Thursday, April 2, 2015

`ಜೇಬಾಯಣ'

(`ಎಪ್ರಿಲ್ ' ಪ್ರಯುಕ್ತ ನನ್ನ ಲಲಿತ ಪ್ರಬಂಧ `ಜೇಬಾಯಣ' ತಮ್ಮ ಓದಿಗೆ :)
`ಕಲ್ಯಾಣ ಸೇವೆ ಜೇಬಿನ ಬುಡದಲಿ
ಪುಟ್ಟಾಣಿಯ ಪುರಿ ಮೇಲೊಂದಿಷ್ಟು
ಗೋಲಿ ಬಳಪ ಮತ್ತೊಂದಿಷ್ಟು
ಬಂದ, ಬಂದ, ಸಣ್ತಮ್ಮಣ್ಣ'
ಈ ಪದ್ಯವನ್ನು (ಆಗ `ಕವನ’ ಎಂದರೆ ಏನೆಂದೇ ನನಗೆ ತಿಳಿದಿರಲಿಲ್ಲ!) ಓದುವಾಗಲೆಲ್ಲಾ ನನಗೆ ಬಹಳ ದು:ಖವಾಗುತಿತ್ತು. ಏಕೆಂದರೆ ನನ್ನ ಕತ್ತಿನಿಂದ ಕಾಲಿನವರೆಗೂ ಇದ್ದ ಉದ್ದ ಲಂಗ, ರವಿಕೆಗಳಲ್ಲಿ ಒಂದಾದರೂ ಜೇಬಿರಲಿಲ್ಲ. ಅದೇ ಮಂಡಿಯ ಮೇಲಿದ್ದ ನನ್ನ ತಮ್ಮನ ನಿಕ್ಕರ್ನಲ್ಲಿ ಮೂರು, ನಾಲ್ಕು ಜೇಬುಗಳಿರುತ್ತಿದ್ದವು. ಅವು ಯಾವಾಗಲೂ ಹಬ್ಬಗಳಿಗನುಗುಣವಾಗಿ ವಿಶೇಷ ಖಾದ್ಯಗಳಿಂದ ತುಂಬಿ ತುಳುಕುತ್ತಾ ಅವನ ಜಿಹ್ವೆಯನ್ನು ಸದಾ ಕ್ರಿಯಾಶೀಲವಾಗಿರಿಸಿ, ತತ್ ಪರಿಣಾಮವಾಗಿ ಅವನನ್ನು ಅಪರಿಮಿತ ಶಕ್ತಿಶಾಲಿಯನ್ನಾಗಿಸಿದ್ದವು (ಪಕ್ಷಿಗಳಂತೆ!). ಗೌರಿಹಬ್ಬದಲ್ಲಿ ಅವನ ಜೇಬುಗಳು ಚಕ್ಕ್ಕುಲಿ, ಕೋಡುಬಳೆ, ಮುಚ್ಚೋರೆ, ತೇಂಕೊಳಲು.....ಗಳಿಂದ ತುಂಬಿದ್ದು, ರಾತ್ರಿ ಯಾವಾಗಲಾದರೂ ಎಚ್ಚರವಾದಾಗಲೂ ಅವನ ಕಡೆಯಿಂದ `ಕಟಂ, ಕುಟುಂ’ ಶಬ್ದ ಕೇಳಿಬರುವಂತೆ ಮಾಡುತ್ತಿದ್ದವು. ಈಗಿನಂತೆ ಡಿಟರ್ಜಂಟ್ಗಳಿಲ್ಲದ ಆ ಕಾಲದಲ್ಲಿ ಅಮ್ಮ ಎಣ್ಣೆಯಿಂದ ಮೊಣಕಾದ ಅವನ ನಿಕ್ಕರ್ ಜೇಬುಗಳನ್ನು ಶುಚಿಗೊಳಿಸಲಾಗದೇ ಹೆಣಗಾಡುತ್ತಿದ್ದರು! ಸಂಕ್ರಾಂತಿ ಬಂತೆಂದರೆ ಅವನ ಜೇಬುಗಳಲ್ಲಿ ಎಳ್ಳು (ಪಂಚಕಜ್ಜಾಯ!) ತುಂಬಿರುತ್ತಿತ್ತು. ಕಳೆದ ಸಂಕ್ರಾಂತಿಯಲ್ಲಿ ಅವನು ತಿಂದ ಎಳ್ಳಿನ ಪ್ರಭಾವದಿಂದ ಕಣ್ಣೆಲ್ಲಾ ಹಳದಿಯಾಗಿ ಜಾಂಡೀಸ್ ಬಂದಿರಬಹುದೆಂದು ಚಿಕಿತ್ಸೆ ಮಾಡಿಸಿದರೂ ಫಲಕಾರಿಯಾಗದೇ ಅಜ್ಜಿ `ಹಲವು ದೇವರಿಗೆ ಹರಕೆ’ ಹೊತ್ತದ್ದೂ ಆಗಿ ಅವನಿಗೆ `ಮುಡಿ’ಯನ್ನೂ ಬಿಟ್ಟಿದ್ದರು! ಅವನು ಒದಗಿಸುತ್ತಿದ್ದ `ಗೊಬ್ಬರ’ದಿಂದಲೋ ಏನೋ ಅವನ ಕೂದಲು ಹುಟ್ಟಿದಾಗಿನಿಂದಲೂ ಕತ್ತರಿ ಸೋಂಕದೇ ಬೆಳೆದಿದ್ದ ನಮ್ಮ ಕೂದಲಿಗಿಂತಲೂ ಉದ್ದವಾಗಿ ಬೆಳೆದಿತ್ತು! ಎರಡು ಜಡೆ ಹೆಣೆದು ಮೇಲೆ ಕಟ್ಟುತ್ತಿದ್ದ ಈ ಬದನೇಕಾಯಿ ಜಡೆಗಳೇ ಅವನು ಶಾಲೆಯಲ್ಲಿ ನಡೆಸುತ್ತಿದ್ದ ಎಲ್ಲಾ `ಫೈಟಿಂಗ್’ಗಳಿಗೂ ಮೂಲವಾಗುತ್ತಿದ್ದವು! `ಜೇಬು’ಗಳಿಂದ ಉಂಟಾದ ವಿಶೇಷ ಶಕ್ತಿ ಸಂಚಯನದಿಂದ ಅವನ ಎದುರಾಳಿಗಳು ಹಣ್ಣುಗಾಯಿ ನೀರುಗಾಯಾಗಿ ಅವನು ವಾರಗಟ್ಟಲೇ ಶಾಲೆಗೆ ಚಕ್ಕರ್ ಹೊಡೆಯುವಂತಾಗುತ್ತಿತ್ತು. ಹೀಗೆ ಚಿಕ್ಕವನಾಗಿದ್ದಾಗ ಜೇಬಿನ ಸಂಪೂರ್ಣ ಪ್ರಯೋಜನ ಪಡೆದ ನನ್ನ ತಮ್ಮ ಈಗಲೂ ಜೇಬನ್ನು ತುಂಬಿಸುವತ್ತಲೇ ವಿಶೇಷ ಗಮನ ಹರಿಸಿ ನನಗೆ ಆರ್ಥಿಕವಾಗಿ ಆಧಾರಸ್ಥಂಭವಾಗೇ ಇದ್ದಾನೆ!
`ಜೇಬು’ ಎನ್ನುವುದೇ `ಆರ್ಥಿಕತೆ’ಯ (`ಹಣ’ದ) ಸಂಕೇತವಾಗಿದೆ. ‘ಜೇಬು ಖಾಲಿಯಾಗಿದೆ’ ಅಂತ ಹೇಳೋದನ್ನ ನಾವು ಕೇಳ್ತಾನೇ ಇರ್ತೀವಲ್ಲ! ಸಾಮಾನ್ಯವಾಗಿ ನಮ್ಮ ಭಾರತೀಯ ಸಾಂಪ್ರದಾಯಿಕ ಉಡುಗೆಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಜೇಬಿನ ಅಸ್ಥಿತ್ವವೇ ಕಂಡುಬರುವುದಿಲ್ಲ. ಪುರುಷರು ಧರಿಸುತ್ತಿದ್ದ ಪಂಚೆ, ಶಲ್ಯಗಳಲ್ಲಾಗಲೀ, ಸ್ತ್ರೀಯರು ಧರಿಸುತ್ತಿದ್ದ, ಈಗಲೂ ಸಂಪ್ರದಾಯವನ್ನು ಉಳಿಸುವ ಹೊಣೆ ಹೊತ್ತು ಧರಿಸುತ್ತಲೇ ಇರುವ (ನನ್ನಂಥವರು!) ಸೀರೆಯಲ್ಲಾಗಲೀ ಜೇಬಿನ ಸುಳಿವೇ ಇಲ್ಲ. ಆ ಕಾಲಕ್ಕೆ ಹಣದ ಬಗ್ಗೆ ಅವರಿಗಿದ್ದ ನಿರ್ಲಿಪ್ತತೆಯನ್ನೋ ಅಥವಾ (ಅಪ್ರಾಮುಖ್ಯತೆಯನ್ನೋ) ಆ ಉಡುಗೆಗಳೇ ತೋರಿಸುತ್ತವೆ. ಕ್ರಮೇಣ ಕಾಲ ಬದಲಾದಂತೆ ಬರುತ್ತಿದ್ದ ಆರು ಕಾಸನ್ನೋ ,ಮೂರುಕಾಸನ್ನೋ ತಮ್ಮ ಸೊಂಟಕ್ಕೆ (ಪಂಚೆ ಕಟ್ಟಿಕೊಳ್ಳುತ್ತಿದ್ದ ಜಾಗ!) ಗಂಡಸರು ಸಿಕ್ಕಿಸಿಕೊಂಡರೆ, ಹೆಂಗಸರು ತಮ್ಮ ಬಾಳೆಕಾಯಿಗೆ (ಸೀರೆಯ ನೆರಿಗೆ ಸುರುಳಿಸುತ್ತಿ ಸಿಕ್ಕಿಸುತ್ತಿದ್ದ ರಚನೆ!) ಸಿಕ್ಕಿಸಿಕೊಳ್ಳುತ್ತಿದ್ದರು! ವಿದೇಶೀಯರು ನ ಮ್` ದೇಶವನ್ನು ತಮ್ಮ ಜೇಬು ತುಂಬಿಸಿಕೊಳ್ಳಲು ಆಕ್ರಮಿಸಿದಂತೆ, ಅವರ ಉಡುಗೆಗಳಲ್ಲಿ ಧಾರಾಳವಾಗಿದ್ದ ಜೇಬುಗಳೂ ಆಗಮಿಸಿದವು! ಆ ಜೇಬುಗಳ ಪ್ರಾಮುಖ್ಯತೆಯನ್ನು ಕ್ರಮೇಣ ಮನಗಂಡ ನಮ್ಮ ಭಾರತಮಾತೆಯ `ಗಂಡು’ ಸಂತಾನ ಆ ಉಡುಗೆಗಳನ್ನೇ ತಮ್ಮದಾಗಿಸಿಕೊಂಡರು. ಮಹಿಳೆಯರು ತಮ್ಮನ್ನೇ ಆರ್ಥಿಕವಾಗಿ ಅವಲಂಬಿಸಬೇಕೆಂಬ ಹಂಬಲದಿಂದಲೋ ಏನೋ ಅವರಿಗೆ ಸಂಪ್ರದಾಯದ ಸಂಕಲೆ ಬಿಗಿದು ಹದಿನಾರು ಮೊಳದ ಸೀರೆಯ ಸೆರೆಯಲ್ಲೇ ಉಳಿಸಿಬಿಟ್ಟರು. ಅಮ್ಮನ ಕಾಲಕ್ಕೆ ಅದು ಹನ್ನೆರಡು ಮೊಳವಾಗಿ, ಈಗ ಐದೂವರೆ ಮೀಟರ್ ಆಗಿ ನನ್ನಂಥವರ ಮೇಲೆ ರಾರಾಜಿಸುತ್ತಾ ಆರ್ಥಿಕ ಪರಾವಲಂಬನೆಯ ಸಂಕೇತವಾಗಿ ಉಳಿದುಬಿಟ್ಟಿದೆ! ನಮ್ಮ ಹಳ್ಳಿಯ ಕಡೆ ಮಹಿಳೆಯರು ‘ಎಲಡಿಕೆಚೀಲ’ (ಎಲೆ-ಅಡಿಕೆ ಚೀಲ) ಎನ್ನುವ ಒಂದು ೨-೩ಅಂಕಣಗಳಿರುವ ಪುಟ್ಟ ಚೀಲವೊಂದನ್ನು ತಮ್ಮ ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಿದ್ದರು. ಇದೂ ಒಂದುರೀತಿ ಜೇಬಿನ ಪರ್ಯಾಯ ವ್ಯವಸ್ಥೆಯೇ ಆಗಿತ್ತು! ಜೇಬಿನ ಸೌಕರ್ಯವಿಲ್ಲದ ನನ್ನಂಥಾ ಮಹಿಳೆಯರ ಪಾಡಂತೂ ಹೇಳತೀರದು. ಅದಕ್ಕಂದೇ ಇರಬಹುದು, `ವ್ಯಾನಿಟಿ ಬ್ಯಾಗ್’ ( ಯಾರೋ ಕುಹಕಿಗಳೇ ಈ ಹೆಸರು ಇಟ್ಟಿರಬಹುದು. `ವ್ಯಾನಿಟಿ’ ಎಂದರೆ `ಜಂಬ’ ಅಂತ. ಒಂದು ಕಾಲಕ್ಕೆ ಇದು `ಜಂಬದ ಚೀಲ’ ಆಗಿದ್ದಿರಲೂ ಬಹುದು. ಆದರೆ ಈಗಂತೂ ಇದು ನಿಜಕ್ಕೂ `ನೆಸೆಸ್ಸಿಟಿ’ ಎಂದರೆ `ಅಗತ್ಯ’ ಚೀಲವೇ ಆಗಿದೆ) ಎಂಬ `ಬಾಹ್ಯ ಜೇಬು’ ಆರ್ಥಿಕ ಸ್ವಾವಲಂಬಿಯಾದ ಉದ್ಯೋಗಸ್ಥ ಮಹಿಳೆಯ ಹೆಗಲೇರಿದ್ದು! ಇಂಥಾ ಬಾಹ್ಯ ಜೇಬನ್ನು ಹೊರಲು ಬೇಸರಿಸಿ ಕೆಲವರು ಹಣದ ಪುಟ್ಟ ಪರ್ಸ್ನ್ನು ರವಿಕೆಯೊಳಗೆ ಇಟ್ಟುಕೊಂಡು ಪಜೀತಿಪಟ್ಟುಕೊಳ್ಳುತ್ತಿರುತ್ತಾರೆ. ಇಂಥಹಾ ಪ್ರಯೋಗವೊಂದನ್ನು ನಾನೂ ಮಾಡಲುಹೋಗಿ ಇದ್ದ ಹಣವನ್ನೆಲ್ಲಾ ಕಳೆದುಕೊಂಡು ಕಡೆಗೆ ನಾನೂ `ಜೇಬೊಡತಿ`ಯಾಗಲೇಬೇಕೆಂಬ ಹಠದಲ್ಲಿ ನನ್ನ ಒಳಲಂಗ, ರವಿಕೆಗಳಿಗೆಲ್ಲಾ ಜೇಬನ್ನು ಹೊಲಿದುಕೊಳ್ಳುವ ಸ್ವಕರ್ಮ ಸಾಹಸದಲ್ಲಿಯೂ ತೊಡಗಿದೆ. (ಪ್ರವಾಸ ಹೋಗುವ ಕೆಲವರು ಈ ಕ್ರಮವನ್ನು ಕೈಗೊಂಡ ಉದಾಹರಣೆಗಳ ಆಧಾರದಮೇಲೆ!) ಆದರೆ ಅದರಲ್ಲಿ ಉಂಟಾದ ಅನೇಕ ಗೊಂದಲಗಳಿಂದ ಅನುಕೂಲಕ್ಕಿಂತಾ ಮುಜುಗರವೇ ಹೆಚ್ಚಾಯಿತು. ನಂತರ ಮನೆಯಲ್ಲಿ(!) ಜೇಬಿರುವ ನೈಟಿ ಹಾಕುವುದರಲ್ಲೇ ತೃಪ್ತಿ ಪಡಬೇಕಾಯ್ತು! (ನೆಗಡಿಯ ನೆಂಟಿರುವುದರಿಂದ!) ಇತ್ತೀಚೆಗೆ ಅನೇಕ ಹೆಣ್ಣುಮಕ್ಕಳು ಪ್ಯಾಂಟನ್ನು ಧರಿಸಿಕೊಂಡು ಜೇಬಿನ ಸದುಪಯೋಗ(!) ಪಡೆಯುವುದನ್ನು ನೋಡಿ ನನಗಂತೂ ಬಹಳ ಸಂತಸವಾಗಿದೆ.
