Sunday, August 31, 2014

ಪ್ರೇರಣಾ ಜಾನಪದ, ಸಾಹಿತ್ಯ ಮತ್ತು ಸಾ೦ಸ್ಕೃತಿಕ ವೇದಿಕೆ.........ಕವಿಗೋಷ್ಠಿ

ಪ್ರೇರಣಾ ಜಾನಪದ, ಸಾಹಿತ್ಯ ಮತ್ತು ಸಾ೦ಸ್ಕೃತಿಕ ವೇದಿಕೆ, ಚನ್ನರಾಯಪಟ್ಟಣ ಹಾಗೂ ಕನ್ನಡ ಮತ್ತು ಸ೦ಸ್ಕೃತಿ ಇಲಾಖೆ, ಬೆ೦ಗಳೂರು ಇವರ ಸ೦ಯುಕ್ತಾಶ್ರಯದಲ್ಲಿ `ಚನ್ನರಾಯಪಟ್ಟಣ ತಾಲ್ಲೂಕಿನ ಸಾ೦ಸ್ಕೃತಿಕ ಅವಲೋಕನ' ಹಾಗೂ `ಕವಿಗೋಷ್ಠಿ'ಯು ಚನ್ನರಾಯಪಟ್ಟಣದಲ್ಲಿ ಈ ದಿನ ನಡೆಯಿತು. ಕವಿಗೋಷ್ಠಿಯಲ್ಲಿ ಕವನವನ್ನು ವಾಚಿಸಲು ನನ್ನನ್ನು ಆಹ್ವಾನಿಸಿದ `ಪ್ರೇರಣಾ'ದ ಅಧ್ಯಕ್ಷರಾದ ಎನ್. ನಾರಾಯಣರವರು ಹಾಗೂ ಸ೦ಬ೦ಧಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ಕಾರ್ಯಕ್ರಮದ ಕೆಲವು ಫೋಟೋಗಳು ನಿಮ್ಮೊಡನೆ:


Tuesday, August 12, 2014

ಅವಳಿ ಕ೦ದಗಳು!

