ಈ ತಿಂಗಳ(ಸೆಪ್ಟೆಂಬರ್2026ರ) 'ಅಪರಂಜಿ' ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲಘು ಬರಹ 'ಸಿನೇಮಾ ನೋಡೋಣ ಬನ್ನಿ!' ನಿಮ್ಮ ಪ್ರೀತಿಯ ಓದಿಗೆ❤️👇
https://www.facebook.com/share/p/1FjU6Cok2e/
'ಅಪರಂಜಿ' ಪತ್ರಿಕಾ ಬಳಗಕ್ಕೆ ಧನ್ಯವಾದಗಳು🌹🙏
ಸಿನೇಮಾ ನೋಡೋಣ ಬನ್ನಿ!
ಅತ್ಯಗತ್ಯ ಅನುಕೂಲತೆಗಳೂ ಅಲಭ್ಯವಿದ್ದ ಅತ್ಯಂತ ಕುಗ್ರಾಮದಲ್ಲಿ ಜನ್ಮವೆತ್ತಿದ್ದ ನಾನು ಚಿಕ್ಕವಳಾಗಿದ್ದಾಗ ನೋಡಿದ್ದ ಚಲನಚಿತ್ರಗಳು ಬೆರಳೆಣಿಕೆಯಷ್ಟೇ ಇದ್ದವು. ಅವುಗಳನ್ನು, ಮೊದಲು ನೋಡಿದ್ದು- ಚಂದ್ರಸೇನೆ, ಎರಡನೆಯದು-ಮಕ್ಕಳ ರಾಜ್ಯ, ಮೂರನೆಯದು-ಸೀತಾರಾಮ ಕಲ್ಯಾಣ....... ಮುಂತಾಗಿ ಬೆರಳಿನಲ್ಲಿ ಎಣಿಸಿಕೊಂಡು ಆಗಾಗ ನೆನಪುಮಾಡಿಕೊಳ್ಳುತ್ತಾ ಇದ್ದುದು ಮನಸ್ಸಿನಲ್ಲಿ ಹಸಿರಾಗೇ ಇದೆ. ʼಮಧುಮಾಲತಿʼ ಚಿತ್ರದಲ್ಲಂತೂ ಮಂತ್ರವಾದಿ ಬಂದಾಗಲೆಲ್ಲಾ ನಾನು ಮತ್ತು ನನ್ನ ತಮ್ಮ ಸಿನೇಮಾ ಟಾಕೀಸಿನ ಛೇರ್ನ ಆಡಿಯಲ್ಲಿ ಅಡಗಿಕೊಳ್ಳುತ್ತಿದ್ದುದನ್ನು ಮರೆಯುವಂತೆಯೇ ಇಲ್ಲ! ನಮ್ಮದು ಹಳ್ಳಿಯಾದ್ದರಿಂದ ನಾವು ಸಿನೇಮಾ ನೋಡಲು ಐದು ಮೈಲಿ ದೂರದ (ಆಗ ಹೇಳುತ್ತಿದ್ದಂತೆ!) ಪಟ್ಟಣಕ್ಕೇ ಎತ್ತಿನಗಾಡಿ ಕಟ್ಟಿಕೊಂಡು ಹೋಗಬೇಕಾಗಿತ್ತು. ನಮ್ಮ ಸೋದರತ್ತೆಗೆ ದೇವರ ಚಿತ್ರಗಳು ಯಾವುದೇ ಬಂದರೂ ನೋಡುವ ಹಂಬಲ. ನಮ್ಮ ಅವಿಭಕ್ತ ಕುಟುಂಬದಲ್ಲಿ ಅಕ್ಕ ಯಾವಾಗಲೂ ಆ ಸೋದರತ್ತೆಯೊಂದಿಗೇ ಇರುತ್ತಿದ್ದುದರಿಂದ ಸಾಕಷ್ಟು ಚಿತ್ರಗಳನ್ನು ನೋಡುತ್ತಿದ್ದಳು. ನಮಗೆಲ್ಲಾ ಅವುಗಳ ಕಥೆಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದುದರಿಂದ ನನಗೂ ನೋಡಬೇಕೆನ್ನುವ ಆಸೆಯಾಗುತ್ತಿತ್ತು. ಆದರೆ ನಾನು ಸದಾ ಕಣ್ಣು ಸರಿಯಾಗಿ ಕಾಣದೇ ಇದ್ದ ಇನ್ನೊಬ್ಬ ಸೋದರತ್ತೆಗೇ ಅಂಟಿಕೊಂಡಿದ್ದ ಅಚ್ಚುಮೆಚ್ಚಿನ ಕಂದನಾಗಿದ್ದರಿಂದ ಸಿನೇಮಾ ನೋಡಲು ಹೋಗಲಾಗದೇ ನನ್ನ ಆಸೆ ಆಸೆಯಾಗಿಯೇ ಉಳಿದಿತ್ತು.
