ಡಿಸೆಂಬರ್2025ರ 'ಮಯೂರ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲಲಿತ ಪ್ರಬಂಧ ' ಜಲ್ದೀದೇ ಜರೂರತ್ತು, ನಿಧಾನಕ್ಕಿಲ್ಲ ಕಿಮ್ಮತ್ತು!' ನಿಮ್ಮ ಪ್ರೀತಿಯ ಓದಿಗೆ❤️🙏
'ಮಯೂರ" ಪತ್ರಿಕಾ ಬಳಗಕ್ಕೆ ಧನ್ಯವಾದಗಳು🙏
🏃ಜಲ್ದೀದೇ ಜರೂರತ್ತು, ನಿಧಾನಕ್ಕಿಲ್ಲ ಕಿಮ್ಮತ್ತು!🐢
ಚಿಕ್ಕವಳಿದ್ದಾಗಿನಿಂದಲೂ ʼನಿಧಾನವೇ ಪ್ರಧಾನʼವೆಂಬ ಮಹಾನ್ ಉಕ್ತಿಯನ್ನೇ ಬದುಕಿನ ಧ್ಯೇಯ ವಾಕ್ಯವನ್ನಾಗಿಸಿಕೊಂಡು ಬದುಕನ್ನಾರಂಭಿಸಿದ್ದೆನೇನೋ ಎನ್ನುವಂತೆ ʼನಿಧಾನʼವೆನ್ನುವುದು ನನ್ನ ಹುಟ್ಟುಗುಣದಂತೆಯೇ ನನ್ನನ್ನಾವರಿಸಿಬಿಟ್ಟಿತ್ತು. ಸ್ವಭಾವತಃ ನಿಧಾನ ಪ್ರಕೃತಿಯವಳಾಗಿದ್ದ ನಾನು ಯಾರಾದರೂ ಸ್ವಲ್ಪ ಆತುರಪಡಿಸಿದರೂ ಗಡಬಡಾಯಿಸಿ ಏನಾದರೂ ಅದ್ವಾನ ಮಾಡಿಬಿಡುತ್ತಿದ್ದೇನಾದ್ದರಿಂದ ನನಗೆ ಏನಾದರೂ ಕೆಲಸ ಹೇಳುವಾಗಲೂ ಸೂಚನೆಗಳ ಒಂದು ದೊಡ್ಡ ಲಿಸ್ಟ್ ನೇ ಕೊಡುತ್ತಿದ್ದರು. ಆದರೂ ಆ ಲಿಸ್ಟಾತೀತವಾದ ಯಾವುದಾದರೊಂದು ತಪ್ಪನ್ನು ಮಾಡಿ ಹಿರಿಯರ ಅವಕೃಪೆಗೆ ಪಾತ್ರಳಾಗುತ್ತಿದ್ದೆ! ಈ ನನ್ನ ವೈಪರೀತ್ಯ ಸದ್ಗುಣದಿಂದ ಆಗಾಗ ಕೋಪಿಸಿಕೊಳ್ಳುತ್ತಿದ್ದ ನಮ್ಮ ಸೋದರತ್ತೆ ʼಇದೊಳ್ಳೆ ಎಮ್ಮೆ ಮೇಲೆ ಮಳೆ ಹುಯ್ದಹಾಗಿದೆ. ಮುಂದೆ ಹೇಗೋ ಏನೋʼ ಎಂದು ಬಹಳವಾಗಿ ಕಳವಳಗೊಳ್ಳುತ್ತಿದ್ದರು. ಸಧ್ಯದ ಪರಿಸ್ಥಿತಿಯಲ್ಲಿ ಅಕ್ಷರಶಃ ಸತ್ಯವಾಗಿರುವ ಅವರ ಆಗಿನ ಆತಂಕ ಪೂರ್ಣ ಭವಿಷ್ಯ ದರ್ಶನದ ಮುನ್ಸೂಚನೆಯನ್ನು ಅರಿಯಲಾಗದಿದ್ದ ನಾನು ಅದರ ದೃಶ್ಯರೂಪವನ್ನು ಕಲ್ಪಿಸಿಕೊಂಡು ಬಿದ್ದೂಬಿದ್ದೂ ನಗುತ್ತಾ ಅವರನ್ನು ಚಕಿತಗೊಳಿಸುತ್ತಿದ್ದೆ! ನಮ್ಮ ಮನೆಯಲ್ಲಿದ್ದ ಗೋಸಮೂಹ ಮೇಯ್ದುಕೊಂಡು ಸಂಜೆ ಮನೆಗೆ ಹಿಂತಿರುಗುವಾಗ ಸೋನೆಮಳೆ ಪ್ರಾರಂಭವಾಯ್ತೆಂದರೆ ದನಗಳೆಲ್ಲಾ ಬಾಲವನ್ನು ಮೇಲೆತ್ತಿಕೊಂಡು ನಾಗಾಲೋಟದಲ್ಲಿ(!) ಮನೆಯತ್ತ ದೌಡಾಯಿಸುತ್ತಿದ್ದರೆ ಅದೇ ಗುಂಪಿನಲ್ಲಿ ಅಲ್ಪಸಂಖಾತರಾಗಿದ್ದ ಒಂದೆರಡು ಎಮ್ಮೆಗಳು ಮಾತ್ರ ಮೊದಲೇ ನಿಧಾನವಾಗಿದ್ದ ತಮ್ಮ ನಡೆಯನ್ನು ಮತ್ತೂ ನಿಧಾನಗೊಳಿಸಿ ʼವಯ್….ʼ ಎನ್ನುತ್ತಾ ಪರಮಾನಂದದಲ್ಲಿ ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತಾ ಭಿಜಯಂಗೈಯುತ್ತಿದ್ದ ನೋಟ ವರ್ಣನಾತೀತ!
ನನ್ನ ನಿಧಾನ ಗತಿಗೆ ನಮ್ಮ ತಂದೆ ಹೇಳುತ್ತಿದ್ದ ಒಂದು ಕಥೆಯೂ ಇಂಬುಗೊಡುವಂತಿತ್ತು.
ʼಇಂದ್ರನು ವೃತಾಸುರನನ್ನು ಮೋಸದಿಂದ ಕೊಂದ ನಂತರ ಯಾರಿಗೂ ತಿಳಿಯದಂತೆ ಅಜ್ಞಾತವಾಗಿ ತಪಸ್ಸನ್ನು ಮಾಡಲು ಮಾನಸ ಸರೋವರದ ಕಮಲವೊಂದರಲ್ಲಿ ಸೂಕ್ಷ್ಮರೂಪದಲ್ಲಿ ಅಡಗಿಕೊಳ್ಳುತ್ತಾನೆ. ಇಂದ್ರನಿಲ್ಲದೆ ಸ್ವರ್ಗದಲ್ಲಿ ಅರಾಜಕತೆಯುಂಟಾದಾಗ ದೇವತೆಗಳೆಲ್ಲರೂ ಸೇರಿ ಇಂದ್ರ ಪದವಿಗೆ ಅರ್ಹನಾದ ವ್ಯಕ್ತಿ ನಹುಷ ಮಹಾರಾಜನೆಂದು ನಿರ್ಧರಿಸುತ್ತಾರೆ. ಇಂದ್ರ ಪದವಿಗೆ ಏರಿದ ನಂತರ ತನ್ನಲ್ಲುಂಟಾದ ಅಪಾರ ಶಕ್ತಿ ಮತ್ತು ಅಪರಿಮಿತ ಅಧಿಕಾರದಿಂದ ನಹುಷನಿಗೆ ಅಹಂಕಾರವುಂಟಾಗಿ ಇಂದ್ರ ಪತ್ನಿ ಶಚೀದೇವಿಯನ್ನು ಕಾಣಲು ಬಯಸುತ್ತಾನೆ. ಅವಳು ಹೇಗಾದರೂ ಈ ಸಂಕಷ್ಟದಿಂದ ಪಾರಾಗಲು ಸಪ್ತರ್ಷಿಗಳಿಂದ ಹೊರಲ್ಪಟ್ಟ ಪಲ್ಲಕ್ಕಿಯಲ್ಲಿ ತನ್ನನ್ನು ಕಾಣಲು ಬರಬೇಕೆಂದು ಶರತ್ತನ್ನು ಹಾಕುತ್ತಾಳೆ. ಹಾಗೆಯೇ ಹೋಗುವಾಗ ಸಪ್ತಋಷಿಗಳಲ್ಲಿ ಒಬ್ಬರಾದ ಕುಬ್ಜರಾಗಿದ್ದ ಅಗಸ್ತ್ಯ ಋಷಿಯ ಮಂದಗತಿಯಿಂದ ಬೇಸರಪಟ್ಟ ನಹುಷನು ʼಸರ್ಪಿಸರ್ಫಿ(ಬೇಗಬೇಗ)ʼ ಎಂದು ಅವರನ್ನು ಕಾಲಿನಿಂದ ತಿವಿದು ಆತುರಪಡಿಸುತ್ತಾನೆ. ಇದರಿಂದ ಕುಪಿತರಾದ ಅಗಸ್ತ್ಯರು ʼಸರ್ಪೋದ್ಭವʼ ಎಂದು ಶಪಿಸುತ್ತಾರೆ. ನಂತರ ನಹುಷನು ಹೆಬ್ಬಾವಾಗಿ ಭೂಲೋಕವನ್ನು ಸೇರುತ್ತಾನೆʼ ಎಂದು ಅಣ್ಣ ಕಥೆ ಮುಗಿಸುವಷ್ಟರಲ್ಲಿಯೇ ʼಅದಕ್ಕೇ ಹೇಳೊದು ಆತುರಗಾರನಿಗೆ ಬುದ್ಧಿ ಮಟ್ಟ ಅಂತʼ ಎಂದು ಅಜ್ಜಿ ಕಥೆಯ ಸಾರಾಂಶ ನೀಡಿ ಪರಿಸಮಾಪ್ತಿಗೊಳಿಸುತ್ತಿದ್ದರು.
