Friday, November 13, 2026

ಕವನ : 'ನದಿ ನಡೆದ ಹಾದಿ... '

 ಈ ಭಾನುವಾರದ (ಮೇ04,2025) ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕವನ


'ನದಿ ನಡೆದ ಹಾದಿ... ' ನಿಮ್ಮ ಪ್ರೀತಿಯ 

ಓದಿಗೆ🌼


'ಸಂಯುಕ್ತ ಕರ್ನಾಟಕ' ಪತ್ರಿಕಾ ಬಳಗಕ್ಕೆ ಧನ್ಯವಾದಗಳು🙏


🌾ನದಿ ನಡೆದ ಹಾದಿ...🥀


ಅಂದು

ಆ ಕುತೂಹಲಭರಿತ ಎಳವೆಯಲಿ

ಕಂಡಾಗಲೆಲ್ಲಾ

 ಹರಿವ  ನದಿಯ 

 ಕಾಡುತ್ತಿದ್ದುದೊಂದೇ ಪ್ರಶ್ನೆ 

ಹೇಗಾಗಿರಬಹುದು ಇದರ ಹುಟ್ಟು

ಮುಟ್ಟುವುದಾದರೂ ಇದೆಲ್ಲಿಗೆ?


ಒಂದೊಮ್ಮೆ

ಈ ಅಗಾಧ ಜಲರಾಶಿಯ 

 ದಡಗುಂಟ ನಡೆ ನಡೆದು  

ಹಿಮ್ಮುಖವಾಗಿ 

ತಲುಪಲೇ ಬೇಕೆಂಬಾಸೆ

ಉಗಮ ಸ್ಥಾನವ 


ನೋಡಬಾರದಂತೆ

ನದಿ ಮೂಲ ಋಷಿ ಮೂಲ

ಕಡೆಗಣಿಸಲಾಗುವುದೇ

ಬೆಳೆದ ಬೃಹತ್ ಆಲದ

ಕಣ ಸದೃಶ ಬೀಜವ 

'ನ್ಯಗ್ರೋಧ ಬೀಜಂ ಕೆಲಂ

ಸಿಡಿದುಂ ಪೆರ್ಮರವಾಗದೇ'


ಅದೋ ಅಲ್ಲೊಂದು 

ಪರ್ವತದ ಕೊರಕಲಿನಿಂದಿಳಿವ 

ಕಂಡೂ ಕಾಣದಂಥಾ

ಕಿರಿದಾದ ಜಲಧಾರೆ 

ಇಳಿದಿಳಿದು ಝರಿಯಾಗಿ ತೊರೆಯಾಗಿ

ಹಳ್ಳ, ಝರಿಗಳು ಸೇರಿ 

ಹೊಳೆಯಾಗಿ,

ಹರಿದಂತೆ ಹೆಬ್ಬಾಗಿ


ಬೆಟ್ಟ ಕೊಳ್ಳಗಳಲ್ಲಿ 

ಬೊಬ್ಬಿರಿದು ಧುಮ್ಮಿಕ್ಕಿ 

ಜಲಪಾತ ಸೃಷ್ಟಿಸಿ

ಭೋರ್ಗರೆದು ಬಂಡೆದ್ದು

ದಣಿವಾಯ್ತೆ?

ಬಯಲಲಿ ಬಿಡುಬೀಸಾಗಿ 

ಹರಡಿ ಹದ ಮೀರದೇ

ಭವ್ಯ ಗಾಂಭೀರ್ಯದ ಹರಿವಾಗಿ… 


ಮತ್ತಿದೇ ನದಿಗುಂಟ

ಪರಿಕ್ರಮಿಸಿ ಮುನ್ನಡೆದು

ಸುಳಿಗಳ ನಿರ್ಮಿಸುವ

ಸುತ್ತಿ ದ್ವೀಪವಾಗಿಸುವ

ಪರಿಕಂಡು ಬೆರಗಾಗಿ

ಪರಮಾದ್ಭುತಕೆ ಶಿರಬಾಗಿ

ಸಾಗಿ ಸಾಗಿ 

ಸೇರುವವರೆಗೂ 

ಸಾಗರದೊಳೊಂದಾಗಿ...


ಎಲ್ಲಿಯ ಆದಿ? ಮತ್ತೆಲ್ಲಿ ಅಂತ್ಯ?

ಹುಟ್ಟು-ಸಾವೆನ್ನುವುದು

ಈ ನೆಲಕಷ್ಟೆ ಸೀಮಿತವೆ

ಇಲ್ಲಿ ಮೂರ್ತತೆಯ ಮುಕ್ತಾಯ

ಮತ್ತೆಲ್ಲೋ ತೆರೆದ ಅಧ್ಯಾಯ


                               ~ಪ್ರಭಾಮಣಿ ನಾಗರಾಜ

ಲಲಿತ ಪ್ರಬಂಧ ' ಆಹಾ ಮುದ್ದು ಮಲ್ಲಿಗೆ!

