ಕೆಲವು ವ್ಯಕ್ತಿಗಳ ಬಗ್ಗೆ ಕೇಳಿ, ಓದಿ ತಿಳಿದುಕೊಳ್ಳುವಾಗ, ‘ಇಂಥಾ ಅಪರೂಪದ ಚೇತನಗಳು ನಿಜಕ್ಕೂ ಈ ಭೂಮಿಯ ಮೇಲೆ ಇದ್ದರೆ?’ ಎಂದು
ಅಚ್ಚರಿಯಾಗುತ್ತದೆ. ಅನೇಕ ಸದ್ಗುಣಗಳೇ ಮೇಳೈಸಿದಂಥಾ ಇಂಥವರ ಜೀವನ ಮನುಕುಲಕ್ಕೆ ಒಂದು ಕೊಡುಗೆಯೇ ಆಗಿದೆ.
ಇವರು ತಾವಷ್ಟೇ ಬೆಳೆಯುವುದಿಲ್ಲ. ತಮ್ಮ ಸುತ್ತಿನವರನ್ನೂ ಪ್ರೋತ್ಸಾಹಿಸಿ ಬದುಕಿನ ಔನತ್ಯಕ್ಕೇರಿಸುತ್ತಾರೆ.
ಟಿ.ಎಸ್. ವೆಂಕಣ್ಣಯ್ಯನವರು ಈ ಸಾಲಿನಲ್ಲಿ ಅಗ್ರಮಾನ್ಯರು.
ಬಿ.ಎಸ್. ಕೇಶವರಾವ್‌ರವರು ತಮ್ಮ ‘ಅಂತಃಕರಣ’ ಕೃತಿಯಲ್ಲಿ
ಅನೇಕ ಮಂದಿ ಸುಪ್ರಸಿದ್ಧರ ಬದುಕಿನಲ್ಲಿ ಸಂಭವಿಸಿದ ಮನಮಿಡಿಯುವ ವಿಚಾರಗಳನ್ನು ಚಿತ್ರಿಸಿದ್ದಾರೆ.
ವೆಂಕಣ್ಣಯ್ಯನವರ ಸರಳತೆ, ಸಹೃದಯತೆಯನ್ನು ಸಾರುವ ಒಂದು ಘಟನೆ ಹೀಗಿದೆ:
‘ವೆಂಕಣ್ಣಯ್ಯನವರು ಕನ್ನಡ ವಿಚಾರಗಳನ್ನು ಚರ್ಚಿಸಲು ಆಗಾಗ ತಮ್ಮ ಪರಮಾಪ್ತ ಶಿಷ್ಯರಾದ ವಿ.
ಸೀತಾರಾಮಯ್ಯನವರ ಮನೆಗೆ ಬರುತ್ತಿದ್ದರು. ವಿ.ಸೀ.ಯವರ ಹಳೆಯಕಾಲದ ಮನೆ ‘ವಿದೇಹ'ದ ಮುಂಬಾಗಿಲು ಆರಡಿಗಿಂತಲೂ ಕಮ್ಮಿ ಇತ್ತು. ತೆಳ್ಳಗೆ, ಸುಮಾರು
ಏಳಡಿ ಎತ್ತರಕ್ಕಿದ್ದ ಟಿ.ಎಸ್.ವಿ.ಯವರು ಬರುವಾಗಲೆಲ್ಲಾ ನಡು ಬಗ್ಗಿಸಿಕೊಂಡು, ತಲೆ ತಗ್ಗಿಸಿಕೊಂಡು ಒಳಬರುತ್ತಿದ್ದರು. ಇದರಿಂದ ಬಹಳ ಮುಜುಗರಕ್ಕೆ ಒಳಗಾಗುತ್ತಿದ್ದ ವಿ.ಸೀ.ಯವರು
ಕುಳ್ಳಕ್ಕಿದ್ದ ಮುಂಬಾಗಿಲನ್ನು ತೆಗೆಸಿ ಅದರ ಜಾಗದಲ್ಲಿ ಏಳೂವರೆ ಅಡಿ ಎತ್ತರದ ಹೊಸ ಬಾಗಿಲನ್ನು ಹಾಕಿಸಿದರು!
ಇವರೇನೋ ಇದ್ದ ಬಾಗಿಲನ್ನು ತೆಗೆಸಿ ಬೇರೆ ಬಾಗಿಲನ್ನು ಇಡಿಸಿ ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟರು.