ಜೇಬಿಗೆ `ಕಿಸೆ’, `ಬೊಕ್ಕಣ,’ ಎಂದೂ ನಿಘಂಟಿನಲ್ಲಿ ಕೊಟ್ಟಿದ್ದಾರೆ. `ಕಿಸೆ’ ಏನೋ ನಮಗೆ ಪರಿಚಿತವಾದ ಪದವೇ. ಬಸ್ಸ್ಟಾಂಡ್ಗಳಲ್ಲಿ `ಕಿಸೆಗಳ್ಳರಿದ್ದಾರೆ ಎಚ್ಚರಿಕೆ’, ಎನ್ನುವ ಫಲಕಗಳನ್ನು ಓದ್ತಾನೇ ಇರ್ತೀವಲ್ಲ! ಆದರೆ `ಬೊಕ್ಕಣ’ ಎನ್ನುವುದನ್ನು ನಾನು ಇದುವರೆಗೂ ಕೇಳೇ ಇರಲಿಲ್ಲ. ಇದು ನನ್ನ ಭಾಷಾ ಅಲ್ಪ ಜ್ಞಾನದ ಸಂಕೇತವೂ ಇರಬಹುದು! ಹಿಂದಿಯಲ್ಲಿ `ಖೀಸಾ’ ಎಂದಿದೆ. `ಕಿಸೆ’ ಯಿಂದ `ಖೀಸಾ’ ಆಯ್ತೋ, `ಖೀಸಾ’ದಿಂದ `ಕಿಸೆ’ ಆಯ್ತೋ ಎನ್ನುವ ಬೀಜವೃಕ್ಷ ನ್ಯಾಯವನ್ನು ಭಾಷಾ ತಜ್ಞರೇ ಪರಿಹರಿಸಬೇಕು! ಆಂಗ್ಲಭಾಷೆಯ POCKET ಪಡೆದುಕೊಂಡಂಥಾ ವಿಸ್ತಾರವನ್ನು ಬಹುಷ: ಬೇರೆ ಯಾವ ಜೇಬುಗಳೂ ಪಡೆಯಲಿಲ್ಲವೇನೋ! ಈ ಆಧುನಿಕ, ವಿವಿಧ ವಿನ್ಯಾಸದ ಜೇಬಿನ ಮೂಲವೇ ಆಂಗ್ಲವಾದ್ದರಿಂದಲೇ ಏನೋ ಇದಕ್ಕೆ ಇಷ್ಟೊಂದು ಪ್ರಸಿದ್ದಿ! ‘Pickpocket’ ಎನ್ನುವುದಂತೂ ಬಳಕೆಯಲ್ಲೂ, ನಡೆಯುವುದರಲ್ಲೂ ಸರ್ವೇ ಸಾಮಾನ್ಯವಾಗಿಹೋಗಿದೆ. ನಮ್ಮ ಬಹುತೇಕ ಚಲನ ಚಿತ್ರಗಳಲ್ಲಿನ ನಾಯಕ, ನಾಯಿಕೆಯರದ್ದು ಇದೇ ಉದ್ಯೋಗ! ಈ ಹಿಂದೆ ನಮ್ಮ ಹಾಸ್ಯ ಸಾಹಿತಿಗಳು ತಮ್ಮ ಪತ್ನಿಯರನ್ನೇ ಹಾಸ್ಯದ PÉÃAದ್ರಬಿಂದುವಾಗಿಸಿಕೊಂಡು ತಮ್ಮ ಜೇಬಿನಲ್ಲಿರುವ ಪುಡಿಗಾಸನ್ನು ತಾವಿಲ್ಲದ ವೇಳೆಯಲ್ಲಿ ಹಾರಿಸಿಬಿಡುವ pick‘pocket’ (ಜೇಬುಗಳ್ಳಿ!) ಅಂತೆ ಚಿತ್ರಿಸಿಬಿಡುತ್ತಿದ್ದರು. (ಎಷ್ಟೋ ವೇಳೆ ಅವರ ಗುಪ್ತ ಕಾರ್ಯಗಳ ಬಹಿರಂಗವೂ ಆಗಿಬಿಡುವ ಸಂಭವವೂ ಇತ್ತು!) ಅವರೇನಾದರೂ ‘pocket money’ ಕೊಡುವ ಪರಿಪಾಠ ಇಟ್ಟುಕೊಂಡಿದ್ದರೆ ಹೀಗಾಗದೇ ಅವರ ಮರ್ಯಾದೆಯಾದರೂ ಉಳಿಯುತ್ತಿತ್ತೋ ಏನೋ! POCKETನ್ನು ನಾಮಪದದ ರೂಪದಲ್ಲಿ ತೆಗೆದುಕೊಂಡರೆ ಉಡುಪು, ಸೀಟು, ಚೀಲ ಇವುಗಳೊಳಗೆ ಹೊಲಿದಿರುವ ಒಂದು ಸಣ್ಣ ಚೀಲ ಎಂದಾಗುತ್ತದೆ. ಇದಕ್ಕೆ ಸಣ್ಣ ಪ್ರದೇಶ, ಸಣ್ಣ ಮೊತ್ತ ಎಂಬೆಲ್ಲಾ ಅರ್ಥಗಳೂ ಇವೆ. ವಿಶೇಷಣವಾದಾಗ pocketbook, pocketful, pocketknife, pocketmoney, pocket dictionary..... (ಈ ಪಾಕೆಟ್ ಪುಸ್ತಕಗಳು ಬಂದದ್ದು ಪರೀಕ್ಷೆಗಳಲ್ಲಿ ಕಾಪಿಹೊಡೆಯುವವರಿಗೆ ವರದಾನವಾಯ್ತು! ಈಗ ಬಿಡಿ ಎಲ್ಲಾ ಟಿಕ್, ಟಿಕ್!). ಕ್ರಿಯಾಪದವಾದಾಗ ‘pocket the money’ ಎಂದರೆ ಹಣ ಸಂಪಾದಿಸು, ‘pocketed the knife’ ಎಂದರೆ ಚಾಕುವನ್ನು ಜೇಬಿಗೆ ಸೇರಿಸುವುದು ಎಂದಾಗುತ್ತದೆ. `ಜೇಬಿಗೆ ಸೇರಿಸು’ ಎಂದರೇ ತನ್ನದಾಗಿ ಮಾಡಿಕೊಳ್ಳೊದು, ಅಡಗಿಸಿಡು, ಮುಚ್ಚಿಡು ಎಂದೆಲ್ಲಾ ಅರ್ಥೈಸಬಹುದು. ನೋಡಿ ಆಂಗ್ಲರಿಂದಲೇ ಬಂದ ಈ `ಪಾಕೆಟ್’ ತನ್ನದೇ ಮೂಲ ಭಾಷೆಯಲ್ಲಿ ಎಷ್ಟೆಲ್ಲಾ ಅxð ವೈವಿಧ್ಯವನ್ನು ಹೊಂದಿದೆ ಅಂತ!
