Sunday, October 9, 2011

ಮನದ ಅಂಗಳದಿ.........೬೦.‘ಕವಿ'ಎಂದರೆ.........

ಇತ್ತೀಚೆಗೆ ನಡೆದ ಒಂದು ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನ್ನನ್ನು ತಮ್ಮ ತಾಲ್ಲೂಕಿನವಳು ಎಂಬ ಅಭಿಮಾನದಿಂದ ಕವಿಗೋಷ್ಠಿಗೆ ಅಧ್ಯಕ್ಷತೆಯನ್ನು ವಹಿಸಲು ಆಹ್ವಾನಿಸಿದ್ದರು. ಆ ಸಂದರ್ಭದಲ್ಲಿ ಕವನ-ಕವಿಯ ಬಗ್ಗೆ, ಮಾತುಗಳನ್ನು ಆಡುವುದು ಅಗತ್ಯವೆನಿಸಿತು. ಸಾಮಾನ್ಯವಾಗಿ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು, ಅಥವಾ ಅನುಭವವನ್ನು ಕವನವನ್ನಾಗಿಸುವ ಸಂದರ್ಭದಲ್ಲಿ ಬಳಸುವ ಭಾಷೆ, ರಚಿಸುವ ರೀತಿ ಒಬ್ಬೊಬ್ಬರದು ಒಂದೊಂದು ವಿಧವಾಗಿರುತ್ತದೆ. ಕವಿಯ ಈ ವೈಶಿಷ್ಟ್ಯವನ್ನೇ ‘ಶೈಲಿ(style)' ಎನ್ನುವುದರಿಂದ ಈ ಬಗ್ಗೆ ಮಾತನಾಡುವುದೇ ಸೂಕ್ತ ಎಂದುಕೊಂಡು ನನ್ನ ಬಳಿ ಇದ್ದ ಕೆ. ವಿ. ನಾರಾಯಣ ಅವರ ‘ಶೈಲಿಶಾಸ್ತ್ರ' ಎನ್ನುವ ಪುಸ್ತಕದಿಂದ ಕೆಲವು ಅಂಶಗಳನ್ನು ಗುರುತುಮಾಡಿಕೊಂಡೆ:
‘*ಈಗಾಗಲೇ ವಿಮರ್ಶಾ ಪರಂಪರೆಯಲ್ಲಿ ಕವಿಯ ಕೃತಿಗಳನ್ನು ಚರ್ಚಿಸುವಾಗ ಆಯಾ ಕವಿಗಳ ಭಾಷಿಕ ವೈಶಿಷ್ಟ್ಯಗಳನ್ನು ಆಯಾ ಕವಿಗಳ ಶೈಲಿ ಎಂದು ವಿವರಿಸುವುದು ವಾಡಿಕೆಯಿದೆ.
*ಅನುಭವಗಳನ್ನು, ಅವುಗಳ ಪರಿಣಾಮವಾದ ಭಾವತೀವ್ರತೆಯನ್ನು ಕಾವ್ಯವನ್ನಾಗಿ ಪರಿವರ್ತಿಸಲು ಕವಿ ‘ಭಾಷೆಯೊಡನೆ ನಡೆಸುವ ಹೋರಾಟ'ದಿಂದ ಅವನ ಶೈಲಿಯು ರೂಪುಗೊಳ್ಳುತ್ತದೆ. ಯುಕ್ತ ಶೈಲಿ ಎಂದರೆ ಅಭಿವ್ಯಕ್ತಿಯಲ್ಲಿ ಪರಿಪೂರ್ಣತೆ ಎಂದರ್ಥ.
*ಕೃತಿರಚನೆಯನ್ನು ‘ಅನುಭವ ಗ್ರಹಿಕೆ' ಹಾಗೂ ‘ಅನುಭವ ಮಂಡನೆ' ಎಂಬ ಎರಡು ಸ್ತರದಲ್ಲಿ ನೋಡುವ ಸಾಹಿತ್ಯ ತತ್ವಗಳು, ಇವೆರಡರ ಸಮತೋಲನವನ್ನು ಸಾಧಿಸಿದ ಸಂದರ್ಭವನ್ನು ‘ಶೈಲಿ'ನಿರ್ಮಾಣವೆನ್ನುತ್ತಾರೆ. ಅನುಭವ ಮತ್ತು ಶೈಲಿಗಳ ನಡುವೆ ಅವಿನಾಭಾವ ಸಂಬಂಧವಿರುತ್ತದೆ.