 ಕಳೆದ ಆಗಸ್ಟ್2026ರ 'ಕಸ್ತೂರಿ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲಲಿತ ಪ್ರಬಂಧ ' ಆಹಾ ಮುದ್ದು ಮಲ್ಲಿಗೆ!' ನಿಮ್ಮ ಪ್ರೀತಿಯ ಓದಿಗೆ❤️🙏  


       ಶಾಂತಲಾ  Shanthala Dharmaraj  ಮೇಡಂ  ಅವರಿಗೆ ಹಾಗೂ 'ಕಸ್ತೂರಿ' ಪತ್ರಿಕಾ ಬಳಗಕ್ಕೆ ಧನ್ಯವಾದಗಳು🌹🙏


🌼ಆಹಾ ಮುದ್ದು ಮಲ್ಲಿಗೆ!🌼

    

                    

                  ಎಲ್ಲೇ ಇದ್ದರೂ ಮಲ್ಲಿಗೆಯರಳುವ ಕಾಲ ಬಂತೆಂದರೆ ನನ್ನ ಮನಸ್ಸು ನಮ್ಮೂರಿನತ್ತ ದೌಡಾಯಿಸುತ್ತದೆ. ನಮ್ಮೂರಿನ, ನಮ್ಮ ಮನೆಯ, ನಮ್ಮ ಹಿತ್ತಲಿನ ನನ್ನ ದುಂಡು ಮಲ್ಲಿಗೆಯ ಬಳ್ಳಿಗಳು ಸುತ್ತಿ ಹಬ್ಬಿರುವ, ಹಸಿರೇ ಕಾಣದಂತೆ ಹೂಗಳಿಂದಾವೃತವಾದ ಕೊಂಡಮಾವಿನ ಮರದ ಕೊಂಬೆಯ ಮೇಲಾಗಲೇ ಹತ್ತಿ ಕುಳಿತು ಹೂಬಿಡಿಸಲು ಪ್ರಾರಂಭಿಸಿಯೇಬಿಡುತ್ತೇನೆ. ʼಬಿರಿದ ಮಲ್ಲಿಗೆ ಕಂಡೊಡಂ ನೆನೆವುದೆನ್ನ ಮನಂ….ʼ ಮಲ್ಲಿಗೆಗೂ ಆದಿಕವಿ ಪಂಪನಿಗೂ ಪರಮ ಸ್ನೇಹ!


          ನಮ್ಮ ಹಿತ್ತಲಿನಲ್ಲಿ ಮಲ್ಲಿಗೆಗಳದೇ ಸಾಮ್ರಾಜ್ಯ. ದುಂಡುಮಲ್ಲಿಗೆ, ಸೂಜುಮಲ್ಲಿಗೆ, ಸುತ್ತುಮಲ್ಲಿಗೆ, ಇರುವಂತಿಗೆ, ಜಾಜಿ…ಬಳ್ಳಿಗಳು ಎಲೆಯೂ ಕಾಣದಂತೆ ಹೂಗಳನ್ನು ಅರಳಿಸಿ ನಳನಳಿಸುತ್ತಿದ್ದರೆ ಹಸಿರು ಚಪ್ಪರದಂತೆ ಕಂಗೊಳಿಸುತ್ತಿದ್ದ ನಿತ್ಯಮಲ್ಲಿಗೆ ಮಾತ್ರ ಅನಿತ್ಯ ಪುಷ್ಪವತಿಯಾಗಿದ್ದಳು! ಹಿತ್ತಲ ತುಂಬಾ ಹೂಗಳ ಒಡ್ಡೋಲಗ ನಡೆದಿದ್ದರೂ ನಮ್ಮತ್ತೆಗೆ ತನ್ನ ದುರ್ಬಲ ಕಂದನತ್ತಲೇ ತಾಯ ಚಿತ್ತವಿರುವಂತೆ ಪುಷ್ಪರಹಿತ ನಿತ್ಯಮಲ್ಲಿಗೆಯದೇ ಚಿಂತೆ. ಮಲ್ಲಿಗೆಯರಳುವ ಕಾಲ ಬಂತೆಂದರೆ ಹಿತ್ತಲ ತುಂಬಾ ಘಮವೋ ಘಮ. ಅದೇ ಸಮಯಕ್ಕೆ ಶಾಲೆಗೆ ಬೇಸಿಗೆಯ ರಜೆಯೂ ಬರುತ್ತಿದ್ದರಿಂದ ನಮಗಂತೂ ಬಿಡುವಿಲ್ಲದ ಸುಮಸುಂದರ ಕಾರ್ಯ! 


           ಈ ನಮ್ಮ ಒಲವಿನ ಪ್ರಿಯಲತೆ ಓಲಿಯೇಸೆ ಕುಟುಂಬೋದ್ಭವಳಾದ ಮಲ್ಲಿಗೆಯ ಕಾಲ ಪ್ರಾರಂಭವಾಯಿತೆಂದರೆ ʼಬಿಸಿಲೇರಿ ಹೂವೆಲ್ಲಾ ಬಾಡಿಹೋಗ್ತಿದೆ…ʼ ಎನ್ನುವ ಹಿತ್ತಲಿನ ಸಂಪೂರ್ಣ ಜವಾಬ್ಧಾರರಾದ ನಮ್ಮತ್ತೆಯ ಸುಪ್ರಭಾತದೊಂದಿಗೇ ನಮಗೆ ಬೆಳಗಾಗಿ ಕಣ್ಣುಬಿಡ್ತಿದ್ದುದು. ಆ ಏರು ಬಿಸಿಲಲ್ಲಿ ಮಲ್ಲಿಗೆಯ ಲತೆ ಹಬ್ಬಿದ ಮರವೇರಿ ಹೂ ಬಿಡಿಸುವಷ್ಟರಲ್ಲಿ ನಾವೂ ಬೆವರು ಬಸಿದು ಬಾಡಿಹೋಗುವುದು ನಿಶ್ಚಿತವಾಗಿತ್ತು! ಅತಿ ಹೆಚ್ಚು ಹೂ ಬಿಡುವ ಸೂಜುಮಲ್ಲಿಗೆ ಅಕ್ಕನ ಪಾಲಾದರೆ ನನ್ನದು ಹಿತಮಿತವಾದ  ದುಂಡು ಮಲ್ಲಿಗೆ. ಈ ಸೋಜಿಗದ ಸೂಜು ಮಲ್ಲಿಗೆಯು ಹಬ್ಬಿಸಿದ್ದ ಕೊಂಡಮಾವಿನ ಮರವೇ ಕಾಣದಂತೆ ಬಳ್ಳಿಗಳನ್ನು ಹೆಣೆದುಕೊಂಡಿದ್ದರಿಂದ ಅದನ್ನು ಏಣಿ ಹಾಕಿಕೊಂಡೇ ಹೂ ಬಿಡಿಸಬೇಕಾಗಿತ್ತು. ಅಕ್ಕ ಏಣಿ ಹತ್ತಿದರೆ ಕೆಳಗೆ ನಮ್ಮತ್ತೆ ಏಣಿ ಹಿಡಿದುಕೊಂಡು, ಆಗಾಗ ಬಿಡಿಸಿದ ಹೂಗಳನ್ನು ಹಾಕಲು ಹೂಬುಟ್ಟಿಯನ್ನು ಕೊಡುತ್ತಾ ಅವಳಿಗೆ ಸಹಕರಿಸುತ್ತಿದ್ದರು. ನಾನು ದುಂಡು ಮಲ್ಲಿಗೆ ಹಬ್ಬಿದ್ದ ಕೊಂಡಮಾವಿನ ಮರ ಹತ್ತಿ ರೆಂಬೆಗಳ ಮೇಲೆ ನಿಂತು ಹೂ ಬಿಡಿಸಿಕೊಂಡು ನಾನೇ  ಬುಟ್ಟಿಗೆ ಹಾಕಿಕೊಳ್ಳಬೇಕಾಗಿತ್ತು. ಕೆಲವೊಮ್ಮೆ ಅತ್ತೆ ʼಸಣ್ಣ ರೆಂಬೆಗಳನ್ನ ಹತ್ತ ಬೇಡ ಕಂದಾ, ಮರ ಗಟ್ಟಿ ಇರಲ್ಲ,ʼ ಎಂದು ಎಚ್ಚರಿಸುತ್ತಿದ್ದರು. ಅಲ್ಲೆಲ್ಲಾದರೂ ಹತ್ತಿರದಲ್ಲಿ ನಮ್ಮ ಪಡ್ಡೆಹುಡುಗರ ಪಡೆಯಿದ್ದು ʼಇವಳ ವಜನ್‌ಗೆ ದೊಡ್ಡ ರೆಂಬೆಯೂ ಮುರಿಯುತ್ತೆʼ ಎಂದು ಒಬ್ಬ ಕೂಗಿದರೆ ಮತ್ತೊಬ್ಬ ಮರಿ ಪಂಡಿತ ʼಮರವೇ ಧರಾಶಾಯಿಯಾಗಬಹುದುʼ ಎಂದು ದನಿಗೂಡಿಸಿ ಅತ್ತೆಯಿಂದ ʼಹೆಣ್ಣು ಮಕ್ಕಳಿಗೆ ಹೂ ಕೊಯ್ದುಕೊಡಕ್ಕೆ ಆಗಲ್ಲ, ಬರ್ತಾರಿಲ್ಲಿ ಕೀಟಲೆ ಮಾಡಕ್ಕೆʼ ಎಂದು ಬೈಸಿಕೊಳ್ಳುತ್ತಿದ್ದರು. ಇದಕ್ಕೆ ಪ್ರತೀಕಾರವಾಗಿ ನಾನೊಬ್ಬಳೇ ಸಿಕ್ಕಾಗ ʼಏಳು ಮಲ್ಲಿಗೆ ತೂಕದ ರಾಜಕುಮಾರಿʼ ಎಂದು ಚುಡಾಯಿಸದೆ ಬಿಡುತ್ತಿರಲಿಲ್ಲ. ಹೂ ಬಿಡಿಸಿದ ನಂತರ ಹೆಡಗೆಗಳ ತುಂಬಾ ಇರುತ್ತಿದ್ದ ಹೂವನ್ನು ಬುಟ್ಟಿಗಳಲ್ಲಿ ತುಂಬಿ ನಮ್ಮ ಬೀದಿಯ ಮನೆಗಳಿಗೆ ಕೊಟ್ಟುಬಂದು, ಮಲ್ಲಿಗೆಯಿಂದ ಆಕರ್ಷಿತರಾಗಿ ಮನೆಗೆ ಬರುವ ಹೆಣ್ಣುಮಕ್ಕಳಿಗೆ ದೋಣಿಯಂತೆ ಎತ್ತಿ ಹಿಡಿದ ಲಂಗದೊಳಗೆ ಹೂಹಾಕಿ ಉಡಿತುಂಬುವಷ್ಟರಲ್ಲಾಗಲೇ ನಮಗೆ ತಲೆ ಬಾಚಿ ಜಡೆ ಹೆಣೆದು ರಾತ್ರಿಯ ಮಲ್ಲಿಗೆ ಮೊಗ್ಗಿನ ದಂಡೆಯನ್ನು ಮುಡಿಸಿಯಾಗಿರುತ್ತಿತ್ತು. ಆಗ ನಮ್ಮ ಗಂಡುಪಿಳ್ಳೆಗಳು ʼಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂʼ ಎಂದು ಕಿಚಾಯಿಸುವ ಛಾನ್ಸನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ʼಹಾಗಂದ್ರೆ ಅರ್ಥ ಗೊತ್ತೇನ್ರೋ ನಿಮಗೆ?ʼ ಎಂದು ನಮ್ಮ ತಂದೆ ಕೇಳಿದರೆ ʼಅದೇ ಇನ್ನೂ ತಿಂಡೀನೇ ತಿನ್ನದೇ ಹೂ ಮುಡೀತಿದಾರೆʼ ಅಂತ ಎಂದು ಒಬ್ಬ ಮೇಧಾವಿ ಉತ್ತರಿಸಿದಾಗ ನಮ್ಮ ತಂದೆಗೆ ನಗು ತಡೆಯಲಾಗುತ್ತಿರಲಿಲ್ಲ. ಬೇರೆ ಯಾವುದಾದರೂ ಸಂದರ್ಭದಲ್ಲಿ ಆ ಗಾದೆಯ ಅಂತರಾರ್ಥವನ್ನು ವಿವರಿಸುತ್ತಿದ್ದರು. ಹೂವಿನ ವಿಲೇವಾರಿಯಾದ ನಂತರ ಉಳಿದ ರಾಶಿರಾಶಿ ಹೂವನ್ನು ಮಧ್ಯದಲ್ಲಿ ಒದ್ದೆ ಪಂಚೆಯ ಮೇಲೆ ಸುರಿದು ಕೊಂಡು ಸುತ್ತಲೂ ಮನೆಯ ಹೆಣ್ಣುಮಕ್ಕಳೆಲ್ಲಾ ಕುಳಿತು ಹೂಕಟ್ಟಿ ಗೋಡೆಮೇಲೆ ಎಡೆಬಿಡದಂತೆ ರಾರಾಜಿಸುತ್ತಿದ್ದ ದೇವರ ಪಟಗಳಿಗೆಲ್ಲಾ ಹಾರವನ್ನು ಹಾಕಿದ್ದೂ ಹಾಕಿದ್ದೇ! ಈ ನಡುವೆ ಒಂದು ದೊಡ್ಡ ಮಲ್ಲಿಗೆ ಹಾರವನ್ನು ಕಟ್ಟಿ ದೇವಸ್ಥಾನಕ್ಕೆ ಕಳಿಸಿಯೂ ಆಗಿರುತ್ತಿತ್ತು. ಮನೆಯ ಹೆಂಗೆಳೆಯರೆಲ್ಲಾ ಹೂ ಕಟ್ಟುತ್ತಾ ಕುಳಿತಾಗ ನಮ್ಮ ತಂದೆ ಮಲ್ಲಿಗೆಗೆ ಸಂಬಂಧಿಸಿದ ಅನೇಕ ಮಾಹಿತಿಗಳನ್ನು ತಿಳಿಸುತ್ತಿದ್ದರು.


