ನಾವು ದಾರಿಯಲ್ಲಿ ಕೆಲವೊಮ್ಮೆ ಮೈಮರೆತು ನಡೆಯುವಾಗ ತಕ್ಷಣ ಹಾವೊಂದು ಎದುರಾದರೆ ನಮಗರಿವಿಲ್ಲದಂತೆಯೇ ಕಾಲಿಗೆ ಬುದ್ಧಿ ಹೇಳಿರುತ್ತೇವೆ! ಇದಂತೂ ದೇಹದ ತತ್‌ಕ್ಷಣದ ಪ್ರತಿಕ್ರಿಯೆ (Instinct) ಎನ್ನುವುದು ನಮಗೆ ತಿಳಿದಿದೆ. ಆದರೆ
ಕೆಲವು ಸಂದಿಗ್ಧ ಸಂದರ್ಭಗಳಲ್ಲಿ, ಕೆಲವು ನಿರ್ಣಾಯಕ ಹಂತಗಳಲ್ಲಿ ಯಾವುದೋ ಒಂದು ‘ಹೊಳವು’ ನಮ್ಮ ಸಮಸ್ಯೆಗಳನ್ನೇ ಪರಿಹರಿಸಿಬಿಟ್ಟಿರುತ್ತದೆ. ಅದು ಏನು? ಎಲ್ಲಿಂದ ಬಂತು? ಹೇಗೆ ಉಂಟಾಯಿತು? ಯಾವ ಪ್ರಶ್ನೆಗಳಿಗೂ ಉತ್ತರ ದೊರಕುವುದಿಲ್ಲ. ಅಥವಾ ಪ್ರಶ್ನಿಸಲೇ ಆಗುವುದಿಲ್ಲ! ನಮಗೆ ದೊರಕಿದ ಆ ಅಪೂರ್ವ ಕೊಡುಗೆಯಿಂದ ದೊರಕಿದ ನಿರಾಳದಿಂದ ನಾವು ಧನ್ಯತಾಭಾವವನ್ನಷ್ಟೇ ಅನುಭವಿಸಬಲ್ಲವರಾಗಿರುತ್ತೇವೆ. ನಮ್ಮ ಬುದ್ಧಿಮಟ್ಟಕ್ಕೆ ಅನುಗುಣವಾಗಿ ಅದನ್ನು ನಾವು ಹೇಗಾದರೂ ಅರ್ಥೈಸಬಹುದು. ಅದನ್ನೇ ‘ಅಂತಃ ಪ್ರಜ್ಞೆ? ಅಥವಾ `Intuition’ ಎನ್ನುತ್ತಾರೆ. ಓಶೋರವರ `Intuition’ Knowing Beyond Logic ಪುಸ್ತಕದಲ್ಲಿ ಈ ಬಗ್ಗೆ ಸಮೃದ್ಧ ಮಾಹಿತಿಯನ್ನು ಪಡೆದುಕೊಳ್ಳಬಹುದು:
`Intuition’ ಅನ್ನು ವೈಜ್ಞಾನಿಕವಾಗಿ ವಿವರಿಸಲಾಗುವುದಿಲ್ಲ, ಏಕೆಂದರೆ ಆ ಒಂದು ಪೂರ್ಣ ಚಮತ್ಕಾರವೇ ಅವೈಜ್ಞಾನಿಕ ಮತ್ತು ಅತಾರ್ಕಿಕವಾಗಿದೆ. `Intuition’ ಅನ್ನು ವಿವರಿಸುವುದೆಂದರೆ ಅದನ್ನು ಬುದ್ಧಿಮಟ್ಟಕ್ಕೆ (Intellect) ಇಳಿಸುವುದೇ ಆಗಿದೆ. `Intuition’ಎನ್ನುವುದು Intellectನ್ನು ಮೀರಿದ್ದಾಗಿದೆ. ಬುದ್ಧಿಶಕ್ತಿಯು ಎಲ್ಲಿ ಸಂಪೂರ್ಣವಾಗಿ ನಿಷ್ಕ್ರಿಯವಾಗುತ್ತದೋ ಅಲ್ಲಿಂದ `Intuition’ ಪ್ರಾರಂಭವಾಗುತ್ತದೆ! ಬುದ್ಧಿಯು ಅದನ್ನು ಅನುಭವಿಸುತ್ತದೆ ಆದರೆ ವಿವರಿಸಲಾರದು............ ವಿವರಣೆಯೆಂದರೆ ಎಲ್ಲಿಂದ ಬಂತು? ಏಕೆ ಬಂದಿತು? ಬರಲು ಕಾರಣವೇನು? ಎನ್ನುವ ಪ್ರಶ್ನೆಗಳಿಗೆ ಉತ್ತರಿಸುವುದಾಗಿದೆ. ಬುದ್ದಿಯು ತನಗೆ ಮೀರಿದ್ದು ಏನೋ ನಡೆದಿದೆ ಎಂದಷ್ಟೇ ತಿಳಿದುಕೊಳ್ಳಬಹುದು. ಬುದ್ಧಿಯು ವಿವರಿಸಲಾಗದ್ದನ್ನು ನಾನು ನಂಬುವುದಿಲ್ಲ ಎಂದು ನಾವೆಂದುಕೊಂಡರೆ ನಾವು ಕೆಳಮಟ್ಟದಲ್ಲೇ ಜೀವಿಸುತ್ತೇವೆ. ‘ಅಂತಃ ಪ್ರಜ್ಞೆ’ಯು ನಮ್ಮೊಂದಿಗೆ ಮಾತನಾಡಲು ನಾವು ಅವಕಾಶವನ್ನೇ ನೀಡುವುದಿಲ್ಲ.
ನಾವೇನಾದರೂ ತಾರ್ಕಿಕ ಮನೋಭಾವದವರಾದರೆ, ನಮ್ಮನ್ನು ನಾವೇನಾದರೂ ತಾರ್ಕಿಕವಾಗಿ ತರಬೇತುಗೊಳಿಸಿಕೊಂಡಿದ್ದರೆ, ನಾವು ಈ ಉನ್ನತಮಟ್ಟದ ಅಸ್ತಿತ್ವವನ್ನು ಅಲ್ಲಗಳೆಯುತ್ತೇವೆ. ‘ಇದು ಸಾಧ್ಯವೇ ಇಲ್ಲ. ಇದು ನನ್ನ ಕಲ್ಪನೆಯಾಗಿರಬಹುದು. ಕನಸೂ ಆಗಿರಬಹುದು. ತಾರ್ಕಿಕವಾಗಿ ಇದನ್ನು ಸಾಧಿಸಲಾಗದಿದ್ದರೆ ಇದನ್ನು ನಾನು ಸ್ವೀಕರಿಸುವುದಿಲ್ಲ,’ ಎಂದುಕೊಳ್ಳುವ ತಾರ್ಕಿಕ ಮನಸ್ಸು ಮುಚ್ಚಲ್ಪಡುತ್ತದೆ. ತನ್ನದೇ ತಾರ್ಕಿಕ ಕಾರಣಗಳ ಚೌಕಟ್ಟಿನೊಳಗೆ ಬಂಧಿಯಾಗುತ್ತದೆ. ಅಂತಃಪ್ರಜ್ಞೆಯು ಪ್ರಕಟಗೊಳ್ಳಲು ಅಲ್ಲಿ ಅವಕಾಶವೇ ಇರುವುದಿಲ್ಲ.
ಬುದ್ಧಿಶಕ್ತಿಯನ್ನು ಸಂಕುಚಿತಗೊಳಿಸಿಕೊಳ್ಳದೇ ನಾವು ತೆರೆದ ಮನಸ್ಸಿನವರಾದರೆ ಆಗ ಬುದ್ಧಿಯ ಸಹಾಯದಿಂದಲೇ ನಾವು ಉನ್ನತ ಮಟ್ಟದ ಅಂತಃಪ್ರಜ್ಞೆಯನ್ನು ಸ್ವೀಕರಿಸಬಲ್ಲವರಾಗುತ್ತೇವೆ.