ನಮ್ಮತ್ತೆಯ ಭವಿಷ್ಯವಾಣಿಯು ನಾನು ಶಾಲೆಗೆ ಸೇರಿದಾಗಿನಿಂದಲೇ ನಾಂದಿಗೆ ಚಾಲ್ತಿಯಿಟ್ಟಿತು. ಆ ಕಾಲದಲ್ಲಿ ಪ್ರಾಥಮಿಕ ಶಾಲೆಯೂ ನಮ್ಮೂರಿನಲ್ಲಿ ಇಲ್ಲದಿದ್ದರಿಂದ ಎರಡೂವರೆ ಮೈಲಿ ದೂರವಿದ್ದ ಪಕ್ಕದೂರಿನ ಸ್ಕೂಲಿಗೆ ನಾನು, ಅಕ್ಕ ಮತ್ತು ತಮ್ಮ ಮೂವರನ್ನೂ ಒಟ್ಟಾಗಿಯೇ ಸೇರಿಸಿ ಕಳಿಸಲಾರಂಭಿಸಿದರು. ದಿನವೂ ನಮ್ಮಕ್ಕ ನಮ್ಮಿಬ್ಬರನ್ನೂ ʼಪ್ರೇಯರ್ ಗೆ ಲೇಟಾಗುತ್ತೆʼ ಅಂತ ಕೈಹಿಡಿದು ದರದರನೆ ಎಳೆದುಕೊಂಡು ಹೋದರೂ ಆಗಲೇ ಪ್ರೇಯರ್ ಮುಗಿದೇ ಬಿಟ್ಟಿರುತ್ತಿದ್ದರಿಂದ ಲೇಟ್ ಲಥೀಫ್‌ಗಳಾದ ನಮ್ಮನ್ನೆಲ್ಲಾ ಒಂದು ಸಾಲಲ್ಲಿ ನಿಲ್ಲಿಸಿ ಬೆತ್ತದ ಸೇವೆ ಮಾಡಿಯೇ ಒಳಗೆ ಕಳಿಸುತ್ತಿದ್ದರು. ಮಾಸ್ಟರಿಗೆ ಚಿಕ್ಕವೆರಡನ್ನೂ ಕರೆದುಕೊಂಡು ಬರಬೇಕಾದ ಅಕ್ಕನ ಜವಾಬ್ದಾರಿಯ ಅರಿವಿದ್ದರಿಂದ ಅವಳಿಗೆ ಹಾಗೂ ಮುದ್ದಾಗಿದ್ದ ತಮ್ಮನಿಗೆ ಮಾಫಿ ಸಿಗುತ್ತಿತ್ತು. ಆದರೆ ನನ್ನ ಮುಖ ನೋಡಿದಾಕ್ಷಣವೇ ಅವರಿಗೇನೆನಿಸುತ್ತಿತ್ತೋ ಏನೋ ʼಬೇಗಬೇಗ ಬರಕ್ಕೇನು ದಾಡಿʼ ಎಂದು ಒಂದು ಬಾರಿಸಿಯೇ ಮುಂದೆ ಕಳಿಸುತ್ತಿದ್ದರು. ನನ್ನ ಕನಸಿನ ಶಾಲೆಯಲ್ಲಿ ದಿನವೂ ನನಗೆ ಸಿಗುತ್ತಿದ್ದ ಇಂಥಾ ಸ್ವಾಗತದಿಂದ ಬೇಸತ್ತ ನಾನು, ʼಸ್ಕೂಲಿಗೆ ಹೋಗೋದೇ ಇಲ್ಲʼ ಎಂದು ಅಳುತ್ತಾ ಕೂತಾಗ ನಮ್ಮತ್ತೆಯೇ ರೌದ್ರಾವತಾರದಲ್ಲಿ ಸ್ಕೂಲಿಗೆ ಬಂದು ʼಯಾವೋನವನು ಮೇಷ್ಟ ನನ್ನ ಕಂದನ್ನ ಹೊಡೆದೋನು?ʼ ಎಂದು ಅಬ್ಬರಿಸಿದಾಗ, ನಮ್ಮತ್ತೆಯ ವೀರಾವೇಶದ ಪರಿಚಯವಿದ್ದ ಮೇಷ್ಟ್ರು ಇನ್ನೆಲ್ಲಿ ತನ್ನ ಕೆಲಸಕ್ಕೇ ಸಂಚಕಾರ ಬರುತ್ತೋ ಎಂದು ಹೆದರಿ ʼಕ್ಷಮಿಸಿ ತಾಯಿ, ಇನ್ಯಾವತ್ತೂ ನಿಮ್ಮ ಮಗೂನ ಹೊಡೆಯಲ್ಲʼ ಎಂದು ಅನಾಮತ್ತಾಗಿ ನಮ್ಮತ್ತೆಯ ಕಾಲಿಗೇ ಬಿದ್ದಿದ್ದರಿಂದ ನಾನು ಆ ಕುತ್ತಿನಿಂದ ಪಾರಾಗುವಂತಾಯ್ತು ಹಾಗೂ ಅಕ್ಷರಸ್ಥರ ಸಾಲಿಗೂ ಸೇರುವಂತಾಯ್ತು!
