ಮನಸ್ಸು ಸದಾ ಒಂದಿಲ್ಲೊಂದು ಕಲ್ಪನೆ ಅಥವಾ ಆಲೋಚನೆಗಳಲ್ಲಿಯೇ ತೊಡಗಿರುತ್ತದೆ. ಚಿಕ್ಕಂದಿನಿಂದಲೂ ಈ ಮನಸ್ಸನ್ನು ಸಮಾಧಾನವಾಗಿ ಇಟ್ಟುಕೊಳ್ಳುವುದು ಹೇಗೆ? ಎನ್ನುವುದೇ ನನ್ನ ಪ್ರಶ್ನೆಯಾಗಿತ್ತು. ‘ಓ ಮನವೇ?’ ಎಂಬ ಹನಿಗವನದಲ್ಲಿ ಹೀಗೆ ಬರೆದಿದ್ದೆ:
‘ಮೇಲ್ಮೈಯಲಿ
ಅಗೆದಂತೆ
ಬರೀ ಕಲ್ಲು ಮಣ್ಣು
ಆಳಕಿಳಿದಾಗ
ದೊರೆಯಲೂಬಹುದು
ಹೊನ್ನು!’
ಈ ಮನಸ್ಸಿನ ಆಳಕ್ಕೆ ಇಳಿಯುವುದಾದರೂ ಹೇಗೆ? ರೆಂಬೆಯಿಂದ ರೆಂಬೆಗೆ ಹಾರುವ ಈ ಮನವೆಂಬ ಮರ್ಕಟವನ್ನು ಒಂದೆಡೆ ಸ್ಥಿರವಾಗಿ ನಿಲ್ಲಿಸುವುದಾದರೂ ಹೇಗೆ? ಈ ಹೇಗೆ, ಹೇಗೆ ಗಳಿಗೆ ಉತ್ತರ ಸಿಗುವುದಾದರೂ ಎಲ್ಲಿ? ಈ ಬಗ್ಗೆ ಅನೇಕ ಮನಃ ಶಾಸ್ತ್ರಜ್ಞರು, ದಾರ್ಶನಿಕರು ಸಮರ್ಪಕವಾದ ಉತ್ತರಗಳನ್ನೇ ನೀಡಿದ್ದಾರೆ. ಓಶೋ ರವರ ‘ಶೂನ್ಯ ನಾವೆ’ಯಲ್ಲಿ ಮನಸ್ಸಿನ ಚಂಚಲತೆಯ ವಿವಿಧ ಮುಖಗಳನ್ನು ವಿಸ್ತಾರವಾಗಿ ತೆರೆದಿಟ್ಟಿದ್ದಾರೆ. ಅಲ್ಲದೇ ಮನಸ್ಸಿನ ರಾಹಿತ್ಯ ಸ್ಥಿತಿಯನ್ನು ಧ್ಯಾನವೆಂದು ಈ ರೀತಿಯಾಗಿ ವಿವರಿಸಿದ್ದಾರೆ.
‘ಮನಸ್ಸು ಸದಾ ವಿಪರೀತಗಳಲ್ಲೇ ಚಲಿಸುವುದು. ಒಮ್ಮೆ ನೀವೇನಾದರೂ ಮಧ್ಯ ಬಿಂಧುವಿನಲ್ಲಿ ನೆಲೆಸಿದಿರೆಂದರೆ ಆಗ ಅಮನಸ್ಸಾಗುವುದು, ಮಧ್ಯದಲ್ಲಿ ಮನಸ್ಸೆಂಬುದು ನಾಪತ್ತೆಯಾಗುವುದು. ದೊಂಬರಾಟದವನು ಬಿಗಿದು ಕಟ್ಟಿ ದ ಹಗ್ಗದ ಮೇಲೆ ನಡೆಯುವುದನ್ನು ನೀವು ನೋಡಿರುವಿರೇನು? ಎಂದಾದರೂ ಅವಕಾಶ ಸಿಕ್ಕಿದಲ್ಲಿ ನೋಡಿ. ಹಗ್ಗದ ಮೇಲೆ ನಡೆಯುತ್ತಿರುವಾಗ ಆತನೇನಾದರೂ ಎಡಕ್ಕೆ ವಾಲಿದಲ್ಲಿ ಸಮತೋಲನ ತರಲು ಕೂಡಲೇ ಬಲಕ್ಕೆ ವಾಲುವನು. ಬಲಕ್ಕೆ ಹೆಚ್ಚಾಗಿ ವಾಲಿದೆ ಎಂದು ಆತನಿಗೆ ಅನಿಸಿದಲ್ಲಿ ಕೂಡಲೇ ಎಡಕ್ಕೆ ವಾಲುವನು...........
ನೀವು ಹಗ್ಗದ ನಡಿಗೆಯಲ್ಲಿ ಭಾಗವಹಿಸಿದಲ್ಲಿ ಎರಡು ವಿಚಾರಗಳು ನಿಮ್ಮ ಅರಿವಿಗೆ ಬರುವುದು: ಗಂಡಾಂತರದ ಎದುರು ಆಲೋಚನೆ ಇಲ್ಲವಾಗುವುದು, ಮತ್ತು ನೀವು ಮಧ್ಯಬಿಂದುವಿಗೆ ಬಂದಾಗ -ಎಡವೂ ಇಲ್ಲ, ಬಲವೂ ಅಲ್ಲದ, ಸರಿಯಾಗಿ ಮಧ್ಯ ಬಿಂದುವಿಗೆ ತಲುಪಿದಾಗ ಮೌನವು ನಿಮ್ಮನ್ನಾವರಿಸುತ್ತದೆ. ಹಿಂದೆಂದೂ ನಿಮ್ಮ ಅರಿವಿಗೆ ಬಂದಿರದ ಮೌನ. ಈ ಸ್ಥಿತಿ ಜೀವನದ ಎಲ್ಲಾ ಸನ್ನಿವೇಶಗಳಲ್ಲೂ ಬರಬಹುದು. ಯಾವಾಗ ಇಡೀ ಜೀವನವೇ ಹಗ್ಗದ ಮೇಲಿನ ನಡಿಗೆಯಂತಾಗುವುದೋ ಆಗ ಈ ಸ್ಥಿತಿ ಸರ್ವೇ ಸಾಮಾನ್ಯ.
ಯಾವುದೇ ವಿಪರೀತ ಮಧ್ಯಬಿಂದುವಿಗೆ ಬಂದಾಗ ಮನಸ್ಸು ಇಲ್ಲವಾಗುತ್ತದೆ. ಪ್ರಯತ್ನಿಸಿ ನೋಡಿ. ಹಗ್ಗದ ಮೇಲೆ ನಡೆಯುವುದು ಒಂದು ಒಳ್ಳೆಯ ವ್ಯಾಯಾಮ ಮತ್ತು ಅತ್ಯಂತ ಸೂಕ್ಷ್ಮ ಧ್ಯಾನ ವಿಧಾನ. ಬೇರಾವ ವಿಧಾನದ ಅಗತ್ಯವಿಲ್ಲ. ನಿಮಗಿದು ಮಾಡಲಾದರೆ ಆಗ ನೀವು ಹಗ್ಗದ ಮೇಲೆ ನಡೆಯುವವನನ್ನು ಗಮನಿಸಬಹುದು.
