Monday, January 16, 2012

ಮನದ ಅಂಗಳದಿ.........೭೫. ವಿವೇಕ‘ಆನಂದ’

‘ಒಂದೇ ಮರದ ಎರಡು ರೆಂಬೆಗಳ ಮೇಲೆ ಸುಂದರ ಗರಿಗಳನ್ನು ಹೊಂದಿದ ಎರಡು ಪಕ್ಷಿಗಳು ಕುಳಿತಿದ್ದವು. ಎರಡರ ನಡುವೆಯೂ ಗಾಢವಾದ ಸ್ನೇಹವಿದ್ದಂತಿತ್ತು. ಕೆಳ ರೆಂಬೆಯ ಮೇಲೆ ಕುಳಿತಿದ್ದ ಹಕ್ಕಿ ಹಣ್ಣುಗಳನ್ನು ತಿನ್ನುತ್ತಿತ್ತು. ಮೇಲಿನ ರೆಂಬೆಯ ಮೇಲಿದ್ದುದು ಮೌನವಾಗಿ, ಪ್ರಶಾಂತತೆಯಿಂದ ಕುಳಿತಿತ್ತು. ಅದು ಹಣ್ಣನ್ನು ತಿನ್ನುತ್ತಿರಲಿಲ್ಲ. ಕೆಳ ರೆಂಬೆಯ ಮೇಲೆ ಕುಳಿತು ಹಣ್ಣುಗಳನ್ನು ತಿನ್ನುತ್ತಿದ್ದ ಹಕ್ಕಿಯು ಒಂದಾದ ನಂತರ ಒಂದು ಸಿಹಿ ಮತ್ತು ಕಹಿ ಹಣ್ಣುಗಳನ್ನು ತಿನ್ನುತ್ತಿತ್ತು. ಸಿಹಿ ಹಣ್ಣನ್ನು ತಿಂದಾಗ ಅದಕ್ಕೆ ತುಂಬಾ ಸಂತೋಷವೆನಿಸುತ್ತಿತ್ತು. ಕಹಿ ಹಣ್ಣನ್ನು ತಿಂದಾಗ ಅದಕ್ಕೆ ಬಹಳ ದುಃಖವಾಗುತ್ತಿತ್ತು. ಆದರೆ ಮೇಲಿನ ರೆಂಬೆಯ ಮೇಲೆ ಕುಳಿತಿದ್ದ ಹಕ್ಕಿಯು ಪ್ರಶಾಂತತೆಯೇ ಮೂರ್ತಿವೆತ್ತಂತೆ ಪ್ರಭುತ್ವ ಪೂರ್ಣವಾಗಿತ್ತು. ಅದು ಸಿಹಿಯಾದ ಹಣ್ಣನ್ನೂ ತಿನ್ನುತ್ತಿರಲಿಲ್ಲ, ಕಹಿಯ ಹಣ್ಣನ್ನೂ ತಿನ್ನುತ್ತಿರಲಿಲ್ಲ. ಅದಕ್ಕೆ ಸಂತಸವೂ ಇಲ್ಲ, ದುಃಖವೂ ಇಲ್ಲ! ಕೆಳಗಿನ ರೆಂಬೆಯ ಹಕ್ಕಿ ಮೇಲಿನದನ್ನು ನೋಡಿತು. ಅದು ಎಷ್ಟು ಪ್ರಶಾಂತವಾಗಿದೆ! ಅದಕ್ಕೆ ಸಂತಸವೂ ಇಲ್ಲ, ದುಃಖವೂ ಇಲ್ಲ! ತಾನೂ ಹಾಗೇ ಇರಬೇಕೆಂಬ ಹಂಬಲದಲ್ಲಿ ಅದರ ಸಮೀಪಕ್ಕೆ ಹೋಗಲು ಆಶಿಸಿ ಸ್ವಲ್ಪ ಮೇಲಿನ ರೆಂಬೆಗೆ ಹಾರಿ ಕುಳಿತಿತು. ಪುನಃ ಹಣ್ಣುಗಳಿಂದ ಆಕರ್ಷಿತವಾಗಿ ಸಿಹಿ-ಕಹಿಯದನ್ನು ತಿಂದು ಸಂತಸ-ದುಃಖಗಳನ್ನು ಅನುಭವಿಸಲಾರಂಭಿಸಿತು. ಇದರಿಂದ ಬೇಸತ್ತು ಮೇಲಿನ ಹಕ್ಕಿಯಂತಾಗಬೇಕೆಂದು ಅದರ ಸಮೀಪ ಬಯಸಿ ಇನ್ನೂ ಸ್ವಲ್ಪ ಮೇಲೇರಿತು......ಹೀಗೇ ಮೇಲೇರುತ್ತಾ ತನ್ನದೇ ಜೀವವೆನಿಸುವ ಆತ್ಮ ಸಖನಾದ ಆ ಹಕ್ಕಿಯನ್ನು ಸಮೀಪಿಸಿದಾಗ...... ಏನಾಶ್ಚರ್ಯ! ತನ್ನಲ್ಲಿ ಏನೋ ಪರಿವರ್ತನೆಯಾಗುತ್ತಿದೆ! ಆ ಹಕ್ಕಿಯನ್ನು ಸುತ್ತುವರಿದಿದ್ದ ಪ್ರಭಾವಳಿ ತನ್ನನ್ನನ್ನೂ ಆವರಿಸುತ್ತಿದೆ! ತನ್ನಲ್ಲೇ ತಾನು ದ್ರವೀಕರಿಸಿ ಲಯವಾಗುತ್ತಿರುವ ಭಾವ! ನಿಜ ತನ್ನ ಅಸ್ಥಿತ್ವವೇ ಇಲ್ಲವಾಗುತ್ತಿದೆ! ಶೂನ್ಯತೆಯ ಅನುಭವವಾಗುತ್ತಿದೆ. ಚಲಿಸುತ್ತಿರುವ ಹಸಿರು ಎಲೆಗಳ ನಡುವೆ, ಪ್ರಶಾಂತವಾಗಿ ಗಾಂಭೀರ್ಯದಿಂದ ಕುಳಿತಿರುವ ಆ ಹಕ್ಕಿಯ ಪ್ರತಿಫಲನವೇ ತಾನೆನಿಸುತ್ತಿದೆ! ಇದೆಲ್ಲಾ ಆ ಹಕ್ಕಿಯ ವೈಭವವೆ, ಅದರ ವರಪ್ರಸಾದವೇ ಆಗಿದೆ! ತಾನೀಗ ನಿರ್ಭಯ, ಸಂಪೂರ್ಣ ಸಂತೃಪ್ತ, ಪ್ರಶಾಂತತೆಯಿಂದ ಪವಿತ್ರತೆಯನ್ನು ಹೊಂದಿದ್ದೇನೆ........’

