Friday, June 29, 2012

ಮನದ ಅಂಗಳದಿ.........೯೮. ‘ಆತ್ಮ’ವೆಂದರೆ.......

      ನಮ್ಮೂರಿನಲ್ಲಿ ಯಾರಾದರೂ ಮರಣಹೊಂದಿದರೆ ಸಾಯಂಕಾಲ ನಮ್ಮ ಸೋದರತ್ತೆಯೊಬ್ಬರು ಬಾಗಿಲಿನ ಹೊಸ್ತಿಲ ಕೆಳಗೆ ಬೂದಿಯಿಂದ ರಂಗೋಲಿ ಇಡುತ್ತಿದ್ದರು. ಏಕೆಂದು ಕೇಳಿದರೆ, ಸತ್ತವರ ಆತ್ಮ ಇಲ್ಲೇ ಸುತ್ತುತ್ತಿರುತ್ತದೆ. ಅದು ಮನೆಯೊಳಗೆ ಪ್ರವೇಶಿಸಬಾರದೆಂದು ಹೀಗೆ ಮಾಡುವುದೆಂದು ಹೇಳುತ್ತಿದ್ದರು. ನಮಗೆಲ್ಲಾ ಏನೋ ಭಯ. ಆ ರೀತಿಯ ಭಯ ಇತ್ತೀಚಿನವರೆಗೂ ಕಾಡುತ್ತಿತ್ತು. ನಾನು ಸಣ್ಣವಳಿದ್ದಾಗಲೇ ಆತ್ಮದ ಬಗ್ಗೆ ಒಂದು ಶ್ಲೋಕವನ್ನೇ ಬರೆದಿದ್ದೆ! ಅದು ಯಾವುದೋ ಒಂದು ಶ್ಲೋಕದ ಧಾಟಿಯಲ್ಲಿದ್ದುದರ ನೆನಪು!
      ಆತ್ಮವನ್ನು ಸೃಷ್ಟಿ ಮಾಡಲೂ ಸಾಧ್ಯವಿಲ್ಲ, ನಾಶ ಮಾಡಲೂ ಸಾಧ್ಯವಿಲ್ಲ. ಅದು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಬದಲಾಗುತ್ತದೆ,’ ಎಂದು ಮುಂದೆ ಶಕ್ತಿಯ ಸಂರಕ್ಷಣಾ ನಿಯಮವನ್ನು ಓದಿದಾಗ ಒಂದು ನಿಯಮವನ್ನು ರೂಪಿಸಿಕೊಂಡಿದ್ದೆ! ಎಂದರೆ ಈ ಭೂಮಿಯ ಮೇಲಿರುವ ಎಲ್ಲಾ ಜೀವಿಗಳ (ಸಸ್ಯ ಮತ್ತು ಪ್ರಾಣಿಗಳನ್ನೊಳಗೊಂಡು) ಒಟ್ಟು ಸಂಖ್ಯೆ ಯಾವಾಗಲೂ ಸ್ಥಿರವಾಗಿರುತ್ತದೆ. ಈಗ ಇರುವೆಯಾಗಿರುವುದು ಮುಂದೆ ಮರವಾಗಬಹುದು, ನಂತರ ಯಾವುದಾದರೂ ಪ್ರಾಣಿಯಾಗಬಹುದು ಎಂದೆಲ್ಲಾ ಕಲ್ಪಿಸಿಕೊಳ್ಳುತ್ತಿದ್ದೆ! ಇದಕ್ಕೆ ನಮ್ಮತ್ತೆ ತಮ್ಮ ತಂದೆಯ ಬಗ್ಗೆ ಅಭಿಮಾನದಿಂದ ಹೇಳುತ್ತಿದ್ದ ಮಾತು, ‘ನಮ್ಮಪ್ಪ ಸತ್ತು ಸಂಪಿಗೆ ಮರವಾಗಿದಾರೆಎನ್ನುವುದು ಪುಷ್ಟಿ ನೀಡುತ್ತಿತ್ತು. ಏಕೆ ಆ ವಯಸ್ಸಿನಲ್ಲಿ ಈ ಎಲ್ಲಾ ಆಲೋಚನೆಗಳು ಬರುತ್ತಿದ್ದವೋ ತಿಳಿಯದು. ಎಲ್ಲವೂ ಮನಸ್ಸಿನಲ್ಲೇ ಮಂಡಿಗೆಯಾಗುತ್ತಿದ್ದವು. ಬಾಯಿ ತೆರೆದು ಮಾತನಾಡುತ್ತಿದ್ದುದೇ ಕಡಿಮೆ.
        ನಮ್ಮ ತಂದೆ ಹೇಳುತ್ತಿದ್ದ ಒಂದು ಕಥೆ ಆಗಾಗ ಮನಃಪಟಲದ ಮೇಲೆ ಮೂಡುತ್ತದೆ.
        ಒಮ್ಮೆ ಶಂಕರಾಚಾರ್ಯರು ತಮ್ಮ ಶಿಷ್ಯರ ಜೊತೆ ಸಂಚರಿಸುತ್ತಿದ್ದಾಗ ದಾರಿಗೆ ಅಡ್ಡವಾಗಿ ಒಬ್ಬ ಸಮಾಜವು ಕನಿಷ್ಠವರ್ಗವೆಂದು ಪರಿಗಣಿಸಿದಾತ ಎದುರಾಗುತ್ತಾನೆ. ಆಗ ಅವರು, ‘ದೂರ ಸರಿಎನ್ನುತ್ತಾರೆ. ಆತ, ‘ಅನ್ನಮಯ ಕೋಶಗಳಿಂದಾದ ಈ ನನ್ನ, ದೇಹ ನಿಮ್ಮ ಅನ್ನಮಯ ಕೋಶಗಳಿಂದಾದ  ದೇಹದಿಂದ ದೂರ ಸರಿಯಬೇಕೋ ಅಥವಾ ಚೈತನ್ಯ ರೂಪಿಯಾದ ನನ್ನ ಆತ್ಮ, ನಿಮ್ಮ ಚೈತನ್ಯ ರೂಪಿಯಾದ  ಆತ್ಮದಿಂದ ದೂರ ಸರಿಯಬೇಕೋ?’ ಎಂದು ಕೇಳುತ್ತಾನೆ. ಇದರಿಂದ ಎಚ್ಚೆತ್ತ ಆಚಾರ್ಯರು, ‘ನೀನೇ ನನ್ನ ಗುರು,’ ಎಂದು ಅವನಿಗೆ ಸಾಷ್ಟಾಂಗ ಎರಗುತ್ತಾರೆ.
         ಈ ಒಂದು ಘಟನೆಯ ಬಗ್ಗೆ ಅನೇಕ ಚರ್ಚೆಗಳಾಗಿವೆ. ಸಮರ್ಥನೆಗಳೂ ರೂಪುಗೊಂಡಿವೆ. ಏನೇ ಆಗಲೀ ಇಲ್ಲಿ ಎರಡು ಪ್ರಬುದ್ಧ ಚೇತನಗಳ ಸಮಾಗಮವನ್ನು ಕಾಣುತ್ತೇವೆ.        
         ಈ ಕಥೆ ನೆನಪಿನಲ್ಲೇ ಇರಲು ಸಮಾಂತರವಾಗಿ ನಡೆದ ಒಂದು ಘಟನೆಯ ಕಾರಣವೂ ಇದೆ. ನಾವು ನಮ್ಮ ಶಾಲಾ ರಜದ ದಿನಗಳಲ್ಲಿ ಹೆಚ್ಚು ಸಮಯವನ್ನು ನಮ್ಮ ಗದ್ದೆಯಲ್ಲಿಯೇ ಕಳೆಯುತ್ತಿದ್ದೆವು. ಸಮೀಪದ  ಹೇಮಾವತಿ ನದಿಯ ಬಳಿಗೆ ಒಮ್ಮೆ ನಾನು ನಮ್ಮ ಅತ್ತೆ ಹೋಗಿದ್ದಾಗ ಜೋರಾಗಿ ಮಳೆ ಬಂತು. ಆಶ್ರಯಕ್ಕಾಗಿ ಹತ್ತಿರವಿದ್ದ ಪ್ರವಾಸಿ ಬಂಗಲೆಗೆ ಹೋದೆವು. ಬಾಗಿಲು ಮುಚ್ಚಿದ್ದರಿಂದ ಮುಂಬಾಗದಲ್ಲಿಯೇ ನಿಲ್ಲಬೇಕಾಯಿತು. ನಮ್ಮಂತೆಯೇ ಸುತ್ತಮುತ್ತಾ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದವರೂ ಬಂದು ನಿಂತರು. ಅತ್ತೆ, ‘ಏನು ಹಾಗೆ ಮೈಮೇಲೆ ಹೇರಿಕೋತೀರಿ. ದೂರ ನಿಲ್ಲಕ್ಕೆ ಆಗಲ್ವಾ?' ಎಂದರು. ಥಟ್ಟನೆ ಒಬ್ಬಾಕೆ, ‘ಬಿಡ್ರವ್ವ, ನಮ್ಮ ಮೈಲಿ ಹರೀತಿರೋದೂ ರಕ್ತಾನೇ,’ ಎಂದುಬಿಟ್ಟರು!   
         ಜಿಡ್ಡು ಕೃಷ್ಣಮೂರ್ತಿಯವರು ಆತ್ಮವೆಂಬುದು ಇದೆಯೇ?’ ಎನ್ನುವುದನ್ನು ಈ ರೀತಿಯಾಗಿ ವಿಶ್ಲೇಷಿಸಿದ್ದಾರೆ.
      