ಒಮ್ಮೆ ಅಮ್ಮ-ಅಣ್ಣ(ತಂದೆ)ನ ಜೊತೆ ಮಕ್ಕಳಾದ ನಾವು ಕುಣಿಗಲ್ನ ಬಂಧುವೊಬ್ಬರ ಮನೆಗೆ ಸಮಾರಂಭಕ್ಕೆ ಹೋಗಿದ್ದೆವು. ಸಂಜೆ ನಾವೆಲ್ಲಾ ಸಿನೇಮಾ ನೋಡಲು ಹೋಗುವ ಏರ್ಪಾಡಾಯಿತು. ಈಗಿನಂತೆ ಆಟೋಗಳಿಲ್ಲದ್ದರಿಂದ ಹಿರಿಯರು ಎಳೆಯರಾದ ನಮ್ಮನ್ನು ಹೆಗಲ ಮೇಲೆ ಕೂರಿಸಿಕೊಂಡು ಹೊರಟರು. ಆದರೆ ಅಷ್ಟರಲ್ಲಾಗಲೇ ಸಾಕಷ್ಟು ಸಿನೇಮಾಗಳನ್ನು ನೋಡಿ ಬೇಸತ್ತಿದ್ದ ಅಕ್ಕ ದಾರಿಯಲ್ಲಿ ʼಸಿನೆಮಾ ನೋಡೋದು ಬೇಡವೇ ಬೇಡʼ ಎಂದು ಹಟಹಿಡಿದಾಗ ನಮ್ಮ ಸವಾರಿ ಕುದುರೆ ಲಾಯದ ಕಡೆಗೆ ಹೊರಟಿತು! ಆಗುಂಟಾದ ನಿರಾಶೆ ಬಹಳ ದಿನ ನನ್ನ ಮನಸ್ಸಿನಲ್ಲಿ ಉಳಿದುಬಿಟ್ಟಿತ್ತು! ಮುಂದೆ ಅಕ್ಕನ ಊರಿಗೆ ಹೋದಾಗಲೆಲ್ಲಾ ಒಳ್ಳೆಯ ಚಿತ್ರಗಳಿದ್ದರೆ ನನ್ನನ್ನು ಕರೆದುಕೊಂಡು ಹೋಗಿ ತೋರಿಸುತ್ತಿದ್ದುದು ತನ್ನ ಬಾಲ್ಯದ ಅಸಹಕಾರ ಪ್ರವೃತ್ತಿಗೆ ಪ್ರಾಯಶ್ಚಿತ್ತದಂತಿತ್ತು!
ಮಕ್ಕಳಾಗಿದ್ದ ನಾವು ಸ್ವಲ್ಪ ಬೆಳೆದ ನಂತರ ಎಲ್ಲರೂ ಒಟ್ಟಾಗಿ ಎತ್ತಿನ ಗಾಡಿಯಲ್ಲಿ ಪಟ್ಟಣಕ್ಕೆ ಹೋಗಿ ಸಿನೇಮಾ ನೋಡಿಕೊಂಡು ಬರುವಾಗ, ಬೆಳದಿಂಗಳ ರಾತ್ರಿಯಲ್ಲಿ ದಾರಿಯುದ್ದಕ್ಕೂ ಜೋರಾಗಿ ಚಿತ್ರಗೀತೆಗಳನ್ನು ಹಾಡಿಕೊಂಡು ಬರುತ್ತಿದ್ದೆವು. ಅದು ನಮ್ಮೊಳಗಿನ ಭಯವನ್ನು ಓಡಿಸುವ ತಂತ್ರವೂ ಆಗಿತ್ತೇನೋ! ಮಧ್ಯೆಮಧ್ಯೆ ಅದೇತಾನೇ ನೋಡಿ ಬಂದ ಸಿನೇಮಾದ ಸಂಭಾಷಣೆಗಳನ್ನೂ ಹೇಳುತ್ತಾ ಗದ್ದಲವೆಬ್ಬಿಸುತ್ತಿದ್ದ ನಮ್ಮ ನಗು-ಕಿರುಚಾಟದಿಂದ ಬೆದರಿದ ಎತ್ತುಗಳು ಜೋರಾಗಿ ಓಡುತ್ತಾ ನಮ್ಮ ಸಂಭ್ರಮಕ್ಕೆ ಇಂಬುಕೊಡುತ್ತಿದ್ದವು.
