Friday, March 16, 2012

ಹಗ್ಗ

ಹೊಸೆಯುತ್ತಿದ್ದಾನೆ ಈತ
ಹಗ್ಗವ
ಹೊಸೆದ ಭಾಗವ
ಕಾಲಿನಿಂದ ಮೆಟ್ಟಿ
ಆಗಾಗ ಪರೀಕ್ಷಿಸುತ್ತಾ
ಗಟ್ಟಿತನವ

ಉಡಿಯುತ್ತಲೇ
ಮಧ್ಯೆ ಮಧ್ಯೆ
ಸೇರಿಸುವ ಸೆಣಬು
ಎಂದೋ ಕತ್ತಾಳೆ
ಕೊಳೆಯಿಸಿ
ಸಿದ್ಧಗೊಳಿಸಿದ
ಕಸುಬು

ಅಲ್ಲಲ್ಲಿ
ತೆಂಗಿನ ಜುಂಗು
ಈಗೀಗ
ಸಂಶ್ಲೇಶಿತ ನಾರು
ಎಂದೂ ಮುಗಿಯದ
ಕಾರುಬಾರು

ಆದಿಯಿಲ್ಲದ
ಈ ಹಗ್ಗ
ಚಾಚುತಿದೆ
ಅನಂತಕೆ
ಜೀಗುವುದಷ್ಟೇ
ಕಸುಬುಗಾರಿಕೆ!

ಅಂದು
ತೂಗುತೊಟ್ಟಿಲಾಗಿದ್ದು
ಜೀವಜಂತುಗಳಿಗೆ
ಉರುಲೂ ಆಗಿದೆ
ಇಂದು
ಅಪರಾಧಿ
ನಿರಪರಾಧಿಗಳಿಗೆಲ್ಲಾ

ಆಕಾಶಕ್ಕೇರಿಸುವ
ನೂಲು ಏಣಿ
ಪ್ರಪಾತದತ್ತ
ಹಾರಲೂ ಅಣಿ!

ಸುತ್ತ ಸೆಳೆಯುತಿದೆ
ಎಲ್ಲರನೂ ತನ್ನತ್ತ
ಅಲ್ಲಲ್ಲೆ ನಿರ್ಮಿತ
ದಾಟಲಾರದ ವೃತ್ತ

ಸ್ಪೋಟಗೊಳ್ಳುತಲೇ ಇದೆ
ಅತೃಪ್ತಿ
ಹಗ್ಗಕಿದರ
ಎಗ್ಗೇ ಇಲ್ಲ
ಉದ್ದುದ್ದ ಬೆಳೆಯುತ್ತಲೇ ಇದೆ
`ಕೊಳೆ’ಯನೇ
ಮೆತ್ತಿಕೊಳ್ಳುತ್ತಾ...
ಆಸ್ವಾದಿಸುತ್ತಾ...

17 comments:

  1. ಮೇಡಮ್,
    ಒಂದು ಹಗ್ಗದ ಸುತ್ತ ಜೀವನದರ್ಶನವನ್ನೇ ಹೆಣೆದಿದ್ದೀರಿ. ಭಾವ ಹಾಗು ವಿಚಾರ ಎರಡನ್ನೂ ಮೇಳವಿಸಿದ ಸುಂದರ ಕವನಕ್ಕಾಗಿ ಅಭಿನಂದನೆಗಳು.

    ReplyDelete
    Replies
    1. @ ಸುನಾಥ್ ರವರೆ,
      ನನ್ನ ಕವನಕ್ಕೆ ಮೆಚ್ಚುಗೆಯನ್ನು ತಿಳಿಸಿ ಶೀಘ್ರವಾಗಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. ಬರುತ್ತಿರಿ.

      Delete
  2. ಸುಂದರ ದಾರ್ಶನಿಕ ಕಾವ್ಯ

    ReplyDelete
    Replies
    1. A V G ರಾವ್ ರವರೆ,
      ನನ್ನ ಕವನದ ಅ೦ತರಾರ್ಥವನ್ನು ತಿಳಿದು ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಸರ್. ಬರುತ್ತಿರಿ.

