Monday, March 28, 2011

`ಪ್ರತೀಕ್ಷೆ'ಗೆ ಒಂದು ವರ್ಷವಾಯಿತು

28-03-2011 ಕ್ಕೆ ನನ್ನ `ಪ್ರತೀಕ್ಷೆ'ಗೆ ಒಂದು ವರ್ಷವಾಯಿತು. ಈ ಅವಧಿಯಲ್ಲಿ ನನ್ನ ಬ್ಲಾಗ್ ಗೆ ಬಂದು ನಾನು ಬರೆದ `ಹನಿ', `ಲಲಿತ ಪ್ರಬ೦ಧ', ಲೇಖನ ಮತ್ತು ಕವನಗಳನ್ನು ಓದಿ, ಪ್ರತಿಕ್ರಿಯಿಸಿ ನನ್ನನು ಪ್ರೋತ್ಸಾಹಿಸಿದ ಎಲ್ಲರಿಗೂ ಅನಂತಾನಂತ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ದೊರೆಯುತ್ತಿರಲಿ ಇಂದು ಆಶಿಸುವೆ.

Friday, March 25, 2011

ಹನಿಗಳು

ಮುಕ್ತ
ತಿಂದಷ್ಟೂ ಅತೃಪ್ತ
ಹೊಟ್ಟೆಬಾಕ ಹುಳುವಿಗೂ
ವೈರಾಗ್ಯ,
ಸೆರೆ
ಕೊಶದಲಿ ಬಂಧಿಯಾಗಿ,
ಫಲಿಸಿತು
ಸತತ ಮೌನ
ಧ್ಯಾನದ ಭಾಗ್ಯ,
ಹೊರಹೊಮ್ಮಿತು
ಚಿಟ್ಟೆಯಾಗಿ!

ಸಂಬಂಧ!
ಚಪ್ಪಲಿಗಳು ಮನುಷ್ಯರಂತಲ್ಲ
ಒಂದನೊಂದು ಬಿಟ್ಟಿರುವುದಿಲ್ಲ
ಒಮ್ಮೆ ಅಗಲಿದರಂತೂ
ಮತ್ತೆಂದೂ
ಸೇರುವುದಿಲ್ಲ!

ವ್ಯತ್ಯಾಸ
ಬಿಸಿಲಿಗೆ ಶಿರವೊಡ್ಡಿ
ಧರೆಗೆ ತಂಪನೀಯುವ
'ಮರ'
ಪರೋಪಕಾರಿ
ನೆತ್ತಿಗೆ ಸುಡುಬಿಸಿಲು
ಕಾಲಡಿ ಚಲಿಪ ನೆರಳಿನ
'ರೈತ'ನದೋ
ಸದಾ
'ಹಸಿದ'
ಒಡಲುರಿ.

ಉತ್ಕಟ
ಪ್ರತಿ ದು:ಖದ
ಆಳದಲ್ಲಿಯೂ
ಮತ್ತೊಂದು
ದು:ಖದ
ಭೋರ್ಗರೆತ!

ಆಶಾವಾದಿ
ಸುಳಿ ಆಳಕೆ
ಸೆಳೆಯುತಿದ್ದರೂ
ಬಳಿ ಬಂದ
ಮರದ ತುಂಡನು
ಬಿಗಿದಪ್ಪುವ ಜೀವ!

