ದಿನಾಂಕ: 02-07-2017ರ 'ವಿಶ್ವವಾಣಿ'ಯ 'ವಿರಾಮ'ದಲ್ಲಿ 'ನನ್ನ ಕ್ಯಾಮೆರಾ ನಂಟು!' ಎಂಬ ನನ್ನ ಲಲಿತ ಪ್ರಬಂಧವು 'ಕ್ಯಾಮೆರಾ ಪ್ರೇಮ' ಎನ್ನುವ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ. ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಓದಿ ಪ್ರತಿಕ್ರಿಯಿಸಿ❤️🙏
ನನ್ನ ಕ್ಯಾಮೆರಾ ನಂಟು!
ನನ್ನ ಬಾಲ್ಯದ ತಾಣವಾಗಿದ್ದ ನಮ್ಮ ಹಳೆಯ ಮನೆಯ ಗೋಡೆಗಳ ಮೇಲೆ ಮೂವತ್ತಮೂರು ಕೋಟಿ ದೇವತೆಗಳ ಒಂದಿಲ್ಲಾ ಒಂದು ಪಟಗಳೂ ಇದ್ದವು. ಆದರೆ ನರಮನುಷ್ಯರ ಫೋಟೋ ಒಂದಾದರೂ ಇರಲಿಲ್ಲ. ಅದರಿಂದಲೇ ನಾನು ಹುಟ್ಟುವ ಮೊದಲೇ ಹರನ ಪಾದಾರವಿಂವನ್ನು ಸೇರಿದ ನಮ್ಮ ಕುಟುಂಬದ ಹಿರಿಯರನ್ನು, ಮೂಲ ಬೇರುಗಳನ್ನು ಎಂದಿಗೂ ದೃಶ್ಯರೂಪದಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಏನಿದ್ದರೂ ಅವರ ಬಾಹ್ಯ ರೂಪದ ವರ್ಣನೆಗಳ ಆಧಾರದ ಮೇಲೆ ಮಸಕುಮಸಕು ಚಿತ್ರಗಳು ಮನಃ ಪಟಲದಲ್ಲಿ ಮೂಡಿ ಮಾಯವಾಗುತ್ತಿದ್ದವು. ನಮ್ಮ ಸೋದರತ್ತೆ ತಮಗೆ ವೃದ್ಧಾಪ್ಯ ಸಮೀಪಿಸುತ್ತಿದ್ದರೂ ತಮ್ಮ ತಂದೆಯನ್ನು ಅತ್ಯಂತ ಅಭಿಮಾನದಿಂದ ವರ್ಣಿಸುತ್ತಾ ಅವರ ಚಿತ್ರವನ್ನು ನಮ್ಮ ಚಿತ್ತದಲ್ಲಿ ಹಚ್ಚ ಹಸಿರಾಗೇ ಉಳಿಸಿದ್ದರು.
`ಆಹಾ ನಮ್ಮಪ್ಪನ ರೂಪವೇ ರೂಪ. ಎಳೆದಿಟ್ಟ ಸ್ಪ್ರಿಂಗಿನಂಥಾ ಬಿಗಿದ ತುಟಿಗಳು, ಗರುಡಪಕ್ಷಿ ಕೊಕ್ಕಿನಹಾಗೆ ಎತ್ತರವಾಗಿ ಬಾಗಿದ್ದ ಮೂಗು, ಕಮಲದಂಥಾ ಕಣ್ಣುಗಳು, ಉಬ್ಬಿದ ವಿಶಾಲವಾದ ಹಣೆ, ಕೊಬ್ಬರಿ ಗಿಟುಕಿನಂಥಾ ಕಿವಿಗಳು,.....’ ನಾನೊಬ್ಬ ಚಿತ್ರಕಾರಳಾಗಿದ್ದರೆ ಪದೇಪದೇ ಕೇಳಿ ನನ್ನೊಳಗೆ ಅಚ್ಚೊತ್ತಿದ ಆ ವರ್ಣನೆಯನ್ನು ಚಿತ್ರವಾಗಿಸಿ ಬಿಡ್ತಿದ್ದೆನೇನೋ! ಆದರೆ ನನ್ನ ದೌರ್ಭಾಗ್ಯವೋ, ಚಿತ್ರಕಲಾ ಜಗತ್ತಿನ ಸೌಭಾಗ್ಯವೋ ನನಗಂತೂ ಆ ವಿದ್ಯೆಯೂ ಸಿದ್ಧಿಸಲೇ ಇಲ್ಲ. ಆದರೆ ನಮ್ಮ ಮುಂದಿನ ಪೀಳಿಗೆಯ ಪಾಡು ನನ್ನಂತಾಗಬಾರದಲ್ಲಾ ಎಂಬ ಸದಾಶಯದಿಂದಲೋ ಏನೋ ನನಗೆ ಛಾಯಾಚಿತ್ರವನ್ನಾದರೂ ತೆಗೆಯಲೇಬೇಕೆಂಬ ಮಹದಾಸೆ ಆಗಿನಿಂದಲೇ ಕಾಡಲಾರಂಭಿಸಿತು. ಅದು ಕುಡಿಯೊಡೆದದ್ದು ಮೊದಲು ನನ್ನ ಫೋಟೋ ತೆಗೆಸಿಕೊಳ್ಳಬೇಕೆಂಬ ಹಂಬಲದಿಂದಲೇ! ಆಗೆಲ್ಲಾ ಫೋಟೋ ತೆಗೆಸಿಕೊಳ್ಳಲು ಸ್ಟುಡಿಯೋಗೇ ಹೋಗಬೇಕಿತ್ತು. ನಮ್ಮದೋ ಸಮೀಪದ ಪಟ್ಟಣಕ್ಕೆ ಬಸ್ಸಿನ ಸೌಲಭ್ಯವೂ ಇಲ್ಲದ ಒಂದು ಕುಗ್ರಾಮ. ನನ್ನ ಮೊದಲ ಫೋಟೋ ತೆಗೆಸಿಕೊಳ್ಳಲು ನಾನು ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯವರೆಗೂ ಕಾಯಬೇಕಾಯ್ತು! ನಮಗೆ ಏಳನೇ ತರಗತಿ ಪರೀಕ್ಷೆಯ ಸೆಂಟರ್ ನಮ್ಮ ತಾಲ್ಲೂಕಿನ ಹೆಡ್ ಕ್ವಾರ್ಟರ್ ಆದ ಸಮೀಪದ ಎಂದರೆ ಐದು ಮೈಲಿ ದೂರದ ( =ಎಂಟುಕಿ.