      ‘............... ನಾವು ಪೂರ್ವದ ಜನ್ಮ-ಪುನರ್ಜನ್ಮ ಇದೆ, ಮರುಹುಟ್ಟು ಇದೆ, ಆತ್ಮವು ತನ್ನನ್ನು ತಾನು ಸದಾ ನವೀಕರಿಸಿಕೊಳ್ಳುತ್ತದೆ ಇತ್ಯಾದಿಯಾಗಿ ಹೇಳುತ್ತಿರುತ್ತೇವೆ. ಈ ಮಾತುಗಳನ್ನು ಎಚ್ಚರದಿಂದ ಕೇಳಿ.
      ಆತ್ಮವೆಂಬುದು ಇದೆಯೇ? ಇದೆ ಎಂದು ನಂಬುವುದಕ್ಕೆ ನಮಗೆ ಇಷ್ಟ. ಈ ನಂಬಿಕೆ ನಮಗೆ ಸುಖ ಕೊಡುತ್ತದೆ. ಆತ್ಮವು ಆಲೋಚನೆಗೆ ಅತೀತವಾದದ್ದು, ಅತೀತಕ್ಕೆ ಅತೀತವಾದದ್ದು, ಶಾಶ್ವತವಾದದ್ದು, ಆಧ್ಯಾತ್ಮಿಕವಾದದ್ದು, ಅಮರವಾದದ್ದು ಎಂದು ನಂಬಿ ನಮ್ಮ ಆಲೋಚನೆ ಅದಕ್ಕೆ ಜೋತುಬಿದ್ದಿರುತ್ತದೆ. ಆದರೆ ಕಾಲಕ್ಕೆ ಅತೀತವಾದ, ಆಲೋಚನೆಗೆ ಅತೀತವಾದ, ಮನುಷ್ಯನಿಂದ ಸೃಷ್ಟಿತವಲ್ಲದ, ಮನುಷ್ಯ ಸ್ವಭಾವವನ್ನು ಮೀರಿದ, ತಂತ್ರಗಾರ ಮನಸ್ಸಿನ ಕಲ್ಪನೆಯದಲ್ಲದ ಆತ್ಮವೆಂಬುದು ಇದೆಯೇ? ಏಕೆಂದರೆ ಮನಸ್ಸು ಎಲ್ಲೆಡೆಯಲ್ಲೂ ಅಗಾಧವಾದ ಅನಿಶ್ಚಿತತೆ, ಗೊಂದಲಗಳನ್ನೇ ಬದುಕಿನಲ್ಲಿ ಅಶಾಶ್ವತವಾದುದನ್ನೇ ಕಾಣುತ್ತದೆ. ಯಾವುದೂ ಶಾಶ್ವತವಲ್ಲ- ಗಂಡ-ಹೆಂಡತಿಯ ನಡುವಿನ ಪರಸ್ಪರ ಸಂಬಂಧ, ಉದ್ಯೋಗ ಯಾವುದೂ ಶಾಶ್ವತವಲ್ಲ. ಆದ್ದರಿಂದಲೇ ಮನಸ್ಸು ಶಾಶ್ವತವಾದ ಯಾವುದೋ ಒಂದನ್ನು ಕಲ್ಪಿಸಿಕೊಳ್ಳತ್ತದೆ, ಅನ್ವೇಷಿಸಿಕೊಳ್ಳುತ್ತದೆ.  ಹಾಗೆ ಅನ್ವೇಷಿಸಿಕೊಂಡದ್ದನ್ನು ಆತ್ಮವೆಂದು ಕರೆಯುತ್ತದೆ. ಆದರೆ ಆತ್ಮವನ್ನು ಕುರಿತು ಮನಸ್ಸು ಕಲ್ಪಿಸಿಕೊಳ್ಳಬಹುದು, ಆಲೋಚನೆ ಯೋಚಿಸಿಕೊಳ್ಳಬಹುದು. ಆಲೋಚನೆ ಯೋಚಿಸಬಹುದಾದ್ದರಿಂದಲೇ ಅದು, ಆತ್ಮವೆಂಬುದು, ಸಹಜವಾಗಿಯೇ ಕಾಲದ ವಲಯಕ್ಕೆ ಸೇರಿದ್ದು. ನಾವು ಯಾವುದೇ ಸಂಗತಿಯನ್ನು ಕುರಿತು ಯೋಚಿಸಬಲ್ಲೆವು ಎಂದರೆ ಅದು ನಮ್ಮ ಆಲೋಚನೆಯ ಭಾಗವೇ ಆಗಿರುತ್ತದೆ. ನಮ್ಮ ಆಲೋಚನೆಯೆಂಬುದು ಕಾಲದ, ಅನುಭವದ, ಜ್ಞಾನದ ಫಲಿತಾಂಶವಾಗಿರುತ್ತದೆ. ಆದ್ದರಿಂದ ಆತ್ಮವೆಂಬುದು ಇನ್ನೂ ಕಾಲದ ವಲಯದಲ್ಲೇ ಇರುವಂಥದ್ದು.........
      ಆದ್ದರಿಂದಲೇ ಮತ್ತೆ ಮತ್ತೆ ಹುಟ್ಟಿಬರುವ ಆತ್ಮದ ಸಾತತ್ಯದ ಕಲ್ಪನೆಯು ಅರ್ಥಹೀನವಾದದ್ದು. ಏಕೆಂದರೆ ಅದು ಭಯಗೊಂಡ ಮನಸ್ಸಿನ, ಶಾಶ್ವತೆಯ ಹಂಬಲ ತುಂಬಿಕೊಂಡ ಮನಸ್ಸಿನ, ಖಚಿತತೆ ಮತ್ತು ಆಶೆಯ ಬಯಕೆಯುಳ್ಳ ಮನಸ್ಸಿನ ಸೃಷ್ಟಿ. 
      ಜಿಡ್ಡು ಕೃಷ್ಣಮೂರ್ತಿಯವರ ಈ ಪ್ರಬುದ್ಧ ಚಿಂತನೆಗೆ ನಮ್ಮನ್ನು ಒಗ್ಗಿಸಿಕೊಳ್ಳುವುದು ಕಠಿಣವೆನಿಸಬಹುದು. ಆದರೆ ಈ ಚಿಂತನೆಯಲ್ಲಿ ಅಡಕವಾಗಿರುವ  ಇಂದಿನ ಈ ಜೀವನವನ್ನು ಸಾರ್ಥಕಗೊಳಿಸುವುದು ಅತ್ಯಂತ ಪ್ರಮುಖವಾದದ್ದು ಎನ್ನುವ ಆಶಯವನ್ನು ಸಾಕಾರಗೊಳಿಸಲು ಪ್ರಯತ್ನಿಸೋಣ.