Saturday, March 12, 2011

ಮನದ ಅಂಗಳದಿ..................೩೨. ಅನುಭವ

`Experience makes man perfct’ ಎನ್ನುವ ಒಂದು ಉಕ್ತಿ ಇದೆ. ‘ಅನುಭವವು ಮನುಷ್ಯನನ್ನು ಪರಿಪೂರ್ಣನನ್ನಾಗಿ ಮಾಡುತ್ತದೆ' ಎಂದಿರುವುದರಿಂದ ಇಲ್ಲಿ ಮನುಷ್ಯರಾದ ನಮ್ಮ ಅನುಭವದ ಬಗ್ಗಯೇ ಚಿಂತಿಸೋಣ. ಆದರೂ ಸಾಮಾನ್ಯವಾಗಿ ‘ಅನುಭವ' ಎಂದ ತಕ್ಷಣ ತೆನಾಲಿರಾಮಕೃಷ್ಣನ ಬೆಕ್ಕಿನ ಕಥೆಯ ನೆನಪಾಗುತ್ತದೆ. ಬೆಕ್ಕು ಬಿಸಿಹಾಲನ್ನು ಕುಡಿಯಲು ಹೋಗಿ ಮೂತಿಯನ್ನು ಸುಟ್ಟುಕೊಂಡಿದ್ದರಿಂದ ಮುಂದೆ ಅದು ಹಾಲನ್ನು ನೋಡಿದರೇ ‘ಸುಡುವ ವಸ್ತು' ಎಂಬ ಅನುಭವದಿಂದ ಓಡಿಹೋಗುತ್ತದೆ! ಹಾಗಾದರೆ ‘ಅನುಭವ' ಎಂದರೇನು? ಅದು ಕೇವಲ ಪಂಚೇಂದ್ರಿಯಗಳ ಮೂಲಕ ಸಿಗುವ ಜ್ಞಾನವೆ? ಅಥವಾ ಇನ್ನೂ ಹೆಚ್ಚೆ? ಒಂದು ಪ್ರಾಣಿಯ ಅನುಭವಕ್ಕೂ ಮನುಷ್ಯನ ಅನುಭವಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ವಿವೇಚನಾಶಾಲಿಯಾದ ಮನುಷ್ಯನು ತನ್ನ ಅನುಭವವನ್ನು ವಿವೇಚನೆಯ ಒರೆಗೆ ಹಚ್ಚಿ ನೋಡಬಲ್ಲ ಎಂದು ನಾವು ತಿಳಿದಿದ್ದೇವೆ.

ಯಾವುದಾದರೂ ಕೆಲಸಕ್ಕೆ ಅರ್ಜಿ ಹಾಕುವಾಗ ಅದರಲ್ಲಿ ‘ಅನುಭವ' ಎನ್ನುವ ಅಂಶವೂ ಇರುತ್ತದೆ. ಅನುಭವವಿರುವ ವ್ಯಕ್ತಿಯು ಆ ವೃತ್ತಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಬಲ್ಲ ಎನ್ನುವುದು ಅದರ ಉದ್ದೇಶವಿರಬಹುದು. ವೃತ್ತಿಯನ್ನು ಪ್ರವೇಶಿಸದೇ ಅನುಭವವನ್ನು ಪಡೆಯುವುದಾದರೂ ಹೇಗೆ?

ನಾವು ಓದುವ ಪುರಾಣದ ಕಥೆಗಳು, ಚರಿತ್ರೆಗಳಲ್ಲಿ ಎಷ್ಟೋ ಮಹಾನ್ ವ್ಯಕ್ತಿಗಳ ಅನುಭವಗಳಿರುತ್ತವೆ. ಅವರು ಎದುರಿಸಿದ್ದ ಕಷ್ಟಗಳು, ಸಂದಿಗ್ಧಗಳು, ಸಮಸ್ಯೆಗಳು.....ಅದಕ್ಕೆ ಕಂಡುಕೊಂಡ ಪರಿಹಾರಗಳು ಎಲ್ಲವೂ ಇರುತ್ತದೆ. ಅಂಥಾ ಪರಿಸ್ಥಿತಿ ನಮಗೆ ಬಂದರೆ ಅದನ್ನು ನಿರ್ವಹಿಸುವ ಸುಳಿವುಗಳೂ ದೊರೆಯುತ್ತವೆ. ಆದರೆ ನಾವು ಎಷ್ಟರಮಟ್ಟಿಗೆ ಅದನ್ನು ಅನುಸರಿಸುತ್ತೇವೆ?

ನಮ್ಮ ಜನಪದ ಸಾಹಿತ್ಯದಲ್ಲಿ ಓದು-ಬರಹ ತಿಳಿಯದ ಸಾಮಾನ್ಯ ಜನತೆ ತಮ್ಮ ಅನುಭವಗಳನ್ನು ಆಡುಭಾಷೆಯಲ್ಲಿಯೇ ಹಾಡಿ ತಿಳಿಸಿದರು. ಅದು ಒಬ್ಬರಿಂದ ಒಬ್ಬರಿಗೆ ಮೌಖಿಕವಾಗಿ ಪ್ರಸಾರವಾಗಿ ಹಾಡಲು ಅಂದವಾಯಿತೇ ವಿನಾ ಅಳವಡಿಸಿಕೊಂಡಂತಾಯಿತೇ?