ತನ್ನದಾಗಿ ಮಾಡಿಕೊಳ್ಳೋದು ಎನ್ನುವಾಗ ನನಗೆ ನೆನಪಾಗೋದು....... `ಕವಿಗಳನ್ನೆಲ್ಲಾ ಸಾಲಾಗಿ ನಿಲ್ಲಿಸಿದಾಗ ಒಬ್ಬರ ಕೈ ಮತ್ತೊಬ್ಬರ ಜೇಬಿನಲ್ಲಿರುತ್ತದೆ’ ಎನ್ನುವ ಉಕ್ತಿ. ಇಲ್ಲಿ `ಜೇಬು’ ಅಂತ ಇರೋದರಿಂದ ಸಾಲಾಗಿ ನಿಲ್ಲಿಸಿರೋದು ಪುರುಷ ಪುಂಗವರನ್ನೇ ಅನ್ನೋದು ಸರ್ವವಿಧಿತ. ಜೇಬಿನಲ್ಲಿ ಕೈ ಇರಬೇಕಾದರೆ ಅದು ಜುಬ್ಬಾದ ಜೇಬೇ ಆಗಿರಬೇಕು. ಅವರೆಲ್ಲಾ ಜುಬ್ಬಾ, ಪೈಜಾಮಾನೇ (ಅಥವಾ ಪಂಚೆಯೂ ಆಗಿರಬಹುದು) ಹಾಕಿಕೊಂಡು, ಕುರುಚಲು ಗಡ್ಡ ಬಿಟ್ಟು.....ಸಾಲಾಗಿ ನಿಂತು ಒಬ್ಬರ ಜುಬ್ಬಾ ಜೇಬಿನೊಳಗೆ ಮತ್ತೊಬ್ಬರು ಕೈ ಹಾಕಿಕೊಂಡಿರುವ ದೃಶ್ಯ ವರ್ಣನಾತೀತ. ಇದನ್ನ `ಕೃತಿಚೌರ್ಯ’ ಅಂತ ಸಾರಾಸಗಟಾಗಿ ಹೇಳಲಾಗದಿದ್ದರೂ ಹಲವು ಹೂಗಳಿಂದ ಮಕರಂದ ಹೀರಿ `ಮಧು’ವನ್ನು ತಯಾರಿಸುವ `ಮಧುಕರ ವೃತ್ತಿ’ ಎಂದು ಹೇಳಲೇನೂ ಅಡ್ಡಿ ಇರಲಾರದು. ಈ ಅಪವಾದದಿಂದ ಪಾರಾದ ಹೆಂಗೆಳೆಯರಂತೂ ಸಾಂಪ್ರದಾಯಿಕ ಉಡಿಗೆಗಳಿಗೆ ಸಾಷ್ಟಾಂಗ ನಮಿಸಲೇ ಬೇಕು. (`ಸಾಷ್ಟಾಂಗ ನಮಸ್ಕಾರ’ ಪುರುಷ ವರ್ಗಕ್ಕೇ ಮೀಸಲಾಗಿದ್ದರೂ ಸ್ವಲ್ಪ ಕಾಲ ಎರವಲು ಪಡೆದು!)
ಸಾಮಾನ್ಯವಾಗಿ ಜೇಬನ್ನು ನೋಡಿ ಒಬ್ಬರ ಕಾರ್ಯಕ್ಷೇತ್ರ, ಹವ್ಯಾಸ, ಸ್ವಭಾವಗಳನ್ನು ಗುರುತಿಸಬಹುದು. ಶಿಕ್ಷಕರು ಜೇಬಿನಲ್ಲಿ ನೀಲಿ ಮತ್ತು ಕೆಂಪು ಇಂಕಿನ ಪೆನ್ಗಳನ್ನು ಇಟ್ಟುಕೊಂಡಿರುತ್ತಾರೆ. ಪತ್ರಾಂಕಿತ ಅಧಿಕಾರಿಗಳಾದರೆ ಹಸಿರು ಇಂಕಿನ ಪೆನ್ ರಾರಾಜಿಸ್ತಾ ಇರುತ್ತದೆ. ಸಿಗರೇಟ್, ಪಾನ್, ನೆಶ್ಯ,...ಇವುಗಳನ್ನು ಹವ್ಯಾಸ ಎನ್ನುವುದೋ, ದುರಭ್ಯಾಸೆನ್ನುವುದೋ...,ಅಂತೂ ಜೇಬಿನಲ್ಲಿ ಮನೆ ಮಾಡಿರುತ್ತವೆ. ಸದಾ ನೆಗಡಿಯಿಂದ ಬಳಲುವವರ (ಜನ್ಮ ನೆಗಡಿ) ಜೇಬುಗಳಂತೂ ವೈರಸ್ಗಳ ಆಗರವೇ ಆಗಿರುತ್ತದೆ. ಕನ್ನಡಕಧಾರಿಗಳಾದರೆ ಕನ್ನಡಕ,... ಈಗಂತೂ ಮೊಬೈಲ್ ಅಗ್ರಸ್ಥಾನ ಪಡೆದುಬಿಟ್ಟಿದೆ. ಯಾವ ಸಂಶೋಧನೆ ಏನೇ ರಿಪೋರ್ಟ್ ಕೊಟ್ಟರೂ ಮೊಬೈಲ್ಗಳಂತೂ ತಮ್ಮ ಸ್ಥಾನವನ್ನು ಜೇಬಿನಲ್ಲೇ ಭದ್ರಪಡಿಸಿಕೊಂಡುಬಿಟ್ಟಿವೆ. ಕೆಲವು ಪ್ರದರ್ಶನಾಕಾಂಕ್ಷಿಗಳು ತಮ್ಮ ಪಾರದರ್ಶಕ ಜೇಬುಗಳಲ್ಲಿ ಐನೂರು, ಸಾವಿರದ ನೋಟುಗಳನ್ನು ಇಟ್ಟುಕೊಂಡು ತಮ್ಮ ಆರ್ಥಿಕ ಸಾಮರ್ಥ್ಯವನ್ನು ವೈಭವೀಕರಿಸುತ್ತಿರುತ್ತಾರೆ. ರಾಜಕಾರಿಣಿಗಳು ತಮ್ಮ ಪಕ್ಷವನ್ನು ಬಲವರ್ಧನೆ ಮಾಡಿಕೊಳ್ಳುವುದು ಅವರ ಜೇಬಿನ `ವಜನ್’ಗೆ ಅನುಗುಣವಾಗಿರುತ್ತದೆ. ಚುನಾವಣಾಕಾಲದಲ್ಲಿ ಜೇಬಿಗೇ ಮಹತ್ವ! `ಅವನು ನನ್ನ ಜೇಬಿನಲ್ಲೇ ಇದಾನೆ’ ಎನ್ನುವ ಮಾತನ್ನೂ ಆಡುವುದನ್ನು ಕೇಳಬಹುದು. ರಾಜಕಾರಿಣಿಗಳಿಗೆ ಅನೇಕ ಅಗೋಚರ ಜೇಬುಗಳು ಇರುತ್ತವೆ ಅಂತ ತಿಳಿದವರು ಹೇಳ್ತಾರೆ. ನಮ್ಮ ಮು. ಮಂ.ಗಳ ಎಂಟು ಜೇಬುಗಳ ಬಗ್ಗೆ ಹೇಳುತ್ತಾ ಅವರು ಧರಿಸುವ ಉಡುಪಿನಲ್ಲಿರುವ ಜೇಬುಗಳು ಅವರ ಅಂತರಂಗದ ಆಸೆಯ ಪ್ರತೀಕವೇ ಆಗಿವೆ ಅಂತಾರೆ.