              ಆದಿಕವಿ ಪಂಪನೇ ಅಲ್ಲದೆ ಕವಿ ಚಕ್ರವರ್ತಿ ಜನ್ನ, ಪುಷ್ಪಪ್ರಿಯ ಕವಿ ಹರಿಹರ ಎಲ್ಲರೂ ಮಲ್ಲಿಗೆಯನ್ನು ಕೊಂಡಾಡಿದ್ದಾರೆ. ಮಲ್ಲಿಗೆಯ ಅಂದವನ್ನು ಕಂಡು ಶಿವಲೀಲೆಗೆ ಬೆರಗಾಗುತ್ತಾನೆ ಹರಿಹರ. ಬಳ್ಳಿಯ ಹಸಿರು ಬಣ್ಣವೂ ಕಾಣದಷ್ಟು ಬಿಳಿ ಹೂಗಳಿಂದ ತುಂಬಿ ಹೋದ ಮತ್ತು ಕಂಪಿನ ನಿಧಿಯೆನಿಸಿದ್ದ ಮಲ್ಲಿಗೆಯ ಮೊಗ್ಗುಗಳನ್ನು ಕಂಡು ಮನ ತುಂಬಿ ಒಂದೊಂದು ಹೂವಿಗೂ ಒಂದೊಂದು ವ್ಯಕ್ತಿತ್ವವಿದೆ ಎಂದು ಭಾವಿಸುತ್ತಾ ಶಿವ ಪೂಜೆಗಾಗಿ ಹೂ ಬಿಡಿಸಿಕೊಳ್ಳುತ್ತಿದ್ದ…. ʼಎಂದು ಆವರು ಹೇಳುವಾಗ ನನಗೆ ಅಚಾನಕ್ಕಾಗಿ ʼಹಸಿರು ಗಿಡದ ತುಂಬಾ ಮೊಸರು ಚೆಲ್ಲಿದೆʼ ಎಂಬ ಒಗಟಿನ ನೆನಪಾಗುತ್ತಿತ್ತು.