೧೨ನೇ ಶತಮಾನದಲ್ಲಿ ಶರಣರೆಲ್ಲರೂ ಒಂದುಗೂಡಿ ‘ಅನುಭವ ಮಂಟಪ'ದ ಮೂಲಕ ತಮ್ಮ ಅನುಭವಗಳಿಗೆ ‘ವಚನ'ಗಳೆಂಬ ಸುಂದರಶೈಲಿ ಕೊಟ್ಟು ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸಿದರು. ಆ ಒಂದೊಂದು ವಚನವೂ ಅನುಭವದ ಆಗರವೇ ಆಗಿದೆ. ಅದನ್ನು ಅನುಸರಿಸಿದ್ದರೆ ಇಷ್ಟೆಲ್ಲಾ ಗೊಂದಲಗಳು ಉಂಟಾಗುತ್ತಿದ್ದವೆ?

ಇವನ್ನೆಲ್ಲಾ ನೋಡಿದಾಗ ಇನ್ನೊಬ್ಬರ ಅನುಭವಗಳಿಂದ ಸಾಮಾನ್ಯರಾದ ನಮಗೆ ಕಲಿಯಲಾಗುವುದಿಲ್ಲ ಎಂಬಂತಾಗುತ್ತದೆ.

ಅನುಭವದ ಬಗ್ಗೆ ಜಿಡ್ಡು ಕೃಷ್ಣಮೂರ್ತಿಯವರು ಹೀಗೆ ಹೇಳುತ್ತಾರೆ, ‘ಅನುಭವ ಸವಾಲಿಗೆ ಪ್ರತಿಕ್ರಿಯೆ ತೋರುವ ನೆನಪುಗಳ ಮೂಟೆ. ಅದು ತನ್ನ ಹಿನ್ನೆಲೆಯಲ್ಲಿ ಏನಿದೆಯೋ ಅದರಂತೆಯೇ ಪ್ರತಿಕ್ರಿಯೆ ತೋರುತ್ತದೆ. ಆದ್ದರಿಂದ ನೀವು ಮತ್ತೊಬ್ಬರ ಅನುಭವವನ್ನಷ್ಟೇ ಅಲ್ಲ. ನಿಮ್ಮದೇ ಅನುಭವವನ್ನೂ ಪ್ರಶ್ನಿಸಬೇಕು. ಅನುಭವವನ್ನು ನೀವು ಗುರುತಿಸದಿದ್ದರೆ ಅದು ಅನುಭವವೇ ಅಲ್ಲ. ಪ್ರತಿ ಅನುಭವವೂ ಈ ಮೊದಲೇ ಅನುಭವಿಸಲ್ಪಟ್ಟಿದೆ. ಹಾಗಿಲ್ಲದಿದ್ದರೆ ನೀವು ಅದನ್ನು ಗುರುತಿಸುತ್ತಿದ್ದಿಲ್ಲ. ನೀವು ಒಂದು ಅನುಭವವನ್ನು ಒಳ್ಳೆಯದು, ಕೆಟ್ಟದ್ದು, ಸುಂದರವಾದದ್ದು, ಪವಿತ್ರವಾದುದು ಎಂದು ಮುಂತಾಗಿ ನಿಮ್ಮ ನಿರ್ಬಂಧನೆಯ ಪ್ರಕಾರವೇ ಗುರುತಿಸುವಿರಿ. ಆದ್ದರಿಂದ ಗುರುತು ಎಂದಿಗಾದರೂ ಹಳೆಯದೇ.

