Sunday, July 1, 2012

ಮನದ ಅಂಗಳದಿ.........೯೯. ಪುನರ್ಜನ್ಮ


     ಯಾವುದನ್ನಾದರೂ ನಾವು ಬಹಳವಾಗಿ ಪ್ರೀತಿಸಿದರೆ ಅದನ್ನು ಸದಾ ನಮ್ಮದಾಗಿಸಿಕೊಳ್ಳುವ ಹಂಬಲ ನಮ್ಮಲ್ಲಿ ಉಂಟಾಗುತ್ತದೆ. ಜೀವನವನ್ನೂ ಅಷ್ಟೆ. ಈ ಜೀವನದ ಬಗ್ಗೆ ಒಂದು ಘಟ್ಟದಲ್ಲಿ ನಮಗೆ ಎಷ್ಟೊಂದು ತಾದ್ಯಾತ್ಮ ಉಂಟಾಗುತ್ತದೆ ಎಂದರೆ ನಮಗೆ ದೊರೆತಿರುವ ಈ ಜೀವನ ಹೀಗೇ ಮುಂದುವರೆಯುತ್ತಲಿರಬೇಕು. ಇದಕ್ಕೆ ಅಂತ್ಯವೇ ಬಾರದಿರಲಿ ಎಂದುಕೊಳ್ಳುತ್ತೇವೆ. ಅಂತ್ಯವಿದ್ದೇ ಇದೆ ಎನ್ನುವುದನ್ನು ಒಪ್ಪದ ಮನಸ್ಸು ಈ ಪಯಣ ಸಾಗುತ್ತಿರುವಾಗಲೇ ಮತ್ತೊಂದು ಜನ್ಮದ ಕಲ್ಪನೆಯಲ್ಲೂ ತೊಡಗಿಬಿಡುತ್ತದೆ. ಕವಿಗಳ ಮಾತೂ ಇದಕ್ಕೆ ಇಂಬುಗೊಡುತ್ತದೆ. ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೋಳ್, ಬನವಾಸಿ ದೇಶದೋಳ್ ಎನ್ನುವ ಆದಿಕವಿ ಪಂಪನ ಉಕ್ತಿಯನ್ನು ಪ್ರಾಥಮಿಕಶಾಲೆಯಲ್ಲಿ ಕಲಿಯುವಾಗ (ಬಾಯಿ ಪಾಠ ಮಾಡುವಾಗ ಎಂದರೆ ಹೆಚ್ಚು ಸೂಕ್ತವಾಗಬಹುದು!) ಬಹಳ ಸಂತಸಪಟ್ಟಿದ್ದೂ ಇದೆ.
       ಆದಿ ಶಂಕರರು ತಮ್ಮ ಉತ್ಕೃಷ್ಟ ಸಾಹಿತ್ಯ ಭಜಗೋವಿಂದಂನಲ್ಲಿ ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ ಎಂದು ಹೇಳಿದ್ದಾರೆ ಇಷ್ಟನ್ನೇ ತಿಳಿದುಕೊಂಡಾಗ ಓಹೋ, ಪುನರ್ಜನ್ಮ ಎನ್ನುವುದು ಖಚಿತ ಎನ್ನುವ ಅಭಿಪ್ರಾಯಕ್ಕೇ ಬರುತ್ತೇವೆ. ಮುಂದುವರೆದಂತೆ ಅವರು ದಾಟಲಸಾಧ್ಯವಾದ ಈ ಬದುಕೆಂಬ ಸಾಗರವನ್ನು ದಾಟಲು ಸಹಕರಿಸು ಓ ಪ್ರಭುವೇ ಎಂಬ ಕೋರಿಕೆಯನ್ನು ದಿವ್ಯ ಶಕ್ತಿಯ ಮುಂದಿಡುತ್ತಾರೆ. ಇದನ್ನು ಸ್ಥೂಲವಾಗಿ ಅರ್ಥೈಸದೇ ಆಂತರ್ಯವನ್ನು ಅರಿತರೆ, ಜನನ-ಮರಣ ಎಲ್ಲವೂ ಈ ನಮ್ಮ ಮನೋಭೂಮಿಕೆಯಲ್ಲೇ ಅಡಗಿದೆ. ಈ ಸ್ತರದಿಂದ ಮೇಲೇರುವಂತೆ ಕರುಣಿಸು ಎನ್ನುವ ಬೇಡಿಕೆಯನ್ನೂ ಮನಗಾಣುತ್ತೇವೆ.