Monday, June 25, 2012

ನೆನಪುಗಳು


ಜಗಿಜಗಿದು
ಸ್ವಾದರಹಿತವಾಗಿದ್ದರೂ
ಈ ತಾ೦ಬೂಲವ
ಉಗಿಯಲಾಗದ
ವಿಚಿತ್ರ ಮೋಹ!

Monday, June 18, 2012

ಮನದ ಅಂಗಳದಿ.........೯೭.ಸಾಂತ್ವನ

     ಯಾವುದೇ ದುಃಖವಾದರೂ ಕ್ರಮೇಣ ತನ್ನ ತೀವ್ರತೆಯನ್ನು ಕಡಿಮೆಗೊಳಿಸಿಕೊಳ್ಳುತ್ತಾ ಸಾಗುತ್ತದೆ. ಅದಕ್ಕೆ ಹೊರಗಿನಿಂದ ಆತ್ಮೀಯರ ಮಾತುಗಳು ಇಂಬುಗೊಟ್ಟರೆ, ನಮ್ಮ ಒಳಗಿನಿಂದಲೇ ಒಂದು ಸಿದ್ಧತೆಯೂ ರೂಪುಗೊಳ್ಳುತ್ತಾ ಸಾಗುತ್ತದೆ. ಸುಧೀರ್ಘವಾಗಿ ನಮ್ಮೊಂದಿಗೆ ತನ್ನ ಬದುಕನ್ನು ಮಿಳಿತಗೊಳಿಸಿ ಸಾಗಿದ್ದ ಜಿಮ್ಮಿ?ಯ ಅಗಲಿಕೆಯ ನೋವೂ ಹೀಗೇ ತನ್ನ ಅಗಾಧತೆಯನ್ನು ತಿಳಿಗೊಳಿಸಿಕೊಳ್ಳಲೇಬೇಕಿತ್ತು. ಅದಕ್ಕೆ ಪುಷ್ಟಿಕೊಟ್ಟಿದ್ದು ಮಗಳು ಸುಷ್ಮಸಿಂಧುವಿನ ಒಂದು ಕನಸು-ಕೇಳು ಚಿನ್ನು’. ( ಇದು ಅವಳ ಕನಸುಗಳ ಕಥಾ ಸಂಕಲನ ಪಯಣ ಸಾಗಿದಂತೆ......ಯಲ್ಲಿ ಸೇರ್ಪಡೆಯಾಗಿದೆ.)  ಅದೂ ಕೂಡ ಇಂಥದೇ ಸಂದರ್ಭದಲ್ಲಿ ಅವಳಿಗೆ ಬಂದದ್ದು, ತನ್ಮೂಲಕ ಅಂಥಾ ಮನಃಸ್ಥಿತಿಗಳಿಗೆ ಸಾಂತ್ವನ ನೀಡಲೆಂದೇ ಇರುವುದು ಎನ್ನುವುದು ನನ್ನ ಭಾವನೆ.
     ಸುಮಾರು ಆರು ವರ್ಷಗಳ ಹಿಂದೆ ಜಿಮ್ಮಿಗೆ ಬೆಂಜಿಎನ್ನುವ ಏಕೈಕ ಮರಿ ಇತ್ತು. ನಮ್ಮ ಮನೆಯಲ್ಲೇ ಹುಟ್ಟಿದ ಆ ಮರಿಯನ್ನು ಸುಷ್ಮ ಶಾಲಿನಲ್ಲಿ ಸುತ್ತಿಕೊಂಡು ಎತ್ತಿಕೊಂಡಿರುತ್ತಿದ್ದ ದೃಶ್ಯ ಇನ್ನೂ ನನ್ನ ಕಣ್ಣಮುಂದಿದೆ. ಬಹಳ ಮುದ್ದು- ಸುಂದರನಾಗಿ ಬೆಳೆಯುತ್ತಿದ್ದ ಆ ಮರಿ ಒಂದು ವರ್ಷದಲ್ಲೇ ಅನಾರೋಗ್ಯದಿಂದ ಸತ್ತುಹೋಯಿತು.
ಪತ್ರರೂಪದಲ್ಲಿರುವ ಕೇಳು ಚಿನ್ನುಕನಸಿನ ಆಯ್ದ ಭಾಗಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ:
ಪ್ರೀತಿಯ ಚಿನ್ನುವಿಗೆ,
     ನಿನ್ನ ಬದುಕಿನಲ್ಲಿ ಪುಟ್ಟ ಪಾತ್ರಧಾರಿಯಾಗಿ ಬಂದು ಹೋದ ನನ್ನಸವಿ ನೆನಪುಗಳು. ನಿನ್ನಿಂದ ಮರೆಯಾಗಿಯೂ ಆಗದಂತಿರುವ ನನ್ನನ್ನು ಕಂಡು ಅಚ್ಚರಿಯಾಯಿತಾ? ನಿನ್ನ ಕಣ್ಣುಗಳಲ್ಲಿ ಪುಟಿಯುತ್ತಿರುವ ನೀರ ಹನಿಗಳನ್ನೊಮ್ಮೆ ಒರೆಸಿಕೊಂಡು ನೋಡು. ನಾನಿಲ್ಲೇ ಬಂದಿದ್ದೇನೆ. ನಿನ್ನೆದುರೇ...... ನಿನ್ನ ಜೀವನದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಬಂದು ಹೋದ ನನ್ನ ಅಗಲುವಿಕೆ ನಿನ್ನನ್ನು ಈ ಪರಿ ಕಾಡಿದರೆ ನನಗೆ ಸಂತೋಷವಾ? ನಿನ್ನ ಕಣ್ಣೆದುರಿಗೆ ಇನ್ನೂ ದಿನಗಳೇ ಉಳಿದುಬಿಟ್ಟಿವೆಯಾ? ಅಂದು ನನ್ನದು ಅಪಾರ ಯಾತನೆ. ನರನರಗಳಲ್ಲಿಯೂ ಸುಳಿದಾಡುವ ನೋವು’. ಅದೊಂದು ಕ್ಷಣ ಅಷ್ಟೇ...... ನನ್ನ ನೋವುಗಳೆಲ್ಲಾ ಮಾಯವಾಗಿಹೋದವು. ನಾನು ಅವುಗಳಿಂದ ಮುಕ್ತನಾಗಿಹೋದೆ........ ನನ್ನೆದಿರು ಕುಳಿತಿದ್ದ ನಿನ್ನ ಕಣ್ಣುಗಳಲ್ಲಿ ಹನಿಗಳ ಓಕುಳಿ. ನನಗೆ ಮಹದಾಶ್ಚರ್ಯ! ಅರೆ! ........ ನನ್ನ ಕಾಲುಗಳು ಅಲ್ಲಾಡುತ್ತಿಲ್ಲ.... ನನ್ನ ಕಣ್ಣುಗಳನ್ನು ತೆರೆಯಲಾಗುತ್ತಿಲ್ಲ.... ಆದರೂ ನನಗೇನೋ ಸಂತಸ! ಚಿನ್ನೂ, ಆ ನೋವಿನ ದಿನಗಳಲ್ಲಿ ನನ್ನ ಬದುಕಿಗಾಗಿ ಹೋರಾಡಿದ ನಿನ್ನನ್ನು ನಾನು ಮರೆಯುತ್ತೀನಾ? ನಿನ್ನ ಪ್ರಯತ್ನವನ್ನೂ, ನನ್ನ ಹಿಡಿತವನ್ನೂ ಮೀರಿದ ಘಟನೆಗೆ ನೀನು ಹೀಗೆ ರೋಧಿಸುತ್ತಿದ್ದರೆ ನನಗೆ ಖುಷಿಯಾ?............
