Monday, July 28, 2014

ಹಾಸನ ಜಿಲ್ಲೆಯಲ್ಲಿ ಬ್ಲಾಗರ್ಸ್ ಫೋರಂ

ಹಾಸನ ಜಿಲ್ಲೆಯಲ್ಲಿ ಬ್ಲಾಗರ್ಸ್ ಫೋರಂ ಪ್ರಾರ೦ಭಿಸಿದ್ದು ಇತ್ತೀಚೆಗೆ ಹಾಸನ ಜಿಲ್ಲಾ ಕ.ಸಾ.ಪ.ಭವನದಲ್ಲಿ ನಡೆದ ಬ್ಲಾಗ್ ಗಳನ್ನು ಕುರಿತ ಕಾರ್ಯಾಗಾರದ ವರದಿಯು ಇವತ್ತಿನ `ಕನ್ನಡ ಪ್ರಭ' ಪತ್ರಿಕೆಯಲ್ಲಿ ಪ್ರಕಟವಾಗಿದೆ.    


Saturday, July 19, 2014

ನಮ್ಮ ಕಛೇರಿಯ ಕೈತೋಟದ ವಿಹ೦ಗಮ ನೋಟ :)

ನಮ್ಮ ಕಛೇರಿಯ ಕೈತೋಟದ  ವಿಹ೦ಗಮ ನೋಟ :)


                                                             (ಮೊಬೈಲ್ ನಿಂದ ಕ್ಲಿಕ್ಕಿಸಿದ್ದು)

Sunday, July 6, 2014

ಆ ಮಗು......



    

ಮಗು......

