಕೊಳ್ಳುತ್ತಾ.....

Sunday, July 3, 2011

ಮನದ ಅಂಗಳದಿ.........೪೭. ಏಕಾಕಿತನ

ಸಾಮಾನ್ಯವಾಗಿ ನಾವು ಒಬ್ಬರೇ ಇರುವ ಸಂದರ್ಭಗಳು ಉಂಟಾಗದಂತೆ ಎಚ್ಚರಿಕೆ ವಹಿಸುತ್ತೇವೆ. ಅನಿವಾರ್ಯವಾಗಿ ಒಬ್ಬರೇ ಇರಬೇಕಾದ ಸಂದರ್ಭಗಳಲ್ಲಿ ಏಕಾಕಿತನ ನಮ್ಮನ್ನು ಹಿಂಸಿಸುತ್ತದೆ. ಆ ಕ್ಷಣವೇ ದೂರವಾಣಿಯ ಮೂಲಕವಾದರೂ ನಾವು ಆ ಪರಿಸ್ಥಿತಿಯಿಂದ ಹೊರಬರಲು ಪ್ರಯತ್ನಿಸುತ್ತೇವೆ. ಈ ಏಕಾಕಿತನದ ಬಗ್ಗೆ ಸ್ವಾಮಿ ರಾಮ ಅವರು ತಮ್ಮ 'ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ' ಕೃತಿಯಲ್ಲಿ ಈ ರೀತಿಯಾಗಿ ಹೇಳುತ್ತಾರೆ,

'ನಾನು ಎಂದೂ ಒಂಟಿಯಲ್ಲ. ಯಾರು ಆಂತರಿಕ ಪರಿಪೂರ್ಣತೆಯ ಅರಿವನ್ನು ಹೊಂದಿರುವುದಿಲ್ಲವೋ ಆತ ಏಕಾಕಿ. ತನ್ನೊಳಗಿನ ಸತ್ಯದ ಅರಿವಿಲ್ಲದೆ ಬಾಹ್ಯದ ಮತ್ಯಾವುದರ ಮೇಲೋ ಅವಲಂಬಿತನಾದಾಗ ನಿಜಕ್ಕೂ ಮನುಷ್ಯನು ಏಕಾಕಿ. ಜ್ಞಾನಾರ್ಜನೆಯ ಮೂಲ ಧ್ಯೇಯವು ನೀನು ಸ್ವಯಂ ಪರಿಪೂರ್ಣನೆಂದು ತಿಳಿಯುವ, ಆಂತರ್ಯದ ಪರಿಶೋಧನೆಯೇ ಆಗಿದೆ. ನೀನು ಪರಿಪೂರ್ಣ, ಹೊರಗಿನ ಯಾವುದರ ಅವಲಂಬನೆಯೂ ನಿನಗೆ ಅಗತ್ಯವಿಲ್ಲ, ಯಾವ ಸನ್ನಿವೇಶದಲ್ಲಿ ಏನು ಘಟಿಸಿದರೂ ನೀನು ಏಕಾಕಿ ಎಂದು ಭಾವಿಸಬೇಕಾಗಿಲ್ಲ.'

