Monday, January 12, 2026

'ತರಂಗ' ಪತ್ರಿಕೆಯಲ್ಲಿ ನನ್ನ ಲಲಿತ ಪ್ರಬಂಧ ʼತಾಂಬೂಲ ಹರ್ಷ... ʼಪರಾಗ್ʼ ಸ್ಪರ್ಶʼ

 

        

 

     





https://www.facebook.com/share/p/1Dgx8hJav6/
         👆ಜನವರಿ15,2026ರ 'ತರಂಗ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲಲಿತ ಪ್ರಬಂಧ ʼತಾಂಬೂಲ ಹರ್ಷ... ʼಪರಾಗ್ʼ ಸ್ಪರ್ಶʼ  ನಿಮ್ಮ ಪ್ರೀತಿಯ ಓದಿಗೆ❤️🙏 

          'ತರಂಗ' ಪತ್ರಿಕಾ ಬಳಗಕ್ಕೆ ಧನ್ಯವಾದಗಳು🙏 
         
      🌿ತಾಂಬೂಲ ಹರ್ಷ…🌿

          ವಾರಕ್ಕೊಂದು ದಿನ ಪಟ್ಟಣದ ಸಂತೆಗೆ ಹೋಗುತ್ತಿದ್ದ ನಮ್ಮ ಮಾವ ಎಲ್ಲಾ ಇತರ ದಿನಸಿ ತರಕಾರಿಗಳೊಡನೆ ಒಂದು ಕಟ್ಟು ವಿಳ್ಳೆದೆಲೆಯನ್ನು ತಪ್ಪದೆ ತರುತ್ತಿದ್ದರು. ʼಕಪ್ಪು ಎಲೆ ರುಚಿ ಸ್ವಲ್ಪ ಖಾರ. ಬಿಳಿ ಎಲೇನೇ ನೋಡಿಕೊಂಡು ತಗೊಂಡು ಬಾʼ ಎಂದು ಪ್ರತಿಬಾರಿಯೂ ಸಂಪ್ರದಾಯದಂತೆ ನಮ್ಮತ್ತೆ ಹೇಳುವುದನ್ನು ಮರೆಯುತ್ತಿರಲಿಲ್ಲ. ಆ ಕಾಲದ ವಿಳ್ಳೆದೆಲೆಯ ಲೆಕ್ಕ ಒಂದು ಕಟ್ಟು ಎಂದರೆ ಐದು ಕವಳಿಗೆಗೆ ನೂರು ಎಲೆಗಳು. ಅಷ್ಟೊಂದು ಎಲೆ ಏನು ಮಾಡಕ್ಕೆ? ಎಂದು ಕೇಳುವಂತೆಯೂ ಇರಲಿಲ್ಲ. ಮನೆಯಲ್ಲಿದ್ದ ನಾಲ್ಕೈದು ಜನ ಸ್ತ್ರೀಯರಿಗೆ ಮಧ್ಯಾಹ್ನದ ಊಟವಾದ ನಂತರ ಹಾಕಿಕೊಳ್ಳಲು, ಮನೆಗೆ ಬಂದ ಮಹಿಳೆಯರಿಗೆ ಕೊಡುವ ಅರಿಸಿನ-ಕುಂಕುಮದೊಡನೆ ತೆಂಗಿನಕಾಯಿ/ಬಾಳೆಹಣ್ಣಿನ ಜೊತೆ ಇಡಲು, ʼಅವ್ವ, ಹಾಳು ತೆವಲು, ಬರಿಬಾಯಿ ಲವಲವಗುಟ್ತದೆ. ಬಾಯಾಸರಕ್ಕೆ ಎರಡೆಲೆ ಕೊಡಿʼ ಎಂದು ಪದೇಪದೇ ಬಂದು ಗೋಗರೆಯುತ್ತಿದ್ದ ಹೆಂಗಸರಿಗೆ ಕೊಡಲು… ಮುಂತಾದ ಲೆಕ್ಕದಲ್ಲಿ ವಾರಾಂತ್ಯಕ್ಕೆ ಶಾಸ್ತ್ರಕ್ಕೆ ಒಂದು ಎಲೆಯೂ ಉಳಿಯುತ್ತಿರಲಿಲ್ಲ. ಹಾಗೆ ನೋಡಿದರೆ ನಮ್ಮ ಮನೆಯಲ್ಲಿ ಗಂಡಸರು ವಿಳ್ಳೆದೆಲೆ ಹಾಕಿಕೊಂಡದ್ದನ್ನು ನೋಡಿದ ನೆನಪೇ ಇಲ್ಲ. ಏನಿದ್ದರೂ ಅಮ್ಮ, ಅತ್ತೆಯರು ದಿನದಲ್ಲಿ ಒಂದು ಹೊತ್ತು ಮಾತ್ರ ತಾಂಬೂಲ ಸೇವನೆ ಮಾಡುತ್ತಿದ್ದರು. ಅವರು ಎಲೆ ಹಾಕಿಕೊಳ್ಳುವಾಗ ಮಕ್ಕಳೆಲ್ಲರೂ ಸುತ್ತ ಕುಳಿತು ʼನಂಗೆ-ನಂಗೆʼ ಎನ್ನುತ್ತಾ ʼಆʼ ಎಂದು ಬಾಯಿತೆರೆಯುತ್ತಾ ಕಾಟಕೊಡುತ್ತಿದ್ದೆವು. ಆದರೆ ʼಮಕ್ಕಳು ಎಲೆ ಹಾಕ್ಕೊಂಡರೆ ನಾಲಿಗೆ ಹೊರಳಲ್ಲ. ವಿದ್ಯೆ ಹತ್ತಲ್ಲ…ʼ ಮುಂತಾದ ಕಾರಣಗಳನ್ನು ಕೊಟ್ಟು ನಮಗೆ ಅಪ್ಪಿತಪ್ಪಿಯೂ ಹಾಕಿಕೊಳ್ಳಲು ಬಿಡುತ್ತಿರಲಿಲ್ಲ. ಅವರು ಕಿತ್ತು ಎಸೆದಿರುವ ವಿಳ್ಳೆದೆಲೆ ತೊಟ್ಟನ್ನು ತಿನ್ನುವುದರಲ್ಲೇ ನಾವು ತೃಪ್ತಿಪಟ್ಟುಕೊಳ್ಳಬೇಕಾಗಿತ್ತು! ಆದರೂ ಯಾವಾಗ ನಾವೂ ದೊಡ್ಡವರಾಗಿ ತಾಂಬೂಲ ಮೆದ್ದು ರಾಗರಂಜಿತರಾಗ್ತೀವೋ ಎನ್ನುವ ಕನಸಂತೂ ಅಪ್ರಯತ್ನವಾಗಿ ನಮ್ಮನ್ನು ಬೆಂಬಿಡದೆ ಕಾಡುತ್ತಿತ್ತು. ಅಕ್ಕಪಕ್ಕದ ಹರೆಯದ ಹೆಣ್ಣುಮಕ್ಕಳು ವಿಳ್ಳೆದೆಲೆ ಮೆದ್ದು ನಾಲಿಗೆಯನ್ನು ಮುಂಚಾಚಿ ತೋರಿಸುತ್ತಾ ಒಬ್ಬರಿಗೊಬ್ಬರು ಯಾರದ್ದು ಹೆಚ್ಚು ಕೆಂಪಾಗಿದೆ ಎಂದು ನೋಡಿಕೊಳ್ಳುತ್ತಿದ್ದರು. ಹೆಚ್ಚು ಕೆಂಪಾಗಿದ್ದರೆ ಗಂಡ ತುಂಬಾ ಪ್ರೀತಿಸುತ್ತಾನೆ ಎನ್ನುವುದು ಪ್ರತೀತಿ! ಕ್ಯಾಲ್ಷಿಯಂ ಅಂಶ ಹೆಚ್ಚಾಗಿದ್ದರೆ ನಾಲಿಗೆ ಕೆಂಪಾಗುತ್ತದೆ ಎನ್ನುವ ವೈಜ್ಞಾನಿಕ ಕಾರಣವನ್ನು ಕೊಡುವುದರಲ್ಲಿ ನಾವು ಹಿಂದೆಬೀಳುತ್ತಿರಲಿಲ್ಲ.

