ಯಾವುದೇ ದುಃಖವಾದರೂ ಕ್ರಮೇಣ ತನ್ನ ತೀವ್ರತೆಯನ್ನು ಕಡಿಮೆಗೊಳಿಸಿಕೊಳ್ಳುತ್ತಾ ಸಾಗುತ್ತದೆ. ಅದಕ್ಕೆ ಹೊರಗಿನಿಂದ ಆತ್ಮೀಯರ ಮಾತುಗಳು ಇಂಬುಗೊಟ್ಟರೆ, ನಮ್ಮ ಒಳಗಿನಿಂದಲೇ ಒಂದು ಸಿದ್ಧತೆಯೂ ರೂಪುಗೊಳ್ಳುತ್ತಾ ಸಾಗುತ್ತದೆ. ಸುಧೀರ್ಘವಾಗಿ ನಮ್ಮೊಂದಿಗೆ ತನ್ನ ಬದುಕನ್ನು ಮಿಳಿತಗೊಳಿಸಿ ಸಾಗಿದ್ದ ‘ಜಿಮ್ಮಿ?ಯ ಅಗಲಿಕೆಯ ನೋವೂ ಹೀಗೇ ತನ್ನ ಅಗಾಧತೆಯನ್ನು ತಿಳಿಗೊಳಿಸಿಕೊಳ್ಳಲೇಬೇಕಿತ್ತು. ಅದಕ್ಕೆ ಪುಷ್ಟಿಕೊಟ್ಟಿದ್ದು ಮಗಳು ಸುಷ್ಮಸಿಂಧುವಿನ ಒಂದು ಕನಸು-‘ಕೇಳು ಚಿನ್ನು’. ( ಇದು ಅವಳ ಕನಸುಗಳ ಕಥಾ ಸಂಕಲನ ‘ಪಯಣ ಸಾಗಿದಂತೆ......’ಯಲ್ಲಿ ಸೇರ್ಪಡೆಯಾಗಿದೆ.) ಅದೂ ಕೂಡ ಇಂಥದೇ ಸಂದರ್ಭದಲ್ಲಿ ಅವಳಿಗೆ ಬಂದದ್ದು, ತನ್ಮೂಲಕ ಅಂಥಾ ಮನಃಸ್ಥಿತಿಗಳಿಗೆ ಸಾಂತ್ವನ ನೀಡಲೆಂದೇ ಇರುವುದು ಎನ್ನುವುದು ನನ್ನ ಭಾವನೆ.
ಸುಮಾರು ಆರು ವರ್ಷಗಳ ಹಿಂದೆ ಜಿಮ್ಮಿಗೆ ‘ಬೆಂಜಿ’ ಎನ್ನುವ ಏಕೈಕ ಮರಿ ಇತ್ತು. ನಮ್ಮ ಮನೆಯಲ್ಲೇ ಹುಟ್ಟಿದ ಆ ಮರಿಯನ್ನು ಸುಷ್ಮ ಶಾಲಿನಲ್ಲಿ ಸುತ್ತಿಕೊಂಡು ಎತ್ತಿಕೊಂಡಿರುತ್ತಿದ್ದ ದೃಶ್ಯ ಇನ್ನೂ ನನ್ನ ಕಣ್ಣಮುಂದಿದೆ. ಬಹಳ ಮುದ್ದು- ಸುಂದರನಾಗಿ ಬೆಳೆಯುತ್ತಿದ್ದ ಆ ಮರಿ ಒಂದು ವರ್ಷದಲ್ಲೇ ಅನಾರೋಗ್ಯದಿಂದ ಸತ್ತುಹೋಯಿತು.