ಮೀ., ಆಗೆಲ್ಲಾ ದೂರವನ್ನು ಮೈಲಿಗಳಲ್ಲೇ ಹೇಳುತ್ತಿದ್ದುದು!) ಪಟ್ಟಣದಲ್ಲೇ ಇತ್ತು. ಪರೀಕ್ಷೆ ಬರೆಯುವುದಕ್ಕೆ ನಾವೆಲ್ಲಾ ಪಟ್ಟಣದಲ್ಲೇ ವಾಸ್ತವ್ಯ ಹೂಡಿದ್ದ ನಮ್ಮ ಹೆಡ್‍ಮಾಸ್ಟರ ಮನೆಯಲ್ಲೇ ಉಳಿದುಕೊಂಡಿದ್ದೆವು. ನನಗೋ ಹೇಗೂ ಪಟ್ಟಣಕ್ಕೆ ಬಂದಿದೀವಿ, ಪರೀಕ್ಷೆ ಮುಗಿದರೆ ಸಾಕು ಫೋಟೋ ತೆಗೆಸಿಕೊಳ್ಳಲೇಬೇಕೆಂಬ ಹಂಬಲ. ನಮ್ಮೊಟ್ಟಿಗೇ ಓದಲು ಬರುತ್ತಿದ್ದ ಹೆಡ್‍ಮಾಸ್ಟರ ಪಕ್ಕದ ಮನೆಯ ಹುಡುಗಿಯ ಸ್ನೇಹ ಸಂಪಾದಿಸಿ ಫೋಟೋ ಸ್ಟುಡಿಯೊ ಎಲ್ಲಿದೆ ಎಂದು ತಿಳಿದುಕೊಂಡು ನನ್ನ ಇಷ್ಟಕಾಮ್ಯಾರ್ಥ ಸಿದ್ಧಿಗಾಗಿ ಕಾಯಲಾರಂಭಿಸಿದೆ!
ಬಂದೇ ಬಂದಿತು ಸುಂದರ ದಿನವು! ನನ್ನ ಚರಿತ್ರೆಯ ಪುಟಗಳಲ್ಲಿ ದಾಖಲಾಗಿರುವ ಆ ದಿನ ನನಗಿನ್ನೂ ನೆನಪಿದೆ. ಹುಟ್ಟಿದಾರಭ್ಯ ನಾನೆಂದೂ ಕಾಣದ ಆ ಸ್ಟುಡಿಯೋ ಎಂಬ ಮಾಯಾಮಂದಿರದಲ್ಲಿ ನಾವು ಮೂವರು ಗೆಳತಿಯರು ಇದ್ದುದರಲ್ಲೇ ಹೊಸದಾದ ಉದ್ದ ಲಂಗ ರವಿಕೆ ಧರಿಸಿ, ತಲೆಗೆ ಚೆನ್ನಾಗಿ ಎಣ್ಣೆ ಹಚ್ಚಿಕೊಂಡು ನಮಗೆ ತಿಳಿದಂತೆಯೇ ಇದ್ದುದರಲ್ಲಿ ಸ್ವಲ್ಪ ಕಡಿಮೆಯೇ ಸೊಟ್ಟಪಟ್ಟಾದ ಎರಡು ಜಡೆ ಹೆಣೆದು, ಹೂ ಮುಡಿದುಕೊಂಡು ನಿಂತಾಗ ಫೋಟೋಗ್ರಾಫರ್ ಎಂಬ ಮಾಂತ್ರಿಕ ಆ ಕಾಲದ ಸ್ಟೈಲಿನಂತೆ ಎಡಗೈ ನೇರವಾಗಿಸಿ ಬಲಗೈಯನ್ನು ಬಾಗಿಸಿ ಎಡಗೈ ಮೊಣಕೈಕೀಲಿನ ಮೇಲಿರಿಸಿ ಪರದೆಯ ಮುಂದೆ ಸಾಲಾಗಿ ನಿಲ್ಲಿಸಿದರು. ಎದುರಿಗಿದ್ದ ಎರಡು ಛತ್ರಿಗಳ ಅಡಿಯಿಂದ ಝಗ್ಗನೆ ಬೆಳಕು ಮೂಡಿದಂತೆ ಆ ಜಾದೂಗಾರ ಮಧ್ಯಭಾಗದ ಸ್ಟ್ಯಾಂಡ್ ಮೇಲಿದ್ದ ಕಪ್ಪು ಬಟ್ಟೆಯಡಿ ಅವಿತುಕೊಂಡು, `ಸರಿದುಕೊಂಡು ಹತ್ತಿರಕ್ಕೆ ನಿಂತುಕೊಳ್ಳಿ, ಹಾ! ಹಾಗೇ, ರೆಡಿ, ಸ್ಮೈಲ್’ ಅಂತ ಏನೇನೋ ಹೇಳ್ತಾ ಛಕ್ ಎನಿಸೇಬಿಟ್ಟರು. `ಒಂದು ವಾರ ಬಿಟ್ಟು ಬನ್ನಿ’ ಎಂದೇನೋ ಹೇಳಿ ಕಳಿಸಿದರು. ಆದರೆ ಆ ಒಂದು ವಾರವೇ ನಮಗೊಂದು ವರ್ಷವೆನಿಸಿ, ಮನೆಯಲ್ಲಿ ಕಾಡಬೇಡಿ ಫೋಟೋ ತಂದು ನೋಡುವ ಹೊತ್ತಿಗೆ ಸಾಕುಸಾಕಾಗಿತ್ತು! ನಂತರ ನಾನು ಫೋಟೋ ತೆಗೆಸಿಕೊಂಡದ್ದು ಎಸ್.ಎಸ್,ಎಲ್.ಸಿ.ಯ ಸೆಂಡ್ ಆಫ್ ದಿನವೇ! ಅದೂ ಗ್ರೂಪ್ ಫೋಟೋ! ನನ್ನ ಈ ಅಪರೂಪದ ಫೋಟೋಗಳನ್ನು ನೋಡಿದಾಗಲೆಲ್ಲಾ ಫೋಟೊ ತೆಗೆಸಿಕೊಳ್ಳಬೇಕು ಎನ್ನುವುದರೊಟ್ಟಿಗೆ ನಾನೂ ಹೀಗೇ ಫೋಟೋ ತೆಗೀಬೇಕು ಎನ್ನುವ ಆಸೆಯೂ ಉತ್ಕಟವಾಗುತ್ತಿತ್ತು. ನಾನೇ ಫೋಟೋ ತೆಗೆಯಲು ನನ್ನದೇ ಸ್ವಂತ ಕ್ಯಾಮೆರಾದ ಅಗತ್ಯವಿತ್ತು. ಆದರೆ ಸಾಧ್ಯತೆ?