          ನಮ್ಮ ಮನೆಗೆ ಬರುತ್ತಿದ್ದ ನಮ್ಮಜ್ಜಿಯ ಬಾಲ್ಯ ಗೆಳತಿ ಕೆಂಪಮ್ಮ ಸದಾಕಾಲ ಕವಳವನ್ನು ಬಾಯಾಡಿಸುತ್ತಲೇಯಿರುತ್ತಿದ್ದರು. ಇಬ್ಬರೂ ಅಕ್ಕಪಕ್ಕದ ಹಳ್ಳಿಗಳಿಗೇ ಮದುವೆಯಾಗಿ ಬಂದಿದ್ದು ತಮ್ಮ ಆ ಕಾಲದ ಲಂಗದ ದೋಸ್ತನ್ನು ವಾರಕ್ಕೊಮ್ಮೆಯಾದರೂ ಭೇಟಿಯಾಗುವ ಕಾತುರದಲ್ಲಿ ಅಜ್ಜಿ ಚಡಪಡಿಸುತ್ತಿದ್ದರು. ʼಅವಳಿಗೇನು ಚಿಕ್ಕ ಪ್ರಾಯವಾ, ಎರಡು ಮೈಲಿ ನಡಕೊಂಡು ಬರಬೇಕಲ್ಲ…ʼ ಎಂಬ ಸ್ವಗತ ವಾಕ್‌ ಆತಂಕದಲ್ಲಿ ಕನಿಷ್ಠ ಒಂದು ಕವಳಿಗೆಯಾದರೂ ಎಲೆಯನ್ನು ಅವಳಿಗಾಗಿ ಇಟ್ಟುಕೊಂಡು ನಿರೀಕ್ಷಿಸುತ್ತಿದ್ದರು ಅಜ್ಜಿ. ಪ್ರತಿಸಾರಿಯೂ ವಿಶೇಷ ಸಂಭ್ರಮದಲ್ಲೇ ಬರುತ್ತಿದ್ದ ಕೆಂಪಮ್ಮ ಸೊಂಟಕ್ಕೆ ಸಿಕ್ಕಿಸಿಕೊಂಡಿರುತ್ತಿದ್ದ ಎಲೆ-ಅಡಿಕೆ ಚೀಲವನ್ನು ಹೊರತೆಗೆದು ಕುಳಿತು ಬಿಟ್ಟರೆ ಒಂದು ಚಿಕ್ಕ ಪಾನ್‌ ಬೀಡಾ ಅಂಗಡಿಯನ್ನು ತೆರೆದಂತಾಗುತ್ತಿತ್ತು. ಸುಮಾರು ಒಂದು ಅಡಿ ಉದ್ದ ಇರುತ್ತಿದ್ದ ಅದನ್ನು ಅವರು ಎಲಡಿಕೆ ಚಂಚಿ ಅನ್ನುತ್ತಿದ್ದರು. ಆ ಚೀಲದಲ್ಲಿ ಎಲೆ, ಗೋಟಡಿಕೆ, ಸುಣ್ಣ, ಕಾಚು, ಕಡ್ಡಿಪುಡಿ ಹೊಗೆಸೊಪ್ಪು, ಒಂದು ಕುಟ್ಟಾಣಿ, ಸ್ವಲ್ಪ ಚಿಲ್ಲರೆ ಕಾಸು ಮುಂತಾದ ಅಗತ್ಯ ಪರಿಕರಗಳನ್ನು ಇಟ್ಟುಕೊಳ್ಳಲು ನಾಲ್ಕೈದು ಪದರಗಳಿದ್ದು ಈಗಿನ ವ್ಯಾನಿಟಿ ಬ್ಯಾಗ್‌ಗಳಂತೆ ಅತ್ಯುಪಯುಕ್ತ ಸಾಧನವಾಗಿತ್ತು.  ಬೋಡುಬಾಯಿಯ ಕೆಂಪಮ್ಮ ಕುಟ್ಟಾಣಿಯನ್ನು ತೆಗೆದು ಅದರೊಳಗೆ ತಾಂಬೂಲದ ಎಲ್ಲಾ ಇನ್ಗ್ರೇಡಿಯಂಟ್ಸ್‌ನೂ ಹಾಕಿ ಕುಟ್ಟುತ್ತಾ ಮಾತಿಗಾರಂಭಿಸಿದರೆ ಅದರ ಲಯಕ್ಕೆ ತಕ್ಕಂತೆ ಮಾತಿನ ಓಘವೂ ಮುನ್ನಡೆಯುತ್ತಾ ಸಂಭಾಷಣೆಯು ಕಳೆಗಟ್ಟುತ್ತಿತ್ತು. ನಮ್ಮ ದೊಡ್ಡಣ್ಣ ʼಹೂಂ, ಈಗ ಟೇಪ್‌ ರೆಕಾರ್ಡರ್ ಆನ್‌ ಆಯ್ತು. ಇನ್ನು ಒಂದು ಗಂಟೆಯಾದರೂ ಓಡುತ್ತೆ,ʼ ಎನ್ನುತ್ತಿದ್ದ. ತವರುಮನೆಯ ಸಂಭ್ರಮದಿಂದ ಪ್ರಾರಂಭಿಸಿ ಹೊಸತರಲ್ಲಿ ಗಂಡನ ಆರ್ಭಟ, ಮಕ್ಕಳ ಅಕರಾಸ್ತೆ, ಸೊಸೆಯ ಸುಪನಾತಿತನ, ಮೊಮ್ಮಕ್ಕಳ ತುಂಟಾಟ ಎಲ್ಲಾ ಒಂದು ಸುತ್ತುಸುತ್ತಿ ಮುಗಿಯುವುದರಲ್ಲಿ ಕುರುಕಲುತಿಂಡಿ-ಕಾಫಿಯ ಸಮಾರಾಧನೆಯಾಗುತ್ತಿತ್ತು. ಕೆಂಪಜ್ಜಿಯ ಚಂಚಿಯನ್ನು ನೋಡಿದಾಗಲೆಲ್ಲಾ ನಮಗೆ ಪಾಠದಲ್ಲಿ ಓದಿದ ಸಂಚಿ ಹೊನ್ನಮ್ಮನ ನೆನಪಾಗುತ್ತಿತ್ತು.