    ಪುನರ್ಜನ್ಮವೆಂಬುದು ಅಹಂಕಾರದ ಮಾತು ಎಂದು  ಜಿಡ್ಡು ಕೃಷ್ಣಮೂರ್ತಿಯವರು ಹೇಳುತ್ತಾರೆ:
    ನೀವು ಮತ್ತೆ ಜನ್ಮತಾಳುತ್ತೀರಿ, ಬದುಕುತ್ತೀರಿ ಎಂಬ ವಿಶ್ವಾಸವನ್ನು ನಾನು ನಿಮಗೆ ನೀಡಬೇಕೆಂದು ಬಯಸುತ್ತೀರಿ. ಆದರೆ ಇಂಥಾ ಪುನರ್ಜನ್ಮದಲ್ಲಿ ವಿವೇಕವೂ ಇಲ್ಲ, ಆನಂದವೂ ಇಲ್ಲ. ಪುನರ್ಜನ್ಮದ ಮೂಲಕ ಅಮರತ್ವವನ್ನು ಬಯಸುವುದು ಮೂಲತಃ  ಅಹಂಕಾರದ ಮಾತು. ಅದು ಅಹಂಕಾರಮೂಲದ ಮಾತು ಆದುದರಿಂದಲೇ ಸತ್ಯವಲ್ಲ. ಪುನರ್ಜನ್ಮತಾಳಿ ಬದುಕು ಮುಂದುವರೆಸುವ ಬಯಕೆಯು ಬದುಕು ಮತ್ತು ವಿವೇಕಗಳಿಗೆ ಪ್ರತಿಯಾಗಿ ನೀವು ರೂಢಿಸಿಕೊಂಡಿರುವ ರಕ್ಷಣಾತ್ಮಕ ಆಸೆಯ ಇನ್ನೊಂದು ರೂಪವಷ್ಟೆ. ಇಂಥಾ ಹಂಬಲ ಭ್ರಮೆಗಳನ್ನಷ್ಟೇ ಮೂಡಿಸಬಲ್ಲದು. ಪುನರ್ಜನ್ಮ ಇದೆಯೋ ಇಲ್ಲವೋ ಎಂಬ ಪ್ರಶ್ನೆಗಿಂತ ವರ್ತಮಾನದಲ್ಲಿ ಪರಿಪೂರ್ಣತೆಯನ್ನು ಸಾಧಿಸುವುದು ಮುಖ್ಯ. ಬದುಕಿಗೆ ಪ್ರತಿಯಾಗಿ ನಿಮ್ಮ ಮನಸ್ಸು ಮತ್ತು ಹೃದಯಗಳು ರಕ್ಷಣೆಯ ಕೋಟೆ ಕಟ್ಟಿಕೊಂಡಿರುವವರೆಗೆ ಪರಿಪೂರ್ಣತೆ ಸಾಧ್ಯವಾಗುವುದಿಲ್ಲ. ಸ್ವರಕ್ಷಣೆಗಾಗಿ ಮನಸ್ಸು ಅತ್ಯಂತ ಸೂಕ್ಮವಾದ ತಂತ್ರಗಳನ್ನು ಹೂಡುತ್ತದೆ. ಸ್ವರಕ್ಷಣೆಯ ಭ್ರಮೆಯನ್ನು ಮನಸ್ಸು ತನ್ನಷ್ಟಕ್ಕೆ ತಾನೇ ಅರಿಯಬೇಕು. ಅಂದರೆ ನೀವು ಹೊಚ್ಚಹೊಸದಾಗಿ ಆಲೋಚಿಸುತ್ತಾ ಕ್ರಿಯೆಯಲ್ಲಿ ತೊಡಗಬೇಕು. ಪರಿಸರವು ನಿಮ್ಮ ಮೇಲೆ ಹೊರಿಸಿರುವ ಸುಳ್ಳು ಮೌಲ್ಯಗಳಿಂದ ಬಿಡುಗಡೆ ಪಡೆಯಬೇಕು..........
        ಪುನರ್ಜನ್ಮದ ಬಗ್ಗೆ ಜಿಡ್ಡು ಕೃಷ್ಣಮೂರ್ತಿಯವರು ಹೀಗೆ ಅಭಿಪ್ರಾಯ ಪಡುತ್ತಾರೆ:
        ಪುನರ್ಜನ್ಮ ಎಂದರೇನು ಎಂಬ ಸತ್ಯವನ್ನು ನೋಡೋಣ. ನೀವು ಪುನರ್ಜನ್ಮದ ಬಗ್ಗೆ ಏನು ನಂಬಿದ್ದೀರಿ, ಏನು ಓದಿದ್ದೀರಿ, ನಿಮ್ಮ ಗುರುಗಳೋ ಅಧ್ಯಾಪಕರೋ ಏನು ಹೇಳಿದ್ದಾರೆ ಎಂಬುದನ್ನಲ್ಲ, ಸತ್ಯವನ್ನು ಕಾಣಬೇಕು. ಸತ್ಯ ಮಾತ್ರ ನಿಮಗೆ ಬಿಡುಗಡೆಯನ್ನು ತಂದೀತೇ ಹೊರತು ನಿಮ್ಮ ಅಭಿಪ್ರಾಯಗಳಾಗಲೀ, ತೀರ್ಮಾನಗಳಾಗಲೀ ಬಿಡುಗಡೆಯನ್ನು ತರಲಾರವು. ನಾನು ಮರುಜನ್ಮವೆತ್ತುತ್ತೇನೆ ಎಂದು ನೀವು ಹೇಳುವಿರಾದರೆ ಆ ನಾನು ಎಂದರೇನು? ಅದು ಆಧ್ಯಾತ್ಮಿಕ ಘಟಕವೋ? ಅಥವಾ ಸಾತತ್ಯವುಳ್ಳದ್ದೋ? ನೆನಪು, ಅನುಭವ, ಜ್ಞಾನಗಳಿಂದ ಬೇರೆಯಾಗಿರುವಂಥದ್ದೋ?............... ಆಧ್ಯಾತ್ಮಿಕ ಘಟಕವೆಂದಾಗ ಮನಸ್ಸಿನ ವಲಯಕ್ಕೆ ಸೇರಿಲ್ಲದ್ದನ್ನು ಕುರಿತು ಹೇಳುತ್ತಿದ್ದೇವೆ ಎನ್ನುವುದು ಸ್ಪಷ್ಟವಾಗಿಯೇ ಇದೆ........... ಅದು ಆಧ್ಯಾತ್ಮಿಕ ಘಟಕವೇ ಆಗಿದ್ದರೆ ಕಾಲಾತೀತವಾಗಿರಬೇಕು. ಆದ್ದರಿಂದಲೇ ಅದಕ್ಕೆ ಸಾತತ್ಯವಾಗಲೀ ಮರುಹುಟ್ಟು ಆಗಲೀ ಇರಲು ಸಾಧ್ಯವಿಲ್ಲ. ಸಾತತ್ಯವಿರುವುದು ತನ್ನನ್ನು ತಾನು ಹೊಸತುಗೊಳಿಸಿಕೊಳ್ಳುವುದಾದರೂ ಹೇಗೆ? ನೆನಪಿನ ಮುಖಾಂತರ, ಆಸೆಯ ಮುಖಾಂತರ ಆಲೋಚನೆ ಮುಂದುವರೆಯುತ್ತಿರುವವರೆಗೆ ಹೊಸತಾಗುವುದು ಸಾಧ್ಯವಿಲ್ಲ. ಆದ್ದರಿಂದಲೇ ಯಾವುದು ಮುಂದುವರೆಯುತ್ತದೆಯೋ, ಸತತವಾಗಿ ಇರುತ್ತದೋ ಅದು ಸತ್ಯವನ್ನು ಅರಿಯಲು ಸಾಧ್ಯವಿಲ್ಲ.
         ಮತ್ತೆ ಹುಟ್ಟಿಬರುತ್ತೇವೆ ಎಂಬುದಕ್ಕೆ ನಾವೆಷ್ಟು ಒಗ್ಗಿಕೊಂಡುಬಿಟ್ಟಿದ್ದೇವೆ ಎಂದರೆ ಜೆಕೆಯವರ ಮಾತುಗಳನ್ನು ಜೀರ್ಣಿಸಿಕೊಳ್ಳುವುದೇ ಕಷ್ಟವೆನಿಸಿಬಿಡುತ್ತದೆ. ನಮ್ಮ ಕಲ್ಪನೆಗಳಿಗೆ ಪುಷ್ಟಿನೀಡುವ ಸುತ್ತಿನವರ ಮಾತುಗಳು, ಪತ್ರಿಕಾ ವರದಿಗಳು, ಟಿ.ವಿ. ಕಾರ್ಯಕ್ರಮಗಳು, ನಮ್ಮಲ್ಲಿಯ ಆಲೋಚನಾ ಶಕ್ತಿಯನ್ನೇ ಕುಗ್ಗಿಸಿಬಿಡುತ್ತದೆ. ಪುನರ್ಜನ್ಮ ಇದೆಯೋ ಇಲ್ಲವೋ ಎಂಬ ಪ್ರಶ್ನೆಗಿಂತ ವರ್ತಮಾನದಲ್ಲಿ ಪರಿಪೂರ್ಣತೆಯನ್ನು ಸಾಧಿಸುವುದು ಮುಖ್ಯ. ಎನ್ನುವ ಜೆಕೆಯವರ ಉಕ್ತಿ ನಮಗೆ ಮಾರ್ಗದರ್ಶಕವಾಗಲಿ.
      