ನಾನು ಮೊಟ್ಟಮೊದಲು ಕ್ಯಾಮೆರಾ ಸ್ಪರ್ಶಿಸುವ ಅವಕಾಶ ಸಿಕ್ಕಿದ್ದು ನಾನೆಂದೂ ಕಾಣದಿದ್ದ ಆ ಮಹಾನ್ ನಗರದ ಕಾಲೇಜಿಗೆ ಹೋದಾಗಲೇ! ನಾನು ಮೆರಿಟ್ ಆಧಾರದ ಮೇಲೆ ಆಯ್ಕೆಯಾಗಿ ಹೋಗಿದ್ದ ಆ ನಮ್ಮ ರೆಸಿಡೆನ್ಷಿಯಲ್ ಕಾಲೇಜಿನಲ್ಲಿ ಫೋಟೋಗ್ರಫಿ ಕಲಿಯುವ ಅವಕಾಶವೂ ಇತ್ತು. ಕ್ಯಾಮೆರಾ ಹಿಡಿದುಕೊಂಡು ಫೋಟೋ ತೆಗೆಯುವುದನ್ನೇನೋ ಕಲಿತೆ. ಆದರೆ ಆಗಿನ ಟೆಕ್ನಾಲಜಿಯಂತೆ ಡಾರ್ಕ್ ರೂಂನಲ್ಲಿ ಫೋಟೋ ವಾಶ್ ಮಾಡಿ ಪ್ರಿಂಟ್ ಹಾಕುವುದನ್ನು ಕಲಿಯಬೇಕಿತ್ತು. ಆದರೆ ಅದನ್ನು ಕಲಿಯಲು ನನ್ನೊಡನೆ ಬರಲು ಯಾವ ಹೆಂಗೆಳೆಯರೂ ಒಪ್ಪದಿದ್ದರಿಂದ ಆ ವಿದ್ಯೆಯೂ ಅಪೂರ್ಣವಾಗಿ ಕೇವಲ ಪ್ರೊಸೀಜರ್‍ಗಷ್ಟೇ ತೃಪ್ತಿಪಡಬೇಕಾಯಿತು. ಆ ಕಾಲಕ್ಕೆ ಒಬ್ಬ ಪರಿಪೂರ್ಣ ಫೋಟೋಗ್ರಾಫರ್ ಆಗುವುದರಿಂದಲೂ ವಂಚಿತಳಾದೆ. ಆದರೂ ನಾವು ಯಾವುದೇ ಪಿಕ್ನಿಕ್‍ಗೆ ಹೋಗುವಾಗಲೂ ಕಾಲೇಜಿನಿಂದ ಕ್ಯಾಮೆರಾವನ್ನು ಎರವಲು ತೆಗೆದುಕೊಂಡು ಹೋಗಬಹುದಾಗಿದ್ದುದರಿಂದ ಇದ್ದುದರಲ್ಲೇ ಸಮಾಧಾನ ಪಡಬಹುದಿತ್ತು. ಸ್ವಲ್ಪ ಡ್ಯಾಮೇಜಾದರೂ ಅದರ ಪೂರ್ಣ ಹಣ ಕಟ್ಟಬೇಕೆನ್ನುವುದು ಬಹಳ ಟೆನ್ಷನ್‍ಕಾರಕವಾಗಿತ್ತು! ಆದರೆ ಕ್ಯಾಮೆರಾ ಮೇಲಿನ ಮೋಹ ಸುಮ್ಮನಿರಲು ಆಸ್ಪದವೀಯುತ್ತಿರಲಿಲ್ಲ. ನಮ್ಮ ಫಿಸಿಕ್ಸ್ ಲ್ಯಾಬ್‍ನ ಡೆಮಾನ್ಸ್‍ಟ್ರೇಟರ್‍ರವರ ಜವಾಬ್ಧಾರಿಯಲ್ಲೇ ಕ್ಯಾಮೆರಾ ಇದ್ದುದರಿಂದ ಅವರನ್ನು ಕಾಡಿಬೇಡಿ ನಮ್ಮ ಹಳ್ಳಿಗೂ ಕ್ಯಾಮೆರ ತೆಗೆದುಕೊಂಡು ಹೋಗಿದ್ದೆ. ನಮ್ಮ ಪುಸ್ಸಿ, ಟಾಮಿ, ಶ್ಯಾಮು(ಎಮ್ಮೆಕರು), ಹಸು-ಕರು, ಗದ್ದೆ, ನಮ್ಮೂರ ಹೊಳೆಗಳೆಲ್ಲದರ ಫೋಟೋಗಳನ್ನೂ ತೆಗೆದದ್ದೂ ತೆಗೆದದ್ದೇ! ನಾನು ಹೋದಲ್ಲೆಲ್ಲಾ ನಮ್ಮ ಹಳ್ಳಿಯ ಮಕ್ಕಳೂ ನನ್ನನ್ನು ಹಿಂಬಾಲಿಸುತ್ತಾ, `ಪಟ ತೆಗೀತಾರೆ!’ ಎನ್ನುತ್ತಾ ಕಣ್ಣುಬಾಯಿ ತೆರೆದುಕೊಂಡು ನನ್ನನ್ನೇ ನೋಡುತ್ತಿದ್ದವು. ನಾನು ಅವರ ಪಾಲಿನ ಜಾದುಗಾರಳಾಗಿದ್ದೆ! ಆದರೆ ಈಗಿನಂತೆ ಮನಸ್ಸಿಗೆ ಬಂದಂತೆ ಫೋಟೋಗಳನ್ನು ತೆಗೆಯುವಂತಿರಲಿಲ್ಲ. ಒಂದುಸಾರಿ ರೀಲ್ ಹಾಕಿದರೆ ಆ ಕ್ಯಾಮೆರಾದರಲ್ಲಿ ಹದಿನೈದು ಫೋಟೋಗಳನ್ನು ಮಾತ್ರ ತೆಗೆಯಬಹುದಿತ್ತು. ರೀಲ್ ಬದಲಾಯಿಸುವಾಗಿನ ರಿಸ್ಕ್! ರೀಲ್ ತೆಗೆಯುವಾಗ ಸ್ವಲ್ಪ ಯಾಮಾರಿದರೂ ಎಕ್ಸ್‍ಪೋಸ್ ಆಗಿ ಒಂದು ಫೋಟೋನೂ ಬರುತ್ತಿರಲಿಲ್ಲ! ನಂತರ ರೀಲನ್ನು ಪ್ರಿಂಟ್ ಹಾಕಿಸಲು ಸ್ಟುಡಿಯೋಗೇ ಕೊಡಬೇಕು....... `ಪರರ ವಸ್ತು ಪಾಷಾಣ,’ಎನ್ನುವ ತತ್ವದ ಹಿರಿಯರಿಗೂ ಬೆಲೆಬಾಳುವ ವಸ್ತುವನ್ನು ಎರವಲು ತಂದಿದ್ದಾಳೆನ್ನುವ ಅಸಮಾಧಾನ. ಏನಿದ್ದರೂ ಎರವಲು ಎರವಲೇ! ನನ್ನದು ಎಂಬ ಸ್ವಂತ ಕ್ಯಾಮೆರಾದ ಹಂಬಲ ನನ್ನನ್ನು ತೀವ್ರವಾಗಿ ಕಾಡುತ್ತಲೇ ಇತ್ತು.