ಅವರು ಹದಿನಾರು ವರ್ಷದವರಾಗಿದ್ದಾಗ ಒಂದು ದಿನ ಹಿಮಾಲಯದಲ್ಲಿನ ತಮ್ಮ ಗುಹೆಯ ಮುಂಭಾಗದಲ್ಲಿ ನಿಂತು ತಮ್ಮ ಗುರುಗಳಿಗೆ ಏಕಾಂತ ಭಂಗವಾಗದಂತೆ ನೋಡಿಕೊಳ್ಳುತ್ತಿರುತ್ತಾರೆ. ಆಗ ಒಬ್ಬ ಅರಸನು ತನ್ನ ಅಂಗರಕ್ಷಕರೊಡನೆ ಬಂದು ಗುರುಗಳ ದರ್ಶನ ಮಾಡಬೇಕಾಗಿ ಹೇಳುತ್ತಾನೆ. ಹಿಂದೆ ಕೆಲಸಲ ಇದೇ ರೀತಿಯ ಸಂದರ್ಭಗಳಲ್ಲಿ ಗುರುಗಳನ್ನು, 'ಈ ಶ್ರೀಮಂತ ಜನ ದೂರದೂರುಗಳಿಂದ ಬರುತ್ತಾರೆ. ಅವರಿಗೆ ಭೇಟಿ ನೀಡುವುದಿಲ್ಲ ಎಂದು ಹೇಳ್ತೀರಿ. ಇದು ನ್ಯಾಯವೇ?' ಎಂದು ಕೇಳಿದಾಗ ಗುರುಗಳು, 'ನನ್ನೊಳಗಿನ ಗೆಳೆಯನ ಜೊತೆ ಆನಂದವಾಗಿದ್ದೇನೆ. ಈ ಜನಗಳನ್ನು ನಾನ್ಯಾಕೆ ಕಾಣಬೇಕು? ಅವರು ನಿಜವಾದ ಭಕ್ತರಲ್ಲ. ಅವರಿಗೆ ಪ್ರಾಪಂಚಿಕ ಲಾಭ ಬೇಕು. ಒಬ್ಬನಿಗೆ ಸಂತಾನ ಬೇಕು. ಮತ್ತೊಬ್ಬನಿಗೆ ಉನ್ನತ ಪದವಿ ಬೇಕು. ಆಧ್ಯಾತ್ಮಿಕ ವಿಚಾರ ಯಾರಿಗೂ ಬೇಕಿಲ್ಲ. ಇಂಥವರನ್ನು ಕಾಣಬೇಕೆಂದು ಏಕೆ ಕೇಳ್ತಿದೀಯ?' ಎಂದು ನಕ್ಕು ನುಡಿದಿರುತ್ತಾರೆ. ಅದರಿಂದಾಗಿ ಅರಸನಿಗೆ ಭೇಟಿಯಾಗಲು ಅವಕಾಶ ನೀಡುವುದಿಲ್ಲ. ಅರಸನು ಅನೇಕ ಸಲ ಬಂದು ಹೋದರೂ ಗುರುಗಳನ್ನು ಕಾಣಲು ಯಾರನ್ನೂ ಬಿಡುತ್ತಿರಲಿಲ್ಲವಾದ್ದರಿಂದ ಉಪಯೋಗವಾಗುವುದಿಲ್ಲ. ಆಳುವ ಅರಸನಿಗೆ ತನ್ನ ಪದವಿಯ ಪರಿಗಣನೆಗೆ ಇಲ್ಲಿ ಆಸ್ಪದವಿಲ್ಲವೆಂದು ಕೊನೆಗೆ ಮನವರಿಕೆಯಾಗಿ ಸ್ವಭಾವ ಪರಿವರ್ತನೆಯಾಗಿ ಬಂದು ವಿನಯದಿಂದ ಬೇಡಿಕೊಳ್ಳುತ್ತಾನೆ. ಆಗ ಗುರುಗಳ ಬಳಿಗೆ ಕರೆದುಕೊಂಡು ಹೋದಾಗ ಅರಸನು ತನ್ನ ವಿನಯ ಶೀಲತೆಯನ್ನೂ ಹಾಗೂ ಮೈಗೂಡಿಸಿಕೊಂಡ ಪಾಶ್ಚಾತ್ಯ ರೀತಿಯ ನಡಾವಳಿಗಳನ್ನು ಪ್ರದರ್ಶಿಸಬಯಸಿ, 'ಸ್ವಾಮೀಜಿ, ತಾವು ಏಕಾಕಿತನವನ್ನು ಅನುಭವಿಸುತ್ತಿರುವಂತೆ ತೋರುತ್ತಿದೆ ಎನ್ನುತ್ತಾನೆ.'

ಅದಕ್ಕೆ ಗುರುಗಳು ಹೀಗೆ ಹೇಳುತ್ತಾರೆ, 'ಹೌದು, ನೀನು ಬಂದಿದ್ದೀಯಲ್ಲ ಅದರಿಂದಾಗಿ ಏಕಾಕಿತನವನ್ನು ಅನುಭವಿಸುತ್ತಿದ್ದೇನೆ. ನೀನು ಬರೋದಕ್ಕೆ ಮುಂಚೆ ನನ್ನೊಳಗಿನ ಆತ್ಮಸಖನ ಸಾಹಚರ್ಯ ಸುಖವನ್ನು ಅನುಭವಿಸುತ್ತಿದ್ದೆ. ನೀನು ಬಂದಿರುವುದರಿಂದ ಈಗ ನಾನು ಏಕಾಕಿ.'

