Sunday, February 12, 2012

ಮನದ ಅಂಗಳದಿ.................೭೯. ಹೊಗಳಿಕೆ

ನಾವು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗ ‘ಕಾಗೆ ಮತ್ತು ನರಿ’ ಎಂಬ ಪದ್ಯವಿತ್ತು. ಅದನ್ನು
‘ಕಾಗೆಯೊಂದು ಹಾರಿ ಬಂದು
ಮರದ ಮೇಲೆ ಕುಳಿತುಕೊಂಡು
ಬಾಯಲಿದ್ದ........’
ಎಂದು ರಾಗವಾಗಿ ಹಾಡುತ್ತಿದ್ದೆವು. ಕಾಗೆ ತಂದ ಆಹಾರದ ತುಣುಕನ್ನು ನರಿಯು ತಾನು ಪಡೆದುಕೊಳ್ಳುವುದಕ್ಕಾಗಿ ಮಾಡಿದ ಉಪಾಯ,
‘ನಿನ್ನ ದನಿಯದೆಷ್ಟು ಚಂದ
ನಿನ್ನ ರಾಗವೆಷ್ಟು ಅಂದ
ನಿನ್ನ ನೋಡಿ ಮನುಜರೆಲ್ಲ ಹಿಗ್ಗಿ ಕುಣಿವರು,’
ಎಂದು ಹೊಗಳಿ, ಅದು ಹಾಡುವಂತೆ ಮಾಡಿ, ಬಾಯಿಂದ ಕೆಳಗೆ ಬಿದ್ದ ಆಹಾರದ ತುಂಡನ್ನು ನರಿಯು ಎತ್ತಿಕೊಂಡು ಓಡಿಹೋದಾಗ ಕಾಗೆಯ ಬಗ್ಗೆ ನಮಗೆ ಎಲ್ಲಿಲ್ಲದ ಮರುಕ, ಮೋಸ ಮಾಡಿದ ನರಿಯ ಬಗ್ಗೆ ಕೋಪ ಬರುತ್ತಿತ್ತು. ಆದರೆ ಕಾಗೆಯು ಹೊಗಳಿಕೆಗೆ ಮನಸೋತು ತನಗೆ ತಾನೇ ಮೋಸಹೊಂದಿತು ಎನ್ನುವ ಅಂಶ ಅರ್ಥವಾಗುತ್ತಲೇ ಇರಲಿಲ್ಲ. ನಂತರದ ದಿನಗಳಲ್ಲಿ ಅದು ಈಸೋಪನ ನೀತಿಕಥೆ ಎನ್ನುವುದು ತಿಳಿಯಿತು. ಸುಮಾರು ಕ್ರಿ.ಪೂ.೬೨೦ರಿಂದ೫೬೪ರವರಗೆ ಜೀವಿಸಿದ್ದನೆಂದು ತಿಳಿದಿರುವ ಈಸೋಪನದೆಂದು ನಂಬಲಾದ ಹಲವಾರು ಕಥೆಗಳು ಅನೇಕ ಭಾಷೆಗಳಲ್ಲಿ ಲಭ್ಯವಿವೆ, ಅವುಗಳಲ್ಲಿ ಇದೂ ಒಂದು ಪ್ರಮುಖವಾದ ಕಥೆ. ಮನುಷ್ಯರ ರೀತಿಯಲ್ಲಿಯೇ ಮಾತನಾಡುವ ಪ್ರಾಣಿಗಳ ಮೂಲಕ ಜಗತ್ತಿಗೆ ನೀತಿಯನ್ನು ಸಾರಿರುವುದು ಈ ಕಥೆಗಳ ವೈಶಿಷ್ಟ್ಯ. ‘ಹೊಗಳುವವರನ್ನು ನಂಬಬಾರದು.’ ಎನ್ನುವುದೇ ಈ ಕಥೆಯ ನೀತಿ.
ಸುಷ್ಮಸಿಂಧುವಿನ ಕನಸುಗಳ ಕಥಾ ಸಂಕಲನವಾದ ‘ಪಯಣ ಸಾಗಿದಂತೆ...........’ಯಲ್ಲಿನ ‘ಶೋಧ’ ಎಂಬ ದೀರ್ಘ ಕನಸಿನ ಒಂದು ತುಣುಕು ಈ ರೀತಿ ಇದೆ:
‘ಅದೊಂದು ಹಸಿರು ಹಸಿರಾದ ಜಾಗ. ಒಳ್ಳೆಯ ಹೂವುಗಳ, ಹಣ್ಣುಗಳ ಗಿಡಗಳು, ಅವುಗಳನ್ನು ಆಸ್ವಾದಿಸುವ ಜನ, ಪಕ್ಷಿಗಳು, ಇವೆಲ್ಲದರ ಮಧ್ಯೆ ‘ಆ’ ಮರ ತಲೆಯೆತ್ತಿ ನಿಂತಿತ್ತು. ಅದರ ಮೈತುಂಬಾ ಬರೀ ಮುಳ್ಳುಗಳು. ‘ಹಸಿರು’ ತನ್ನ ಉಸಿರನ್ನು ಕಳೆದುಕೊಂಡು ಅಲ್ಲಿ ಮಲಗಿತ್ತು. ಸನಿಹದಲ್ಲೇ ಒಂದು ಮಾವಿನ ಮರ ಸೊಂಪುಸೊಂಪಾಗಿ ಬೆಳೆದಿತ್ತು. ಅದರ ಬುಡದಲ್ಲಿ ತಾವು ತಂದಿದ್ದ ಬುತ್ತಿ ಗಂಟನ್ನು ಬಿಚ್ಚಿ ತಿನ್ನುತ್ತಾ, ಮರದ ನೆರಳಿನಲ್ಲಿ ವಿಶ್ರಮಿಸುತ್ತಾ, ಅದರ ಮಾವುಗಳನ್ನು ತಿಂದು ತೇಗಿ ಹೊಗಳುವುದರಲ್ಲೇ ತಲ್ಲೀನವಾಗಿದ್ದ ಮಂದಿ. ಜೊತೆಗೆ ಗೂಡನ್ನು ಕಟ್ಟಿ ವಾಸಿಸುತ್ತಿದ್ದ ಮಂದಿಯ ನಿನಾದ! ಆ ಮರದ ಮುಖದಲ್ಲಿ ತುಂಬು ತೃಪ್ತಿ. ಅದರ ಸಂತೃಪ್ತಿಗೂ, ಮುಳ್ಳುಮರದ ಅತೃಪ್ತಿಗೂ ಅಜಗಜಾಂತರ ವ್ಯತ್ಯಾಸ. ಅಲ್ಲಿಗೆ ಬಂದವರದ್ದೆಲ್ಲಾ ಒಂದೇ ಮಾತು. ‘ಆ ಹಾಳು ಮುಳ್ಳಿನ ಮರ ತೆಗೆಸಿ ಅಲ್ಲೊಂದು ಹಣ್ಣಿನ ಮರ ಹಾಕಬಾರದ?’ ಈ ಮಾತುಗಳನ್ನು ಕೇಳೀ ಕೇಳೀ ಮುಳ್ಳಿನ ಮರ ರೋಸಿಹೋಗಿತ್ತು. ತನ್ನ ಸುತ್ತ ಚಿಗುರಿ ಪಲ್ಲೈಸುತ್ತಿದ್ದ ಗಿಡ, ಮರಗಳನ್ನು ಕಂಡು ಅದು ತನ್ನನ್ನು ತಾನೇ ಶಪಿಸಿಕೊಳ್ಳುತ್ತಿತ್ತು, ದೂಶಿಸಿಕೊಳ್ಳುತ್ತಿತ್ತು.
ಹಲವಾರು ತಿಂಗಳುರುಳಿದ ನಂತರ ಅದೊಂದು ದಿನ ಬಂದೇಬಿಟ್ಟಿತು. ಅಂದು ಮಾವಿನಲ್ಲಿ ನೆರಳಿರಲಿಲ್ಲ, ಹಣ್ಣಿರಲಿಲ್ಲ. ಕೆಳಗೆ ಹೊಗಳುವ ಜನರಿರಲಿಲ್ಲ. ನಿನಾದ ಹೊರಡಿಸುವ ಮಂದಿ ಇರಲಿಲ್ಲ............. ಅದು ಅಗಾಧ ಯಾತನೆಯಲ್ಲಿ ನರಳುತ್ತಿತ್ತು......... ಬರಬಾರದಾಗಿದ್ದ ‘ಬರ’ ಬಂದು ಎಲೆಗಳು ನೆಲದ ಮೇಲೆ ಸತ್ತು ಮಲಗಿದ್ದವು. ಉದ್ದದ ಬೋಳು ರೆಂಬೆಗಳು ‘ಏನನ್ನೋ’ ಹಂಬಲಿಸುತ್ತಿದ್ದವು. ಇತ್ತ ನಿಂತಿದ್ದ ಮುಳ್ಳಿನ ಮರ ಮಾವಿನ ಸ್ಥತಿ ಕಂಡು ಮರುಗಿತ್ತು. ಅದರೆಡೆಗೆ ಮುಖ ಮಾಡಿ ಹೇಳಿತು, ‘ಗೆಳತೀ ನಿನ್ನ ವೇದನೆಗೆ ನನ್ನ ಸಾಂತ್ವನವಿರಲಿ. ಅಂದು ಚಿಗುರಿ ನಗುತ್ತಿದ್ದ ನಿನ್ನನ್ನು ನೋಡಿ ಹೊಗಳುತ್ತಾ ನನ್ನನ್ನು ‘ಕಿತ್ತೊಗೆಯುವ’ ಸಲಹೆಗಳನ್ನು ನೀಡುತ್ತಿದ್ದ ಜನರೆಲ್ಲಿ? ಚೀರುತ್ತಾ ಸಂಗೀತ ಹಾಡುತ್ತಿದ್ದ ಆ ಮುದ್ದು ಸಖಿಯರೆಲ್ಲ? ಇಂದು ನಿನ್ನನ್ನು ಕಂಡು ನನಗೆ ನಿಜಕ್ಕೂ ದುಃಖವಾಗುತ್ತಿದೆ. ಎಂಥಾ ಬಾಳು ನಿನ್ನದು? ಬರೀ ನೆನಪುಗಳೇ ನಿನಗೆ ಆಧಾರ. ಆ ಸುಂದರ ಮಾತುಗಳೇ ಮುಂದಿನ ಕನಸುಗಳು. ಆದರೆ ಒಮ್ಮೆ ನನ್ನತ್ತ ತಿರುಗಿ ನೋಡು. ಅಂದು ಹೇಗಿದ್ದೆನೋ, ಇಂದೂ ಹಾಗೇ ನಿಂತಿದ್ದೇನೆ. ನನ್ನ ಪಾಲಿಗೆ ನೀನು ಅನುಭವಿಸಿದ ಸುಂದರ ನೆನಪುಗಳಿರಲಿಲ್ಲ. ನನ್ನೆದುರಿಗಿರುವುದು ನಾನೊಬ್ಬ ಮಾತ್ರ. ಅಂದೂ ಇಂದೂ ಹಾಗೇ ಇರುವ ‘ಸ್ಥಿರತೆ’ ಮಾತ್ರ. ನಾನು ನನಗೇ ಆಧಾರ. ನನ್ನ ಭಾವನೆಗಳೇ ನನಗೆ ಸಾಂತ್ವನ. ಹಾಗೆಂದು ನಾನು ನಿನ್ನನ್ನು ಹಂಗಿಸುತ್ತಿಲ್ಲ ಗೆಳತೀ, ನಿನ್ನೆದುರಿಗೆ ಇನ್ನೂ ಸುಂದರವಾದ ದಿನಗಳು ಬರಲಿ. ನಿನ್ನ ಸುಖ ಮರುಕಳಿಸಲಿ. ಆದರೆ...........ಆ ಜನರ ಬಣ್ಣದ ಮಾತುಗಳಿಗೆ ಮತ್ತೆ ಮೋಡಿಯಾಗಬೇಡ. ನಂತರ ಹೀಗೆ ರೋಧಿಸಲೂ ಬೇಡ. ನನ್ನ ಮೇಲಿನ ಮುಳ್ಳುಗಳನ್ನು ಮಾತ್ರ ನೋಡಿ ನನ್ನ ಅಂತರಂಗವ ಅರಿಯದ ಜನರನ್ನು ನಾನೇನನ್ನಲಿ ಹೇಳು? ಆದರೆ ಒಂದು ಮಾತು ಸತ್ಯ. ಯಾರೇ ನಮ್ಮನ್ನಗಲಿದರೂ ನಾವು ಬದುಕಬಲ್ಲೆವು. ನಾವು ನಮ್ಮಲ್ಲಿದ್ದರೆ ಮಾತ್ರ! ಅದೂ ಸ್ಥಿರವಾಗಿ!’
ಹೊಗಳಿಕೆ ನಮಗೆ ಅತ್ಯಂತ ಪ್ರಿಯವಾದದ್ದು. ನಮ್ಮ ಅಂದ-ಚಂದ, ನಾವು ಮಾಡಿದ ಕೆಲಸ, ನಮ್ಮ ಗುಣ-ಸ್ವಭಾವಗಳನ್ನು ಯಾರಾದರೂ ಹೊಗಳಿದರೆ ಅದರಿಂದ ಸ್ಫೂರ್ತಿಗೊಂಡು ನಮ್ಮನ್ನು ಇನ್ನೂ ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಈ ಗುಣ ಎಳವೆಯಲ್ಲಿ ಹೆಚ್ಚಾಗಿರುತ್ತದೆ. ಬೆಳೆದಂತೆ ಸರಿ-ತಪ್ಪು, ಸತ್ಯ-ಅಸತ್ಯಗಳ ವಿವೇಚನೆ ಹೆಚ್ಚಾಗುವುದರಿಂದ ಯಾವುದು ಸಹಜ, ಯಾವುದು ಅಸಹಜ ಎನ್ನಿಸುವುದನ್ನು ಅರಿತು ನಡೆಯಬೇಕಾಗುತ್ತದೆ. ಹೊಗಳುತ್ತಿರುವವರು ತಮ್ಮ ಸ್ವಾರ್ಥಸಾಧನೆಗಾಗಿ ಹಾಗೆ ಮಾಡುತ್ತಿದ್ದಾರೋ ಅಥವಾ ಗುಣಗ್ರಾಹಿಗಳೋ ಎನ್ನುವುದನ್ನು ತಿಳಿದುಕೊಂಡರೆ ಕ್ಷೇಮ.