ನನ್ನ ಯಾವುದೇ ಆಸೆಗಳು, ಹೆಚ್ಚುವರಿ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲೂ ನಾನು ಆರ್ಜಿಸಬಹುದಾದ ಮೊದಲ ತಿಂಗಳ ಸಂಬಳಕ್ಕಾಗೇ ಕಾಯಬೇಕಿತ್ತು. ಅದಕ್ಕಾಗಿ ಬೇಗ(!) ನನ್ನ ಓದನ್ನು ಪರಿಸಮಾಪ್ತಿಗೊಳಿಸಿ ನಾನೊಂದು ಕೆಲಸಕ್ಕೆ ಸೇರಬೇಕಿತ್ತು. ನಮ್ಮ ಪ್ರೊಫೆಸರ್‍ಗಳೆಲ್ಲಾ ತಮ್ಮ ಹೆಸರುಗಳ ಹಿಂದೆ `ಡಾಕ್ಟರ್’ ಎಂದೂ ಮುಂದೆ ಪಿಹೆಚ್.ಡಿ. ಎಂದೂ ಬರೆದುಕೊಳ್ಳುತ್ತಿದ್ದುದರಿಂದಲೋ ಅಥವಾ ನನ್ನ ಹೆಸರಿನ ಹ್ರಸ್ವ ಪಿ.ಹೆಚ್.ಡಿ. ಎಂದೇ ಇದ್ದುದರಿಂದಲೋ ನನಗೂ ಪಿಹೆಚ್.ಡಿ. ಮಾಡಬೇಕೆಂಬ ತೀವ್ರವಾದ ಆಸೆಯಿತ್ತು. ನನ್ನ ಡಿಗ್ರಿ ಓದಿನ ನಾಲ್ಕು ವರ್ಷಗಳ ಅವಧಿಯಲ್ಲಿಯೂ ಅದನ್ನು ಬಹಳವಾಗಿ ಪೋಷಿಸಿಕೊಂಡು ಬಂದಿದ್ದೆ. ಪೂರ್ವ ತಯಾರಿಯೆಂಬಂತೆ ಲಭ್ಯ ಕಾಲಾವಧಿಯಲ್ಲೆಲ್ಲಾ ಗ್ರಂಥಾಲಯದಲ್ಲೇ ಬೀಡುಬಿಟ್ಟಿರುತ್ತಿದ್ದೆ. ನಮ್ಮ ಹಾಸ್ಟೆಲ್‍ನ ರಿಜಿಸ್ಟರ್‍ನಲ್ಲಿ ಸಹಿ ಮಾಡುವಾಗಲೂ `ಪಿ.ಹೆಚ್.ಡಿ.’(Ph.D) ಎಂದೇ ಮಾಡುತ್ತಿದ್ದೆ. ನನ್ನ ಎಡಬಿಡದ ಕ್ಯಾಮೆರಾ ಮೋಹ, `ಸಾಕು ನೀನಿನ್ನು ಕಾಲೇಜಿಗೆ ಮಣ್ಣು ಹೊತ್ತಿದ್ದು. ಸ್ವಾವಲಂಬಿಯಾಗಿ ಬೇಗ ನನ್ನನ್ನು ತೂಗಿಹಾಕಿಕೊ’ ಎಂದು ಬೆನ್ನುಬಿಡದ ಬೇತಾಳನಂತೆ ಕಾಡಲಾರಂಭಿಸಿತು. ಓದುವ ಆಸೆಯನ್ನು ಅಲ್ಲಿಗೇ ಮೊಟಕುಗೊಳಿಸಿ ಡಿಗ್ರಿಯ ರಿಸಲ್ಟ್ ಬರುವ ಮೊದಲೇ ಎಸ್.ಎಸ್,ಎಲ್.ಸಿ. ಅಂಕಗಳ ಆಧಾರದ ಮೇಲೆ ಕೇಂದ್ರಸರ್ಕಾರಿ ನೌಕರಿಯೊಂದಕ್ಕೆ ಸೇರಿಯೇ ಬಿಡುವಂತೆ ಬದುಕ ಬಟ್ಟೆಯನ್ನೇ ಬದಲಿಸಿಬಿಟ್ಟಳು ಈ ನನ್ನ ಮೋಹದ ಕಿನ್ನರಿ ಛಾಯಾಚಿತ್ರ ಗ್ರಾಹಕ ಸುಂದರಿ!
