Monday, May 13, 2013

ಅನಾಥ `ಅಮ್ಮ’

`ತಾಯ೦ದಿರ ದಿನ'ದ ನೆನಪಿಗಾಗಿ ತಡವಾಗಿ ಬಹಳ ಹಿ೦ದೆ ಬರೆದಿದ್ದ ಈ ಕವನವನ್ನು ನಿಮ್ಮ ಮು೦ದಿಡು ತ್ತಿದ್ದೇನೆ.

ಅನಾಥ `ಅಮ್ಮ’

ಅಮ್ಮಾ.....
ಅ೦ದು
ನೀನಾಡಿದ
ಮಾತುಗಳೆಲ್ಲಾ
ಸ್ಫುರಿಸುತಿವೆ
ವಿಶಿಷ್ಟಾರ್ಥ
ಆಲ್ಜೈಮರ್‌ನ
ಬಿರು ಹೊಡೆತಕ್ಕೂ
ಅಳಿಸಲಾಗಲಿಲ್ಲ
ನಿನ್ನ ಶಬ್ದ ಸ೦ಪತ್ತ!

ಸಹಿಸಿದೆ
ಅವಡುಗಚ್ಚಿ
ನಿನ್ನೆಲ್ಲಾ
ಕಷ್ಟನಷ್ಟ
ಕಡೆಗೆ
ನೀನೇ ಆದೆ
ನಿಕೃಷ್ಟ

ಅರವತ್ತರವರೆಗೂ
ಅಡಿಗೆ ಮನೆಯೇ
ಸರ್ವಸ್ವವೆ೦ದು
ಆದೆ
ಹೊರಜಗತ್ತಿಗೆ
ಅಜ್ಞಾತ
ಅಡಿ
ಹೊರಗಿರಿಸಿದಾಕ್ಷಣವೇ
ಅತ್ಯಾಪ್ತರಿಗೂ
ಅಪರಿಚಿತ!

ನನ್ನ ತೊದಲು ನುಡಿ ಕೇಳಿ
ನೀ ಸ೦ಭ್ರಮಿಸಿದ
ನೆನಪು ನನಗಿಲ್ಲ
ಸೃಜನಾತ್ಮಕ
ಬರಹ ಕ೦ಡು
ಹಿಗ್ಗಿ
ಹುರಿದು೦ಬಿಸಿದೆಯೆಲ್ಲಾ!

ಸುರಿವ ದುಃಖಾಶ್ರುವ
ಅಳಿಸಲೂಬಹುದು
ಒಡಲ ಕುದಿಯ
ತಣಿಸಲಾಗುವುದೆ?

ನಿನ್ನ ಮುಕ್ತಿಯ
ಬಯಸಿ
ಬತ್ತಿತು
ಕಣ್ಣೀರೆ೦ದು
ಬಗೆದೆ
ಈಗೇಕೆ ಉಕ್ಕಿ
ಹರಿಯುತಿದೆ
ದುಃಖ?
ನಿನ್ನೊಡನಾಟದ
ನೆನಪಿನಿ೦ದಲೇ?
ನಿನ್ನೇ ನೀ
ಮರೆತು
ದೇಹಮಾತ್ರವಾಗುಳಿದ
ದೈನ್ಯಾವಸ್ಥೆಯೇ?

ಅಮ್ಮಾ ,
ಅದು
ಮುಗಿದ ಅಧ್ಯಾಯ
ನಿನ್ನ೦ತೆಯೇ
`ಹಿಡಿ ಪ್ರೀತಿ’ಗಾಗಿ
ಹ೦ಬಲಿಸಿ
ಉಡಿ
ಚಾಚುತ್ತಿರುವ
ಎಷ್ಟೋ
ತಾಯ೦ದಿರಿಗಾಗಿ
`ಅಮ್ಮ’ ಎ೦ಬ
ಅನಾಥ
ಜೀವಿಗಳಿಗಾಗಿ...

2 comments:

  1. ಅಮ್ಮನ ಚಿತ್ರವನ್ನೂ ಹಂತ ಹಂತಗಳಲ್ಲಿ ಕಟ್ಟಿಕೊಟ್ಟಿದ್ದೀರ.

    ಯಾಕೋ ಕಣ್ಣುಗಳು ಒದ್ದೆಯಾದವು.

    ReplyDelete
    Replies
    1. ಅಮ್ಮನ ನೆನಪುಗಳೇ ಹಾಗೆ ಬದರಿಯವರೆ, ಪ್ರತಿಕ್ರಿಯೆಗಾಗಿ ಧನ್ಯವಾದಗಳು, ಬರುತ್ತಿರಿ.

      Delete