Friday, May 25, 2012

ಮನದ ಅಂಗಳದಿ.........೯೩. ಅಗಣಿತ


    ನಮ್ಮದು ಪ್ರಾಥಮಿಕ ಶಾಲೆಯೂ ಇಲ್ಲದ ಚಿಕ್ಕ ಹಳ್ಳಿಯಾಗಿತ್ತು. ನಾನು ಮತ್ತು ನನ್ನ ಅಕ್ಕನಿಗೆ ಹಾಗೂ ಅಕ್ಕಪಕ್ಕದ ಹಳ್ಳಿಯ ಅನೇಕ ಮಕ್ಕಳಿಗೆ ನಮ್ಮ ತಂದೆಯೇ ಪ್ರಾಥಮಿಕ ಶಿಕ್ಷಣವನ್ನು ನೀಡಿದ್ದರು. ಪ್ರಾರಂಭದಲ್ಲಿ ಗುಣಾಕಾರ ಲೆಕ್ಕ ಮಾಡುವುದು ನನ್ನ ತಲೆಗೆ ಹತ್ತಲೇ ಇಲ್ಲ. ಕಲಿಸಿ ಕಲಿಸಿ ಸುಸ್ತಾದ ನಮ್ಮ ತಂದೆಯ ಸಹನೆ ಎಲ್ಲೆ ಮೀರಿ, ‘ ಪ್ರಾರಬ್ಧ, ನಿನಗೆ ಕಲಿಸಕ್ಕೆ ಆಗಲ್ಲ ಹೋಗು,’ ಎಂದುಬಿಟ್ಟರು! ನಾನು ಅಮ್ಮನಿಂದಲೇ ಗುಣಾಕಾರವನ್ನು ಕಲಿತೆ. ನಂತರ ಅನಿವಾರ್ಯವಾಗಿ ಗಣಿತವನ್ನೇ ಐಚ್ಛಿಕವಾಗಿ ತೆಗೆದುಕೊಳ್ಳಬೇಕಾದಾಗ, ನಿಂತಲ್ಲಿ-ಕುಳಿತಲ್ಲಿ ಅದನ್ನೇ ಧೇನಿಸುತ್ತಾ, ಬಸ್‌ನ ಟಿಕೆಟ್ ಮೇಲೆಲ್ಲಾ ಲೆಕ್ಕ ಮಾಡುತ್ತಾ ಗಣಿತದ ಆರಾಧಕಿಯಾಗಿಬಿಟ್ಟೆ! ಎಲ್ಲ ವಿಷಯಗಳಿಗಿಂತಲೂ ಗಣಿತದಲ್ಲೇ ಹೆಚ್ಚು ಅಂಕಗಳನ್ನು ಪಡೆದಾಗ, ಪಿ.ಯು.ಸಿ.ಯಲ್ಲಿ ನೂರಕ್ಕೆ ನೂರು ಅಂಕ ಬಂದಾಗ(ಈ ವಿಷಯವನ್ನು ನಾನು ಯಾರಲ್ಲೂ ಹೇಳಲಿಚ್ಛಿಸುವುದಿಲ್ಲ. ನನ್ನಿಂದ ಗಣಿತಕ್ಕೆ ಅವಮಾನವಾಗಬಾರದಲ್ಲ!) ನಮ್ಮ ತಂದೆ ಬಹಳ ಅಚ್ಚರಿಪಟ್ಟಿದ್ದರು. ಇದು ಕಠಿಣ ಪರಿಶ್ರಮದಿಂದ ಸಾಧ್ಯವಾದದ್ದು ಅಷ್ಟೆ.
