‘ಯಾವಾಗಲೂ ಸ್ವಬುದ್ಧಿ ಇರಬೇಕು,’ ಎಂದು ಹಿರಿಯರು ಹೇಳಿರುವುದನ್ನು ಕೇಳಿರುತ್ತೇವೆ. ‘ನಮ್ಮ ಬುದ್ದಿ ನಮ್ಮ ಕೈಲಿರಬೇಕು,’ ಎನ್ನುವ ಮಾತೂ ನಾವು ಸ್ವಂತ ಬುದ್ಧಿಯನ್ನು ಉಪಯೋಗಿಸಿಕೊಳ್ಳಬೇಕು ಎನ್ನುವುದನ್ನೇ ಬಿಂಬಿಸುತ್ತದೆ. ಹೇಳಿಕೆಯ ಮಾತನ್ನು ಕೇಳಬಾರದು, ಸ್ವವಿವೇಚನೆಯಿರಬೇಕು ಎನ್ನುವುದು ಎಲ್ಲ ಕಾಲಕ್ಕೂ ಸತ್ಯ. ಈ ವಿವೇಚನೆ ಅಥವಾ ವಿವೇಕವು ನಮಗೆ ಸ್ವ-ಜ್ಞಾನವಿದ್ದಾಗ ಮಾತ್ರ ಲಭಿಸುತ್ತದೆ ಎನ್ನುವುದನ್ನು ಜಿಡ್ಡು ಕೃಷ್ಣಮೂರ್ತಿಯವರು (ಅನುದಿನ ಚಿಂತನ) ಬಹಳ ಅರ್ಥಪೂರ್ಣವಾಗಿ ತಿಳಿಸಿಕೊಟ್ಟಿದ್ದಾರೆ:
‘ನಾವು ಬುದ್ಧಿ ಮತ್ತು ಭಾವಗಳನ್ನು ಬೇರ್ಪಡಿಸಿ, ಭಾವವನ್ನು ಬಲಿಗೊಟ್ಟು ಬುದ್ಧಿಯನ್ನು ಬೆಳೆಸಿಕೊಂಡಿದ್ದೇವೆ. ಒಂದು ಕಾಲು ಉಳಿದೆರಡಕ್ಕಿಂತ ಬಹಳ ಉದ್ದವಾಗಿರುವ, ಸಮತೋಲ ಕಳೆದುಕೊಂಡಿರುವ, ಮೂರು ಕಾಲಿನ ಪ್ರಾಣಿಗಳಂತಿದ್ದೇವೆ ನಾವು. ಬುದ್ಧಿಜೀವಿಗಳಾಗಿರುವ ತರಬೇತಿ ನಮಗೆಲ್ಲಾ ಸಿಕ್ಕಿದೆ. ನಮ್ಮ ಶಿಕ್ಷಣವು ಬುದ್ಧಿಗೆ ಸಾಣೆ ಹಿಡಿದು, ಸಂಗ್ರಹಶೀಲವಾಗುವಂತೆ, ತಂತ್ರಿಗಳಾಗುವಂತೆ ಮಾಡಿದೆ. ಆದ್ದರಿಂದಲೇ ನಮ್ಮ ಬದುಕಿನಲ್ಲಿ ಬುದ್ಧಿಗೆ ಅಪಾರ ಪ್ರಾಮುಖ್ಯ ದೊರಕಿದೆ. ವಿವೇಕವು ಬುದ್ಧಿಗಿಂತಲೂ ದೊಡ್ಡದು, ಮಿಗಿಲಾದದ್ದು. ಅದರಲ್ಲಿ ವಿಚಾರ ಮತ್ತು ಪ್ರೀತಿಗಳ ಸಂಯೋಗವಿದೆ. ನಾನು ಎಂಬ ಇಡೀ ಪ್ರಕ್ರಿಯೆಯನ್ನು ಆಳವಾಗಿ ಅರ್ಥಮಾಡಿಕೊಂಡಾಗ ಬರುವ ಸ್ವ-ಜ್ಞಾನ ನಮ್ಮಲ್ಲಿದ್ದಾಗ ಮಾತ್ರ ವಿವೇಕಿಗಳಾಗುತ್ತೇವೆ.’