ಗಮನವಿರಲಿ, ಹಗ್ಗದ ಮೇಲೆ ನಡೆಯುವಾಗ ಆಲೋಚನೆ ಇಲ್ಲವಾಗುತ್ತದೆ. ಏಕೆಂದರೆ ಆಗ ನೀವು ಅತ್ಯಂತ ಗಂಡಾಂತರದ ಪರಿಸ್ಥಿತಿಯಲ್ಲಿ ಇರುತ್ತೀರಿ. ಆಗ ನಿಮಗೆ ಯೋಚಿಸಲು ಅವಕಾಶವಿರುವುದಿಲ್ಲ. ನೀವು ಯೋಚನೆ ಮಾಡಲು ಶುರು ಮಾಡಿದರೆ, ಕೂಡಲೇ ದೊಪ್ಪೆಂದು ಬೀಳುವಿರಿ. ಹಗ್ಗದ ಮೇಲೆ ನಡೆಯುವಾಗ ನೀವು ಯೋಚಿಸಲಾಗದು. ಆಗ ಪ್ರತಿಕ್ಷಣವೂ ಬಹಳ ಎಚ್ಚರದಿಂದ ಇರಬೇಕಾಗುತ್ತದೆ. ತಾನು ಸುರಕ್ಷಿತ ಎಂಬ ಭ್ರಾಂತಿಯಲ್ಲಿ ಇರಲಾಗುವುದಿಲ್ಲ. ಏಕೆಂದರೆ ಇಲ್ಲಿ ಸುರಕ್ಷೆ ಇಲ್ಲ. ಸದಾ ಅಪಾಯ ಇದ್ದೇ ಇರುತ್ತದೆ. ಯಾವ ಕ್ಷಣದಲ್ಲಾದರೂ ಆತ ಕೆಳಗೆ ಬೀಳಬಹುದು..........ಮತ್ತು ಸಾವು ಸದಾ ಕಾದಿರುತ್ತದೆ........
ಮನಸ್ಸಿಗೆ ಅತ್ಯಂತ ಕಷ್ಟದ ವಿಷಯವೆಂದರೆ ಸಮತೋಲನದಲ್ಲಿ ನೆಲೆಸುವುದು. ಒಂದು ವಿಷಯದಿಂದ ಮತ್ತೊಂದು ವಿಷಯದೆಡೆಗೆ ಚಲಿಸುವುದು ಮನಸ್ಸಿಗೆ ಅತ್ಯಂತ ಸರಳ ಎನಿಸುವುದು. ಮನಸ್ಸಿನ ಸ್ವಭಾವವೇ ವಿಪರೀತಗಳಲ್ಲಿ ಸುಳಿದಾಡುವುದು.ಈ ಮನಸ್ಸಿನ ಸ್ವಭಾವವನ್ನು ಆಳವಾಗಿ ಅರಿಯದಿದ್ದಲ್ಲಿ ಇನ್ನಾವುದರಿಂದಲೂ ನಿಮ್ಮನ್ನು ಧ್ಯಾನದೆಡೆಗೆ ಕೊಂಡೊಯ್ಯಲು ಸಾಧ್ಯವಿಲ್ಲ.
ಮನಸ್ಸಿನ ಪ್ರಕೃತಿಯೇ ಒಂದು ವಿಪರೀತದಿಂದ ಇನ್ನೋದು ವಿಪರೀತಕ್ಕೆ ಜಿಗಿಯುವುದು. ಇದರ ಆಧಾರ ಸ್ತಂಭವೇ ಅಸಮತೋಲನ. ನೀವು ಸಮತೋಲನರಾಗಿದ್ದಲ್ಲಿ ಮನಸ್ಸಿಲ್ಲವಾಗುವುದು....... ಆದರೆ ಸಮತೋಲನಕ್ಕೆ ಬರಲು ಮನಸ್ಸಿಗೆ ಸಾಧ್ಯವಾಗುವುದಿಲ್ಲ. ಮಧ್ಯದಲ್ಲಿ ನೆಲೆಸಲು ಮನಸ್ಸಿಗಾಗದು. ಮನಸ್ಸೆಂಬುದು ಗಡಿಯಾರದ ಲೋಲಕವಿದ್ದಂತೆ.......ನಿಮ್ಮ ಗಡಿಯಾರವು ಅತ್ಯಂತ ವೇಗವಾಗಿ ಚಲಿಸುತ್ತಿದೆ. ಇದರ ಯಾಂತ್ರಿಕ ಕ್ರಿಯೆಯೇ ಒಂದು ವಿಪರೀತದಿಂದ ಇನ್ನೊಂದು ವಿಪರೀತಕ್ಕೆ ಚಲಿಸುವುದು.