    ನಮ್ಮ ಅವಿಭಕ್ತ ಕುಟುಂಬದಲ್ಲಿ ಒಂದು ೨-೩ವರ್ಷದ ಮಗುವಿತ್ತು. ಅವನಿಗೆ ದೊಡ್ಡ ದೊಡ್ಡ ಸಂಖ್ಯೆಗಳನ್ನು ಕೂಡುವ ಬಾಯಿಲೆಕ್ಕ ಮಾಡುವುದೇ ಆಟ! ನಾವು ಅವನಿಗೆ -ಲಕ್ಷದ-ಸಾವಿರದ.........ಎಂದು ಲೆಕ್ಕಗಳನ್ನು ಹೇಳಬೇಕು. ಅವನು ತಕ್ಷಣ ಕೂಡಿ ಉತ್ತರ ಹೇಳಿದಾಗ ಅದು ಸರಿಯೋ ತಪ್ಪೋ ತಿಳಿಯಲೇ ಸ್ವಲ್ಪ ಸಮಯ ಬೇಕಾಗುತ್ತಿತ್ತು!
   ಓಶೋರವರು ತಮ್ಮ `INTUITION’ ಪುಸ್ತಕದಲ್ಲಿ ಅಂತಃಪ್ರಜ್ಞೆಯ ಮೂಲಕವೇ ಅಸಾಮಾನ್ಯ ಸಮಸ್ಯೆಗಳನ್ನೂ ತತ್‌ಕ್ಷಣ ಬಿಡಿಸುವ ಸಾಮರ್ಥ್ಯವನ್ನು ಹೊಂದಿದ್ದ ಭಾರತದ ಮಹಿಳೆ ಶಕುಂತಲಾ ಅವರ ಬಗ್ಗೆ ಪ್ರಸ್ತಾಪಿಸುತ್ತಾ ಹೀಗೆ ಹೇಳುತ್ತಾರೆ:
    ಪ್ರಪಂಚದಾದ್ಯಂತ ಸುಮಾರು ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ತನ್ನ ಅಂತಃಪ್ರಜ್ಞೆಯನ್ನು ಪ್ರದರ್ಶಿಸಿರುವ ಒಬ್ಬ ಮಹಿಳೆ ಶಕುಂತಲಾ ಭಾರತದಲ್ಲಿದ್ದಾರೆ. ಆಕೆ ಗಣಿತಜ್ಞರಲ್ಲ. ಹೆಚ್ಚು ವಿದ್ಯಾವಂತರೂ ಅಲ್ಲ. ಆಲ್ಬರ್ಟ್ ಐನ್‌ಸ್ಟೈನ್ ಬದುಕಿದ್ದಾಗಲೂ ಆಕೆಯು ಆತನ ಮುಂದೆ ತನ್ನ ಪ್ರದರ್ಶನವನ್ನು ನೀಡುತ್ತಿದ್ದರು. ಆ ಪ್ರದರ್ಶನವು ವಿಶಿಷ್ಟವಾಗಿರುತ್ತಿತ್ತು. ಆಕೆ ಒಂದು ಸೀಮೆಸುಣ್ಣ ಹಿಡಿದು ಬೋರ್ಡ್‌ನ ಮುಂದೆ ಕುಳಿತುಕೊಳ್ಳುತ್ತಿದ್ದರು. ನೀವು ಅಂಕಗಣಿತದಲ್ಲಿ ಯಾವುದೇ ಪ್ರಶ್ನೆ ಕೇಳಿದರೂ, ಇನ್ನೂ ಪ್ರಶ್ನೆ ಮುಗಿಯುವ ಮೊದಲೇ ಆಕೆ ಉತ್ತರ ಬರೆಯಲು ಪ್ರಾರಂಭಿಸಿ ಬಿಡುತ್ತಿದ್ದರು! ಆಲ್ಬರ್ಟ್ ಐನ್‌ಸ್ಟೈನ್ ಆಕೆಗೆ ಒಂದು ಪ್ರಶಂಸಾ ಪತ್ರವನ್ನು ನೀಡಿದ್ದರು. ನಾನು ಆಕೆ ವಾಸಿಸುತ್ತಿದ್ದ ಮದ್ರಾಸ್‌ನಲ್ಲಿದ್ದಾಗ ಆಕೆ ಅದನ್ನು ಹಾಗೂ ಇತರ ಸೆರ್ಟಿಫಿಕೇಟ್‌ಗಳನ್ನೂ ನನಗೆ ತೋರಿಸಿದರು. ಆಲ್ಬರ್ಟ್ ಐನ್‌ಸ್ಟೈನ್ ಅವರು ಈ ರೀತಿ ಬರೆದಿದ್ದರು: ನಾನು ಈ ಮಹಿಳೆಯನ್ನು ಒಂದು ಸಮಸ್ಯೆಯನ್ನು ಕೇಳಿದೆ. ನನಗೆ ಅದನ್ನು ಬಿಡಿಸಲು ಮೂರು ಗಂಟೆಗಳು ಬೇಕಾಗುತ್ತಿತ್ತು, ಏಕೆಂದರೆ ನಾನು ಸಮಸ್ಯೆಯನ್ನು ಬಿಡಿಸುವ ಎಲ್ಲಾ ಹಂತಗಳನ್ನೂ ಅನುಸರಿಸಬೇಕಾಗಿತ್ತು. ನನಗಿಂತ ಕಡಿಮೆ ಅವಧಿಯಲ್ಲಿ ಬಿಡಿಸಲು ಯಾರಿಗೂ ಸಾಧ್ಯವಿರಲಿಲ್ಲ. ಬೇರೆಯವರು ಆರು ಗಂಟೆ ಅಥವಾ ಇನ್ನೂ ಹೆಚ್ಚು ಕಾಲ ತೆಗೆದುಕೊಳ್ಳುತ್ತಿದ್ದರು. ನಾನು ಈ ಮೊದಲೇ ಈ ಸಮಸ್ಯೆಯನ್ನು ಬಿಡಿಸಿದ್ದರಿಂದ ಮೂರು ಗಂಟೆ ತೆಗೆದುಕೊಳ್ಳುತ್ತಿದ್ದೆ.............ಆ ಸಂಖ್ಯೆ ಎಷ್ಟು ದೊಡ್ಡದಾಗಿತ್ತೆಂದರೆ ಸಮಸ್ಯೆಯ ಉತ್ತರವನ್ನು ಬರೆಯಲು ಆಕೆ ಪೂರ್ತಿ ಬೋರ್ಡ್‌ನ್ನೇ ಬಳಸಿಕೊಂಡಿದ್ದರು! ಐನ್‌ಸ್ಟೈನ್ ಪ್ರಶ್ನೆಯನ್ನು ಹೇಳಿ ಮುಗಿಸುವ ಮುನ್ನವೇ ಆಕೆ ಉತ್ತರ ಬರೆಯಲು ಪ್ರಾರಂಭಿಸಿದ್ದರು! ಐನ್‌ಸ್ಟೈನ್ ಬಹಳವಾಗಿ ಗೊಂದಲಗೊಂಡಿದ್ದರು, ಏಕೆಂದರೆ ಅದು ಅಸಾಧ್ಯದ ಕೆಲಸವಾಗಿತ್ತು. ನೀವು ಹೇಗೆ ಉತ್ತರ ಬರೆದಿರಿ?’ ಎಂದು ಐನ್‌ಸ್ಟೈನ್ ಕೇಳಿದರು. ಶಕುಂತಲಾ ಉತ್ತರಿಸಿದ್ದು ಹೀಗೆ, ‘ ನಾನು ಹೇಗೆ ಮಾಡುತ್ತೇನೋ ನನಗೆ ಗೊತ್ತಿಲ್ಲ. ತನಗೆ ತಾನೇ ನಡೆಯುತ್ತದೆ. ನೀವು ಪ್ರಶ್ನಿಸಲಾರಂಭಿಸಿದಾಗ ಕೆಲವು ಸಂಖ್ಯೆಗಳು ನನಗೆ ಗೋಚರಿಸಲಾರಂಭಿಸುತ್ತವೆ. ನಾನು ೧, , ,.......ಗಳನ್ನು ನೋಡುತ್ತಾ ಬರೆಯಲಾರಂಭಿಸುತ್ತೇನೆ.
