Tuesday, December 25, 2012

ಈ ಗೋವು...... (ಭಾಗ೨)

ನಮ್ಮ ಕೊಟ್ಟಿಗೆಯ ತುಂಬಾ ದನಗಳಿದ್ದವು. ಬೆಳಿಗ್ಗೆ ಮೇಯಲು ಬಿಟ್ಟಾಗ ಒಂದರೊಡನೊಂದು ಮಂದಗತಿಯಲ್ಲಿ ಹೊರಟರೆ ನಮ್ಮ ಬೀದಿಯನ್ನೇ ತುಂಬಿಬಿಡುತ್ತಿತ್ತು ಅವುಗಳ ಮೆರವಣಿಗೆ! ಅವುಗಳನ್ನು ‘ದನ’ ಎಂದು ಪ್ರತ್ಯೇಕಿಸುವಂತಿರಲಿಲ್ಲ. ಒಂದುರೀತಿಯಲ್ಲಿ ನಮ್ಮ ಮನೆಯ ಸದಸ್ಯರಂತೆಯೇ ಇದ್ದವು. ನಮ್ಮ ಮುತ್ತಜ್ಜಿಗೆ ಬಳುವಳಿಯಾಗಿ ಬಂದಿದ್ದ ತಳಿಯ ಹಸುಗಳು ನಮ್ಮ ಗೋಸಮೂಹದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದ್ದವು. ಲಕ್ಷ್ಮಿ ಎಂಬ ಹಸುವನ್ನು ಬಳುವಳಿಯಾಗಿ ತಂದಿದ್ದರಂತೆ ಅದ...ರ ಮಕ್ಕಳು ಮೊಮ್ಮಕ್ಕಳಲ್ಲಿ ಪ್ರಮುಖವಾಗಿ ಸಿಂಧು, ಕಪಿಲ, ಕಾವೇರಿ, ಚಿಂತಾಮಣಿ, ಉಷಾ, ತಾರಾ... ಹೀಗೆ ಸಂತತಿ ಮುಂದುವರಿದಿತ್ತು. ಅವುಗಳಲ್ಲಿ ಚಿಂತಾಮಣಿ ನನ್ನ ಓರಗೆಯದು ಎಂದು ಹೇಳುತ್ತಿದ್ದರು. ಅದು ಶಕ್ತಿಯಿದ್ದಾಗ ಗೋಸಮೂಹದಲ್ಲೇ ರಾಣಿಯಂತೆ ಮೆರೆದು ತನ್ನ ಹದಿನೆಂಟನೆಯ ವಯಸ್ಸಿನಲ್ಲಿ ನಮ್ಮ ಕೊಟ್ಟಿಗೆಯಲ್ಲೇ ಕಾಲು ಚಾಚಿಕೊಂಡು ಮಲಗಿ ಪ್ರಾಣಬಿಟ್ಟಿತ್ತು. ಚಿಂತಾಮಣಿ ಅಂತಿಮ ಕ್ಷಣಗಳನ್ನು ಎಣಿಸುತ್ತಿದ್ದ ಸಂದರ್ಭದಲ್ಲೇ ಅದೇ ಕೊಟ್ಟಿಗೆಯಲ್ಲೇ ಹುಟ್ಟಿದ್ದ ಪುಟ್ಟ ಹಂಸ ತನ್ನ ಬಟ್ಟಲುಗಣ್ಣುಗಳಲ್ಲಿ ಈ ಹೊಸ ಪ್ರಪಂಚವನ್ನು ಪರಿಚಯಿಸಿಕೊಳ್ಳುವ ಕಾತುರದಲ್ಲಿತ್ತು. ಆಗ ಬರೆದಿದ್ದ ಒಂದು ದೀರ್ಘ ಕವನ ಇಂದಿಗೂ ನನ್ನ ಬಳಿ ಭದ್ರವಾಗಿ ಅಪ್ರಕಟಿತ ಸ್ಥಿತಿಯಲ್ಲೇ ಇದೆ!

