Saturday, November 19, 2011

ಹಗ್ಗ


ಹೊಸೆಯುತ್ತಿದ್ದಾನೆ ಈತ

ಹಗ್ಗವ

ಹೊಸೆದ ಭಾಗವ

ಕಾಲಿನಿಂದ ಮೆಟ್ಟಿ

ಆಗಾಗ ಪರೀಕ್ಷಿಸುತ್ತಾ

ಗಟ್ಟಿತನವ

ಉಡಿಯುತ್ತಲೇ

ಮಧ್ಯೆ ಮಧ್ಯೆ

ಸೇರಿಸುವ ಸೆಣಬು

ಎಂದೋ ಕತ್ತಾಳೆ

ಕೊಳೆಯಿಸಿ

ಸಿದ್ಧಗೊಳಿಸಿದ

ಕಸುಬು

ಅಲ್ಲಲ್ಲಿ

ತೆಂಗಿನ ಜುಂಗು

ಈಗೀಗ

ಸಂಶ್ಲೇಶಿತ ನಾರು

ಎಂದೂ ಮುಗಿಯದ

ಕಾರುಬಾರು

ಆದಿಯಿಲ್ಲದ

ಈ ಹಗ್ಗ

ಚಾಚುತಿದೆ

ಅನಂತಕೆ

ಜೀಗುವುದಷ್ಟೇ

ಕಸುಬುಗಾರಿಕೆ!

ಅಂದು

ತೂಗುತೊಟ್ಟಿಲಾಗಿದ್ದು

ಜೀವಜಂತುಗಳಿಗೆ

ಉರುಲೂ ಆಗಿದೆ

ಇಂದು

ಅಪರಾಧಿ

ನಿರಪರಾಧಿಗಳಿಗೆಲ್ಲಾ

ಆಕಾಶಕ್ಕೇರಿಸುವ

ನೂಲು ಏಣಿ

ಪ್ರಪಾತದತ್ತ

ಹಾರಲೂ ಅಣಿ!

ಸುತ್ತ ಸೆಳೆಯುತಿದೆ

ಎಲ್ಲರನೂ ತನ್ನತ್ತ

ಅಲ್ಲಲ್ಲೆ ನಿರ್ಮಿತ

ದಾಟಲಾರದ ವೃತ್ತ

ಸ್ಪೋಟಗೊಳ್ಳುತಲೇ ಇದೆ

ಅತೃಪ್ತಿ

ಹಗ್ಗಕಿದರ

ಎಗ್ಗೇ ಇಲ್ಲ

ಉದ್ದುದ್ದ ಬೆಳೆಯುತ್ತಲೇ ಇದೆ

`ಕೊಳೆಯನೇ

ಮೆತ್ತಿಕೊಳ್ಳುತ್ತಾ...

ಆಸ್ವಾದಿಸುತ್ತಾ...

13 comments:

  1. ಪಾಶಗಳು ಹೊರಗೆ ,ಕೊಂಡಿಗಳು ನಮ್ಮೊಳಗೆ!!ನಮ್ಮ ಸುತ್ತ ಎಷ್ಟು ಹಗ್ಗಗಳೋ!!ಸುಂದರ ಕವನ.

    ReplyDelete
  2. @ಡಾ. ಕೃಷ್ಣ ಮೂರ್ತಿಯವರೆ,
    ನಿಮ್ಮ ಮಾತು ನಿಜ ಸರ್,ನನ್ನ ಕವನವನ್ನು ಮೆಚ್ಚಿ ಆತ್ಮೀಯವಾಗಿ ಪ್ರೋತ್ಸಾಹಿಸಿದ ನಿಮ್ಮ ಮೊದಲ ಪ್ರತಿಕ್ರಿಯೆಗಾಗಿ ಹೃತ್ಪೂರ್ವಕ ನಮನಗಳು. ಬರುತ್ತಿರಿ.

    ReplyDelete
  3. ಹಗ್ಗದ ಸುತ್ತಲೂ ಸುತ್ತಿಕೊಳ್ಳುತ್ತಿರುವ ಕವನದ ರಚನೆ ಹಾಗು ಆಂತರ್ಯ ಪ್ರಶಂಸನೀಯವಾಗಿವೆ.