    ಆಕೆ ತನ್ನ ಅಂತಃಪ್ರಜ್ಞೆಯು ಕಾರ್ಯ ನಿರ್ವಹಿಸುವ ಹಂತದಲ್ಲಿಯೇ ಜನ್ಮತಾಳಿದ್ದಳು. ಆದರೆ ಆಕೆ ಒಂದು ಪ್ರದರ್ಶನದ ವಸ್ತುವಾದದ್ದು ನನಗೆ ಬಹಳ ಬೇಸರದ ಸಂಗತಿಯಾಗಿದೆ.  ಅಂತಃಪ್ರಜ್ಞೆಯು ಕಾರ್ಯಶೀಲವಾಗಿರುವಂತೆ ಜನ್ಮತಾಳಿರುವ ಆಕೆಯು ಅತ್ಯಂತ  ಸುಲಭವಾಗಿ ಸಾಧನೆಯ ಪರಾಕಾಷ್ಟೆಗೆ ಏರಬಲ್ಲರು ಎನ್ನುವುದನ್ನು ಯಾರೂ ಪರಿಗಣಿಸಲೇ ಇಲ್ಲ. ಆಕೆಗೂ ಈ ಅರಿವು ಇದ್ದಂತಿಲ್ಲ.
    ನಗರದಲ್ಲಿ ಆಟೊರಿಕ್ಷಾ ಓಡಿಸುತ್ತಿರುವ ಶಂಕರನ್‌ದು ಮತ್ತೊಂದು ಉದಾಹರಣೆ. ಆಂಗ್ಲಮೂಲದ ಗಣಿತದ ಫ್ರೊಫೆಸರ್ ಒಬ್ಬರು  ಶಂಕರನ್‌ನ ಆಟೋದಲ್ಲಿ ಆಗಾಗ ವಿಶ್ವವಿದ್ಯಾಲಯಕ್ಕೆ ಹೋಗುತ್ತಿದ್ದರು. ಒಂದೆರಡು ಭಾರಿ ಪ್ರೊಫೆಸರ್ ಯಾವುದೋ ಸಮಸ್ಯೆಯ ಬಗ್ಗೆ ಚಿಂತಿಸುತ್ತಿದ್ದಾಗ ಆ ಹುಡುಗ ಸುಮ್ಮನೆ ಅವರ ಕಡೆಗೆ ನೋಡಿ, ‘ಇದೇ ಉತ್ತರ,’ ಎಂದು ಹೇಳಿದ್ದ. ಪ್ರೊಫೆಸರ್ ಅವನೊಡನೆ ಯಾವ ಮಾತನ್ನೂ ಆಡಿರಲಿಲ್ಲ! ಪ್ರೊಫೆಸರ್ ವಿಶ್ದವಿದ್ಯಾಲಯಕ್ಕೆ ಹೋಗಿ ಆ ಸಮಸ್ಯೆಯನ್ನು ಕ್ರಮವಾಗಿ, ಪೂರ್ತಿಯಾಗಿ ಬಿಡಿಸಿ ಆ ಹುಡುಗ ಹೇಳಿದ ಉತ್ತರವನ್ನೇ ಪಡೆದು ಆಶ್ಚರ್ಯ ಹೊಂದಿದ್ದರು! ಇದು ಹೀಗೇ ಪುನರಾವರ್ತನೆಯಾದಾಗ ಆ ಹುಡುಗನನ್ನು, ‘ನೀನು ಹೇಗೆ ಸಮಸ್ಯೆಯನ್ನು ಬಿಡಿಸುತ್ತೀಯ?’ ಎಂದು ಕೇಳಿದರು.
