Sunday, June 28, 2015

ಬಿಗಿದುಕೊಂಡಿದ್ದೇವೆ ನಮ್ಮನ್ನೇ.....








ತಾಸುಗಳಲ್ಲೇ ನಿಮಿಷಗಳು
ಸೆಕೆಂಡ್ಸ್
ಮೈಕ್ರೊ, ನ್ಯಾನೊ 
ಏನೇನೋ
ವ್ಯವಧಾನವಿಲ್ಲ
ಸೂಕ್ಷ್ಮಾತಿ ಸೂಕ್ಷ್ಮ
ಕಾಲ ಗಣನೆಗೆ
ಉರುಳುತ್ತಿವೆ
ಗಂಟೆಗಳೇ
ಹಗಲು ರಾತ್ರಿಗಳ
ನಿರಂತರ
ಜೂಟಾಟದಲ್ಲಿ...
ಚಲಿಸುತ್ತಿರುವುದು
ಗಡಿಯಾರದ
ಮುಳ್ಳುಗಳೋ
ಗಡಿಬಿಡಿಯ
ಮರುಳೋ?
`ಟಿಕ್ ಟಿಕ್ ಗೆಳೆಯನೆ
ಟಿಕ್ ಟಿಕ್ ಟಿಕ್...’ಗೆ
ಹೆಜ್ಜೆಹಾಕಿ
ಕುಣಿಯುತ್ತಿದ್ದ
ಕಾಲುಗಳಿಗೀಗ
ಪುರುಸೊತ್ತಿಲ್ಲ
ನಿಲ್ಲಲೂ!
ಕಾಲುಗಳೇ ಗಡಿಯಾರದ
ಮುಳ್ಳುಗಳಾಗಿ
ಸಾಗಿದೆ
ಕಾಲನ ಓಟ
ಜೈವಿಕ ಗಡಿಯಾರಕ್ಕೂ
ಪ್ರಾಣ ಸಂಕಟ!
ಇರುಳನೇ ಬೆಳಗಾಗಿಸಿ
ದುಡಿವ
ಕೈಗಳಿಗೀಗ
ಅಜ್ಞಾತ ತಲೆಯ
ನಿರ್ದೇಶನ
ಹೌದು
ಕಟ್ಟಿಕೊಂಡಿಲ್ಲ ನಾವು
ಗಡಿಯಾರವ
ಬಿಗಿದುಕೊಂಡಿದ್ದೇವೆ
ನಮ್ಮನ್ನೇ
ಗಡಿಯಾರಕ್ಕೆ!
(image- web)

Friday, June 26, 2015

ಅ೦ತಃಸತ್ವ!



ಅ೦ತಃಸತ್ವ!
೧. ಕಿರುತೋಟದ ಪಪ್ಪಾಯ!
೨. ಬೀದಿಯ ಬದಿಯಲಿ ತಾನಾಗೇ ಬೆಳೆದು ಪಲ್ಲೈಸುತ್ತಿರುವ ಪಪ್ಪಾಯ!
೩. ಬೇಡದ ಸಸ್ಯಗಳ ನಡುವೆ ಬೆಳೆದದ್ದನ್ನು ಕತ್ತರಿಸಿ ಎಸೆದಿದ್ದರೂ ಪುನಃ ಕವಲೊಡೆದು ಚಿಗುರಿ ನಳನಳಸುತ್ತಿರುವ ಪಪ್ಪಾಯ!

Tuesday, June 23, 2015

ಮನದ ಅಂಗಳದಿ.....

ಬೆಳೆ ಇಲ್ಲದ ಜಾಗದಲ್ಲಿ 

ಬೆಳೆವುದು ಕಳೆ
ಯಥೇಚ್ಚ


ಪೈರನ್ನೇ ಹಿಮ್ಮೆಟ್ಟಿಸಿ
ಹುಲುಸಾಗುವಲ್ಲೇ
ವಿಕಟಾಟ್ಟಹಾಸ


ಉಳಿವಿಗಾಗಿ
ಪೈಪೋಟಿಯಲ್ಲಿ
ಸಮರ್ಥ ಕಳೆಗೇ
ಉಳಿವು


ಕಳೆಯ ನಿರ್ಮೂಲನೆಗೋ
ಹತ್ತೆಂಟು ಹಾದಿ
ಕಿತ್ತಷ್ಟೂ
ಮತ್ತೆ ಚಿಗುರುವ
ರಕ್ತ ಬೀಜಾಸುರನ ವಂಶ
ಬೆಳೆಗೇಕಿಲ್ಲ
ಆ ಒಂದೂ
ಅಂಶ?


ಬೆಳೆಯನೇ
ಬಳಸುವ
ಧೃತರಾಷ್ಟ್ರಾಲಿಂಗನ
ಎತ್ತಲಿಂದಲೋ
ಬಂದವತರಿಸಿದ
ಪಾಥೇನಿಯಂ
ಪಯಣ!


ಕಳೆಯ ನಾಶದತ್ತಲೇ
ಕೇಂದ್ರೀಕೃತ ಮನವ
ಬೆಳೆಯ
ಸದೃಢಗೊಳಿಸುವತ್ತ
ಕೊಂಡೊಯ್ದರೆ ಹೇಗೆ?


ಸಮರ್ಥ ಬೆಳೆ
ನಿಂತೀತು
ಕಳೆಯನೇ ಮೆಟ್ಟಿ
ಗೊಬ್ಬರವಾಗಿಸಿಕೊಳ್ಳುತ್ತಾ.....
ಆಸ್ವಾದಿಸುತ್ತಾ..........

Wednesday, June 10, 2015

`ಹನಿ'-ಆಕಾಂಕ್ಷೆ

ಬಿದ್ದರೂ ಚಿಂತಿಲ್ಲ

ಉಳಿಗಳ ಹೊಡೆತ
ಅವಿರತ
ಕಲೆಯಾಗಬಲ್ಲೆ,
ಆಗದಿರಲಿ ಸ್ಪೋಟ
ಅನಿರೀಕ್ಷಿತ
ಛಿದ್ರವಾಗಲೊಲ್ಲೆ!