‘ಸತ್ಯ'ದ ಅನುಭವ ನಮಗೆ ಬೇಕಾದಲ್ಲಿ (ನಮಗೆಲ್ಲರಿಗೂ ಆ ಅನುಭವ ಬೇಕಲ್ಲವೆ?) ಅದರ ಗುರುತು ನಮಗಿರಬೇಕು. ಅದನ್ನು ಗುರುತಿಸಿದ ಕ್ಷಣವೇ ಅದರ ವಿಷಯವನ್ನು ಕಲ್ಪಿಸಿರುತ್ತೇವೆ. ಆದ್ದರಿಂದ ಅದು ನಿಜವಾದುದಲ್ಲ. ಏಕೆಂದರೆ ಅದು ಸಮಯ, ಸನ್ನಿವೇಶಗಳ ಕಕ್ಷೆಯಲ್ಲಿಯೇ ಇರುತ್ತದೆ. ವಿಚಾರವು ‘ಸತ್ಯ'ದ ವಿಷಯವಾಗಿ ವಿಚಾರ ಮಾಡುತ್ತಿದ್ದರೆ ಅದು ‘ಸತ್ಯ'ವಿರಲು ಸಾಧ್ಯವಿಲ್ಲ. ನಾವು ಹೊಸ ಅನುಭವವನ್ನು ಗುರುತಿಸಲಾರೆವು. ನಾವು ಈ ಮೊದಲು ತಿಳಿದ ವಿಷಯವನ್ನು ಮಾತ್ರ ಗುರುತಿಸುತ್ತೇವೆ. ಆದ್ದರಿಂದ ನಮಗೆ ಹೊಸ ಅನುಭವವಾಗಿದೆಯೆಂದು ಹೇಳಿದರೆ, ಅದು ಹೊಸತಾಗಿರಲಾರದು.ಪ್ರಜ್ಞೆಯನ್ನು ವಿಸ್ತರಿಸಬಲ್ಲ ಮಾದಕ ವಸ್ತುಗಳನ್ನು ಸೇವಿಸಿ ಮುಂದಿನ ಅನುಭವ ಹುಡುಕುವಾಗ ಅದು ಪ್ರಜ್ಞೆಯ ಕ್ಷೇತ್ರದಲ್ಲಿಯೇ ಇರುವುದರಿಂದ ಮಿತಿಗೊಳಪಟ್ಟಿದ್ದೇ ಇರುತ್ತದೆ.

ನಾವೀಗ ಮೂಲಭೂತವಾದ ಒಂದು ಸತ್ಯವನ್ನು ಶೋಧಿಸಿದ್ದೇವೆ. ಅದೆಂದರೆ ವಿಶಾಲವಾದ, ಆಳವಾದ ಅನುಭವವನ್ನು ಹುಡುಕುವ ಬಲವಾದ ಆಶೆಯುಳ್ಳ ಮನಸ್ಸು ಆಳವಿಲ್ಲದ್ದೂ, ಮಂದವೂ ಆಗಿರುತ್ತದೆ. ಏಕೆಂದರೆ ಅದು ತನ್ನ ನೆನಪುಗಳಲ್ಲಿಯೇ ಬದುಕುತ್ತದೆ.

ನಮಗೆ ಯಾವುದೇ ಅನುಭವವಿಲ್ಲದಿದ್ದರೆ ಏನಾಗುತ್ತದೆ? ನಾವು ಜಾಗರೂಕರಾಗಿರಲು ಅನುಭವಗಳನ್ನು, ಸವಾಲುಗಳನ್ನು ಅವಲಂಭಿಸುತ್ತೇವೆ. ಅವುಗಳಿಲ್ಲದಿದ್ದರೆ ನಮ್ಮ ಮನಸ್ಸು ಮಂದ ಹಾಗೂ ಜಡವಾಗುತ್ತದೆಂದು ನಮ್ಮ ವಿಚಾರ. ಆದ್ದರಿಂದ ಹೆಚ್ಚಿನ ರೋಮಾಂಚನ, ತೀವ್ರತೆ ಪಡೆಯಲೋಸುಗ ನಮ್ಮ ಮನಸ್ಸನ್ನು ಚುರುಕುಗೊಳಿಸಲು ನಾವು ಸವಾಲನ್ನು, ಅನುಭವಗಳನ್ನು ಅವಲಂಭಿಸುತ್ತೇವೆ. ಅದು ವಾಸ್ತವವಾಗಿ ನಮ್ಮನ್ನು ಜಾಗೃತವಾಗಿಡುವುದಿಲ್ಲ. ಆದುದರಿಂದ ನನ್ನನ್ನೇ ನಾನು ಪ್ರಶ್ನಿಸುವೆ, ‘ಮೇಲು ಮೇಲಷ್ಟೇ ಅಲ್ಲ, ನನ್ನ ಬದುಕಿನ ಕೆಲ ಅಂಶಗಳಲ್ಲಿ ಮಾತ್ರವಲ್ಲ, ಆದರೆ ಪೂರ್ಣವಾಗಿ, ಆಳದಲ್ಲಿ ಸವಾಲು ಹಾಗೂ ಅನುಭವಗಳಿಲ್ಲದೆಯೇ ಜಾಗೃತರಾಗಿರಲು ಸಾಧ್ಯವೇ? ಅಂದರೆ ದೈಹಿಕ ಹಾಗೂ ಮಾನಸಿಕವಾಗಿ ತುಂಬಾ ಸಂವೇದನಾಶೀಲನಾಗಬೇಕು. ಎಲ್ಲ ಬೇಡಿಕೆಗಳಿಂದ ನಾನು ಮುಕ್ತನಾಗಿರಬೇಕು. ಬೇಡಿದ ಕ್ಷಣವೇ ನಾನು ಅನುಭವಿಸುವ ಬೇಡಿಕೆಗಳಿಂದ, ತೃಪ್ತಿಯಿಂದ ಮುಕ್ತರಾಗಬೇಕಾದರೆ ನನ್ನ ಅಂತರಂಗದ ಶೋಧನೆ ಹಾಗೂ ಬೇಡಿಕೆಯ ಸ್ವರೂಪದ ಪೂರ್ಣ ತಿಳುವಳಿಕೆಯ ಅವಶ್ಯಕತೆ ಇದೆ. ........ಮನಸ್ಸು ಇನ್ನುಮುಂದೆ ಏನನ್ನೂ ಹುಡುಕದಂತೆ ನಮ್ಮನ್ನು ನಾವು ಪೂರ್ಣವಾಗಿ ತಿಳಿಯಬೇಕು. ಇಂಥಾ ಮನಸ್ಸು ಅನುಭವವನ್ನು ಬೇಡುವುದಿಲ್ಲ.'

ಅನುಭವದ ಬಗ್ಗೆ ತಿಳಿಯಲಪೇಕ್ಷಿಸುವ ಪ್ರಯತ್ನವೇ ಒಂದು ಅನುಭವ. ‘ಹೆಚ್ಚಿನದೇನನ್ನೂ ಬೇಡದೆ, ನಿರಂತರವಾದ ಹೋಲಿಕೆ ಇಲ್ಲದೆಯೇ ಈ ಜಗತ್ತಿನಲ್ಲಿ ಬಾಳುವ ಮಾರ್ಗ ಹೇಗೆಂಬುದನ್ನು ನಾವೇ ಕಂಡುಕೊಳ್ಳಬೇಕು' ಎಂಬ ಜೆ.ಕೆ.ಯವರ ಚಿಂತನೆಯನ್ನು ನಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಸಾಗೋಣ.

Thursday, March 3, 2011

ಮನದ ಅ೦ಗಳದಿ ..........೩೧.ಗತಾನು ಗತಿಕೋ ಲೋಕಃ.........

ಗತಾನು ಗತಿಕೋ ಲೋಕಃ ನ ಲೋಕಃ ಪಾರಮಾರ್ಥಿಕಃ|
ಗಂಗಾ ಸೈಕತಲಿಂಗೇನ ನಷ್ಟಂ ಮೇ ತಾಮ್ರ ಭಾಜನಂ||

ಒಮ್ಮೆ ಮಹಾನ್ ಜ್ಞಾನಿಗಳಾದ ಭಾಸ್ಕರಾಚಾರ್ಯರು ಕಾರ್ಯನಿಮಿತ್ತ ಕಾಶಿಗೆ ಹೋಗಿದ್ದಾಗ ಗಂಗಾ ನದೀ ತೀರದಲ್ಲಿ ತಮ್ಮ ಪ್ರಾಥರ್ವಿಧಿಗಳನ್ನು ಪೂರೈಸಲು ಕೈಲಿದ್ದ ತಾಮ್ರದ ಚೆಂಬನ್ನು ಮರಳಿನಲ್ಲಿ ಹೂತಿಟ್ಟು, ಗುರುತಿಗಾಗಿ ಅದರ ಮೇಲೆ ಒಂದು ಲಿಂಗಾಕೃತಿಯನ್ನು ಮಾಡಿ ಹೋಗುತ್ತಾರೆ. ಹಿಂತಿರುಗಿ ಬಂದು ನೋಡಿದಾಗ ಅಲ್ಲಿ ನೂರಾರು ಲಿಂಗಗಳು ಸಾಲುಸಾಲಾಗಿ ಮೈದಳೆದಿರುತ್ತವೆ! ಇವುಗಳ ನಡುವೆ ತಮ್ಮ ತಾಮ್ರದ ಚೆಂಬನ್ನು ಹುಡುಕುವುದಾದರೂ ಎಲ್ಲಿ? ಆಗ ಈ ಮೇಲ್ಕಂಡಂತೆ ಹೇಳುತ್ತಾರೆ, ‘ ಜನರು ಒಬ್ಬರು ನಡೆದುಕೊಡಂತೆಯೇ ಮತ್ತೊಬ್ಬರೂ ನಡೆದುಕೊಳ್ಳುತ್ತಾರೆ. ಯಾರೂ ಕೂಡ ಅದರ ಕಾರಣವೇನು ಎನ್ನುವುದರ ಬಗ್ಗೆ ಯೋಚಿಸುವುದೇ ಇಲ್ಲ. ಇದರಿಂದಾಗಿ ಗಂಗಾನದಿಯ ಮರಳಿನ ಲಿಂಗಗಳ ನಡುವೆ ನನ್ನ ತಾಮ್ರದ ಚೆಂಬು ಕಳೆದುಹೋಯಿತು!'