ನಾನು ನಗರದಲ್ಲಿ ಓದುತ್ತಿದ್ದಾಗ ಹತ್ತಿರದ ಊರಿನಲ್ಲಿದ್ದ ದೊಡ್ಡಮ್ಮನ ಮನೆಗೆ ಹೋದಾಗ ಅವರು ʼರಾಜಣ್ಣನ ಸಿನೆಮಾ ಬಂದಿದೆ ನೋಡಾಣ ಬಾʼ ಎನ್ನುತ್ತಾ ಹೊರಡಿಸುತ್ತಿದ್ದರು. ಚಾಪೆ, ಕಂಬಳಿ ಎಲ್ಲವನ್ನೂ ಜೋಡಿಸಿಕೊಳ್ಳುವಾಗ ʼಇದೆಲ್ಲಾ ಏಕೆ?ʼ ಎಂದುಕೊಳ್ಳುತ್ತಿದ್ದವಳಿಗೆ ಅಲ್ಲಿ ಹೋದಾಗಲೇ ತಿಳಿಯುತ್ತಿದ್ದುದು ಅದೊಂದು ಟೆಂಟ್ ಎಂದು! ಅಲ್ಲಾಗಲೇ ಎಲ್ಲರೂ ಮಂದಲಿಗೆ, ಬಟ್ಟೆ ಹಾಸಿಕೊಂಡು ಜಾಗ ರಿಸರ್ವ್ ಮಾಡಿಕೊಂಡಾಗಿರುತ್ತಿತ್ತು. ದೊಡ್ಡಮ್ಮನೂ ʼಸ್ವಲ್ಪ ಅತ್ಲಾಗೆ ಸರಿಸ್ರಮ್ಮ. ಇದು ನನ್ನ ಜಾಗ ಅಲ್ವಾʼ ಎಂದು ತಮ್ಮ ಹಕ್ಕನ್ನು ಸ್ಥಾಪಿಸಿಕೊಂಡು ಚಾಪೆ ಹಾಸಿ ʼಕಂಬ ಒರಗಿಕೊಂಡು ಕೂತ್ಕೊ, ಕಂಬಳಿ, ಸರಿಯಾಗಿ ಹೊದ್ಕೊʼ ಎಂದು ನನಗೆ ಇನ್ಸ್ಟ್ರಕ್ಷನ್ಸ್ ಕೊಡುತ್ತಾ ಸುತ್ತಿನವರಿಗೆ ʼನನ್ನ ತಂಗಿ ಮಗಳು, ಸಿಟೀಲಿ ಡಿಗ್ರಿ ಓದ್ತಿದಾಳೆʼ ಎಂದು ಹೇಳುತ್ತಾ ಸಂಭ್ರಮಿಸುತ್ತಿದ್ದರು. ಫಿಲಂ ಶುರುವಾಗಿ ರಾಜಣ್ಣ ಬರೋದೇ ತಡ ಶಿಳ್ಳೆ ಹೊಡೆಯುತ್ತಾ ಹುಡುಗರು ಕುಣಿಯಲು ಪ್ರಾರಂಭಿಸಿದರೆ ಹೆಂಗಸರು ಕೈಮುಗಿಯುತ್ತಾ ಸಡಗರಪಡುತ್ತಿದ್ದರು. ಈಗ ಟೆಂಟ್ಗಳಿದ್ದವು ಎನ್ನುವ ಕುರುಹೂ ಇಲ್ಲದಂತೆ ಚರಿತ್ರೆಯ ಪುಟ ಸೇರಿವೆ.