     ನಾನು ಏನನ್ನೂ ಮಾಡುವುದಿಲ್ಲ. ನನ್ನ ಹಿಂದೆ ಕುಳಿತಿರುವ ನೀವು ಚಿಂತಿಸುತ್ತಿದ್ದೀರಿ ಎನ್ನುವ ಅರಿವಾಗುತ್ತದೆ.  ಆಗ ಕೆಲವು ಸಂಖ್ಯೆಗಳು ಗೋಚರಿಸಲಾರಂಭಿಸುತ್ತವೆ. ನಾನು ಹೆಚ್ಚಿಗೆ ಓದಿಲ್ಲ. ಆದರೆ ಆ ಸಂಖ್ಯೆಗಳು ನನಗೆ ಅರ್ಥವಾಗುತ್ತವೆ. ನನಗೆ ನನ್ನ ಹಿಂದೆಯೇ ಇರುವ ನಿಮ್ಮ ಮನಸ್ಸಿನಲ್ಲಿ ಅನೇಕ ಸಂಖ್ಯೆಗಳು ಗೋಚರಿಸಲಾರಂಭಿಸುತ್ತವೆ. ಒಂದು ಸಾಲು, ಒಂದು ಕ್ಯೂ......ಇದ್ದಕ್ಕಿದ್ದಂತೆಯೇ ನನ್ನ ಮನಸ್ಸಿನಲ್ಲಿ ಕೆಲವು ಸಂಖ್ಯೆಗಳು ಕಾಣಿಸಲಾರಂಭಿಸುತ್ತವೆ! ಅದನ್ನೇ ನಾನು ನಿಮಗೆ ಉತ್ತರವೆಂದು ಹೇಳುತ್ತೇನೆ. ಇದು ಹೇಗೆ ಆಗುತ್ತದೆ ಎಂದು ನನಗೆ ಗೊತ್ತಿಲ್ಲ,’ ಎಂದು ಉತ್ತರಿಸಿದ ಶಂಕರನ್!
      ಶಂಕರನ್‌ನ ಅಂತಃಪ್ರಜ್ಞೆಯ ಸ್ಥಿತಿ ಶಕುಂತಲಾಗಿಂತ ಹೆಚ್ಚು ಅಭಿವೃದ್ಧಿ ಹೊಂದಿತ್ತು. ಶಕುಂತಲಾರನ್ನು ಸಮಸ್ಯೆ ಕೇಳಬೇಕಿತ್ತು. ನಂತರ ಆಕೆ ಉತ್ತರ ಬರೆಯುತ್ತಿದ್ದರು. ಆದರೆ ಶಂಕರನ್ ನಮ್ಮ ಮನಸ್ಸಿನಲ್ಲಿರುವ ಸಮಸ್ಯೆಯನ್ನು ತಾನೇ ಅರಿತುಕೊಂಡು ಉತ್ತರವನ್ನು ಹೇಳುತ್ತಿದ್ದ. ಆತ ಸಮಸ್ಯೆ ಮತ್ತು ಪರಿಹಾರ ಎರಡನ್ನೂ ಕಾಣಬಲ್ಲವನಾಗಿದ್ದ! ಆತ ನಮ್ಮ ಮನಸ್ಸನ್ನು ಓದಬಲ್ಲವನಾಗಿದ್ದ! ಆದರೆ ಅವನು ಬಹಳ  ಬಡವ ಮತ್ತು ಅವಿದ್ಯಾವಂತನಾಗಿದ್ದ.