*ಸಂಸ್ಕೃತ, ಇಂಗ್ಲಿಷ್.... ಪದಗಳನ್ನು ಬೆರೆಸುವ 'ನುಡಿಬೆರಕೆ'(code mixing)ಯು ಕನ್ನಡ ಕಾವ್ಯಗಳ ಶೈಲಿ ನಿರ್ವಹಿಸುವಲ್ಲಿ ಅನಿವಾರ್ಯ ಅಂಶವಾಗುತ್ತದೆ. ನುಡಿಬೆರಕೆಯ ವೈವಿಧ್ಯತೆಯಿಂದಲೇ ಶೈಲಿಯ ವೈವಿಧ್ಯ ರೂಪುಗೊಂಡಿದೆ.'
ನಾವು ಶಾಲೆಯಲ್ಲಿ ಓದುವಾಗ ‘ಪದ್ಯ'ಗಳನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದುದು ಏಕೆಂದು ನೆನಪಿರಬಹುದು. ಅವುಗಳಲ್ಲಿದ್ದ ಗೇಯತೆಯ ಗುಣ ಪದೇಪದೇ ಮನಸ್ಸಿನಲ್ಲಿ ಗುಣಗುಣಿಸುವಂತೆ ಮಾಡಿ ಈಗಲೂ ಅವು ನಮ್ಮ ನೆನಪಿನ ಕೋಶದಲ್ಲಿ ಭದ್ರವಾಗಿ ಉಳಿದಿವೆ. ‘ಪದ್ಯಗಳು ಕಾವ್ಯೇತರ ವಾಞ್ಮಯದಲ್ಲೂ ಬಳಕೆಯಾಗಲು ಎರಡು ಮುಖ್ಯ ಕಾರಣಗಳಿವೆ' ಎಂದು ತಿಳಿಸುತ್ತಾ ಹೀಗೆ ಹೇಳುತ್ತಾರೆ, ‘ಅ) ಪದ್ಯಗಳು ಸಂಕ್ಷಿಪ್ತ ನಿರೂಪಣೆಯನ್ನು ಬಯಸುವುದರಿಂದ ಖಚಿತವಾಗಿಹೇಳುವುದು ಸಾಧ್ಯವಾಗುತ್ತದೆ.
ಆ) ಪದ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸುಲಭ. ಶಿಕ್ಷಣವು ಮೌಖಿಕ ವಿಧಾನವನ್ನು ಅನುಸರಿಸುತ್ತಿದ್ದ ಕಾಲದಲ್ಲಿ ಇಂಥಾ ವಿಧಾನಗಳು ಅತ್ಯಂತ ಉಪಯುಕ್ತವೆನಿಸುತ್ತಿದ್ದಿರಬಹುದು.
ಕುವೆಂಪು ತಮ್ಮ ‘ನೆನಪಿನ ದೋಣಿಯಲ್ಲಿ' ಗೆಳೆಯನೊಬ್ಬನಿಗೆ ಚರಿತ್ರೆಯ ಪಾಠದ ಇಸವಿಗಳನ್ನು ನೆನಪಿಟ್ಟುಕೊಳ್ಳುವುದಕ್ಕೆ ಅನುವಾಗುವಂತೆ ಆ ಇಸವಿಗಳೆಲ್ಲಾ ಬರುವ ಪದ್ಯವೊಂದನ್ನು ಬರೆದು ಕೊಟ್ಟಿದ್ದರಂತೆ ಎಂದು ಹೇಳುತ್ತಾರೆ.'