ಸ್ವಾಮಿ ವಿವೇಕಾನಂದರು ‘ಆತ್ಮದ ಆಯ್ಕೆ’ಯ ಬಗ್ಗೆ ವಿವರಿಸುತ್ತಾ ಈ ಕಥೆಯನ್ನು ಹೇಳುತ್ತಾರೆ. ಈ ಕಥೆಯು ಮನುಷ್ಯನ ಆತ್ಮದ ಚಿತ್ರಣವನ್ನು ನೀಡುತ್ತದೆ ಎನ್ನುವುದನ್ನು ಹೀಗೆ ವಿಷಧಪಡಿಸುತ್ತಾರೆ: ?ಮನುಷ್ಯನು ತನ್ನ ಜೀವನದಲ್ಲಿ ಸಿಹಿ ಮತ್ತು ಕಹಿಯ ಹಣ್ಣುಗಳನ್ನು ಸೇವಿಸುತ್ತಿದ್ದಾನೆ. ಇಂದ್ರಿಯಗಳ ಸುಖವನ್ನು ಪಡೆಯಲು, ಚಿನ್ನವನ್ನು ತನ್ನದಾಗಿಸಿಕೊಳ್ಳಲು, ಜೀವನದ ವೈಭೋಗಗಳನ್ನು ಅನುಭವಿಸಲು ಹುಚ್ಚೆದ್ದೆದ್ದು ಮುನ್ನುಗ್ಗುತ್ತಿದ್ದಾನೆ. ಉಪನಿಷತ್ತಿನಲ್ಲಿ ಮನುಷ್ಯನ ಮನಸ್ಸನ್ನು ರಥವನ್ನು ಎಳೆಯುವ ಹುಚ್ಚು ಕುದುರೆಗಳಿಗೆ ಹಾಗೂ ಆತ್ಮವನ್ನು ಸಾರಥಿಗೆ ಹೋಲಿಸಿದ್ದಾರೆ! ಜೀವನದ ವೈಭವಗಳನ್ನು ಹೊಂದಲು ಮುಗಿಬಿದ್ದಿರುವ ಮನುಷ್ಯನ ಸ್ಥಿತಿಯೂ ಇದೇ ಆಗಿದೆ. ಮಕ್ಕಳು ಭವಿಷ್ಯದ ಸುಂದರ ಕನಸುಗಳನ್ನು ಕಾಣುತ್ತಾರೆ. ವೃದ್ಧರು ತಮ್ಮ ಕಳೆದು ಹೋದ ಜೀವನದ ಬಗ್ಗೆ ಮೆಲುಕು ಹಾಕುತ್ತಿರುತ್ತಾರೆ. ಜೀವನದ ಸಂಕೀರ್ಣಬಲೆಯಿಂದ ಹೊರಬರುವುದನ್ನು ಮಾತ್ರ ತಿಳಿದಿರುವುದಿಲ್ಲ. ಸಾಮಾನ್ಯವಾಗಿ ಎಲ್ಲರ ಜೀವನದಲ್ಲಿ ಕಡುಕಷ್ಟಗಳ ನಡುವಿನಲ್ಲಿ ಸಂತಸದ ಕ್ಷಣಗಳೂ, ಸಂತೋಷದಿಂದ ಸಮಯ ಸಾಗುತ್ತಿರುವಾಗ ಹಠಾತ್ತನೆ ದುಃಖವೂ ಎದುರಾಗುತ್ತಿರುತ್ತದೆ. ಪ್ರಜ್ವಲಿಸುತ್ತಿರುವ ಸೂರ್ಯನನ್ನು ಮೋಡವು ಮರೆ ಮಾಡಿದಂತೆ! ಆ ಮೋಡವು ಸ್ವಲ್ಪ ಸರಿದಾಗ ಗೋಚರಿಸುವ ಕಿರಣವು ನಮ್ಮನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತದೆ. ನಮ್ಮ ಇಂದ್ರಿಯಾನುಭವದ ಸುಖಗಳಿಂದ ಆಚೆಗೆ, ನಮ್ಮ ವೈಭವದ ಜೀವನದಿಂದ ಪಡೆಯುವ ಸಂತಸ ಮತ್ತು ದುಃಖಗಳಿಂದ ಬಹಳ ದೂರಕ್ಕೆ, ಚಿನ್ನವನ್ನು ಸಂಪಾದಿಸಬೇಕು, ಆಸ್ತಿಯನ್ನು ಕೂಡಿಸಬೇಕು, ಹೆಸರು ಗಳಿಸಬೇಕು, ಪ್ರಸಿದ್ಧರಾಗಬೇಕೆಂಬ ತೀವ್ರ ಹಂಬಲಗಳಿಂದ ಆಚೆಗೆ ನಮ್ಮನ್ನು ಹೊತ್ತೊಯ್ಯುತ್ತದೆ. ಆ ಕಿರಣವನ್ನು ಕಂಡ ಕ್ಷಣದಲ್ಲಿ ಮನುಷ್ಯನು ಸ್ವಲ್ಪ ಕಾಲ ಸ್ಥಬ್ಧನಾಗಿ ಪ್ರಶಾಂತವಾಗಿ, ಗಂಭೀರವಾಗಿ ಕುಳಿತಿರುವ ಆ ಮತ್ತೊಂದು ಹಕ್ಕಿಯನ್ನು ಕಾಣುತ್ತಾನೆ! ಒಮ್ಮೆ ಆ ಕಾಂತಿಯನ್ನು ಕಣ್ತುಂಬಿಕೊಂಡ ಮನುಷ್ಯ ಮತ್ತೊಮ್ಮೆ ಸುಖ-ದುಃಖಗಳ ವರ್ತುಲದಲ್ಲಿ ಸಿಲುಕುತ್ತಾನೆ! ಇದು ಹೀಗೇ ಅನೇಕ ಭಾರಿ ಪುನರಾವರ್ತನೆಯಾಗಿ ಕಡೆಗೊಮ್ಮೆ ಸ್ಥತಪ್ರಜ್ಞವಾದ, ಸದಾ ಆನಂದದಿಂದ ವಿಹರಿಸುತ್ತಿರುವ ತನ್ನ ಅಂತರಾತ್ಮವನ್ನು ಸಮೀಪಿಸಿ ಅದರಲ್ಲಿ ಐಕ್ಯವಾಗುತ್ತಾನೆ!’

ಸ್ವಾಮಿ ವಿವೇಕಾನಂದರ ಭಾಷಣ ಮತ್ತು ಬರಹಗಳಿಂದ ಆಯ್ದ ಪ್ರಮುಖ ಭಾಗಗಳನ್ನು ಪಿ. ಸಿ. ಗಣೇಶನ್‌ರವರು `words of wisdom from SWAMY VIVEKANANDA’ ಎಂಬ ಪುಸ್ತಕದಲ್ಲಿ ಸಂಗ್ರಹಿಸಿ ಪ್ರಸ್ತುತಪಡಿಸಿದ್ದಾರೆ. ಅದರಲ್ಲಿನ ಒಂದು ಭಾಗವಾದ `choice of the soul’ ಅನ್ನು ಸ್ವಾಮಿ ವಿವೇಕಾನಂದರು ಉಪನಿಷತ್ತು, ಗೀತೆಗಳ ಸಾರವನ್ನು ಹದವಾಗಿ ಮಿಳಿತಗೊಳಿಸುತ್ತಾ ಮನಮುಟ್ಟುವಂತೆ ವಿವರಿಸಿದ್ದಾರೆ. ಈ ಕಥೆಯಿಂದ ಬಹಳವಾಗಿ ಪ್ರಭಾವಿತಳಾದ ನಾನು, ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಸ್ವಾಮಿ ವಿವೇಕಾನಂದರು ಈ ಜಗತ್ತು ಕಂಡ ಮಹಾನ್ ಚೇತನಗಳಲ್ಲಿ ಒಬ್ಬರು ಹಾಗೂ ಅನನ್ಯರು. ಕೇವಲ ನಾಲ್ಕು ದಶಕಗಳ ಸ್ವಲ್ಪ ಕಾಲ ಈ ಭೂಮಿಯ ಮೇಲೆ ಇದ್ದರೂ ತಮ್ಮ ವೇದಾಂತ ತತ್ವಜ್ಞಾನದಿಂದ ಮಾನವನ ಆಲೋಚನಾ ಶಕ್ತಿಗೇ ನೂತನ ಆಧ್ಯಾತ್ಮಿಕ ಆಯಾಮವನ್ನು ನೀಡಿದರು. ಅವರು ನೀಡಿದ ಪ್ರಮುಖ ಸಂದೇಶವಾದ: ‘` Awake, Arise and Stop not till the Goal is Reached’ ಅತ್ಯಂತ ಪ್ರಭಾವಶಾಲಿಯಾಗಿದೆ. ‘ವೀರನಂತೆ ಮುನ್ನಡೆ. ಯಾವುದರಿಂದಲೂ ಹಿಂತೆಗೆಯಬೇಡ. ನಾನು ಬಡವ, ನನಗೆ ಸ್ನೇಹಿತರಿಲ್ಲ ಎಂದು ಯೋಚಿಸಬೇಡ. ಹಣದಿಂದ ಮನುಷ್ಯ ಎಂದು ಯಾರು ಹೇಳಿದ್ದಾರೆ? ಯಾವಾಗಲೂ ಮನುಷ್ಯನಿಂದ ಹಣ ಸಂಪಾದನೆಯಾಗುತ್ತದೆ. ಈ ಜಗತ್ತೇ ಮಾನವನ ಶಕ್ತಿಯಿಂದ ಮಾಡಲ್ಪಟ್ಟಿದೆ........ ಈ ಸುಖ-ದುಃಖದಿಂದ ಕೂಡಿದ ಶರೀರ ಎಷ್ಟು ದಿನ ಬಾಳುವುದು? ನಿನಗೆ ಈ ಮಾನವ ಶರೀರ ಲಭಿಸಿರುವಾಗ ನಿನ್ನ ಆತ್ಮನನ್ನು ಜಾಗೃತಗೊಳಿಸು. ‘ನಾನು ನಿರ್ಭಯಾವಸ್ಥೆಯನ್ನು ಹೊಂದಿರುವೆ. ನಾನು ಆತ್ಮ. ನನ್ನ ಕೀಳು ಅಹಂಕಾರ ಶಾಶ್ವತವಾಗಿ ನಾಶಹೊಂದಿದೆ.......’ ಈ ಭಾವನೆಯಲ್ಲಿ ಪೂರ್ಣನಾಗು. ನಂತರ ಎಲ್ಲಿಯವರಗೆ ಈ ದೇಹವಿರುವುದೋ ಅಲ್ಲಿಯವರೆಗೂ ಇತರರಿಗೆ ಈ ನಿರ್ಭಯತೆಯ ಸಂದೇಶವನ್ನು ಸಾರು: ‘ಎದ್ದೇಳು, ಎಚ್ಚರಗೊಳ್ಳು, ಗುರಿ ಮುಟ್ಟುವವರೆಗೂ ನಿಲ್ಲಬೇಡ.’

ಪ್ರತಿವರ್ಷವೂ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಆಚರಿಸುವ ನಾವು, ಅವರ ೧೫೦ನೇ ಹುಟ್ಟಿದ ಹಬ್ಬವನ್ನು ಆಚರಿಸಿದ ಈ ಸಂದರ್ಭದಲ್ಲಿ ಅವರ ಸಂದೇಶಗಳಲ್ಲಿನ ಸತ್ವವನ್ನು ಅರಿತು, ಅರ್ಥೈಸಿಕೊಂಡು, ಅಳವಡಿಸಿಕೊಳ್ಳುವ ಪ್ರಯತ್ನಮುಖಿಗಳಾಗೋಣ.

Tuesday, January 10, 2012

ಮನದ ಅಂಗಳದಿ.........೭೪. ಅಮನಸ್ಸು

ಮನಸ್ಸು ಸದಾ ಒಂದಿಲ್ಲೊಂದು ಕಲ್ಪನೆ ಅಥವಾ ಆಲೋಚನೆಗಳಲ್ಲಿಯೇ ತೊಡಗಿರುತ್ತದೆ. ಚಿಕ್ಕಂದಿನಿಂದಲೂ ಈ ಮನಸ್ಸನ್ನು ಸಮಾಧಾನವಾಗಿ ಇಟ್ಟುಕೊಳ್ಳುವುದು ಹೇಗೆ? ಎನ್ನುವುದೇ ನನ್ನ ಪ್ರಶ್ನೆಯಾಗಿತ್ತು. ‘ಓ ಮನವೇ?’ ಎಂಬ ಹನಿಗವನದಲ್ಲಿ ಹೀಗೆ ಬರೆದಿದ್ದೆ:

‘ಮೇಲ್ಮೈಯಲಿ

ಅಗೆದಂತೆ

ಬರೀ ಕಲ್ಲು ಮಣ್ಣು

ಆಳಕಿಳಿದಾಗ

ದೊರೆಯಲೂಬಹುದು

ಹೊನ್ನು!’