ಮೊದಲ ತಿಂಗಳ ವೇತನ ಕೈ ಸೇರುತ್ತಿದ್ದಂತೆಯೇ ಬಹುದಿನದ ಹರಕೆಯನ್ನು ತೀರಿಸುವ ಭಕ್ತನ ನಿಯತ್ತಿನ ಭಕ್ತಿಯ ಪರಾಕಾಷ್ಟೆಯಂತೆ ನನ್ನ ಪರಿಮಿತಿಯಲ್ಲಿಯೇ 100ರೂ ಕೊಟ್ಟು ಒಂದು ಕ್ಲಿಕ್‍ಥರ್ಡ್ (ಅಟiಛಿಞIII)ಕ್ಯಾಮೆರಾವನ್ನು ನನ್ನದಾಗಿಸಿಕೊಳ್ಳುವುದರಲ್ಲಿ ಸಮರ್ಥಳಾದೆ. ಅಂದಿನ ನನ್ನ ಸಡಗರ ವರ್ಣನೆಗೆ ನಿಲುಕದು. ಒಮ್ಮೆಗೆ ಹನ್ನೆರಡು ಫೋಟೋಗಳನ್ನು ಮಾತ್ರ ತೆಗೆಯಬಹುದಿದ್ದ ಆ ನನ್ನ ಕನಸಿನ ಸಾಕ್ಷಾತ್ಕಾರ ಸಾಧನಕ್ಕೆ ಮತ್ತೆ ಮತ್ತೆ ರೀಲ್‍ಗಳನ್ನು ತುಂಬಿಸಿ ನನ್ನಿಂದ ತಮ್ಮ ಛಾಯಾಚಿತ್ರವನ್ನು ತೆಗೆಸಿಕೊಳ್ಳಲೇ ಕಾದಂತಿದ್ದ ನನ್ನ ಮುದ್ದಿನ ಪ್ರಾಣಿಗಳು, ದೃಶ್ಯಗಳೆಲ್ಲವನ್ನೂ ಸೂರ್ಯಸ್ನೇಯಿಯಾಗಿ ಕ್ಲಿಕ್ಕಿಸಿಬಿಟ್ಟೆ. ನನ್ನ ಸೋದರತ್ತೆಯೊಬ್ಬರು ಇನ್ನೆಲ್ಲಿ ಯಾರು ಏನಂತಾರೋ ಎಂದು ನಾಚಿಕೆಯಿಂದ ನಮ್ಮ ಹಿತ್ತಲಿಗೆ ನನ್ನನ್ನು ಕರೆದುಕೊಂಡು ಹೋಗಿ ಯಾರಿಗೂ ಕಾಣದಂತೆ ತಮ್ಮ ಫೋಟೋಗಳನ್ನು ತೆಗೆಸಿಕೊಳ್ಳುತ್ತಿದ್ದರು! ಆದರೆ ಹಿರಿಯ ಸೋದರತ್ತೆ ಮಾತ್ರ ಒಂದೇ ಒಂದು ಚಿತ್ರವನ್ನು ತೆಗೆಸಿಕೊಳ್ಳೆಂದು ಗೋಗರೆದರೂ ಸುತಾರಾಂ ಒಪ್ಪಲಿಲ್ಲ. ಅವರ ಅನುಮತಿಯಿಲ್ಲದೇ ನಾನು ನನ್ನ ಅರ್ಕಾವಲಂಬಿಯಾದ ಬಿಂಬಗ್ರಾಹಿಯಿಂದ ಅವರ ಭಾವಚಿತ್ರವನ್ನು ತೆಗೆಯುವಂತೆಯೂ ಇರಲಿಲ್ಲ. ಅವರ ಮೊದಲ ಫೋಟೋವನ್ನು ತೆಗೆಯಲು ನನ್ನ ಎರಡನೆಯ ಫ್ಲಾಷ್ ಕ್ಯಾಮೆರಾಗಾಗಿಯೇ ಕಾಯಬೇಕಾಯ್ತು. ಪೂರ್ವ ನಿಯೋಜನೆಯಂತೆ ನನ್ನ ಮಗುವಿನ ನಾಮಕರಣದ ದಿನ ಉಡುಪನ್ನು ಸರಿಪಡಿಸಿಕೊಳ್ಳುವ ನೆಪಮಾಡಿ ಎಳೆಯ ಕಂದನನ್ನು, `ಸ್ವಲ್ಪ ಎತ್ತಿಕೊಂಡಿರು’, ಎಂದು ಅತ್ತೆಯ ಕೈಗೆ ಕೊಟ್ಟು ಪಕ್ಕದಲ್ಲಿ ನಿಂತಾಗ ನನ್ನ ತಮ್ಮ ಅನಿರೀಕ್ಷಿತವಾಗಿ (ಅವರಿಗೆ) ಕ್ಲಿಕ್ಕಿಸಿಬಿಟ್ಟ! ಹಸುಕಂದನನ್ನು ಎತ್ತಿದ್ದ ಅತ್ತೆ ಮುಖ ಮರೆಸಿಕೊಂಡು ಓಡುವಂತೆಯೂ ಇಲ್ಲ! ಈಗಲೂ ಆ ಚಿತ್ರವನ್ನು ನೋಡಿದಾಗ ಒಂದು ಕಾಲಕ್ಕೆ ಪರಮಸುಂದರಿಯಾಗಿದ್ದ ನನ್ನ ಅತ್ತೆಯ ವದನಾರವಿಂದದ ಮೇಲೆ ನಸುನಾಚಿಕೆಯಿಂದ ಕೂಡಿದ ಹುಸಿ ಮುನಿಸು ನಾಟ್ಯವಾಡುತ್ತಿದೆ ಎನಿಸುತ್ತದೆ.