‘ಒಂದೆಡೆ ಗಾಡಾಂಧತೆ ಮತ್ತೊಂದೆಡೆ ಬೆಳಕು

ಒಂದೆಡೆ ಮುಚ್ಚುತಿಹ ಕುಮುದ ಮತ್ತೊಂದೆಡೆ ಕಮಲೆ

...............

ಒಂದೆಡೆ ತಾ ಮಲಗಿದೆ ಹಸು

ಸೋತು ನಾಲ್ಕು ಕಾಲ ಚಾಚಿ

ಬೆಂದ ಮನದ ಅಳಲ

ಕಣ್ಣಿನಿಂದ ಸುರಿಸುತ

ಬಂದ ನೋವ ಕಾಲ ಬಡಿತದಿಂದ ಹರಿಸುತ


ಮತ್ತೊಂದೆಡೆ ಮುದ್ದುಕರು

....... ಏಳ್ವ ಬಯಕೆ ಬಲವು ಇಲ್ಲ.......’ ಹೀಗೆ ಸಾಗುವ ಕವನದಲ್ಲಿ ಸಾವಿನಂಚಿನಲ್ಲಿರುವ ಹಸು, ಕೆಲವೇ ಕ್ಷಣಗಳ ಹಿಂದೆ ಜಗತ್ತಿಗೆ ಕಣ್ಣುಬಿಟ್ಟ ಕರು, ಇವುಗಳ ಹೋಲಿಕೆಗಳನ್ನು ಆಗ ನನಗೆ ತಿಳಿದಂತೆ ತೆರೆದಿಡುತ್ತದೆ.

ನಮ್ಮ ಮನೆಯಲ್ಲಿ ಹುಟ್ಟಿದ ಕರುಗಳು ಹೆಣ್ಣಾದರೆ ಇಲ್ಲೇ ಕರುಹಾಕಿ, ಹಾಲು ಕೊಟ್ಟು, ಹೋರಿಯಾದರೆ ನಮ್ಮಲ್ಲೇ ದುಡಿಮೆ ಮಾಡಿ ಕಡೆಗಾಲದಲ್ಲಿ ನಮ್ಮ ಕೊಟ್ಟಿಗೆಯಲ್ಲೇ ಕಡೆಯುಸಿರೆಳೆಯುವುದು ಮೊದಲಿನಿಂದಲೂ ನಡೆದುಬಂದಿತ್ತು. ಕರು ಹುಟ್ಟುತ್ತದೆ ಎಂದು ತಿಳಿದಾಕ್ಷಣದಿಂದಲೇ ಅದಕ್ಕೆ ಯಾವ ಹೆಸರಿಡುವುದು ಎನ್ನುವ ಚರ್ಚೆ ಪ್ರಾರಂಭವಾಗುತ್ತಿತ್ತು. ಅವುಗಳಲ್ಲಿ ಇಷ್ಟವಾದವುಗಳ ಒಂದು ಪಟ್ಟಿಯನ್ನು ಸಿದ್ಧಗೊಳಿಸಿ ಆಯ್ಕೆಯ ಪ್ರಕ್ರಿಯೆ ಕಡೆಯ ಕ್ಷಣದವರೆಗೂ ನಡೆಯುತ್ತಲೇ ಇರುತ್ತಿತ್ತು. (ಈಗೀಗ ಹಳ್ಳಿಯ ನಮ್ಮ ಮನೆಯಲ್ಲಿಯೂ ಕರುಗಳಿಗೆ ಹೆಸರಿಡುವ ಪರಿಪಾಠವೇ ತಪ್ಪಿಹೋಗಿದೆ.) ಹಂಸೆ ಹುಟ್ಟಿದಾಗ ಅದರೊಂದಿಗಿನ ಗೆಳೆತನವನ್ನು, ‘ಹಂಸೆ ನನ್ನ ಪುಟ್ಟ ಕರು’ ಎಂಬ ಒಂದು ಕವನದ ಮೂಲಕ ವರ್ಣಿಸಿದ್ದೆ!