            ಬೇಸಿಗೆ ರಜೆ ಕಳೆಯಲು ಕುಟುಂಬ ಸಮೇತರಾಗಿ ನಮ್ಮ ಮನೆಗೆ ಬರುತ್ತಿದ್ದ ಬಂಧುಗಳ ಮಹಿಳಾ ವೃಂದವೂ ನಮ್ಮೊಟ್ಟಿಗೆ ಕೈಜೋಡಿಸಿ ತಮ್ಮತಮ್ಮ ಹೆಣ್ಣುಮಕ್ಕಳನ್ನು ಮಲ್ಲಿಗೆಯಿಂದ ಅಲಂಕರಿಸಿ ಮುದಗೊಳ್ಳುತ್ತಿದ್ದರು. ʼಈ ಹಾಳು ಕ್ರಾಫ್‌ ಕಟ್‌ ಅನ್ನೋದು ಬರಕ್ಕೆ ಮೊದಲು ನಮ್ಮಪ್ಪ, ಚಿಕ್ಕಪ್ಪಂದಿರೆಲ್ಲಾ ಜುಟ್ಟನ್ನು ಗಂಟು ಕಟ್ಟಿಕೊಂಡು ಮಲ್ಲಿಗೆ ದಂಡೆ ಮುಡಿದುಕೊಳ್ತಿದ್ದರು. ನಮ್ಮ ಈ ಅಣ್ಣಂಗೂ ಮಲ್ಲಿಗೆ ಹೂವೆಂದರೆ ಪಂಚಪ್ರಾಣ. ಇವನೂ ಜುಟ್ಟು ತುಂಬಾ ಹೂ ಮುಡೀತಿದ್ದʼ ಎನ್ನುವುದನ್ನು ನಮ್ಮತ್ತೆ ತಪ್ಪದೇ ಹೇಳುವಾಗ ನಮಗಂತೂ ಆ ದೃಶ್ಯವನ್ನು ಕಲ್ಪಿಸಿಕೊಂಡು ನಕ್ಕೂನಕ್ಕೂ ಸಾಕಾಗುತ್ತಿತ್ತು. ಈಗಲೂ ನಮ್ಮ ತಂದೆ ಮಲ್ಲಿಗೆಯ ಕಾಲ ಬಂತೆಂದರೆ ತಮ್ಮ ಶೀಖೆಯ ಮೇಲೆ ತಪ್ಪದೇ ಒಂದು ಅರಳು ಮಲ್ಲಿಗೆಯನ್ನು ಇರಿಸಿಕೊಳ್ಳುತ್ತಿದ್ದರು. ಮನೆಯ ತುಂಬಾ ಮಲ್ಲಿಗೆಯದೇ ಪರಿಮಳ. ನಮಗಂತೂ ಮಲ್ಲಿಗೆಯ ಹೂಗಳನ್ನು ಬೊಗಸೆಯಲ್ಲಿ ತುಂಬಿಕೊಂಡು ಆಘ್ರಾಣಿಸುವುದೆಂದರೆ ಬಹಳ ಖುಷಿ. ʼಹೂಗಳನ್ನ ಮೂಸಬೇಡಿ ಮಕ್ಕಳೇ. ಪೀನಾಸಿ ರೋಗ ಬರುತ್ತೆʼ ಅಂತ ಅಮ್ಮ ಆಗಾಗ ಎಚ್ಚರಿಸುತ್ತಲೇ ಇರುತ್ತಿದ್ದರು. ಈ ʼಪೀನಾಸಿ ರೋಗʼ ಎಂದರೇನೆಂದು ಬಹಳ ದಿನಗಳ ನಂತರ ಇತ್ತೀಚೆಗೆ ಸರ್ಚಿಸಿದಾಗ ʼಮೂಗಿಗೆ ವಾಸನೆ ತಿಳಿಯದಿರುವುದುʼ ಅಂತ ತಿಳೀತು! 

 