          ತಾಂಬೂಲ ಸೇವನೆ ಮಾಡುವುದರಿಂದ ವಾತ, ಪಿತ್ತ, ಶೀತ, ಕಪ, ಅಜೀರ್ಣ ಎಲ್ಲವನ್ನೂ ತಡೆಗಟ್ಟಬಹುದು. ಆದರೆ ಅತಿಯಾದರೆ ಆರೋಗ್ಯಕ್ಕೆ ಮಾರಕ. ʼಅತಿಃ ಸರ್ವತ್ರ ವರ್ಜಯೇತ್,ʼ ಎಂದು ನಮ್ಮ ತಂದೆ ಹೇಳುತ್ತಿದ್ದರು. ಅವರು ಮೈಸೂರಿಗೆ ಹೋದಾಗಲೆಲ್ಲಾ ದೇವರಾಜ ಮಾರ್ಕೆಟ್‌ ನಿಂದ ಮೈಸೂರೆಲೆ ತರುವುದನ್ನು ಮಾತ್ರ ಮರೆಯುತ್ತಿರಲಿಲ್ಲ. ʼಎಲೆಗಳಲ್ಲಿ ಅಂಬಾಡಿ ಎಲೆ, ಮೈಸೂರು ಎಲೆ, ಆಂದ್ರ ಬನಾರಸ್, ಮದ್ರಾಸ್, ಎಂಬ ವಿಧಗಳಿವೆ. ನಮ್ಮ ಮೈಸೂರಿನ ಚಿಗುರೆಲೆಗೆ ತುಂಬಾ ರುಚಿ,ʼ ಎನ್ನುತ್ತಿದ್ದರು. ಇವರು ಯಾವತ್ತೂ ಎಲಡಿಕೆ ಹಾಕಿದ್ದೇ ನೋಡಿಲ್ಲವಲ್ಲ ಎಂದುಕೊಂಡು ನಾವು ಅಚ್ಚರಿಪಡುತ್ತಿದ್ದೆವು.

          ಒಮ್ಮೆ ಹೀಗೇ ಮಾವನ ಸ್ನೇಹಿತರೊಬ್ಬರು ಬಂದಿದ್ದು ಊಟದ ನಂತರ ತಾಂಬೂಲದ ತಟ್ಟೆಯನ್ನಿಟ್ಟಾಗ ಅಭ್ಯಾಸವಿಲ್ಲದ ಅವರು ಎಲೆಹಾಕಿಕೊಂಡದ್ದು ಎದೆಯಲ್ಲಿ ಹಿಡಿದುಕೊಂಡು ಮೊದಲೇ ಬೆಳ್ಳಗಿದ್ದವರು ಕೆಂಪುಕೆಂಪಾಗಿ ಕಣ್ಣು ಮೇಲಕ್ಕೆ ಸಿಕ್ಕಾಕಿಕೊಂಡಾಗ ʼಎಲಡಿಕೆ ಸೊಕ್ಕಿದೆʼ ಅಂತ ಅವರಿಗೆ ಕೊಬ್ಬರಿ ತಿನ್ನಿಸಿ, ಸಕ್ಕರೆ ಬಾಯಿಗೆ ಹಾಕಿ ಪಾಡುಪಡುವಂತಾಯ್ತು. ನಂತರದ ದಿನಗಳಲ್ಲಿ ಅತಿಥಿಗಳಿಗೆ ತಾಂಬೂಲೋಪಚಾರ ಮಾಡಲು ಹಿಂದೆ-ಮುಂದೆ ನೋಡುವಂತಾಯ್ತು!