ಆದರೆ ನಂತರದ ದಿನಗಳಲ್ಲಿಯೂ ಬರುತ್ತಿದ್ದ ಟಿ.ಎಸ್.ವಿ.ಯವರು ಮೊದಲಿನಂತೆಯೇ ನಡು ಬಗ್ಗಿಸಿಕೊಂಡು, ತಲೆ ತಗ್ಗಿಸಿಕೊಂಡೇ
ಬರುತ್ತಿದ್ದರು! ಇದನ್ನು ಗಮನಿಸುತ್ತಿದ್ದ ವಿ.ಸೀ.ಯವರು ತಡೆಯಲಾರದೇ ಒಂದು ದಿನ, ‘ಬಾಗಿಲನ್ನು ಎತ್ತರಿಸಿದ್ದೇನೆ ಗುರುಗಳೇ, ತಾವಿನ್ನು ತಲೆತಗ್ಗಿಸಿಕೊಂಡು
ಬರಬೇಕಾದ್ದಿಲ್ಲ. ತಲೆ ಎತ್ತಿಕೊಂಡೇ ಬನ್ನಿ,’ ಎನ್ನಲು ಟಿ.ಎಸ್.ವಿ.ಯವರು,
‘ಅದು ಹಾಗಲ್ಲ ಸೀತಾರಾಮಯ್ಯ, ನಿನ್ನ ಮನೆಯ ಬಾಗಿಲು ಕುಳ್ಳಕ್ಕಿರುವುದೋ,
ಎತ್ತರಕ್ಕಿರುವುದೋ ಮುಖ್ಯವಲ್ಲಯ್ಯಾ, ನನ್ನ ದೃಷ್ಟಿಯಲ್ಲಿ
ಇದೊಂದು ದೇಗುಲ! ಸರಸ್ವತಿಯ ಆವಾಸ ಸ್ಥಾನ. ನೀನು ಸರಸ್ವತಿಯ ಪ್ರೀತಿಯ ಪುತ್ರ. ವಿಚಾರ ಹೀಗಿರುವಾಗ
ಇಲ್ಲಿಗೆ ನಾನು ತಲೆ ತಗ್ಗಿಸಿಕೊಂಡು ಬರುವುದೇ ಸರಿ ಎಂದು ನನಗನ್ನಿಸಿದೆ. ಹಾಗೆಯೇ ಬರುತ್ತೇನೆ,’
ಎಂದು ಬಂದು ನೇರವಾಗಿ ನೆಲದ ಮೇಲೆ ಕುಳಿತು ಪೇಟವನ್ನು ಪಕ್ಕದಲ್ಲಿರಿಸಿಕೊಂಡು ನಕ್ಕಾಗ
ವಿ.ಸೀ.ಯವರಿಗೆ ದಿಕ್ಕೇ ತೋಚದಂತಾಯಿತು.
ಪ್ರಖ್ಯಾತ ಲಲಿತ ಪ್ರಬಂಧಕಾರರಾದ ಎ. ಎನ್. ಮೂರ್ತಿರಾಯರು, ಟಿ.ಎಸ್.ವಿ.ಯವರ
ಪುಣ್ಯಸ್ಮರಣೆ ಮಾಡುತ್ತಾ ಹೀಗೆ ಬರೆಯುತ್ತಾರೆ:
‘ವೆಂಕಣ್ಣಯ್ಯನವರು ನನಗೆ ಪಾಠ ಹೇಳಿದ ಗುರುಗಳಲ್ಲ............ ನಾನು ವಿದ್ಯಾರ್ಥಿಯಾಗಿದ್ದ
ಕಾಲದಲ್ಲಿ ಅವರು ಮಹಾರಾಜಾ ಕಾಲೇಜಿಗೆ ಬಂದೇ ಇರಲಿಲ್ಲ. ಇದೆಲ್ಲಾ ನಿಜವಾದರೂ ನಾನು ಅವರನ್ನು ‘ಗುರು’ ಎಂದೇ ಕರೆಯುತ್ತೇನೆ. ಏಕೆಂದರೆ ಅವರು ನನಗೆ ಅರ್ಥಶಾಸ್ತ್ರ,
ತತ್ವಶಾಸ್ತ್ರಗಳಿಗಿಂತ ಹೆಚ್ಚು ಮಹತ್ವದ ಕಲೆಯೊಂದನ್ನು ಬೋಧಿಸಿದರು: ಮಾನವ ಬದುಕನ್ನು
ಹೇಗೆ ಎದುರಿಸಬೇಕು? ಹೇಗೆ ನಿರ್ವಹಿಸಬೇಕು ಎಂಬುದು, ಅವರು ನನಗೆ ಬೋಧನೆಯಾಗಿ ಕಾಣದಂತೆ ಬೋಧಿಸಿದ ಕಲೆ. ನಾನು ಎಷ್ಟು ಕಲಿತೆನೋ....... ಅದು ಬೇರೆ
ವಿಷಯ. ಆದರೆ ಆ ಕಲೆಯಲ್ಲಿ, ಅದನ್ನು ಕಲಿಸುವ ವಿಧಾನದಲ್ಲಿ, ಅವರು ಪರಿಣತರೆಂಬುದರಲ್ಲಿ ಯಾವ
ಸಂಶಯವೂ ಇಲ್ಲ...........’