ಆಸೆ ಮತ್ತು ಸ್ವ-ಜ್ಞಾನಕ್ಕಿರುವ ಸಂಬಂಧವನ್ನು ವಿಶ್ಲೇಷಿಸುತ್ತಾ ‘......ಅನುಭವದ ಆಸೆಯೇ ಅನುಭವಿಯನ್ನು ಸೃಷ್ಟಿಸುತ್ತದೆ. ಆ ಅನುಭವಿ ಅನುಭವವನ್ನು ಸಂಗ್ರಹಿಸಿ ನೆನಪಿನಲ್ಲಿ ಇಟ್ಟುಕೊಳ್ಳುತ್ತಾನೆ. ಆಸೆಯೇ ಆಲೋಚಕನನ್ನೂ ಮತ್ತು ಆಲೋಚನೆಯನ್ನು ಬೇರೆಬೇರೆ ಮಾಡುತ್ತದೆ. ಏನೋ ಆಗುವ, ಅನುಭವಿಸುವ, ಹೆಚ್ಚು ಅಥವಾ ಕಡಿಮೆ ಮಾಡಿಕೊಳ್ಳುವ ಆಸೆ ಅನುಭವಕ್ಕೂ ಅನುಭವಿಗೂ ನಡುವೆ ಭೇದವನ್ನು ಕಲ್ಪಿಸುತ್ತದೆ. ಆಸೆಯ ದಾರಿಗಳನ್ನು ಅರಿಯುವುದೇ ಸ್ವ-ಜ್ಞಾನ, ಸ್ವ-ಜ್ಞಾನವೇ ಧ್ಯಾನದ ಆರಂಭ,’ ಎಂದು ತಿಳಿಸುತ್ತಾರೆ.
‘ನಾನು’ ಎಂದರೇನೆಂದು ಅರ್ಥ ಮಾಡಿಕೊಳ್ಳುವುದೇ ಆತ್ಮಜ್ಞಾನ. `ಯಾರಿಗೆ ಆತ್ಮಜ್ಞಾನವಾಗಿರುತ್ತದೋ ಅವರು ಚಿಕ್ಕಚಿಕ್ಕ ಘಟನೆಗಳಿಂದ ಅಧಿಕವಾಗಿ ಅಶಾಂತಿ ಅಥವಾ ಉತ್ತೇಜನಕ್ಕೆ ಒಳಗಾಗುವುದಿಲ್ಲ. ಲಾಭ-ಹಾನಿ, ಜೀವನ-ಮರಣ, ಮಿಲನ-ವಿರಸ, ಮಾನ-ಅಪಮಾನ, ಲೋಭ-ಕ್ರೋಧ, ರಾಗ-ದ್ವೇಷ ಯಾವುವೂ ಅವರನ್ನು ಅಧಿಕವಾಗಿ ಬಾಧಿಸುವುದಿಲ್ಲ. ಏಕೆಂದರೆ ಇದು ನಿತ್ಯಪರಿವರ್ತನಶೀಲವಾದ ಈ ಸಂಸಾರದ ನಿತ್ಯ ಸ್ವಾಭಾವಿಕ ರೂಪ ಎಂದು ಅವರು ತಿಳಿದಿರುತ್ತಾರೆ. ಮನಸ್ಸಿಗೆ ಇಷ್ಟವಾದ ವಸ್ತಿ ಅಥವಾ ಸ್ಥಿತಿ ಯಾವಾಗಲೂ ದೊರೆಯುವುದಿಲ್ಲ. ಕಾಲಚಕ್ರದ ಪರಿವರ್ತನೆ ಆದೊಡನೆಯೇ ಬೇಡದ ಘಟನೆಗಳು ಘಟಿಸುತ್ತವೆ. ಆದ್ದರಿಂದ ಆ ಘಟನೆಗಳನ್ನು ಒಂದು ಮನೋರಂಜನೆಯಂತೆ, ನಾಟಕದಂತೆ, ಕುತೂಹಲ ಮತ್ತು ವಿನೋದ ದೃಷ್ಟಿಯಿಂದ ನೋಡುತ್ತಾನೆ. ಯಾವುದೇ ಅಹಿತಕರ ಘಟನೆ ಘಟಿಸಿದರೆ ಅದರಿಂದ ಅಶಾಂತನಾಗುವುದಿಲ್ಲ. ಆತ್ಮಜ್ಞಾನಿಯು ಅಂತಹ ಮಾನಸಿಕ ಕಷ್ಟಗಳಿಂದ ಸಹಜವಾಗಿಯೇ ದೂರವಿರುತ್ತನೆ.........’ ಎಂದು ಶ್ರೀರಾಮ ಶರ್ಮಾ ಆಚಾರ್ಯರವರು ತಮ್ಮ ‘ನಾನು ಯಾರು?’ ಪುಸ್ತಕದಲ್ಲಿ ವಿಶದಪಡಿಸುತ್ತಾರೆ. ‘ಆತ್ಮದರ್ಶನವೆಂದರೆ ನಿನ್ನ ಇರವು, ಶರೀರ ಮತ್ತು ಸಾಧನೆಗಳ ಸರಿಸರಿಸ್ವರೂಪವನ್ನು ನಿನ್ನ ಮಾನಸ ಪಟಲದಲ್ಲಿ ಅತಿ ಆಳವಾಗಿ ಅಂಕಿತಗೊಳಿಸಿಕೊಳ್ಳುವುದು. ಅದನ್ನು ದಿನವಿಡೀ ಜೀವನದಲ್ಲಿ ಎಂದೂ ಮರೆಯದಿರುವುದು.......’ಎಂದೂ ತಿಳಿಸುತ್ತಾರೆ.