ಪತ್ರರೂಪದಲ್ಲಿರುವ ‘ಕೇಳು ಚಿನ್ನು’ ಕನಸಿನ ಆಯ್ದ ಭಾಗಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ:
ಪ್ರೀತಿಯ ಚಿನ್ನುವಿಗೆ,
ನಿನ್ನ ಬದುಕಿನಲ್ಲಿ ಪುಟ್ಟ ಪಾತ್ರಧಾರಿಯಾಗಿ ಬಂದು ಹೋದ ‘ನನ್ನ’ ಸವಿ ನೆನಪುಗಳು. ನಿನ್ನಿಂದ ಮರೆಯಾಗಿಯೂ ಆಗದಂತಿರುವ ನನ್ನನ್ನು ಕಂಡು ಅಚ್ಚರಿಯಾಯಿತಾ? ನಿನ್ನ ಕಣ್ಣುಗಳಲ್ಲಿ ಪುಟಿಯುತ್ತಿರುವ ನೀರ ಹನಿಗಳನ್ನೊಮ್ಮೆ ಒರೆಸಿಕೊಂಡು ನೋಡು. ನಾನಿಲ್ಲೇ ಬಂದಿದ್ದೇನೆ. ನಿನ್ನೆದುರೇ...... ನಿನ್ನ ಜೀವನದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಬಂದು ಹೋದ ನನ್ನ ಅಗಲುವಿಕೆ ನಿನ್ನನ್ನು ಈ ಪರಿ ಕಾಡಿದರೆ ನನಗೆ ಸಂತೋಷವಾ? ನಿನ್ನ ಕಣ್ಣೆದುರಿಗೆ ಇನ್ನೂ ‘ಆ’ ದಿನಗಳೇ ಉಳಿದುಬಿಟ್ಟಿವೆಯಾ? ಅಂದು ನನ್ನದು ಅಪಾರ ಯಾತನೆ. ನರನರಗಳಲ್ಲಿಯೂ ಸುಳಿದಾಡುವ ‘ನೋವು’. ಅದೊಂದು ಕ್ಷಣ ಅಷ್ಟೇ...... ನನ್ನ ನೋವುಗಳೆಲ್ಲಾ ಮಾಯವಾಗಿಹೋದವು. ನಾನು ಅವುಗಳಿಂದ ಮುಕ್ತನಾಗಿಹೋದೆ........ ನನ್ನೆದಿರು ಕುಳಿತಿದ್ದ ನಿನ್ನ ಕಣ್ಣುಗಳಲ್ಲಿ ಹನಿಗಳ ಓಕುಳಿ. ನನಗೆ ಮಹದಾಶ್ಚರ್ಯ! ಅರೆ! ........ ನನ್ನ ಕಾಲುಗಳು ಅಲ್ಲಾಡುತ್ತಿಲ್ಲ.... ನನ್ನ ಕಣ್ಣುಗಳನ್ನು ತೆರೆಯಲಾಗುತ್ತಿಲ್ಲ.... ಆದರೂ ನನಗೇನೋ ಸಂತಸ! ಚಿನ್ನೂ, ಆ ನೋವಿನ ದಿನಗಳಲ್ಲಿ ನನ್ನ ಬದುಕಿಗಾಗಿ ಹೋರಾಡಿದ ನಿನ್ನನ್ನು ನಾನು ಮರೆಯುತ್ತೀನಾ? ನಿನ್ನ ಪ್ರಯತ್ನವನ್ನೂ, ನನ್ನ ಹಿಡಿತವನ್ನೂ ಮೀರಿದ ಘಟನೆಗೆ ನೀನು ಹೀಗೆ ರೋಧಿಸುತ್ತಿದ್ದರೆ ನನಗೆ ಖುಷಿಯಾ?............