ಶಾಲೆಗೆ ರಜವಿದ್ದಾಗಲೆಲ್ಲಾ ನಾನು, ನನ್ನ ತಮ್ಮ ದನಕಾಯಲು ಹೋಗುತ್ತಿದ್ದೆವು! ಹೀಗೆ ನಮ್ಮ ಹಸುಗಳ ನಡುವೆ ನಮಗೆ ಅವಿನಾಭಾವ ಸಂಬಂಧವೇರ್ಪಟ್ಟಿತ್ತು.

ಕಾಲಸರಿದಂತೆ........(ಇದು ನನ್ನ ಒಂದು ಕವನದ ಶೀರ್ಷಿಕೆಯೂ ಹೌದು. ಇದರಲ್ಲಿ ಭಾವನೆಗಳನ್ನೇ ಹೊಮ್ಮಿಸಲಾರದ ಮಿಶ್ರತಳಿಯ ಆಗಮನದೊಂದಿಗೆ ಹಸುಗಳ ಜೀವನ ಹೇಗೆ ಯಂತ್ರೀಕೃತವಾಗುತ್ತಾ ಸಾಗಿತು ಎಂಬ ನೋವಿದೆ.)

ನಾವೂ ನಮ್ಮ ಜೀವನವು ಕೊಂಡೊಯ್ದಂತೆ ನಮ್ಮ ಹಳ್ಳಿಯ ಮನೆಯಿಂದ ದೂರವಾಗುತ್ತಾ ಹೋದೆವು. ಒಮ್ಮೊಮ್ಮೆ ಊರಿಗೆ ಹೋದಾಗಲೂ ಹಸುಗಳೊಂದಿಗಿನ ಅಪರಿಚಯತೆ ನಮ್ಮನ್ನು ಕಾಡುತ್ತಿತ್ತು. ನಮ್ಮಜ್ಜಿಯ ಬಳುವಳಿಯ ತಳಿ ತಾರೆಯ ಕರು ಮಿಶ್ರತೆಯತ್ತ ಸಾಗಿ ‘ಗುಂಡಿ?ಯಾಗಿ ಮುಂದಿನವು ಅನಾಮದೇಯಗಳಾಗಿದ್ದವು! ಪ್ರಯೋಜನಕ್ಕೆ ಬಾರದ ಹಸುಗಳು ಕೊಟ್ಟಿಗೆಯಿಂದ ಕಣ್ಮರೆಯಾಗಿದ್ದವು.



ಸಾಮಾನ್ಯವಾಗಿ ಹಬ್ಬಗಳಲ್ಲಿ ಹಸುಗಳಿಗೆ ವಿಶೇಷ ಮರ್ಯಾದೆ. ಅದರಲ್ಲೂ ದೀಪಾವಳಿ ಬಂತೆಂದರೆ ಅವುಗಳನ್ನು ಅಲಂಕರಿಸುವುದೇ ಒಂದು ಸಂಭ್ರಮ. ಹಸುಗಳಿಗೆ ಮೈತೊಳೆದು, ಚೆಂಡುಹೂವಿನ ಹಾರವನ್ನು ಕತ್ತು, ಕೊಂಬುಗಳಿಗೆ ಹಾಕಿ ಅಲಂಕರಿಸುತ್ತಿದ್ದೆವು. ಒಂದು ಮತ್ತೊಂದರ ಹಾರವನ್ನು ತಿಂದುಬಿಡುತ್ತವೆಂದು ದೂರ-ದೂರ ಕಟ್ಟಬೇಕಾಗುತ್ತಿತ್ತು. ಅಮ್ಮ ಮಾಡಿಕೊಡುತ್ತಿದ್ದ ಕಡುಬುಗಳನ್ನು ಹರಿವಾಣದಲ್ಲಿ ತಂದು ತಿನ್ನಿಸುವಾಗ ಅವುಗಳ ಆತುರ ಹೇಳತೀರದು!