ಕಾಲಚಕ್ರ ಉರುಳಿದಂತೆ ಪಟ್ಟಣ ಸೇರಿ ನಮ್ಮ ಮಕ್ಕಳು ಹುಟ್ಟಿ, ಬೆಳೆದು ಈಗ ಅವರ ಸ್ನೇಹದ ವರ್ತುಲದಲ್ಲಿ ಚಲನಚಿತ್ರಗಳನ್ನು ನೋಡುವುದು ಕೇವಲ ಮನರಂಜನೆಗಾಗಿ ಎನ್ನುವುದರಿಂದ ಮುಂದುವರೆದು ಅದರಲ್ಲಿರುವ ಸಂಭಾಷಣೆಗಳನ್ನು ಅರ್ಥೈಸಿಕೊಂಡು, ಆಸ್ವಾದಿಸುವ ಅವಕಾಶ ದೊರೆಯುವಂತಾಯಿತು. ಸದಾ ಒಂದಿಲ್ಲೊಂದು ಕೆಲಸವನ್ನು ಹೊಂದಿಸಿಕೊಂಡು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗುತ್ತಿದ್ದ ನನ್ನನ್ನು ಒಂದೆಡೆ ಹಿಡಿದು ಕೂರಿಸಿ ತೋರಿಸಿದ ಕೆಲವು ಚಿತ್ರಗಳು ನನ್ನ ಮನಸ್ಸಿನ ಮೇಲೆ ಬಹಳ ಪ್ರಭಾವವನ್ನು ಬೀರಿವೆ. ಲಯನ್ ಕಿಂಗ್, ಕುಂಗ್-ಫು-ಪಾಂಡ…..ಮುಂತಾದ ಚಿತ್ರಗಳಲ್ಲಿ ಪ್ರಾಣಿಗಳು ಆಡುವ ಮಾತುಗಳಲ್ಲಿಯ ಅರ್ಥವಂತಿಕೆ ನೋಡಿಯೇ ಸವಿಯಬೇಕು. ಚಿಕ್ಕವಯಸ್ಸಿನಲ್ಲಿ ಓದಿದ ಪಂಚತಂತ್ರದ ಕಥೆಗಳಂತೆ ಇವೂ ಅವಿಸ್ಮರಣೀಯ. ಹೀಗೆ ನೋಡಿದ ಚಿತ್ರಗಳಲ್ಲಿ ನನಗೆ ಬಹಳ ಮೆಚ್ಚುಗೆಯಾದದ್ದು `ಪೀಸ್ಫುಲ್ ವಾರಿಯರ್’.
ಡಾನ್ಮಿಲ್ಮನ್ ಸ್ಥಳೀಯವಾಗಿ ಪ್ರಸಿದ್ಧನಾಗಿರುವ ಜಿಮ್ನಾಸ್ಟ್ ಕೂಡ ಆಗಿದ್ದ ಒಬ್ಬ ಕಾಲೇಜು ವಿದ್ಯಾರ್ಥಿ. ಅವನಿಗೆ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂಬ ಕನಸಿರುತ್ತದೆ. ಆದರೆ ಅವನನ್ನು ಕಾಡುತ್ತಿದ್ದ ಅವಿಶ್ರಾಂತಸ್ಥಿತಿ(restlessness)ಯಿಂದ ಹೊರಬರಲು ಅವನು ಸೂರ್ಯೋದಯಕ್ಕೆ ಮೊದಲು ಓಡುವ ಅಭ್ಯಾಸವಿಟ್ಟುಕೊಂಡಿರುತ್ತಾನೆ. ಹಾಗೆ ಓಡುತ್ತಿರುವಾಗ ಒಂದು ದಿನ ಎದುರಾದ ಒಬ್ಬ ವೃದ್ಧ(ಸಾಕ್ರಟೀಸ್)ನಿಗೆ ಡಾನ್ ನ ಸಮಸ್ಯೆಯ ಬಗ್ಗೆ ಸ್ವತಃ ಡಾನ್ಗೇ ತಿಳಿದಿರುವುದಕ್ಕಿಂತಲೂ ಹೆಚ್ಚಾಗಿ ತಿಳಿದಿರುವಂತಿರುತ್ತದೆ! ಸಾಕ್ರಟೀಸ್ ಒಬ್ಬ ಮಾರ್ಗದರ್ಶಿಯಾಗಿ, ಡಾನ್ಗೆ ಅನೇಕ ಟಾಸ್ಕ್ಗಳನ್ನು ಕೊಟ್ಟು, ತಿಳಿಹೇಳುತ್ತಾ ಅವನಲ್ಲಿದ್ದ ದೌರ್ಬಲ್ಯಗಳನ್ನು ನಿವಾರಿಸಲು ಪ್ರಯತ್ನಿಸುತ್ತಾನೆ. ........ ಗುರಿಗಿಂತಲೂ ಕ್ರಮಿಸುವ ಮಾರ್ಗ ಪ್ರಮುಖವಾದುದು ಎನ್ನುವ ಮಹತ್ವವನ್ನು ಮನವರಿಕೆ ಮಾಡುತ್ತಾನೆ........ ಈ ಮಧ್ಯದಲ್ಲಿ ಒಂದು ಅಪಘಾತದಲ್ಲಿ ಡಾನ್ ನ ಬಲಗಾಲಿನ ಮೂಳೆ ಮುರಿದು ಅವನು ಜಿಮ್ನಾಸ್ಟಿಕ್ ಅಭ್ಯಾಸದಿಂದ ಹೊರಬರಬೇಕಾದ ಸನ್ನಿವೇಶ ಎದುರಾಗುತ್ತದೆ. ಆದರೂ ಸಾಕ್ರಟೀಸ್ನ ಮಾರ್ಗದರ್ಶನದಲ್ಲಿ ಸತತ ಪ್ರಯತ್ನದಿಂದ ಅರ್ಹತೆಯನ್ನು ಪಡೆದು ಒಲಂಪಿಕ್ ಟ್ರಯಲ್ನಲ್ಲಿ ಆಯ್ಕೆಯಾಗುತ್ತಾನೆ. ಅಂತಿಮ ಸ್ಪರ್ಧೆಯ ಮೊದಲು ಸಾಕ್ರಟೀಸ್ ಡಾನ್ ಗೆ ಎಲ್ಲಿಯೂ ಸಿಗುವುದಿಲ್ಲ. ಸ್ಪರ್ಧೆಯ ಕಡೆಯ ಸುತ್ತಿನಲ್ಲಿ ಸಾಕ್ರಟೀಸ್ ಅವನ ಮನಸ್ಸಿನಲ್ಲಿ ಮೂರು ಪ್ರಶ್ನೆಗಳನ್ನು ಕೇಳುತ್ತಾನೆ: ʼನೀನೆಲ್ಲಿದೀಯ ಡಾನ್?ʼ ʼಇದು ಯಾವ ಸಮಯ?ʼ ʼನೀನು ಯಾರು?"
ನಂತರ ಡಾನ್ ಟ್ರಿಪಲ್ ಕಾನ್ಸಿಕ್ಯುಟೀವ್ ಫ್ಲಿಪ್ಸ್ ಅನ್ನು ಸರಾಗವಾಗಿ ನಿರ್ವಹಿಸಿ ತೀರ್ಪುಗಾರರಿಗೇ ಅಚ್ಚರಿ ಮೂಡಿಸುತ್ತಾನೆ! ಅವರ ಟೀಂ ಮೊದಲ ನ್ಯಾಷನಲ್ ಅವಾರ್ಡನ್ನು ಪಡೆಯುತ್ತದೆ.
ಈ ಚಿತ್ರದಲ್ಲಿ ಬರುವ ಡಾನ್ ಮತ್ತು ಸಾಕ್ರಟೀಸ್ ನಡುವಿನ ಸಂಭಾಷಣೆ ಬಹಳ ಸ್ವಾರಸ್ಯಕರವಾಗಿದೆ. ಎಲ್ಲೆಲ್ಲೋ ಅಲೆಯುವ ನಮ್ಮ ಮನಸ್ಸನ್ನು ʼಇಲ್ಲಿʼ, ʼಈಗʼ, ʼಈ ಕ್ಷಣʼಕ್ಕೆ ಹಿಡಿದು ನಿಲ್ಲಿಸಿದರೆ ಯಾವುದೇ ಸಾಧನೆಯೂ ಕಷ್ಟಕರವಲ್ಲ. ಅದಕ್ಕಾಗಿ ಒಬ್ಬ ಮಾರ್ಗದರ್ಶಕನ ಅವಶ್ಯಕತೆಯಿದೆ. ಅದು ಸದಾ ನಮ್ಮೊಂದಿಗೇ ಇರುವ ನಮ್ಮ ಅಂತರಂಗವೇ ಆದರೆ ಎಷ್ಟು ಚೆನ್ನ!
ಈಗಂತೂ ಡಬ್ಬಿಂಗ್ಗೆ ಅವಕಾಶ ಸಿಕ್ಕ ನಂತರ ಉತ್ತಮ ಚಲನಚಿತ್ರಗಳು ಜಗದ ಮೂಲೆಮೂಲೆಗಳನ್ನೂ ತಲುಪುವಂತಾಗಿ ನಾವೂ ಬೇರೆಬೇರೆ ಭಾಷೆಗಳ ಚಿತ್ರಗಳನ್ನು ನೋಡಿ ನಮ್ಮದೇ ಮಾತೃಭಾಷೆಯಲ್ಲಿ ಆಸ್ವಾಧಿಸುವ ಅವಕಾಶ ದೊರೆತಿದೆ. ಯಾರಿಗುಂಟು-ಯಾರಿಗಿಲ್ಲ!
✍️ಪ್ರಭಾಮಣಿ ನಾಗರಾಜ, ಹಾಸನ




No comments:
Post a Comment