ಈ ಕಥೆಯನ್ನು ನಮ್ಮ ತಂದೆ ಹೇಳುತ್ತಿದ್ದರು. ಇದರ ಹಿನ್ನೆಲೆಯೇನೆಂದರೆ ಭಾಸ್ಕರಾಚಾರ್ಯರ ಮಗಳು ಬಾಲವಿಧವೆಯಾಗುತ್ತಾಳೆ. ಇದರಿಂದ ಮನನೊಂದ ಅವರು ಬಹಳವಾಗಿ ಚಿಂತಿಸಿ ಮಗಳಿಗೆ ಮರುಮದುವೆ ಮಾಡಬೇಕೆಂದು ಆಲೋಚಿಸುತ್ತಾರೆ. ಈ ಬಗ್ಗೆ ಕಾಶಿಗೆ ತೆರಳಿ ವಿದ್ವಾಂಸರೊಡನೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕೆಂದು ಹೋಗುತ್ತಾರೆ. ಅಲ್ಲಿ ಗಂಗಾತಟದಲ್ಲಿ ಈ ಘಟನೆ ನಡೆದಾಗ, ‘ತಾನು ಏನನ್ನಾದರೂ ಮಾಡಿದರೆ ಜನರು ಪೂರ್ವಾಪರ ಯೋಚಿಸದೇ ಅದನ್ನೇ ಅನುಸರಿಸುತ್ತಾರೆ ಹಾಗೂ ಆಚರಣೆಗೆ ತರುತ್ತಾರೆ' ಎಂದು ಬಗೆದು ಆ ಆಲೋಚನೆಯನ್ನು ಅಲ್ಲಿಗೇ ಬಿಟ್ಟು ಹಿಂದಿರುಗುತ್ತಾರೆ.

ಇದರ ಬಗ್ಗೆ ನಮ್ಮ ಮನೆಯಲ್ಲಿ ಬಿರುಸಾದ ಚರ್ಚೆ ಪ್ರಾರಂಭವಾಗಿ ಬಿಡುತ್ತಿತ್ತು. ಎಂದಿನಂತೆಯೇ ನಮ್ಮಕ್ಕನದೇ ಪ್ರಮುಖ ಪಾತ್ರವಾಗಿ ಅವರ ತೀರ್ಮಾನವನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಜನ್ಮಜನ್ಮಾಂತರದ ಕರ್ಮದ ಫಲ, ವಿಧಿಲಿಖಿತ ನಮ್ಮ ತಂದೆಯವರ ಗುಂಪಿನ ವಾದಕ್ಕೆ ಹಿನ್ನೆಲೆಯ ಒತ್ತು ನೀಡುತ್ತಿದ್ದರೆ, ಒಂದು ಉತ್ತಮವಾದ ತೀರ್ಮಾನ ಅವರು ತೆಗೆದುಕೊಂಡಿದ್ದರೆ ಎಷ್ಟೊಂದು ಜನ ಹೆಣ್ಣುಮಕ್ಕಳು ವೈಧವ್ಯದಿಂದ ನೆರಳುವುದು ತಪ್ಪುತ್ತಿತ್ತು ಎನ್ನುವುದು ಅಕ್ಕನ ಗುಂಪಿನ ಎಂದರೆ ಎಳೆಯರಾದ ನಮ್ಮ ಅಭಿಮತವಾಗಿರುತ್ತಿತ್ತು. ವಿರೋಧಾಭಾಸವೆಂದರೆ ಬಾಲವಿಧವೆಯಾಗಿದ್ದ ನಮ್ಮ ಸೋದರತ್ತೆ ತಮ್ಮ ಅಣ್ಣನ ಗುಂಪಿಗೇ ಸೇರಿದವರಾಗಿದ್ದು ಚರ್ಚೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರು!

