Monday, January 16, 2012

ಮನದ ಅಂಗಳದಿ.........೭೫. ವಿವೇಕ‘ಆನಂದ’

‘ಒಂದೇ ಮರದ ಎರಡು ರೆಂಬೆಗಳ ಮೇಲೆ ಸುಂದರ ಗರಿಗಳನ್ನು ಹೊಂದಿದ ಎರಡು ಪಕ್ಷಿಗಳು ಕುಳಿತಿದ್ದವು. ಎರಡರ ನಡುವೆಯೂ ಗಾಢವಾದ ಸ್ನೇಹವಿದ್ದಂತಿತ್ತು. ಕೆಳ ರೆಂಬೆಯ ಮೇಲೆ ಕುಳಿತಿದ್ದ ಹಕ್ಕಿ ಹಣ್ಣುಗಳನ್ನು ತಿನ್ನುತ್ತಿತ್ತು. ಮೇಲಿನ ರೆಂಬೆಯ ಮೇಲಿದ್ದುದು ಮೌನವಾಗಿ, ಪ್ರಶಾಂತತೆಯಿಂದ ಕುಳಿತಿತ್ತು. ಅದು ಹಣ್ಣನ್ನು ತಿನ್ನುತ್ತಿರಲಿಲ್ಲ. ಕೆಳ ರೆಂಬೆಯ ಮೇಲೆ ಕುಳಿತು ಹಣ್ಣುಗಳನ್ನು ತಿನ್ನುತ್ತಿದ್ದ ಹಕ್ಕಿಯು ಒಂದಾದ ನಂತರ ಒಂದು ಸಿಹಿ ಮತ್ತು ಕಹಿ ಹಣ್ಣುಗಳನ್ನು ತಿನ್ನುತ್ತಿತ್ತು. ಸಿಹಿ ಹಣ್ಣನ್ನು ತಿಂದಾಗ ಅದಕ್ಕೆ ತುಂಬಾ ಸಂತೋಷವೆನಿಸುತ್ತಿತ್ತು. ಕಹಿ ಹಣ್ಣನ್ನು ತಿಂದಾಗ ಅದಕ್ಕೆ ಬಹಳ ದುಃಖವಾಗುತ್ತಿತ್ತು. ಆದರೆ ಮೇಲಿನ ರೆಂಬೆಯ ಮೇಲೆ ಕುಳಿತಿದ್ದ ಹಕ್ಕಿಯು ಪ್ರಶಾಂತತೆಯೇ ಮೂರ್ತಿವೆತ್ತಂತೆ ಪ್ರಭುತ್ವ ಪೂರ್ಣವಾಗಿತ್ತು. ಅದು ಸಿಹಿಯಾದ ಹಣ್ಣನ್ನೂ ತಿನ್ನುತ್ತಿರಲಿಲ್ಲ, ಕಹಿಯ ಹಣ್ಣನ್ನೂ ತಿನ್ನುತ್ತಿರಲಿಲ್ಲ. ಅದಕ್ಕೆ ಸಂತಸವೂ ಇಲ್ಲ, ದುಃಖವೂ ಇಲ್ಲ! ಕೆಳಗಿನ ರೆಂಬೆಯ ಹಕ್ಕಿ ಮೇಲಿನದನ್ನು ನೋಡಿತು. ಅದು ಎಷ್ಟು ಪ್ರಶಾಂತವಾಗಿದೆ! ಅದಕ್ಕೆ ಸಂತಸವೂ ಇಲ್ಲ, ದುಃಖವೂ ಇಲ್ಲ! ತಾನೂ ಹಾಗೇ ಇರಬೇಕೆಂಬ ಹಂಬಲದಲ್ಲಿ ಅದರ ಸಮೀಪಕ್ಕೆ ಹೋಗಲು ಆಶಿಸಿ ಸ್ವಲ್ಪ ಮೇಲಿನ ರೆಂಬೆಗೆ ಹಾರಿ ಕುಳಿತಿತು. ಪುನಃ ಹಣ್ಣುಗಳಿಂದ ಆಕರ್ಷಿತವಾಗಿ ಸಿಹಿ-ಕಹಿಯದನ್ನು ತಿಂದು ಸಂತಸ-ದುಃಖಗಳನ್ನು ಅನುಭವಿಸಲಾರಂಭಿಸಿತು. ಇದರಿಂದ ಬೇಸತ್ತು ಮೇಲಿನ ಹಕ್ಕಿಯಂತಾಗಬೇಕೆಂದು ಅದರ ಸಮೀಪ ಬಯಸಿ ಇನ್ನೂ ಸ್ವಲ್ಪ ಮೇಲೇರಿತು......ಹೀಗೇ ಮೇಲೇರುತ್ತಾ ತನ್ನದೇ ಜೀವವೆನಿಸುವ ಆತ್ಮ ಸಖನಾದ ಆ ಹಕ್ಕಿಯನ್ನು ಸಮೀಪಿಸಿದಾಗ...... ಏನಾಶ್ಚರ್ಯ! ತನ್ನಲ್ಲಿ ಏನೋ ಪರಿವರ್ತನೆಯಾಗುತ್ತಿದೆ! ಆ ಹಕ್ಕಿಯನ್ನು ಸುತ್ತುವರಿದಿದ್ದ ಪ್ರಭಾವಳಿ ತನ್ನನ್ನನ್ನೂ ಆವರಿಸುತ್ತಿದೆ! ತನ್ನಲ್ಲೇ ತಾನು ದ್ರವೀಕರಿಸಿ ಲಯವಾಗುತ್ತಿರುವ ಭಾವ! ನಿಜ ತನ್ನ ಅಸ್ಥಿತ್ವವೇ ಇಲ್ಲವಾಗುತ್ತಿದೆ! ಶೂನ್ಯತೆಯ ಅನುಭವವಾಗುತ್ತಿದೆ. ಚಲಿಸುತ್ತಿರುವ ಹಸಿರು ಎಲೆಗಳ ನಡುವೆ, ಪ್ರಶಾಂತವಾಗಿ ಗಾಂಭೀರ್ಯದಿಂದ ಕುಳಿತಿರುವ ಆ ಹಕ್ಕಿಯ ಪ್ರತಿಫಲನವೇ ತಾನೆನಿಸುತ್ತಿದೆ! ಇದೆಲ್ಲಾ ಆ ಹಕ್ಕಿಯ ವೈಭವವೆ, ಅದರ ವರಪ್ರಸಾದವೇ ಆಗಿದೆ! ತಾನೀಗ ನಿರ್ಭಯ, ಸಂಪೂರ್ಣ ಸಂತೃಪ್ತ, ಪ್ರಶಾಂತತೆಯಿಂದ ಪವಿತ್ರತೆಯನ್ನು ಹೊಂದಿದ್ದೇನೆ........’