ದೀಪಾವಳಿಯಂದೇ ನಡೆದ ಆ ಘಟನೆ ಕಾಕತಾಳೀಯವೋ ಎನಿಸುವಂತಿತ್ತು. ನಡುರಾತ್ರಿಯಲ್ಲಿ ನಾಯಿಗಳ ಕಾದಾಟ, ನಡುವೆಯೇ ಒಂದು ಆಕ್ರಂದನ ಕೇಳಿ ಧಾವಿಸಿದ ನನ್ನ ಮಗ, ನಾಯಿಗಳು ಒಂದು ಕರುವನ್ನು ಎಳೆದಾಡುತ್ತಾ ಅದು ಜೀವಂತವಾಗಿರುವಂತೆಯೇ ಅದನ್ನು ತಿನ್ನುತ್ತಿದ್ದ ದೃಶ್ಯವನ್ನು ಕಂಡು, ಕಲ್ಲುಹೊಡೆದು ನಾಯಿಗಳನ್ನು ಓಡಿಸಿದ್ದ. ಏಳಲಾಗದ ಸ್ಥಿತಿಯಲ್ಲಿದ್ದ ಆ ಕರುವನ್ನು ತಿನ್ನಲು ನಾಯಿಗಳು ಹೊಂಚುಹಾಕುತ್ತಾ ಆಕ್ರಮಿಸುತ್ತಿದ್ದುದರಿಂದ ಅದನ್ನು ಆ ಸ್ಥಿತಿಯಲ್ಲಿ ಬಿಡುವಂತೆಯೇ ಇರಲಿಲ್ಲ. ಆ ಅವೇಳೆಯಿಂದಲೇ ಮೊಬೈಲ್‌ನಿಂದ ಕರೆ ಮಾಡುತ್ತಾ, ಸಹಾಯಕ್ಕಾಗಿ ಯಾಚಿಸುತ್ತಾ ಬೆಳಗಿನವರೆಗೂ ಹಿಂಡುಹಿಂಡಾಗಿ ಬರುತ್ತಿದ್ದ ನಾಯಿಗಳನ್ನು ಓಡಿಸುತ್ತಾ ಜಾಗರಣೆ ಮಾಡಿದೆವು. ಹಗಲಾದ ನಂತರ ಯಾರಾದರೂ ಬಂದು ‘ಇದು ನಮ್ಮದು' ಎಂದು ಅದರ ಜವಾಬ್ಧಾರಿ ತೆಗೆದುಕೊಳ್ಳುತ್ತಾರೆ ಎಂದುಕೊಂಡಿದ್ದ ನಮ್ಮ ಅನಿಸಿಕೆ ಸುಳ್ಳಾಯಿತು. ಕೆಲವು ಪ್ರಮುಖ ವ್ಯಕ್ತಿಗಳ ಮೂಲಕ ದೊರೆತ ಸಹಕಾರದಿಂದ ಕರುವಿಗೆ ಉತ್ತಮ ಚಿಕಿತ್ಸೆ ನೀಡಿಸಿ, ಮುಂದಿನ ನಿಗಕ್ಕಾಗಿ ಆಶ್ರಮದಲ್ಲಿ ಬಿಡುವಲ್ಲಿ ಅರ್ಧ ದಿನವೇ ಕಳೆಯಿತು ಆದರೂ ಈ ದೀಪಾವಳಿಯಲ್ಲಿ ಒಂದು ಉತ್ತಮ ಕಾರ್ಯ ಮಾಡಿದ ಸಂತಸ ನಮ್ಮದಾಗಿತ್ತು. ಬದುಕಿನ ಕರಾಳಮುಖದ ದರ್ಶನದೊಂದಿಗೆ ಪ್ರಾರಂಭವಾದ ಘಟನೆ, ಬದುಕಿನ ಸೌಂದರ್ಯದ ಮುಖಾಮುಖಿಯೊಂದಿಗೆ ಒಂದು ಹಂತವನ್ನು ತಲುಪಿತ್ತು! ಆದರೆ ಆ ಸಮಾಧಾನ ಹೆಚ್ಚು ದಿನ ಉಳಿಯಲಿಲ್ಲ. ಸಕಾಲದ ಚಿಕಿತ್ಸೆ ಹಾಗೂ ಆಶ್ರಮದ ಶುಶ್ರೂಷೆಯ ನಡುವೆಯೂ ನಮ್ಮ ‘ಬಲೀಂದ್ರ' ಇಹಲೋಕವನ್ನು ತ್ಯಜಿಸಿದ. ‘ಇಂಥಾ ತಬ್ಬಲಿ ಮಗ'-ಹೋರಿಗಳನ್ನು ನಾನು ಕಛೇರಿಗೆ ಹೋಗುವ ದಾರಿಯುದ್ದಕ್ಕೂ ಗಮನಿಸಲಾರಂಭಿಸಿದೆ. ಕಸದ ತೊಟ್ಟಿಗಳ ಬಳಿ ೩-೪ ಹೋರಿಕರುಗಳು ನಿಂತು ಹೊಟ್ಟೆತುಂಬಿಸಿಕೊಳ್ಳಲು ಹೆಣಗುತ್ತಿರುತ್ತಿದ್ದವು. ಮತ್ತೊಂದು ದಿನ ನಡುರಾತ್ರಿಯಲ್ಲಿ ನಮ್ಮ ಮನೆಯ ಪಕ್ಕದಲ್ಲಿಯೇ ಮೂರು ಕರುಗಳು ಮೇಯುತ್ತಿರುವುದು ಕಾಣಿಸಿತು. ಒಂದೆರಡು ದಿನಗಳ ಹಿಂದೆ ನಮ್ಮ ಬಡಾವಣೆಯಲ್ಲಿಯೇ ಬೀದಿನಾಯಿಗಳ ಧಾಳಿಗೆ ತುತ್ತಾದ ಒಂದು ಕರು ಅವುಗಳಿಗೆ ಆಹಾರವಾಗಿದ್ದ ಸುದ್ಧಿ ತಿಳಿದಿದ್ದು, ಎಷ್ಟೇ ನಿಗಾ ವಹಿಸಿದರೂ ನಮ್ಮನ್ನಗಲಿದ ‘ಬಲೀಂದ್ರ'ನ ನೆನಪೂ ಕಾಡುತ್ತಲೇ ಇದ್ದುದರಿಂದ ಈಸಲ ಕರುಗಳ ಬಳಿಗೆ ನಾಯಿ ಬರದಂತೆ ಜಾಗ್ರತೆ ವಹಿಸಬೇಕೆಂದು ತೀರ್ಮಾನಿಸಿದೆವು. ಕಲ್ಲುಗಳನ್ನು ಗುಡ್ಡೆಹಾಕಿಕೊಂಡು ಮನೆಯವರೆಲ್ಲಾ ಬೆಳಗಿನವರೆಗೂ ಸರಧಿಯಲ್ಲಿ ಕಾಯ್ದುಕೊಂಡಿದ್ದು ಸೂರ್ಯದರ್ಶನವಾದಾಗ ಸಮಾಧಾನಹೊಂದಿದೆವು! ಇದು ಮುಗಿಯದ ಕಥೆ ಎಂದು ಮನವರಿಕೆಯಾದಾಗ ಹೇಗಾದರೂ ಈ ಸಮಸ್ಯೆಗೆ ಪರಿಹಾರ ಹುಡುಕಬೇಕು ಹಾಗೂ ಹಾಗೂ ಕ್ರೂರವಾಗಿ ಬೀದಿನಾಯಿಗಳ ಧಾಳಿಗೆ ಬಲಿಯಾಗುತ್ತಿರುವ ಕರುಗಳ ಜೀವ ಉಳಿಸಬೇಕು ಎಂದು ಮುಂದಾದಾಗ ತಿಳಿದ ವಿಷಯ ಮೈನಡುಗಿಸುವಂತಿತ್ತು. ಮಿಶ್ರತಳಿ ಗೋವುಗಳಲ್ಲಿ ಹೋರಿಕರುಗಳಿಗೆ ಬೆಲೆ ಇಲ್ಲದ್ದರಿಂದ ಅಂದರೆ ಯಾವುದೇ ಪ್ರಯೋಜನವೂ ಇಲ್ಲದ್ದರಿಂದ ಅವುಗಳನ್ನು ಬೀದಿಗೆ ಅಟ್ಟುತ್ತಿದ್ದಾರೆ! ಅಥವಾ ಸ್ಲಾಟರ್‌ಗಳಿಗೆ ಮಾರಿದ್ದು ಅವರು ಅವುಗಳನ್ನು ಹೀಗೆ ಬಿಟ್ಟಿರುತ್ತಾರೆ!

ಅಯ್ಯೋ ಪರಿತ್ಯಕ್ತ ಜೀವವೆ, ಮನುಷ್ಯರಲ್ಲಾದರೆ ಹೆಣ್ಣುಮಕ್ಕಳ ಬಗ್ಗೆ ತಾತ್ಸಾರ, ಸ್ತ್ರೀ ಭ್ರೂಣಹತ್ಯೆ, ಕೆಲವು ಬುಡಕಟ್ಟುಗಳಲ್ಲಿ ಹುಟ್ಟಿದ ಹೆಣ್ಣುಮಕ್ಕಳನ್ನೇ ಕೆಲವು ಹೇಯ ವಿಧಾನಗಳಿಂದ ಕೊಲ್ಲುತ್ತಾರೆ. ಜೀವಗಳ ಮೌಲ್ಯವನ್ನೇ ಅರಿಯಲಾಗದ ವೈಪರೀತ್ಯ.

7 comments:

  1. ಈ ಲೇಖನ ತುಂಬ ಚೆನ್ನಾಗಿದೆ.. ಎರಡೂ ಭಾಗಗಳನ್ನು ಓದಿದೆ... ನಾನು ಹಳ್ಳಿಯಲ್ಲೇ ಬೆಳೆದವನಾದ್ದರಿಂದ ಹಸುಗಳ ಒಡನಾಟ ಬಹಳ ಇದೆ.ನಮ್ಮ ಮನೆಯಲ್ಲಿ ಕೂಡ ಲಕ್ಷ್ಮಿ,ಕಾವೇರಿ,ನೇತ್ರಾ ಎಂಬ ಹೆಸರಿಟ್ಟಿದ್ದೆವು. ಊರಿನ ಪರೆವಿನ ದಿನ ಹುಟ್ಟಿದ ಹೋರಿ ಕರುವಿಗೆ 'ಸಿದ್ಧ ' ಎಂದು ಹೆಸರಿಟ್ಟಿದ್ದೆವು..ಊರಿನ ದೇವರ ಹೆಸರು ಸಿದ್ದೇಶ್ವರ ಆಗಾಗಿ... ಇನ್ನು ಮನೆಯ ದನ ಕರುಗಳೆಲ್ಲಾ ಕುಟುಂಬದ ಸದಸ್ಯರೇ ಆಗಿಬಿಟ್ಟಿದ್ದರು...ಇನ್ನು ಬಸವ ಜಯಂತಿ ದಿನ ಹೊರಿಗಳನ್ನೆಲ್ಲ ತೊಳೆದು ಅವುಗಳಿಗೆ ಮದಲಿಂಗನ ಹಾಗೆ ಸಿಂಗಾರ ಮಾಡಿ ಸಂಭ್ರಮ ಪಡುತ್ತಿದ್ದೆವು..ನಾವು ಚಿಕ್ಕವರಾಗಿದ್ದಾಗ ಅವುಗಳಿಗೆ ಸಿಂಗಾರ ಮಾಡುವುದೇ ಕುಶಿ.