ನಮ್ಮ ಸ್ಕೂಲ್ ನ ಸುತ್ತಾ ಕಡಲೇಕಾಯಿ ಬೆಳೆಯೋ ಹೊಲಗಳೇ ಹೆಚ್ಚಾಗಿದ್ದುದರಿಂದ ಆಗಾಗ ಹೆಣ್ಣು ಮಕ್ಕಳಿಗೆ ಕಡಲೇಕಾಯಿ ಸುಲಿಯೋ ಸ್ಪರ್ಧೆ ಮಾಡ್ತಿದ್ದರು. ನನ್ನ ಜೊತೆಯಲ್ಲಿದ್ದವರು ಎರಡೆರಡು ಕೈಲೂ ಸರಸರನೆ ಸುಲಿದು ಬೇಗ ಮುಗಿಸಿ ಬಹುಮಾನಕ್ಕಾಗಿ ಸೆಣೆಸುತ್ತಿದ್ದರು. ನಾನು ಒಂದೊಂದು ಕಾಯನ್ನೂ ನೆಲಕ್ಕೆ ಕುಟ್ಟಿ ಕುಯ್ಯೋಮರ್ರೊ ಎಂದು ಬಿಡಿಸುವುದು ನೋಡಿ ಅವರೆಲ್ಲಾ ಗೇಲಿಮಾಡಿಕೊಂಡು ನಗುತ್ತಿದ್ದರು. ಆದರೆ ಸೋತವರ ಬಳಿ ಉಳಿಯುತ್ತಿದ್ದ ಕಡಲೇಕಾಯನ್ನು ಅವರಿಗೇ ತಿನ್ನಲು ಬಿಡುತ್ತಿದ್ದರಿಂದ ನನ್ನ ಬಳಿ ಕಡಲೇಕಾಯಿಗಾಗಿ ಅವರೆಲ್ಲಾ ಕೈಯೊಡ್ಡುವುದು ತಪ್ಪುತ್ತಿರಲಿಲ್ಲ!
ಮುಂದಿನ ಓದಿಗೆ ಐದುಮೈಲಿ ದೂರವಿದ್ದ ಪಟ್ಟಣದ ಹೈಸ್ಕೂಲಿಗೆ ಸೇರಿಸಿದರು. ನಮ್ಮೂರಿನಿಂದ ಅಲ್ಲಿಗಿದ್ದುದು ಒಂದೇ ಬಸ್ಸು. ಅದು ರಾತ್ರಿ ಒಂಬತ್ತಕ್ಕೋ-ಹತ್ತಕ್ಕೋ ಬಂದು ನಮ್ಮೂರಿನಲ್ಲಿ ಹಾಲ್ಟಾದರೆ ಬೆಳಿಗ್ಗೆ ಆರಕ್ಕೋ-ಏಳಕ್ಕೋ ಹೊರಟುಬಿಡುತ್ತಿತ್ತು. ಅದೇ ಬಸ್‌ನಲ್ಲಿ ಅದಾಗಲೇ ನನಗಿಂತ ಮೂರು ಕ್ಲಾಸ್ ಮುಂದಿದ್ದ ನಮ್ಮಕ್ಕ ಮೂರುವರ್ಷ ಓಡಾಡಿಕೊಂಡು ಓದಿ ಭೇಷ್ ಎನಿಸಿಕೊಂಡಿದ್ದಳು. ನಾನು ಹಾಸಿಗೆ ಬಿಟ್ಟು ಏಳುವ ಮೊದಲೇ ಬಸ್ ನಮ್ಮೂರ ಗಡಿದಾಟಿಬಿಟ್ಟಿರುತ್ತಿದ್ದುದರಿಂದ ʼಅವಳ ಹಾಗೆ ಇದು ಚುರುಕಿಲ್ಲ,ʼ ಎನ್ನುವ ಹಣೆಪಟ್ಟಿ ಕಟ್ಟಿಕೊಳ್ಳುವಂತಾಯ್ತು. ಹತ್ತನೇ ಕ್ಲಾಸಿಗೆ ಅನಿವಾರ್ಯ ಕಾರಣದಿಂದ ನಗರದ ಶಾಲೆಗೆ ಸ್ಥಳಾಂತರವಾಯ್ತು. ಅಲ್ಲಿಯ ಗಣಿತದ ಸರ್ ಲೆಕ್ಕ ಕೊಟ್ಟು ಮಾಡಲು ಹೇಳಿದಾಗ ನಮ್ಮ ಸೆಕ್ಷನ್‌ನಲ್ಲೇ ಜಾಣೆ ಎನಿಸಿಕೊಂಡಿದ್ದ ಹುಡುಗಿ ಬೇಗಬೇಗ ಲೆಕ್ಕಮಾಡಿ ತೋರಿಸಿ ಪದೇಪದೆ ತಪ್ಪು ಎನಿಸಿಕೊಳ್ಳುತ್ತಿದ್ದಳು. ಅಲ್ಲಿಗೆ ಹೊಸಬಳಾಗಿದ್ದ ನಾನು ನನ್ನದೇ ಮಂದ್ರಸ್ಥಾಯಿಯಲ್ಲಿ ಸಮಸ್ಯೆಯನ್ನು ಬಿಡಿಸಿದಾಗ ಮಾಸ್ಟರು ʼಅವಳ ಹಾಗೆ ಆಲೋಚನೆ ಮಾಡಿ ಲೆಕ್ಕ ಮಾಡು, ಆತುರ ಪಡಬೇಡʼ ಎಂದು ಮೊದಲ ಭಾರಿಗೆ ನನ್ನ ಮಂದಮತಿಯನ್ನು ಪ್ರಶಂಸಿಸುವುದರೊಟ್ಟಿಗೇ ತಮ್ಮ ಮೆಚ್ಚಿನ ವಿದ್ಯಾರ್ಥಿನಿಗೆ ಬುದ್ದಿವಾದ ಹೇಳಿ ನನ್ನನ್ನು ಅವಳ ಕೆಂಗಣ್ಣಿಗೆ ಗುರಿಯಾಗಿಸಿದ್ದರು. ಅವರಿಗೆ ಬಹಳ ಪ್ರಿಯವಾಗಿದ್ದ ʼಬೆಳೆಯಲು ನಿಧಾನವಾಗಿರುವ ಮರಗಳು ಅತ್ಯುತ್ತಮ ಫಲವನ್ನು ನೀಡುತ್ತವೆ,ʼ ಎನ್ನುವ ಫ್ರೆಂಚ್ ಲೇಖಕ ಮೋಲಿಯರ್‌ನ ಉಕ್ತಿಯನ್ನು ಹೇಳುವಾಗಲೆಲ್ಲಾ ಅದಾಗಲೇ ನನ್ನ ಪರವಾಗಿ ಪಾರ್ಟಿ ಕಟ್ಟಿದ್ದ ಹುಡುಗೀರು ಯೂನಿಫಾರಂನ ಕಾಲರ್ ಅಪ್ ಮಾಡಿಕೊಳ್ಳುವುದು ಗೋಪ್ಯವಾಗಿ ನಡೆದು ಅವಳ ಆಕ್ರೋಶಕ್ಕೆ ಆಜ್ಯವಾಗುತ್ತಿತ್ತು! ಆದರೆ ಅಂತರ್ಶಾಲಾ ಚಾರ್ಚಾಸ್ಪರ್ಧೆಗಳಿಗೆ ನಮ್ಮಿಬ್ಬರನ್ನೇ ಆಯ್ಕೆ ಮಾಡಿ ಕಳಿಸುವಾಗ ʼಪರʼವಾದಿಯಾಗುತ್ತಿದ್ದ ನನ್ನ ನಿಧಾನಗತಿಗೂ ʼವಿರೋಧಿʼಯಾಗುತ್ತಿದ್ದ ಅವಳ ತೀವ್ರಗತಿಗೂ ಬಹುಮಾನಗಳು ಲಭಿಸಿ ಒಟ್ಟಾರೆ ಪರಿಣಾಮವಾದ ರೋಲಿಂಗ್ ಶೀಲ್ಡನ್ನು ಮೆರವಣಿಗೆ ಮಾಡಿಕೊಂಡು ನಮ್ಮ ಶಾಲೆಗೆ ತರುತ್ತಿದ್ದ ವರ್ಣಿಸಲಸದಳವಾದ ವೈಭವವು ನಮ್ಮನ್ನು ಸ್ನೇಹದಿಂದ ಬೆಸೆಯಿತು.