ಕವಿಗೋಷ್ಟಿಯಲ್ಲಿ ವಾಚಿಸಿದ ಕವನಗಳು ವೈವಿಧ್ಯತೆಯಿಂದ ಕೂಡಿದ್ದವು. ಕನ್ನಡನಾಡು-ನುಡಿಗೆ ಸಂಬಂಧಿಸಿದವು, ರೈತರ ಅನುಭವಗಳು-ಸಮಸ್ಯೆಗಳು, ಸಮಾಜದ ಕುಂದು-ಕೊರತೆಗಳು, ರಾಜಕೀಯ, ಶಿಶುಗೀತೆ, ಪ್ರೀತಿ-ವಿರಹ......ಬಳ್ಳಾರಿಯ ಗಣಿಯ ಧೂಳೂ ವೇದಿಕೆಯನ್ನೇರಿ ಶ್ರೋತೃಗಳನ್ನು ಚಿಂತಿಸುವಂತೆ ಮಾಡಿತು! ಕವನಗಳನ್ನು ಆಲಿಸುತ್ತಾ ಇದ್ದಂತೆಯೇ ಸಮ್ಮೇಳನದ ಅಧ್ಯಕ್ಷರು ಹಂಚಿಕೊಂಡ ಅಭಿಪ್ರಾಯ ಮೌಲ್ಯಯುತವೆನಿಸಿತು,
*‘ರೂಪಕ ಪ್ರತಿಮೆ ಇಲ್ಲದಿದ್ದರೆ ಕವನ ಪಟ್ಟಿಯಾಗುತ್ತದೆ.'
ನೇರ-ನೇರವಾಗಿ ಮುಖಾಮುಖಿಯಾದಂತೆನಿಸುವಂತಿದ್ದ ಕೆಲವು ಕವನಗಳು ಅವರನ್ನು ಹಾಗೆ ಚಿಂತಿಸುವಂತೆ ಮಾಡಿದ್ದವು.
ಕವನ ಎಂದರೆ ಏನು? ಅದು ಗದ್ಯಕ್ಕಿಂತ ಹೇಗೆ ಭಿನ್ನವಾಗಿರುತ್ತದೆ? ಎನ್ನುವುದನ್ನು ಅರ್ಥಮಾಡಿಕೊಳ್ಳದೇ ಬರೆಯಲು ಹೊರಟಾಗ ಉಂಟಾಗುವ ಅಭಾಸದಿಂದ ಕವನವನ್ನು ರಚಿಸುವ ವಿಧಾನವನ್ನೂ ಕಲಿಯುವುದು ಅಗತ್ಯವಿದೆ ಎನಿಸುತ್ತದೆ. ಅದಕ್ಕೆ ಅಧ್ಯಕ್ಷರು ತಿಳಿಸಿದಂತೆ *‘ಶಾಲೆಗಳಲ್ಲಿ ಶಿಕ್ಷಕರು ಮಾರ್ಗದರ್ಶನ ನೀಡಬೇಕು.' ಗದ್ಯದ ಸಾಲುಗಳನ್ನು ಕತ್ತರಿಸಿ ಬರೆದರೆ ಅದೇ ಪದ್ಯವಾಗುತ್ತದೆ ಎಂಬಂಥಾ ಕಲವು ಬಾಲಿಶ ಭಾವನೆಗಳಿಂದ ನಾವು ಹೊರಬರಬೇಕಾಗುತ್ತದೆ ಎನಿಸಬಹುದು ಆದರೆ ಈ ಮೊದಲು ನಾನು ಬರೆದಿದ್ದ ‘ಹಾರ' ಎಂಬ ಕಥೆಯಲ್ಲಿನ ಕವನವೆಂದರೇನೆಂದೇ ಅರಿಯದ ನಾಯಕಿ ತನ್ನ ಜೀವನದ ಕಷ್ಟಗಳಿಂದ ನೊಂದು-ಬೆಂದು, ತನ್ನ ಭಾವನೆಗಳನ್ನು ತನಗರಿವಿಲ್ಲದಂತೆಯೇ ಕವನದ ರೂಪದಲ್ಲಿ ಪ್ರಚುರ ಪಡಿಸುತ್ತಾಳೆ. ‘........