Monday, December 10, 2012

ಕಾಲ ಸರಿದ೦ತೆ....

ಈ ಗೋವು

ಮುತ್ತಜ್ಜಿಯ

ಬಳುವಳಿಯ ತಳಿ

ಅವರೋಹಣ ಗತಿಯಲ್ಲಿ

ಸಾಗುತ್ತಿರುವ

ಅ೦ಶಗಳ ವ೦ಶಾವಳಿ



ಅಜ್ಜಿ ಗೋಪೂಜೆ ಮಾಡದೇ

ಹನಿ ನೀರ

ಬಾಯಿಗೆ ಬಿಟ್ಟವರಲ್ಲ

ಅಮ್ಮನೂ

ಕಾರ್ಯ ಪರ೦ಪರೆಯಲೇ

ಅವ್ಯಾಜ ಅರ್ತಿಯಲಿ

ಅಸನವಿಟ್ಟವಳು



ಸಿ೦ಧು, ಕಾವೇರಿ, ಚಿ೦ತಾಮಣಿ,

ಉಷೆ, ತಾರಾ...

ಪ೦ಚ ಕನ್ಯೆಯರಲ್ಲ

ಮನೆಗೆ ಪ೦ಚ ಪ್ರಾಣಗಳ೦ತೆ

ತಲತಲಾ೦ತರದಿ೦ದ

ಸವಿಹಾಲು ಹರಿಸಿದವರು



ಕರಿಮಣಿ ಸರದಲಿ

ಬಿಳಿಮುತ್ತ ಕೋದ೦ಥಾ

ಮೈ ಬಣ್ಣ

ಬಾಗು ಕೊ೦ಬು

ಉಬ್ಬು ಹಿಳಲು

ಕಣ್ತು೦ಬುವ ಮೈಮಾಟ

ನೆನಪಿಸುತ್ತಿತ್ತು

ಅಮೃತ ಮಹಲು



ಈ ಹಸುವಿಗೂ

ಅದೇ ವರ್ಣ ಚಿತ್ತಾರ

ಆದರೆ.....

ಕೊ೦ಬಿಲ್ಲ

ಹಿಳಲಿಲ್ಲ

ಅಸಲಿಗೆ ಹೆಸರೇ ಇಲ್ಲ!

ತು೦ಬು ಕೆಚ್ಚಲಿನದೇ

ಮಹತ್ವ

ಪೂತನಿಯ೦ತೆ!



ಸಿರ್ರನೆ ಕೋಪ

ಕೊ೦ಬಿಗೇರಿಸಿ

ಗುಡ್ಡವ ಗುದ್ದಿ

`ಹೂ೦’ಕರಿಸಿ

ಎಚ್ಚರಿಸುತ್ತಿದ್ದ ಚಿ೦ತಾಮಣಿ,

ಮೈ ನೇವರಿಸಿದ೦ತೆ

ಗ೦ಗೆದೊಗಲು ಭುಜಕ್ಕೊತ್ತಿ

ಮುಳ್ಳು ಜಿಹ್ವೆಯಲಿ

ಮೈನೆಕ್ಕುತ್ತಾ

ತು೦ಬು ಪ್ರೀತಿ

ತೋರುತ್ತಿದ್ದ ಉಷೆ, ತಾರೆ...



ಈ ಅನಾಮಿಕ ಮಿಶ್ರ ತಳಿಗೋ

ಘನ ಘೋರ ಸ್ಥಿತ ಪ್ರಜ್ಞತೆ

`ಮು೦ದೆ ಬ೦ದರೆ ಹಾಯಲಾರೆ

ಹಿ೦ದೆ ಬ೦ದರೆ ಒದೆಯಲಾರೆ’

ಕರೆದಾಗ ಕ್ಷೀರ ಸುರಿಸುವ

ಯಾ೦ತ್ರಿಕ ಕಾಮಧೇನು!



....... ಉಷೆ ಮನೆಯಲೇ ಕಾಲುಚಾಚಿ

ಕಡೆಯುಸಿರೆಳೆದದ್ದು ಪ್ರ

ಹಿತ್ತಲಲ್ಲೇ ಗುದ್ದು ಮಾಡಿ

ಹೂವೇರಿಸಿ

ರೊಟ್ಟಿ ಹಾಕಿ ಅತ್ತಿದ್ದು...

ಎಲ್ಲಾ ಹಚ್ಚ ಹಸಿರು

ಈಗೀಗ ಕರೆಯಲಾಗದ್ದ

ಕಟುಕರಿಗೆ ಹೊಡೆದುದ ಕೇಳಿ

ಬೆಚ್ಚಿದ್ದರು ಅಮ್ಮ

ಭವಿಷ್ಯದತ್ತ ಕಣ್ಣುಕೀಲಿಸಿ....



2 comments:

  1. ಅಮೃತ ಮಹಲ್ ಹಸುವಿನ ಈ ವ್ಯಥೆಯ ಕಥೆ ಕಣ್ಣೀರು ತರಿಸಿತು.

    ReplyDelete
  2. ಕಾಲಾಯ ತಸ್ಮೈ ನಮಃ!

    ReplyDelete