ಸ್ವಾಮಿ ವಿವೇಕಾನಂದರು ‘ಆತ್ಮದ ಆಯ್ಕೆ’ಯ ಬಗ್ಗೆ ವಿವರಿಸುತ್ತಾ ಈ ಕಥೆಯನ್ನು ಹೇಳುತ್ತಾರೆ. ಈ ಕಥೆಯು ಮನುಷ್ಯನ ಆತ್ಮದ ಚಿತ್ರಣವನ್ನು ನೀಡುತ್ತದೆ ಎನ್ನುವುದನ್ನು ಹೀಗೆ ವಿಷಧಪಡಿಸುತ್ತಾರೆ: ?ಮನುಷ್ಯನು ತನ್ನ ಜೀವನದಲ್ಲಿ ಸಿಹಿ ಮತ್ತು ಕಹಿಯ ಹಣ್ಣುಗಳನ್ನು ಸೇವಿಸುತ್ತಿದ್ದಾನೆ. ಇಂದ್ರಿಯಗಳ ಸುಖವನ್ನು ಪಡೆಯಲು, ಚಿನ್ನವನ್ನು ತನ್ನದಾಗಿಸಿಕೊಳ್ಳಲು, ಜೀವನದ ವೈಭೋಗಗಳನ್ನು ಅನುಭವಿಸಲು ಹುಚ್ಚೆದ್ದೆದ್ದು ಮುನ್ನುಗ್ಗುತ್ತಿದ್ದಾನೆ. ಉಪನಿಷತ್ತಿನಲ್ಲಿ ಮನುಷ್ಯನ ಮನಸ್ಸನ್ನು ರಥವನ್ನು ಎಳೆಯುವ ಹುಚ್ಚು ಕುದುರೆಗಳಿಗೆ ಹಾಗೂ ಆತ್ಮವನ್ನು ಸಾರಥಿಗೆ ಹೋಲಿಸಿದ್ದಾರೆ! ಜೀವನದ ವೈಭವಗಳನ್ನು ಹೊಂದಲು ಮುಗಿಬಿದ್ದಿರುವ ಮನುಷ್ಯನ ಸ್ಥಿತಿಯೂ ಇದೇ ಆಗಿದೆ. ಮಕ್ಕಳು ಭವಿಷ್ಯದ ಸುಂದರ ಕನಸುಗಳನ್ನು ಕಾಣುತ್ತಾರೆ. ವೃದ್ಧರು ತಮ್ಮ ಕಳೆದು ಹೋದ ಜೀವನದ ಬಗ್ಗೆ ಮೆಲುಕು ಹಾಕುತ್ತಿರುತ್ತಾರೆ. ಜೀವನದ ಸಂಕೀರ್ಣಬಲೆಯಿಂದ ಹೊರಬರುವುದನ್ನು ಮಾತ್ರ ತಿಳಿದಿರುವುದಿಲ್ಲ. ಸಾಮಾನ್ಯವಾಗಿ ಎಲ್ಲರ ಜೀವನದಲ್ಲಿ ಕಡುಕಷ್ಟಗಳ ನಡುವಿನಲ್ಲಿ ಸಂತಸದ ಕ್ಷಣಗಳೂ, ಸಂತೋಷದಿಂದ ಸಮಯ ಸಾಗುತ್ತಿರುವಾಗ ಹಠಾತ್ತನೆ ದುಃಖವೂ ಎದುರಾಗುತ್ತಿರುತ್ತದೆ. ಪ್ರಜ್ವಲಿಸುತ್ತಿರುವ ಸೂರ್ಯನನ್ನು ಮೋಡವು ಮರೆ ಮಾಡಿದಂತೆ! ಆ ಮೋಡವು ಸ್ವಲ್ಪ ಸರಿದಾಗ ಗೋಚರಿಸುವ ಕಿರಣವು ನಮ್ಮನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತದೆ. ನಮ್ಮ ಇಂದ್ರಿಯಾನುಭವದ ಸುಖಗಳಿಂದ ಆಚೆಗೆ, ನಮ್ಮ ವೈಭವದ ಜೀವನದಿಂದ ಪಡೆಯುವ ಸಂತಸ ಮತ್ತು ದುಃಖಗಳಿಂದ ಬಹಳ ದೂರಕ್ಕೆ, ಚಿನ್ನವನ್ನು ಸಂಪಾದಿಸಬೇಕು, ಆಸ್ತಿಯನ್ನು ಕೂಡಿಸಬೇಕು, ಹೆಸರು ಗಳಿಸಬೇಕು, ಪ್ರಸಿದ್ಧರಾಗಬೇಕೆಂಬ ತೀವ್ರ ಹಂಬಲಗಳಿಂದ ಆಚೆಗೆ ನಮ್ಮನ್ನು ಹೊತ್ತೊಯ್ಯುತ್ತದೆ. ಆ ಕಿರಣವನ್ನು ಕಂಡ ಕ್ಷಣದಲ್ಲಿ ಮನುಷ್ಯನು ಸ್ವಲ್ಪ ಕಾಲ ಸ್ಥಬ್ಧನಾಗಿ ಪ್ರಶಾಂತವಾಗಿ, ಗಂಭೀರವಾಗಿ ಕುಳಿತಿರುವ ಆ ಮತ್ತೊಂದು ಹಕ್ಕಿಯನ್ನು ಕಾಣುತ್ತಾನೆ! ಒಮ್ಮೆ ಆ ಕಾಂತಿಯನ್ನು ಕಣ್ತುಂಬಿಕೊಂಡ ಮನುಷ್ಯ ಮತ್ತೊಮ್ಮೆ ಸುಖ-ದುಃಖಗಳ ವರ್ತುಲದಲ್ಲಿ ಸಿಲುಕುತ್ತಾನೆ! ಇದು ಹೀಗೇ ಅನೇಕ ಭಾರಿ ಪುನರಾವರ್ತನೆಯಾಗಿ ಕಡೆಗೊಮ್ಮೆ ಸ್ಥತಪ್ರಜ್ಞವಾದ, ಸದಾ ಆನಂದದಿಂದ ವಿಹರಿಸುತ್ತಿರುವ ತನ್ನ ಅಂತರಾತ್ಮವನ್ನು ಸಮೀಪಿಸಿ ಅದರಲ್ಲಿ ಐಕ್ಯವಾಗುತ್ತಾನೆ!’