ಆದರೂ ಆತನ ಅನುಪಸ್ಥಿತಿ ನೀಡಿದ ಏಕಾಂತ ಅವಳಿಗೆ ತನ್ನೊಳಗನ್ನು ತಾನೇ ಜಾಲಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಆತನ ಸಾಮೀಪ್ಯ ತನ್ನ ಬದುಕಿಗೆ ಸಾರ್ಥಕ್ಯ ನೀಡಿತ್ತೇ ಎನ್ನುವ ಗೊಂದಲದಲ್ಲಿ ನೆನಪುಗಳು ಭೂತವ ಮೀಟಿ ನವೋದಯದ ದಾಟಿ ಹಿಡಿದವು. ಓದೇ ಜೀವಾಳವಾಗಿದ್ದವಳ ಕೈಗೆ ಲೇಖನಿ ಬಂತು. ಖಡ್ಗ ಹಿಡಿದ ‘ಸಮುರೈ'ನಂತೆ ಅವಳು ಬರೆಯುವುದರಲ್ಲಿ ತನ್ನಲ್ಲೇ ತಾನು ಲಯವಾದಳು. ಮನದಲ್ಲಿ ಮೊಳೆದ ನೂರಾರು ಪ್ರಶ್ನೆಗಳು-ಪ್ರಶ್ನೆಗಳಿಗೇ ಹುಟ್ಟು ನೀಡಿದವು. ಭಾವನೆಗಳನ್ನು ಮೆಟ್ಟಿನಿಂತ ವಿಚಾರ ಶಕ್ತಿ ವಿರಾಟರೂಪ ತಾಳಿತು. ಒಂಟಿ ಬದುಕು ಬಯಲಿಗಿಟ್ಟಂತಾಗಿ ಭಂಡಕಣ್ಣುಗಳ ಬೇಟೆಯ ವಸ್ತುವಾದ ಅರಿವಾಗಿ ಬಂಡಾಯಗೊಂಡರೂ ಸಮಸ್ಥಿತಿ ಸಾಧಿಸಿ ನವೋದಯ, ನವ್ಯ, ಬಂಡಾಯಗಳ ಅರಿವೇ ಇಲ್ಲದ ಅವಳು ತನ್ನದೇ ಹಾದಿಯಲ್ಲಿ ಸಾಗಲಾರಂಭಿಸಿದಳು. ‘ಸಂಗೀತದ ಸ್ವರ ಸಾಧನೆಯ ಅರಿವಿಲ್ಲದ ಮಗುವಿನ ಅಳುವಿನಂತೆ ತನ್ನ ಕವನ' ಎಂದುಕೊಂಡಳು.'
‘ಕವಿ ಕೇವಲ ಕವಿಯಲ್ಲ......' ಎನ್ನುವ ಕವನದಲ್ಲಿ ‘ಕವಿ'ಏನೇನೆಲ್ಲಾ ಆಗಿದ್ದಾನೆ ಎನ್ನುವ ಬಗ್ಗೆ ಕೇಳುವಾಗ........
‘ಒಮ್ಮೆ ಒಬ್ಬ ಹುಡುಗಿಯು ಬೇಂದ್ರೆಯವರಿಗೆ ತನ್ನ ಒಂದು ಕವನವನ್ನು ನೀಡಿ, ‘ಕವಿಯಾಗಲು ಎಷ್ಟು ಕವನಗಳನ್ನು ಬರೆಯಬೇಕು?' ಎಂದು ಕೇಳುತ್ತಾಳೆ. ಆಗ ಬೇಂದ್ರೆಯವರು, ‘ಒಂದು ಮಗುವನ್ನು ಪಡೆದ ತಾಯಿಯೂ ತಾಯಿಯೇ, ಒಂದು ಕವನವನ್ನು ಬರೆದರೂ ಕವಿ' ಎಂದು ಹೇಳುತ್ತಾರೆ!' ಎನ್ನುವುದು ನೆನಪಾಯಿತು.
ಮಾತನಾಡಲು ನಿಂತಾಗ ನಾನು ಗುರುತುಮಾಡಿಕೊಂಡಿದ್ದ ಆಂಶಗಳೆಲ್ಲಾ ಪರದೆಯ ಹಿಂದೆ ಸರಿದು ಬೇರೆಯದೇ ಧಾಟಿಯನ್ನು ಹಿಡಿಯಿತು. ನನ್ನೊಳಗಿನ ಪ್ರಾಮಾಣಿಕ ಅನಿಸಿಕೆಗಳೆಲ್ಲವೂ ಶಬ್ದರೂಪ ಪಡೆಯಲು ಹಂಬಲಿಸಿದವು. ಸಮಯದ ಅಭಾವದಿಂದ ಹೇಳಲು ಸಾಧ್ಯವಾದವುಗಳನ್ನು ಹೇಳಿ ಅವಕಾಶ ನೀಡಿದವರಿಗೆ ವಂದಿಸಿದೆ.