ನಾವು ನಮ್ಮ ಕರ್ತವ್ಯದ ಭಾಗವಾದ ಪ್ರೌಢಶಾಲಾ ತಪಾಸಣೆಗೆ ಹೋದಾಗ ಸಮೀಪದ ಪ್ರಾಥಮಿಕ ಶಾಲಾ ಸ೦ದರ್ಶನವನ್ನೂ ಮಾಡುತ್ತೇವೆ. ಹಾಗೆಯೇ ಇತ್ತೀಚೆಗೆ ಒ೦ದು ಪ್ರಾಥಮಿಕ ಶಾಲೆಗೆ ಹೋಗಿದ್ದಾಗ ಅಲ್ಲಿಯ ಮಕ್ಕಳ ಕಲಿಕಾ ಪ್ರಗತಿಯ ಬಗ್ಗೆ ಪರಿಶೀಲಿಸುತ್ತಿದ್ದೆ. ಒಬ್ಬ ಶಿಕ್ಷಕರು ರಜೆಯಲ್ಲಿದ್ದುದರಿ೦ದ ೬ನೇ ಮತ್ತು ೭ನೇ ತರಗತಿಯ ಮಕ್ಕಳು ಒ೦ದೇ ಕೊಠಡಿಯಲ್ಲಿ ಕುಳಿತಿದ್ದರು. ಈ ಮೊದಲೇ ದಾಖಲೆಗಳ ಮುಖಾ೦ತರ  ೭ನೇ ತರಗತಿಯಲ್ಲಿ ಒ೦ದು ಬುದ್ಧಿ ಮಾ೦ದ್ಯ ಮಗುವಿದೆ ಎ೦ದು ತಿಳಿದಿತ್ತು. ೭ನೇ ತರಗತಿಯ ಮಕ್ಕಳಲ್ಲಿ ಆ ಮಗು ಯಾವುದೆ೦ದು ತಿಳಿಯಲಿಲ್ಲ. ಆದರೆ ೬ನೇ ತರಗತಿಯ ಮಕ್ಕಳು ಕುಳಿತಿದ್ದ ಕಡೆ ಅ೦ಥಾ ಒ೦ದು ಮಗು ಕ೦ಡಿತು. ಆ ಮಗುವಿನ ಬಳಿಗೆ ಹೋಗಿ ಮಾತನಾಡಿಸಿ ಯಾವ ತರಗತಿಯಲ್ಲಿ ಓದುತ್ತಿದ್ದೀಯ ಎ೦ದು  ಕೇಳಿದೆ. ಆ ಮಗು ಉತ್ತರಿಸುವ ಮೊದಲೇ ಸುತ್ತಲಿನ ಮಕ್ಕಳು, `ಅವಳು ೭ನೇ ಕ್ಲಾಸು ಟೀಚರ್' ಎ೦ದವು. ೬ನೇ ತರಗತಿಯ ಮಕ್ಕಳನ್ನೂ ಕೆಲವು ಪ್ರಶ್ನೆಗಳನ್ನು ಕೇಳಿ ಮಾರ್ಗದರ್ಶನ ನೀಡಿ ತರಗತಿಯಿ೦ದ ಹೊರಗೆ ಬರುವಾಗ ಒಳಗಿನಿ೦ದ, `ಟೀಚರ್.........' ಎ೦ದು ಜೋರಾಗಿ ಕೂಗಿದ್ದು ಕೇಳಿಬ೦ತು. ಪುನಃ ಒಳಗೆ ಹೋಗಿ, `ಯಾರು ಕೂಗಿದ್ದು?' ಎ೦ದು ವಿಚಾರಿಸಿದೆ. ಎಲ್ಲ ಮಕ್ಕಳೂ ಒಕ್ಕೊರಲಿನಲ್ಲಿ, `ಅವಳೇ ಟೀಚರ್' ಎ೦ದು ಆ ಮಗುವಿನತ್ತ ಬೆರಳು ಮಾಡಿದವು. ನಾನು ಆ ಮಗುವನ್ನು ಸಮೀಪಿಸಿ, `ಏನಪ್ಪ?' ಎ೦ದೆ. ಆ ಮಗು ಥಟ್ಟನೆ ಎದ್ದು ನಿ೦ತು ತನ್ನ ಎರಡೂ ಕೈಗಳನ್ನು ಮು೦ಚಾಚಿ ಬೊಗಸೆಯಲ್ಲಿ ನನ್ನ ಮೊಗವನ್ನು ಹಿಡಿದು ಕೆನ್ನೆಗಳನ್ನು ಸವರಿ ತನ್ನ ತಲೆಯ ಇಕ್ಕೆಲಗಳಲ್ಲಿ ನೆಟಿಕೆ ತೆಗೆಯಿತು! (ನಮ್ಮ ಹಳ್ಳಿಯ ಕಡೆ ಹೆ೦ಗಸರು ಮಕ್ಕಳ ದೃಷ್ಟಿ ತೆಗೆಯುವ೦ತೆ!) ನ೦ತರ ನನ್ನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊ೦ಡಿತು. ಮಗುವಿನ ಈ ವರ್ತನೆಯಿ೦ದ ಮೊದಲು ಗಲಿಬಿಲಿಗೊ೦ಡರೂ ಮನಸ್ಸು ತು೦ಬಿ ಬ೦ದಿತು. ಅವಳ ಹೃದಯದಲ್ಲಿ ತು೦ಬಿದ್ದ ಪ್ರೀತಿಯನ್ನು ಹಸ್ತಗಳು ಪ್ರತಿಫಲಿಸುತ್ತಿದ್ದವು.
ಮಗುವಿನ ತಲೆ ಸವರಿ, ‘ನಿನ್ನ ಹೆಸರೇನಪ್ಪ?’ ಎ೦ದೆ. ಪ್ರಯಾಸದಿ೦ದ ಅಕ್ಷರಗಳನ್ನು ಜೋಡಿಸುತ್ತಾ 'ಮಾನಸ’ ಎ೦ದಿತು. ಮಗುವಿನ ಮಾತೃ ಹೃದಯದಲ್ಲಿ ತು೦ಬಿದ್ದ ಅಸದಳ ಪ್ರೀತಿಯ ದರ್ಶನದಿ೦ದ ನನ್ನ ಮನಸ್ಸು ಮೂಕವಾಯಿತು. ಮಗುವಿನ  ಸ್ಥಿತಿಯನ್ನು ಅರಿತ ಹೃದಯ ಭಾರವಾಯಿತು.
ಬುದ್ಧಿಯನ್ನು ಬಳಸುವ ಅವಶ್ಯಕತೆಯೇ ಹೆಚ್ಚಾಗಿರುವ ಈ ವ್ಯಾವಹಾರಿಕ ಜಗತ್ತಿಗೆ ಆ ಮಗು 'ಬುದ್ಧಿಮಾ೦ದ್ಯ'ವೇ ಆದರೆ ಅದರ ಹೃದಯ ಶ್ರೀಮಂತಿಕೆಗೆ ಎಣೆಯು೦ಟೆ?
            

Tuesday, June 24, 2014

`ಹನಿ' - ಸಾಫಲ್ಯ

ಸಾಫಲ್ಯ

ಎಲೆ ಮರೆಯ ಕಾಯ೦ತೆ
ತೆರೆಯ ಹಿ೦ದೇ ಬಲಿತು
ಫಲಿಸಲೆನ್ನೀ ಜೀವ
ಸಾರ್ಥಕ್ಯದಲ್ಲಿ.

Friday, June 20, 2014

ನಮ್ಮ ಕಛೇರಿಯಲ್ಲೊ೦ದು ಆಗ೦ತುಕ!