ಮನಸ್ಸೆಂಬುದು ಸದಾ ತಾರ್ಕಿಕವಾದುದು. ಇದು ನಿಮ್ಮನ್ನು ಸದಾ ವಿಪರೀತಕ್ಕೇ ಜಗ್ಗುವುದು. ವಿಪರೀತಕ್ಕೆ ಸಾಗಲು ಉತ್ತೇಜನ ನೀಡುವುದು. ಇದೊಂದು ನಿರಂತರ ಪ್ರಕ್ರಿಯೆ.ನೀವು ಇದನ್ನು ಗಮನಿಸಿ ಬಿಡದ ಹೊರತು ಇದರಿಂದ ಬಿಡುಗಡೆ ದೊರಕದು. ನಿಮಗೆ ಈ ಮನಸ್ಸಿನಾಟದ ಅರಿವಾಗದ ಹೊರತು ಇದರ ಆಟ ನಿಲ್ಲುವುದಿಲ್ಲ. ನೀವು ಗಮನಿಸಿ ಮಧ್ಯ ಬಿಂದುವಿನಲ್ಲಿ ನೆಲೆಸಬೇಕಾಗುವುದು.
ಮಧ್ಯ ಬಿಂದುವಿನಲ್ಲಿ ನೆಲೆಸುವುದೇ ಧ್ಯಾನ.
ಮನಸ್ಸೆಂಬುದು ವಿರುದ್ಧ ಗುಣಗಳಿಂದ ಕೂಡಿರುವಂತಹದು. ಪ್ರತಿ ಸಂಬಂಧಗಳೂ ಸಹ ಪ್ರೀತಿ-ದ್ವೇಷದ ಸಂಬಂಧಗಳೇ ಆಗಿವೆ...... ಮನಸ್ಸು ಸರಳವಾದ ಯಂತ್ರವಲ್ಲ. ಬಹಳ ಜಟಿಲವಾದುದು ಮತ್ತು ನೀವೆಂದಿಗೂ ಈ ಮನಸ್ಸಿನ ಮೂಲಕವಾಗಿ ಸರಳತೆಗೆ ಬರಲು ಸಾಧ್ಯವಿಲ್ಲ. ಏಕೆಂದರೆ ಅದು ಸತತವಾಗಿ ನಿಮ್ಮನ್ನು ಮರುಳು ಮಾಡುತ್ತಲೇ ಇರುತ್ತದೆ. ಹೀಗೆ ಮಾಡುವುದು ಅದರ ಸ್ವಭಾವ. ಧ್ಯಾನದಲ್ಲಿರುವುದೆಂದರೆ ಈ ಮನಸ್ಸು ಏನನ್ನು ಅಡಗಿಸಿಡುತ್ತದೆ ಎಂಬುದನ್ನು ಜಾಗೃತಿಯಿಂದ ಗಮನಿಸುವುದು.ನಿಮಗೆ ಕಸಿವಿಸಿಯನ್ನುಂಟುಮಾಡುತ್ತಿರುವ ವಿಚಾರಗಳ ಮೇಲೆ ಕಣ್ಣುಮುಚ್ಚಿ ಗಮನಿಸಿದಾಗ ಒಂದಲ್ಲಾ ಒಂದು ದಿನ ಇವೆಲ್ಲವೂ ಭುಗಿಲ್ಲೆಂದು ಮೇಲೇಳುವುವು. ಆಗ ನೀವು ಅದರ ವಿಪರೀತಕ್ಕೆ ಚಲಿಸುವಿರಿ. ಆ ವಿಪರೀತವಾದುದು ದೂರದಲ್ಲಿ ಎಲ್ಲೋ ಇಲ್ಲ. ಅದು ನಿಮ್ಮಲ್ಲೇ ಅಡಗಿದೆ. ನಿಮ್ಮ ಮನದಾಳದಲ್ಲೇ ಇದೆ. ಇದನ್ನು ಅರಿತಲ್ಲಿ ನೀವು ಮಧ್ಯದಲ್ಲಿ ನೆಲೆಸುವಿರಿ......