        ನನಗೂ ವಿವಾಹ ಸಂದರ್ಭದ ನಾಗೋಲಿ ಶಾಸ್ತ್ರದಲ್ಲಿಯೇ ತಾಂಬೂಲ ಸೇವಿಸಲು ಲೈಸೆನ್ಸ್‌ ದೊರೆತು ಮುಂದಿನ ಹಂತದಲ್ಲಿ ʼತಿಂಡಿ ಊಟಗಳ ನಂತರ ಎಲಡಿಕೆ ಹಾಕಿಕೊಳ್ಳಲೇ ಬೇಕು. ಇಲ್ಲದಿದ್ದರೆ ಮಗುವಿಗೆ ಹಾಲು ಹುಳಿಯಾಗುತ್ತೆʼ ಎಂಬ ಒತ್ತಡವುಂಟಾದಾಗ ಅಂದಿನ ಬಾಲ್ಯದ ಕನಸಿನ ಪಾತ್ರವು ಸಾಕಾರಗೊಂಡಿದ್ದರೂ ʼಹಲ್ಲೆಲ್ಲಾ ಕೆಂಪಾಗುತ್ತೆ, ನಾಲಿಗೆ ಮರಗಟ್ಟಿದ ಹಾಗಾಗಿ ರುಚೀನೇ ಗೊತ್ತಾಗಲ್ಲʼ ಎಂದೆಲ್ಲಾ ಸಬೂಬು ಹೇಳಿ, ಕಾಡಿ-ಬೇಡಿ ಒಂದು ಹೊತ್ತಿಗೆ ಇಳಿಸಿಕೊಂಡಿದ್ದೆ. ಈ ಮಕ್ಕಳೇ ಮುಂದೆ ಅಜ್ಜಿಯ ಬಾಯಲ್ಲಿ ನುರಿಯುತ್ತಿರುವ ಬೀಡಾವನ್ನೂ ಬಿಡದಂತೆ ದಂಬಾಲುಬೀಳುತ್ತಿವೆ ಎಂದು ತಿಳಿದಾಗ ʼಹಿಸ್ಟರಿ ರಿಪೀಟ್ಸ್‌ʼ ಎನ್ನುವುದು ಪುನಃಪುನಹ ಸಾಬೀತಾಗುವಂತಾಯ್ತು! ಅಂದಹಾಗೆ ನಮ್ಮ ಮನೆಯ ಪಕ್ಕದಲ್ಲೇ ಬೀಡಾ ಕಟ್ಟುವವರ ಮನೆಯೂ ಇದ್ದು ಅಲ್ಲಿಗೆ ಓಡಿಹೋಗಿ ಪಾನ್‌ ಬೀಡಾ ತರುವುದೆಂದರೆ ಮುದ್ದುಗಳಿಗೆ ಸಂಭ್ರಮವೋ ಸಂಭ್ರಮ.

          ಸೂಕ್ಷ್ಮತೆ ಹಾಗೂ ಸಂಕೀರ್ಣತೆಯು ಹೆಚ್ಚಾದ ಕಾಲ ಮಹಿಮೆಯಿಂದ ಇನ್ಟಂಟ್‌ ವಸ್ತುಗಳಿಗೆ ಬೇಡಿಕೆ ಇನ್ನಿಲ್ಲದಂತೆ ಏರಲಾರಂಭಿಸಿ ಪಾನ್ ಪರಾಗ್‌ನ ಚಿಕ್ಕ ಪ್ಯಾಕೆಟ್‌ನತ್ತ ತಾಂಬೂಲ ಚಿತ್ತ ದಾಪುಗಾಲಿಟ್ಟಿತು. ʼಪಾನ್ ಪರಾಗ್ ಖಾಯೆ, ಇಜ್ಜತ್ ಬಢ್ ಜಾತೀ ಹೈ!ʼ ನಂತರದ ಪಾನ್ ಪರಾಗ್ ಆಕರ್ಷಣೆಯು ಸಿನಿಮಾ ಡೈಲಾಗ್‌ಗಳು, ಹಾಸ್ಯ ದೃಶ್ಯಗಳು, ಜಾಹೀರಾತುಗಳಲ್ಲೆಲ್ಲಾ ಸ್ಥಾನವನ್ನು ಭದ್ರಪಡಿಸಿಕೊಂಡು ಎಲ್ಲೆಲ್ಲೂ ಖಾಲಿಯಾದ ರೆಡಿ ಟು ಈಟ್‌ ಪಾನ್‌ ಪರಾಗಿನ ಪ್ಯಾಕೆಟ್ಟುಗಳು ʼಸಮಾನರಾರಿಹರೈ ನನಗೆ…ʼ ಎಂದು ಹಾರಾಡಲಾರಂಭಿಸಿ ಪರಿಸರವನ್ನು ಮಲಿನಗೊಳಿಸುವ ಅಜೈವಿಕ ತ್ಯಾಜ್ಯಗಳೊಂದಿಗೆ ಪೈಪೋಟಿನಡೆಸಲಾರಂಭಿಸಿದವು. ಅಲ್ಲಿಂದೀಚೆಗೆ ಅದರ ಯಶಸ್ಸಿನಿಂದ ಪ್ರೇರಿತರಾಗಿ ಹಲವಾರು ತಂಬಾಕು ಯುಕ್ತ ಹೊಸ ಬ್ರಾಂಡ್‌ಗಳು ಅನಾರೋಗ್ಯದ ಗುಮ್ಮಗಳಂತೆ ಮಾರುಕಟ್ಟೆಯನ್ನು ಪ್ರವೇಶಿಸಲುದ್ಯುಕ್ತವಾದವು.