ಅಪ್ಪನ ಜೇಬಿನ ದುಡ್ಡುಗಳೆಲ್ಲಾ
ಚಟಪಟಗುಟ್ಟುತ ಸಿಡಿಯುವುವು... ಎನ್ನುವುದನ್ನು ಓದುವಾಗ ಜೇಬಿನ ದುಡ್ಡು ಹೇಗೆ ಚಟಪಟ ಗುಟ್ತಾ ಸಿಡಿಯುತ್ತೆ? ಅಂತಾ ಬಹಳ ಯೋಚನೆ ಮಾಡ್ತಾ ಇದ್ದೆ. ನಂತರ ದೀಪಾವಳಿಯಲ್ಲಿ ತಿಳೀತು ಅವು ಚಟಪಟ ಗುಟ್ಟುವ ಪರಿ! (ಎಂಥಾ ಪೆದ್ದು ಅಲ್ವಾ?) ಈಗ ಚಟಪಟ ಏನು `ಢಂ ಢಮಾರ್’ ಆಗಿದೆ. ಈ ನಡುವೆ ಭಯೋತ್ಪಾದಕರೂ ಎಲ್ಲಿ ತಮ್ಮ ಕಾಣಿಕೆ ಸೇರಿಸ್ತಾರೋ ಎನ್ನುವುದೇ ಆತಂಕದ ವಿಷಯ! ದೀಪಾವಳಿಯೇ ಆಗಬೇಕೆಂದಿಲ್ಲ, ಯಾವ ಕಾರಣಕ್ಕಾದರೂ ಚಟಪಟಗುಟ್ಟಬಹುದು. ನನ್ನ ಬಾಹ್ಯ ಜೇಬಾದ ವ್ಯಾನಿಟಿ (ಅಲ್ಲಲ್ಲ `ನೆಸೆಸ್ಸಿಟಿ’ ಅಂತಾ ಈಗಾಗಲೇ ಹೇಳಿಯಾಗಿದೆ. ಆದರೂ ಆಡುವಾಗಿನ ಭಾಷೆಯಲ್ಲಿ...) ಬ್ಯಾಗಿನ ಒಳ ಜೇಬುಗಳಂತೂ ತುಂಬಿಸಿದಷ್ಟೂ ಖಾಲಿಯಾಗತ್ತಲೇ ಇರುತ್ತವೆ!
ಪಟಾಸು ಪೆಟ್ಲು ಒಳ ಜೇಬಲ್ಲಿ
ಕಾಸಿನ ಸಾಲು ಕಳ್ಳ ಜೇಬಲ್ಲಿ...
ಎಂ. ಎಸ್. ಸುಂಕಾಪುರ ಇವರು ತಮ್ಮ `ಮಾವ ಕೊಡಿಸಿದ ಕೋಟಿ’ನಲ್ಲಿ ಇರುವ ಕಿಸೆಗಳನ್ನು ಮಹಾಮನೆಗೆ ಇರುವ ನೂರುಬಾಗಿಲು, ಸಾವಿರ ಕಿಟಕಿಗಳಿಗೆ ಹೋಲಿಸಿದ್ದಾರೆ. ಎಡಬಲದಲ್ಲಿರುವ, ಬಹೋಪಯೋಗಿಯಾದ, ದೊಡ್ಡ ಕಿಸೆಗಳು, (ಅವುಗಳೊಳಗೆ ಒಂದೇ ಸಮನೆ ಸಾಮಾನು ತುಂಬುವುದನ್ನು ನೋಡಿ, `ಏನ್ರಿ ನಿಮ್ಮ ಕಿಸೆ ಹೋಲ್ಡಾಲ್ನಂತಿವೆ,’ ಎಂದೂ ಕೇಳಿದ್ದುಂಟಂತೆ!), ಎದೆಯಮೇಲಿರುವ ಎಳೆಯ ಕಂದನಂಥಾ ಹೊರಕಿಸೆ, ಚಂದ್ರನಂತೆ ವೃದ್ಧಿ, ಕ್ಷಯಗಳ ನಿರಂತರ ಚಕ್ರಗತಿಯಲ್ಲಿರುವ ಖಜಾನೆಯಾದ ಒಳ ಎಡಕಿಸೆ, ಮಹತ್ವದ ಸಾಮಾನುಗಳನ್ನು ತನ್ನೊಳಗೆ ಹುದುಗಿಸಿಕೊಂಡ ಮಹಾಮೌನಿ ಒಳ ಬಲಕಿಸೆ, ಚತುರ ಸಿಂಪಿಗನ ಚಾಣಾಕ್ಷಬುದ್ಧಿಯ ಪ್ರತೀಕವಾದ ಒಳ ಕಳ್ಳಕಿಸೆ...ಇದಕ್ಕಿಂತಾ ವಿವರ ಬೇಕೇ ಕಿಸೆಯ ವೈವಿಧ್ಯತೆಗಳನ್ನು ತಿಳಿಯಲು.