ಶಿಕ್ಷಕರಾದ ನಾವು ನಮ್ಮನ್ನು ‘ಗುರು’ ಎಂದುಕೊಳ್ಳಲು ಹಿಂದೆ-ಮುಂದೆ
ನೋಡುವುದಿಲ್ಲ. ಪ್ರತಿವರ್ಷ ಶಿಕ್ಷಕರ ದಿನಾಚರಣೆಯು ‘ಗುರುಬ್ರಹ್ಮಾ ಗುರುವಿಷ್ಣು......’
ಶ್ಲೋಕದೊಂದಿಗೇ ಪ್ರಾರಂಭವಾಗುತ್ತದೆ. ಆದರೆ ವೆಂಕಣ್ಣಯ್ಯನವರು ತಮ್ಮನ್ನು ತಾವು ‘ಗುರು’ ಎಂದುಕೊಳ್ಳಲು ಇಚ್ಚಿಸುತ್ತಿರಲಿಲ್ಲ ಎನ್ನುವುದನ್ನು ಹೀಗೆ
ತಿಳಿಸುತ್ತಾರೆ:
ತಾವು ಗುರುಗಳು ಎಂಬ ಭಾವನೆಯೇ ಅವರಲ್ಲಿ ಇರಲಿಲ್ಲ. ಒಂದು ದಿನ ‘ಗುರುಬ್ರಹ್ಮಾ
ಗುರುವಿಷ್ಣುರ್ಗುರುದೇವೋ ಮಹೇಶ್ವರಃ| ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ
ಶ್ರೀ ಗುರವೇ ನಮಃ||’ ಎಂಬ ಶ್ಲೋಕದ ಮಾತು ಬಂದಾಗ ಅವರು ಡಿ. ವಿ. ಗುಂಡಪ್ಪನವರಿಗೆ,
ಮನುಷ್ಯ ಮಾತ್ರರಾದವರನ್ನು ಕುರಿತು ಇಂಥಾ ಮಾತು ಹೇಳಬಹುದೇ? ನಾನೇನೋ ಪಾಠ ಹೇಳಿದ್ದರಿಂದಾಗಿ ‘ಗುರು’ ಎನಿಸಿಕೊಂಡಿದ್ದೇನೆ. ಆದರೆ ಆತ್ಮಪರೀಕ್ಷೆ ಮಾಡಿಕೊಂಡಾಗ ನನ್ನಲ್ಲಿ ತ್ರಿಮೂರ್ತಿಗಳ ಲಕ್ಷಣವೇನೂ
ಕಾಣಲಿಲ್ಲ.’ ಎಂದು ಹೇಳಿ ನಕ್ಕರಂತೆ. ಗುರು ಸಾಕ್ಷಾತ್ ಪರಬ್ರಹ್ಮನಾದರೆ
ಅವನ ಮಾತನ್ನು ಪ್ರಶ್ನಿಸುವಂತಿಲ್ಲ. ಪ್ರಶ್ನಕ ಮನೋವೃತ್ತಿಯನ್ನು ಬಿಟ್ಟುಕೊಡಲು ಯಾವ ವಿದ್ಯಾರ್ಥಿಯೂ
ಸಿದ್ಧನಿರಬಾರದು!
ವೆಂಕಣ್ಣಯ್ಯನವರು ತಾವೇ ಸ್ವತಃ ಕೃತಿರಚನೆ ಮಾಡದಿದ್ದರೂ ಬರೆಯುತ್ತಿದ್ದವರಿಗೆ ಹೇಗೆ ಪ್ರೋತ್ಸಾಹ
ನೀಡುತ್ತಿದ್ದರು ಎನ್ನುವುದನ್ನು ಈ ರೀತಿ ತಿಳಿಸುತ್ತಾರೆ:
`ಯಾರಾದರೂ ಹೊಸದಾಗಿ ಕವನವನ್ನೋ ಮತ್ತಾವುದಾದರೂ ಕೃತಿಯನ್ನೋ ಬರೆದರೆ ವೆಂಕಣ್ಣಯ್ಯನವರು ತಮ್ಮ
ಮನೆಯಲ್ಲೇ ಒಂದು ಸಣ್ಣಕೂಟವನ್ನು ಏರ್ಪಡಿಸಿ ತಿಂಡಿತೀರ್ಥವನ್ನು ಒದಗಿಸಿ ಆ ಕೃತಿಯನ್ನು ಓದಿಸುತ್ತಿದ್ದುದುಂಟು.