       ಇಂತಿಪ್ಪ ವಿದ್ಯಮಾನಗಳ ನಡುವೆ ನಮ್ಮ ಮನೆಗೆ ಅನೇಕ ವರ್ಷಗಳ ನಂತರ ಬಂದ ತಾಂಬೂಲ ಪ್ರಿಯ ಬಂಧುವೊಬ್ಬರಿಗೆ ಅವರ ಹಿರಿತನಕ್ಕೆ ತಕ್ಕಂತೆ ಷೋಡಶೋಪಚಾರಗಳನ್ನು ಮಾಡಿ ಊಟದ ನಂತರ ತಾಂಬೂಲದ ತಟ್ಟೆಯನ್ನು ಮುಂದಿಟ್ಟು ʼಪರಾಂಭರಿಸಬೇಕುʼ ಎನ್ನುವಂತೆ ವಿನೀತ ಭಾವದಿಂದ ನಿಂತಾಗ ಅವರು ನಗುತ್ತಾ ʼಓ ನಾನಾಗ್ಲೇ ಈ ಎಲಡಿಕೆ ಬಿಟ್ಟು ಬಾಳ ವರ್ಷ ಆಯ್ತು. ಈಗೇನಿದ್ರೂ ಸಕಲವನ್ನೂ ಸಾಂದ್ರೀಕರಿಸಿಕೊಂಡಿರುವ ಈ ಪ್ಯಾಕೆಟ್‌ ಮಾತ್ರʼ ಎಂದು ಪಾನ್ ಪರಾಗ್ಅನ್ನು ಪ್ರದರ್ಶಿಸಿದಾಗ ನಾವೇ ಓಲ್ಡ್‌ ಮಾಡೆಲ್‌ ಗಳಂತಾಗಿ ಕಂಗಾಲಾದೆವು!

       ಪರಾಗ ಸ್ಪರ್ಶದ ಪರಿಣಾಮದಂತಲ್ಲದೇ ನೇತ್ಯರ್ಥಕವಾಗಿ ಮುಂದಿನ ಪೀಳಿಗೆಗಳಿಗೆ ಗೀಳಿನ ರವಾನೆಯಾಗುತ್ತಾ ಸಾಂಪ್ರದಾಯಿಕ ತಾಂಬೂಲ ಪ್ರಿಯರನ್ನೂ ಎಲ್ಲಿ ತಂಬಾಕು ಪ್ರಿಯರಾಗುವತ್ತ ತನ್ನ ಕಬಂಧ ಬಾಹುಗಳನ್ನು ಚಾಚುತ್ತದೋ ಈ ಪರಾಗ ಸ್ಪರ್ಶಿನಿ ಎನ್ನುವ ಗೊಂದಲದಲ್ಲಿ ʼಕಾಲಾಯ ತಸ್ಮೈ ನಮಃʼ ಎಂದುಕೊಂಡು ಸುಮ್ಮನಿರಲಾಗುತ್ತದೆಯೇ..?..?..?
       ✍️ಪ್ರಭಾಮಣಿ ನಾಗರಾಜ, ಹಾಸನ


No comments:

Post a Comment