ಯಾವುದೇ ಸಂಪ್ರದಾಯವಾಗಲೀ ತನ್ನ ಮೂಲ ಉದ್ದೇಶದಿಂದಲೇ ದೂರ ಸರಿದು ಅಂಧಾನುಕರಣೆಯಾಗಿ ಉಳಿದಿರುವುದು ದುರಂತವೇ ಆಗಿದೆ. ಯಾರೋ, ಎಂದೋ ಹಾಕಿಕೊಟ್ಟ ರೂಢಿಗಳನ್ನೇ ಅದರ ಅರ್ಥವನ್ನೂ ತಿಳಿಯದೇ, ಅರಿತುಕೊಳ್ಳಲೂ ಬಯಸದೇ, ಪಾಲಿಸುವುದಷ್ಟೇ ನಮ್ಮ ಕರ್ತವ್ಯವೆನ್ನುವಂತೆ ಅನುಸರಿಸುತ್ತಿದ್ದೇವೆ. ಹುಟ್ಟಿನಿಂದ ಸಾವಿನವರೆಗೂ ಯಾವಯಾವ ಸಂದರ್ಭಗಳಲ್ಲಿ ಹೇಗೆ ಆಚರಿಸಬೇಕೆನ್ನುವುದನ್ನಷ್ಟೇ ಪರಂಪರಾನುಗತವಾಗಿ ಕೇಳಿ ತಿಳಿದುಕೊಳ್ಳುತ್ತಾ ನಮ್ಮನ್ನೇ ನಾವು ಚೌಕಟ್ಟಿನೊಳಗೆ ಬಂಧಿಸಿಕೊಳ್ಳುತ್ತಿದ್ದೇವೆ. ಎಷ್ಟೋ ಆಚರಣೆಗಳು ಈ ಕಾಲಕ್ಕೆ ಅಪ್ರಸ್ತುತವೆನಿಸಿದರೂ ನಮ್ಮ ಮುಂದಿನ ಪೀಳಿಗೆಗಳೂ ಅದನ್ನೇ ಚಾಚೂ ತಪ್ಪದಂತೆ ನಡೆಸಬೇಕೆಂದು ಹಂಬಲಿಸುತ್ತೇವೆ. ಇವುಗಳಲ್ಲಿ ಮೌಢ್ಯದಿಂದ ಕೂಡಿದ ಅನೇಕ ಆಚರಣೆಗಳೂ ಇರುತ್ತವೆ. ಅವನ್ನು ಎಷ್ಟು ಜನ ಪ್ರೀತಿಯಿಂದ, ಸಂತಸದಿಂದ ಆಚರಿಸುತ್ತಾರೆ? ಬಹುತೇಕ ಆಚರಣೆಗಳಿಗೆ ಭಯವೇ ಚಾಲಕ ಶಕ್ತಿಯಾಗಿದೆ. ಇದನ್ನು ಮಾಡದಿದ್ದರೆ ಏನಾದರೂ ಕೆಟ್ಟದ್ದು ಆದರೆ? ದುರಂತ ಸಂಭವಿಸಿದರೆ? ಎನ್ನುವ ಆತಂಕದಿಂದಲೇ ನಾವು ‘ಗತಾನು ಗತಿಕ'ರಾಗುತ್ತಿದ್ದೇವೆ. ಎಷ್ಟೋ ಸಂದರ್ಭಗಳಲ್ಲಿ ಕಾಕತಾಳೀಯವೆನ್ನುವಂತೆ ಅಂಥಾ ಘಟನೆಗಳು ನಡೆದು ಅನಗತ್ಯ ಭಯಕ್ಕೆ ಪುಷ್ಟಿಯನ್ನೂ ನೀಡಿದೆ! ಹೀಗೆ ಹಳೆಯದಕ್ಕೇ ಜೋತುಬಿದ್ದಾಗ ನಮ್ಮ ಜೀವನವು ಜಡವಾಗುತ್ತಾ ಹೋಗುತ್ತದೆ. ಯಾರನ್ನೋ ಮೆಚ್ಚಿಸುವುದಕ್ಕಾಗಿ, ಯಾರ ಮೇಲಿನದೋ ಸ್ಪರ್ಧೆಗಾಗಿ,..... ನಮ್ಮಿಂದಲೇ ನಾವು ಪ್ರತಿಕ್ಷಣವೂ ದೂರ ಸರಿಯುತ್ತಿರುತ್ತೇವೆ.

