Sunday, March 25, 2012

ಮನದ ಅಂಗಳದಿ.........85. ಓಂ

‘ಓಂ’ ಒಂದು ಪದವಲ್ಲ. ಅದು ಒಂದು ನಾದಯುಕ್ತ ಉಚ್ಛಾರಣೆಯ ವಿಧವಾಗಿದೆ. ಸಂಗೀತದಂತೆಯೆ ಅದಕ್ಕೆ ಯಾವುದೇ ಕಾಲ, ಜನಾಂಗ, ಸಂಸ್ಕೃತಿಗಳ ತಡೆಗೋಡೆಯಿಲ್ಲ. ‘ಓಂ’ ಮಂತ್ರವು ಸಂಸ್ಕೃತದ ಮೂರು ಅಕ್ಷರಗಳಾದ ಅ, ಉ ಮತ್ತು ಮ ಗಳಿಂದ ಆಗಿದೆ. ‘ಮಹಿಮಾ’ದಲ್ಲಿ ಅ, ಉ, ಮ ಗಳನ್ನು ಸೃಷ್ಟಿ, ಸ್ಥಿತಿ, ಲಯಗಳೆಂದು ಅರ್ಥೈಸಿದ್ದಾರೆ. ಈ ಅಕ್ಷರಗಳನ್ನು ಸಂಯೋಗಗೊಳಿಸಿದಾಗ ‘ಓಂ’ ಎಂದಾಗುತ್ತದೆ. ಇದನ್ನು ವಿಶ್ವದ ಮೂಲ ಶಬ್ಧ ಎಂದು ಪರಿಗಣಿಸಲಾಗಿದೆ. ಉಳಿದೆಲ್ಲಾ ಶಬ್ಧಗಳನ್ನೂ ಓಂಕಾರವು ಒಳಗೊಂಡಿದೆ. ಇದು ತನ್ನಂತೆಯೇ ಒಂದು ‘ಮಂತ್ರ’ ಅಥವಾ ‘ಪ್ರಾರ್ಥನೆ’ಯಾಗಿದೆ. ಇದನ್ನು ಸರಿಯಾದ ಸ್ವರಪ್ರಯೋಗದೊಂದಿಗೆ ಪುನರಾವರ್ತನೆಗೊಳಿಸಿದರೆ ಇದು ದೇಹದಾದ್ಯಂತ ಪ್ರತಿನಾದಿತವಾಗಿ(Resonate) ಶಬ್ಧವು ವ್ಯಕ್ತಿಯ ಇರುವಿಕೆಯ ಕೇಂದ್ರದೊಳಗೆ ತೂರಿಹೋಗಿ ಆತ್ಮನನ್ನು ಪ್ರವೇಶಿಸುತ್ತದೆ.
‘ಓಂ’ ಬಗ್ಗೆ ಶ್ರೀ ರಾಮಕೃಷ್ಣರು ಹೀಗೆ ಹೇಳುತ್ತಾರೆ: “ಓಂ’ ಎಂಬ ದನಿಯೇ ಬ್ರಹ್ಮ. ಋಷಿಮುನಿಗಳು ಈ ನಾದವನ್ನು ಬ್ರಹ್ಮಜ್ಞಾನವನ್ನು ಹೊಂದಲು ಸಾಧಿಸಿದರು. ಅವರು ಪರಿಪೂರ್ಣತೆಯನ್ನು ಹೊಂದಿದ ನಂತರ ಈ ಅನಾದ್ಯಾನಂತ ಪದವು ಸ್ವತಃಪ್ರವರ್ತಿತವಾಗಿ(spontaneously) ಅವರ ನಾಭಿಯಿಂದ ಹೊಮ್ಮುತ್ತಿತ್ತು. ‘ಈ ಶಬ್ದವನ್ನು ಕೇಳುವ ಮಾತ್ರದಿಂದ ನೀನು ಏನನ್ನು ಪಡೆಯಬಲ್ಲೆ?’ ಎಂದು ಕೆಲವು ಸಾಧುಗಳು ಕೇಳಬಹುದು. ಸ್ವಲ್ಪ ದೂರದಿಂದ ಸಮುದ್ರದ ಅಲೆಗಳ ಮೊರೆತವನ್ನು ನೀನು ಕೇಳುತ್ತಿದ್ದು, ಅದನ್ನೇ ಅನುಸರಿಸುತ್ತಾ ಹೋದರೆ ಸಮುದ್ರವನ್ನು ತಲುಪಬಹುದು. ಎಲ್ಲಿಯವರೆಗೆ ಸಮುದ್ರದ ಮೊರೆತವಿರುತ್ತದೋ ಅಲ್ಲಿ ಸಮುದ್ರ ಇದ್ದೇ ಇರುತ್ತದೆ. ‘ಓಂ’ ನಾದವನ್ನು ಅನುಸರಿಸುತ್ತಾ ಸಾಗಿದರೆ ‘ಬ್ರಹ್ಮ’ವನ್ನು ಪಡೆಯಬಹುದು. ಈ ‘ಬ್ರಹ್ಮ’ವೇ ವೇದಗಳಲ್ಲಿ ಅಂತಿಮ ಗುರಿ ಎಂದು ವಿವರಿಸಲ್ಪಟ್ಟಿದೆ.’ ಶ್ರೀ ರಾಮಕೃಷ್ಣರು ‘ಓಂ’(aum) ಶಬ್ಧವನ್ನು ಘಂಟಾನಾದವಾದ ‘ಟಾಂ’(tom: t-o-m)ನ್ನು ಉದಾಹರಿಸಿ ವಿವರಿಸಿದ್ದಾರೆ.
ಈ ಸರಳವಾದ ಆದರೆ ಆಳವಾದ ದಾರ್ಶನಿಕ ಧ್ವನಿಯಲ್ಲಿ ಶಾಂತಿ, ಏಕತೆ, ಆನಂದವು ಅಡಗಿದೆ. ಇದು ದ್ವಿಮುಖವಾದ ಅಭಿಪ್ರಾಯಗಳನ್ನು ಉಂಟುಮಾಡುತ್ತದೆ. ಇದು ಮನಸ್ಸನ್ನು ವಿವರಿಸಲು ಅಸಾಧ್ಯವಾದ ಅಮೂರ್ತದೆಡೆಗೆ ಕೊಂಡೊಯ್ಯುತ್ತದೆ. ಹಾಗೆಯೇ ಪೂರ್ಣತ್ವವನ್ನು ಹೆಚ್ಚು ಅರ್ಥಪೂರ್ಣಗೊಳಿಸುತ್ತದೆ.
ಧ್ಯಾನದ ಸಮಯದಲ್ಲಿ ಓಂಕಾರವನ್ನು ಉಚ್ಛಾರ ಮಾಡಿದರೆ ನಮ್ಮೊಳಗೇ ನಾವು ಉಂಟುಮಾಡುವ ಕಂಪನವು ಕಾಸ್ಮಿಕ್ ತರಂಗಗಳೊಡನೆ ಏಕೀಭವಿಸಿ ನಾವು ವಿಶ್ವವ್ಯಾಪಿಯಾಗಿ ಚಿಂತಿಸಲಾರಂಭಿಸುತ್ತೇವೆ. ಎರಡು ಉಚ್ಛಾರಗಳ ನಡುವಿನ ಮೌನವು ಸ್ಪಷ್ಟವಾಗಲಾರಂಭಿಸುತ್ತದೆ. ಮನಸ್ಸು ಮೌನ ಮತ್ತು ಶಬ್ಧಗಳ ವೈರುಧ್ಯಗಳ ನಡುವೆ ಚಲಿಸಲಾರಂಭಿಸಿ ಕಡೆಗೆ ಶಬ್ಧವನ್ನು ನಿಶ್ಶೇಷಗೊಳಿಸುತ್ತದೆ. ಮೌನದಲ್ಲಿ ಒಂದೇ ವಿಚಾರವಾದ ‘ಓಂ’ಅನ್ನು ಶೋಧಿಸಲಾರಂಭಿಸಿದಾಗ ಆಲೋಚನೆಯೇ ಇಲ್ಲವಾಗುತ್ತದೆ! ಇದೇ ಸಮಾಧಿಸ್ಥಿತಿ. ಈ ಪವಿತ್ರವಾದ ಅರಿವು ಮೂಡಿದ ಸ್ಥಿತಿಯಲ್ಲಿ ಮನಸ್ಸು ಮತ್ತು ಬುದ್ಧಿವಂತಿಕೆಯು ಮೇಲೇರಲ್ಪಟ್ಟು ವ್ಯಕ್ತಿಯ ತನ್ನತನವು ವಿಶ್ವದ ಆತ್ಮದೊಂದಿಗೆ ಲೀನವಾಗುತ್ತದೆ. ಈ ಕ್ಷಣದಲ್ಲಿ ವಿಶ್ವದ ಮಹಾಭಿಲಾಷೆಯೆದುರು ಪ್ರಾಪಂಚಿಕವಾದ ಸಣ್ಣಪುಟ್ಟ ಆಸೆಗಳು ಕಳೆದುಹೋಗುತ್ತವೆ. ಅಳತೆಗೆ ನಿಲುಕದ ‘ಓಂ’ ನ ಸಾಮರ್ಥ್ಯ ಹೀಗಿದೆ.