ಈ ಮನಸ್ಸಿನ ಆಳಕ್ಕೆ ಇಳಿಯುವುದಾದರೂ ಹೇಗೆ? ರೆಂಬೆಯಿಂದ ರೆಂಬೆಗೆ ಹಾರುವ ಈ ಮನವೆಂಬ ಮರ್ಕಟವನ್ನು ಒಂದೆಡೆ ಸ್ಥಿರವಾಗಿ ನಿಲ್ಲಿಸುವುದಾದರೂ ಹೇಗೆ? ಈ ಹೇಗೆ, ಹೇಗೆ ಗಳಿಗೆ ಉತ್ತರ ಸಿಗುವುದಾದರೂ ಎಲ್ಲಿ? ಈ ಬಗ್ಗೆ ಅನೇಕ ಮನಃ ಶಾಸ್ತ್ರಜ್ಞರು, ದಾರ್ಶನಿಕರು ಸಮರ್ಪಕವಾದ ಉತ್ತರಗಳನ್ನೇ ನೀಡಿದ್ದಾರೆ. ಓಶೋ ರವರ ‘ಶೂನ್ಯ ನಾವೆ’ಯಲ್ಲಿ ಮನಸ್ಸಿನ ಚಂಚಲತೆಯ ವಿವಿಧ ಮುಖಗಳನ್ನು ವಿಸ್ತಾರವಾಗಿ ತೆರೆದಿಟ್ಟಿದ್ದಾರೆ. ಅಲ್ಲದೇ ಮನಸ್ಸಿನ ರಾಹಿತ್ಯ ಸ್ಥಿತಿಯನ್ನು ಧ್ಯಾನವೆಂದು ಈ ರೀತಿಯಾಗಿ ವಿವರಿಸಿದ್ದಾರೆ.

‘ಮನಸ್ಸು ಸದಾ ವಿಪರೀತಗಳಲ್ಲೇ ಚಲಿಸುವುದು. ಒಮ್ಮೆ ನೀವೇನಾದರೂ ಮಧ್ಯ ಬಿಂಧುವಿನಲ್ಲಿ ನೆಲೆಸಿದಿರೆಂದರೆ ಆಗ ಅಮನಸ್ಸಾಗುವುದು, ಮಧ್ಯದಲ್ಲಿ ಮನಸ್ಸೆಂಬುದು ನಾಪತ್ತೆಯಾಗುವುದು. ದೊಂಬರಾಟದವನು ಬಿಗಿದು ಕಟ್ಟಿ ದ ಹಗ್ಗದ ಮೇಲೆ ನಡೆಯುವುದನ್ನು ನೀವು ನೋಡಿರುವಿರೇನು? ಎಂದಾದರೂ ಅವಕಾಶ ಸಿಕ್ಕಿದಲ್ಲಿ ನೋಡಿ. ಹಗ್ಗದ ಮೇಲೆ ನಡೆಯುತ್ತಿರುವಾಗ ಆತನೇನಾದರೂ ಎಡಕ್ಕೆ ವಾಲಿದಲ್ಲಿ ಸಮತೋಲನ ತರಲು ಕೂಡಲೇ ಬಲಕ್ಕೆ ವಾಲುವನು. ಬಲಕ್ಕೆ ಹೆಚ್ಚಾಗಿ ವಾಲಿದೆ ಎಂದು ಆತನಿಗೆ ಅನಿಸಿದಲ್ಲಿ ಕೂಡಲೇ ಎಡಕ್ಕೆ ವಾಲುವನು...........

ನೀವು ಹಗ್ಗದ ನಡಿಗೆಯಲ್ಲಿ ಭಾಗವಹಿಸಿದಲ್ಲಿ ಎರಡು ವಿಚಾರಗಳು ನಿಮ್ಮ ಅರಿವಿಗೆ ಬರುವುದು: ಗಂಡಾಂತರದ ಎದುರು ಆಲೋಚನೆ ಇಲ್ಲವಾಗುವುದು, ಮತ್ತು ನೀವು ಮಧ್ಯಬಿಂದುವಿಗೆ ಬಂದಾಗ -ಎಡವೂ ಇಲ್ಲ, ಬಲವೂ ಅಲ್ಲದ, ಸರಿಯಾಗಿ ಮಧ್ಯ ಬಿಂದುವಿಗೆ ತಲುಪಿದಾಗ ಮೌನವು ನಿಮ್ಮನ್ನಾವರಿಸುತ್ತದೆ. ಹಿಂದೆಂದೂ ನಿಮ್ಮ ಅರಿವಿಗೆ ಬಂದಿರದ ಮೌನ. ಈ ಸ್ಥಿತಿ ಜೀವನದ ಎಲ್ಲಾ ಸನ್ನಿವೇಶಗಳಲ್ಲೂ ಬರಬಹುದು. ಯಾವಾಗ ಇಡೀ ಜೀವನವೇ ಹಗ್ಗದ ಮೇಲಿನ ನಡಿಗೆಯಂತಾಗುವುದೋ ಆಗ ಈ ಸ್ಥಿತಿ ಸರ್ವೇ ಸಾಮಾನ್ಯ.

ಯಾವುದೇ ವಿಪರೀತ ಮಧ್ಯಬಿಂದುವಿಗೆ ಬಂದಾಗ ಮನಸ್ಸು ಇಲ್ಲವಾಗುತ್ತದೆ. ಪ್ರಯತ್ನಿಸಿ ನೋಡಿ. ಹಗ್ಗದ ಮೇಲೆ ನಡೆಯುವುದು ಒಂದು ಒಳ್ಳೆಯ ವ್ಯಾಯಾಮ ಮತ್ತು ಅತ್ಯಂತ ಸೂಕ್ಷ್ಮ ಧ್ಯಾನ ವಿಧಾನ. ಬೇರಾವ ವಿಧಾನದ ಅಗತ್ಯವಿಲ್ಲ. ನಿಮಗಿದು ಮಾಡಲಾದರೆ ಆಗ ನೀವು ಹಗ್ಗದ ಮೇಲೆ ನಡೆಯುವವನನ್ನು ಗಮನಿಸಬಹುದು.

ಗಮನವಿರಲಿ, ಹಗ್ಗದ ಮೇಲೆ ನಡೆಯುವಾಗ ಆಲೋಚನೆ ಇಲ್ಲವಾಗುತ್ತದೆ. ಏಕೆಂದರೆ ಆಗ ನೀವು ಅತ್ಯಂತ ಗಂಡಾಂತರದ ಪರಿಸ್ಥಿತಿಯಲ್ಲಿ ಇರುತ್ತೀರಿ. ಆಗ ನಿಮಗೆ ಯೋಚಿಸಲು ಅವಕಾಶವಿರುವುದಿಲ್ಲ. ನೀವು ಯೋಚನೆ ಮಾಡಲು ಶುರು ಮಾಡಿದರೆ, ಕೂಡಲೇ ದೊಪ್ಪೆಂದು ಬೀಳುವಿರಿ. ಹಗ್ಗದ ಮೇಲೆ ನಡೆಯುವಾಗ ನೀವು ಯೋಚಿಸಲಾಗದು. ಆಗ ಪ್ರತಿಕ್ಷಣವೂ ಬಹಳ ಎಚ್ಚರದಿಂದ ಇರಬೇಕಾಗುತ್ತದೆ. ತಾನು ಸುರಕ್ಷಿತ ಎಂಬ ಭ್ರಾಂತಿಯಲ್ಲಿ ಇರಲಾಗುವುದಿಲ್ಲ. ಏಕೆಂದರೆ ಇಲ್ಲಿ ಸುರಕ್ಷೆ ಇಲ್ಲ. ಸದಾ ಅಪಾಯ ಇದ್ದೇ ಇರುತ್ತದೆ. ಯಾವ ಕ್ಷಣದಲ್ಲಾದರೂ ಆತ ಕೆಳಗೆ ಬೀಳಬಹುದು..........ಮತ್ತು ಸಾವು ಸದಾ ಕಾದಿರುತ್ತದೆ........

