Friday, November 23, 2012

ಸಾಪೇಕ್ಷ


ಗರಗರ

ತಿರುಗು ಚಕ್ರದ

ಅಂಚಿಗೆ

ಒಗೆಯಲ್ಪಟ್ಟ ಕಾಯ

ವಿರಮಿಸಲು ಬೆಂಬಿಡದ ಭಯ

ಸ್ವಲ್ಪ ತಂಗುವೆನೆಂದರೂ

ತಪ್ಪದ ಅಪಾಯ!



ಪಯಣ ಸಾಗಿದಂತೆ

ಪರ್ಯಾಯ

ಗರಿಷ್ಠ-ಕನಿಷ್ಠ

ಗಮನಿಸುವವರೇ ಇಲ್ಲ

ತನ್ನಿಷ್ಟ



ಒಮ್ಮೆ...

ಒಮ್ಮೆಯಾದರೂ

ಮಧ್ಯಂತರದಲಿ

ಸ್ಥಿರವಾಗಲೂ

ಆಗದಂಥಾ

ಆವರ್ತಕ ಚಲನೆ

ಆಗಾಗ ಮೀರುವುದಾಗಿದೆ

ಘರ್ಷಣೆ



ಪರಿಧಿ ಮೀರಿದರಂತೂ

ಸ್ಪರ್ಶಕದ ನೇರದಲೇ ಒಗೆತ

ಬಿಟ್ಟುಹೋಗಲೇ ಬೇಕಾಗ

ಈ ಆತ್ಮೀಯ ವೃತ್ತ



ಇದ್ದಷ್ಟು ದಿನವೂ

ತಿರುಗುತ್ತಲೇ ಇರುವುದೋ

ತಿರುಗುವುದರಲೇ

ಸಾರ್ಥಕ್ಯ ಕಾಣುವುದೋ?..?..?



ಕಾಯಕವೇ

ತಾನೆಂದೆಣಿಸಿದಾಕ್ಷಣವೇ

ಕೇಂದ್ರದತ್ತ ಪಯಣ

ಏಳು ಬೀಳುಗಳಿಲ್ಲದ

ನಿಶ್ಚಿಂತ ತಾಣ

ನಿರ್ಲಿಪ್ತ ಕಾಯಕೀಗ

ಸಮಸ್ಯೆಗಳೇ ಗೌಣ!



3 comments:

  1. ಎಂತ ಭಾವ ತೀವ್ರತೆಯ ಕವಿತೆ.

    ReplyDelete
  2. ಇದೇ ನೋಡಿ ಬದುಕು ಎಂದರೆ! ಆವರ್ತಿಸುತ್ತಲೇ ಇರಬೇಕು, ತಪ್ಪಿದರೆ ಸ್ಪರ್ಶಕದ ಅಂಚಿನಿಂದ ಹೊರಗೆಸೆತ! ತುಂಬ ಚೆನ್ನಾಗಿದೆ.

    ReplyDelete