ಕುವೆಂಪುರವರು ‘ಚಿತ್ರಾಂಗದಾ’ವನ್ನು ಬರೆದಾಗ ಇಂಥದೊಂದು
ಗುಂಪು ವೆಂಕಣ್ಣಯ್ಯನವರ ಮನೆಯಲ್ಲಿ ಸೇರಿದ ನೆನಪಿದೆ. ‘ಚಿತ್ರಾಂಗದಾ’
ಪ್ರಣಯಕಥೆಯಾಗಿದ್ದು, ಆ ಕವನದಲ್ಲಿ ಒಂದು ಕಡೆ ‘ಕವಿ ನಿರನುಭವಶಾಲಿ’ ಎಂಬ ಮಾತು ಬರುತ್ತದೆ. ಕುವೆಂಪು ಅದನ್ನು
ಓದಿದಾಗ ವೆಂಕಣ್ಣಯ್ಯನವರು ನಡುವೆ ಮಾತುಹಾಕಿ, ‘ಹೌದಪ್ಪ, ಹೌದು. ಕವಿ ನಿರನುಭವಶಾಲಿ. ಬೇಗ ಅನುಭವ
ಪಡೆದುಕೆಳ್ಳುವ ಹಾಗಾಗಲಪ್ಪ.’ ಎಂದರು. ‘ಕುವೆಂಪು
ಮದುವೆ ಮಾಡಿಕೊಳ್ಳುವುದೇ ಇಲ್ಲವಂತೆ’ ಎಂಬ ಮಾತು ಆಗ ಅಲ್ಲಲ್ಲಿ ಕೇಳಿಬರುತ್ತಿತ್ತು!’
ಪ್ರೊ|| ವೆಂಕಣ್ಣಯ್ಯನವರು
ಮೇರು ಕವಿ ಕುವೆಂಪು ಅವರ ಪಾಲಿಗೆ ಪ್ರೇರಕ ಶಕ್ತಿಯಂತಿದ್ದರು. ಈ ಕಾರಣದಿಂದಲೇ ಕುವೆಂಪುರವರು ತಮ್ಮ
‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಗೌರವಾಭಿಮಾನದಿಂದ
ವೆಂಕಣ್ಣಯ್ಯನವರಿಗೆ ಅರ್ಪಿಸಿದ್ದಾರೆ. ನಾ. ಕಸ್ತೂರಿಯವರಿಗೆ ಅಕ್ಷರಾಭ್ಯಾಸದಿಂದ ಹಿಡಿದು ಮಹದ್ ಗ್ರಂಥಗಳನ್ನು
ಓದುವವರೆಗೆ ಕಲಿಸಿದವರು ಪ್ರೊ||ಟಿ.ಎಸ್.ವಿ.!
ವೆಂಕಣ್ಣಯ್ಯನವರು ತಮ್ಮ ಶಿಷ್ಯರಾದ ಕುವೆಂಪು, ತೀ.ನಂ.ಶ್ರೀಕಂಠಯ್ಯ, ಡಿ.ಎಲ್.ನರಸಿಂಹಾಚಾರ್, ಮೊದಲಾದವರೊಡನೆ ಪ್ರೀತಿಯಿಂದ,
ಸಲುಗೆಯಿಂದ ಇರುತ್ತಿದ್ದುದನ್ನು ಅವರೊಂದಿಗೇ ತಾವೂ ಬಹುತೇಕ ಇರುತ್ತಿದ್ದ ಎ.ಎನ್.
ಎಮ್. ಅವರು ಮನಮುಟ್ಟುವಂತೆ ವಿವರಿಸಿದ್ದಾರೆ. ‘ಹಿರಿಯರಾಗಲಿ, ಕಿರಿಯರಾಗಲಿ
ಅವರನ್ನು ಕುರಿತು ಒಂದೇ ಒಂದು ಸಣ್ಣ ಮಾತಾಡಿದ್ದನ್ನು ನಾನು ಕಂಡಿಲ್ಲ. ಅಂಥಾ ಗುರು ಸಿಕ್ಕಲೆಂದು ವರ್ಷಗಟ್ಟಲೆ
ಅಲೆಯಬಹುದು,’ ಎಂದು ಹೇಳುತ್ತಾರೆ.
ಕನ್ನಡದ ಹಿರಿಯ ಚೇತನ ಟಿ.ಎಸ್.ವಿ.ಯವರ ಪರಿಚಯವನ್ನು ಚೆನ್ನಾಗಿ ಮಾಡಿ ಕೊಟ್ಟಿದ್ದೀರಿ ಮೇಡಂ.ಧನ್ಯವಾದಗಳು.ನನ್ನ ಬ್ಲಾಗಿಗೂ ಭೇಟಿ ಕೊಡಿ.ನಮಸ್ಕಾರ.
ReplyDelete