ಸ್ವಾಮಿ ವಿವೇಕಾನಂದರ ಭಾಷಣ ಮತ್ತು ಬರಹಗಳಿಂದ ಆಯ್ದ ಪ್ರಮುಖ ಭಾಗಗಳನ್ನು ಪಿ. ಸಿ. ಗಣೇಶನ್‌ರವರು `words of wisdom from SWAMY VIVEKANANDA’ ಎಂಬ ಪುಸ್ತಕದಲ್ಲಿ ಸಂಗ್ರಹಿಸಿ ಪ್ರಸ್ತುತಪಡಿಸಿದ್ದಾರೆ. ಅದರಲ್ಲಿನ ಒಂದು ಭಾಗವಾದ `choice of the soul’ ಅನ್ನು ಸ್ವಾಮಿ ವಿವೇಕಾನಂದರು ಉಪನಿಷತ್ತು, ಗೀತೆಗಳ ಸಾರವನ್ನು ಹದವಾಗಿ ಮಿಳಿತಗೊಳಿಸುತ್ತಾ ಮನಮುಟ್ಟುವಂತೆ ವಿವರಿಸಿದ್ದಾರೆ. ಈ ಕಥೆಯಿಂದ ಬಹಳವಾಗಿ ಪ್ರಭಾವಿತಳಾದ ನಾನು, ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಸ್ವಾಮಿ ವಿವೇಕಾನಂದರು ಈ ಜಗತ್ತು ಕಂಡ ಮಹಾನ್ ಚೇತನಗಳಲ್ಲಿ ಒಬ್ಬರು ಹಾಗೂ ಅನನ್ಯರು. ಕೇವಲ ನಾಲ್ಕು ದಶಕಗಳ ಸ್ವಲ್ಪ ಕಾಲ ಈ ಭೂಮಿಯ ಮೇಲೆ ಇದ್ದರೂ ತಮ್ಮ ವೇದಾಂತ ತತ್ವಜ್ಞಾನದಿಂದ ಮಾನವನ ಆಲೋಚನಾ ಶಕ್ತಿಗೇ ನೂತನ ಆಧ್ಯಾತ್ಮಿಕ ಆಯಾಮವನ್ನು ನೀಡಿದರು. ಅವರು ನೀಡಿದ ಪ್ರಮುಖ ಸಂದೇಶವಾದ: ‘` Awake, Arise and Stop not till the Goal is Reached’ ಅತ್ಯಂತ ಪ್ರಭಾವಶಾಲಿಯಾಗಿದೆ. ‘ವೀರನಂತೆ ಮುನ್ನಡೆ. ಯಾವುದರಿಂದಲೂ ಹಿಂತೆಗೆಯಬೇಡ. ನಾನು ಬಡವ, ನನಗೆ ಸ್ನೇಹಿತರಿಲ್ಲ ಎಂದು ಯೋಚಿಸಬೇಡ. ಹಣದಿಂದ ಮನುಷ್ಯ ಎಂದು ಯಾರು ಹೇಳಿದ್ದಾರೆ? ಯಾವಾಗಲೂ ಮನುಷ್ಯನಿಂದ ಹಣ ಸಂಪಾದನೆಯಾಗುತ್ತದೆ. ಈ ಜಗತ್ತೇ ಮಾನವನ ಶಕ್ತಿಯಿಂದ ಮಾಡಲ್ಪಟ್ಟಿದೆ........ ಈ ಸುಖ-ದುಃಖದಿಂದ ಕೂಡಿದ ಶರೀರ ಎಷ್ಟು ದಿನ ಬಾಳುವುದು? ನಿನಗೆ ಈ ಮಾನವ ಶರೀರ ಲಭಿಸಿರುವಾಗ ನಿನ್ನ ಆತ್ಮನನ್ನು ಜಾಗೃತಗೊಳಿಸು. ‘ನಾನು ನಿರ್ಭಯಾವಸ್ಥೆಯನ್ನು ಹೊಂದಿರುವೆ. ನಾನು ಆತ್ಮ. ನನ್ನ ಕೀಳು ಅಹಂಕಾರ ಶಾಶ್ವತವಾಗಿ ನಾಶಹೊಂದಿದೆ.......’ ಈ ಭಾವನೆಯಲ್ಲಿ ಪೂರ್ಣನಾಗು. ನಂತರ ಎಲ್ಲಿಯವರಗೆ ಈ ದೇಹವಿರುವುದೋ ಅಲ್ಲಿಯವರೆಗೂ ಇತರರಿಗೆ ಈ ನಿರ್ಭಯತೆಯ ಸಂದೇಶವನ್ನು ಸಾರು: ‘ಎದ್ದೇಳು, ಎಚ್ಚರಗೊಳ್ಳು, ಗುರಿ ಮುಟ್ಟುವವರೆಗೂ ನಿಲ್ಲಬೇಡ.’