    ಒಮ್ಮೆ ನಮ್ಮ ಆಳು ನಮ್ಮ ಎತ್ತಿನ ಕಾಲಿಗೆ ಕಲ್ಲಿನಲ್ಲಿ ಹೊಡೆದು ಅದು ನಡೆಯದೇ ಇರುವ ಹಾಗೆ ಆಯಿತು,ಆ ಸಂದರ್ಭದಲ್ಲಿ ನನ್ನ ಚಿಕ್ಕಪ್ಪ ಅತ್ತಿದ್ದು ರೋದನೆ ಪಟ್ಟಿದ್ದು ಇನ್ನು ಕಣ್ಣು ಮುಂದೆ ಬರುತ್ತದೆ.ನಾವು ಅಷ್ಟು ಪ್ರೀತಿಯಿಂದ ಸಾಕಿದ್ದೆವು.ನಮ್ಮ ಅಮ್ನೆಯ ಹಸು,ಕಾವೇರಿಯಾ ಮಗಳು,ನಮ್ಮ ಕಣ್ಣೆದುರಿಗೆ ಕೆಳಗೆ ಉರುಳಿ ಬಿದ್ದಾಗ ಅಪ್ಪ ಅಮ್ಮ ನಾನು ಅವತ್ತು ಸಂಕಟ ಪಟ್ಟಿದ್ದು ಅಷ್ಟಿಷ್ಟಲ್ಲ.. ಆ ನೋವಿನಲ್ಲಿ ಕೆಲವು ದಿನ ನಾವು ಯಾರು ಸರಿಯಾಗಿ ನಿದ್ದೆ,ಊಟ ಮಾಡಿಲ್ಲ..ಅಷ್ಟು ಅವುಗಳು ನಮ್ಮ ಜೊತೆ ಬೆಸೆದುಕೊಂಡು ಬಿಟ್ಟಿದ್ದವು.

    ಇನ್ನು ನಮ್ಮ ಏಳಿಗೆಗೆ ಈ ಕಾಮಧೇನುವಿನ ಸಹಾಯ ಬಹಳ ಇದೆ ಎಂದು ಹೇಳಬಹುದು..ಯಾಕಂದರೆ ಒಂದು ಕಾಲದಲ್ಲಿ ಹಾಲಿನ ದುಡ್ಡಿನಲ್ಲೇ ನನ್ನ ಫೀ ಎಲ್ಲ ಕಟ್ಟಿದ್ದು, ಬೆಳೆಗಳು ಕೈ ಕೊಟ್ಟರು ಹಸುಗಳು ಮಾತ್ರ ಕೈ ಬಿಡಲಿಲ್ಲ..ಹಾಲಿನ ದುಡ್ಡೇ ಜೀವನ ಸಾಗಿಸಲು ಇದ್ದದ್ದು. ಇನ್ನು ಕೆಲವು ಅನುಭವಗಳನ್ನು ಒಂದು ಲೇಖನದ ಮೂಲಕ ಹಂಚಿಕೊಳ್ಳಲು ಬಯಸುತ್ತೇನೆ.ನಿಮ್ಮ ಲೇಖನ ನನ್ನ ಅನುಭವಗಳು,ನೆನಪುಗಳನ್ನು ಮರುಕಳಿಸಿದವು.

    ಅಂದ ಹಾಗೆ,ಸತ್ತ ದನಗಳನ್ನು ಕಟುಕರಿಗೆ ಕೊಡುವ ಪರಿಪಾಠ ಇತ್ತೀಚಿಗೆ ಸ್ವಲ್ಪ ಕಡಿಮೆ ಆಗಿದೆ ಎನ್ನಬಹುದು...