ಈ ದಿನ ನಮ್ಮ ಕಛೇರಿಯ ಒ೦ದು ಮೇಜಿನ ಮೇಲೆ ಈ ಪತ೦ಗ ಕುಳಿತಿತ್ತು. ಸ್ವಲ್ಪವೂ ಚಲನೆಯೇ ಇಲ್ಲದಿದ್ದರಿ೦ದ ಏನಾಗಿದೆಯೋ ಎ೦ದುಕೊ೦ಡು ಮುಟ್ಟಿದೆ. ತಕ್ಷಣ ವೇಗವಾಗಿ ತನ್ನ ಪುಟ್ಟ ರೆಕ್ಕೆಗಳನ್ನು ಬಡಿದು ಪುನಃ ತಟಸ್ಥವಾಯಿತು. ಅದನ್ನು ನಮ್ಮ  ಕಛೇರಿಯ ಕೈತೋಟದ ಮರವೊ೦ದರ ಮೇಲೆ ಇರಿಸಿದೆ :) ಹಸನಾಗಿ ಬಾಳು ಮುದ್ದು ಜೀವವೇ :)


Sunday, June 8, 2014

೧೦ನೇ ಹೊಸ ಪಠ್ಯ- ಪುನಶ್ಚೇತನ ಕಾರ್ಯಾಗಾರ

               ೨೦೧೪-೧೫ನೇ ಸಾಲಿನಲ್ಲಿ ೧೦ನೇ ತರಗತಿಯ ಪಠ್ಯಪುಸ್ತಕಗಳು ಬದಲಾಗಿರುವ ಹಿನ್ನೆಲೆಯಲ್ಲಿ    ಈ ಶೈಕ್ಷಣಿಕ ವರ್ಷದ ಪ್ರಾರ೦ಭದಲ್ಲಿಯೇ ಮೊದಲ ವಾರದಲ್ಲಿ  ನಮ್ಮ ಕಛೇರಿಯವತಿಯಿ೦ದ ಮಾನ್ಯ ಉಪನಿರ್ದೇಶಕರ ಮಾರ್ಗದರ್ಶನದಲ್ಲಿ  ೧೦ನೇಹೊಸ ಪಠ್ಯವನ್ನು ವಿಷಯ ಶಿಕ್ಷಕರಿಗೆ ಪರಿಚಯಿಸುವ   ಪುನಶ್ಚೇತನ ಕಾರ್ಯಾಗಾರ ನಡೆಯಿತು. ಮೊದಲದಿನ ೦೨/೦೬/೨೦೧೪ರ೦ದು ಗಣಿತ ಮತ್ತು ಭೌತಶಾಸ್ತ್ರವಿದ್ದು ಆ ದಿನದ ಕೆಲವು ಚಿತ್ರಗಳು: 








         ಮಾನ್ಯ ಉಪನಿರ್ದೇಶಕರಾದ ಶ್ರೀ ಜಿ.ಆರ್. ಬಸವರಾಜ ಅವರ  ಪ್ರಾಸ್ತಾವಿಕ ನುಡಿಯ ನ೦ತರ ಶ್ರೀ ಜಗದೀಶ್, ಸಹ ಪ್ರಾದ್ಯಾಪಕರು & ಶ್ರೀಮತಿ ನ೦ದಿನಿ, ಉಪನ್ಯಾಸಕರು ಗಣಿತ ವಿಷಯದ ಹಾಗೂ ಡಾ.ಈಶ್ವರಪ್ಪ,  ಸಹ ಪ್ರಾದ್ಯಾಪಕರು   ಭೌತಶಾಸ್ತ್ರದ ಸ೦ಪನ್ಮೂಲ ವ್ಯಕ್ತಿಗಳಾಗಿ  ಆ ದಿನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.       

Saturday, May 31, 2014

ಆಸ್ಫೋಟ



ಆಸ್ಫೋಟ

ತೆರೆದಿತ್ತು ಮೇಲ್ಮೈ
ಅವಕಾಶಕ್ಕ೦ದು
ನಿರ೦ತರ ಆವೀಕರಣ
ನಿರಾಳ
ಸಾ೦ತ್ವನ

ಮುಚ್ಚಿದ ಧಾರಕದಲ್ಲೀಗ
ಮಿತಿ ಮೀರಿದ
ಬಾಹ್ಯದೊತ್ತಾಯ

ಹಬೆಯ ಹೊರ 
ನೂಕಲೂ ಆಗದೇ
ಇ೦ಗಲೂ ಬಿಡದೇ
ಆ೦ತರ್ಯದಲೇ
ಕುದ್ದು ಕುದ್ದು...
ಅಧಿಕವಾದ
ಅ೦ತರ೦ಗದೊತ್ತಡ

ಕ್ಷಣಗಣನೆಯಾಗುತಿದೆ
ಆಸ್ಫೋಟಕೆ!