ಈ ಘಟನೆಯನ್ನು ವಿವರಿಸಿ ಸ್ವಾಮಿ ರಾಮರವರು ಅದನ್ನು ಈ ರೀತಿಯಾಗಿ ವಿಶ್ಲೇಷಿಸುತ್ತಾರೆ, 'ನಿಜವಾಗಿಯೂ ಆತ್ಮಸಖ್ಯ ಎಲ್ಲ ಬಾಂಧವ್ಯಗಳಿಗಿಂತಲೂ ಮಿಗಿಲಾದದ್ದು. ತನ್ನೊಳಗಿನ ಆತ್ಮಸುಖವನ್ನು ಅನುಭವಿಸಬಲ್ಲವನು ಯಾವತ್ತೂ ಏಕಾಕಿಯಲ್ಲ. ನಮ್ಮನ್ನು ಏಕಾಕಿಯಾಗಿ ರೂಪಿಸುವವರು ಯಾರು? ನಮ್ಮನ್ನು ತಿಳಿದವರು ಹಾಗೂ ಪ್ರೀತಿಸುವವರೆಂದು ವಾದಿಸುವವರು ಅಥವಾ ನಮ್ಮಿಂದ ಪ್ರೀತಿಸಲ್ಪಡುವವರು ನಮ್ಮಲ್ಲಿ ಏಕಾಕಿತನವನ್ನು ಸೃಷ್ಟಿಸುವುದೇ ಅಲ್ಲದೇ ನಮ್ಮನ್ನು ಪರಾವಲಂಬಿಗಳನ್ನಾಗಿ ಮಾಡಿಬಿಡುತ್ತಾರೆ.ಆಂತರ್ಯದ ಶಾಶ್ವತ ಗೆಳೆಯನನ್ನು ನಾವು ಮರೆಯುತ್ತೇವೆ. ನಮ್ಮ ನೈಜ ಸ್ಥಿತಿಯನ್ನು ಅರ್ಥಮಾಡಿಕೊಂಡರೆ ನಾವು ಬಾಹ್ಯಾವಲಂಬಿಗಳಾಗುವುದಿಲ್ಲ. ಬಾಹ್ಯ ಸಂಪರ್ಕಗಳ ಅವಲಂಬನೆಯು ಅಜ್ಞಾನವಾಗಿದ್ದು ಇದನ್ನು ಹೊರದೂಡಬೇಕು. ಬಾಂಧವ್ಯ ಮತ್ತು ಜೀವನ ಪರಸ್ಪರ ಪರ್ಯಾಯವಾದವು ಹಾಗೂ ಒಂದನ್ನು ಬಿಟ್ಟು ಇನ್ನೊಂದಿಲ್ಲ. ಆಂತರ್ಯದ ಗೆಳೆಯನನ್ನು ಅರಿತವರು ಎಲ್ಲರನ್ನೂ ಪ್ರೀತಿಸುತ್ತಾರೆ ಹಾಗೂ ಪರಾವಲಂಬಿಗಳಾಗಿರುವುದಿಲ್ಲ. ಅವರು ಯಾವತ್ತೂ ಏಕಾಕಿಗಳಲ್ಲ. ಏಕಾಕಿತನ ಒಂದು ಜಾಡ್ಯ. ಒಂಟಿಯಿದ್ದು ಆನಂದವಾಗಿರುವುದೆಂದರೆ ಪರಮಸತ್ಯದ ನಿರಂತರ ಸಾನಿಧ್ಯದ ನಿರಂತರ ಅರಿವಿನ ಸುಖವನ್ನು ಅನುಭವಿಸುವುದು ಎಂದು ಅರ್ಥ.'

ಅರಸನು ಈ ಬೋಧೆಯನ್ನು ಕೇಳಿದ ನಂತರ ಅದರ ತಿರುಳನ್ನು ಮನನ ಮಾಡಿ ಧ್ಯಾನ ಸಾಧನೆಯಲ್ಲಿ ತೊಡಗಿದ. ಏಕಾಕಿತನವೆಂಬ ಸ್ವಕಲ್ಪಿತ ಸಂಕಟದಿಂದ ಪ್ರತಿಯೊಬ್ಬರೂ ಬಿಡುಗಡೆ ಪಡೆಯುವುದು ಹಾಗೂ ಜೀವನಾನಂದವನ್ನು ಅನುಭವಿಸುವುದು ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಂಡ.