ನಮ್ಮ ಸುತ್ತಿನ ಹಳ್ಳಿಗಳಲ್ಲೇ ಮೊದಲು ಡಿಗ್ರಿ ಓದಿದ ನನ್ನಕ್ಕ ಒಂದು ಹೊಸ ಕಾಲೇಜಿನ ಮೊದಲ ಬ್ಯಾಚಿನಲ್ಲಿ ಮೊದಲಿಗಳಾಗಿ ತೇರ್ಗಡೆ ಹೊಂದಿದ್ದರಿಂದ ಆ ನಗರದ ರೋಟರಿ ಕ್ಲಬ್‍ನವರು ಸನ್ಮಾನ ಮಾಡಿ ಕೊಟ್ಟಿದ್ದ ಒಂದು ಆಲ್ಬಂ ಚಿತ್ರಗಳನ್ನು ತುಂಬಿಸಿಕೊಳ್ಳಲೇ ಸಿದ್ಧವಿರುವಂತೆ ನಮ್ಮ ಮನೆಯ ಗೂಡೊಂದರಲ್ಲಿ ಕಾದು ಕುಳಿತಿತ್ತು. ನಾವೆಲ್ಲಾ ಸಂಭ್ರಮದಿಂದ ನನ್ನ ಕ್ಲಿಕ್ ಥರ್ಡ್ ಕ್ಯಾಮೆರಾದಿಂದ ತೆಗೆದ ಪುಟ್ಟಪುಟ್ಟ ಕಪ್ಪುಬಿಳುಪು ಚಿತ್ರಗಳಿಂದ ಆ ಆಲ್ಬಂನ ಹಸಿದ ಒಡಲೊಳಗೆಲ್ಲಾ ಹಸನಾಗಿ ಸಿಂಗರಿಸಿದೆವು. ಈಗಲೂ ನಮ್ಮ ನೆನಪುಗಳ ಪ್ರಥಮ ದಾಖಲೀಕರಣವಾದ ಆ ಆಲ್ಬಂ ತೆರೆದು ನೋಡುವುದೆಂದರೆ ಯಾವುದೋ ಕನಸಿನ ಲೋಕದೊಳಗೆ ಜಾರಿಹೋದಂತೆ ಭಾಸವಾಗುತ್ತದೆ!
ಈ ನಡುವೆ ನನ್ನ ಕ್ಯಾಮೆರೋತ್ಸಾಹದೊಂದಿಗೆ ಸಹಸ್ಪಂದನ ಹೊಂದಿದ ನನ್ನ ತಮ್ಮ ನಮ್ಮದೇ ಕಾಲೇಜನ್ನು ಸೇರಿದಾಗ ಫೋಟೋ ವಾಶ್ ಮಾಡಿ ಪ್ರಿಂಟ್ ಹಾಕುವುದನ್ನು ಕಲಿತು ನಮ್ಮ ಮನೆಯ ಅಟ್ಟವನ್ನೇ ಡಾರ್ಕ್ ರೂಂ ಮಾಡಿಕೊಂಡು ನನ್ನ ಕ್ಯಾಮೆರಾದಲ್ಲಿ ತೆಗೆದ ಪೋಟೋಗಳನ್ನು ತಾನೇ ವಾಷ್ ಮಾಡಿ ಪ್ರಿಂಟ್ ಹಾಕಲಾಂಭಿಸಿದ. ನಮ್ಮಣ್ಣನ ಮದುವೆಯ ಫೋಟೋಗಳನ್ನು ನನ್ನ ಕ್ಯಾಮೆರಾದಲ್ಲೇ ತೆಗೆದು ಅವನ್ನು ನನ್ನ ತಮ್ಮನೇ ಪ್ರಿಂಟ್ ಹಾಕಿದ್ದು, ಕೆಲವನ್ನು ಎನ್‍ಲಾರ್ಜ್ ಕೂಡ ಮಾಡಿದ್ದು ಆ ಕಾಲಕ್ಕೊಂದು ಚಾರಿತ್ರಿಕದಾಖಲೆಯೆಂದೇ ಅನಿಸಿತ್ತು. ಈಗಲೂ ಆಲ್ಬಂನಲ್ಲಿ ನಮ್ಮಣ್ಣನ ಮದುವೆಯ ಆ ಫೋಟೋಗಳನ್ನು ನೋಡುವಾಗ ನಮ್ಮ ಮೊಟ್ಟಮೊದಲ ಕ್ಲಿಕ್‍ಥರ್ಡ್ ಕ್ಯಾಮೆರಾದೊಂದಿಗಿನ ಸುಂದರ ಕ್ಷಣಗಳು ನೆನಪಾಗುತ್ತವೆ!
ನನ್ನ ಛಾಯಾ ಚಿತ್ರಗ್ರಾಹಣ ಚಾತುರ್ಯ ಪ್ರದರ್ಶನ ಬಿಸಿಲನ್ನೇ ಆಧರಿಸಿದ್ದುದು ಸ್ವಾಭಾವಿಕ ಚಿತ್ರ ವೈವಿದ್ಯಗಳನ್ನು ಸೆರೆಹಿಡಿಯಲು ನನಗೊಂದು ಬಹಳ ದೊಡ್ಡ ತಡೆಯಾಗಿತ್ತು. ಒಮ್ಮೆ ನನ್ನ ಅಣ್ಣನ ಐದು ವರ್ಷದ ಮಗ ಪಿಳ್ಳುಗುದ್ದಲಿ ಹಿಡಿದು ಬಹಳ ಹಿರಿಯನಂತೆ ಹಿತ್ತಲಲ್ಲಿ ಗಿಡಗಳಿಗೆ ಪಾತಿ ಮಾಡುವಂತೆ ಕೆತ್ತುತ್ತಿದ್ದಾಗ ಅವನಿಗೆ ಕಾಣದಂತೆ ಬೇಗ ಕ್ಯಾಮೆರಾ ತಂದು ಇನ್ನೇನು ಫೋಕಸ್ ಮಾಡಬೇಕೆನ್ನುವಾಗ ಪಿಳ್ಳುಗುದ್ದಲಿಯನ್ನು ದೂರ ಎಸೆದು ಕೈಗಳನ್ನು ನೇರವಾಗಿಸಿಕೊಂಡು ಅಟೆನ್ಷನ್ ಪೊಸಿಷನ್‍ನಲ್ಲಿ ನಿಂತುಬಿಟ್ಟ! ಸ್ಟುಡಿಯೋದಲ್ಲಿ ಇತ್ತಿಚೆಗೆ ಅವನ ಫೋಟೋ ತೆಗೆಸಿದ್ದರು! ಆಗ ಪೋಸ್ ಕೊಟ್ಟಿದ್ದರ ಪ್ರಭಾವವಿರಬಹುದು. ಅಂತೂ ನನ್ನ ಕ್ಯಾಮೆರಾ ನನ್ನನ್ನು ಕ್ಯಾಂಡಿಡ್ ಫೋಟೋಗ್ರಾಫರ್ ಆಗಲು ಆಸ್ಪದವೀಯುತ್ತಿರಲಿಲ್ಲ.