ಮೊದಲೆಲ್ಲಾ ನನ್ನನ್ನು ʼಆಮೆʼ ಎಂದು ಆಡಿಕೊಳ್ಳುತ್ತಿದ್ದ ನನ್ನ ತಮ್ಮ ಡಿಗ್ರಿಯಲ್ಲಿ ಪ್ರಾಣಿಶಾಸ್ತ್ರವನ್ನು ಓದಲಾರಂಭಿಸಿದ ನಂತರ 'ಸ್ಲಾತ್' ಎಂದು ಮರುನಾಮಕರಣ ಮಾಡಿ ಗೊಂದಲಗೊಳಿಸಿದ. ಮೊದಲಾದರೆ 'ಆಮೆ-ಮೊಲದ ರೇಸಲ್ಲಿ ಗೆಲ್ಲೋದು ಆಮೆನೇಯ. Slow and steady win the race' ಎಂದು ನನ್ನನ್ನು ನಾನು ಸಮರ್ಥಿಸಿಕೊಳ್ಳುತ್ತಿದ್ದೆ. ಆದರೆ ಇದ್ಯಾವುದಪ್ಪ ಸ್ಲಾತ್ ಎಂದು ತಲೆಕೆಡಿಸಿಕೊಳ್ಳುವಾಗ ಅದೊಂದು ಲೇಝಿ ಪ್ರಾಣಿಯೆಂದು ತಿಳಿದು ʼಛೆ, ಛೆ ಆಮೆಯಾಗಿದ್ರೇ ಒಳ್ಳೇದಿತ್ತುʼ ಎನಿಸುವಂತಾಯ್ತು. ಮರದ ರೆಂಬೆಯ ಮೇಲೆ ತೂಕಡಿಸುತ್ತಾ ಬಿದ್ದಿರುವ ಸ್ಲಾತ್‌ನ ಚಿತ್ರವನ್ನು ಟಿ-ಶರ್ಟ್‌ಗಳ ಮೇಲೆ ನೋಡುವಾಗಲೆಲ್ಲಾ ಏನಾದ್ರು ಆಮೇನೇ ಸರಿ ಎಂದು ಈಗಲೂ ಅನ್ನಿಸುವುದಿದೆ. ಬಹುಶಃ ಅದಕ್ಕೆ ಪುಷ್ಟಿಕೊಡುವ ಈ ನನ್ನ ʼಆಮೆʼ ಹನಿಗವನವೂ ಕಾರಣವಾಗಿರಬಹುದು:
ತನುವನಾವರಿಸಿದ ಚಿಪ್ಪ ಒಡವೆ ಸಿಂಗಾರ
ತಲೆ ಒಳಗೆಳೆದು ಮುದುರಿಕೊಳ್ಳುವ ಧೀರ
ನಿನ್ನಂತೆ ನನಗೂ ಇದ್ದಿದ್ದರೆ ದೇಹಕೆ ಚಿಪ್ಪ ಗೋಡೆ
ಬಂಡೆಯಾಗಿ ಬಿದ್ದಿರುತ್ತಿದ್ದೆ ಯಾವುದಾದರೂ ಸಮುದ್ರದ ದಂಡೆ!
ಹಾಗೂ ಹೀಗೂ ನಿಧಾನಗತಿಯಲ್ಲೇ ಜೀವನ ಸಾಗಿಸುತ್ತಿದ್ದ ನನಗೆ ಬದುಕು ಮುನ್ನಡೆದಂತೆ ಅದರ ತೀವ್ರಗತಿಯೊಂದಿಗೆ ಹೆಜ್ಜೆ ಕೂಡಿಸುವುದು ಅಷ್ಟೇನೂ ಸುಲಭ ಸಾಧ್ಯವಾಗಲಿಲ್ಲ. ನಮ್ಮ ಕುಟುಂಬದಲ್ಲಿಯೇ ನಿಧಾನಕ್ಕೆ ಪ್ರಸಿದ್ಧಿಯಾಗಿದ್ದ ನನ್ನ ಈ ಹುಟ್ಟುಗುಣವನ್ನು ವಿವಾಹ ಸಂದರ್ಭದಲ್ಲಿ 'ಹುಡುಗಿ ನಿಧಾನಸ್ಥೆ' ಎಂದು ಧನಾತ್ಮಕವಾಗೇ ಪ್ರಾರಂಭಿಸಿ ಪತಿಯ ಬಂಧು ವರ್ಗದಲ್ಲೂ ಪಸರಿಸುವಂತೆ ಮಾಡಿಬಿಟ್ಟರು. ಇದರಿಂದ ಪ್ರೇರಿತರಾದ ನನ್ನವರು ಕುಟುಂಬದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲೂ ನನ್ನತ್ತ ತಿರುಗಿಯೂ ನೋಡದಂತಾದದ್ದು ಮಾತ್ರವಲ್ಲದೇ ಮಾತಿಗೆ ಮೊದಲೇ ಆತುರಪಡಿಸಲು ಮೊದಲಿಟ್ಟು ಸಂಸಾರ ರಥದ ಮೇಲೆ ತಮ್ಮ ಮೂಲ ಗುಣವಾದ ಜಲ್ದೀ ಝಂಡಾವನ್ನು ಸ್ಥಾಪಿಸಿಯೇಬಿಟ್ಟರು. ಸುತ್ತಿನದೂ ನಮ್ಮ ಹಳ್ಳಿಯ ಸ್ನಿಗ್ಧ-ಶಾಂತ (ಒಮ್ಮೊಮ್ಮೆ ರಣ-ರೌಧ್ರ) ವಾತಾವರಣದಂತಲ್ಲದೇ ನನ್ನ ಪರಿಸ್ಥಿತಿ:
ಗರಗರ ತಿರುಗು ಚಕ್ರದ
ಅಂಚಿಗೆ ಒಗೆಯಲ್ಪಟ್ಟ ಕಾಯ
ವಿರಮಿಸಲು ಬೆಂಬಿಡದ ಭಯ
ಸ್ವಲ್ಪ ತಂಗುವೆನೆಂದರೂ
ತಪ್ಪದ ಅಪಾಯ!......