ಮಹಾನ್ ಪುಸ್ತಕ ಪ್ರೇಮಿಯಾದ ನಮ್ಮ ತಂದೆಯವರು ಧರಿಸುತ್ತಿದ್ದ ವಿಶೇಷವಾದ ಅಂಗಿಯಲ್ಲಿ ತೋಳಿನ ಕೆಳಗೆ ಇರುತ್ತಿದ್ದ ಒಳ ಜೇಬಿನಲ್ಲಿ ಯಾವಾಗಲೂ ಎರಡು-ಮೂರು ಸಣ್ಣ ಪುಸ್ತಕಗಳಿರುತ್ತಿದ್ದವು! ಜೊತೆಗೆ ಕನ್ನಡಕದ ಪೆಟ್ಟಿಗೆ, ಅಮೃತಾಂಜನ, ಕರವಸ್ತ್ರ, ನೆಶ್ಯದಡಬ್ಬಿ, ಮೆಣಸು ಸಕ್ಕರೆ ಡಬ್ಬಿ, ಒಂದೇ, ಎರಡೇ ... ತುಂಬಿ ತುಳುಕುತ್ತಿದ್ದವು. (ಅವರಿಗೆ ವಂಶಪಾರಂಪರ್ಯವಾಗಿ ಬಂದ ಚಿನ್ನದ ನಿಬ್ಬಿನ ಪೆನ್ನು ಆಗಾಗ ಉಕ್ಕೇರಿದ ಸಂತಸದಲ್ಲಿ ಇಂಕನ್ನು ಹೊರಚೆಲ್ಲುತ್ತಾ ಎದೆಯಭಾಗದ ಒಳಜೇಬಿನಲ್ಲಿ ಅಡಗಿರುತ್ತಿತ್ತು.) ಜೇಬಾದರೂ ಕೈಚೀಲದಷ್ಟೇ ತೂಕವನ್ನು ಹೊತ್ತು,ಹೊತ್ತು ಇನ್ನು ತಾಳಲಾರೆನೆಂದು ಅಂಗಿಯಿಂದ ವಿಚ್ಛೇದನ ಬಯಸುವ ಸ್ಥತಿಗೆ ತಲುಪಿದ ಜೇಬನ್ನು ಅಮ್ಮ ಸಂಧಾನಗೊಳಿಸಿ ಸೇರಿಸುವ ಭರದಲ್ಲಿ ಸ್ವಗತ ಸಹಸ್ರ ನಾಮಾರ್ಚನೆಯನ್ನೇ ಮಾಡುತ್ತಿದ್ದರು. ಯಾವಾಗಲೂ ಬೇಸಿಗೆ ರಜೆ ಬರುವಾಗ ಏನಾದರೊಂದು ಕುಶಲಕಲೆಯ ಕಾರ್ಯಕ್ರಮದಲ್ಲಿ ತೊಡಗುತಿದ್ದ ನಾನು, ಒಂದು ರಜೆಯಲ್ಲಿ ನಾಲ್ಕು ಗುಲಾಬಿ ಹೂಗಳಿದ್ದ ಒಂದು ಕಸೂತಿ ಚೀಲವನ್ನು ಹಾಕಿಕೊಟ್ಟಿದ್ದನ್ನು ಅವರು ಸಂಪೂರ್ಣ ಸದುಪಯೋಗಪಡಿಸಿಕೊಂಡು ಬಹಳ ಜೋಪಾನವಾಗಿ ಇಟ್ಟುಕೊಂಡಿದ್ದರು. ಆ ಪ್ರಭಾವದಿಂದಲೋ, ವಂಶವಾಹಿನಿಯ ಮಹಿಮೆಯೋ, ಸದಾ ಮುಂದಾಲೋಚನೆಯಲ್ಲೇ ಇರುವ ನಾನು ನನ್ನ ಬಾಹ್ಯ ಕಿಸೆಯ (ಅಗತ್ಯಚೀಲ!) ಜೊತೆಗೇ ಅಧಿಕಾರ (ಅಧಿ-ಖಾರ) ಭಾರದಿಂದ ಒಂದು ಫೈಲುಗಳ ಜೋಳಿಗೆಯನ್ನೂ ಹೊರಲಾರಂಭಿಸಿ ಅಪಹಾಸ್ಯಕ್ಕೆ ಪಾತ್ರಳಾಗಿದ್ದೇನೆ!
ನನ್ನವರು `ಹಣವೇ ಇಲ್ಲ’ ಎನ್ನುವ ಘೋಷವಾಕ್ಯದೊಂದಿಗೇ ಇರುವ ಜೇಬುಗಳನ್ನೆಲ್ಲಾ ಹೊರತೆಗೆದು ತೋರಿಸಿದರೂ (ತಿಂಗಳು ಪೂರ್ತಿ ಧಾರಾಳವಾಗಿ ನನ್ನ ಹಣವನ್ನೇ ಖರ್ಚುಮಾಡಿಸುತ್ತಾ...) ಮತ್ತೆಲ್ಲೋ ಹಣ ಅಡಗಿಸಿಟ್ಟಿದ್ದಾರೆ ಎಂಬ ಅನುಮಾನ ಬಂದು ಪರಿಶೀಲಿಸಿದಾಗ ಬೆಲ್ಟ್ನ ಒಳಭಾಗದಲ್ಲೊಂದು ಜೇಬು ನೋಡಿ ಪರಮಾಶ್ಚರ್ಯ ಹೊಂದಿದ್ದೆ! ಹಾಗೆಲ್ಲಾ ಜೇಬು `ಚೆಕ್’ ಮಾಡುವ ಜಾಯಮಾನ ನನ್ನದಲ್ಲ ಬಿಡಿ. ದ್ರವಗಳ ಗುಣಕ್ಕೆ ಸಾಮ್ಯತೆ ಹೊಂದಿರುವ `ಹಣ’ದ ಚಲನೆಯೂ ಎತ್ತರದಿಂದ ತಗ್ಗಿನ ಕಡೆಗೇ ಅಲ್ಲವೇ? ಈಗ ನನ್ನ ಮಗನ ಪ್ಯಾಂಟಿನ ಜೇಬುಗಳನ್ನು ಲೆಕ್ಕ ಹಾಕಲೇ ಆಗುವುದಿಲ್ಲ! ಜೇಬು ತನ್ನ ಸ್ಥಾನದ ಘನತೆಯನ್ನೇ ಕಳೆದುಕೊಂಡು ಮಂಡಿ, ಮೊಣಕಾಲುಗಳ ಮೇಲೆಲ್ಲಾ ಬಂದಿದೆ. ಇಷ್ಟೇ ಸಾಲದು ಅಂತ ಒಂದೊಂದಕ್ಕೂ ಎರಡು-ಮೂರು ಉದ್ದುದ್ದಾ ಬಾಲಗಳು!