ಪಟ್ಟಣವೊಂದರಲ್ಲಿದ್ದ ಪತಿಗೃಹವನ್ನು ಪ್ರಥಮ ಭಾರಿಗೆ ಪ್ರವೇಶಿಸಿದಾಗ ಅವರ ಮನೆಯ ದೊಡ್ಡ ಹಜಾರದ ಗೋಡೆಯ ಮೇಲೆಲ್ಲಾ ಅಲಂಕರಿಸಿದ್ದ ನವವಿವಾಹಿತರ ಸಾಲುಸಾಲು ಫೋಟೋಗಳನ್ನು ನೋಡಿ ಆಶ್ಚರ್ಯಚಕಿತಳಾಗಿದ್ದೆ. ಮದುವೆಯಾದ ತಕ್ಷಣ ಆ ಕುಟುಂಬದ ಮೊದಲ ಕಾರ್ಯಕ್ರಮವೆಂದರೆ ನವದಂಪತಿಗಳು ಸಮೀಪದ ನಗರದಲ್ಲಿದ್ದ ಒಂದು ಪ್ರಸಿದ್ಧ ಸ್ಟುಡಿಯೋಗೆ ಹೋಗಿ ಕಪ್ಪುಬಿಳುಪಿನ ಪಾಸ್ಪೋರ್ಟ್ ಫೋಟೋ ತೆಗೆಸಿಕೊಳ್ಳುವುದು ಹಾಗೂ ಆ ಗೋಡೆಯ ಮೇಲೆ ತೂಗಿಹಾಕುವುದು! ನನಗೆ ಆ ಕ್ಷಣದಲ್ಲಿ ಮನೆಯ ಗೋಡೆಗಳ ಮೇಲೆ ರಾರಾಜಿಸುತ್ತಿದ್ದ ಮಗಳು-ಅಳಿಯಂದರು, ಮಗ-ಸೊಸೆಯಂದಿರು, ಅಪ್ಪ-ಅಮ್ಮ, ಅಜ್ಜಿ-ತಾತ,..... ಮುಂತಾದವರ ಚಿತ್ರಗಳು ಆ ಸಂಸಾರದ ನಾಗರಿಕ ಪ್ರಜ್ಞೆಯ ದ್ಯೋತಕವೆನಿಸಿತು. ಮುಂದಿನ ಹೆಜ್ಜೆಯಾಗಿ ನಾವೂ ಮರುದಿನವೇ ನಗರದ ಆ ಮಹಾನ್ ಸ್ಟುಡಿಯೋಗೆ ಹೊರಡುವ ಕಾರ್ಯಕ್ರಮ ನಿಗಧಿಯಾಯಿತು. ಫೋಟೋ ಬಂದಾಗ ನನ್ನವರಿಗೂ ನಗಲು ಬರುತ್ತದೆ ಎನ್ನುವುದು ತಿಳಿಯಿತು. (ಕ್ರಮೇಣ ಕ್ಯಾಮೆರಾದ ಎದುರಿಗೆ ಮಾತ್ರ ನಗು ಮೀಸಲೆನ್ನುವುದು ಖಾತ್ರಿಯಾಯಿತು!) ವೀಕ್ ಎಂಡ್ ವಿತ್ ರಮೇಶ್ ಕಾರ್ಯಕ್ರಮದ ಅಂತಿಮ ಘಟ್ಟದಂತೆ ಹಿರಿಜೋಡಿಗಳ ಚಿತ್ರಗಳ ಮೆರವಣಿಗೆಯಲ್ಲಿ ನಮ್ಮ ಚಿತ್ರವೂ ಪಾಲ್ಗೊಂಡಿತು! ಈಗ ಎಲ್ಲರೂ ತಮ್ಮತಮ್ಮ ಜೀವನವನ್ನರಸುತ್ತಾ ಪರ ಊರುಗಳನ್ನು ಸೇರಿ, ಮನೆಯೂ ಪರರ ಸ್ವಾಮ್ಯಕ್ಕೆ ಒಳಪಟ್ಟು ಗೋಡೆಯ ಮೇಲೆ ದಿಬ್ಬಣ ಹೊರಟಂತಿದ್ದ ಪಟಗಳೆಲ್ಲಾ ದಿಕ್ಕಾ ಪಾಲಾಗಿ ತಮ್ಮತಮ್ಮ ರೂಪದರ್ಶಿಗಳ ಗೂಡು ಸೇರಿವೆ. ನಮ್ಮ ಪಟವೂ ಕಳೆದ ದಿನಗಳನ್ನು ನೆನಪಿಸುತ್ತಾ ಶೋಕೇಸ್‍ನಲ್ಲಿ ಬೆಚ್ಚಗೆ ಕುಳಿತಿದೆ! ಒಮ್ಮೆ ನಗರದಲ್ಲಿ ಆ ಸ್ಟುಡಿಯೋಗಾಗಿ ವ್ಯರ್ಥ ಶೋಧ ನಡೆಸಿದೆ. ಹಳೆಯ ತಲೆಮಾರಿನ ನವಜೋಡಿಗಳ ಚಿತ್ರಗಳನ್ನು ದಾಖಲಿಸುತ್ತಿದ್ದ ಆ ಸ್ಟುಡಿಯೋ ಜಾಗದಲ್ಲಿ ಬೇರೊಂದು ಕಟ್ಟಡ ತಲೆಯೆತ್ತಿರುವುದನ್ನು ಕಂಡುಬಂದಿತು.