    ReplyDelete
  4. ಹಲ ಪಾಶಗಳೊಳ ಬಂಧಿತ ಬದುಕ ನಡೆ. ಸುಂದರವಾಗಿ ಹೆಣೆದು ಕೊಟ್ಟಿದ್ದೀರಿ ಮೇಡಂ. ಚಿಂತನೆಗೆ ಹಚ್ಚಿದವು.

    "ಆಕಾಶಕ್ಕೇರಿಸುವ
    ನೂಲು ಏಣಿ
    ಪ್ರಪಾತದತ್ತ
    ಹಾರಲೂ ಅಣಿ!"

    ಅದ್ಭುತ ಸಾಲುಗಳು.

    ReplyDelete
  5. @ ಸುನಾಥ್ ರವರೆ,
    ಕವನದ ಆಂತರ್ಯವನ್ನು ಪ್ರವೇಶಿಸಿ, ಪ್ರಶಂಸನೀಯವೆ೦ದು ಮೆಚ್ಚುಗೆಯನ್ನು ತಿಳಿಸಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. ಬರುತ್ತಿರಿ.

    ReplyDelete
  6. @ಬದರಿನಾಥ್ ರವರೆ,
    ನನ್ನ ಕವನದ ಸಾಲುಗಳನ್ನು ಮೆಚ್ಚಿ ಆತ್ಮೀಯವಾಗಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ನಿಮಗೆ ಹೃತ್ಪೂರ್ವಕ ನಮನಗಳು. ಬರುತ್ತಿರಿ.

    ReplyDelete
  7. ಬಂಧು - ಬಂಧನಗಳ ನಡುವಿನ ನಂಟು.. ಜನನ ಮರಣಗಳ ನಡುವೆ ಚೆನ್ನಾಗಿ ಹೊಸೆದಿದ್ದಿರಿ... ಓದಿದಂತೆ ಆಳಕ್ಕಿಳಿಸುವಸ್ಟು ಚೆಂದದ ಕವಿತೆ.. ಧನ್ಯವಾದಗಳು ಮೇಡಂ:)

    ReplyDelete
  8. @ಪ್ರತಾಪ್ ಬ್ರಹ್ಮಾವರ್ ರವರೆ,
    ನನ್ನ ಕವನದ ಆಳವರಿತು ಮೆಚ್ಚಿ ಆತ್ಮೀಯವಾಗಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ನಿಮಗೆ ಹೃತ್ಪೂರ್ವಕ ವ೦ದನೆಗಳು. ಬರುತ್ತಿರಿ.

    ReplyDelete
  9. ಅರ್ಥಪೂರ್ಣ ಸಾಲುಗಳು.. ತು೦ಬಾ ಚೆನ್ನಾಗಿದೆ.

    ReplyDelete
  10. ಬದುಕಿನ ಬಂಧನಗಳ ವಿವರಿಸುವ ಅರ್ಥಭರಿತ ಕವನ ನೀಡಿರುವಿರಿ.ಅಭಿನಂದನೆಗಳು.

    ReplyDelete
  11. ಚೆಂದದ ಕವನ.. ಹಗ್ಗದ ಹೋಲಿಕೆ ತುಂಬಾ ಚೆನ್ನಾಗಿ ಮೂಡಿದೆ..

    ReplyDelete
  12. ತುಂಬಾ ಇಷ್ಟವಾಯ್ತು ನಿಮ್ಮ ಕವನ. ಹೊಸೆಯುವ ಕೆಲಸ ಆತನದು. ಆತ ಹೊಸೆದ ಹಗ್ಗದ ಬಳಕೆಯ ನಿರ್ಧಾರ ನಮ್ಮದು. ಆಕಾಶಕ್ಕೆ ಎಣಿಯೋ, ಪಾತಾಳದ ಜೀವಕೆ ಆಧಾರವೋ, ತೂಗು ತೊಟ್ಟಿಲೋ, ಉರುಲೊ...
    ಅರ್ಥಗರ್ಭಿತವಾಗಿದೆ.ಧನ್ಯವಾದಗಳು ಮೇಡಮ್.

    ReplyDelete
  13. wow... ebta saalugaLu mam.. tumba chennagide istavaytu

    ReplyDelete