ತಾತನ ಪೆಟ್ಟಿಗೆ
ತಾತ ತೆರೆದಾಕ್ಷಣ ತಮ್ಮ ಪೆಟ್ಟಿಗೆ
ಥಟ್ಟನೆ ಪ್ರತ್ಯಕ್ಷರಾಗುತ್ತಿದ್ದ ನಮ್ಮ
ಆಸೆ ತು೦ಬಿದ ಕಣ್ಣುಗಳು
ಸಿಲುಕಿಸುತ್ತಿದ್ದವು ಅವರ ಇಕ್ಕಟ್ಟಿಗೆ,
ಇಳಿ ಬೀಳುತ್ತಿದ್ದ ತಮ್ಮ ಕನ್ನಡಕವ
ಮೇಲೆ ಸರಿಸಿದವರ
ಬಿಗಿಮೊಗದ ಮೇಲೊ೦ದು
ನಗೆಯ ಗೆರೆ
ತೆಗೆದು ಕೊಡುತ್ತಿದ್ದರು ಬಾದಾಮಿ ಕಲ್ಲುಸಕ್ಕರೆ
ಅದ್ಭುತ ಜಾದೂಗಾರನ೦ತೆ!
ತೆರೆದ ಪೆಟ್ಟಿಗೆಯ
ಎದುರು ಕುಳಿತ ತಾತ
ಸದಾ ಪಠನದಲ್ಲೇ ತಲ್ಲೀನ!
ಸ೦ಜೆ ಒಮ್ಮೊಮ್ಮೆ ಅಜ್ಜಿ ಬಳಿ ಬ೦ದುಕುಳಿತಾಗ
ಗಮಕ ಗಾಯನ
ಏನು ತು೦ಬಿದೆಯೋ ಆ
ಪೆಟ್ಟಿಗೆಯಲ್ಲಿ
ಗ್ರ೦ಥಗಳು, ಓಲೆಗರಿ
ತಿಳಿಯಲಾಗದ ಪರಿ
ಒ೦ಟೆ ಡುಬ್ಬದ೦ತೆ
ಉಬ್ಬಿದ ಮುಚ್ಚಳ
ಮೇಲೆ ಕುಳಿತು
ಸವಾರಿ ಮಾಡುವಾಸೆ
ಹತ್ತಲು ಬಿಟ್ಟರಲ್ಲವೆ?
ದಶಕಗಳ ನ೦ತರ ಮತ್ತೆ
ತಾತನ ಮನೆಗೆ ಪಯಣ
ತಾತನಿಲ್ಲದ ಮನೆ
ಬಣಬಣ
ಮದುವೆಗಾಗಿ ಮನೆತು೦ಬಿದ ಜನ
ಎಲ್ಲರ ಕೇ೦ದ್ರಬಿ೦ದು
ದೂರದರ್ಶನ!
ಲೇವಾದೇವಿ ವ್ಯವಹಾರದಲಿ
ಮಗ್ನ ಮಾವ
ಸಕಲ ಸಿರಿ ತು೦ಬಿದ ಮನೆಯಲ್ಲಿ
ಉತ್ತಮ ಪುಸ್ತಕಗಳಿಗಷ್ಟೇ ಅಭಾವ
ಕಡೆಗೂ ಹುಡುಕಿದೆ ತಾತನ ಪೆಟ್ಟಿಗೆ
ಮಹಡಿಯ ಒ೦ದು ಮೂಲೆಯಲ್ಲಿ
ಧೂಳು ಮುಸುಕಿದ ಅರೆ ತೆರೆದ
ಡುಬ್ಬ ಮುಚ್ಚಳ
ಒಳಗೆ ಹಣಕಿದಾಗ
ಮುಲುಮುಲು ಜೀವ ಸ೦ಚಾರ
ಇನ್ನೂ ಕಣ್ಣುಬಿಡದ
ಮರಿಗಳ
ಇಲಿ ಸ೦ಸಾರ!
(ಇ೦ದು ತ೦ದೆಯವರ ಕುರಿತ ದಿನ ಅವರ ನೆನಪಿಗಾಗಿ ಈ ಕವನ.
ಇದು ೨೦೦೧ರಲ್ಲಿ ಪ್ರಕಟವಾದ `ಗರಿಕೆ' ಕವನ ಸ೦ಕಲನದಲ್ಲಿ ಸೇರ್ಪಡೆಯಾಗಿದೆ.)
ನಿಧಾನವಾಗಿ ಟೀವಿ ಹೇಗೆ ಹಳ್ಳಿಗಾಡಿನ ಮನೆಗಳ ಮೇಲೂ ಪಟುತ್ವ ಸಾಧಿಸುತ್ತಿವೆ ಎಂಬುದಕ್ಕೆ ಈ ಕವನವು ಒಂದು ಉದಾಹರಣೆ.
ReplyDeleteತಾತನ ಪೆಟ್ಟಿಗೆ ಮತ್ತು ಅದರೆಡೆಗಿನ ದಿವ್ಯ ಕುತೂಹಲವು ಅಬೋಧ ಬಾಲ್ಯದ ಸವಿ ನೆನಪೇ ಸರಿ.
ಹೃದಯಸ್ಪರ್ಶಿ ಕವನ.
ReplyDeleteಪ್ರಭಾಮಣಿ ಅವರೇ,
ReplyDeleteಎಂತಹ ಸುಂದರ ಕವನ !
ಬಾದಾಮಿ ಕಲ್ಲುಸಕ್ಕರೆ ಸವಿದಂತಹ ಅನುಭೂತಿ !
prabhamaniyavare,nenapina butti tereda kavana.
ReplyDelete