‘ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತ ನಡೆಯುವ ವಿದ್ಯಮಾನಗಳು ನಮ್ಮಿಂದ ಏಕಾಗ್ರತೆ ಮತ್ತು ಜಾಗೃತಗುಣವನ್ನು ದೂರಮಾಡಿವೆ. ದಿನಬೆಳಗಾದರೆ ನಮ್ಮ ಕಾರ್ಯಕ್ಷೇತ್ರದಲ್ಲಿ ಅನೇಕ ಒತ್ತಡಗಳಿಗೆ ಒಳಗಾಗುತ್ತಿದ್ದೇವೆ. ವಿಶೇಷವಾಗಿ ಸಾಫ್ಟ್ ವೇರ್ ಇಂಡಸ್ಟ್ರಿಯವರು ಬೇರೆಬೇರೆ ರೀತಿಯ ಛಾಲೆಂಜ್ ಗಳು, ಅಡ್ಡಿ ಆತಂಕಗಳನ್ನು ಎದುರಿಸುತ್ತಿರುತ್ತಾರೆ. ಈ ರೀತಿಯ ಒತ್ತಡಗಳನ್ನು ನಿಭಾಯಿಸುವುದು ತ್ರಾಸದಾಯಕವೆನಿಸುತ್ತದೆ. ಈ ಎಲ್ಲಾ ತೊಂದರೆಗಳನ್ನು ನಿವಾರಿಸಿಕೊಳ್ಳಲು ಧ್ಯಾನವು ಎಲ್ಲಾ ಮಾನವ ಜೀವಿಗಳಿಗೂ ಅತ್ಯಗತ್ಯವಾಗಿದೆ. ಧ್ಯಾನವನ್ನು ಮಾಡುವಾಗ ‘ಓಂ’ಕಾರ ಮಂತ್ರ ಪಠಣವು ಮನಸ್ಸಿನಲ್ಲಿ ಶಾಂತಿ ಮತ್ತು ಸಮಾಧಾನವನ್ನು ಉಂಟುಮಾಡುತ್ತದೆ. ಮಾನಸಿಕ ಒತ್ತಡ ಮತ್ತು ಪ್ರಾಪಂಚಿಕ ಆಲೋಚನೆಗಳು ‘ಓಂ’ ಮಂತ್ರ ಪಠಣದಿಂದ ದೂರವಾಗುತ್ತವೆ,’ ಎಂದು Rycharde manne ಹೇಳಿದ್ದಾರೆ. ‘ಓಂ’ನ ವೈಜ್ಞಾನಿಕ ಮಹತ್ವದ ಬಗ್ಗೆ ಅವರು ಅಧ್ಯಯನ ಮಾಡಿದ್ದಾರೆ.
‘ಹಿಂದೂಗಳಲ್ಲಿ ಮತ್ತು ಬೌದ್ಧರಲ್ಲಿ ಧ್ಯಾನದ ಸಮಯದಲ್ಲಿ ಮನಸ್ಸನ್ನು ಏಕಾಗ್ರಗೊಳಿಸುವ ಮೂಲಮಂತ್ರ ‘ಓಂ’ ಆಗಿದೆ. ನಿಮಗೆ ಗುರುವಿನಿಂದ ಈವರಗೆ ಯಾವುದೇ ನಿರ್ದಿಷ್ಟ ಮಂತ್ರ ದೊರೆಯದಿದ್ದರೆ ನೀವು ‘ಓಂ’ಕಾರವನ್ನು ಪಠಿಸುವುದು ಉತ್ತಮ. ಸಂಶೋಧಕರ ಪ್ರಮುಖ ಗುರಿ ‘ಓಂ’ಕಾರವನ್ನು ಪಠಿಸುವುದು ಮಾನಸಿಕ ಪ್ರಶಾಂತತೆಯನ್ನು ಉಂಟುಮಾಡುತ್ತದೆಯೇ ಎನ್ನುವುದಾಗಿದ್ದು, ಇದರ ಕಲ್ಪನೆಯು ಪಠನದ ಧ್ವನಿ ಸ್ಥಿರವಾಗಿದ್ದರೆ ಮನಸ್ಸೂ ಸ್ಥಿವಾಗಿರುತ್ತದೆ ಎನ್ನುವುದಾಗಿತ್ತು. ಅವರು ಜನರ ‘ಓಂ’ಪಠನದ ಸಿಗ್ನಲ್ ಅನ್ನು ಟೈಮ್-ಫ್ರಿಕ್ವೆನ್ಸಿ ಅನಲೈಸರ್ ಮೂಲಕ ಕಳುಹಿಸಿದರು. ಗ್ರಾಫನ್ನು ಪರಿಶೀಲಿಸಿದಾಗ ‘ಓಂ’ ಪಠನವನ್ನು ಅಭ್ಯಾಸಮಾಡಿ ಹೆಚ್ಚು ಪರಿಣತಿಯನ್ನು ಪಡೆದಂತೆ, ವಿಶ್ಲೇಷಿಸಿದ ಸಿಗ್ನಲ್ ಹೆಚ್ಚು ಸ್ಥಿರವಾಗಿರುವುದು ಕಂಡುಬಂದಿತು. ಇದರಿಂದ ಓಂ ಮಂತ್ರವನ್ನು ಪಠಿಸುವುದು ಮನಸ್ಸಿನಲ್ಲಿ ಸ್ಥಿರತೆಯನ್ನು ಉಂಟುಮಾಡುತ್ತದೆ ಎಂದು ವೈಜ್ಞಾನಿಕವಾಗಿ ತೀರ್ಮಾನಿಸಲಾಯಿತು. ಓಂಕಾರವು ಒತ್ತಡಕ್ಕೆ ಒಳಗಾದ ಮನಸ್ಸಿಗೆ ಶಾಂತಿ ಮತ್ತು ಸಮಾಧಾನವನ್ನು ಉಂಟುಮಾಡುತ್ತದೆ. ಮನಸ್ಸು ಸ್ಥಿರತೆಯನ್ನು ತಲುಪಿದಾಗ ಮಾನಸಿಕ ಒತ್ತಡವು ಕಡಿಮೆಯಾಗುತ್ತದೆ. ನಾವು ವೈಜ್ಞಾನಿಕವಾಗಿ ಓಂಕಾರ ಪಠನದಿಂದ ಮನುಷ್ಯನ ಮನಸ್ಸಿನ ಮೇಲಿನ ಒತ್ತಡ ನಿವಾರಣೆಯ ಬಗ್ಗೆ ಸಮರ್ಥವಾಗಿ ನಿರ್ಧರಿಸಿದ್ದೇವೆ. ಮುಂದೆ ಯಾರಾದರೂ ಈ ವಿಷಯದಲ್ಲಿ ಉತ್ತಮ ಕಾರ್ಯವನ್ನು ಮಾಡಬಹುದೆಂದು ಆಶಿಸೋಣ.......’ ಎನ್ನುತ್ತಾರೆ Rycharde manne.
‘ಓಂ’ಕಾರವು ನಿರ್ಗುಣ ಮತ್ತು ಸಗುಣಗಳೆರಡನ್ನೂ ಪ್ರತಿನಿಧಿಸುತ್ತದೆ. ಆದ್ದರಿಂದ ಅದನ್ನು ‘ಪ್ರಣವ’ ಎಂದು ಕರೆಯುತ್ತಾರೆ. ಇದರ ಅರ್ಥ, ಓಂಕಾರವು ನಮ್ಮ ಪ್ರಾಣ ಅಥವಾ ಉಸಿರಿನ ಮೂಲಕ ನಮ್ಮ ಜೀವನವನ್ನೇ ವ್ಯಾಪಿಸಿದೆ.
ಇಂಥಾ ‘ಓಂ’ ಮಂತ್ರದ ಪಠನದ ಮೂಲಕ ಪ್ರಶಾಂತ ಮನಃಸ್ಥಿತಿಯನ್ನು ಪಡೆಯೋಣ.