4 comments:

  1. ಧನ್ಯವಾದಗಳು ಮೇಡಂ.

    ನನ್ನ ಈಗಿನ ಮನಸ್ಥಿತಿಗೆ ಉಪಶಮನ ದಂತಿರುವ ಈ ನೀತಿಯುಕ್ತ ಬರಹಕ್ಕಾಗಿ ಮತ್ತೋಮ್ಮೆ ಧನ್ಯವಾದಗಳು.

    ReplyDelete
  2. ಚೆನ್ನಾಗಿದೆ ಮೇಡಂ ...

    ReplyDelete
  3. ಬೈದವರೆನ್ನ ಬಂಧುಗಳೆಮ್ಬೆ,
    ಹೊಗಳಿದವರೆನ್ನ ಶೂಲಕ್ಕೆ ಏರಿಸಿದರೆಮ್ಬೆ,
    ಎಂಬ ವಚನದಂತೆ ಇದೆ ಈ ಲೇಖನ.. ಚೆನ್ನಾಗಿದೆ..

    ReplyDelete
  4. ಸುಖ ಬಂದಾಗ ಹಿಗ್ಗದೆ ಕಷ್ಟ ಬಂದಾಗ ಕುಗ್ಗದೆ ಬಾಳು ಎಂಬರ್ಥವೂ ಆ ಮುಳ್ಳಿನ ಮರದ ಮಾತಲ್ಲಿದೆ ಅಲ್ಲವೇ

    ReplyDelete