`Intuition’ ಬಗ್ಗೆ ಒಂದು ಉತ್ತಮವಾದ ಝೆನ್ ಕಥೆಯಿದೆ. ಝೆನ್ ಗುರು ಗೊಸೊ ಹೊಯೆನ್ ಹೇಳಿದ ಕಥೆ ಇದು:
ವೃದ್ಧನಾಗುತ್ತಿದ್ದ ಒಬ್ಬ ಕಳ್ಳನ ಮಗ ತಂದೆಗೆ, ‘ನನಗೂ ಈ ವೃತ್ತಿಯ ಮರ್ಮ ಕಲಿಸಿಕೊಡು,’ ಎಂದು ಕೇಳುತ್ತಾನೆ. ಆ ರಾತ್ರಿ ಕಳ್ಳ ಮಗನಿಗೆ ತನ್ನ ವೃತ್ತಿಯನ್ನು ಕಲಿಸಲು ಅವನನ್ನು ಒಂದು ಮನೆಗೆ ಕರೆದುಕೊಂಡು ಹೋಗುತ್ತಾನೆ. ಇಬ್ಬರೂ ಒಟ್ಟಾಗಿ ಮನೆಯೊಳಗೆ ನುಗ್ಗುತ್ತಾರೆ. ಒಂದು ಕೊಠಡಿಯ ಬಳಿಹೋಗಿ, ‘ಈ ಕೊಠಡಿಯಲ್ಲಿ ತಿಜೋರಿ ಇದೆ. ನೀನು ಒಳಗೆ ಹೋಗಿ ಕದ್ದು ಬಾ,’ ಎಂದು ಮಗನನ್ನು ಒಳಗೆ ಕಳಿಸಿ ಕಳ್ಳ ಬಾಗಿಲ ಬಳಿ ನಿಲ್ಲುತ್ತಾನೆ. ಮಗ ಒಳಗೆ ಹೋದ ತಕ್ಷಣ ಹೊರಗಿನಿಂದ ಬಾಗಿಲನ್ನು ಹಾಕಿಕೊಂಡು ಜೋರಾಗಿ ಶಬ್ದ ಮಾಡಿ ಅಲ್ಲಿಂದ ಪರಾರಿಯಾಗುತ್ತಾನೆ. ಒಳಗೆ ಇದ್ದ ಮಗನಿಗೆ ದಿಕ್ಕೇ ತೋಚದಂತಾಗುತ್ತದೆ. ಅಪ್ಪ ಮಾಡಿದ ಈ ಕೆಲಸದಿಂದ ವಿಪರೀತ ಕೋಪವೂ ಬಂದು ಹೊರಗೆ ಹೋಗುವುದು ಹೇಗೆಂದು ತಿಳಿಯದೇ ಭಯದಿಂದ ತತ್ತರಿಸುತ್ತಾನೆ. ಮನೆಯವರು ಸದ್ದಿನಿಂದ ಎಚ್ಚರವಾಗಿ ಬಿಟ್ಟಿರುತ್ತಾರೆ. ಇದ್ದಕ್ಕಿದ್ದಂತೆಯೇ ಏನೋ ಹೊಳೆದಂತಾಗಿ ಬೆಕ್ಕಿನಂತೆ ಕೂಗಿಬಿಡುತ್ತಾನೆ!
ಮನೆಯಾಕೆ ಕೆಲಸದವಳಿಗೆ, ‘ದೀಪಹಚ್ಚಿಕೊಂಡು ಕೊಠಡಿಯೊಳಗೆ ನೋಡು,’ ಎಂದು ಹೇಳುತ್ತಾಳೆ. ಕೊಠಡಿಯ ಬಾಗಿಲನ್ನು ತೆರೆದ ತಕ್ಷಣ ಹುಡುಗ ದೀಪಕ್ಕೆ ಗಾಳಿ ಊದಿ ಆರಿಸಿ ಅವಳನ್ನು ತಳ್ಳಿಕೊಂಡು ಹೊರಗೋಡುತ್ತಾನೆ. ಅಷ್ಟರಲ್ಲೇ ಸೇರಿದ್ದ ಜನರು ಅವನನ್ನು ಓಡಿಸಿಕೊಂಡು ಹೋಗುತ್ತಾರೆ. ಓಡುತ್ತಾ ದಾರಿಯಲ್ಲಿ ಒಂದು ಬಾವಿಯನ್ನು ಕಾಣುತ್ತಾನೆ. ಶೀಘ್ರವೇ ಒಂದು ದಪ್ಪ ಕಲ್ಲನ್ನು ಬಾವಿಯೊಳಗೆ ಹಾಕಿ ಕತ್ತಲಲ್ಲಿ ಅವಿತುಕೊಳ್ಳುತ್ತಾನೆ. ಎಲ್ಲರೂ ಬಾವಿಯ ಸುತ್ತಾ ಸೇರಿ ಕಳ್ಳ ಬಾವಿಯ ನೀರಿನಲ್ಲಿ ಮುಳುಗುವುದನ್ನು ನೋಡುತ್ತಾ ನಿಲ್ಲುತ್ತಾರೆ!