ಮನಸ್ಸಿಗೆ ಅತ್ಯಂತ ಕಷ್ಟದ ವಿಷಯವೆಂದರೆ ಸಮತೋಲನದಲ್ಲಿ ನೆಲೆಸುವುದು. ಒಂದು ವಿಷಯದಿಂದ ಮತ್ತೊಂದು ವಿಷಯದೆಡೆಗೆ ಚಲಿಸುವುದು ಮನಸ್ಸಿಗೆ ಅತ್ಯಂತ ಸರಳ ಎನಿಸುವುದು. ಮನಸ್ಸಿನ ಸ್ವಭಾವವೇ ವಿಪರೀತಗಳಲ್ಲಿ ಸುಳಿದಾಡುವುದು.ಈ ಮನಸ್ಸಿನ ಸ್ವಭಾವವನ್ನು ಆಳವಾಗಿ ಅರಿಯದಿದ್ದಲ್ಲಿ ಇನ್ನಾವುದರಿಂದಲೂ ನಿಮ್ಮನ್ನು ಧ್ಯಾನದೆಡೆಗೆ ಕೊಂಡೊಯ್ಯಲು ಸಾಧ್ಯವಿಲ್ಲ.

ಮನಸ್ಸಿನ ಪ್ರಕೃತಿಯೇ ಒಂದು ವಿಪರೀತದಿಂದ ಇನ್ನೋದು ವಿಪರೀತಕ್ಕೆ ಜಿಗಿಯುವುದು. ಇದರ ಆಧಾರ ಸ್ತಂಭವೇ ಅಸಮತೋಲನ. ನೀವು ಸಮತೋಲನರಾಗಿದ್ದಲ್ಲಿ ಮನಸ್ಸಿಲ್ಲವಾಗುವುದು....... ಆದರೆ ಸಮತೋಲನಕ್ಕೆ ಬರಲು ಮನಸ್ಸಿಗೆ ಸಾಧ್ಯವಾಗುವುದಿಲ್ಲ. ಮಧ್ಯದಲ್ಲಿ ನೆಲೆಸಲು ಮನಸ್ಸಿಗಾಗದು. ಮನಸ್ಸೆಂಬುದು ಗಡಿಯಾರದ ಲೋಲಕವಿದ್ದಂತೆ.......ನಿಮ್ಮ ಗಡಿಯಾರವು ಅತ್ಯಂತ ವೇಗವಾಗಿ ಚಲಿಸುತ್ತಿದೆ. ಇದರ ಯಾಂತ್ರಿಕ ಕ್ರಿಯೆಯೇ ಒಂದು ವಿಪರೀತದಿಂದ ಇನ್ನೊಂದು ವಿಪರೀತಕ್ಕೆ ಚಲಿಸುವುದು.

ಮನಸ್ಸೆಂಬುದು ಸದಾ ತಾರ್ಕಿಕವಾದುದು. ಇದು ನಿಮ್ಮನ್ನು ಸದಾ ವಿಪರೀತಕ್ಕೇ ಜಗ್ಗುವುದು. ವಿಪರೀತಕ್ಕೆ ಸಾಗಲು ಉತ್ತೇಜನ ನೀಡುವುದು. ಇದೊಂದು ನಿರಂತರ ಪ್ರಕ್ರಿಯೆ.ನೀವು ಇದನ್ನು ಗಮನಿಸಿ ಬಿಡದ ಹೊರತು ಇದರಿಂದ ಬಿಡುಗಡೆ ದೊರಕದು. ನಿಮಗೆ ಈ ಮನಸ್ಸಿನಾಟದ ಅರಿವಾಗದ ಹೊರತು ಇದರ ಆಟ ನಿಲ್ಲುವುದಿಲ್ಲ. ನೀವು ಗಮನಿಸಿ ಮಧ್ಯ ಬಿಂದುವಿನಲ್ಲಿ ನೆಲೆಸಬೇಕಾಗುವುದು.

ಮಧ್ಯ ಬಿಂದುವಿನಲ್ಲಿ ನೆಲೆಸುವುದೇ ಧ್ಯಾನ.

ಮನಸ್ಸೆಂಬುದು ವಿರುದ್ಧ ಗುಣಗಳಿಂದ ಕೂಡಿರುವಂತಹದು. ಪ್ರತಿ ಸಂಬಂಧಗಳೂ ಸಹ ಪ್ರೀತಿ-ದ್ವೇಷದ ಸಂಬಂಧಗಳೇ ಆಗಿವೆ...... ಮನಸ್ಸು ಸರಳವಾದ ಯಂತ್ರವಲ್ಲ. ಬಹಳ ಜಟಿಲವಾದುದು ಮತ್ತು ನೀವೆಂದಿಗೂ ಈ ಮನಸ್ಸಿನ ಮೂಲಕವಾಗಿ ಸರಳತೆಗೆ ಬರಲು ಸಾಧ್ಯವಿಲ್ಲ. ಏಕೆಂದರೆ ಅದು ಸತತವಾಗಿ ನಿಮ್ಮನ್ನು ಮರುಳು ಮಾಡುತ್ತಲೇ ಇರುತ್ತದೆ. ಹೀಗೆ ಮಾಡುವುದು ಅದರ ಸ್ವಭಾವ. ಧ್ಯಾನದಲ್ಲಿರುವುದೆಂದರೆ ಈ ಮನಸ್ಸು ಏನನ್ನು ಅಡಗಿಸಿಡುತ್ತದೆ ಎಂಬುದನ್ನು ಜಾಗೃತಿಯಿಂದ ಗಮನಿಸುವುದು.ನಿಮಗೆ ಕಸಿವಿಸಿಯನ್ನುಂಟುಮಾಡುತ್ತಿರುವ ವಿಚಾರಗಳ ಮೇಲೆ ಕಣ್ಣುಮುಚ್ಚಿ ಗಮನಿಸಿದಾಗ ಒಂದಲ್ಲಾ ಒಂದು ದಿನ ಇವೆಲ್ಲವೂ ಭುಗಿಲ್ಲೆಂದು ಮೇಲೇಳುವುವು. ಆಗ ನೀವು ಅದರ ವಿಪರೀತಕ್ಕೆ ಚಲಿಸುವಿರಿ. ಆ ವಿಪರೀತವಾದುದು ದೂರದಲ್ಲಿ ಎಲ್ಲೋ ಇಲ್ಲ. ಅದು ನಿಮ್ಮಲ್ಲೇ ಅಡಗಿದೆ. ನಿಮ್ಮ ಮನದಾಳದಲ್ಲೇ ಇದೆ. ಇದನ್ನು ಅರಿತಲ್ಲಿ ನೀವು ಮಧ್ಯದಲ್ಲಿ ನೆಲೆಸುವಿರಿ......