..............ಇಂದು ಎಲ್ಲರ ಪ್ರಕಾರ ನಾನು ದೈಹಿಕವಾಗಿ ದೂರವಾಗಿದ್ದರೂ ನಿನಗೆ ತುಂಬಾ ಹತ್ತಿರವಾಗಿದ್ದೇನೆ ಎನಿಸುತ್ತಿದೆ. ಮೊದಲಾದರೆ ‘ನಾನು-ನೀನು’ಎಂಬ ‘ಅಂತರ’ವೊಂದಿತ್ತು. ಆದರೆ ಇಂದು ನಾನು ನನ್ನ ಅಸ್ತಿತ್ವವನ್ನು ಕಳೆದುಕೊಂಡು ನಿನ್ನೊಳಗೇ ಲೀನವಾಗಿ ನಿನ್ನವನಾಗಿ ಹೋಗಿದ್ದೇನಲ್ಲವಾ? ನಾನಿಷ್ಟು ಹತ್ತಿರವಾಗಿರುವಾಗ ನೀ ಹೀಗೆ ಅಳುತ್ತಿದ್ದರೆ ನನಗೆ ಕೋಪ ಬರುವುದಿಲ್ಲವಾ?
ಎಷ್ಟೋ ಜೀವಗಳ ಜೀವನವನ್ನೇ ತೆಗೆದುಕೊ. ಎಲ್ಲಾ ಬದುಕು-ಸಾವಿನ ಮಧ್ಯದ ಪಯಣವೇ ಅಲ್ಲವಾ? ಒಂದು ಬದುಕು-ಹುಟ್ಟು ಎಷ್ಟು ಸಂತಸ ಕೊಡುತ್ತದೆ. ಅದೇ ಒಂದು ಸಾವೇಕೆ ಜೀವನವನ್ನೇ ಬರ್ಭರವಾಗಿಸಿಬಿಡುತ್ತದೆ? ಪ್ರತಿ ಅಂತ್ಯವೂ ಒಂದು ಆರಂಭವೆನ್ನುವಂತೆ, ಒಂದು ಆತ್ಮೀಯನ ಸಾವೂ ಒಂದು ಆರಂಭವೇ ಅಲ್ಲವಾ? ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದ ಜೀವನವನ್ನು ಮತ್ತೆ ಆರಂಭಿಸುವುದಿಲ್ಲವಾ? ಯಾವ ಸಾವೂ ಒಂದು ಬದುಕನ್ನು ಅಂತ್ಯದವರೆಗೂ ತೆಗೆದುಕೊಂಡು ಹೋಗಬಾರದಲ್ಲವಾ ಚಿನ್ನು?..........ನನಗೆ ಇಷ್ಟೆಲ್ಲಾ ಮಾತನಾಡುವಷ್ಟು ಬುದ್ಧಿ ಎಲ್ಲಿಂದ ಬಂತು ಎಂದು ಯೋಚಿಸುತ್ತಿದ್ದೀಯಾ ಹೇಗೆ? ಯಾರ ಅಗಲುವಿಕೆಯೂ ನಮ್ಮ ಸೋಲಿಗೆ ಕಾರಣವಾಗಬಾರದು. ಮುಂದೆ ಹಸನಾಗಿ ಹರಡಿಕೊಂಡಿರುವ ಜೀವನಕ್ಕೆ ಸ್ಫೂರ್ತಿಯಾಗಬೇಕು. ಒಂದು ಅಧ್ಯಾಯ ಮುಗಿದ ನಂತರ ಮತ್ತೊಂದು ಶುರುವಾಗುವುದಿಲ್ಲವಾ ಚಿನ್ನು? ಹಾಗೇ ನನ್ನ ‘ಅಧ್ಯಾಯ’ ನಿನ್ನ ಜೀವನದ ಒಂದು ಪ್ರಮುಖ ಘಟ್ಟವಾಗಲಿ.