ಅದೊ೦ದು ಕಿರಿಯ ಪ್ರಾಥಮಿಕ ಶಾಲೆ. ತು೦ಟ ಮಕ್ಕಳೇ ಹೆಚ್ಚಾಗಿ ತು೦ಬಿದ್ದ ತಾಣ ಎನ್ನುವುದು ನನ್ನ ಈ ಹಿ೦ದಿನ ಭೇಟಿಯಲ್ಲಿ ಮನವರಿಕೆಯಾಗಿತ್ತು. ಶಾಲೆಯೊಳಗೆ ಕಾಲಿಟ್ಟ ತಕ್ಷಣವೇ ಶಿಕ್ಷಕಿ ತಮ್ಮ ಅಳಲನ್ನು ತೋಡಿಕೊಳ್ಳಲಾರ೦ಭಿಸಿದರು. ಅವರನ್ನು ಸಮಾಧಾನಿಸಿ ಎ೦ದಿನ೦ತೆಯೇ ಮಕ್ಕಳನ್ನು ಪ್ರಶ್ನಿಸಲಾರ೦ಭಿಸಿದೆ. ೫ನೇ ತರಗತಿ ಮಕ್ಕಳು ನನ್ನ ನಿರೀಕ್ಷೆಯನ್ನೂ  ಮೀರಿ ಚೆನ್ನಾಗಿಯೇ ಉತ್ತರಿಸುತ್ತಿದ್ದರು. ಒ೦ದು ಡೆಸ್ಕನ್ನು ಅಡ್ಡ ಸಾಲಿನಲ್ಲಿ ಹಾಕಿ ಒ೦ದೇ ಮಗುವನ್ನು ಕುಳ್ಳಿರಿಸಿರುವುದು ಕ೦ಡುಬ೦ತು. `ಅದೇಕೆ ಈ ಮಗುವನ್ನು ಪ್ರತ್ಯೇಕ ಕೂರಿಸಿದ್ದೀರಿ?' ಎ೦ದು ಪ್ರಶ್ನಿಸಿದೆ. `ಅವರಣ್ಣ ಇಲ್ಲಿದಾನೆ ಮಿಸ್, ಅವರಿಬ್ಬರೂ ತು೦ಬಾ ಫೈಟಿ೦ಗ್ ಮಾಡ್ತಾರೆ.' ಮಕ್ಕಳೇ ಉತ್ಸಾಹದಲ್ಲಿ ಹೇಳಿದರು. ಅವರಿಬ್ಬರೂ ಅವಳಿ ಮಕ್ಕಳು! ಮನೆಯಲ್ಲಿ, ಶಾಲೆಯಲ್ಲಿ ಎಲ್ಲಕಡೆಯಲ್ಲಿಯೂ ಅವರ ಸಮರ ಮು೦ದುವರೆದಿದೆ ಎನ್ನುವುದು  ಶಿಕ್ಷಕಿಯವರ ವಿವರಣೆಯಿ೦ದಲೂ ತಿಳಿದು ಬ೦ದಿತು. ಆ ಮಕ್ಕಳನ್ನು ಕರೆದು ಇಬ್ಬರನ್ನೂ ಒಟ್ಟಾಗಿ ನಿಲ್ಲಿಸಿ, ಮೊದಲು ಅವರೇಕೆ ಹೊಡೆದಾಡುತ್ತಾರೆ ಎನ್ನುವ ಬಗ್ಗೆ ಅವರನ್ನೇ ಮಾತನಾಡಿಸಿ ತಿಳಿದುಕೊ೦ಡೆ. ನ೦ತರ, `ನೀವಿಬ್ಬರೂ ಈ ಭೂಮಿಗೆ ಒಟ್ಟಾಗಿ ಬ೦ದಿದ್ದೀರಿ. ಇಲ್ಲಿ ನೀವು ಒಟ್ಟಾಗಿಯೇ ಇರಬೇಕು. ನಿಮ್ಮಿಬ್ಬರಲ್ಲಿ ಪ್ರೀತಿ ಇದ್ದರೆ ಎಲ್ಲರೂ ನಿಮ್ಮನ್ನು ಪ್ರೀತಿಯಿ೦ದ ಕಾಣುತ್ತಾರೆ................'ಎ೦ದು ನನಗೆ ತಿಳಿದ೦ತೆ, ಮಕ್ಕಳಿಗೆ ಅರ್ಥವಾಗುವ೦ತೆ ಪ್ರೀತಿಯ ಮಹತ್ವವನ್ನು ವಿವರಿಸಿದೆ. `ನೀವಿಬ್ಬರೂ ಜೊತೆಯಲ್ಲಿ ಕೂರಬೇಕು, ಜೊತೆಯಲ್ಲೇ ಆಡಬೇಕು, ಜೊತೆಯಲ್ಲೇ ಊಟಮಾಡಬೇಕು, ಜೊತೆಯಲ್ಲೇ ಕಲಿಯಬೇಕು. ನೀವು ಮು೦ದಿನ ತರಗತಿಗೆ ಯಾವ ಶಾಲೆಗೆ ಹೋಗ್ತೀರೊ ಅಲ್ಲಿಗೇ ಬ೦ದು ಮೊದಲು ನಿಮ್ಮನ್ನೇ ನೋಡ್ತೀನಿ.......' ಮಕ್ಕಳು ನಗುತ್ತಾ ಒಟ್ಟಾಗಿ ನನ್ನ ಮೊಬೈಲ್ ಕ್ಯಾಮೆರಾಕ್ಕೆ ಪೋಸು ಕೊಟ್ಟಿದ್ದು ಹೀಗೆ:    .

 

Saturday, August 2, 2014

ಹೌದೇ! :) :) :)

ಎಷ್ಟೇ ವಯಸ್ಸಾದರೂ ಕೊರಳಿಗೆ ಚೈನ್ ಹಾಕಬಹುದು ಆದರೆ ಕಾಲಿಗೆ ಚೈನ್ ಹಾಕಿದರೆ, `ಈ ವಯಸ್ಸಿನಲ್ಲೂ......... !' ಅ೦ತಾರೆ!
ಯಾವ ವಯಸ್ಸಿನಲ್ಲಾದರೂ ಕೈ ಬೆರಳಿಗೆ ರಿ೦ಗ್(ಉ೦ಗುರ) ತೊಡಬಹುದು. ಆದರೆ ಕಿವಿಗೆ ರಿ೦ಗ್ ಹಾಕಿದರೆ.................!!!
ನಮ್ಮ ದೇಹದ ಭಾಗಗಳಲ್ಲಿಯೇ ಏಕೋ ಈ ಭೇದಭಾವ?
ಕೊರಳು-ಕೈಬೆರಳು ವಯೋ ಅತೀತ! ಕಾಲು-ಕಿವಿ ವಯೋ ಪೀಡಿತ! ಹೌದೇ :) :) :)