ಜಿಡ್ಡು ಕೃಷ್ಣಮೂರ್ತಿಯವರು ಏಕಾಕಿತನ (ಒಂಟಿತನ) ಮತ್ತು ಏಕಾಂತಗಳ ಬಗೆಗಿನ ವ್ಯತ್ಯಾಸವನ್ನು ಬಹಳ ಚೆನ್ನಾಗಿ ಮನವರಿಕೆ ಮಾಡಿಕೊಡುತ್ತಾ ಹೀಗೆ ತಿಳಿಸುತ್ತಾರೆ, 'ಒಂಟಿತನವೆಂದರೆ ಏಕಾಂತವಲ್ಲ. ಆದರೆ ಏಕಾಂತವಾಗಿರಬೇಕಾದರೆ ಒಂಟಿತನವನ್ನು ದಾಟಿ ಹೋಗಬೇಕು. ಒಂಟಿತನವನ್ನು ಬಲ್ಲವನಿಗೆ ಏಕಾಂತದ ಅರಿವು ಇರುವುದಿಲ್ಲ. ನಿಮಗೆ ಏಕಾಂತದ ಸ್ಥಿತಿ ಗೊತ್ತೆ? ನಮ್ಮ ಮನಸ್ಸುಗಳು ಏಕಾಂತವನ್ನು ಅನುಭವಿಸುವಷ್ಟು ಒಂದುತನವನ್ನು ಪಡೆದಿಲ್ಲ. ಪ್ರತ್ಯೇಕತೆಗಳನ್ನು ಹುಟ್ಟಿಸುವುದೇ ಮನಸ್ಸಿನ ಪ್ರತಿಕ್ರಿಯೆ. ಪ್ರತ್ಯೇಕತೆಗಳನ್ನು ಹುಟ್ಟಿಸಬಲ್ಲಂತಹದ್ದು ಒಂಟಿತನವನ್ನು ಮಾತ್ರ ಅರಿಯಬಲ್ಲದು.

ಏಕಾಂತಕ್ಕೆ ಒಂದು ಸೌಂದರ್ಯವಿದ್ದರೆ ಒಂಟಿತನಕ್ಕೆ ಬೇರೆಯದೇ ಅರ್ಥವಿದೆ. ಏಕಾಂತವಾಗಿರುವುದೇ ಬೇರೆ. ಒಂಟಿಯಾಗಿರುವುದೇ ಬೇರೆ. ದುರಾಸೆ, ಮಹತ್ವಾಕಾಂಕ್ಷೆ, ಉದ್ಧಟತನ, ಸಾಧನೆ, ಅಂತಸ್ತುಗಳ ಸಾಮಾಜಿಕ ವಿನ್ಯಾಸದಿಂದ ಮನುಷ್ಯ ಬಿಡುಗಡೆಯನ್ನು ಪಡೆದಾಗ ಸಂಪೂರ್ಣವಾಗಿ ಏಕಾಂಗಿಯಾಗಿರುತ್ತಾನೆ. ಅದರ ಅರ್ಥವೇ ಬೇರೆ. ಅದು ಒಂಟಿತನವಲ್ಲ. ಏಕಾಂತದಲ್ಲಿ ಚೆಲುವಿದೆ, ಅಪಾರ ಶಕ್ತಿಯಿದೆ.'

ನಮಗೆ ಎಲ್ಲಾ ಸಂಪತ್ತುಗಳೂ, ಸೌಲಭ್ಯಗಳೂ ಇದ್ದರೂ ಕೆಲವೊಮ್ಮೆ ಏಕಾಕಿತನವು ನಮ್ಮನ್ನು ಕಾಡಬಹುದು. ನಾವು ಏನು? ನಮ್ಮ ಮೂಲ ಸತ್ವವೇನು? ಎನ್ನುವುದನ್ನು ಅರಿಯುವ ಪ್ರಯತ್ನವನ್ನು ನಡೆಸಿ ಕಾಡುವ ಏಕಾಕಿತನವನ್ನು ದಾಟಿ ಎಂದರೆ ಮೀರಿ ಬೆಳೆದು ಅಪಾರ ಶಕ್ತಿಯನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಏಕಾಂತದ ಚೆಲುವನ್ನು ಆಸ್ವಾಧಿಸುವವರಾಗೋಣ.