ಕನಸುಗಳಿಗೆ ಮಾತ್ರ ಸೀಮಿತವಾಗಿರುವ ನನ್ನನ್ನು ನಿನ್ನ ನೆನಪಿನ ಪುಟಗಳಲ್ಲಿ ಅಮರವಾಗಿಸಿಬಿಡು. ನನ್ನ ಅಸ್ತಿತ್ವವನ್ನು ಅಲ್ಲಿ ಶಾಶ್ವತಗೊಳಿಸಿಬಿಡು ಚಿನ್ನು. ಯಾರಿಗೂ ಹೇಳಲಾಗದ, ವಿವರಿಸಲಾಗದ ಆ ವೇದನೆಯನ್ನು ಈಗ ನನಗೆ ಹೇಳಿಬಿಡು. ಸಾಕು, ಆ ಎಲ್ಲದರಿಂದ ಹೊರಬಂದುಬಿಡು, ನನ್ನಂತೆ! ಒಂಟಿಯಾಗಿ ಕುಳಿತು ಆ ದುರಂತವನ್ನು ನೆನೆದು ದುಃಖಿಸಿ ನಿನ್ನ ಇರುವಿಕೆಯನ್ನೇ ಕಠಿಣಗೊಳಿಸಿಕೊಳ್ಳುವ ಬದಲು, ಆ ಒಂಟಿ ಕ್ಷಣಗಳಲ್ಲಿ ಮುಂದಿನ ಕನಸು ಕಟ್ಟು, ಯೋಜನೆ ಮಾಡು. ನನ್ನ ಅಗಲುವಿಕೆ ನಿನ್ನ ಹಿಂದಿನ ಜೀವನದ ಒಂದು ಭಾಗವೇ ಹೊರತು, ಮುಂದಿನ ನಿನ್ನ ಕನಸುಗಳ ಪಾಲಿನ ಹೊಡೆತವಲ್ಲ ಚಿನ್ನು. ನಿನ್ನಲ್ಲಿರುವ ನನ್ನ ಬದುಕನ್ನು ಚೆನ್ನಾಗಿ ನಡೆಸಿಕೊ ಚಿನ್ನು.
ನಮ್ಮಿಂದ ದೂರವಾದವರು ಹಾರಿಹೋಗಿ ದೂರದಲ್ಲಿ ನಕ್ಷತ್ರವಾಗುತ್ತಾರೆ ಎಂಬ ಕಲ್ಪನೆ ಎಷ್ಟು ಚೆಂದವಲ್ಲವಾ? ನನ್ನನ್ನು ಆ ನಕ್ಷತ್ರವಾಗಿಸಿಬಿಡು. ಆ ನಕ್ಷತ್ರದ ಹೊಳಪು ನಾನಾಗಿ ಬಾಂದಳವ ನಿಟ್ಟಿಸುತ್ತಿರುವ ನಿನ್ನ ಕಣ್ಣುಗಳಲ್ಲಿ ಮಿಂಚುವುದು ಎಷ್ಟು ಖುಷಿಯಲ್ಲವಾ? ನಿನ್ನ ಪ್ರತೀ ಸೋಲು-ಗೆಲವುಗಳಲ್ಲಿ ನನ್ನ ಹಾರೈಕೆಯಿದೆ, ತುಂಬಾ ಪ್ರೀತಿಯಿದೆ, ಮುದ್ದು ಸಾಂತ್ವನವಿದೆ. ನಿನ್ನ ಮುಂದಿನ ಜೀವನಕ್ಕೆ ನನ್ನ ಶುಭಾಶಯ. ನೀನು ಮುಂದೆಮುಂದೆ ಸಾಗುತ್ತಿರಬೇಕೆಂಬುದೇ ನನ್ನ ಆಶಯ. ಈ ಪುಟ್ಟ ಗೆಳೆಯನ ‘ದೊಡ್ಡ!’ ಮಾತುಗಳನ್ನು ಮರೆಯುವುದಿಲ್ಲ ತಾನೆ? ನಾನು ಕೂಡ ನನ್ನ ಪುಟ್ಟ ಗೆಳತಿಯ ಮುಂದಿರುವ ದೊಡ್ಡ ಜೀವನವನ್ನು ನೋಡಲು ಕಾತುರದಿಂದಿದ್ದೇನೆ.....!