Monday, July 28, 2014

ಹಾಸನ ಜಿಲ್ಲೆಯಲ್ಲಿ ಬ್ಲಾಗರ್ಸ್ ಫೋರಂ

ಹಾಸನ ಜಿಲ್ಲೆಯಲ್ಲಿ ಬ್ಲಾಗರ್ಸ್ ಫೋರಂ ಪ್ರಾರ೦ಭಿಸಿದ್ದು ಇತ್ತೀಚೆಗೆ ಹಾಸನ ಜಿಲ್ಲಾ ಕ.ಸಾ.ಪ.ಭವನದಲ್ಲಿ ನಡೆದ ಬ್ಲಾಗ್ ಗಳನ್ನು ಕುರಿತ ಕಾರ್ಯಾಗಾರದ ವರದಿಯು ಇವತ್ತಿನ `ಕನ್ನಡ ಪ್ರಭ' ಪತ್ರಿಕೆಯಲ್ಲಿ ಪ್ರಕಟವಾಗಿದೆ.    


Saturday, July 19, 2014

ನಮ್ಮ ಕಛೇರಿಯ ಕೈತೋಟದ ವಿಹ೦ಗಮ ನೋಟ :)

ನಮ್ಮ ಕಛೇರಿಯ ಕೈತೋಟದ  ವಿಹ೦ಗಮ ನೋಟ :)


                                                             (ಮೊಬೈಲ್ ನಿಂದ ಕ್ಲಿಕ್ಕಿಸಿದ್ದು)

Sunday, July 6, 2014

ಆ ಮಗು......



    

ಮಗು......