‘ಎಂದೋ ಯಾರೋ ಹಚ್ಚಿದ ದೀಪದ ಬೆಳಕಿನಲ್ಲಿ ನಮ್ಮ ಜೀವನವು ನಡೆಯುತ್ತಾ ಇದೆ. ಆ ದೀಪವು ಈಗಾಗಲೇ ಹೊಗೆಯಿಂದ ತುಂಬಿಕೊಂಡು, ಕಿಲುಬುಗಟ್ಟಿ, ಮೊಬ್ಬು ಬೆಳಕನ್ನು ನೀಡುತ್ತಿದೆ. ಈ ಬೆಳಕಿನಲ್ಲಿ ನಮ್ಮ ಮಾರ್ಗವು ಸ್ಪಷ್ಟವಾಗಿ ಗೋಚರಿಸಲಾರದು. ನಾವು ಈಗಾಗಲೇ ಮುಂದೆ ಸಾಗುವವರನ್ನೇ ಅನುಸರಿಸುತ್ತಾ, ಒಬ್ಬರ ಹಿಂದೆ ಒಬ್ಬರಂತೆ, ಅತ್ತಿತ್ತ ನೋಡದೆ, ಮುಂದೇನಿದೆ ಎಂಬ ಅರಿವೂ ಇಲ್ಲದೇ ಯಂತ್ರಿಕವಾಗಿ ಸಾಗುತ್ತಿದ್ದೇವೆ. ನಮ್ಮ ಜೀವನವನ್ನು ಉತ್ಸಾಹಭರಿತವಾಗಿಸಿಕೊಳ್ಳಲು, ಅರ್ಥಪೂರ್ಣವನ್ನಾಗಿಸಲು ನಾವೀಗ ನಮ್ಮದೇ ಸ್ವಂತ ಬೆಳಕನ್ನು ಹೊಂದಬೇಕಾಗಿದೆ. ಆ ಬೆಳಕು ಕುಡಿ ಬೆಳಕಾದರೂ ಚಿಂತೆಯಿಲ್ಲ, ನಮ್ಮ ಮಾರ್ಗವು ಸ್ಪಷ್ಟವಾಗಿ ಗೋಚರಿಸುವಂತಿದ್ದರೆ ಸಾಕು,' ಎನ್ನುವ ಆಶಯದ ಕವನ ‘ಸ್ವಯಂ ಪ್ರಭೆ' ಯನ್ನು ಬರೆದಿದ್ದೆ.

ಹಿಂದಿನವರು ನಮ್ಮ ಒಳಿತಿಗೆಂದೇ ಒಂದು ಮಾರ್ಗವನ್ನು ರೂಪಿಸಿ, ಅದನ್ನೇ ಅನುಸರಿಸುತ್ತಾ ಯಾವುದೂ ಕಷ್ಟಕೋಟಲೆಗಳಿಲ್ಲದೇ, ಸುಖಸಂತೋಷಗಳಿಂದ ಜೀವನ ನಡೆಸಲಿ ಎಂಬ ಉದ್ದೇಶದಿಂದಲೇ ಮಾಡಿದ್ದರೂ ಅದರ ಮೂಲ ಉದ್ದೇಶವನ್ನು ತಿಳಿದುಕೊಂಡು, ಈ ಕಾಲಕ್ಕೆ ಸೂಕ್ತವಾಗಿದೆಯೇ ಎನ್ನುವುದನ್ನು ಮನಗಂಡು ಪಾಲಿಸುವುದು ಒಳಿತೇನೋ. ಬೆಕ್ಕನ್ನು ಕೂಡಿಹಾಕಿ ಶ್ರಾದ್ಧವನ್ನು ನಡೆಸಿದ ಕಥೆಯಂತೆ ಆಗಬಾರದು ಅಲ್ಲವೆ?