ಇನ್ನಾದರೂ ಒಮ್ಮೆ ನಕ್ಕುಬಿಡು....... ನಮ್ಮ ತರಲೆ ದಿನಗಳ ನೆನಪಿನಲ್ಲಿ.... ಪ್ಲೀಸ್......
ಇತಿ,
ನಿನ್ನೊಳಗೇ ಅಡಗಿರುವ ನಿನ್ನ
‘ಗೆಳೆಯ’
ಸಾಂತ್ವನ!ಚೆಂದದ ಶೀರ್ಷಿಕೆಯಡಿಯಲ್ಲಿ ಒಳ್ಳೆಯ ಹೂರಣ ತುಂಬಿದ ಬರಹ.ನೊಂದ ಜೀವಕ್ಕೆ ಇದಕ್ಕಿಂತ ಸಾಂತ್ವನ ಬೇಕೇ?
ReplyDelete@ಡಾ. ಕೃಷ್ಣ ಮೂರ್ತಿಯವರೆ,
Delete೧೬ ವರ್ಷವಿದ್ದಾಗ ಮಗಳಿಗೆ ಬ೦ದ ಈ ಕನಸಿನಿ೦ದ ಆಶ್ಚರ್ಯ ಚಕಿತಳಾಗಿದ್ದೆ!ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. ಬರುತ್ತಿರಿ.
ಈ ಸಾಂತ್ವನ ಚಿನ್ನುವಿನ ಮೇಲಿನ ಅಮಿತ ಪ್ರೀತಿಯ ಧ್ಯೋತಕ.
ReplyDelete@ಬದರಿನಾಥ್ ರವರೆ,
Deleteಇದು ಕನಸಿನ ಮೂಲಕ ಸುಷ್ಮಾಗೆ ಹಾಗೂ ತನ್ಮೂಲಕ ಮನುಕುಲಕ್ಕೆ ದೊರೆತ ಸಾ೦ತ್ವನ. ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸರ್. ಬರುತ್ತಿರಿ.
ಚೆನ್ನಾಗಿ ಮೂಡಿ ಬಂದಿದೆ
ReplyDelete@ A V G Raoರವರೆ,
Deleteಲೇಖನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.
ನೊಂದವರಿಗಾಗಿ ನುಡಿ ಸಾಂತ್ವನ- ಅತ್ಯುತ್ತಮವಾಗಿದೆ.
ReplyDelete@ಮಂಜುಳಾದೇವಿಯವರೆ,
ReplyDelete`ಸಾಂತ್ವನ'ವನ್ನು ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.
ಬದುಕಿನಡೆಗಿನ ಪ್ರೀತಿಗೆ ಕರೆದೊಯ್ಯುವ ಪತ್ರ .
ReplyDelete@ಪ್ರತಾಪ್ ಬ್ರಹ್ಮಾವರ್ ರವರೆ,
ReplyDeleteನಿಮ್ಮ ಅಭಿಮಾನ ಪೂರ್ವಕವಾದ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್. ಬರುತ್ತಿರಿ.
ಪ್ರಭುದ್ಧ ಒಕ್ಕಣಿಕೆಯಲ್ಲಿನ ಭಾವನಾತ್ಮಕ ಪತ್ರ..
ReplyDeleteಮೇಡಂ;ನನ್ನ ಬ್ಲಾಗಿನಲ್ಲಿ "ವೈದ್ಯೋ ನಾರಾಯಣೋ ಹರಿ!!!ನಮಗೆ ದೇವರ ಪಟ್ಟ ಬೇಡಾರಿ!!!"ಎನ್ನುವ ಲೇಖನವಿದೆ.ದಯವಿಟ್ಟು ಓದಿ ತಮ್ಮ ಅಭಿಪ್ರಾಯ ತಿಳಿಸಿ.ನಮಸ್ಕಾರ.
ReplyDelete