               ಇಷ್ಟೆಲ್ಲಾ ಆಗುವಾಗ ನಮ್ಮ ತಲೆಯೇರಿದ್ದ ಮಲ್ಲಿಗೆ ದಂಡೆ ನಮ್ಮಂತೆಯೇ ಸೊರಗಿ ಸೊಪ್ಪಲಾಗಿರುತ್ತಿತ್ತು. ನಮಗೆ ಮತ್ತೊಮ್ಮೆ ಹೂ ಮುಡಿಯುವ ಸಂಭ್ರಮ ಅಥವಾ ಧರ್ಮಸಂಕಟ. ಯಾವ ಹೂ ಮುಡಿಯುವುದು ಎನ್ನುವುದರಲ್ಲಿಯೂ ಹೂಗಳಲ್ಲಿಯ ಒಂದು ರೀತಿಯ ಹೈಯರಾರ್ಕಿ ಪರಿಗಣಿಸಲ್ಪಡುತ್ತಿತ್ತು. ಎಲ್ಲ ಹೂವುಗಳಲ್ಲಿಯೂ ಪ್ರಥಮ ಸ್ಥಾನ ಇರುವಂತಿಕೆಗೆ. ಅತ್ಯಂತ ಮನೋಹರವಾದ ಸುವಾಸನೆಯನ್ನು ಹೊಂದಿದ್ದ, ಸುತ್ತು ಸೂಜುಮಲ್ಲಿಗೆಯಂತಿದ್ದ ಆ ಸುಮರಾಣಿ ರಾತ್ರಿಯೇ ಎಳೆಕಂದ ತನ್ನ ಪುಟ್ಟ ಬಾಯನ್ನು ಮುದ್ದಾಗಿ ತೆರೆಯುವಂತೆ ಬಿರಿಯುತ್ತಿದ್ದ ದುಂಡು/ಸೂಜು ಮಲ್ಲಿಗೆಗಳಂತಲ್ಲದೇ ಅರಳುತ್ತಿದ್ದುದೇ ಸೂರ್ಯೋದಯದ ನಂತರ. ಹಗಲಿನಲ್ಲಿ ನಮ್ಮ ಮುಡಿಗೇರುವ ಹೂವಿನ ಸರದಿ ಸರ್ವಶ್ರೇಷ್ಟ ಸುಮ ಸಾಮ್ರಾಜ್ಞಿ ಇರುವಂತಿಕೆಯದೇ ಆಗಿರುತ್ತಿತ್ತು. ಅದರ ಗೈರುಹಾಜರಿಯಲ್ಲಿ ಎರಡನೇ ಸ್ಥಾನ ಸೂಜುಮಲ್ಲಿಗೆಯದು. ನನಗೆ ಉದ್ದುದ್ದವಾಗಿ ಚೂಪುದಳಗಳನ್ನು ಚಾಚಿಕೊಂಡಿರುತ್ತಿದ್ದ ಸೂಜು ಮಲ್ಲಿಗೆಯೆಂದರೆ ತಲೆ ಕೆದರಿತಿಪ್ಪಿಯಂತೆನಿಸುತ್ತಿತ್ತು. ಏನೆಂದರೂ ಪುಟ್ಟ ಬೆಳ್ಳಿ ಬಟ್ಟಲಿನಂತೆ ಮುದ್ದಾದ ದುಂಡು ಮಲ್ಲಿಗೆಯೆಂದರೇ ನನಗೆ ಪರಮ ಪ್ರಿಯ ಅಥವಾ ಪಾರ್ಶಿಯಾಲಿಟಿಯೂ ಇರಬಹುದು! 


             ಸಂಜೆಯಾಯಿತೆಂದರೆ ಮಲ್ಲಿಗೆ ಮೊಗ್ಗುಗಳನ್ನು ಬಿಡಿಸಿ ಪಾತ್ರೆಯೊಳಗಿನ ನೀರಿಗೆ ಹಾಕುವ ಸಂಭ್ರಮ. ಆಹಾ ಅದೇ ತಾನೇ ಬಿರಿಯುತ್ತಿರುವ ತಾಜಾ ಮಲ್ಲಿಗೆಯ ಮೊಗ್ಗುಗಳ ಸುವಾಸನೆಯನ್ನು ವರ್ಣಿಸಲು ಪದಗಳೇ ಸೋಲುತ್ತವೆ. ಆ ಸುಗಂಧ ಸಾಮ್ರಾಜ್ಯದಲ್ಲಿ ವಿಹರಿಸುತ್ತಾ ಮೊಗ್ಗಿನ ಜಡೆ ಹಾಕುವ ಕಾರ್ಯಕ್ರಮದಲ್ಲಿ ನನ್ನ ವಿರಳ ಕೇಶರಾಶಿಯ ಮೇಲೇ ತನ್ನ ಕೈಚಳಕದ ಪ್ರಯೋಗವನ್ನು ಪ್ರಾರಂಭಿಸುತ್ತಿದ್ದಳು ನಮ್ಮಕ್ಕ. ಕುಚ್ಚುಹಾಕಿ ಚೌರಿಜಡೆ ಹೆಣೆದು ನೇರವಾಗಿ ಜಡೆಗೇ ಮೊಗ್ಗನ್ನು ಪೋಣಿಸಿ ಮೊಗ್ಗಿನ ಜಡೆ ಸಿದ್ಧವಾಗುವ ವೇಳೆಗೆ ನನ್ನ ಕತ್ತು ನೆಟ್ಟಗಾಗಿ ಸೆಟೆದು ಬೇಡ ಪಾಡು ನಂದು ಎನ್ನುವಂತಾಗುತ್ತಿತ್ತು. ಆದರೆ ಬಿರಿದ ಮೊಗ್ಗಿನ ಪರಿಮಳ ತುಂಬಿದ ಉದ್ದನೆಯ ಮೊಗ್ಗಿನ ಜಡೆಯ ಸಡಗರಕ್ಕೇನೂ ಕಮ್ಮಿಯಿರುತ್ತಿರಲಿಲ್ಲ. ಒಂದು ರೌಂಡ್‌ ಊರು ಸುತ್ತಲು ನಾವಿಬ್ಬರೂ ಹೊರಟರೆ ನಮ್ಮ ಹಿಂದೆ ಒಂದು ಮರಿಸೈನ್ಯವೂ ಸಜ್ಜಾಗಿ ವಿಶೇಷ ಕಳೆಯುಂಟಾಗುತ್ತಿತ್ತು. ನನಗೆ ಜಡೆ ಹಾಕಿಸಿಕೊಂಡ ಖುಶಿಯಾದರೆ ಅಕ್ಕನಿಗೆ ʼಎಷ್ಟು ಚೆನ್ನಾಗಿ ಮೊಗ್ಗಿನ ಜಡೆ ಹೆಣೆದಿದೀಯʼ ಎಂದು ಹೆಂಗೆಳೆಯರಿಂದ ಹೊಗಳಿಸಿಕೊಳ್ಳುವ ಸಂಭ್ರಮ! ಮತ್ತೊಂದು ದಿನ ತುರುಬು ಕಟ್ಟಿ ನೇರ ಹೆರಳಿಗೇ ಮೊಗ್ಗು ಪೋಣಿಸುವ ಪ್ರೋಗ್ರಾಂ. ಮತ್ತೊಮ್ಮೆ ಮೆರವಣಿಗೆ ಹೊರಟು ಹೊಗಳಿಕೆಯ ಸುರಿಮಳೆ. ಫೋಟೋಗಳನ್ನೇ ತೆಗೆಯಲಾಗದಿದ್ದ ಅಂದಿನ ಡ್ರಾಬ್ಯಾಕ್ಅನ್ನು ಮೀರಿ ಆ ದೃಶ್ಯಗಳೆಲ್ಲಾ ಮನದ ಆಲ್ಬಂನಲ್ಲಿ ಚಿರಸ್ಥಾಯಿಯಾಗಿವೆ.  