ಒಂದು ರೀತಿಯಲ್ಲಿ ಶ್ರಮದಾಯಕ ಹಾಗೂ ಆಗಿನ ನನ್ನ ಪರಿಮಿತಿಯಲ್ಲಿ ಹೆಚ್ಚು ಖರ್ಚುಕರವಾಗಿದ್ದರೂ ನನ್ನ ಫೋಟೋ ತೆಗೆಯುವ ಹವ್ಯಾಸವನ್ನು ಜತನವಾಗೇ ಕಾಪಿಟ್ಟುಕೊಂಡು ಬಂದಿದ್ದೆ. ವಿಜ್ಞಾನ-ತಂತ್ರಜ್ಞಾನಗಳ ಅಪರಿಮಿತ ಸಾಧನೆಗಳ ಪರಿಣಾಮವಾಗಿ ಮೊಬೈಲ್ ಎಂಬ ಮಾಯಾ ಸುಂದರಿ ಎಲ್ಲರ ಕರಸ್ಥಳಗಳಲ್ಲಿ ಇಂಬುಗೊಳ್ಳಲಾರಂಭಿಸಿದಳು. ನಮ್ಮ ಮನೆಗೂ ಕಾಲಿಟ್ಟ ಆ ಚಂಚಲ ಕನ್ನಿಕೆ ತನ್ನೊಡನೇ ಅಡ್ಡಲುತಂಗಿಯಾಗಿ ಕರೆತಂದ ಒಬ್ಬ ಫ್ಲಾಷ್ ಸುಂದರಿ ನನ್ನ ಎರಡನೇ ಪ್ರಿಯಸಖಿಯಾದಳು! ಮಕ್ಕಳು, `ಈಗ ಡಿಜಿಟಲ್ ಕ್ಯಾಮೆರಾಗಳು ಎಷ್ಟೊಂದು ಚೆನ್ನಾಗಿರೋವು ಬಂದಿವೆ. ಇನ್ನೂ ರೀಲ್ ಹಾಕ್ಕೊಂಡು ಎಣಿಸಿಕೊಂಡು ಫೋಟೋ ತೆಗೆಯೋ ಜಮಾನದಲ್ಲೇ ಇರಬೇಕಾ?’ ಎಂದು ಮತ್ತೊಬ್ಬ ಮಾಯಾಂಗನೆಯನ್ನು ಮನೆಗೆ ಕರೆತರುವ ಪೀಠಿಕೆ ಹಾಕಿದವು. ಮಕ್ಕಳ ಒತ್ತಡ ಮೇರೆ ಮೀರಿದಾಗ, `ದೃಶ್ಯಗಳನ್ನು ಕಣ್ಣಿನಲ್ಲಿ ಸೆರೆ ಹಿಡಿದು ಮನಸ್ಸಿನಲ್ಲಿ ಜೋಪಾನ ಮಾಡಿಕೋ ಬೇಕು.’ಎನ್ನುವ ನನ್ನದಲ್ಲದ ಮಾತನಾಡಿಬಿಟ್ಟೆ! ನನ್ನ ಆರ್ಥಿಕ ಸ್ಥಿತಿಯೇ ವಾ ಮಿತಿಯೇ ನನ್ನಿಂದ ಈ ಮಾತನಾಡಿಸಿರಲೂ ಬಹುದು. ಆದರೆ ಆ ನನ್ನ ಅಭಾವ ವೈರಾಗ್ಯ ಅಲ್ಪಾಯುವಾಯ್ತು. ಪರಿಣಾಮವಾಗಿ ಡಿಜಿಟಲ್ ಕೋಮಲೆಯ ಆಗಮನವಾಯಿತು. ಮನೆಯೊಳಗೆ ಸಾಲುಸಾಲಾಗಿ ಪ್ರವೇಶಿದ ಆಂಡ್ರಾಯ್ಡ್ ಮೊಬೈಲ್ಗಳ ಕಣ್ಣು ಕೋರೈಸುವ ಪ್ರಖರ ಪ್ರಭೆಯಲ್ಲಿ ಕ್ಯಾಮೆರಾಗಳ ಹಣತೆಯ ಬೆಳಕು ಮಸುಕಾಯಿತು. ಇತ್ತೀಚೆಗೆ ಇವಕ್ಕೆ ಸರಿಸಾಟಿಯಾದ ಸೊಫ್ಫಸ್ಟಿಕೇಟೆಡ್ ಕ್ಯಾಮೆರಾ ಮಕ್ಕಳ ಸ್ವಾಮ್ಯದಲ್ಲಿ ಮನೆಯಲ್ಲಿ ಸ್ಥಿರಸ್ಥಾಯಿಯಾಗಿದೆ. ಈಗ ಬೇಕೆಂದಾಗ ಎಲ್ಲೆಂದರಲ್ಲಿ ಫೋಟೋಗಳು, ಸೆಲ್ಫಿಗಳು, ವಿಡಿಯೋಗಳನ್ನು ಎಲ್ಲರಂತೆ ನನ್ನ ಮೊಬೈಲ್‍ನಿಂದಲೇ ತೆಗೆದು ಫೇಸ್‍ಬುಕ್, ಇನ್ಸ್ಟಾಗ್ರಾಮ್‍ಗಳಲ್ಲಿಯೂ ಹಾಕುತ್ತಿರುತ್ತೇನೆ. ವಾಟ್ಸಾಪ್‍ನಲ್ಲೂ ಓಡಾಡಿಸುತ್ತಿರುತ್ತೇನೆ. ಆದರೂ ನನ್ನ ಮೊದಲ ತೊದಲು ನುಡಿಯಷ್ಟೇ ಅಪ್ಯಾಯಮಾನವಾದ ನನ್ನ ಕ್ಲಿಕ್‍ಥರ್ಡ್‍ನ ಸ್ಥಾನವನ್ನು ನನ್ನ ಹೃದಯದಿಂದ ಈ ಯಾವುದರಿಂದಲೂ ಕಸಿಯಲಾಗಿಲ್ಲ. ಈಗಲೂ ನನ್ನ ಗತ ನೆನಪುಗಳನ್ನು ತನ್ನಲ್ಲಿಯೂ ತಾದ್ಯಾತ್ಮಗೊಳಿಸಿಕೊಂಡ ಅವಳು ನನ್ನ ಗುಂಡಿಗೆಯ ಕೋಣೆಯಲ್ಲಿ ಭದ್ರವಾಗಿ ನೆಲೆಯೂರಿದಂತೆ ನಮ್ಮ ಗೋದ್ರೇಜ್ ಬೀರುವಿನ ಸೇಫ್ಟಿಯೊಳಗೆ ವಿಶ್ರಮಿಸುತ್ತಿದ್ದಾಳೆ.
~ಪ್ರಭಾಮಣಿ ನಾಗರಾಜ
No comments:
Post a Comment