9 comments:

  1. ಮೇಡಂ;ಓಂಕಾರದ ಬಗ್ಗೆ ಉತ್ತಮ ಮಾಹಿತಿಗೆ ಧನ್ಯವಾದಗಳು.ನಮ್ಮ ನಿತ್ಯದ ಜೀವನದಲ್ಲೂ ಇದನ್ನು ಅಳವಡಿಸಿಕೊಂಡು ಹೆಚ್ಚಿನ ಶಾಂತಿಯನ್ನು ಪಡೆಯೋಣ.ನಮಸ್ಕಾರ.

    ReplyDelete
    Replies
    1. `ಓಂ' ಲೇಖನದ ಅಳವಡಿಕೆಯ ಅಗತ್ಯ ತಿಳಿಸಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಸರ್. ಬರುತ್ತಿರಿ.

      Delete
  2. ಚೆನ್ನಾಗಿದೆ. ಸಮಸ್ಯೆ ಇರುವುದು ಆಚರಣೆಯಲ್ಲಿ.

    ReplyDelete
    Replies
    1. ನಿಜ ಸರ್, ಪ್ರಯತ್ನಿಸಬೇಕು. ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

      Delete
  3. ಬೆಳ್ಳಂಬೆಳಗ್ಗೆ ಆಫೀಸಿನಲ್ಲಿ ಕೆಲಸ ಶುರು ಮಾಡುವ ಮುನ್ನ ಓಂ-ಕಾರದ ಬ್ಲಾಗ್ ಓದುವುದರಿಂದ ಕೆಲಸ ಸುಗಮವಾಗತ್ತೆ ಮತ್ತು ಕಾಲಕಾಲಕ್ಕೆ ಸರಿಯಾಗಿ ಹೈಕ್- ಪ್ರೊಮೋಷನ್ ಗಳು ಕೂಡಾ ಸರಿಯಾಗಿ ಸಿಗುತ್ತವಂತೆ! ಥ್ಯಾಂಕ್ಸ್ ಮೇಡಮ್!

    ReplyDelete
    Replies
    1. `ಯದ್ ಭಾವಂ ತದ್ ಭವತಿ' ಎ೦ಬ ಉಕ್ತಿ ಇದೆ! ಪ್ರತಿಕ್ರಿಯೆಗಾಗಿ ವ೦ದನೆಗಳು ಮೇಡಂ , ನನ್ನ ಬ್ಲಾಗ್ ಗೆ ಸದಾ ಸ್ವಾಗತ.

      Delete
  4. ಓಂಕಾರದ ಅತ್ಯುತ್ತಮ ಲೇಖನ ಇದು. ನಾನು ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಶಾಲೆಯಲ್ಲಿ ಓದುತ್ತಿದ್ದಾಗ, ಬೆಳಗಿನ ಜಾವ ಮತ್ತು ಮುಸ್ಸಂಜೆ ಪ್ರಾರ್ಥನೆಗಳಲ್ಲಿ ಒಂಕಾರದ ನಾದದ ಶಾಂತತೆ ಮತ್ತು ಅದರ ನಾದ ಝೇಂಕಾರ ಅನುಭವಿಸಿದ್ದೇನೆ.

    ReplyDelete
    Replies
    1. ಸ್ವಾನುಭವದಿ೦ದ `ಓಂ'ಕಾರದ ಮಹತ್ವವನ್ನು ಕ೦ಡವರು ನೀವು. ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸರ್. ಬರುತ್ತಿರಿ.

      Delete
  5. om bagge olle maahiti - christian AAMEN saha ohm nante allave!

    ReplyDelete