           ಇನ್ನು ಜಾಜಿಯೋ ಪರಮ ಸುಖಿ. ಸೊಡರ್ ಬೆಳಕಿನೊಳ್‌ ಸೊರಗುವ ಜಾಜಿಯನ್ನು ಕಂಡರೆ ಪಂಪನಿಗೆ ಅಷ್ಟಕ್ಕಷ್ಟೆ ಎಂದು ನಮ್ಮ ತಂದೆ ಹೇಳುತ್ತಿದ್ದರು. ಅರಳಿದ ಸ್ವಲ್ಪ ಸಮಯದಲ್ಲೇ ಜಾಜಿಹೂವೆಲ್ಲಾ ಗಿಡದಿಂದ ಉದುರಲಾರಂಭಿಸುತ್ತಿತ್ತು. ಮಲ್ಲಿಗೆಯ ಉತ್ತುಂಗ ಕಾಲದಲ್ಲಿ ಜಾಜಿಯ ಕಡೆಗೆ ಗಮನಹರಿಸಲೂ ಆಗುತ್ತಿರಲಿಲ್ಲ. ಮಲ್ಲಿಗೆಯ ಕಾಲ ಮುಗಿದ ನಂತರ ಉದುರಿದ ಜಾಜಿಗಳನ್ನೆಲ್ಲಾ ಆರಿಸಿ ತಂದು ಬಾಡಿಹೋಗುತ್ತೆ ಕಣಪ್ಪಾ ಎಂದರೂ ಕೇಳದೇ ಮಾಲೆ ಕಟ್ಟುತ್ತಿದ್ದೆ.  ನಮ್ಮ ಹಿತ್ತಲಿನಲ್ಲಿದ್ದ ತಿಪ್ಪೆಯ ಬಳಿ ಬಹಳ ಸೊಂಪಾಗಿ ಬೆಳೆದಿದ್ದ ಈ ಜಾಜಿಬಳ್ಳಿ ತನ್ನ ಲತಾ ತೋಳುಗಳನ್ನು ಚಾಚಿಕೊಂಡು ಮೈತುಂಬಾ ನವಿರು ಪುಷ್ಪಗಳಿಂದಾವೃತವಾಗಿ ಸುಮನೋಹರವಾಗಿ ಕಾಣುತ್ತಿತ್ತು. ನಮ್ಮ ದನಗಳನ್ನು ಮೇಯಲು ಬಿಟ್ಟ ನಂತರ ಅವುಗಳಿಗೆ ಕಟ್ಟುವ ಹಗ್ಗವನ್ನೇ ಬಿಚ್ಚಿಕೊಂಡು ಜಾಜಿಯ ಕೆಳಗೆ ಹಗ್ಗದಾಟವಾಡುವುದೆಂದರೆ ನನಗೆ ಖುಷಿಯೋ ಖುಷಿ. ಒಮ್ಮೆ ಹೀಗೇ ಆಡುವಾಗ ಬೀಸಿದ ಹಗ್ಗ ಬಳ್ಳಿಗೆ ಸಿಕ್ಕಿಕೊಂಡು ಆ ರಭಸಕ್ಕೆ ಬಳ್ಳಿ ಕಿತ್ತೇಹೋಯಿತು. ಗಿಡದಿಂದ ಕಿತ್ತುಬಂದ ಹೂಗಳೊಡಗೂಡಿದ ಬಳ್ಳಿಯನ್ನು ನೋಡಿ ನನಗೆ ವಿಪರೀತ ಸಂಕಟವಾಗಿ ʼನನ್ನ ಸಂತಸದ ಸಂಭ್ರಮ ನಿನ್ನ ನೋವಿಗೆ ಕಾರಣವಾಯ್ತಲ್ಲಾʼ ಎಂಬ ಅರ್ಥದ ನನ್ನ ಮೊದಲ ಅಪ್ರಕಟಿತ ಕವನವನ್ನು ಬರೆದ ನೆನಪು. ಮತ್ತೆಂದೂ ಆ ಗಿಡದ ಕೆಳಗೆ ನಾನು ಹಗ್ಗದಾಟವಾಡಲಿಲ್ಲ!