       ..............ಇಂದು ಎಲ್ಲರ ಪ್ರಕಾರ ನಾನು ದೈಹಿಕವಾಗಿ ದೂರವಾಗಿದ್ದರೂ ನಿನಗೆ ತುಂಬಾ ಹತ್ತಿರವಾಗಿದ್ದೇನೆ ಎನಿಸುತ್ತಿದೆ. ಮೊದಲಾದರೆ ನಾನು-ನೀನುಎಂಬ ಅಂತರವೊಂದಿತ್ತು. ಆದರೆ ಇಂದು ನಾನು ನನ್ನ ಅಸ್ತಿತ್ವವನ್ನು ಕಳೆದುಕೊಂಡು ನಿನ್ನೊಳಗೇ ಲೀನವಾಗಿ ನಿನ್ನವನಾಗಿ ಹೋಗಿದ್ದೇನಲ್ಲವಾ? ನಾನಿಷ್ಟು ಹತ್ತಿರವಾಗಿರುವಾಗ ನೀ ಹೀಗೆ ಅಳುತ್ತಿದ್ದರೆ ನನಗೆ ಕೋಪ ಬರುವುದಿಲ್ಲವಾ?
       ಎಷ್ಟೋ ಜೀವಗಳ ಜೀವನವನ್ನೇ ತೆಗೆದುಕೊ. ಎಲ್ಲಾ ಬದುಕು-ಸಾವಿನ ಮಧ್ಯದ ಪಯಣವೇ ಅಲ್ಲವಾ? ಒಂದು ಬದುಕು-ಹುಟ್ಟು ಎಷ್ಟು ಸಂತಸ ಕೊಡುತ್ತದೆ. ಅದೇ ಒಂದು ಸಾವೇಕೆ ಜೀವನವನ್ನೇ ಬರ್ಭರವಾಗಿಸಿಬಿಡುತ್ತದೆ? ಪ್ರತಿ ಅಂತ್ಯವೂ ಒಂದು ಆರಂಭವೆನ್ನುವಂತೆ, ಒಂದು ಆತ್ಮೀಯನ ಸಾವೂ ಒಂದು ಆರಂಭವೇ ಅಲ್ಲವಾ? ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದ ಜೀವನವನ್ನು ಮತ್ತೆ ಆರಂಭಿಸುವುದಿಲ್ಲವಾ? ಯಾವ ಸಾವೂ ಒಂದು ಬದುಕನ್ನು ಅಂತ್ಯದವರೆಗೂ ತೆಗೆದುಕೊಂಡು ಹೋಗಬಾರದಲ್ಲವಾ ಚಿನ್ನು?..........ನನಗೆ ಇಷ್ಟೆಲ್ಲಾ ಮಾತನಾಡುವಷ್ಟು ಬುದ್ಧಿ ಎಲ್ಲಿಂದ ಬಂತು ಎಂದು ಯೋಚಿಸುತ್ತಿದ್ದೀಯಾ ಹೇಗೆ? ಯಾರ ಅಗಲುವಿಕೆಯೂ ನಮ್ಮ ಸೋಲಿಗೆ ಕಾರಣವಾಗಬಾರದು. ಮುಂದೆ ಹಸನಾಗಿ ಹರಡಿಕೊಂಡಿರುವ ಜೀವನಕ್ಕೆ ಸ್ಫೂರ್ತಿಯಾಗಬೇಕು. ಒಂದು ಅಧ್ಯಾಯ ಮುಗಿದ ನಂತರ ಮತ್ತೊಂದು ಶುರುವಾಗುವುದಿಲ್ಲವಾ ಚಿನ್ನು? ಹಾಗೇ ನನ್ನ ಅಧ್ಯಾಯನಿನ್ನ ಜೀವನದ ಒಂದು ಪ್ರಮುಖ ಘಟ್ಟವಾಗಲಿ.
ಕನಸುಗಳಿಗೆ ಮಾತ್ರ ಸೀಮಿತವಾಗಿರುವ ನನ್ನನ್ನು ನಿನ್ನ ನೆನಪಿನ ಪುಟಗಳಲ್ಲಿ ಅಮರವಾಗಿಸಿಬಿಡು. ನನ್ನ ಅಸ್ತಿತ್ವವನ್ನು ಅಲ್ಲಿ ಶಾಶ್ವತಗೊಳಿಸಿಬಿಡು ಚಿನ್ನು. ಯಾರಿಗೂ ಹೇಳಲಾಗದ, ವಿವರಿಸಲಾಗದ ಆ ವೇದನೆಯನ್ನು ಈಗ ನನಗೆ ಹೇಳಿಬಿಡು. ಸಾಕು, ಆ ಎಲ್ಲದರಿಂದ ಹೊರಬಂದುಬಿಡು, ನನ್ನಂತೆ! ಒಂಟಿಯಾಗಿ ಕುಳಿತು ಆ ದುರಂತವನ್ನು ನೆನೆದು ದುಃಖಿಸಿ ನಿನ್ನ ಇರುವಿಕೆಯನ್ನೇ ಕಠಿಣಗೊಳಿಸಿಕೊಳ್ಳುವ ಬದಲು, ಆ ಒಂಟಿ ಕ್ಷಣಗಳಲ್ಲಿ ಮುಂದಿನ ಕನಸು ಕಟ್ಟು, ಯೋಜನೆ ಮಾಡು. ನನ್ನ ಅಗಲುವಿಕೆ ನಿನ್ನ ಹಿಂದಿನ ಜೀವನದ ಒಂದು ಭಾಗವೇ ಹೊರತು, ಮುಂದಿನ ನಿನ್ನ ಕನಸುಗಳ ಪಾಲಿನ ಹೊಡೆತವಲ್ಲ ಚಿನ್ನು. ನಿನ್ನಲ್ಲಿರುವ ನನ್ನ ಬದುಕನ್ನು ಚೆನ್ನಾಗಿ ನಡೆಸಿಕೊ ಚಿನ್ನು.
       ನಮ್ಮಿಂದ ದೂರವಾದವರು ಹಾರಿಹೋಗಿ ದೂರದಲ್ಲಿ ನಕ್ಷತ್ರವಾಗುತ್ತಾರೆ ಎಂಬ ಕಲ್ಪನೆ ಎಷ್ಟು ಚೆಂದವಲ್ಲವಾ? ನನ್ನನ್ನು ಆ ನಕ್ಷತ್ರವಾಗಿಸಿಬಿಡು. ಆ ನಕ್ಷತ್ರದ ಹೊಳಪು ನಾನಾಗಿ ಬಾಂದಳವ ನಿಟ್ಟಿಸುತ್ತಿರುವ ನಿನ್ನ ಕಣ್ಣುಗಳಲ್ಲಿ ಮಿಂಚುವುದು ಎಷ್ಟು ಖುಷಿಯಲ್ಲವಾ? ನಿನ್ನ ಪ್ರತೀ ಸೋಲು-ಗೆಲವುಗಳಲ್ಲಿ ನನ್ನ ಹಾರೈಕೆಯಿದೆ, ತುಂಬಾ ಪ್ರೀತಿಯಿದೆ, ಮುದ್ದು ಸಾಂತ್ವನವಿದೆ. ನಿನ್ನ ಮುಂದಿನ ಜೀವನಕ್ಕೆ ನನ್ನ ಶುಭಾಶಯ. ನೀನು ಮುಂದೆಮುಂದೆ ಸಾಗುತ್ತಿರಬೇಕೆಂಬುದೇ ನನ್ನ  ಆಶಯ. ಈ ಪುಟ್ಟ ಗೆಳೆಯನ ದೊಡ್ಡ!ಮಾತುಗಳನ್ನು ಮರೆಯುವುದಿಲ್ಲ ತಾನೆ? ನಾನು ಕೂಡ ನನ್ನ ಪುಟ್ಟ ಗೆಳತಿಯ ಮುಂದಿರುವ ದೊಡ್ಡ ಜೀವನವನ್ನು ನೋಡಲು ಕಾತುರದಿಂದಿದ್ದೇನೆ.....!
      ಇನ್ನಾದರೂ ಒಮ್ಮೆ ನಕ್ಕುಬಿಡು....... ನಮ್ಮ ತರಲೆ ದಿನಗಳ ನೆನಪಿನಲ್ಲಿ.... ಪ್ಲೀಸ್......
                                                         ಇತಿ,
                                            ನಿನ್ನೊಳಗೇ ಅಡಗಿರುವ ನಿನ್ನ
                                                       ಗೆಳೆಯ