ನಿಮ್ಮಲ್ಲಿ ಸಮತೋಲನ ಉಂಟಾದೊಡನೆ ಮನಸ್ಸು ಇಲ್ಲವಾಗುವುದು. ಆಗ ನೀವು ಪೂರ್ಣರು. ಮತ್ತಲ್ಲಿ ಮನಸ್ಸೆಂಬುದು ಇಲ್ಲ. ಆದ ಕಾರಣ ಧ್ಯಾನ ಅಮನಸ್ಸಿನ ಸ್ಥಿತಿ.’
ಓಶೋರವರ ವಿಚಾರಗಳು ತುಂಬ ಮನನೀಯವಾಗಿವೆ. ಧನ್ಯವಾದಗಳು.
ReplyDeleteಸಂಗ್ರಹ ಯೋಗ್ಯ ಲೇಖನ.
ReplyDeleteರಜನೀಶ್ ಅವರ ಬಹುಮುಖ ಪ್ರತಿಭೆ ಮತ್ತು ವಿಚಾರಗಳನ್ನು ಸರಿಯಾದ ನಿಟ್ಟಿನಲ್ಲಿ ಗಮನಿಸಬೇಕಾಗಿದೆ. ಇಂತಹ ಸತ್ ಪ್ರಯತ್ನಕ್ಕೆ ನಿಮ್ಮ ಬರಹ ದಾರಿ ದೀಪವಾಗಲಿ.
ಆರಂಭದಲ್ಲಿ ನೀವು ಬರೆದ ಓ ಮನವೇ! ಹನಿಗವನ ಸ್ಪೂರ್ತಿದಾಯಕವಾಗಿತ್ತು.
ನಿಮ್ಮ ಹನಿಗವನ ಮತ್ತು ಓಶೋರವರ ಹಗ್ಗದ ಮೇಲಿನ ಧ್ಯಾನ
ReplyDeleteಎರಡೂ ಚೆನ್ನಾಗಿದೆ.
ಸ್ವರ್ಣಾ
ಪ್ರಭಾಮಣಿ ಯವರೆ
ReplyDeleteತುಂಬಾ ಉಪಯುಕ್ತ ಲೇಖನ....ಮನಸ್ಸೆಂಬುದು ಮರ್ಕಟ ನಿಜ....ಬ್ಲಾಗ್ ಆರಂಭಿಸಿದ ಹೊಸದರಲ್ಲಿ ಮನಸ್ಸಿನ ಬಗ್ಗೆ ಚಿಕ್ಕ ಕವನ ಬರೆದಿದ್ದೆ....
ಅದೆಷ್ಟೋ ಭಾವನೆಗಳ ತುಂಬಿ ಕೊಂಡಿರುವ
ಹೊಸ ಹೊಸ ಕನಸುಗಳ ಕಟ್ಟಿ ಕೊಂಡಿರುವ
ಕನಸು ನನಸಾಗಿಸಲು ಪ್ರೇರೆಪಿಸುತಿರುವ
ನಗು ಬಾರದಿದ್ದರೂ ಮುಗುಳ್ನಗೆಯ ಬೀರುವ
ಅಳಲಾಗದಿದ್ದರು ಒಮ್ಮೊಮ್ಮೆ ಅಳುವ
ತಪ್ಪು ಸರಿಗಳನೆಲ್ಲ ಜೀರ್ಣಿಸಿ ಕೊಂಡಿರುವ
ಬದುಕಿನ ದಾರಿಯಲಿ ಮುಖವಾಡವ ಧರಿಸಿರುವ
ಓ ಮನಸ್ಸೇ ನೀನೆಷ್ಟು ಕಠಿಣ ..........
ಚೆನ್ನಾಗಿದೆ ಮೇಡಂ.....ನನ್ನ ಬ್ಲಾಗ್ ಗೂ ಬನ್ನಿ...
ಓಶೋರ ವಿಚಾರಗಳು ತುಂಬಾ ಆಳದವು..
ReplyDeleteವೈಚಾರಿಕ ಲೇಖನ