     ಅವನನ್ನು ಪ್ರೊಫೆಸರ್ ಆಕ್ಸ್‌ಫರ್ಡ್‌ಗೆ ಕಳುಹಿಸಿದರು. ಅಲ್ಲಿ ಅವನು ಅನೇಕ ಶತಮಾನಗಳಿಂದ ಪರಿಹರಿಸಲಾಗದೇ ಉಳಿದಿದ್ದ ಅನೇಕ ಸಮಸ್ಯೆಗಳಿಗೆ ಉತ್ತರವನ್ನು ಹೇಳಿದ ಆದರೆ ಅವನಿಗೆ ಅದು ಹೇಗೆ ಬಂದಿತು ಎನ್ನುವುದು ತಿಳಿದಿರಲಿಲ್ಲ! ಅವನೇನೋ ಉತ್ತರಿಸಿದ. ಆದರೆ ಅದು ಸರಿ ಅಥವಾ ತಪ್ಪು ಎನ್ನುವುದನ್ನು ಹೇಗೆ ಕಂಡುಹಿಡಿಯುವುದು? ಅದೇ ಅನೇಕ ವರ್ಷಗಳನ್ನು ತೆಗೆದುಕೊಂಡಿತು. ಗಣಿತವು ಇನ್ನೂ ಅಭಿವೃದ್ಧಿಹೊಂದಿ ಆ ವಿಧಾನಗಳನ್ನು ಆವಿಷ್ಕರಿಸಿ ಉತ್ತರವನ್ನು ಕ್ರಮಬದ್ಧವಾಗಿ ಕಂಡುಹಿಡಿಯಲಾಯಿತು. ಆದರೆ ಅಷ್ಟರಲ್ಲಿ ಶಂಕರನ್ ನಿಧನನಾಗಿದ್ದ. ಆದರೆ ಅವನು ಕಂಡಿದ್ದ ಉತ್ತರ ಸರಿಯಾಗಿತ್ತು! ಅವನು ಗಣಿತದ ಚರಿತ್ರೆಯಲ್ಲೇ ಒಂದು ವೈಶಿಷ್ಟ್ಯವಾಗಿ ದಾಖಲಾಗಿದ್ದಾನೆ.
  



3 comments:

  1. 1.ಕುತೂಹಲ ಉಂಟುಮಾಡುವ ಲೇಖನ. ಪುನ್ರಜನ್ಮ ಮತ್ತು ಕರ್ಮ ಸಿದ್ಧಾಂತ ಒಪ್ಪುವವರಿಗೆ ಆಶ್ಚರ್ಯವಾಗುವುದಿಲ್ಲ. 2. ವಿಶೇಷ ಸಾಮರ್ಥ್ಯವನ್ನು ಎಳೆವಯಸ್ಸಿನಲ್ಲಿಯೇ ಗುರುತಿಸಿದ ಬಳಿಕ ಅದು ವಿಕಸಿಸಲು ಅಗತ್ಯವಾದ ಪರಿಸರ ಒದಗಿಸುವ ಪರಿಪಾಠ ನಮ್ಮಲ್ಲಿ ಇಲ್ಲದೇ ಇರುವುದರಿಂದ ಪ್ರದರ್ಶನ ವಸ್ತುವಾಗಿ ವ್ಯರ್ಥವಾಗುತ್ತದೆ

    ReplyDelete
  2. ಮನೋ ವಿಕಾಸವನ್ನು ಮೂಲವಾಗಿಟ್ಟುಕೊಂಡು ಬರೆಯುವ ನಿಮ್ಮ ಸರಳ ಶೈಲಿಯ ಬರಹಗಳಿಗೆ ನಾನು ಅಭಿಮಾನಿ.

    ReplyDelete
  3. ನಮ್ಮ ಸಾಮಾನ್ಯ ಜ್ಞಾನಕ್ಕೆನಿಲುಕದ ಈ ರೀತಿಯ ಅನೇಕ ಅದ್ಭುತಗಳು ಜರುಗುತ್ತವೆ.ಇವೆಲ್ಲಾ ನಿಜಕ್ಕೂ ಹೇಗೆ ನಡೆಯುತ್ತವೆ ಎನ್ನುವ ಜಿಜ್ಞಾಸೆ ಮೂಡಿಸುವ ಲೇಖನ.ಧನ್ಯವಾದಗಳು.

    ReplyDelete