ಎನ್ನುವಂತಾಗಿ ಪತಿ-ಪ್ರಭುತ್ವದ ರಾಕೆಟ್ ತೇರಿನ ಚಕ್ರಕ್ಕೆ ಸಿಲುಕಿ ಏರುಪೇರಾಗತೊಡಗಿತು. ಉದ್ಯೋಗಸ್ಥಳಾಗಿದ್ದ ನಾನು ಜಿಂದಗಿಯ ಓಟದೊಂದಿಗೆ ಒಂದಾಗಿ ಹೆಜ್ಜೆಗೂಡಿಸುವುದು ಅನಿವಾರ್ಯವಾಯಿತು. ಸ್ವಲ್ಪ ಸೀರಿಯಸ್ ಆಯ್ತೇನೋ! ಕ್ಷಮಿಸಿ, ಜಲ್ದಿಯ ಪ್ರಭಾವ! ಎದ್ದಾಕ್ಷಣವೇ ದಡಬಡ ಕೆಲಸ ಮಾಡಿಕೊಂಡು, ಮಕ್ಕಳನ್ನು ಸ್ಕೂಲಿಗೆ ಸಿದ್ಧಮಾಡಿ, ನಿಂತುಕೊಂಡೇ ನಾಲ್ಕು ತುತ್ತು ನಾಶ್ತಾ ಸೇವಿಸಿ ನೆಮ್ಮದಿಯನ್ನು ನಷ್ಟಗೊಳಿಸಿಕೊಂಡು ಒಂದೇ ಉಸುರಿಗೆ ಓಡಿ ಬಸ್ ಹಿಡಿದು…. ಟೆನ್ಷನ್ ಟೆನ್ಷನ್ ಎಲ್ಲೆಲ್ಲೂ ಟೆನ್ಷನ್…
ಓಡುತ್ತಿರುವವಳು ನಾನೊಬ್ಬಳೇ ಅಲ್ಲ. ಒಂದನ್ನೊಂದು ಹಿಮ್ಮೆಟ್ಟಿ ಸಾಗುವ ವಾಹನಗಳು, ತಮ್ಮ ಗಮ್ಯವನ್ನು ತಲುಪಲು ತರಾತುರಿಯಲ್ಲಿ ಸಾಗುತ್ತಿರುವ ಜನ ಪ್ರವಾಹ, ಎಲ್ಲೆಲ್ಲೂ ವೇಗೋತ್ಕರ್ಷಕ ಮಿಂಚಿನ ಓಟ… ʼಓಡಿ ಹೋಗಿ ಗೋಡೆ ಮುಟ್ಟಿದ ಹಾಗೆ' ಎನ್ನುತ್ತಿದ್ದ ಅಜ್ಜಿಯ ಉಕ್ತಿಯಂತೆ!
ಭೂಮಿ ಹಾಗೂ ಗ್ರಹಗಳು ಸೂರ್ಯನನ್ನು ಸುತ್ತುವ ಹಾಗೂ ನಮ್ಮ ಸೌರವ್ಯೂಹದಂತೆಯೇ ಇತರ ಖಗೋಳ ವ್ಯವಸ್ಥೆಗಳಲ್ಲೆಲ್ಲಾ ಸುವ್ಯವಸ್ಥೆಯಲ್ಲಿರಲು ವೇಗ ಅನಿವಾರ್ಯ. ಪರಮಾಣುವಿನೊಳಗಿನ ಎಲೆಕ್ಟ್ರಾನ್ಗಳದ್ದೂ ಎಂದೂ ನಿಲ್ಲದ ಓಟವೇ. ಸುತ್ತಮುತ್ತಲಿನ ಮೈಕ್ರೋ-ಮ್ಯಾಕ್ರೋ ನಿರ್ಜಿವ ಜಗತ್ತೂ ಜಲ್ದಿಯ ಜರೂರತ್ತಿನಲ್ಲೇ ಇದೆ. ಆದರೆ ನಮ್ಮಂಥಾ ಕ್ಷುದ್ರಜೀವಿಗಳು ಅವಿಶ್ರಾಂತ ಆತುರದಲ್ಲಿದ್ದರೆ ಜೀವ ಯಂತ್ರದ ಪಾಡೇನು ಎಂಬ ಆಲೋಚನೆಯೂ ಬರುವುದಿದೆ.