3 comments:

  1. ಮೇಡಂ,

    ಮತ್ತೊಂದು ಅಮೋಘ ಬರಹಕ್ಕಾಗಿ ಧನ್ಯವಾದಗಳು.

    ಇಲ್ಲಿ ಎರಡು ಮಾತು, ಪುನರ್ಜನ್ಮ ಇದೆಯೋ ಇಲ್ಲವೋ ಎಂದು ವಾದಕ್ಕೆ ಬೀಳುವಷ್ಟು ಬುದ್ಧಿವಂತ ನಾನಲ್ಲ, ಆದರೂ ಇದರ ಬಗ್ಗೆ ನನ್ನ ಕಲ್ಪನೆ ಹೀಗಿದೆ.

    ಈ ಜನ್ಮದಲ್ಲಿ ನಾವುಗಳು ಪಾಪ ಕಾರ್ಯಗಳನ್ನು ಮಾಡುತ್ತಾ ಹೋದರೆ, ಮುಂದಿನ ಜನ್ಮದಲ್ಲಿ ಅದರ ದುಪ್ಪಟ್ಟು ಹೀನಾಯವಾಗಿ ಬದುಕುತ್ತೀರ, ಆದ್ದರಿಂದ ಈಗ ಲಭಿಸಿರುವ ಜನುಮದಲ್ಲದರೂ ಒಳ್ಳೆಯವಾರಗಿ ಬದುಕಿ, ಮಾನವೀಯತೆ ಮೆರೆಯಿರಿ ಎಂಬ ಸದುದ್ದೇಶದಿಂದ ಪೂರ್ವಿಕರು ಮಾಡಿರುವ ಕರ್ಮಸಿದ್ಧಾಂತದ ಭಾಗವೇ ಈ ಪುನರ್ಜನ್ಮ ಅನಿಸುತ್ತದೆ.

    ಜಿಡ್ಡು ಕೃಷ್ಣಮೂರ್ತಿಯವರ ದೃಷ್ಟಿಕೋನ ನನಗೆ ಸಮಂಜಸ ಅನಿಸಿತು.

    ReplyDelete
  2. Punarjanma ennuvudu nabikeya maatu!

    ReplyDelete
  3. ಮೇಡಂ;ಡಿ.ವಿ.ಜಿ.ಯವರು ಹೇಳಿದಂತೆ"ಮರಣದಿಂ ಮುಂದೇನು?ಪ್ರೆತವೋ!ಭೂತವೋ!ಮರಳಿ ಬಂದವರಿಲ್ಲ!ವರದಿ ತಂದವರಿಲ್ಲ!ಧರೆಯ ಬಾಳಿಗೆ ಅದರಿನೇಮ್?" ಹೌದಲ್ಲವೇ?ಬದರಿಯವರು ಹೇಳಿದ್ದು ಸಮಂಜಸ ಎನಿಸುತ್ತದೆ.ಈಗಿನ ಬದುಕನ್ನು ನಮಗೂ,ಇತರರೆಲ್ಲರಿಗೂ ಸಹನೀಯವನ್ನಾಗಿ ಮಾಡುವುದೇ ಮೂಲ ಮಂತ್ರವಾಗಬೇಕು ಎನ್ನುವುದು ನನ್ನ ಅಭಿಪ್ರಾಯ.ಬ್ಲಾಗಿಗೆ ಬನ್ನಿ.ನಮಸ್ಕಾರ.

    ReplyDelete