9 comments:

  1. Upayukta mahitipoorna tiluvalikeyulla lekhanA..

    _Nan blogigu bannI.

    ReplyDelete
  2. ಕಾವ್ಯಶೈಲಿಯ ಬಗೆಗೆ ಉತ್ತಮ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು.

    ReplyDelete
  3. tumbaa chennagide madam..
    nanna mattige illina pratiyondu points kuda nanage hosade...! ahudahudu yembante taleyadisuva vishayagalu...
    olle nirupane..

    ReplyDelete
  4. ಉತ್ತಮವಾದ ಮಾತುಗಳು ಪ್ರಭಾಮಣಿಯವರೇ,
    ಯಾವದೇ ಬರಹ/ಕವಿತೆಯೊಂದು ಹುಟ್ಟುವ ಪರಿಯನ್ನು,
    ಅದರ ಸೊಬಗನ್ನು ಅತ್ಯಂತ ಸರಳವಾಗಿ ಹೇಳಿದ್ದೀರಿ.
    ಥ್ಯಾಂಕ್ಸ್.

    ReplyDelete
  5. ಮೇಡಂ;ಕವಿತೆ ಎಂದರೇನು ಎನ್ನುವ ಚರ್ಚೆ ಹಿಂದಿನಿಂದಲೂ ಇದೆ.
    ಕೆ.ಎಸ್.ನ.ಅವರ ಇರುವಂತಿಗೆ ಪುಸ್ತಕದ ಪ್ರಸ್ತಾವನೆಯಲ್ಲಿ ಅವರು ಕವಿತೆ ಅಂದರೇನು ಅನ್ನುವುದರ ಬಗ್ಗೆ ಸವಿಸ್ತಾರವಾಗಿ ಬರೆದಿದ್ದಾರೆ ಎಂದು ನೆನಪು.ಯಾವುದೇ ಪ್ರಾಸವಿಲ್ಲದ ಅವರ ಪ್ರಸಿದ್ಧವಾದ'ತುಂಗ ಭದ್ರೆ'ಎನ್ನುವ ಕವಿತೆಯನ್ನು ಉದಾಹರಿಸುತ್ತಾರೆ.ಕವಿತೆ ಎಂದರೇನು ಎಂಬುದು ಅರ್ಥವಾಗಬೇಕಾದರೆ ಪ್ರಮುಖ ಕವಿಗಳ ಕವಿತೆಯನ್ನು ಸಾಧ್ಯವಿದ್ದಷ್ಟೂ ಓದಬೇಕು ಎನ್ನುವುದು ನನ್ನ ಅಭಿಪ್ರಾಯ.ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು ಮೇಡಂ.

    ReplyDelete
  6. ಮೇಡಂ,
    ಬರಹ ಸರಳವಾಗಿದ್ದು ತುಂಬಾ ಚೆನ್ನಾಗಿದೆ.
    ಧನ್ಯವಾದಗಳು.

    ReplyDelete
  7. ‘ಒಂದು ಮಗುವನ್ನು ಪಡೆದ ತಾಯಿಯೂ ತಾಯಿಯೇ, ಒಂದು ಕವನವನ್ನು ಬರೆದರೂ ಕವಿ' - ಈ ಸಾಲು ಇಷ್ಟವಾಯಿತು. ನನ್ನನ್ನೂ ಯಾರೂ 'ಕವಿ' ಅನ್ನದಿದ್ದರೂ ಪರವಾಗಿಲ್ಲ,ನನ್ನ ಹೆಸರಿನೊಂದಿಗೆ ಮನೆತನದ ಕುರುಹಾಗಿ ಕವಿ ಅಂಟಿಕೊಂಡಿದೆಯಲ್ಲಾ ಸಾಕು! :)

    ReplyDelete
  8. ಮೇಲಿನ ಮೂರು ಪೋಸ್ಟ್ ಗಳನ್ನು ಒಮ್ಮೆಗೆ ಓದಿದೆ. ಇದು ಹೆಚ್ಚು ಇಷ್ಟವಾಯ್ತು.ನಾನು ಇತ್ತೀಚಿಗೆ ಕವಿತೆಗಳನ್ನು ಓದಲು ಪ್ರಯತ್ನಿಸುತ್ತಿದ್ದೇನೆ. beginning with ದ.ರಾ. ಬೇಂದ್ರೆ...
    very nice write up.
    thank you Prabhamani
    :-)
    malathi S

    ReplyDelete