Monday, June 11, 2012

ಮನದ ಅಂಗಳದಿ.........೯೬. ‘ಸಾವು’ಎಂಬ ಅಮರತ್ವ

ಹದಿಮೂರು ವರ್ಷಗಳಿಂದ ನಮ್ಮ ಒಡನಾಡಿಯಾಗಿದ್ದು ಚುರುಕಾಗಿಯೇ ಇದ್ದ ಜಿಮ್ಮಿಇದ್ದಕ್ಕಿದ್ದಂತೆಯೇ ಆಹಾರ-ನೀರನ್ನು ಬಿಟ್ಟು ಅನಾರೋಗ್ಯಪೀಡಿತವಾದಾಗ ಮನೆಯಲ್ಲಿ ಎಲ್ಲರಿರೂ ಚಿಂತಿಸುವಂತಾಯಿತು. ದಿನದಿಂದ ದಿನಕ್ಕೆ  ದುರ್ಬಲವಾಗುತ್ತಿದ್ದ ಜಿಮ್ಮಿಗೆ ಗ್ಲೂಕೋಸ್ ಡ್ರಿಪ್ ಹಾಕಿಸಿ ಚಿಕಿತ್ಸೆ ಕೊಡಿಸಲಾರಂಭಿಸಿದರೂ ಫಲಕಾರಿಯಾಗಲಿಲ್ಲ. ಈಗಾಗಲೇ ಪೂರ್ಣಾಯಸ್ಸು ಕ್ರಮಿಸಿರುವುದರಿಂದ ಅದರ ಬದುಕಿನ ಬಗ್ಗೆ ಯಾವುದೇ ಆಶಾ ಭಾವನೆಯನ್ನೂ ವೈದ್ಯರು ನೀಡಲಿಲ್ಲ. ಸುಮಾರು ಹದಿನೈದು ದಿನಗಳು ಮರಣಶಯ್ಯೆಯಲ್ಲಿದ್ದ ಜಿಮ್ಮಿಯನ್ನು ನೋಡಿದಾಗಲೆಲ್ಲಾ ನನ್ನ ಮನಸ್ಸಿನಲ್ಲಿ ಸಾವಿನ ಕುರಿತಾದ ಆಲೋಚನೆಗಳೇ ಬರಲಾರಂಭಿಸಿದವು. ಚಿಕ್ಕಂದಿನಲ್ಲಿ ಸಾವು ಎಂದರೆ ಏನೋ ಭಯ. ನಂತರದ ದಿನಗಳಲ್ಲಿ ಒಂದು ರೀತಿಯ ನಿಗೂಢತೆ. ಈ ಬಗ್ಗೆ ಜಿಡ್ಡು ಕೃಷ್ಣಮೂರ್ತಿಯವರ ಚಿಂತನೆಯ ಆಯ್ದ ಭಾಗಗಳು ಹೀಗಿದೆ:
    ಸಾವುಎಂದರೆ ನಮಗೆ ಭಯ. ಸಾವಿನ ಭಯ ಕೊನೆಗಾಣಬೇಕಾದರೆ ನಮಗೆ ಸಾವಿನ ಸಂಪರ್ಕ ಬರಬೇಕು. ಅಂದರೆ ನಮ್ಮ ಆಲೋಚನೆಗಳು ಸಾವನ್ನು ಕುರಿತು ಮೂಡಿಸಿಕೊಂಡಿರುವ ಕಲ್ಪನೆಗಳನ್ನೋ, ಚಿತ್ರಗಳನ್ನೋ ಅಲ್ಲ. ಸಾವಿನ ಸ್ಥಿತಿಯನ್ನು ನಾವು ನಿಜವಾಗಿ ಅನುಭವಿಸಬೇಕು. ಇಲ್ಲದಿದ್ದರೆ ಸಾವಿನ ಭಯ ಕೊನೆಗೊಳ್ಳುವುದೇ ಇಲ್ಲ. ಸಾವು ಎಂಬ ಪದವೇ ನಮ್ಮಲ್ಲಿ ಭಯವನ್ನು ಮೂಡಿಸುತ್ತಿರುತ್ತದೆ. ಸಾವಿನ ಬಗ್ಗೆ ಮಾತನಾಡುವುದಕ್ಕೂ ನಮಗೆ ಇಷ್ಟವಿರುವುದಿಲ್ಲ. ಆರೋಗ್ಯವಂತರಾಗಿ, ಸ್ವಸ್ಥವಾಗಿ, ಸ್ಪಷ್ಟ ಆಲೋಚನೆಯ ಸಾಮರ್ಥ್ಯವಿಟ್ಟುಕೊಂಡು, ವಸ್ತಿನಿಷ್ಟವಾಗಿ ಆಲೋಚಿಸುತ್ತಾ, ಪರಿಶೀಲಿಸುತ್ತಾ, ಸಾವು ಎಂಬ ವಾಸ್ತವದ ಸಂಪರ್ಕವನ್ನು ಪಡೆಯುವುದಕ್ಕೆ ಸಾಧ್ಯವೇ? ಈ ಶರೀರ ಬಳಸಿ, ಬಳಸಿ ಅಥವಾ ರೋಗದ ಕಾರಣದಿಂದ ಸಾಯುತ್ತದೆ. ನಾವು ಆರೋಗ್ಯವಂತರೂ ಸ್ವಸ್ಥರೂ ಆಗಿದ್ದರೆ ಸಾವು ಎಂದರೇನೆಂದು ತಿಳಿದುಕೊಳ್ಳಲು ಬಯಸುತ್ತೇವೆ. ಇದು ವಿಕೃತ ಆಸೆಯಲ್ಲ. ಬಹುಷಃ ನಾವು ಸಾವಿನ ಮೂಲಕವೇ ಬದುಕನ್ನು ಅರ್ಥಮಾಡಿಕೊಳ್ಳುತ್ತೇವೆ. ಈಗಿರುವಂತೆ ಬದುಕೆಂದರೆ ಹಿಂಸೆ, ಕೊನೆಯಿಲ್ಲದ ತಳಮಳ, ವೈರುಧ್ಯಗಳ ಸಂತೆ. ಆದ್ದರಿಂದಲೇ ಬದುಕಿನಲ್ಲಿ ಸಂಘರ್ಷವಿದೆ, ಕಾರ್ಪಣ್ಯವಿದೆ, ಗೊಂದಲವಿದೆ. ದಿನವೂ ಆಫೀಸಿಗೆ ಹೋಗುವುದು, ಬರುವುದು; ನೋವು ತುಂಬಿದ ಸುಖಗಳ ಪುನರಾವರ್ತನೆ, ಕಳವಳ, ಹುಡುಕಾಟ,ಅನಿಶ್ಚಿತತೆ-ಇವನ್ನೆಲ್ಲಾ ನಾವು ಬದುಕು ಎಂದು ಕರೆಯುತ್ತೇವೆ. ಈ ರೀತಿಯ ಬದುಕು ನಮಗೆ ಅಭ್ಯಾಸವಾಗಿಬಿಟ್ಟಿದೆ. ಅದಕ್ಕೆ ಹೊಂದಿಕೊಂಡುಬಿಟ್ಟಿದ್ದೇವೆ..... ಹೀಗೆಯೇ ಬದುಕುತ್ತಾ ವಯಸ್ಸಾಗಿ ಸಾಯುತ್ತೇವೆ.
     ಬದುಕುವುದು ಎಂದರೇನು ಎಂದು ತಿಳಿಯಲು ಸಾವು ಎಂದರೇನು ಎಂದು ತಿಳಿಯಬೇಕು, ಸಾವಿನ ಸಂಪರ್ಕ  ಪಡೆಯಬೇಕು. ಅಂದರೆ ನಮಗೆ ಏನೇನು ಗೊತ್ತಿದೆಯೋ ಅದೆಲ್ಲಾ ಪ್ರತಿದಿನ ಸತ್ತುಹೋಗುತ್ತಿರಬೇಕು. ಗೊತ್ತಿರುವುದಲ್ಲದರ ಸಾವು ಸಂಭವಿಸಬೇಕು. ನಮ್ಮ ಬಗ್ಗೆ ನಾವೇ ಮೂಡಿಸಿಕೊಂಡಿರುವ ಬಿಂಬ ಸಾಯಬೇಕು. ನಮ್ಮ ಕುಟುಂಬದ ಬಗ್ಗೆ, ನಮ್ಮ ಸಂಬಂಧಗಳ ಬಗ್ಗೆ ನಾವು ಮೂಡಿಸಿಕೊಂಡಿರುವ ಬಿಂಬಗಳು ಸಾಯಬೇಕು. ನಾವು ಪಡೆದ ಸುಖಗಳ ಬಿಂಬ, ಸಮಾಜದೊಡನೆ ನಮಗೆ ಇರುವ ಸಂಬಂಧವವನ್ನು ಕುರಿತ ಬಿಂಬ ಎಲ್ಲವೂ ಸಾಯಬೇಕು. ದಿನವೂ ಸಾಯಬೇಕು. ಏಕೆಂದರೆ ಸಾವು ಸಂಭವಿಸಿದಾಗ ಆಗುವುದು ಇದೇ.