ಇತ್ತೀಚೆಗಂತೂ ಕಳ್ಳಕಿಸೆಯ ಮಹತ್ವ ಬಹಳ ಹೆಚ್ಚಾಗಿದೆ. ಸಣ್ಣತಮ್ಮಣ್ಣನ ಕಳ್ಳಜೇಬಲ್ಲಿ ಕಾಸಿನ ಸಾಲು ಇದ್ದರೆ ಈಗಿನವರ ಕಳ್ಳಜೇಬಲ್ಲಂತೂ ನೋಟುಗಳ ಕಂತೆಯೇ ಅಡಗಿರುತ್ತದ್ದೆ! ಕಳ್ಳ ನೋಟಾಗದಿದ್ದರೆ ಭಾರತಾಂಬೆಯ ಪುಣ್ಯ! ಮೇಜಿನ ಕೆಳಗೆ ಬಂದು ಕ.ಜೇ.ನ್ನು ತುಂಬುತ್ತಿದ್ದುದೂ ಲೋಕಾಯುಕ್ತರ ಭಯದಿಂದ ತತ್ತರಿಸಲಾರಂಭಿಸಿದೆ. ಆದರೂ ತನ್ನದೇ ಮಾರ್ಗವನ್ನು ಕಂಡುಕೊಂಡು ಅವ್ಯಾಹತವಾಗಿ ಸಾಗುತ್ತಲೇ ಇದೆ. ಬಹುಷ: ಈ ಲಂಚಕೋರತನವನ್ನು ತಡೆಯುವ ಏಕೈಕ ಮಾರ್ಗವೆಂದರೆ `ಎಲ್ಲರೂ ಜೇಬೇ ಇಲ್ಲದ ಉಡುಪನ್ನೇ ತೊಡಬೇಕು’ ಎನ್ನುವ ಕಾನೂನನ್ನು ಜಾರಿಗೆ ತರುವುದು ಎನ್ನಬಹುದು. ಇದು ಮತ್ತೆ ಮೂಲ ಸಂಸ್ಕತಿಯತ್ತ ಪಯಣವಾಗಲೂ ಬಹುದು. ಆದರೂ ಚಿತ್ತವ ಸಂಯಮದಲ್ಲಿರಿಸದೇ ಮತ್ತೇನು ಮಾಡಿದರೂ ಫಲ ಕಾಣದೇನೋ.
`ಹಣ’ವೇ ನಿರ್ಧಾರಕ ಅಂಶವಾಗಿರುವ ಈ ಕಾಲದಲ್ಲಿ ಜೇಬಿಗಿರುವ ಮಹತ್ವ ಬೇರಾವುದಕ್ಕೂ ಇಲ್ಲ. `ವಿತ್ತೋ ರಕ್ಷತಿ ರಕ್ಷಿತ:’ (`ಧರ್ಮ’ವಲ್ಲ!) ಎನ್ನುವುದೇ ಎಲ್ಲರ ಧ್ಯೇಯ ವಾಕ್ಯವಾಗಿದೆ.
ಸಾಲಾಗಿ ನಿಲ್ಲಿಸಿರುವ ಕವಿಗಳ ಸಾಲಿನಲ್ಲಿ ಈಗ ನನ್ನನ್ನೂ ಕಂಡು ಗಾಭರಿಯಿಂದೊಡಗೂಡಿದ ಸಂತಸವಾಗ್ತಾ ಇದೆ. ನಾನೂ ಒಬ್ಬ ಕವಿಯಾದೆನೇನೋ ಎಂಬ ಸಂತಸ ಪಡುವುದರಲ್ಲಿದ್ದೆ. ಆದರೆ ನನ್ನ `ಕೈ’ ಎಲ್ಲಿ? `ಹಲವು ಹೂಗಳ ಬಂಡುಂಬ ಮಧುಕರನೆ ಎಲ್ಲಿ ಅವಿತೆ?’ ಈಗಾಗಲೇ ಎಷ್ಟೋ ಮಹಾನ್ ಜೇಬುಗಳನರಸಿ..!..!..! (ಜೇಬಿಗೂ ಜೇಬೇ ಮೂಲ!)
ಈ ನನ್ನ `ಜೇಬ’ನ್ನು ತುಂಬಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲಾ `ಹಿರಿಯ’ ಜೇಬುಗಳಿಗೂ ಅನೇಕಾನೇಕ ವಂದನೆಗಳನ್ನು ಸಲ್ಲಿಸುತ್ತಾ, `ಕೆಲವಂ ಬಲ್ಲವರಿಂದ ಕಲಿತು...’ ಎಂದು ವಿನಯಪೂರ್ವಕವಾಗಿ ಹೇಳುತ್ತಾ... `ಇತಿ ಸಂಪೂರ್ಣಂ’ ಎನ್ನಲಾಗದ `ಜೇಬಾಯಣಂ’.
                                                                        *****************************

2 comments:

  1. ಪ್ರಭಾ ಮೇಡಂ ಬಹಳ ಚನ್ನಾಗಿದೆ. ನನಗೆ ನನ್ನ ಬಾಲ್ಯದ ಸ್ನೇಹಿತನ ನೆನಪಾಗುತ್ತೆ. ಅವನ ಪ್ಯಾಂಟ್ ಜೇಬು ..ಬೆಲ್ಲ ಹಾಕಿ ಹಾಕಿ ರೊಟ್ಟುಗಟ್ಟಿತ್ತು...

    ReplyDelete