    ReplyDelete
    Replies
    1. `ಈ ಗೋವು' ನಿಮ್ಮ ಹಸುಗಳೊಂದಿಗಿನ ಒಡನಾಟವನ್ನು ನೆನಪುಮಾಡಿದ್ದು ಕಂಡು ಸಂತಸವಾಯ್ತು.ನಿಮ್ಮಿಂದ ಒಂದು ಲೇಖನದ ನಿರೀಕ್ಷೆಯಲ್ಲಿರುತ್ತೇನೆ. ಇತ್ತೀಚೆಗೆ ಅಪ್ರಯೋಜಕವೆಂದುಕೊಂಡಿರುವ ಎಳೆ ಹೊರಿಕರುಗಳನ್ನೆ ಕಟುಕರಿಗೆ ಕೊಡುತ್ತಿರುವುದು ನೋವಿನ ಸಂಗತಿಯಾಗಿದೆ. ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಬರುತ್ತಿರಿ.

      Delete
  2. ಹಸುಗಳೊಂದಿನ ನಿಮ್ಮ ಒಡನಾಟವನ್ನು ಓದಿ ಖುಶಿಯಾಯಿತು. ಮಿಶ್ರತಳಿಯ ಹೋರಿಕರುಗಳನ್ನು ನಿರ್ದಯೆಯಿಂದ ಓಡಿಸುವುದನ್ನು ಓದಿದಾಗ ದುಃಖವೂ ಆಯಿತು.

    ReplyDelete
  3. ನಾನು ನೋಡಿದ ಕೆಲ ಹೆಸರುಳ್ಳ ದನ ಮತ್ತು ಎಮ್ಮೆಗಳ ನೆನಪಾಯಿತು.

    ReplyDelete
  4. ನನ್ನ ಶಾಲಾ ದಿನಗಳ ನೆನಪಯಿತು....ನಾನು ಹಳ್ಳಿಯಲ್ಲಿ ಹುಟ್ಟಿ ಬೆಳೆದವನಾದ್ದರಿಂದ ದನಕರುಗಳ ಜೊತೆಗಿನ ನನ್ನ ಒಡನಾಟ ನಿಮ್ಮ ಲೇಖನದಿಂದ ಮತ್ತೆ ಹಸಿರಾಯಿತು.....ರಜೆ ಸಿಕ್ಕಿದಾಗ ನಾವು ಸಹ ದನಕರುಗಳನ್ನು ಮೇಯಿಸಲು ಹೋಗುತಿದ್ದೆವು,...ಅವುಗಳನ್ನು ಒಂದೆಡೆ ಬಿಟ್ಟು ನಾವು ಆಡುತ್ತ ಕುಳಿತು ಕೊಂಡಾಗ ಅವುಗಳು ಬೇರೆಯವರ ಹೊಲಗದ್ದೆಗಳಿಗೆ ನುಗ್ಗಿ ನಾವು ಬೈಗುಳ ತಿಂದ ಅನೇಕ ಪ್ರಸಂಗಗಳು ಇವೆ....ಗಿರೀಶರ ಕೆಲವು ಅನಿಸಿಕೆಗಳು ನನ್ನ ಅನಿಸಿಕೆಗಳು ಕೂಡ....ಉತ್ತಮ ಲೇಖನ ...ಧನ್ಯವಾದಗಳು....

    ReplyDelete
  5. ಉತ್ತಮ ಲೇಖನ! ಮನಸು ಕಲಕಿತು. ಗೋ ಮಾತೆ ಪ್ರತ್ಯಕ್ಷ ದೇವರು, ಜೊತೆಗೆ ಹೆಣ್ಣು ಕೂಡ. ನಮ್ಮ ಜೀವನದಲ್ಲಿ ಬೆಳಕು ನೀಡುವ ಇವರನ್ನು ಗೌರವದಿಂದ ಕಾಣುವ ಸಮಾಜ ಸೃಷ್ಟಿಯಾಗಲಿ.

    ReplyDelete