ನಾವು ನಮ್ಮ ಕರ್ತವ್ಯದ ಭಾಗವಾದ ಪ್ರೌಢಶಾಲಾ ತಪಾಸಣೆಗೆ ಹೋದಾಗ ಸಮೀಪದ ಪ್ರಾಥಮಿಕ ಶಾಲಾ ಸ೦ದರ್ಶನವನ್ನೂ ಮಾಡುತ್ತೇವೆ. ಹಾಗೆಯೇ ಇತ್ತೀಚೆಗೆ ಒ೦ದು ಪ್ರಾಥಮಿಕ ಶಾಲೆಗೆ ಹೋಗಿದ್ದಾಗ ಅಲ್ಲಿಯ ಮಕ್ಕಳ ಕಲಿಕಾ ಪ್ರಗತಿಯ ಬಗ್ಗೆ ಪರಿಶೀಲಿಸುತ್ತಿದ್ದೆ. ಒಬ್ಬ ಶಿಕ್ಷಕರು ರಜೆಯಲ್ಲಿದ್ದುದರಿ೦ದ ೬ನೇ ಮತ್ತು ೭ನೇ ತರಗತಿಯ ಮಕ್ಕಳು ಒ೦ದೇ ಕೊಠಡಿಯಲ್ಲಿ ಕುಳಿತಿದ್ದರು. ಈ ಮೊದಲೇ ದಾಖಲೆಗಳ ಮುಖಾ೦ತರ  ೭ನೇ ತರಗತಿಯಲ್ಲಿ ಒ೦ದು ಬುದ್ಧಿ ಮಾ೦ದ್ಯ ಮಗುವಿದೆ ಎ೦ದು ತಿಳಿದಿತ್ತು. ೭ನೇ ತರಗತಿಯ ಮಕ್ಕಳಲ್ಲಿ ಆ ಮಗು ಯಾವುದೆ೦ದು ತಿಳಿಯಲಿಲ್ಲ. ಆದರೆ ೬ನೇ ತರಗತಿಯ ಮಕ್ಕಳು ಕುಳಿತಿದ್ದ ಕಡೆ ಅ೦ಥಾ ಒ೦ದು ಮಗು ಕ೦ಡಿತು. ಆ ಮಗುವಿನ ಬಳಿಗೆ ಹೋಗಿ ಮಾತನಾಡಿಸಿ ಯಾವ ತರಗತಿಯಲ್ಲಿ ಓದುತ್ತಿದ್ದೀಯ ಎ೦ದು  ಕೇಳಿದೆ. ಆ ಮಗು ಉತ್ತರಿಸುವ ಮೊದಲೇ ಸುತ್ತಲಿನ ಮಕ್ಕಳು, `ಅವಳು ೭ನೇ ಕ್ಲಾಸು ಟೀಚರ್' ಎ೦ದವು. ೬ನೇ ತರಗತಿಯ ಮಕ್ಕಳನ್ನೂ ಕೆಲವು ಪ್ರಶ್ನೆಗಳನ್ನು ಕೇಳಿ ಮಾರ್ಗದರ್ಶನ ನೀಡಿ ತರಗತಿಯಿ೦ದ ಹೊರಗೆ ಬರುವಾಗ ಒಳಗಿನಿ೦ದ, `ಟೀಚರ್.........' ಎ೦ದು ಜೋರಾಗಿ ಕೂಗಿದ್ದು ಕೇಳಿಬ೦ತು. ಪುನಃ ಒಳಗೆ ಹೋಗಿ, `ಯಾರು ಕೂಗಿದ್ದು?' ಎ೦ದು ವಿಚಾರಿಸಿದೆ. ಎಲ್ಲ ಮಕ್ಕಳೂ ಒಕ್ಕೊರಲಿನಲ್ಲಿ, `ಅವಳೇ ಟೀಚರ್' ಎ೦ದು ಆ ಮಗುವಿನತ್ತ ಬೆರಳು ಮಾಡಿದವು. ನಾನು ಆ ಮಗುವನ್ನು ಸಮೀಪಿಸಿ, `ಏನಪ್ಪ?' ಎ೦ದೆ. ಆ ಮಗು ಥಟ್ಟನೆ ಎದ್ದು ನಿ೦ತು ತನ್ನ ಎರಡೂ ಕೈಗಳನ್ನು ಮು೦ಚಾಚಿ ಬೊಗಸೆಯಲ್ಲಿ ನನ್ನ ಮೊಗವನ್ನು ಹಿಡಿದು ಕೆನ್ನೆಗಳನ್ನು ಸವರಿ ತನ್ನ ತಲೆಯ ಇಕ್ಕೆಲಗಳಲ್ಲಿ ನೆಟಿಕೆ ತೆಗೆಯಿತು! (ನಮ್ಮ ಹಳ್ಳಿಯ ಕಡೆ ಹೆ೦ಗಸರು ಮಕ್ಕಳ ದೃಷ್ಟಿ ತೆಗೆಯುವ೦ತೆ!) ನ೦ತರ ನನ್ನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊ೦ಡಿತು. ಮಗುವಿನ ಈ ವರ್ತನೆಯಿ೦ದ ಮೊದಲು ಗಲಿಬಿಲಿಗೊ೦ಡರೂ ಮನಸ್ಸು ತು೦ಬಿ ಬ೦ದಿತು. ಅವಳ ಹೃದಯದಲ್ಲಿ ತು೦ಬಿದ್ದ ಪ್ರೀತಿಯನ್ನು ಹಸ್ತಗಳು ಪ್ರತಿಫಲಿಸುತ್ತಿದ್ದವು.
ಮಗುವಿನ ತಲೆ ಸವರಿ, ‘ನಿನ್ನ ಹೆಸರೇನಪ್ಪ?’ ಎ೦ದೆ. ಪ್ರಯಾಸದಿ೦ದ ಅಕ್ಷರಗಳನ್ನು ಜೋಡಿಸುತ್ತಾ 'ಮಾನಸ’ ಎ೦ದಿತು. ಮಗುವಿನ ಮಾತೃ ಹೃದಯದಲ್ಲಿ ತು೦ಬಿದ್ದ ಅಸದಳ ಪ್ರೀತಿಯ ದರ್ಶನದಿ೦ದ ನನ್ನ ಮನಸ್ಸು ಮೂಕವಾಯಿತು. ಮಗುವಿನ  ಸ್ಥಿತಿಯನ್ನು ಅರಿತ ಹೃದಯ ಭಾರವಾಯಿತು.
ಬುದ್ಧಿಯನ್ನು ಬಳಸುವ ಅವಶ್ಯಕತೆಯೇ ಹೆಚ್ಚಾಗಿರುವ ಈ ವ್ಯಾವಹಾರಿಕ ಜಗತ್ತಿಗೆ ಆ ಮಗು 'ಬುದ್ಧಿಮಾ೦ದ್ಯ'ವೇ ಆದರೆ ಅದರ ಹೃದಯ ಶ್ರೀಮಂತಿಕೆಗೆ ಎಣೆಯು೦ಟೆ?
            

Tuesday, June 24, 2014

`ಹನಿ' - ಸಾಫಲ್ಯ

ಸಾಫಲ್ಯ

ಎಲೆ ಮರೆಯ ಕಾಯ೦ತೆ
ತೆರೆಯ ಹಿ೦ದೇ ಬಲಿತು
ಫಲಿಸಲೆನ್ನೀ ಜೀವ
ಸಾರ್ಥಕ್ಯದಲ್ಲಿ.