                ಕಾಲ ಸರಿದು ಬದುಕು ಮುನ್ನಡೆದಂತೆ ನಮ್ಮ ಸ್ವಂತ ಮನೆಯಾದ ನಂತರ ಮುಂದಿದ್ದ ಜಾಗದಲ್ಲಿ ಊರಿನಿಂದ ಎಲ್ಲ ರೀತಿಯ ಮಲ್ಲಿಗೆಯ ಬಳ್ಳಿಗಳನ್ನೂ ತಂದು ಹಾಕಿಕೊಂಡೆವು. ಬೇರೆ ಊರುಗಳಿಂದ ತಂದ ಸುತ್ತು ಮಲ್ಲಿಗೆ, ಸುಗಂಧರಹಿತ ಮುತ್ತು ಮಲ್ಲಿಗೆಗಳೂ ಜೊತೆಯಾದವು. ಬಯಲು ಸೀಮೆಯಲ್ಲಿ ಬಿಡುಬೀಸಾಗಿದ್ದ ಮಲ್ಲಿಗೆ ಇಲ್ಲಿ ಕೊರಗಲಾರಂಭಿಸಿ ಹೂಬಿಟ್ಟರೆ ಸಾಕು ಎನ್ನುವಂತಾಯ್ತು. ಕೊಂಡು ತಂದ ಮಲ್ಲಿಗೆಯ ಮೊಗ್ಗಿನಿಂದ ಮಕ್ಕಳಿಗೆ ಮೊಗ್ಗಿನ ಜಡೆ ಹಾಕಿ ಖುಷಿಪಟ್ಟು ಫೊಟೋ ತೆಗೆಸಿ ಆಲ್ಬಂಗೆ ಸೇರಿಸಿದ್ದೂ ಆಯ್ತು. ಎನೆಂದರೂ ಆಗಿನ ಸಡಗರ ಸಂಭ್ರಮಗಳು ಈಗ ಕಂಡುಬರುತ್ತಿಲ್ಲವಲ್ಲ. ಜೊತೆಗೇ ಹೂ ಗಿಡದಲಿದ್ದರೇ ಸೊಗಸು ಎನ್ನುವ ಬದಲಾದ ಮನಃಸ್ಥಿತಿಯೂ ಇದಕ್ಕೆ ಕಾರಣವಿರಬಹುದು. ನನ್ನವರು ಗಿಡಗಳಿಂದ ಹೂ ಬಿಡಿಸಿ ತಂದು ಕಟ್ಟಿ ಮುಡಿಯಲು ಹೇಳಿದರೂ ಏನೋ ಸೋಂಬೇರಿತನ. 


ʼಆ ಹೂ ಗಿಡದಲೇ ಇರಲಿ 

ಬಿಡು ಗೆಳೆಯ

ದೇವರ ಅಡಿಯ ಹೆಣ್ಣಿನ ಮುಡಿಯ 

ಸೇರಲೇ ಬೇಕೆಂಬ ನಿಯಮವೇಕೆ?

ಗಿಡದಲೇ ಇದ್ದು ಬುಡ ಸೇರಿದರೂ

ಸಾರ್ಥಕವಾಗದೇಕೆ?ʼ


            ಎಂಬಂಥ ಆಲೋಚನಾ ಸರಣಿ ಬೆಳೆದುದರ ಪರಿಣಾಮವಿದೇನೋ! 


               ಈ ನಡುವೆ ಓದಿದ 

ʼಮುನಿಸೇತಕೆ ಮುದದಿ ಮಲ್ಲಿಗೆ ಮುಡಿಸಿರಲು ಸಖಿ 

ಬಿಡು ಸಿಡಿಮಿಡಿತನ ಆಘ್ರಾಣಿಸು ಪ್ರೀತಿಯ ಘಮಲು ಸಖಿʼ 

  ಎಂಬ ಗಝಲ್‌ನಿಂದ ಪುನಃ ಮನವು ಮಲ್ಲಿಗೆಯತ್ತ ಸೆಳೆಯಲ್ಪಟ್ಟು ಜೀವವನ್ನು ಆರ್ಧ್ರಗೊಳಿಸುತ್ತಿದೆ.


          ಈಗ ಮತ್ತೊಮ್ಮೆ U ಟರ್ನ್‌ ನೊಂದಿಗೆ ಬದುಕು ಮುನ್ನಡೆಯುತ್ತಿದೆ. ಪರಿಮಳ ಭರಿತ ಪುಷ್ಪಮಾಲೆಗಳು ಪರಮಾತ್ಮನ ಪಟಗಳ ಮೇಲೆ ರಾರಾಜಿಸುತ್ತಿವೆ.

        

     ✍️ಪ್ರಭಾಮಣಿ ನಾಗರಾಜ