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಕ್ಷಣ ನವೀನ ಜನನ
ನಮಗದೇಕೆ ಬಾರದೋ?’ 
     ಎನ್ನುವ ವರಕವಿ ಬೇಂದ್ರೆಯವರ ನುಡಿಯನ್ನು ಪುಷ್ಟೀಕರಿಸುವಂತಿದೆ ಜೆ.ಕೃಷ್ಣಮೂರ್ತಿಗಳ ಈ ಸಾಲುಗಳು:
     `........ದುಃಖ ಕೊನೆಗೊಳ್ಳಬೇಕಾದರೆ ಬದುಕಿರುವಾಗಲೇ ಸಾವನ್ನು ಸಂಧಿಸಬೇಕು. ನಿಮ್ಮ ಹೆಸರು, ನಿಮ್ಮ ಮನೆ, ನಿಮ್ಮ ಆಸ್ತಿ, .......ಎಲ್ಲದರ ಪಾಲಿಗೂ ದಿನದಿನವೂ ಸತ್ತು, ಇರುವುದೆಲ್ಲ ಇರುವಂತೆಯೇ ಯಾವ ವಿಕೃತಿಯೂ ಇರದೆ ಫ್ರೆಶ್ ಆಗಿ, ಸ್ಪಷ್ಟವಾಗಿ ಕಾಣುವಂತೆ ಯೌವನಭರಿತರಾಗಿ ಹುಟ್ಟುತ್ತಿರಬೇಕು. ಆದರೆ ನಾವು ಸಾವನ್ನು ಕೇವಲ ಭೌತಿಕವಾದದ್ದು ಎಂದು ಸೀಮಿತಗೊಳಿಸಿಕೊಂಡು ಬಿಟ್ಟಿದ್ದೇವೆ. ಈ ಶರೀರ ಕೊನೆಗಾಣುವುದು ಖಚಿತ ಎಂದು ತಾರ್ಕಿಕವಾಗಿ, ಸ್ವಸ್ಥವಾಗಿ ತಿಳಿದುಕೊಂಡಿದ್ದೇವೆ. ಆದರೂ ನಮಗೆ ನಮ್ಮ ಬದುಕು ಮುಂದುವರೆಯಬೇಕೆಂಬ ಆಸೆ......        
     .......ದಿನದಿನವೂ ಸಾಯುವ ಮೂಲಕವೇ ಹೊಸತಾಗುವುದಕ್ಕೆ, ಮರುಹುಟ್ಟು ಪಡೆಯುವುದಕ್ಕೆ ಸಾಧ್ಯ. ಅದು ಅಮರತ್ವ. ಸಾವಿನಲ್ಲಿ ಅಮರತ್ವವಿದೆ. ಇದು ನೀವು ಭಯಪಡುವ ಸಾವು ಅಲ್ಲ. ಪೂರ್ವ ತೀರ್ಮಾನಗಳು, ನೆನಪುಗಳು, ಅನುಭವಗಳು, ‘ನನ್ನದು? ಎಂದು ಏನೇನನ್ನು ಗುರುತಿಸಿದ್ದೀರೋ ಅವೆಲ್ಲವುಗಳ ಸಾವು. ನಾನು ಮತ್ತು ನನ್ನದು ಪ್ರತಿನಿಮಿಷವೂ ಸಾಯುತ್ತಿರುವಾಗ ಅನಂತತೆ ಇರುತ್ತದೆ, ಅಮರತ್ವವಿರುತ್ತದೆ.
     ಮಕ್ಕಳು ಪ್ರಾಥಮಿಕ ಶಾಲೆಯಲ್ಲಿದ್ದಾಗ ನಮ್ಮ ಮನೆ ಸೇರಿದ್ದ ಜಿಮ್ಮಿ ಅವರ ಬಾಲ್ಯದೊಂದಿಗೇ ತನ್ನ ಬಾಲ್ಯವನ್ನೂ ಪ್ರಾರಂಭಿಸಿ, ಅವರ ಕಾಲೇಜು ಶಿಕ್ಷಣ ಮುಗಿಯುವ ವೇಳೆಗೆ ವೃದ್ಧಾಪ್ಯವನ್ನೂ ತಲುಪಿ ತನ್ನ ಜೀವನ ಯಾತ್ರೆಯನ್ನೇ ಮುಗಿಸಿತು. ಮೂಲತಃ ಅತ್ಯಂತ ಧೈರ್ಯಶಾಲಿಯಾಗಿದ್ದ ಜಿಮ್ಮಿ ಅನೇಕ ಆಪತ್ತುಗಳಿಂದ ನಮ್ಮನ್ನು ರಕ್ಷಿಸಿತ್ತು. ಅದರ ಅಸ್ತಿತ್ವವೇ ನಮಗೆ ಧೈರ್ಯವಾಗಿತ್ತು. ಜಿಮ್ಮಿಯ ಅಂತಿಮ ಕ್ಷಣಗಳು, ಮಕ್ಕಳಲ್ಲಿರುವ ಸೇವಾ ತತ್ಪರತೆ, ಪ್ರೀತಿ, ಕರುಣೆ, ತಾದ್ಯಾತ್ಮದಂತಹ ಧನಾತ್ಮಕ ಭಾವಗಳನ್ನು ನನಗೆ ಗೋಚರಿಸುವಂತೆ ಮಾಡಿತು.   
         