ಹುಡುಗ ಮನೆಗೆ ಬಂದು ಕೋಪದಿಂದ ತಂದೆಗೆ ತಾನು ತಪ್ಪಿಸಿಕೊಂಡು ಬಂದ ಕಥೆಯನ್ನು ಹೇಳಲಾರಂಭಿಸುತ್ತಾನೆ. ಆಗ ಅಪ್ಪ, ‘ನೀನು ಕಥೆಯನ್ನು ಹೇಳುವ ಅಗತ್ಯವಿಲ್ಲ. ನೀನಿಲ್ಲಿದ್ದೀಯ. ನೀನು ಕಳ್ಳತನದ ಮರ್ಮವನ್ನು ಕಲಿತಿದ್ದೀಯ,’ ಎಂದು ಹೇಳುತ್ತಾನೆ!
ಕಳ್ಳರು Intuition ಮೂಲಕ ಕೆಲಸ ಮಾಡುತ್ತಾರೆ. ಪೋಲೀಸರು ಬುದ್ದಿಶಕ್ತಿಯನ್ನು ಅವಲಂಭಿಸುತ್ತಾರೆ. ಅದಕ್ಕೇ ಕಳ್ಳರನ್ನು ಹಿಡಿಯುವಲ್ಲಿ ವಿಫಲರಾಗುತ್ತಾರೆ ಎನ್ನುವ ಮಾತಿದೆ!
ಯಾವುದೇ ಅಳತೆಗೂ ನಿಲುಕದ ಅಂತಃಪ್ರಜ್ಞೆ ನಮ್ಮೊಳಗೇ ಅಡಗಿರುತ್ತದೆ. ಅದು ನಮ್ಮೊಂದಿಗೆ ಸ೦ವಹಿಸಲು ನಾವು ತೆರೆದ ಮನಸ್ಸಿನವರಾಗಿ, ಬುದ್ದಿಯನ್ನೂ ಸಹಕರಿಸುವಂತೆ ಅನುವುಗೊಳಿಸಿ ಅವಕಾಶನೀಡುವುದು ಪ್ರಮುಖವಾಗುತ್ತದೆ.
ಉತ್ತಮ ಕಥೆ ಮತ್ತು ಒಳ್ಳೆಯ ನಿರೂಪಣೆ ಮೇಡಂ.
ReplyDeleteಅಂತಃ ಪ್ರಜ್ಞೆ ನಮ್ಮೊಳಗಿನ ಛಾಟಿ...
ಪುನರ್ಜನ್ಮ ಿಉವುದನ್ನು ನೀವು ಒಪ್ಪುವುದಾದರೆ ಅಂತಃಪ್ರಜ್ಞೆಯನ್ನು ವಿವರಿಸುವುದು ಸಾಧ್ಯ. ಆಧುನಿಕ ಮನೋವಿಜ್ಞಾನದ ಸಿದ್ಧಾಂತಗಳ ನೆರವಿನಿಂದ ಸಾಧ್ಯ, ಾದರೆ ಸುಲಭ ಸಾಧ್ಯವಲ್ಲ.
ReplyDelete'intution'ಬಗ್ಗೆ ಉತ್ತಮ ಲೇಖನ.ಅಭಿನಂದನೆಗಳು ಮೇಡಂ.ಬ್ಲಾಗಿಗೆ ಬನ್ನಿ.ನಮಸ್ಕಾರ.
ReplyDeleteಚೆನ್ನಾಗಿ ವಿವರಿಸಿದ್ದೀರಿ..
ReplyDelete