ಸುಪ್ರಸಿದ್ಧ ಕವಿ, ಚಿತ್ರಕಾರ ಖಲೀಲ್ ಗಿಬ್ರಾನ್‌ರ ‘ದ ಪ್ರೊಫೆಟ್'(ಕನ್ನಡಾನುವಾದ ‘ಪ್ರವಾದಿ’ ಅನುವಾದಕರು ಶ್ರೀ ದೇವದತ್ತ) ನಲ್ಲಿ ಮಹಾಪ್ರಸ್ಥಾನಕ್ಕೆ ಹೊರಟ ‘ಆಲ್ ಮುಸ್ತಾಫಾ’ನನ್ನು ಒಬ್ಬ ಮನೀಷಿಯು ಆತ್ಮಜ್ಞಾನದ ಬಗ್ಗೆ ಹೇಳಿರಿ ಎಂದು ಕೇಳುತ್ತಾನೆ. ಆಗ ಅವನು ಹೀಗೆ ಉತ್ತರಿಸುತ್ತಾನೆ:
‘ಹಗಲು-ಇರುಳುಗಳ ರಹಸ್ಯವನ್ನು ನಿಮ್ಮ ಹೃದಯಗಳು ಮೌನದಿಂದಲೇ ತಿಳಿದುಕೊಳ್ಳುತ್ತವೆ. ಆದರೆ ನಿಮ್ಮ ಹೃದಯದ ದನಿಯನ್ನು ಕೇಳಲು ನಿಮ್ಮ ಕಿವಿಗಳು ತೃಷಿತವಾಗಿರುತ್ತವೆ. ವಿಚಾರದಲ್ಲಿ ತಿಳಿದುಕೊಂಡಿದ್ದನ್ನು ನೀವು ಶಬ್ದಗಳಲ್ಲಿ ತಿಳಿಯಬಯಸುತ್ತೀರಿ. ನಿಮ್ಮ ಕನಸಿನ ನಗ್ನ ದೇಹವನ್ನು ನಿಮ್ಮ ಬೆರಳುಗಳಿಂದ ನೀವು ಸೋಂಕಬಯಸುತ್ತೀರಿ. ಹೀಗೆ ನೀವು ಬಯಸುತ್ತಿರುವುದು ಒಳ್ಳೆಯದೇ. ನಿಮ್ಮ ಆತ್ಮದ ನಿಗೂಢ ಬಾವಿಬುಗ್ಗೆಯು ಹೊರ ಚಿಮ್ಮಿ ಬಂದು ಕಲರವಗೈಯುತ್ತ ಸಾಗರದೆಡೆಗೆ ಬಿದ್ದು ಹರಿಯುವುದು ಅವಶ್ಯವಾದ ಮಾತೇ ಆಗಿದೆ. ನಿಮ್ಮ ಅನಂತ ಅಗಾಧತೆಯಲ್ಲಿಯ ನಿಧಿಯು ನಿಮ್ಮ ಕಣ್ಣೆದುರು ಪ್ರಕಟವಾಗುವುದು ಅವಶ್ಯವಿದೆ.
