ದಿನಾಂಕ೦೨-೧೦-೨೦೧೪ ರ೦ದು ನಡೆದ` ಕರ್ನಾಟಕ ಸಾಹಿತ್ಯ ಅಕಾಡಮಿ ಸುವರ್ಣ ಸ೦ಭ್ರಮ' ಜಿಲ್ಲಾ ಕವಿಗೋಷ್ಠಿಯಲ್ಲಿ ವಾಚಿಸಿದ ಕವನವನ್ನು ನಿಮ್ಮೊಡನೆ ಹ೦ಚಿಕೊಳ್ಳುತ್ತಿದ್ದೇನೆ:
ಒಳಗಿನೊಳಗು
ಅಂದು........
ಜನಜಂಗುಳಿಯ ನಡುವೆ
ಹೆಜ್ಜೆಯಿಡುವಾಗ
ಕಂಡುಬರುತ್ತಿದ್ದುದು
ಇಷ್ಟೇ:
ಕಣ್ಣು, ಕಿವಿ,
ಮೂಗು,ಬಾಯಿ
ಎತ್ತರ-ಗಿಡ್ಡ, ತೆಳು-ತೋರ
ಕಪ್ಪು-ಬಿಳುಪು.......
ಅಂಗಾಂಗಗಳಷ್ಟೇ ನರನೆಂಬಂಥಾ
ತಲೆ ಚಿಟ್ಟೆನಿಸುವ
ಆಕಾರಗಳ ಸಾಲು ಸಾಲು,
ಮುಂದೆಮುಂದೆ ಸಾಗಿದಾಗ
ಕಂಡದ್ದೇ ಕಂಡು ರೋಸಿಹೋದಂತೆ
ಕೇಳಲಾರಂಭಿಸಿದ ಮಾತುಗಳು!
ಕೋಪ-ಆಕ್ರೋಶ, ದುಃಖ-ದುಮ್ಮಾನ
ನೋವು-ನಲಿವುಗಳ ಮೇಳ
ಮನದ ಪಿಸುಮಾತುಗಳು
ಹುಸಿಮುನಿಸುಗಳು
ಗುಜುಗುಜು, ಗಲಿಬಿಲಿ
ಎದುರಾದವರ ಭಾವಗಳ
ವಿಶ್ಲೇಷಣೆಯಲೇ
ಕೊಚ್ಚಿಹೋಗುವ ಹುಚ್ಚುತನ
ನಿಶ್ಶಬ್ದವೆಂದರೇನರಿಯದ
ಅಂತ್ಯವಿಲ್ಲದ ಪಯಣ!
ಸಂತೆಯೊಳಗೆ ಸಂತನನರಸುವುದೆಲ್ಲಿ?
ದೇಹ-ಮನಸುಗಳ
ಮೀರಲಾಗದ ಬದುಕೆ?
‘ಇದಮಿತ್ಥಂ?
ಎಂದು
ಪರಿಗಣಿಸಲಾಗದೇ
ತೊಳಲುವ ಜೀವಕೊಂದು
ಆಶಾಕಿರಣ!
ಈಗ ದೇಹಗಳ
ಸಾಲುಸಾಲೇ ಸಾಗಲಿ
ಮನಗಳೊಳಗೆ ಮಹಾ
ಸಮರವೇ ಜರುಗಲಿ
ಕಾಣಿಸದು
ಕೇಳಿಸದು!
ಆಳಆಳಕೆ ಇಳಿಯಬಯಸುತಿದೆ
ಜೀವ
ಒಳಗಿನೊಳಗನು ಒಳಗೊಂಡಂತೆ
ಎಲ್ಲರೊಳಗಿನ ಚೈತನ್ಯವೊಂದೇ
ಎನಿಸುವ ಶಾಂತ
ಭಾವ!