      Delete
  3. Replies
    1. ಉಮಾ ಭಟ್ ರವರೆ,
      ಕವನದ ಸೌಂದರ್ಯವನ್ನು ಒಪ್ಪಿದ್ದಕ್ಕಾಗಿ ಧನ್ಯವಾದಗಳು ಮೇಡ೦. ಬರುತ್ತಿರಿ.

      Delete
  4. ಒಂದು ಹಗ್ಗವನ್ನು ರೂಪಕವನ್ನಾಗಿ ಇಟ್ಟುಕೊಂಡು ಎಂತೆಂಥ ಸನ್ನಿವೇಶಗಳ ದರ್ಶನ ಮಾಡಿಸಿದ್ದೀರಿ. ತುಂಬಾ ಚೆನ್ನಾಗಿದೆ. ಬಹಳ ಇಷ್ಟವಾಯಿತು!

    ReplyDelete
    Replies
    1. ಪ್ರದೀಪ್ ರಾವ್ ರವರೆ,
      ಕವನ `ಹಗ್ಗ'ವನ್ನು ಆಮೂಲಾಗ್ರವಾಗಿ ಅರ್ಥೈಸಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

      Delete
  5. ಸುಂದರ ಕವನ ಮೇಡಂ.ಅಭಿನಂದನೆಗಳು.

    ReplyDelete
    Replies
    1. @ಡಾ. ಕೃಷ್ಣ ಮೂರ್ತಿಯವರೆ,
      ಕವನದ ಸೌಂದರ್ಯವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಸರ್. ಬರುತ್ತಿರಿ.

      Delete
  6. ಈ ಕವನ ಓದಿ ನಮ್ಮ ಸೋದರ ಮಾವ ಹಗ್ಗ ಹೊಸೆಯುತ್ತಿದ್ದದ್ದು ನೆನಪಾಯಿತು.. ತುಂಬಾ ಚೆನ್ನಾಗಿ ಹಗ್ಗದಲ್ಲಿ ಒಂದು ಬುಟ್ಟಿ ಮಾಡಿ ನನಗೆ ಕೊಟ್ಟಿದ್ದರು ನಾನು ಕುವೈತಿಗೆ ತೆಗೆದುಕೊಂಡು ಬಂದೆ... ಥಾಂಕ್ಯೂ ಒಳ್ಳೆ ಕವನ

    ReplyDelete
    Replies
    1. ಕವನ `ಹಗ್ಗ'ದಿ೦ದ ನಿಮ್ಮ ಸೋದರ ಮಾವನವರ ನೆನಪಾದದ್ದು ತಿಳಿದು ಸ೦ತಸವಾಯಿತು. ಅವರಿಗೆ ನನ್ನ ನಮನಗಳು. ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಸುಗುಣ ಮೇಡಂ, ಬರುತ್ತಿರಿ.

      Delete
  7. "ಹಗ್ಗೋಪನಿಷದ್" ಚೆನ್ನಾಗಿದೆ ಮೇಡಂ! ಬಿಂದುವಿನಲ್ಲಿ ಸಿಂಧುವಿನಂತಿದೆ!

    ReplyDelete
    Replies
    1. "ಹಗ್ಗೋಪನಿಷದ್" ಹೊಸ ಪದವೊ೦ದನ್ನು ಕಟ್ಟಿ ಕವನವನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು ಶಾರದ ಮೇಡ೦. ಬರುತ್ತಿರಿ.

      Delete
  8. Madam, ಸುಂದರ ಕವನ.
    ಧನ್ಯವಾದಗಳು

    ReplyDelete
    Replies
    1. ಕವನದ ಅ೦ದವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಚ೦ದ್ರು ಸರ್. ಬರುತ್ತಿರಿ.

      Delete