ಮೊದಲೆಲ್ಲಾ ಮನೆಗೆ ಅತಿಥಿಗಳು ಬಂದರೆ ಹಾಗೂ ಸಮಾರಂಭಗಳಲ್ಲಿ ʼಸಾವಧಾನವಾಗಿ ಊಟವಾಗಲಿʼ ಎಂದು ಪ್ರತಿಯೊಬ್ಬರಿಗೂ ಹೇಳುವುದೇ ಒಂದು ಸತ್ಸಂಪ್ರದಾಯವಾಗಿತ್ತು. ಈಗ ಮದುವೆ, ಗೃಹಪ್ರವೇಶಗಳಂಥಾ ಕಾರ್ಯಕ್ರಮಗಳಿಗೆ ಹೋದಾಗ ಗಿಜಿಗುಡುವ ಆ ಜನಜಂಗುಳಿಯಲ್ಲಿ ತಮಗೊಂದು ಊಟದೆಲೆಯನ್ನು ರಿಸರ್ವ್ ಮಾಡಿಕೊಳ್ಳುವುದೇ ಹರಸಾಹಸವಾಗಿ ಇನ್ನೂ ಊಟಮಾಡುತ್ತಿರುವವರ ಹಿಂದೆ ನಿಂತು ಎಷ್ಟು ಹೊತ್ತಿಗೆ ಮುಗಿಸ್ತಾರಪ್ಪಾ (ಜಲ್ದಿಜಲ್ದಿ!) ಎಂದು ಕಾಯುವವರ ನಡುವೆ ನಿಧಾನದ ಮಾತಿರಲಿ ಎದ್ದರೆ ಸಾಕು ಎನ್ನುವ ವಾತಾವರಣವುಂಟಾಗಿರುತ್ತದೆ. ಇನ್ನು ಹೊಟೆಲ್‌ಗಳಲ್ಲಿ ಅದೂ ವೀಕೆಂಡ್‌ಗಳಲ್ಲಂತೂ ಕೇಳುವಂತೆಯೇ ಇಲ್ಲ. ನಿಂತು, ನಡೆಯುತ್ತಾ, ಓಡುತ್ತಾ ತಿನ್ನುವ ವೈವಿಧ್ಯ ಮಾದರಿಗಳನ್ನೂ ಕಾಣಬಹುದು.
ಇಂಥಾ ವೈಪರೀತ್ಯಗಳ ನಡುವೆ ಇತ್ತೀಚೆಗೆ ವೈರಲ್ಲಾಗಿದ್ದ ಒಂದು ʼಲೆಮನ್ ರೇಸ್ʼ ವಿಡಿಯೋ ನನ್ನನ್ನು ಬಹಳವಾಗಿ ಆಕರ್ಷಿಸಿತು. ಬಾಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಆಡುವ ಆಟದಲ್ಲಿ ಪಾಲ್ಗೊಂಡಿದ್ದ ಪುಟಾಣಿಗಳು ಬೇಗ ಗುರಿ ಮುಟ್ಟುವ ಉದ್ದೇಶದಿಂದ ಓಡೋಡಿ ಹೋಗುವಾಗ ಎಲ್ಲರ ಬಾಯಲ್ಲಿರುವ ಚಮಚದಲ್ಲಿನ ನಿಂಬೆಹಣ್ಣು ಬಿದ್ದು ಹೋಗುತ್ತದೆ. ಇವರ ನಡುವಿನ ಪುಟ್ಟ ಬಾಲಕನೊಬ್ಬ ಎಲ್ಲರೂ ಓಡಿ ಹೋದರೂ ತಲೆಕೆಡಿಸಿಕೊಳ್ಳದೆ ನಿಧಾನವಾಗಿ ಸಾಗುವುದರಿಂದ ಅವನ ನಿಂಬೆಹಣ್ಣು ಬೀಳದೆ ಗುರಿಯನ್ನು ತಲುಪಿ ಜಯ ಸಾಧಿಸಿದ ವಿಡಿಯೋವನ್ನು 10 ಮಿಲಿಯನ್ ಮಂದಿ ವೀಕ್ಷಿಸಿ ʼನಿಧಾನವೇ ಪ್ರಧಾನʼ ಎನ್ನುವ ಹಿರಿಯರ ಮಾತು ಎಷ್ಟು ನಿಜ ಎಂದು ಹೇಳಿದ್ದಾರೆ. ʼಜೀವನದಲ್ಲಿ ನಿಧಾನವಾಗಿ ಹೋದರೆ ಜಯ ಸಾಧಿಸುತ್ತೀರ, ಜಯವನ್ನು ಬೇಗನೆ ಸಾಧಿಸಬೇಕು ಎನ್ನುವ ಉದ್ದೇಶದಿಂದ ಓಡಬೇಡಿʼ ಎನ್ನುವ ಮಾತೂ ಹರಿದಾಡಿ ʼಆಹಾ ನಾನೆಲ್ಲಿದ್ದೇನೆʼ ಎಂದು ಗಾಬರಿಪಡುವಂತಾಯ್ತು. ಓಡದಿದ್ದರೆ ಬಸ್ ಸಿಗುವುದಿಲ್ಲವಲ್ಲ ಎನಿಸಿದರೂ ಈಗಿನ ವಿಶ್ರಾಂತ ಬದುಕಿನಲ್ಲಂತೂ ಆ ಚಿಂತೆಯಿಲ್ಲವಲ್ಲ ಎಂಬ ನಿರಾಳದಲ್ಲಿ ಜಲ್ದಿಯ ಜರೂರತ್ತಿಗೆ ʼಗುಡ್ ಬೈʼ ಹೇಳಿ ಸಾವಧಾನವಾಗಿ ಬದುಕ ಮುನ್ನಡೆಸುತ್ತಾ ನನ್ನ ಸಹಜ ಪ್ರವೃತ್ತಿಯಾದ ಧ್ಯಾನಸ್ಥ ನಿಧಾನಕ್ಕೆ ಶರಣಾಗುತ್ತಿದ್ದೇನೆ.
✍️ಪ್ರಭಾಮಣಿ ನಾಗರಾಜ,
ಹಾಸನ
No comments:
Post a Comment