Saturday, June 2, 2012

ಮನದ ಅಂಗಳದಿ.........೯೫.ಜೀವಜಲ

  ಈ ಭೂಮಿಯ ಮೇಲೆ ಜೀವಿಗಳ ಅಸ್ಥಿತ್ವಕ್ಕೆ ಅತ್ಯಗತ್ಯವಾದ ವಸ್ತುಗಳಲ್ಲಿ ನೀರೂ ಒಂದು. ನೀರಿನ ಬಳಕೆಯ ಬಗ್ಗೆ, ಅದರ ಪ್ರಾಮುಖ್ಯತೆಯ ಬಗ್ಗೆ ಅರಿವೇ ಇಲ್ಲದಂತೆ ಬೇಕಾದಂತೆ ನಾವು ನೀರನ್ನು ಉಪಯೋಗಿಸುತ್ತಿರುತ್ತೇವೆ. ಆದರೆ ನಮ್ಮ ದೇಹಕ್ಕೆ ಅಗತ್ಯ ಪ್ರಮಾಣದ ನೀರನ್ನು ಒದಗಿಸದೇ ಅದನ್ನು ಅನೇಕ ರೋಗಗಳ ಆವಾಸ ಸ್ಥಾನವನ್ನಾಗಿ ಮಾಡುತ್ತೇವೆ. ವೈದ್ಯರಾದ ಡಾ. ಬಟ್‌ಮನ್‌ಗೆಲಿಡ್ಜ್(Dr. Batmanghelidj)ರವರು ನಮ್ಮ ದೇಹದಲ್ಲಿ  ನೀರಿನ ಪಾತ್ರದ ಕುರಿತಾಗಿ ಅನೇಕ ಸಂಶೋದನೆಗಳನ್ನು ನಡೆಸಿ `Your Body's Many Cries for Water’ ಎನ್ನುವ ಪುಸ್ತಕವನ್ನು ಬರೆದು ಮಾನವ ಸಮುದಾಯಕ್ಕೇ ಕೊಡುಗೆಯನ್ನಾಗಿ ನೀಡಿದ್ದಾರೆ. ಈ ಪುಸ್ತಕವು ರೋಗಗಳನ್ನು ತಡೆದು ಉತ್ತಮ ಆರೋಗ್ಯವನ್ನು ಉಳಿಸಿಕೊಳ್ಳಲು ಒಂದು ನೈಸರ್ಗಿಕ ಕ್ರಾಂತಿಕಾರಿ ಮಾರ್ಗವಾಗಿದೆ.
     ನಾವು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯದೇ ಇರುವುದರಿಂದ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಅನೇಕ ರೋಗಗಳಿಂದ ನೆರಳುತ್ತಿದ್ದಾರೆ ಎನ್ನುವುದನ್ನು ಈಗ ನಾವು ಒಪ್ಪಿಕೊಳ್ಳಬೇಕಾಗಿದೆ. ದೀರ್ಘಕಾಲದ ನಿರ್ಜಲೀಕರಣವೇ ಇಂದು ವಯಸ್ಕರಲ್ಲಿ  ಆಸ್ತಮಾ, ಅಲರ್ಜಿಗಳು, ಆರ್ಥೈಟಿಸ್, ಮೈಗ್ರೇನ್ ತಲೆನೋವು, ಹೈಪರ್ ಟೆನ್ಷನ್, ಕೊಲಾಸ್ಟ್ರಾಲ್ ಹೆಚ್ಚುವಿಕೆ, ದೀರ್ಘಕಾಲದ ಸುಸ್ತು, ಡಿಪ್ರೆಶನ್, ಡಯಾಬಿಟಿಸ್ ಮುಂತಾದ ಅನೇಕ ರೀತಿಯ ಅನಾರೋಗ್ಯಕ್ಕೆ ಕಾರಣವಾಗಿದೆ.
       ಡಾ. ಬಟ್‌ಮನ್‌ಗೆಲಿಡ್ಜ್ ರವರ ಅಭಿಪ್ರಾಯದಂತೆ ಶರೀರವು ಅನೇಕ ರೀತಿಯ ಬಾಯಾರಿಕೆಯ ಸಂಕೇತಗಳನ್ನು ಹೊಂದಿದೆ. ಒಣಗಿದ ಬಾಯಿ ಮಾತ್ರ ಬಾಯಾರಿಕೆಯ ಲಕ್ಷಣವಲ್ಲ. ಅವರು ವಿವಿಧ ರೀತಿಯ, ನಂಬಲರ್ಹವಾದ ಸೂಚನೆಗಳನ್ನು ತಿಳಿಸುತ್ತಾ ದೇಹವು ಯಾವಾಗ ನೀರಿಗಾಗಿ ಅಪೇಕ್ಷಿಸುತ್ತದೆ ಎನ್ನುವುದನ್ನು ತಿಳಿಸುತ್ತಾರೆ. ಇದರಿಂದ ದೇಹದ ನೀರಿನ ಅಪೇಕ್ಷೆಯನ್ನು ಹೋಗಲಾಡಿಸಿಕೊಂಡು ಕಾಸಿನ ಖರ್ಚಿಲ್ಲದೇ ವೈವಿಧ್ಯ ರೀತಿಯ ರೋಗಗಳಿಂದ ಮುಕ್ತಿಯನ್ನು ಹೊಂದಬಹುದು. ಅವರು ನೀರನ್ನು ಪ್ರಕೃತಿಯ ಆಶ್ಚರ್ಯಕರ ಔಷಧ’ ಎಂದು ಕರೆಯುತ್ತಾರೆ. ಅವರು ಒಬ್ಬ ವ್ಯಕ್ತಿಯು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಷ್ಟು ಪ್ರಮಾಣ ನೀರನ್ನು ಕುಡಿಯಬೇಕು ಎನ್ನುವುದನ್ನು ತಿಳಿಸುತ್ತಾರೆ. ಕಾಫಿ, ಟೀ, ಸೋಡಾಗಳು ನೀರಿಗೆ ಉತ್ತಮ ಪರ್ಯಾಯವಲ್ಲ ಎಂದೂ ತಿಳಿಸುತ್ತಾರೆ.
     ಡಾ. ಬಟ್‌ಮನ್‌ಗೆಲಿಡ್ಜ್ ರವರು ನೀರಿನ ಔಷಧೀಯ ಗುಣಗಳನ್ನು ಕಂಡು ಅರಿತ ಮೊದಲ ಸಂದರ್ಭ ಬಹಳ ಸ್ವಾರಸ್ಯಕರವಾಗಿದೆ.
      ಡಾ. ಫೆರಿಡೂನ್ ಬಟ್‌ಮನ್‌ಗೆಲಿಡ್ಜ್ ರವರು ೧೯೩೧ರಲ್ಲಿ ಇರಾನ್ ನಲ್ಲಿ ಹುಟ್ಟಿದರು. ಅವರು ತಮ್ಮ ವೈದ್ಯಕೀಯ ತರಬೇತಿಯನ್ನು ಲಂಡನ್‌ನ ಸೇಂಟ್ ಮೇರೀಸ್ ಹಾಸ್ಪಿಟಲ್ ಮೆಡಿಕಲ್ ಸ್ಕೂಲ್‌ನಲ್ಲಿ ಪಡೆದರು. ನಂತರ ಅಲ್ಲಿಯೇ ಹೌಸ್ ಡಾಕ್ಟರ್ ಆದರು. ಇರಾನ್‌ಗೆ ಹಿಂತಿರುಗುವ ಮೊದಲು ಇಂಗ್ಲೆಂಡ್‌ನಲ್ಲಿಯೂ ವೈದ್ಯಕೀಯ ತರಬೇತಿ ಪಡೆದರು. ೧೯೭೯ರಲ್ಲಿ ಕ್ರಾಂತಿಯಾದಾಗ ಪ್ರಸಿದ್ಧ ಕುಟುಂಬದವರಾದ  ಡಾ. ಬಟ್‌ಮನ್‌ಗೆಲಿಡ್ಜ್ ರವರನ್ನು ಬಂಧಿಸಿ ಜೈಲಿಗೆ ತಳ್ಳಿದರು. ಇವಿನ್ ಕಾರಾಗೃಹದಲ್ಲಿದ್ದಾಗಲೇ ಅವರು ನೀರಿನ ಗುಣಕಾರೀ ಶಕ್ತಿಯನ್ನು ಸಂಶೋಧಿಸಿದರು.