ನಿಮ್ಮಲ್ಲಿ ಸಮತೋಲನ ಉಂಟಾದೊಡನೆ ಮನಸ್ಸು ಇಲ್ಲವಾಗುವುದು. ಆಗ ನೀವು ಪೂರ್ಣರು. ಮತ್ತಲ್ಲಿ ಮನಸ್ಸೆಂಬುದು ಇಲ್ಲ. ಆದ ಕಾರಣ ಧ್ಯಾನ ಅಮನಸ್ಸಿನ ಸ್ಥಿತಿ.’

Sunday, January 1, 2012

ಮನದ ಅಂಗಳದಿ.........೭೩. ಗೊಂದಲ

ಎಷ್ಟೋ ವೇಳೆ ನಮ್ಮ ಮನಸ್ಸು ಗೊಂದಲದ ಗೂಡಾಗಿರುತ್ತದೆ. ಕೆಲವೊಮ್ಮೆ ಎದುರಾಗುವ ಪರಿಸ್ಥತಿಗಳಲ್ಲಿ ನಮ್ಮನ್ನು ನಾವು ಹೇಗೆ ನಿರ್ವಹಿಸಿಕೊಳ್ಳುವುದು ಎಂದು ತಿಳಿಯದಂತಾಗಿ ಗಲಿಬಿಲಿಯುಂಟಾಗುತ್ತದೆ. ಯಾವುದೇ ರಂಗಗಳಲ್ಲಿ ಗಮನಿಸಿದರೂ, ಈ ಜಗತ್ತಿನಲ್ಲಿ ಇರುವುದೇ ಎರಡು ವರ್ಗ: ಆಳುವುದು-ಆಳಲ್ಪಡುವುದು, ಮಾಲೀಕ-ಗುಲಾಮ..... ಇವೆರಡರಲ್ಲಿ ನಮ್ಮನ್ನು ಒಂದೆಡೆ ಗುರುತಿಸಿಕೊಳ್ಳುವುದು ಅನಿವಾರ್ಯವೆನಿಸುತ್ತದೆ. ಕೆಲವೊಮ್ಮೆ ಬೇರೆಬೇರೆ ಸಂದರ್ಭಗಳಲ್ಲಿ, ಅಥವಾ ಒಂದೇ ವೇದಿಕೆಯಲ್ಲಿ ಒಬ್ಬನೇ ವ್ಯಕ್ತಿ ಒಂದೇ ವೇಳೆಯಲ್ಲಿ ಎರಡೂ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸಬೇಕಾಗುತ್ತದೆ. ನನ್ನ ಕವನ ಮಧ್ಯಸ್ಥದಿಂದ ಆಯ್ದ ಭಾಗ ಹೀಗಿದೆ:

`ನಾನೀಗ ಮಧ್ಯಸ್ಥ

ಕುಕ್ಕಿಸಿಕೊಳ್ಳಬೇಕು

ಹಿರಿಕೋಳಿಗಳಿ೦ದ

ಕುಕ್ಕಲೂ ಬೇಕು

ಕಿರಿ ಕೋಳಿಗಳ!

ಕುಕ್ಕಿಸಿಕೊಳ್ಳಲಾರೆ

ಕುಕ್ಕಲಾರೆನೆ೦ದರೆ

ಈ ವ್ಯವಸ್ಥೆಯಲ್ಲಿ

ನನ್ನ ಸ್ಥಾನವೆಲ್ಲಿ?’

`Pecking order of the hen’ನಂತೆ ಬದುಕಿನ ಓಟ ಸಾಗುತ್ತಿರುತ್ತದೆ!

ನನ್ನ ಈ ಸಮಸ್ಯೆಗಳಿಗೆ ಒಂದು ಸ್ಪಷ್ಟ ರೂಪ ಹಾಗೂ ಸಾಂತ್ವನ ಓಶೋರವರ ಶೂನ್ಯ ನಾವೆ’ (ಚಾಂಗ್ ತ್ಸು ರವರ ನುಡಿಗಳ ಹಿನ್ನೆಲೆಯಲ್ಲಿ ನೀಡಿದ ಪ್ರವಚನ ಮಾಲೆ) ಎಂಬ ಪುಸ್ತಕದಲ್ಲಿ ದೊರೆಯಿತು. ಈ ಪುಸ್ತಕವನ್ನು ೨-೩ಭಾರಿ ಓದಲು ಪ್ರಾರಂಭಿಸಿ ಓದಿದ್ದು ಸರಿಯಾಗಿ ಮನಸ್ಸಿನಾಳಕ್ಕೆ ಇಳಿಯುವಲ್ಲಿ ಉಂಟಾದ ವಿಫಲತೆಯಿಂದ ಮುಂದುವರೆಸಲಾಗಿರಲಿಲ್ಲ. ಈಗಲೂ ಅಂತಹದೇ ಒಂದು ಪ್ರಯತ್ನವೆಂದುಕೊಂಡಿದ್ದೇನೆ! ಪುಸ್ತಕದ ಪ್ರಾರಂಭದಲ್ಲಿಯೇ ಇದ್ದ ಮಾನವರನ್ನು ಆಳುವವ ಗೊಂದಲದಲ್ಲಿ ಜೀವಿಸುವನು, ಮಾನವರಿಂದ ಆಳಲ್ಪಟ್ಟವ ವ್ಯಸನದಲ್ಲಿ ಜೀವಿಸುವನು, ಇದರಿಂದಾಗಿ ತಾವೋ? ಬೇರೆಯವರನ್ನು ಪ್ರಭಾವಿಸಲಿಕ್ಕಾಗಲೂ ಇಲ್ಲ, ಬೇರೆಯವರ ಪ್ರಭಾವಕ್ಕೂ ಒಳಗಾಗಲಿಲ್ಲ......ಎನ್ನುವ ಸಂದೇಶ ನನ್ನನ್ನು ಬಹಳವಾಗಿ ಆಕರ್ಷಿಸಿತು. ಇದರಲ್ಲಿ ಬರುವ ತಾವೋವ್ಯಕ್ತಿ ಯಾರು ಎನ್ನುವುದನ್ನು ಉದಾಹರಣೆಗಳೊಂದಿಗೆ ಹಂತಹಂತವಾಗಿ ಸ್ಪಷ್ಟಪಡಿಸುತ್ತಾ ಸಾಗುತ್ತಾರೆ. ಗೊಂದಲದ ಸ್ವರೂಪ, ಅದರ ನಿವಾರಣೆಗಾಗಿ ಮನಸ್ಸನ್ನು ಹೇಗೆ ಸಿದ್ಧಪಡಿಸಿಕೊಳ್ಳಬಹುದು ಎನ್ನುವುದನ್ನು ಈ ರೀತಿಯಾಗಿ ತಿಳಿಸುತ್ತಾರೆ:

ನಿಮ್ಮಲ್ಲಿ ಗೊಂದಲವಿರುವಾಗ ನೀವು ಉಳಿದವರ ನಾಯಕರಾದಲ್ಲಿ, ಉಳಿದವರನ್ನು ಆಳಿದಲ್ಲಿ , ಅವರ ಜೀವನದಲ್ಲೂ ನೀವು ಗೊಂದಲವನ್ನೇ ನಿರ್ಮಾಣ ಮಾಡುವಿರಿ. ಈ ತಂತ್ರ ನಿಮ್ಮಿಂದ ನೀವು ತಪ್ಪಿಸಿಕೊಳ್ಳುವ ದಾರಿ ಇರಬಹುದು, ಮದ್ದಿರಬಹುದು. ಆದರೆ ನಿಮ್ಮಲ್ಲಿಯ ಈ ರೋಗ ಮಾತ್ರ ಎಲ್ಲೆಡೆಯೂ ಹರಡುವುದು. ನೀವು ಮಾತ್ರ ಗೊಂದಲದಲ್ಲಿ ಜೀವಿಸುವುದಲ್ಲದೆ, ಉಳಿದವರಿಗೂ ಗೊಂದಲವನ್ನು ಹರಡುತ್ತಾ ಹೋಗುವಿರಿ. ಗೊಂದಲಗಳಿಂದ ನಿರ್ಮಾಣ ಆಗುವುದು ಗೊಂದಲಗಳೇ ವಿನಃ ಪರಿಹಾರವಲ್ಲ.

ಆದ್ದರಿಂದ ಗಮನವಿರಲಿ, ಕೃಪೆಮಾಡಿ ನೀವು ಗೊಂದಲದಲ್ಲಿ ಸಿಲುಕಿರುವಾಗ ಬೇರಾರಿಗೂ ಸಹಾಯ ಮಾಡಲು ಹಾತೊರೆಯಬೇಡಿ. ಏಕೆಂದರೆ ಆ ನಿಮ್ಮ ಸಹಾಯ ವಿಷವಾಗುವುದು. ನೀವು ಗೊಂದಲದಲ್ಲಿ ತಳಮಳದಲ್ಲಿ ನರಳುತ್ತಿರುವಾಗ ಬೇರೆಯವರೊಂದಿಗೆ ಅಂಟಿಕೊಳ್ಳದಿರಿ. ಬರಿದೇ ತೊಂದರೆಯನ್ನು ಹೆಚ್ಚಿಸುವಿರಷ್ಟೆ. ಏಕೆಂದರೆ ಈ ರೋಗ ಸಾಂಕ್ರಾಮಿಕವಾದುದು. ನೀವು ಗೊಂದಲದಲ್ಲಿ ಇರುವಾಗ ಬೇರಾರಿಗೂ ಸಲಹೆ ಕೊಡದಿರಿ. ಹಾಗೂ ನಿಮ್ಮಲ್ಲಿ ಸ್ವಲ್ಪವಾದರೂ ಸ್ಪಷ್ಟತೆ ಇದ್ದಲ್ಲಿ, ಗೊಂದಲದಲ್ಲಿರುವ ವ್ಯಕ್ತಿಗಳಿಂದ ಸಲಹೆ ಪಡೆಯಲೂ ಹೋಗಬೇಡಿ.

ಎಚ್ಚರವಿರಲಿ, ಏಕೆಂದರೆ ಗೊಂದಲದಲ್ಲಿರುವ ವ್ಯಕ್ತಿಗಳು ಸದಾ ಸಲಹೆಗಳನ್ನು ಕೊಡಲು ಇಷ್ಟಪಡುವರು. ಪುಕ್ಕಟೆಯಾಗಿ, ಧಾರಾಳವಾಗಿ ಸಲಹೆ ನೀಡುವವರು ಇವರು!

ಜಾಗೃತರಾಗಿರಿ! ಗೊಂದಲದಿಂದ ಗೊಂದಲವೇ ಉತ್ಪತ್ತಿಯಾಗುವುದು.

ನೀವು ಬೇರೆಯವರನ್ನು ಆಳಿದಲ್ಲಿ ನೀವು ಗೊಂದಲದಲ್ಲಿ ಜೀವಿಸುವಿರಿ. ಬೇರೆಯವರ ಆಳ್ವಿಕೆಗೆ ನೀವು ಒಳಗಾದಲ್ಲಿ ವ್ಯಸನದಿಂದ ಜೀವಿಸುವಿರಿ. ಏಕೆಂದರೆ ಗುಲಾಮನೆಂದೂ ಆನಂದದಿಂದ ಜೀವಿಸಲು ಸಾಧ್ಯವಿಲ್ಲ.

ನಿಶ್ಚಯವಾಗಿ, ಆಳುವ ಆಸೆ ಬರುವುದೇ ಗೊಂದಲದಿಂದ; ಮಾನವರ ಮುಖಂಡ ತಾನಾಗಬೇಕೆಂಬ ಆಸೆ ಬರುವುದೇ ಗೊಂದಲದಿಂದ. ಏಕೆಂದರೆ ಬೇರೆಯವರನ್ನು ಆಳುವಾಗ ನೀವು ನಿಮ್ಮ ಗೊಂದಲಗಳನ್ನು ಮರೆಯುವಿರಿ. ಇದೊಂದು ರೀತಿಯ ತಪ್ಪಿಸಿಕೊಳ್ಳುವಿಕೆ. ಒಂದು ಕೃತಿಮ. ವಸ್ತುತಃ ನೀವೆಲ್ಲರೂ ಈಗ ರೋಗಗ್ರಸ್ತರೇ, ಆದರೆ ಬೇರೆಯವರ ರೋಗವನ್ನು ನಿವಾರಿಸಲು ಉತ್ಸುಕರಾದಾಗ ನೀವು ನಿಮ್ಮ ರೋಗವನ್ನು ಮರೆಯಬಹುದು.ಇದಕ್ಕೆ ಜಾರ್ಜ್ ಬರ್ನಾಡ್ ಷಾ ಅವರ ಒಂದು ಉದಾಹರಣೆಯನ್ನು ನೀಡುತ್ತಾರೆ:

ಒಮ್ಮೆ ಜಾರ್ಜ್ ಬರ್ನಾಡ್ ಷಾ ತಮ್ಮ ವೈದ್ಯರಿಗೆ ದೂರವಾಣಿ ಮುಖಾಂತರ ಹೀಗೆ ಹೇಳಿದರು, ‘ನನ್ನ ಹೃದಯವೇ ನಿಂತುಹೋದಂತೆ ಅನಿಸುತ್ತಿದೆ ನನಗೆ, ಬಲು ತೊಂದರೆಯಾಗುತ್ತಿದೆ, ಕೂಡಲೇ ಬನ್ನಿ.ವೈದ್ಯರು ಆತುರಾತುರವಾಗಿ ಬಂದು ಮೂರು ಮಹಡಿ ಹತ್ತಬೇಕಾದ್ದರಿಂದ ಅಲ್ಲಿಗೆ ತಲುಪುವಷ್ಟರಲ್ಲಿ ಬೆವರು ಸುರಿಯುತ್ತಿತ್ತು. ವೈದ್ಯರು ಮನೆಯ ಒಳಗೆ ಬಂದು ಏನೂ ಹೇಳದೇ ಧೊಪ್ಪೆಂದು ಕುಸಿದು ಕುಳಿತರು. ಇದನ್ನು ನೋಡಿ ಬರ್ನಾಡ್ ಷಾ ತಮ್ಮ ಹಾಸಿಗೆಯಿಂದ ಧಡಕ್ಕನೆ ಎದ್ದು ವೈದ್ಯರನ್ನು ಉಪಚರಿಸಲು ತೊಡಗಿದರು. `ಏನಾಗುತ್ತಿದೆ?’ ಎಂದು ಕೇಳಿದರು.

ವೈದ್ಯರಾಗ, ‘ಏನೂ ಕೇಳಬೇಡಿ. ನಾನು ಇನ್ನೇನು ಸತ್ತೇ ಹೋಗುವೆನೇನೋ ಎನಿಸುತ್ತಿದೆ. ಹೃದಯಾಘಾತ ಆಗಬಹುದೆಂದು ಅನಿಸುತ್ತಿದೆ,’ ಎಂದರು.

ಇದನ್ನು ಕೇಳಿದೊಡನೆ ಷಾ ತಮ್ಮಿಂದ ಏನೇನು ಮಾಡಲು ಸಾಧ್ಯವೋ ಅವೆಲ್ಲವನ್ನೂ ಮಾಡಿದರು. ಟೀ, ಮಾತ್ರೆ ಕೊಟ್ಟು ಉಪಚರಿಸಿದರು. ಅರ್ಧ ಗಂಟೆಯ ನಂತರ ವೈದ್ಯರು ಸುಧಾರಿಸಿಕೊಂಡು, ‘ನಾನಿನ್ನು ಹೊರಡಬೇಕು, ನನ್ನ ಫೀಸನ್ನು ಕೊಡಿ,’ ಎಂದರು.

ಆಗ ಬರ್ನಾಡ್ ಷಾ, ‘ಇದೇನು ವಿಚಿತ್ರ, ನೀವು ನನಗೆ ಶುಲ್ಕ ಕೊಡಬೇಕು! ನಾನು ನಿಮ್ಮ ಶುಶ್ರೂಷೆ ಮಾಡಿರುವೆ. ಮತ್ತು ನೋಡಿದರೆ ನೀವು ನನಗೆ ಏನೂ ಮಾಡಿಲ್ಲ.ಎಂದರು.ಅದಕ್ಕುತ್ತರವಾಗಿ ವೈದ್ಯರು ಹೇಳಿದರು, `ನಿಮ್ಮನ್ನು ಈಗ ಗುಣಪಡಿಸಿದವನೇ ನಾನು. ನಾನೀಗ ಮಾಡಿದ್ದೇ ಮದ್ದು. ಆದ ಕಾರಣ ನೀವೇ ನನಗೆ ಶುಲ್ಕ ಕೊಡಬೇಕು.’

....... ನೀವು ಬೇರೆಯವರ ಬಗ್ಗೆ ಕಾಳಜಿ ವಹಿಸಿದಲ್ಲಿ, ಜನಸೇವಕರು, ಸಮಾಜ ಸೇವಕರು ಆಗಿದ್ದಲ್ಲಿ ನಿಮ್ಮಲ್ಲಿಯ ಗೊಂದಲಗಳನ್ನು ಮರೆಯಲು ಸುಲಭ ಸಾಧನ ಅವಾಗುವುವು. ಏಕೆಂದರೆ ನಿಮ್ಮಲ್ಲಿಯ ತುಮುಲ, ಸಂಕಟಗಳನ್ನು ಮರೆಯಲು ಇದು ಸಹಾಯ ಮಾಡುವುದು. ನೀವು ಪರರ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಮೈಮರೆತಿರುತ್ತೀರಿ.

ಗೊಂದಲದ ಸ್ಥಿತಿಗೆ ಪರಿಹಾರವನ್ನು ಈ ರೀತಿಯಾಗಿ ತಿಳಿಸುತ್ತಾರೆ:

ಗೊಂದಲಗಳಿಂದ ನಿರ್ಮಲನಾಗಲು, ವ್ಯಸನಗಳಿಂದ ಪಾರಾಗಲು ಇರುವ ದಾರಿ ಶೂನ್ಯತೆಯ ನೆಲದಲ್ಲಿ ತಾವೋದೊಂದಿಗೆ ಸಹಜತೆಯಿಂದ ಜೀವಿಸುವುದು.

ಶೂನ್ಯತೆ ಎಂದರೆ ಸಮಸ್ಥಿತಿ. ತಾವೋಹಗ್ಗದ ಮೇಲಿನ ನಡಿಗೆಯಲ್ಲಿನ ಮಧ್ಯ ಬಿಂದುವಿನಲ್ಲಿ ನೆಲೆಸಲು ಬಯಸುತ್ತದೆ.

ಹೊಸ ವರ್ಷದ ಈ ಶುಭ ಸಂದರ್ಭದಲ್ಲಿ ನಾವು ಗೊಂದಲ ರಹಿತವಾದ ಸುಂದರ ಜೀವನವನ್ನು ನಮ್ಮದಾಗಿಸಿಕೊಳ್ಳೋಣ. ಎಲ್ಲರಿಗೂ ೨೦೧೨ರ ಶುಭಾಶಯಗಳು.