ಆದರೆ, ನಿಮ್ಮ ಅಜ್ಞಾತ ನಿಧಿಯನ್ನು ತೂಗಲೆಂದು ನಿಮ್ಮಲ್ಲಿ ತಕ್ಕಡಿ ಮಾತ್ರ ಇರದಿರಲಿ.
ಕೋಲಿನಿಂದ ಅಥವಾ ಹಗ್ಗದಿಂದ ನಿಮ್ಮ ತಿಳಿವಿನ ಆ ಆಳವನ್ನು ನೀವು ನೋಡಬಯಸಬೇಡಿರಿ. ಏಕೆಂದರೆ ‘ಆತ್ಮ?ವು ಅಸೀಮವೂ ಅಮೇಯವೂ ಆದ ಸಾಗರವಾಗಿದೆ. ‘ನಾನು ಸತ್ಯವನ್ನೇ ಕಂಡೆ,' ಎನ್ನಬೇಡಿ; ಬೇಕಾದರೆ, ‘ನಾನು ಒಂದು ಸತ್ಯವನ್ನು ಕಂಡೆ,’ ಎನ್ನಿರಿ.
‘ನಾನು ಆತ್ಮದ ಮಾರ್ಗವನ್ನೇ ಕಂಡೆ,’ ಎನ್ನಬೇಡಿ; ಬೇಕಾದರೆ, ‘ನಾನು ನನ್ನ ಮಾರ್ಗದಲ್ಲಿ ಬರುವ ಆತ್ಮವನ್ನು ಕಂಡೆ,’ ಎನ್ನಿರಿ. ಏಕೆಂರೆ ಆತ್ಮವು ಸಕಲ ಮಾರ್ಗಗಳಲ್ಲಿಯೂ ಅಡ್ಡಾಡುತ್ತಿರುತ್ತದೆ. ಆತ್ಮವು ಒಂದೇ ಗೆರೆಗುಂಟ ಅಡ್ಡಾಡುವುದಿಲ್ಲ; ಅಥವಾ ಗಲಗಿನಂತೆ ಬೆಳೆಯುವುದಿಲ್ಲ. ಅಸಂಖ್ಯ ದಳಗಳ ಪದ್ಮದಂತೆ, ಆತ್ಮವು ತನ್ನಷ್ಟಕ್ಕೆ ತಾನೇ ಬಿಚ್ಚಿ ಅರಳುತ್ತದೆ.
ಮಹಾನ್ ಆತ್ಮಜ್ಞಾನಿಗಳು ತಾವು ತಮ್ಮ ಅಂತರ್ದರ್ಶನದಿಂದ ಕಂಡ ಸತ್ಯವನ್ನು ತೆರೆದಿಟ್ಟಿದ್ದಾರೆ. ನಾವು ನಮ್ಮ ಶಕ್ತ್ಯಾನುಸಾರ ಪಡೆದುಕೊಳ್ಳಬಹುದು.
ಗಿಬ್ರಾನ್ ಅವರ ಕೃತಿಗಳ ಬಗ್ಗೆ ಓದಿದ್ದೆ. ಆಸ್ವಾದಿಸಲು ಸಮಯ ಸಿಕ್ಕಿರಲಿಲ್ಲ. ಇಲ್ಲಿ ಉಲ್ಲೇಖಿಸಿ ಕೃಪೆ ತೋರಿದಿರಿ.
ReplyDeleteಸ್ವ ಜ್ಞಾನ ಮತ್ತು ಸ್ವಯಂ ಶುದ್ಧೀಕರಣ ನನ್ನಂತ ಅಲ್ಪನಿಗೆ ಕಲ್ಪಿಸಲು ಸಾದ್ಯವಿಲ್ಲದ ಕಾರ್ಯ! ನನಗೆ ಹೊರಗಿನ ಗುರುವಿನ ಸಹಾಯವೇ ಬೇಕು.
ಮತ್ತೊಂದು ಒಳ್ಳೆಯ ಲೇಖನಕ್ಕೆ ಧನ್ಯವಾದಗಳು.
ನನ್ನ ಬ್ಲಾಗಿಗೂ ಬನ್ನಿರಿ.
ಒಳ್ಳೆಯ ಲೇಖನ ಧನ್ಯವಾದಗಳು............
ReplyDeleteಆತ್ಮ ಜ್ಞಾನದ ಬಗ್ಗೆ ಸುಂದರ ಲೇಖನ.ಧನ್ಯವಾದಗಳು.
ReplyDeleteChennagide
ReplyDelete