       ಒಂದು ರಾತ್ರಿ ಡಾ. ಬಟ್‌ಮನ್‌ಗೆಲಿಡ್ಜ್ ರವರು ಪೆಪ್ಟಿಕ್‌ಅಲ್ಸರ್‌ನಿಂದ ನೋವನ್ನು ಅನುಭವಿಸುತ್ತಿದ್ದ ತಮ್ಮ ಸಹಕೈದಿಗೆ ಔಷದೊಪಚಾರ ಮಾಡಬೇಕಾಯ್ತು. ಯಾವುದೇ ಅನುಕೂಲತೆಗಳೂ ಇಲ್ಲದಿದ್ದರಿಂದ ನೋವಿನಿಂದ ತೀವ್ರವಾಗಿ ನರಳುತ್ತಿದ್ದಾತನಿಗೆ ಎರಡು ಲೋಟ ನೀರನ್ನು ಕುಡಿಸಿದರು. ಎಂಟು ನಿಮಿಷಗಳಲ್ಲಿಯೇ ಅವನ ನೋವು ಮಾಯವಾಯ್ತು! ಅವನಿಗೆ ಪ್ರತಿ ಮೂರು ಗಂಟೆಗೊಮ್ಮೆ ಎರಡು ಲೋಟ ನೀರನ್ನು ಕುಡಿಯಲು ತಿಳಿಸಿದರು. ಅವನು ಜೈಲಿನಲ್ಲಿದ್ದ ಮುಂದಿನ ನಾಲ್ಕು ತಿಂಗಳ ಕಾಲ ನೋವಿನಿಂದ ನರಳಲೇ ಇಲ್ಲ! ಯಾವುದೇ ಔಷದೋಪಚಾರವಿಲ್ಲದೇ ಅವನು ಗುಣಮುಖನಾಗಿದ್ದನು.
       ತಾವು ಜೈಲಿನಲ್ಲಿದ್ದ ೩೧ತಿಂಗಳಕಾಲ ಡಾ. ಬಟ್‌ಮನ್‌ಗೆಲಿಡ್ಜ್‌ರವರು ೩೦೦೦ಕ್ಕೂ ಅಧಿಕ ಪೆಪ್ಟಿಕ್‌ಅಲ್ಸರ್‌ನಿಂದ ನರಳುತ್ತಿದ್ದ ರೋಗಿಗಳನ್ನು ಕೇವಲ ನೀರಿನಿಂದಲೇ ಉಪಚರಿಸಿ ಗುಣಪಡಿಸಿದರು. ತಾವು ಬಂಧಿಯಾಗಿದ್ದಾಗಲೇ ನೀರಿನ ಔಷಧೀಯ ಗುಣಗಳ ಬಗ್ಗೆ ಪ್ರಶಸ್ತವಾದ ಸಂಶೋಧನೆಗಳನ್ನು ನಡೆಸಿದರು ಹಾಗೂ ನೀರು ಅನೇಕ ತೀವ್ರ ನೋವಿನ ರೋಗಗಳನ್ನು ತಡೆಯುತ್ತದೆ, ಶಮನ ಮಾಡುತ್ತದೆ ಹಾಗೂ ಗುಣಪಡಿಸುತ್ತದೆ ಎನ್ನುವುದನ್ನು ಕಂಡುಹಿಡಿದರು. ಅವರು ಇವಿನ್ ಪ್ರಿಸನ್‌ಅನ್ನು ಒಂದು "ideal stress laboratory," ಎಂದು ಪರಿಗಣಿಸಿದರು ಹಾಗೂ ತಮ್ಮ ಬಂಧನದ ಅವಧಿಯು ಪೂರೈಸಿದ ನಂತರವೂ ನಾಲ್ಕು ತಿಂಗಳು ಹೆಚ್ಚಾಗಿ ಅಲ್ಲಿಯೇ ಇದ್ದು ನಿರ್ಜಲೀಕರಣ, ಒತ್ತಡ ಮತ್ತು ರೋಗಗಳ ನಡುವಿನ ಪರಸ್ಪರ ಸಂಬಂಧದ ಕುರಿತಾದ ಸಂಶೋಧನೆಯನ್ನು ಪೂರ್ಣಗೊಳಿಸಿದರು. ೧೯೮೨ರಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ಇರಾನಿನಿಂದ ತಪ್ಪಿಸಿಕೊಂಡು ಅಮೇರಿಕಾಗೆ ಹೋಗಿ ಅಲ್ಲಿ ಮಾನವನ ಶರೀರದಲ್ಲಿ ನೀರಿನ ಪಾತ್ರ’ ಮತ್ತು ಮಾನವನ ಆರೋಗ್ಯ ಮೇಲೆ ನಿರ್ಜಲೀಕರಣದ ಹಾನಿಕಾರಕ ಪರಿಣಾಮಗಳು’ ಇವುಗಳ ಬಗ್ಗೆ ತಮ್ಮ ಸಂಶೋದನೆಯನ್ನು ಮುಂದುವರೆಸಿದರು. ಅವರ ಅಧ್ಯಯನಗಳಿಂದ ತಿಳಿದು ಬಂದ ಪ್ರಮುಖ ಅಂಶವೆಂದರೆ ಕ್ರಮಾನುಸಾರ ಯತೇಚ್ಛವಾಗಿ ನೀರನ್ನು ಕುಡಿಯುವಂತಹ ಜೀವನ ಶೈಲಿಯನ್ನು ಅಳವಡಿಸಿಕೊಂಡರೆ ನಾವು ಸಂತಸದಾಯಕವಾದ ಆರೋಗ್ಯಕರ ಜೀವನವನ್ನು ನಡೆಸಬಹುದು ಹಾಗೂ ತೀವ್ರ ನೋವಿನಿಂದ ಕೂಡಿದ ರೋಗಗಳಿಂದ ನರಳುತ್ತಾ ಸೇವಿಸಬೇಕಾದ ಅಧಿಕ ವೆಚ್ಚವುಂಟುಮಾಡುವ ಔಷಧಗಳಿಂದ ದೂರವಿರಬಹುದು.
ಈಗ  ಡಾ. ಬಟ್‌ಮನ್‌ಗೆಲಿಡ್ಜ್‌ರವರು ನೀರಿನ ಗುಣಕಾರೀ ಶಕ್ತಿಯ ಬಗ್ಗೆ ಜನರಲ್ಲಿ ತಿಳುವಳಿಕೆಯನ್ನುಂಟುಮಾಡುವ  ಕಾರ್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.  ಅವರ ಪುಸ್ತಕ `Your Body's Many Cries for Water’ ಸಾವಿರಾರು ಜನರು ಆರೋಗ್ಯಕರವಾದ ಸಂತೋಷದ ಜೀವನವನ್ನು ನಡೆಸಲು ಸಹಕಾರಿಯಾಗಿದೆ.
     ಮೊದಲು ನಮ್ಮ ಶರೀರದ ಆರೋಗ್ಯವನ್ನು ಉತ್ತಮಪಡಿಸಿಕೊಂಡರೆ ನಂತರ ಯಾವುದೇ ಸಾಧನೆಯನ್ನೂ ಮಾಡಬಹುದು ಶರೀರಮಾದ್ಯಂ ಖಲು ಧರ್ಮ ಸಾಧನಂ’. ನಮಗೆ ಸುಲಭವಾಗಿ ಸಿಗುವ ನೀರಿನಲ್ಲಿಯೇ ನಮ್ಮ ಆರೋಗ್ಯದ ಗುಟ್ಟು ಅಡಗಿದೆ ಎಂದ ಮೇಲೆ. ತಡವೇಕೆ?