ಪ್ರತಿವರ್ಷವೂ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಆಚರಿಸುವ ನಾವು, ಅವರ ೧೫೦ನೇ ಹುಟ್ಟಿದ ಹಬ್ಬವನ್ನು ಆಚರಿಸಿದ ಈ ಸಂದರ್ಭದಲ್ಲಿ ಅವರ ಸಂದೇಶಗಳಲ್ಲಿನ ಸತ್ವವನ್ನು ಅರಿತು, ಅರ್ಥೈಸಿಕೊಂಡು, ಅಳವಡಿಸಿಕೊಳ್ಳುವ ಪ್ರಯತ್ನಮುಖಿಗಳಾಗೋಣ.

8 comments:

  1. ಮೇಡಂ;ಆತ್ಮಜ್ಞಾನದ ಬಗ್ಗೆ ಸುಂದರ ಲೇಖನ.ದೀಪಕ್ ಚೋಪ್ರಾರವರ 'synchroDestiny'
    ಎನ್ನುವ ಪುಸ್ತಕವನ್ನು ಓದುತ್ತಿದ್ದೇನೆ.ನೀವು ಉಲ್ಲೇಖಿಸಿರುವ ಕತೆಗೂ ಅವರು ಆತ್ಮದ ಬಗ್ಗೆ ಹೇಳಿರುವುದಕ್ಕೂ ಬಹಳ ಸಾಮ್ಯವಿದೆ.ಅವರು ಕೆಳಗಿನ ಪಕ್ಷಿಯನ್ನು 'local mind' ಎಂದೂ,ಮೇಲಿನ ಪಕ್ಷಿಯನ್ನು 'non local mind which is connected to the universal mind' ಎನ್ನುತ್ತಾರೆ.ಸತ್ಯ ಒಂದೇ ಅಲ್ಲವೇ?
    ಬ್ಲಾಗಿಗೆ ಬನ್ನಿ.ನಮಸ್ಕಾರ.

    ReplyDelete
  2. ವಿವೇಕಾನಂದರ ಸಂದೇಶವನ್ನು ಮನದಟ್ಟಾಗುವಂತೆ ವಿವರಿಸಿದ್ದೀರಿ. ಧನ್ಯವಾದಗಳು.

    ReplyDelete
  3. ಪ್ರತೀಕ್ಷೆಯಲ್ಲಿ ವಿವೇಕ ಆನದ ನಮಗೆಲ್ಲಾ ದಿರಿ ದೀಪ.

    ಸ್ವಾಮಿ ವಿವೇಕಾನಂದರ ಸ್ಫೂರ್ತಿದಾಯಕ ಮಾತುಗಳಿಂದ ಇನ್ನಾದರೂ ನನ್ನ ಮನಸ್ಸು ತೆರೆದುಕೊಳ್ಳಲಿ...

    ನನ್ನ ಬ್ಲಾಗಿಗೂ ಸ್ವಾಗತ...

    ReplyDelete
  4. ವಿಚಾರವನ್ನು ಮನ ಮುಟ್ಟುವಂತೆ
    ತಿಳಿಸಿದ್ದಾಕ್ಕಾಗಿ ಧನ್ಯವಾದಗಳು.
    ಪುಸ್ತಕ ಹುಡುಕುತ್ತೇನೆ.
    ಸ್ವರ್ಣಾ

    ReplyDelete
  5. ಓದುತ್ತಾ ಓದುತ್ತಾ ಮನಸ್ಸು ಎಲ್ಲೋ ನೋಡುತ್ತದೆ, ಆ ವಿಶ್ವ ಮಾನವನ ಯೋಚನೆಗಳೇ ಹಾಗೆ, ಸದಾ ಹಸಿರು..... ನಿಮ್ಮ ಬರಹ ಓದುಗರ ಹಿಡಿದೊದಿಸುತ್ತದೆ....... ಬರೆಯುತ್ತಿರಿ....

    ReplyDelete
  6. ಚೆನ್ನಾಗಿದೆ.. ಜೊತೆಗೆ ಓದುಗನಿಗೆ ಸ್ಪಷ್ಟವಾಗಿ ಅರ್ಥವಾಗುವಂತೆ ವಿವರಣೆ....ಸಕಾಲಿಕ- ಸುಂದರ ಬರಹ...

    ReplyDelete
  7. ಉತ್ತಮ ಲೇಖನ... ಮನಸ್ಸಿಗೊ೦ದು ವಿಚಾರಪೂರ್ಣ ಆನ೦ದದ ಕಿರಣ..!!
    ವ೦ದನೆಗಳು.

    ReplyDelete